October 5, 2024

ನಿರೂಪಣೆ :

ಡಾ. ಸುಧಾ ಹೆಚ್.ಎಸ್ ಸಂಸ್ಕೃತ ಉಪನ್ಯಾಸಕರು,
ಮೈಸೂರು.
ಮೊ. 9448233119

ಪರಮಾತ್ಮನ ಸೃಷ್ಟಿ ವಿಚಿತ್ರ ವಿಸ್ಮಯಕಾರಿ. ಮನುಷ್ಯನಿಗೆ ಎರಡು ಕಣ್ಣು ಮುಖದ ಮೇಲೆ ಏಕೆ? ಒಂದನ್ನ ಬೆನ್ನಿಗೆ ಇನ್ನೊಂದನ್ನ ಮುಖಕ್ಕೆ ಇಟ್ಟಿದ್ದರೆ ಹಿಂದೆ-ಮುಂದೆ ಎರಡೂ ಕಡೆ ನೋಡಬಹು ದಿತ್ತಲ್ಲ ? ಎನ್ನುವ ತರ್ಕಬುದ್ಧಿ ಜೀವಿಗಳದು. ಈ ರೀತಿಯಾದ ತರ್ಕಗಳು ಬೇಕಾದಷ್ಟಿವೆ, ಆದರೆ ಅದ್ಯಾವುದೂ ತನಗೆ ಕೇಳಿಸುವುದೇ ಇಲ್ಲ ಎನ್ನುವ ನಿರ್ಲಿಪ್ತ ಭಾವ ಆ ಪರಮಾತ್ಮನದು ಏಕೆಂದರೆ ಅವನ ಸೃಷ್ಟಿ ಕಾರ್ಯದಲ್ಲಿ ಯಾವ ಬದಲಾವಣೆಯೂ ಇಲ್ಲ. ಸೃಷ್ಟಿಯ ನಿಯಮ ಒಂದೇ ಆದರೂ ಅದೇ ಸೃಷ್ಟಿಯಲ್ಲಿ ಭಿನ್ನಗುಣಗಳನ್ನಿಟ್ಟು ಆಡಿಸುವ ಬಯಕೆ ಸೃಷ್ಟಿಕರ್ತನದು.
ಮನುಜಕುಲವೊಂದೊಬ್ಬನಿನ್ನೊಬ್ಬನಂತಿಲ್ಲ |
ತನುವಂಗಗಳೊಳೊಂದು, ರೂಪಗುಣ ಬೇರೆ ||
ಮನದೊಳೊಬ್ಬಬ್ಬನೊಂದೊಂದು ಪ್ರಪಂಚವಿಂ |
ತನುವೇಕದೊಳ್ ಬಹುಳ– ಮಂಕುತಿಮ್ಮ ||
“ಮನುಜಕುಲವು ಒಂದೇ ಆದರೂ ಒಬ್ಬ ಮನುಷ್ಯ ಇನ್ನೊಬ್ಬನಂತಿಲ್ಲ, ದೇಹರಚನೆ ಒಂದೇ ಆದರೂ ಅದರ ಆಕಾರ ಮತ್ತು ಸ್ವಭಾವಗಳು ಬೇರೆ. ಮನಸ್ಸಿನ ವಿಚಾರದಲ್ಲಂತೂ ಬಗೆ-ಬಗೆ ಆದರೂ ಏಕದಲ್ಲಿ ಅನೇಕವಾದರೂ ಒಂದಲ್ಲ ಒಂದು ರೀತಿಯಲ್ಲಿ ಹೊಂದಾಣಿಕೆ ಇದೆ” ಇದೇ ಪರಮಾಶ್ಚರ್ಯಕರವಾದ ವಿಚಾರ.
ಈ ಜಗತ್ತು ತರ್ಕ-ವಿತರ್ಕಗಳ, ನಾನಾ ವಿಷಯಗಳ, ನಾನಾ ಗುಣಗಳ, ಸಾಧ್ಯ-ಅಸಾಧ್ಯಗಳ, ರಾಗ-ದ್ವೇಷಗಳ ಹೊತ್ತಿರುವ ಗಂಟಿನಕಂತೆ. ಈ ಬದುಕಿನ ಸಂತೆಯಲಿ ಬಂದು-ಹೋಗುವ ಮನುಷ್ಯ ಒಂದೇ ಮನೆಯಲ್ಲಿ ಹುಟ್ಟಿದವರಾದರೂ ಕೂಡ ಗುಣ-ಸ್ವಭಾವಗಳು ಬೇರೆ ಬೇರೆ. ಕೈಯಲ್ಲಿನ ಒಂದು ಬೆರಳು ಉದ್ದ, ಇನ್ನೊಂದು ಬೆರಳು ಗಿಡ್ಡ, ಒಂದುವೇಳೆ ಎಲ್ಲ ಬೆರಳುಗಳು ಒಂದೇ ಸಮನಾಗಿದ್ದಿದ್ದರೆ ಕೆಲಸಗಳು ಅಸಾಧ್ಯ ಅನ್ನುವ ನಿಯಮ ಸೃಷ್ಟಿಕರ್ತನದು–ಅದರ ಬಗ್ಗೆ ಸೊಲ್ಲೆತ್ತುವ ಧೈರ್ಯ ಸದಾ ಸವಾಲನ್ನು ಎದುರಿಸುವ ವಿಜ್ಞಾನಕ್ಕೂ ಇಲ್ಲ – ಪರಮಾತ್ಮ ಪ್ರಶ್ನಾತೀತ. ಇಂತಹ ಅಸಮತೆ ಹೇಗಿದೆ ಎಂದರೆ.
ನೆಲವೊಂದೆ, ಹೊಲಗದ್ದೆತೋಟ ಮರಳೆರೆ ಬೇರೆ |
ಜಲವೊಂದೆ, ಸಿಹಿಯುಪ್ಪು ಜವುಗೂಟೆ ಬೇರೆ ||
ಕುಲವೊಂದರೊಳೆ ಸೋದರವ್ಯಕ್ತಿಗುಣ ಬೇರೆ |
ಹಲವೊಂದುಂ ಸಾಜ– ಮಂಕುತಿಮ್ಮ ||
ನೆಲ ಒಂದೇ ಆದರೂ ಅದರಲ್ಲಿ ಹೊಲ, ಗದ್ದೆ, ತೋಟ ಎಂದು ಬೇರೆ ಬೇರೆ. ಮಣ್ಣು ಕೂಡ ಬೇರೆ ಬೇರೆ (ಕಪ್ಪು ಮಣ್ಣು, ಕೆಂಪು ಮಣ್ಣು, ಎರೆ ಮಣ್ಣು ಇತ್ಯಾದಿ) ಜಲ (ನೀರು) ಒಂದೇ ಆದರೆ ಅದರಲ್ಲಿ ಸಿಹಿ, ಉಪ್ಪು ಅಂತ ಬೇರೆ ಬೇರೆ ಹಾಗೂ ಅವು ಸಿಗುವ ಸ್ಥಳವೂ ಬೇರೆ ಬೇರೆ, ಒಂದೇ ಕುಲದಲ್ಲಿ ಹುಟ್ಟಿದರೂ ಅಣ್ಣ-ತಮ್ಮಂದಿರ ಸ್ವಭಾವಗಳು ಬೇರೆ ಬೇರೆ. ಮನುಷ್ಯಜಾತಿ ಒಂದೇ ಆದರೂ ಸಹ ಬೇರೆ ಬೇರೆ ವ್ಯಕ್ತಿಗಳಲ್ಲಿ ಬೇರೆ ಬೇರೆಗುಣ-ಸ್ವಭಾವಗಳು. ಈ ರೀತಿಯಾಗಿರುವುದು ಸಹಜವೇ ಆಗಿರುವಂತೆ ನಾವು ದಿನನಿತ್ಯ ಕಾಣುತ್ತೇವೆ. “ಸೃಷ್ಟಿಯಲ್ಲಿ ಸಮತೆ ಇಲ್ಲ” ಎಂದುಕೊಳ್ಳುತ್ತೇವೆ. ಹಾಗೆಂದು ಇದಕ್ಕೆ ಎದುರಾಳಿಯಾಗಿ ಹೋಗಲು ಸಹ ಸಾಧ್ಯವಾಗುವುದಿಲ್ಲ. ಈ ರೀತಿಯಾದ ಜೀವನವೇ ಒಂದು ದೊಡ್ಡ ಸವಾಲು, ಇದನ್ನು ಸರಿದೂಗಿಸಿಕೊಂಡು ಹೋಗುವ ಜಾಣತನವನ್ನೂ ಸಹ ಪರಮಾತ್ಮನೇ ಕೊಟ್ಟಿರುತ್ತಾನೆ.
ಸೃಷ್ಟಿಯಲ್ಲಿ ಹೇಗೆ ಸಮತೆ ಇಲ್ಲವೋ ಹಾಗೆಯೇ ಆಹಾರದಲ್ಲಿ ಕೂಡ ಸಮತೆ ಇಲ್ಲ. ಒಂದು ಜೀವಿಯನ್ನು ಕೊಂದು ಇನ್ನೊಂದು ಜೀವಿ ಬದುಕುವುದು ಸೃಷ್ಟಿಯ ನಿಯಮ. ಈ ನಿಯಮದಂತೆ ಜೀವನ. ಒಂದೆಡೆ ಹೊತ್ತಿಸಿದ ಬೆಂಕಿಯ ಹೊಗೆಯು ಎಲ್ಲ ಕಡೆ ಪಸರಿಸುವಂತೆ ಒಬ್ಬ ಮನುಷ್ಯನ ಕಷ್ಟ-ಸುಖಗಳು ಇತರರ ಮನಸ್ಸನ್ನು ಹೊಕ್ಕು ಅವರು ಅದಕ್ಕೆ ಸ್ಪಂದಿಸುವಂತೆ ಮಾಡುವಲ್ಲಿ ಪರಮಾತ್ಮನ ಸೃಷ್ಟಿ ಒಂದು ಅದ್ಭುತವನ್ನೇ ಸಾಧಿಸಿದೆ ಹಾಗಾಗಿಯೇ ಇಂದಿಗೂ ಮನುಷ್ಯ ಸಂಘಜೀವಿಯಾಗಿರಲು ಸಾಧ್ಯವಾಗಿದೆ.
ಇಡೀ ಜಗತ್ತಿನಲ್ಲಿ ಎಲ್ಲರೊಂದಿಗೂ ಸಮನಾಗಿ ವರ್ತಿಸುವವರು “ಇಬ್ಬರೇ” ಒಂದು ಯಮ, ಇನ್ನೊಂದು ಹೊಟ್ಟೆ (ಹಸಿವು) ಇವೆರಡು ದಾಸನಿಂದ ದೊರೆಯವರೆಗೂ ಯಾವುದೇ ಬೇಧವಿಲ್ಲದೆ ನಡೆದುಕೊಳ್ಳುತ್ತವೆ. ಪ್ರಕೃತಿಯ ರಾಗ-ದ್ವೇಷಗಳಿಗೆ ಇಲ್ಲಿ ಯಾವುದೆ ಸ್ಥಾನವಿಲ್ಲ ‘ಕಾಲನ’ ಕರೆ ಬಂದಾಗ ಎಲ್ಲರೂ ಓಗೊಡಲೇಬೇಕು. ಆದ್ದರಿಂದ ಇರುವ ಮೂರು ದಿನದ ಬಾಳಲ್ಲಿ ಏಕೆ ಈ ರೀತಿಯ ಜಂಜಾಟ-ಪರದಾಟ?
ನಾಟಕವ ನೋಡು ಬ್ರಹ್ಮಾಂಡ ರಂಗಸ್ಥಲದಿ |
ಕೋಟಿನಟರಾಂತಿಹರು ಚಿತ್ರಪಾತ್ರಗಳ ||
ಆಟಕ್ಕೆ ಕಥೆಯಿಲ್ಲ ಮೊದಲಿಲ್ಲ ಕಡೆಯಿಲ್ಲ|
ನೋಟಕರು ಮಾಟಕರೆ – ಮಂಕುತಿಮ್ಮ ||
ಈ ಬ್ರಹ್ಮಾಂಡವೆಂಬ ರಂಗಮಂಟಪದಿ ಬ್ರಹ್ಮನು ರಚಿಸಿದ ನಾಟಕದ ಪಾತ್ರಧಾರಿಗಳು ಕೋಟಿ-ಕೋಟಿ ಜನರು. ಇವರ ಚಿತ್ರ-ವಿಚಿತ್ರ ಆಟಗಳಿಗೆ ಕೊನೆ-ಮೊದಲಿಲ್ಲ. ಅದಿರಲಿ ಕಥೆಯೇ ಇಲ್ಲದ ನಾಟಕ ಇದು. ಇದರ ವೈಶಿಷ್ಟ್ಯ ಏನೆಂದರೆ ಈ ನಾಟಕದ ಪಾತ್ರಧಾರಿಗಳೂ ನಾವೇ, ಪ್ರೇಕ್ಷಕರೂ ನಾವೇ! ನಮ್ಮೆಲ್ಲ ನಾಟಕದ ಪಾತ್ರ ಮುಗಿದ ನಂತರ ಹೊರಡುವುದೊಂದೇ ಕೆಲಸ, ವಿಪರ್ಯಾಸವೆಂದರೆ ನಾಟಕದ ನಾಯಕ, ಖಳನಾಯಕ, ಪ್ರೇಕ್ಷಕ ಮೂವರೂ ಹೋಗುವಾಗ ಒಂದೇದಾರಿ, ಒಂದೇ ನೆಲ, ಒಂದೇ ಸ್ಥಳ, ಅಲ್ಲಿ ಎಲ್ಲರೂ ಒಂದೇ ಸಮ. ಸೃಷ್ಟಿಕರ್ತನ ಸೃಷ್ಟಿ, ಭಿನ್ನತೆಯಿಂದ ಕೂಡಿದ್ದರೂ ಸಹ ‘ಕಾಲನ’ ದೃಷ್ಟಿಯಲ್ಲಿ ಎಲ್ಲ ಸಮಾನ–ಇದುವೇ ಪರಮಾತ್ಮನ ಅಂತಿಮ ಆಟದ ನಿಯಮ. ಈ ಅಂತಿಮ ಆಟದ ನಿಯಮವನ್ನು ಅರಿತವನು ನಿಜವಾದ ಮಾನವನಾಗಿ ಬದುಕಬಲ್ಲ.
************

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ