October 5, 2024

ಹೃದಯಾಘಾತ (ಹಾರ್ಟ್ ಅಟ್ಯಾಕ್) ಆಗಿ ತೀರಿಕೊಂಡರಂತೆ ಎಂಬ ಸುದ್ದಿಗಳು ಈಗ ಸಾಮಾನ್ಯವಾಗಿ ಬಿಟ್ಟಿವೆ. ಯುವಕರಿಂದ ಮೊದಲ್ಗೊಂಡು ವಯಸ್ಕರ ವರೆಗೆ ಹೃದಯಾಘಾತದಿಂದ ನಿಧನರಾಗುವವರ ಸಂಖ್ಯೆ ಹೆಚ್ಚಾಗತೊಡಗಿದೆ. ಮಧ್ಯ ವಯಸ್ಸಿನ ಬಹು ಮಂದಿ ಇಂದು ಹೃದಯಾಘಾತದಿಂದ ಅಸುನೀಗುತ್ತಿದ್ದಾರೆ.
ಹಾಗಾದರೆ ಹೃದಯಾಘಾತಕ್ಕೆ ಕಾರಣವಾಗುತ್ತಿರುವ ಪ್ರಮುಖ ಅಂಶಗಳು ಯಾವುವು ? ಎಂಬುದರ ಬಗ್ಗೆ ಬೆಳಕು ಚೆಲ್ಲುತ್ತದೆ ಈ ಲೇಖನ
*********
ಧೂಮಪಾನ-ದಹನ
ಸ್ಮೋಕಿಂಗ್‍ಗೂ ಹಠಾತ್ ಹೃದಯಾಘಾತಕ್ಕೂ ನೇರಾನೇರ ಸಂಬಂಧವಿದೆ. ಇಂದಿನ ಪೀಳಿಗೆಗೆ ಗೀಳಾಗಿ ಪರಿಣಮಿಸಿರುವ ಧೂಮ ಪಾನ ಆರೋಗ್ಯದ ಮೇಲೆ ಎಷ್ಟರ ಮಟ್ಟಿಗೆ ದುಷ್ಪರಿಣಾಮ ಬೀರುತ್ತಿದೆ ಎಂದರೆ ಧೂಮಪಾನ ಮಾಡುವ ವ್ಯಕ್ತಿಯ ರಕ್ತದಲ್ಲಿನ ಆಕ್ಸಿಜನ್‍ನ ಪ್ರಮಾಣ ಕುಸಿದು ಅನೇಕ ಸಮಸ್ಯೆಗಳಿಗೆ ದಾರಿಯಾಗುತ್ತದೆ. ಬಾಯಿ, ಗಂಟಲು, ಶ್ವಾಸಕೋಶ, ಜಠರ, ಮೂತ್ರಪಿಂಡ, ಬ್ಲಾಡರ್ ಕ್ಯಾನ್ಸರ್‍ಗೂ ಕಾರಣವಾಗುತ್ತದೆ. ರಕ್ತನಾಳಗಳ ಒಳಭಾಗದಲ್ಲಿ ದಪ್ಪನೆಯ ಕೊಬ್ಬಿನಂತಹ ಪದರುಗಳು ಬೆಳೆಯಲು ಉತ್ತೇಜಿಸುತ್ತದೆ. ಇದರಿಂದ ಹೃದಯಾಘಾತ ಅಥವಾ ಪಾಶ್ರ್ವವಾಯು ಉಂಟಾಗುವ ಸಾಧ್ಯತೆಗಳಿರುತ್ತವೆ. ರಕ್ತನಾಳದ ಒಳಭಾಗದಲ್ಲಿ ತುಪ್ಪಳದಂತೆ ಬೆಳೆದು ರಕ್ತ ಚಲನೆಗೆ ಅಡ್ಡಿಪಡಿಸುವುದರಿಂದ ರಕ್ತದೊತ್ತಡವನ್ನು ಹೆಚ್ಚಿಸಿ ಅಡ್ರಿನಲಿನ್ ತಯಾರಿಕೆಗೆ ಪ್ರೋತ್ಸಾಹಿಸುತ್ತದೆ. ಇದರಿಂದ ಹೃದಯ ಬಡಿತವು ಅಸ್ತವ್ಯಸ್ತವಾಗುವ ಸಾಧ್ಯತೆಗಳು ಹೆಚ್ಚು. ರಕ್ತನಾಳದೊಳಗೆ ರಕ್ತವು ಅಲ್ಲಲ್ಲಿ ಹೆಪ್ಪುಗಟ್ಟುವಂತೆ ಮಾಡಿ ಥ್ರಾಂಬೋಸಿಸ್ ಉಂಟುಮಾಡಬಹುದು. ಆಕಸ್ಮಿಕವಾಗಿ ರಕ್ತದ ಗೆಡ್ಡೆ ಒಡೆದು ಶ್ವಾಸಕೋಶ ಗಳಿಗೋ ಅಥವಾ ಮೆದುಳಿಗೋ ಪ್ರವೇಶಿಸಿದರೆ ಸಾಯಲೂಬಹುದು. ಧೂಮಪಾನದಿಂದಾಗುವ ತೊಂದರೆಗಳಿಗೆ ಲೆಕ್ಕವೇ ಇಲ್ಲ. ಇದರಿಂದ ಶ್ವಾಸಕೋಶಕ್ಕಷ್ಟೇ ಹಾನಿಯಾಗುವುದಿಲ್ಲ. ತಲೆಯಿಂದ ಕಾಲಿನವರೆಗೂ ಎಲ್ಲ ಅಂಗಾಂಗಗಳೂ ರೋಗಗ್ರಸ್ಥವಾಗುತ್ತವೆ ಎಂಬುದನ್ನು ಅರಿಯಬೇಕು. ಕಡಿಮೆ ನಿಕೋಟಿನ್ ಇರುವ ಸಿಗರೇಟ್, ಸೆಕೆಂಡ್ ಹ್ಯಾಂಡ್ ಸ್ಮೋಕ್ ಇನ್ನೂ ಅಪಾಯಕಾರಿ. ಹೃದಯದ ಖಾಯಿಲೆಗಳಿಂದ ಉಂಟಾದ 5 ಮರಣಗಳಲ್ಲಿ ಒಂದಕ್ಕೆ ಕಾರಣ ದೂಮಪಾನ. ಹೃದಯಸಂಬಂಧಿ ಸಾವುಗಳಲ್ಲಿ ಶೇ. 75ರಷ್ಟು ಸಾವಿಗೆ ತಂಬಾಕು ಕಾರಣ.

ಅನಾರೋಗ್ಯಕರ ಆಹಾರ
ಫಿಜ್ಜಾ, ಬರ್ಗರ್, ಬಜ್ಜಿ, ಗೋಬಿಮಂಚೂರಿ, ಮಸಾಲಪುರಿ, ಸಮೋಸ, ಚಿಪ್ಸ್, ಪೆಪ್ಸಿ… ಆಹಾ! ಹೆಸರು ಕೇಳಿದರೇನೇ ಬಾಯಲ್ಲಿ ನೀರೂರುತ್ತದೆ. ಇನ್ನು ತಿನ್ನುವುದನ್ನು, ಕುಡಿಯುವುದನ್ನು ಬಿಡುವಿರಾ ಎಂದರೆ ಸುಮ್ಮನಿರುವಿರಾ? ಉಹೂಂ. ಹೋಗಲಿ ನೀವಿದನ್ನು ವಾರದಲ್ಲಿ ಎಷ್ಟು ಬಾರಿ ತಿನ್ನುತ್ತೀರಾ? ಅಯ್ಯೋ! ಅದನ್ನೆಲ್ಲ ನಾವು ಲೆಕ್ಕ ಹಾಕುವುದಕ್ಕೆ ಆಗುವುದಿಲ್ಲ ಅಂತೀರಾ? ಆದರೆ ಅಷ್ಟು ಇಷ್ಟಪಟ್ಟು ತಿನ್ನುವ ಆ ತಿನಿಸುಗಳು ನಿಮ್ಮ ದೇಹದ ಮೇಲೆ ಎಂತಹ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತಿವೆ ಗೊತ್ತಾ. ನಿತ್ಯವೂ ಈ ತಿನಿಸುಗಳನ್ನು ತಿನ್ನುವ ಅಭ್ಯಾಸ ಇರುವವರಿಗೆ ಆ ದೇವರೆ ಕಾಪಾಡಬೇಕು. ಪ್ರತಿ ದಿನ ಜಂಕ್ ಫುಡ್ ತಿನ್ನುತ್ತಾ ಹೋದಂತೆ ಕೊಬ್ಬಿನ ಅಂಶ ಹೆಚ್ಚಾಗಿ ಸ್ಥೂಲಕಾಯ ಪ್ರಾರಂಭವಾಗುವುದು. ಸ್ಥೂಲಕಾಯವು ಹೃದಯಕ್ಕೆ ತೊಂದರೆ, ಸಕ್ಕರೆ ಕಾಯಿಲೆ, ಸಂಧಿವಾತಗಳಿಗೆ ನಾಂದಿಯಾಗುವುದು.

ಇಂದಿನ ಯುವ ಪೀಳಿಗೆ ಮತ್ತು ಮಕ್ಕಳು ಬಾಯಿ ರುಚಿಗೆ ಅಥವಾ ಹಸಿದಾಗ ಜಂಕ್‍ಫುಡ್ ಮೊರೆ ಹೋಗುತ್ತಾರೆ. ಹೀಗಾಗಿ ಹೆಚ್ಚಿನವರು ಸಣ್ಣ ವಯಸ್ಸಲ್ಲೇ ಡಯಾಬಿಟಿಸ್, ಸ್ಥೂಲಕಾಯ, ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಹಸಿದಾಗ ಕೈಗೆ ಸಿಕ್ಕಿದ್ದನ್ನು ತಿನ್ನುವುದರಿಂದ ಯುವಜನರಿಗೆ ಆ ಕ್ಷಣಕ್ಕೆ ಏನೂ ಅನ್ನಿಸದೆ ಇರಬಹುದು. ಆದರೆ, ಇದು ಭವಿಷ್ಯದಲ್ಲಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟುಮಾಡುತ್ತದೆ. ತಿನ್ನಲು ಬಹಳ ರುಚಿಯಾದ ಈ ಆಹಾರಗಳು ಅಷ್ಟೇ ಅಪಾಯಕಾರಿ ಎಂಬುದನ್ನು ಮರೆಯುತ್ತೇವೆ. ಈ ಆಹಾರಗಳು ನಮ್ಮ ಶರೀರಕ್ಕೆ ಬೇಕಾಗುವ ಪೋಷಕಾಂಶಗಳನ್ನು ಪೂರೈಸುವುದಿಲ್ಲ ಬದಲಾಗಿ ಶರೀರವನ್ನು ಘಾಸಿಗೊಳಿಸುತ್ತವೆ. ಇವುಗಳಲ್ಲಿ ಆರೋಗ್ಯಕ್ಕೆ ಹಾನಿಯಾಗುವ ಕೊಬ್ಬು, ಉಪ್ಪು, ಸಕ್ಕರೆ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇದರಿಂದ ಸಕ್ಕರೆ ಕಾಯಿಲೆ ದೇಹದಲ್ಲಿ ಕೊಬ್ಬು, ಯಕೃತ್ತಿನ ಮೇಲೆ ಹಾನಿ, ಹೃದಯಾಘಾತ ಮುಂತಾದ ಪರಿಣಾಮಗಳು ಶರೀರದ ಮೇಲೆ ಆಗುತ್ತವೆ. ಅವಶ್ಯಕತೆಗಿಂತ ಹೆಚ್ಚಾಗಿರುವ ಕೊಬ್ಬು ಮತ್ತು ಸೋಡಿಯಮ್ ಈ ಆಹಾರಗಳಲ್ಲಿ ಇರುವುದರಿಂದ ರಕ್ತದ ಒತ್ತಡ ಜಾಸ್ತಿಯಾಗುವುದು. ಈ ಕುರ್‍ಕುರೆ ತಿಂಡಿಯಲ್ಲಿ ಪ್ಲಾಸ್ಟಿಕ್ ಇರುವುದೆಂದು ಪ್ರಯೋಗಗಳು ಹೇಳುತ್ತಿವೆ. ಇಂತಹ ಎಷ್ಟೋ ತಿಂಡಿಗಳು ನಮ್ಮ ಶರೀರವನ್ನು ಎಷ್ಟರ ಮಟ್ಟಿಗೆ ಘಾಸಿಗೊಳಿಸಬಲ್ಲವು ಎಂದು ಊಹಿಸುವುದೂ ಕಷ್ಟಸಾಧ್ಯ.

ಒತ್ತಡ ಜೀವನವೇ ಪ್ರಮುಖ ಕಾರಣ
ದೈನಂದಿನ ಒತ್ತಡದ ಬದುಕಿನಿಂದಾಗಿ ಅಧಿಕ ರಕ್ತದೊತ್ತಡ ದಂತಹ ಕಾಯಿಲೆಗಳು ಯಾವುದೇ ಸೂಚನೆ ನೀಡದೇ ಮೂಕ ಕೊಲೆಗಾರನಂತೆ ಭಯಾನಕವಾಗಿ ಆಕ್ರಮಿಸುತ್ತಿದೆ. ಇದು ಹೃದಯಾಘಾತ ಸೇರಿದಂತೆ ಹಲವು ಮರಣಾಂತಿಕ ಕಾಯಿಲೆಗಳಿಗೆ ಅಸ್ಪದ ನೀಡುತ್ತಿದೆ. ನಾವು ಸೇವಿಸುವ ಆಹಾರ, ಶ್ರಮವಿಲ್ಲದ ಒತ್ತಡದ ಬದುಕು ಅಧಿಕ ರಕ್ತದೊತ್ತಡ ಎಂಬ ಭೀತಿ ಕಾಡಲು ಮುಖ್ಯ ಕಾರಣ.

ವ್ಯಾಯಾಮವೇ ಇಲ್ಲದ ಮೇಲೆ…
ವ್ಯಾಯಾಮ, ದೈಹಿಕ ಚಟುವಟಿಕೆಗಳ ಕೊರತೆಯಿಂದಾಗಿ ಯುವಕರು ಹಾಗೂ ಮಕ್ಕಳಲ್ಲಿ ಹೃದಯಾಘಾತ ಹೆಚ್ಚಾಗಿದೆ. ದೇವಸ್ಥಾನ, ಮಾರುಕಟ್ಟೆ, ಶಾಲೆ-ಕಾಲೇಜು, ಕಚೇರಿಗೆ ತೆರಳಲು ವಾಹನಗಳನ್ನು ಅವಲಂಬಿಸಿರುವ ಕಾರಣ, ಕೈ ಕಾಲುಗಳಿಗೆ ಚಲನೆಯಿಲ್ಲದಂತಾಗಿ ದೇಹ ರೋಗದ ಗೂಡಾಗಿದೆ. ಹೆಚ್ಚು ಸಂಬಳಕ್ಕಾಗಿ ಹೆಚ್ಚಿನ ಸಮಯ ದುಡಿಯುವುದು, ನಾಳೆಯ ಬಗ್ಗೆ ಚಿಂತೆಯಲ್ಲೆ ಬದುಕುವುದು, ನಿದ್ದೆಯ ಕೊರತೆಯಿಂದ ಹೃದಯದ ಗತಿಯಲ್ಲಿ ಏರುಪೇರಾಗುತ್ತಿದೆ. ರಾತ್ರಿ ಮಲಗುವ ಹಾಗೂ ಬೆಳಗ್ಗೆ ಏಳುವ ಸಮಯದ ಏರಿಳಿತವೂ ಕಾರಣ.

ದಿನದಲ್ಲಿ 11 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ ಒಂದೇ ಕಡೆ ಕೂತು ಕೆಲಸ ಮಾಡುವವರಿಗೆ ಶೇ. 67ರಷ್ಟು ಹೃದಯದ ಗಂಭೀರ ಸಮಸ್ಯೆ ಉಂಟಾಗುತ್ತದೆಂದು ಲಂಡನ್ ವಿವಿ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. ಒಂದೇ ಕಡೆ ಕೂತು ಕೆಲಸ ಮಾಡುವುದರಿಂದ, ಹೃದಯಕ್ಕೆ ರಕ್ತಸಂಚಲನ ಮಾಡುವ ರಕ್ತನಾಳಗಳಲ್ಲಿ ಬೊಜ್ಜು ಸೇರಿಕೊಂಡು ಅದು ಹೃದಯಕ್ಕೆ ಸಮರ್ಥವಾಗಿ ರಕ್ತ ಸಂಚಲನವಾಗುವುದನ್ನು ತಡೆದು ಹೃದಯಾಘಾತವಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದೆ. ಕೆಲಸದ ಜೊತೆಗೆ ಧೂಮಪಾನ, ಮದ್ಯಪಾನ ಸೇರಿಕೊಂಡರೆ ಈ ಸಮಸ್ಯೆಯ ಸಾಧ್ಯತೆ ಇನ್ನೂ ಹೆಚ್ಚಾಗುತ್ತದೆ ಎಂದು ಅಧ್ಯಯನ ಎಚ್ಚರಿಕೆ ನೀಡಿದೆ. ವ್ಯಾಯಾಮ ಮಾಡುತ್ತಿದ್ದರೂ ಹೆಚ್ಚು ಹೊತ್ತು ಕದಲದೆ ಒಂದೇ ಕಡೆ ಕೂರುವುದರಿಂದ ಈ ತೊಂದರೆಗಳಿಗೆ ಗುರಿಯಾಗುತ್ತಿರುವುದು ಗಮನಾರ್ಹ. ಒಂದು ಗಂಟೆಗೂ ಹೆಚ್ಚು ಹೊತ್ತು ಅತ್ತಿತ್ತ ಕದಲದೆ ಕುಳಿತು ಟಿವಿ ನೋಡುವುದರಿಂದ, ಹೆಚ್ಚು ಹೊತ್ತು ಕೂರುವುದರಿಂದ ದೇಹತೂಕ, ಬೊಜ್ಜು ಬೆಳೆಯುತ್ತೆ. ಹೊಟ್ಟೆಯ ಭಾಗದಲ್ಲಿ ಕೂಡಿಕೊಳ್ಳುವ ಕೊಬ್ಬು ಬಹಳ ಅಪಾಯಕಾರಿಯಾದದ್ದು. ಇದು ರಕ್ತದಲ್ಲಿ ಕೊಬ್ಬಿನಂಶವನ್ನು ಹೆಚ್ಚಿಸುವ ಹಾರ್ಮೋನ್‍ಗಳನ್ನು ಉತ್ಪತ್ತಿ ಮಾಡುತ್ತದೆ ಯಾದ್ದರಿಂದ ಸ್ಥೂಲಕಾಯ, ಅಧಿಕ ರಕ್ತದೊತ್ತಡ, ಮಧುಮೇಹದಂತಹ ಹೃದಯ ವ್ಯಾಧಿಗಳಿಗೆ ಅವಕಾಶ ಮಾಡಿಕೊಡುತ್ತದೆ.

ಯಾವಾಗ ರಕ್ತದ ಒತ್ತಡವು ಸಾಮಾನ್ಯಕ್ಕಿಂತ ಹೆಚ್ಚುತ್ತದೆಯೋ ಅಂತಹ ಸ್ಥಿತಿಗೆ ಅಧಿಕ ಒತ್ತಡ ಅಥವಾ ಏರೊತ್ತಡ ಎನ್ನಬಹುದು. ವೈದ್ಯ ಜಗತ್ತು ಹೇಳುವಂತೆ ಒಬ್ಬ ವ್ಯಕ್ತಿಯ ಸಹಜ ರಕ್ತದೊತ್ತಡದ ಮಟ್ಟ ಯಾವುದೇ ಸಂದರ್ಭದಲ್ಲಿ 140/90ಕ್ಕಿಂತ ಹೆಚ್ಚಾಗಿರಬಾರದು. ಅಂದರೆ, ಒಬ್ಬ ವ್ಯಕ್ತಿಯ ಸಿಸ್ಟೋಲಿಕ್ ರಕ್ತದೊತ್ತಡ 140 ಕ್ಕಿಂತ ಮತ್ತು ಡಯಾಸ್ಟೋಲಿಕ್ ರಕ್ತದೊತ್ತಡ 90 ಕ್ಕಿಂತ ಹೆಚ್ಚಾಗಿರಬಾರದು. ಅದಕ್ಕಿಂತಲೂ ಹೆಚ್ಚಿದ್ದರೆ ಅಂತಹ ಸ್ಥಿತಿಯನ್ನು ಅಧಿಕ ರಕ್ತದೊತ್ತಡ ಎಂದು ಪರಿಗಣಿಸಲಾಗುತ್ತದೆ. ಕಾಲ ಕಾಲಕ್ಕೆ ರಕ್ತದೊತ್ತಡ ಪರೀಕ್ಷಿಕೊಂಡು ಅಧಿಕ ರಕ್ತದೊತ್ತಡವನ್ನು ಆರಂಭಿಕ ಹಂತದಲ್ಲಿ ತಡೆಗಟ್ಟುವುದು ಉತ್ತಮ.

ಹಣ್ಣು ತರಕಾರಿ, ಬೇಳೆಕಾಳುಗಳನ್ನು ಆಹಾರದಲ್ಲಿ ಹೆಚ್ಚು ಹೆಚ್ಚು ಬಳಸುವುದು, ಸಕ್ಕರೆ, ಉಪ್ಪು, ಎಣ್ಣೆ ಮತ್ತು ಕೊಬ್ಬಿನ ಅಂಶ ಆದಷ್ಟು ಕಡಿಮೆಯಿರುವ ಮನೆಯಲ್ಲೇ ತಯಾರಿಸಿದ ಶುಚಿಯಾದ ಆಹಾರ, ನೀರು, ತಾಜಾ ಹಣ್ಣಿನ ಜ್ಯೂಸ್ ಸೇವನೆ, ನಿತ್ಯ ವ್ಯಾಯಾಮ ಅಥವಾ ದೈಹಿಕ ಶ್ರಮ, ಯೋಗ-ಧ್ಯಾನ, ವಾಕಿಂಗ್, ನಿಗದಿತ ನಿದ್ರೆ, ಉತ್ತಮ ಹವ್ಯಾಸಗಳು, ಉತ್ತಮ ಕೌಟುಂಬಿಕ ವಾತಾವರಣ ನಮ್ಮ ಆರೋಗ್ಯಕರ ಜೀವನಕ್ಕೆ ಸಹಕಾರಿಯಾಗಿವೆ ಮತ್ತು ಹೃದಯಾಘಾತದ ಅಪಾಯದಿಂದ ಪಾರು ಮಾಡುತ್ತವೆ.

ಲೇಖನ ಕೃಪೆ : ಆರೋಗ್ಯ ಮಾಹಿತಿ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ