October 5, 2024

ಮೂಡಿಗೆರೆ ತಾಲ್ಲೂಕಿ ಗೋಣಿಬೀಡು ಹೋಬಳಿ ಚಿನ್ನಿಗ ಮತ್ತು ಕಿರುಗುಂದ ಗ್ರಾಮ ಪಂಚಾಯಿತಿಯನ್ನು ಒಳಗೊಂಡಂತೆ ಜನ್ನಾಪುರದಲ್ಲಿ ನೂತನವಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಪ್ರಾರಂಭಿಸುವ ಬಗ್ಗೆ ಇಂದು ಸಮಾಲೋಚನಾ ಸಭೆ ಏರ್ಪಡಿಸಲಾಗಿತ್ತು.

ಗುರುವಾರ ಜನ್ನಾಪುರದ ವರ್ತಕರ ಭವನದಲ್ಲಿ  ನಡೆದ ಸಭೆಗೆ ಎರಡೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಸಹಸ್ರಾರು ಸಂಖ್ಯೆಯಲ್ಲಿ  ಸೇರಿದ್ದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಎನ್. ಜೆ. ಭರತ್ ರವರು ಒಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಮಾಡಬೇಕೆಂದರೆ ಇಂತಿಷ್ಟು ಜಮೀನು ಇರಬೇಕಾಗಿರುವುದರಿಂದ ಚಿನ್ನಿಗ ಪಂಚಾಯಿತಿ ಮತ್ತು ಕಿರಗುಂದ ಗ್ರಾಮ ಪಂಚಾಯಿತಿ ಸೇರಿದರೆ ಮಾತ್ರ ಸೇವಾ ಸಹಕಾರ ಸಂಘ ಮಾಡಲು ಸಾಧ್ಯವಾಗುತ್ತದೆ ಹಾಗಾಗಿ ಚಿನ್ನಿಗ ಮತ್ತು ಕಿರುಗುಂದ ಕೇಂದ್ರಸ್ಥಾನವಾದ ಜನ್ನಾಪುರದಲ್ಲಿ ಈ ಕೃಷಿ ಪತ್ತಿನ ಸಹಕಾರ ಸಂಘವನ್ನು ಕಟ್ಟಬೇಕೆಂದು ಎರಡು ಗ್ರಾಮ ಪಂಚಾಯತಿಯವರು ಕೂತು ಮಾತನಾಡಿದಾಗ ಈ ಭಾಗದ ರೈತರುಗಳು  ಎಲ್ಲಾ ರೀತಿಯ ಸಹಕಾರವನ್ನು ಕೊಡುತ್ತೇವೆಂದರು ಹಾಗೂ ಹಾಲಿ  ಮಾತೃ ಸಂಸ್ಥೆಯ ಗೋಣಿಬೀಡು ಸೊಸೈಟಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸಹ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಆಶ್ವಾಸನೆ ನೀಡಿರುತ್ತಾರೆ ಎಂದರು.

ಕಿರುಗುಂದ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಸಿ.ಆರ್. ನೇಮಿರಾಜ್ ಮಾತನಾಡಿ ಸರ್ಕಾರಗಳು ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಕೃಷಿ ಪತ್ತಿನ ಸಹಕಾರ ಸಂಘ ಪ್ರಾರಂಭಿಸಬೇಕು ಎಂಬ ನಿಟ್ಟಿನಲ್ಲಿ ತೆಗೆದುಕೊಂಡಿರುವ ತೀರ್ಮಾನದಂತೆ ಮಾತೃ ಸೇವಾ ಸಹಕಾರ ಸಂಘದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಗಳ ಗಮನಕ್ಕೆ ತಂದು ಇತ್ತೀಚಿಗೆ ನಡೆದ  ಸರ್ವ ಸದಸ್ಯರ ಸಭೆಯಲ್ಲಿ ಹೊಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸ್ಥಾಪನೆಯ ವಿಷಯವನ್ನು ಪ್ರಸ್ತಾಪಿಸಿದ್ದು ಅಲ್ಲೂ ಸಹ ಒಮ್ಮತದ ಚರ್ಚೆಯನ್ನು  ಮಾಡಿದ್ದೇವೆ. ಈ ಸೇವಾ ಸಂಸ್ಥೆಯ ಆರಂಭದಲ್ಲಿ ಯಾವುದೇ ಅಪಸ್ವರಗಳಿಗೆ  ಆಸ್ಪದ ಕೊಡದೆ ಎಲ್ಲವನ್ನು ಹೊಂದಾಣಿಕೆ ಮಾಡಿಕೊಂಡು ಸಂಘವನ್ನು ಪ್ರಾರಂಭಿಸಲು ಮಾತೃ ಸಂಸ್ಥೆ  ಹೆಚ್ಚಿನ ರೀತಿಯಲ್ಲಿ ನಮ್ಮಗಳಿಗೆ  ಪ್ರೋತ್ಸಾಹ ಮತ್ತು ಸಹಕಾರ ನೀಡಬೇಕೆಂದು ಕೇಳಿಕೊಂಡರು.

ಗೋಣಿಬೀಡು ಸಹಕಾರ ಸಂಘದ   ಮಂಡಿಮನೆ ಜಯರಾಮಗೌಡರು ಮಾತನಾಡಿ ನಮ್ಮ ಸಹಕಾರ ಸಂಘದಿಂದ ಸಂಪೂರ್ಣ ಸಹಕಾರವನ್ನು ಕೊಡುತ್ತೇವೆ ಹೊಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸಲು ಹೊರಟಿರುವ ಸಹಕಾರಿಗಳಿಗೆ ಶುಭ ಹಾರೈಸಿದರು.

ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಗೋಣಿಬಿಡು ಸಹಕಾರ ಸಂಘದ  ವಿ.ಕೆ ಶಿವೇಗೌಡರು ಮಾತನಾಡಿ ನಾವು ಯಾವುದೇ ಕಾರಣದಿಂದಲೂ ನಮ್ಮ ಸಂಸ್ಥೆಯಿಂದ ಹೊರ ಹೋಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಸ್ಥಾಪನೆ ಮಾಡಿ ಎಂದು ಹೇಳಿಲ್ಲ ಸರ್ಕಾರ ಪ್ರತಿ ಪಂಚಾಯತಿಗೂ ಒಂದು ಸಹಕಾರ ಸಂಘವನ್ನು ಮಾಡಿ ಎಂದು ಸುವರ್ಣ ಅವಕಾಶ ನೀಡಿದೆ ಅದರ ಸದುಪಯೋಗ ಪಡೆದುಕೊಳ್ಳಿ ಎಂದಿದ್ದೇವೆ, ಹೊಸ ಸಹಕಾರ ಸಂಘ ಸ್ಥಾಪನೆಯಾದ ಕೂಡಲೇ ರೈತರಿಗೆ ನಮ್ಮ ಬ್ಯಾಂಕ್ ನಲ್ಲಿ ಕೋಡುತ್ತಿರುವ  ಕೆಸಿಸಿ ಸಾಲವನ್ನು ಕೊಡುವದಿಲ್ಲ, ಈಗ ಚಾಲ್ತಿಯಲ್ಲಿರುವ  ವಾಹನ ಸಾಲ, ಬಂಗಾರದ ಸಾಲ, ಕೆಸಿಸಿ ಸಾಲವನ್ನು ಮರುಪಾವತಿ ಮಾಡಿದ ನಂತರವೇ ನೀವು ಹೊಸ ಸೇವಾ ಸಹಕಾರ ಸಂಘಕ್ಕೆ ಶೇರುದಾರರಾಗಬಹುದು ಆದುದರಿಂದ ರೈತರು ಮುಂಬರುವ ಆಗು- ಹೋಗುಗಳು ಬಗ್ಗೆ ಸಂಪೂರ್ಣ ಮಾಹಿತಿಯನ್ನು  ಪಡೆದುಕೊಳ್ಳಿ ಎಂದರು. ಹಾಗೂ ಒಂದು ವೇಳೆ ಹೊಸ ಸಂಘ ಸ್ಥಾಪನೆ ಆದ ನಂತರ ಕೆಸಿಸಿ ಸಾಲ ನೀಡದಿದ್ದಲ್ಲಿ ಅಂತಹ  ಪ್ರಕರಣಗಳನ್ನು ವಿಶೇಷ ಪ್ರಕರಣಗಳು ಎಂದು ಪರಿಗಣಿಸಿ ತಮ್ಮ  ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಸರ್ಕಾರದ ಗಮನ ಸೆಳೆಯಲಾಗುವುದೆಂದರು.

ಸಭೆಗೆ ಮುಖ್ಯ ಮಾಹಿತಿದಾರರಾಗಿ ಆಗಮಿಸಿದ ಸಿ.ಡಿ.ಓ  ಗುರುಮೂರ್ತಿ ರವರು  ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಯಂತೆ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಒಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಸ್ಥಾಪನೆ ಮಾಡಬೇಕೆಂದು ಆದೇಶ ಇದ್ದು ಸಹಕಾರ ಸಂಘವನ್ನು ಸ್ಥಾಪನೆ ಮಾಡಲು ಕೆಲವು ಮಾನದಂಡಗಳನ್ನು ಮಾಡಿದ್ದು ಯಾವ ಪಂಚಾಯತಿಯಲ್ಲಿ ಕನಿಷ್ಠ ನಾಲ್ಕು ಸಾವಿರ ಎಕ್ರೆ ಕೃಷಿ ಭೂಮಿಯ ವಿಸ್ತಾರವನ್ನು ಒಳಗೊಂಡಿದೆ ಮತ್ತು ಯಾವ ಪಂಚಾಯಿತಿಯಲ್ಲಿ 600 ಕೃಷಿ ಕುಟುಂಬಗಳಿದ್ದು, ಹಾಗೂ ಯಾವ ಪಂಚಾಯಿತಿಯಲ್ಲಿ ಸುಮಾರು 20 ಲಕ್ಷ ರೂ ಸಾಲ ಕೊಟ್ಟು ಅದನ್ನು ವಸೂಲಿ ಮಾಡುವ ಸಾಮರ್ಥ್ಯ ಹೊಂದಿದೆ ಅಂತಹ ಪಂಚಾಯತಿಯಲ್ಲಿ ಸಹಕಾರ ಸಂಘ ಸ್ಥಾಪಿಸಲು ಆರ್ಹವಾಗಿರುತ್ತದೆ  ಎಂದರು.

ಈಗಾಗಲೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು 25 ಪಂಚಾಯತಿಗಳಲ್ಲಿ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪನೆ ಮಾಡಲು ತೀರ್ಮಾನಿಸಿದ್ದೇವೆ ಎಂದರು, ಅದರಂತೆ ಮೂಡಿಗೆರೆ ತಾಲೂಕಿನಲ್ಲಿಯೂ ಮೂರು ಸೇವ ಸಹಕಾರ ಸಂಘ ಸ್ಥಾಪನೆ ಮಾಡಲು ನಿರ್ಣಯ ಕೈಗೊಂಡಿದ್ದೇವೆ ಹಾಗೂ ಸಹಕಾರ ಸಂಘವನ್ನು ಸ್ಥಾಪಿಸಲು ಕನಿಷ್ಠ 6 ಲಕ್ಷ ರೂಪಾಯಿ ಠೇವಣಿಗಳನ್ನಿಡ ಬೇಕಾಗುತ್ತದೆ ಸುಮಾರು 600 ಷೇರು ದಾರರನ್ನು  ಮಾಡಬೇಕಾಗುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ  ಚಿನ್ನಗ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ  ಸುನಿಲ್ ನಿಡಗೂಡು, ಯು.ಎನ್ ಚಂದ್ರೇಗೌಡರು, ಯು. ಹೆಚ್ ಹೇಮಶೇಖರ್, ಜೆ. ಎಸ್ ರಘು, ಎ.ಜಿ. ಸುಬ್ರಾಯಗೌಡ, ಸುಧಾಕರ್ ಹೊಯ್ಸಳಲು, ಯು ಹೆಚ್ ರಾಜಶೇಖರ್, ಉಪಸ್ಥಿತರಿದ್ದರು. ಚಿನ್ನಿಗ ಹಾಗೂ ಕಿರುಗುಂದ ಪಂಚಾಯತಿ ವ್ಯಾಪ್ತಿಯ ವಿವಿಧ ರಾಜಕೀಯ ಪಕ್ಷಗಳು ಮುಖಂಡರು, ಸಂಘ ಸಂಸ್ಥೆಗಳ ಪ್ರಮುಖರು, ಗೋಣಿಬೀಡು ಸಹಕಾರ ಸಂಘದ ನಿರ್ದೇಶಕರುಗಳು, ರೈತಾಪಿ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಲಹೆಗಳನ್ನು ನೀಡಿದರು.

ವರದಿ : ಸಿ. ಎಲ್. ಪೂರ್ಣೇಶ್ ಚಕ್ಕುಡಿಗೆ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ