October 5, 2024

ಕಸ್ತೂರಿ ರಂಗನ್ ವರದಿ ಬಗ್ಗೆ ಕೇಂದ್ರ ಸಚಿವೆ ಮತ್ತು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರು ಮಾತನಾಡಿರುವ ಒಂದು ಹಳೆಯ ವಿಡಿಯೋವನ್ನು ಇತ್ತೀಚೆಗೆ ಹರಿಯಬಿಟ್ಟು ಜನರ ದಾರಿತಪ್ಪಿಸಲಾಗುತ್ತಿದೆ ಎಂದು ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ವಿಜಯಕುಮಾರ್ ಆರೋಪಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಗೋಷ್ಠಿಯಲ್ಲಿ ಮಾಹಿತಿ ನೀಡಿರುವ ವಿಜಯಕುಮಾರ್ ಶೋಭಾ ಕರಂದ್ಲಾಜೆಯವರು ವರ್ಷಗಳ ಹಿಂದೆ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದ ವಿಡಿಯೋ ಒಂದನ್ನು ಇತ್ತೀಚೆಗೆ ಬಿ.ಜೆ.ಪಿ. ಪಕ್ಷದವರು ಹೊಸ ವಿಡಿಯೋ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಅದರ ಆಧಾರದ ಮೇಲೆ ಕೆಲ ಮಾಧ್ಯಮಗಳು ಸುದ್ದಿಯನ್ನು ಮಾಡಿದ್ದವು. ಚಿಕ್ಕಮಗಳೂರಿನ ಕೆಲ ಬಿ.ಜೆ.ಪಿ. ನಾಯಕರು ಅದೇ ವಿಡಿಯೋ ಆಧಾರದಲ್ಲಿ ಪತ್ರಿಕಾಗೋಷ್ಠಿಗಳನ್ನು ಕರೆದು ಕೇಂದ್ರ ಸರ್ಕಾರಕ್ಕೆ ಶಹಬ್ಬಾಸ್‍ಗಿರಿ ನೀಡಿದ್ದರು.

ಆದರೆ ಆ ವಿಡಿಯೋ ಬಹಳ ಹಳೆಯದು. ಅದು ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದಾಗ ಒಂದು ವರ್ಷದ ಹಿಂದೆ ದೆಹಲಿಯಲ್ಲಿ ಸಚಿವ ಭೂಪೇಂದ್ರ ಸಿಂಗ್ ಅವರನ್ನು ಭೇಟ ಆದಾಗ ಶೋಭಾ ಕರಂದ್ಲಾಜೆಯವರು ಮಾತನಾಡಿದ್ದ ವಿಡಿಯೋ ಆಗಿದೆ. ಈ ಬಗ್ಗೆ ಇದುವರೆಗೂ ಸಂಸದರು ಅಥವಾ ಬಿ.ಜೆ.ಪಿ. ವಕ್ತಾರರು ಸ್ಪಷ್ಟನೆ ನೀಡುವ ಕೆಲಸ ಮಾಡಿಲ್ಲ ಎಂದು ವಿಜಯಕುಮಾರ್ ಅಸಮದಾನ ವ್ಯಕ್ತಪಡಿಸಿದ್ದಾರೆ.

ಮುಂದುವರಿದು ಹಲವಾರು ವರ್ಷಗಳಿಂದ ರಾಜ್ಯ 10 ಜಿಲ್ಲೆಗಳಲ್ಲಿ ಕಸ್ತೂರಿರಂಗನ್ ವರದಿ ವಿಚಾರವಾಗಿ ಹಲವಾರು ಮಾಹಿತಿಗಳು ಹರಿದಾಡುತ್ತಿದ್ದು, ಇದಕ್ಕೆ ತಾರ್ಕಿಕ ಅಂತ್ಯ ಕಾಣದೆ ಇರುವುದರಿಂದ ಜನ ಸಾಮಾನ್ಯರಲ್ಲಿ ದಿನೇ ದಿನೇ ವರದಿಯ ಬಗ್ಗೆ ಆತಂಕ ಹೆಚ್ಚಾಗುತ್ತಿದೆ. ಸುಮಾರು 3 ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ಹಸಿರು ಪೀಠದ ಆದೇಶದ ಅನ್ವಯ ತೂಗುಗತ್ತಿಯಾಗಿದ್ದ ವರದಿಯನ್ನು ಹಿಂಪಡೆಯಬೇಕು ಅದರಲ್ಲಿರುವ ನ್ಯೂನ್ಯತೆಗಳನ್ನು ಸರಿತೂಗಿಸಬೇಕೆಂದು ಒತ್ತಾಯಿಸಿ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳ ಸುಮಾರು 16 ಗ್ರಾಮ ಪಂಚಾಯಿತಿಗಳ ಚುನಾವಣೆಯನ್ನ ಬಹಿಷ್ಕರಿಸಿ ಸರ್ಕಾರಗಳ ಮೇಲೆ ಒತ್ತಡ ಹಾಕಿ ತಾತ್ಕಾಲಿಕ ಸಮಯಾವಕಾಶ ಪಡೆಯಲಾಗಿತ್ತು. ಇದಾದಮೇಲೆ ಮತ್ತೊಮ್ಮೆ ಈ ವರದಿಯನ್ನು ಜಾರಿಗೊಳಿಸಲು ಕಳೆದ ವರ್ಷ ಮತ್ತೊಮ್ಮೆ ಅಧಿಸೂಚನೆ ಹೊರಡಿಸಲಾಗಿ ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಜುಲೈ 27, 28 ಮತ್ತು 29ರಂದು ರಾಜ್ಯದ 3 ಜಿಲ್ಲೆಗಳನ್ನು (ಕೊಡಗು, ಹಾಸನ, ಚಿಕ್ಕಮಗಳೂರು) ಸ್ವಯಂ ಪ್ರೇರಿತ ಬಂದ್ ಮಾಡಲು ಸಮಿತಿ ಕರೆ ನೀಡಿದ ಹಿನ್ನೆಲೆಯಲ್ಲಿ ಒತ್ತಡಕ್ಕೆ ಒಳಗಾದ ರಾಜ್ಯ ಸರ್ಕಾರ ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ರಾಜ್ಯ ಸಂಪುಟದ ನಿಯೋಗ ದೆಹಲಿಗೆ ತೆರಳಿ ಕೇಂದ್ರ ಅರಣ್ಯ ಮಂತ್ರಿ ಭೂಪೇಂದ್ರ ಯಾದವ್ ಅವರೊಂದಿಗೆ ಸಭೆ ನಡೆಸಿ ಅಂದು ಕಸ್ತೂರಿರಂಗನ್ ವರದಿಯ ನ್ಯೂನತೆಯ ಬಗ್ಗೆ ಸಮಾಲೋಚಿಸಿ ವರದಿ ತಯಾರಿಸಲು 5 ಜನರ ಸಮಿತಿಯನ್ನು ರಚಿಸಿ ಸಮಿತಿಯು 1 ವರ್ಷದ ಅವಧಿಯೋಳಗೆ ಭಾದಿತ ಪ್ರದೇಶಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸುವಂತೆ ಸಮಿತಿಗೆ ಸೂಚನೆ ನೀಡಲಾಗಿತ್ತು.

ಈ ಸಮಿತಿಯ ಕಾರ್ಯವೈಖರಿಯ ನಿಷ್ಕ್ರಿಯತೆಯನ್ನು ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟ ಸಮಿತಿಯು ಆಗಿಂದಾಗೆ ಅಧಿಕಾರಿಗಳಿಗೆ, ಮಂತ್ರಿಗಳಿಗೆ, ಚುನಾಯಿತ ಪ್ರತಿನಿಧಿಗಳಿಗೆ ಮನವಿ ನೀಡಿ ಸಮಿತಿಯು ವರದಿಯ ವ್ಯಾಪ್ತಿಯ ಪ್ರದೇಶಗಳಿಗೆ ಭೇಟಿ ನೀಡಿ ಜನರ ಸಮಸ್ಯೆಯನ್ನು ಆಲಿಸುವಂತೆ ಒತ್ತಾಯಿಸಲಾಗುತ್ತಿತ್ತು ಮತ್ತು ಪತ್ರಿಕಾ ಮಾಧ್ಯಮಗಳ ಮುಖಾಂತರ ಸಾರ್ವಜನಿಕರನ್ನು ಎಚ್ಚರಿಸುವ ಕೆಲಸವನ್ನು ಸಹ ಮಾಡಲಾಗುತ್ತಿತ್ತು. ಆದರೆ ಈ ಸಮಿತಿಯು 1 ವರ್ಷ ಕಳೆದರೂ ಯಾವುದೇ ಹಳ್ಳಿಗಳಿಗೆ ಭೇಟಿ ನೀಡದೆ ಇತ್ತೀಚಿನ ದಿನಗಳಲ್ಲಿ ಬೆಂಗಳೂರಿಗೆ ತೆರಳಿ ರಾಜ್ಯದ ಅರಣ್ಯ ಮಂತ್ರಿಯಾದ ಶ್ರೀ. ಈಶ್ವರ್ ಖಂಡ್ರೆ ಅವರನ್ನು ಭೇಟಿ ಮಾಡಿ ವರದಿ ಜಾರಿಗೆ ತರಲು ಚರ್ಚಿಸಿರುವುದು ಖಂಡನೀಯವಾಗಿರುತ್ತದೆ.

ಜಿಲ್ಲೆಯಲ್ಲಿ ಹೊಸದಾಗಿ ಚುನಾಯಿತರಾಗಿರುವ 5 ಜನ ಶಸಕರು ಅರಣ್ಯ ಮಂತ್ರಿಗಳು, ಕಂದಾಯ ಮಂತ್ರಿಗಳು ಹಾಗೂ ಹೋರಾಟ ಸಮಿತಿಯೊಂದಿಗೆ ಸಭೆ ನಿಗದಿ ಮಾಡಿ ಚರ್ಚಿಸಿ ಜಿಲ್ಲೆಯ ಅರಣ್ಯ ಸಮಸ್ಯೆಗಳಾದ ಕಸ್ತೂರಿರಂಗನ್ ವರದಿ, ಡೀಮ್ಡ್ ಫಾರೆಸ್ಟ್ ಸಮಸ್ಯೆ, ಸೆಕ್ಷನ್ 4(1) ಮೀಸಲು ಅರಣ್ಯ ಸಮಸ್ಯೆ, ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ, ಇನಾಂ ಸಮಸ್ಯೆ ಹಾಗೂ ಕಂದಾಯ ಮತ್ತು ಗೋಮಾಳ ಭೂಮಿಗಳ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡು ಜನತೆ ಮತ್ತು ಅರಣ್ಯ ಇಲಾಖೆ ಹಾಗೂ ಕಾಡು ಪ್ರಾಣಿಗಳ ಸಂಘರ್ಷದಿಂದ ಪರಿಹಾರ ಒದಗಿಸಬೇಕೆಂದು ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಒತ್ತಾಯಿಸಿದೆ.

ಈ ಸಂದರ್ಭದಲ್ಲಿ ಸಮಿತಿಯ ಪ್ರಧಾನ ಸಂಚಾಲಕ ಕೆ.ಕೆ.ರಘು, ಸಂಚಾಲಕರಾದ ವಾಸು ಪೂಜಾರಿ, ಪ್ರವೀಣ್, ಮೂಸಾದಿಕ್, ಎಂ.ಎಸ್.ಉಮೇಶ್ ಇದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ