October 5, 2024

World-Cup - 15

ವಿಶ್ವ ಕ್ರಿಕೆಟ್ ನಲ್ಲಿ ಎರಡು ಬದ್ಧ ಪ್ರತಿಸ್ಪರ್ಧಿಗಳಾಗಿ ಗುರುತಿಸಿಕೊಂಡಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳು ಇಂದು ಏಕದಿನ ಕ್ರಿಕೆಟ್ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಅಹಮದಾಬಾದ್ ನಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಹಗಲು ರಾತ್ರಿ ಪಂದ್ಯ ಇಂದು ಮಧ್ಯಾಹ್ನ 2ರಿಂದ ಪ್ರಾರಂಭವಾಗಲಿದೆ. ಈಗಾಗಲೇ ಲೀಗ್ ಹಂತದಲ್ಲಿ ತಲಾ ಎರಡು ಪಂದ್ಯಗಳನ್ನು ಆಡಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳು ಆಡಿರುವ ಎರಡೂ ಪಂದ್ಯಗಳನ್ನು ಗೆದ್ದು ತಲಾ 4 ಅಂಕಗಳೊದಿಗೆ ಸಮಬಲದಲ್ಲಿವೆ.

ಭಾರತ ಆಸ್ಟ್ರೇಲಿಯಾ ಮತ್ತು ಅಪ್ಘಾನಿಸ್ತಾನ ವಿರುದ್ಧ ಗೆಲುವು ಸಾಧಿಸಿದ್ದರೆ, ಪಾಕ್ ನೆರ‍್ಲೆಂಡ್ ಮತ್ತು ಶ್ರೀಲಂಕಾ ವಿರುದ್ದ ಗೆಲುವು ಪಡೆದಿದೆ.
ಇಂದಿನ ಪಂದ್ಯ ವಿಶ್ವದಾದ್ಯಂತ ಕ್ರಿಕೆಟ್ ಪ್ರಿಯರ್ ಕುತೂಹಲ ಕೆರಳಿಸಿದೆ. ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಪಂದ್ಯಕ್ಕಾಗಿ ಖಾತರದಿಂದ ನಿರೀಕ್ಷಿಸುತ್ತಿದ್ದಾರೆ.

ಏಕದಿನ ವಿಶ್ವಕಪ್ ನಲ್ಲಿ ಇದುವರೆಗೆ ಭಾರತ ಮತ್ತು ಪಾಕ್ ತಂಡಗಳು ಒಟ್ಟು 7 ಬಾರಿ ಮುಖಾಮುಖಿಯಾಗಿದ್ದು, ಎಲ್ಲಾ ಪಂದ್ಯಗಳಲ್ಲಿ ಭಾರತ ಜಯಗಳಿಸಿರುವುದು ವಿಶೇಷವಾಗಿದೆ. ಪಾಕ್ ಗೆ ಇದುವರೆಗೆ ಏಕದಿನ ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಸೋಲಿಸಲು ಸಾಧ್ಯವಾಗಿಲ್ಲ.

1992 ರಿಂದ 2019 ರ ವಿಶ್ವಕಪ್ ತನಕ ಎರಡೂ ತಂಡಗಳು ಏಳು ಬಾರಿ ಮುಖಾಮುಖಿಯಾಗಿವೆ.

  • 1992 ರಲ್ಲಿ ಪಾಕ್ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತಾದರೂ ಭಾರತದ ವಿರುದ್ಧದ ಪಂದ್ಯದಲ್ಲಿ ಸೋಲನುಭವಿಸಿತ್ತು. ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟ್ ಮಾಡಿ ಸಚಿನ್ ತೆಂಡೂಲ್ಕರ್ ಅವರ ಅರ್ಧಶತಕದ ನೆರವಿನಿಂದ 7 ವಿಕೆಟ್ ಗೆ 217 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಪಾಕ್ ಕೇವಲ 178 ರನ್ ಗಳಿಗೆ ಆಲೌಟ್ ಆಗಿತ್ತು. ಭಾರತದ ಪರ ಕಪಿಲ್ ದೇವ್, ಮನೋಜ್ ಪ್ರಭಾಕರ್, ಜಾವಗಲ್ ಶ್ರೀನಾಥ್ ತಲಾ 2 ವಿಕೆಟ್ ಗಳಿಸಿದ್ದರು.

1996 ರ ವಿಶ್ವಕಪ್ ನಲ್ಲಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಪಾಕ್ ಮುಖಾಮುಖಿಯಾಗಿದ್ದವು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ ಐವತ್ತು ಓವರ್ ಗಳಲ್ಲಿ 278 ರನ್ ಗಳಿಸಿತ್ತು. ಭಾರತ ಪರ ಆರಂಭಿಕ ನವಜೋತ್ ಸಿಂಗ್ ಸಿದ್ದು 93 ರನ್ ಗಳಿಸಿದರೆ. ಅಜೇಯ್ ಜಡೆಜಾ ಬಿರುಸಿನ 45 ರನ್ ಗಳಿಸಿದ್ದರು. ಇದಕ್ಕುತ್ತರವಾಗಿ ಪಾಕ್ 248 ರನ್ ಗಳಿಸಲ್ಲಷ್ಟೇ ಶಕ್ತವಾಯಿತು.ಕನ್ನಡಿಗರಾದ ವೆಂಕಟೇಶ್ ಪ್ರಸಾದ್ ಮತ್ತು ಅನಿಲ್ ಕುಂಬ್ಳೆ ತಲಾ 3 ವಿಕೆಟ್ ಪಡೆದು ಪಾಕ್ ತಂಡವನ್ನು ಸೋಲಿನ ಸುಳಿಗೆ ಸಿಲುಕಿಸಿದರು.

*  1999 ರ ವಿಶ್ವಕಪ್ ನ ಸೂಪರ್ ಸಿಕ್ಸ್ ಹಂತದಲ್ಲಿ ಭಾರತ ಪಾಕ್ ಮುಖಾಮುಖಯಾಗಿದ್ದವು. ಮ್ಯಾಂಚೆಸ್ಟರ್ ನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟ್ ಮಾಡಿ ನಿಗದಿತ 50 ಓವರ್ ಗಳಲ್ಲಿ ಕೇವಲ 226 ರನ್ ಗಳಿಸಲ್ಲಷ್ಟೇ ಶಕ್ತವಾಗಿತ್ತು. ಭಾರತದ ಪರ ರಾಹುಲ್ ದ್ರಾವಿಡ್ ಮತ್ತು ಮೊಹಮ್ಮದ್ ಅಜರುದ್ದೀನ್ ಅರ್ಧ ಶತಕ ಗಳಿಸಿದ್ದರು. ಸಾಧಾರಣ ಗುರಿ ಬೆನ್ನಟ್ಟಿದ್ದ ಪಾಕ್ 180 ರನ್ ಗಳಿಗೆ ಸರ್ವ ಪತನ ಕಂಡಿತ್ತು. ಕನ್ನಡಿಗರಾದ ವೆಂಕಟೇಶ್ ಪ್ರಸಾದ್ 5 ವಿಕೆಟ್, ಜಾವಗಲ್ ಶ್ರೀನಾಥ್ 3 ವಿಕೆಟ್ ಮತ್ತು ಅನಿಲ್ ಕುಂಬ್ಳೆ 2 ವಿಕೆಟ್ ಪಡೆದು ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.

*  2003ರಲ್ಲಿ ದಕ್ಷಿಣಾ ಆಪ್ರಿಕಾದಲ್ಲಿ ನಡೆದ ಪಂದ್ಯಾವಳಿಯ ಗ್ರೂಪ್ ಎ ನಲ್ಲಿ ಭಾರತ ಪಾಕ್ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಕ್ ಮಾಡಿದ್ದ ಪಾಕ್ ಸಯೀದ್ ಅನ್ವರ್ ಅವರ ಶತಕದ ನೆರವಿನಿಂದ 273 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಭಾರತ ಸಚಿನ್ ತೆಂಡೂಲ್ಕರ್ ಅವರ ಬಿರುಸಿನ 98 ರನ್, ಯುವರಾಜ್ ಸಿಂಗ್ ಅರ್ಧಶತಕದ ನೆರವಿನಿಂದ 45.4 ಓವರ್ ಗಳಲ್ಲಿಯೇ ಗುರಿ ಮುಟ್ಟಿ ಗೆಲುವಿನ ನಗೆ ಬೀರಿತ್ತು.

*  2007 ರ ವಿಶ್ವಕಪ್ ನಲ್ಲಿ ಭಾರತ ಪಾಕ್ ಮುಖಾಮುಖಿಯಾಗುವ ಅವಕಾಶ ಸಿಕ್ಕಿರಲಿಲ್ಲ.

*  2011 ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್ ನಲ್ಲಿ ಭಾರತ ಪಾಕ್ ಮುಖಾಮುಖಿಯಾಗಿದ್ದವು ಮೊಹಾಲಿಯಲ್ಲಿ ನಡೆದ ಈ ಪಂದ್ಯದಲ್ಲಿ ಆರಂಭಿಕ ಸಚಿನ್ ತೆಂಡೂಲ್ಕರ್ ಅವರ 85 ರನ್ ಮತ್ತು ಸೆಹ್ವಾಗ್ ಅವರ ಬಿರುಸಿನ 38 ರನ್ ಗಳ ಬಲದಿಂದ ಭಾರತ ನಿಗದಿತ 50 ಓವರ್ ಗಳಲಿ 9 ವಿಕೆಟ್ ನಷ್ಟಕ್ಕೆ 260 ಕಲೆಹಾಕಿತ್ತು. ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಪಾಕ್ 231 ರನ್ ಗಳಿಗೆ ಆಲೌಟ್ ಆಗಿತ್ತು. ಭಾರತದ ಐವರು ಬೌಲರ್ ಗಳು (ಆಶೀಸ್ ನೆಹ್ರಾ, ಜಹೀರ್ ಖಾನ್, ಮುನಾಫ್ ಪಟೇಲ್, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್) ತಲಾ 2 ವಿಕೆಟ್ ಪಡೆದು ಪಾಕ್ ತಂಡಕ್ಕೆ ಸೋಲಿನ ಹಾದಿ ತೋರಿಸಿದರು. ಈ ಪಂದ್ಯಾವಳಿಯಲ್ಲಿ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

*  2015 ರಲ್ಲಿ ಅಡಿಲೇಡ್ ಓವಲ್ ನಲ್ಲಿ ನಡೆದ ಗ್ರೂಪ್ ಬಿ ಹಣಾಹಣಿಯಲ್ಲಿ ಭಾರತ ಪಾಕ್ ಎದುರಾಗಿದ್ದವು. ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ ಐವತ್ತು ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 300 ರನ್ ಗಳಿಸಿತ್ತು. ವಿರಾಟ್ ಕೊಹ್ಲಿ 107, ಸುರೇಶ್ ರೈನಾ 74 ಮತ್ತು ಶಿಖರ್ ದವನ್ 73 ರನ್ ಗಳಿಸಿ ಉತ್ತಮ ಮೊತ್ತ ಕಲೆಹಾಕಲು ನೆರವಾಗಿದ್ದರು. ಇದಕ್ಕುತ್ತರವಾಗಿ ಪಾಕ್ 224 ರನ್ ಗಳಿಗೆ ಆಲೌಟ್ ಆಗಿತ್ತು. ಮೊಹಮ್ಮದ್ ಶಮಿ ಮಾರಕ ದಾಳಿ ನಡೆಸಿ 4 ಗಳಿಸಿದ್ದರು.

*  2019 ರಲ್ಲಿ ಇಂಗ್ಲೇAಡ್ ನಲ್ಲಿ ನಡೆದ ಪಂದ್ಯಾವಳಿಯಲ್ಲಿ ಲೀಗ್ ಹಂತದಲ್ಲಿ ಮುಖಾಮುಖಿಯಾಗಿದ್ದ ಭಾರತ ಪಾಕ್ ಪಂದ್ಯದಲ್ಲಿ ಮೊದಲು ಬ್ಯಾಟ ಮಾಡಿ ಭಾರತ ರೋಹಿತ್ ಶರ್ಮಾ(140), ವಿರಾಟ್ ಕೊಹ್ಲಿ (77), ಕೆ.ಎಲ್. ರಾಹುಲ್ (57) ರನ್ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 336 ರನ್ ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದರಿಂದ ಡಿ.ಎಲ್.ಎಸ್. ನಿಯಮದ ಪ್ರಕಾರ ಪಾಕ್ ಗೆ 40 ಓವರ್ ಗಳಲ್ಲಿ 301 ರನ್ ಗಳ ಗುರಿ ನಿಗದಿಪಡಿಸಲಾಗಿತ್ತು. ಆದರೆ ಪಾಕ್ 40 ಓವರ್ ಗಳಲ್ಲಿ 212 ರನ್ ಗಳಿಸಲ್ಲಷ್ಟೇ ಶಕ್ತವಾಗಿತ್ತು.

ಹೀಗೆ ಏಕದಿನ ವಿಶ್ವಕಪ್ ನಲ್ಲಿ ಇದುವರೆಗಿನಾ 7 ಮುಖಾಮುಖಿಗಳಲ್ಲಿ ಭಾರತ ಪಾಕ್ ವಿರುದ್ಧ ತನ್ನ ಅಜೇಯ ಓಟವನ್ನು ಕಾಯ್ದುಕೊಂಡು ಬಂದಿದೆ. ಇಂದು ಮತ್ತೊಂದು ಮಹತ್ವದ ಹಣಾಹಣಿಯಲ್ಲಿ 8ನೇ ಬಾರಿ ಪರಸ್ಪರ ಎದುರಾಗುತ್ತಿವೆ. ಇಲ್ಲಿಯೂ ಭಾರತ ತನ್ನ ಗೆಲುವಿನ ಅಭಿಯಾನವನ್ನು ಮುಂದುವರಿಸಲಿ, ಭಾರತ ಮತ್ತೊಮ್ಮೆ ಗೆದ್ದುಬರಲಿ ಎಂಬುದು ಭಾರತೀಯರೆಲ್ಲರ ಹಾರೈಕೆಯಾಗಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ