October 5, 2024

ಮೂಡಿಗೆರೆ ಕ್ಷೇತ್ರದ ನೂತನ ಶಾಸಕಿಯಾಗಿ ಶ್ರೀಮತಿ ನಯನ ಮೋಟಮ್ಮ ಅವರು ಆಯ್ಕೆಯಾಗಿದ್ದಾರೆ. ಈ ಮೂಲಕ ತನ್ನ ಎದುರಿನ ಹಲವು ರಾಜಕೀಯ ಸವಾಲುಗಳನ್ನು ಸದೃಢವಾಗಿ ಎದುರಿಸಿ ಗೆಲುವಿನ ನಗು ಬೀರಿದ್ದಾರೆ.

45 ವರ್ಷಗಳ ಹಿಂದೆ ಅಂದರೆ 1978ರಲ್ಲಿ ನಯನ ಅವರ ತಾಯಿ ಶ್ರೀಮತಿ ಮೋಟಮ್ಮನವರು ಮೂಡಿಗೆರೆ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿದ್ದರು. ಅಂದು ಸರ್ಕಾರಿ ಕೆಲಸದಲ್ಲಿದ್ದ ಮೋಟಮ್ಮ ಅವರನ್ನು ಒತ್ತಾಯಪೂರ್ವಕವಾಗಿ ಕರೆತಂದು ಇಲ್ಲಿ ಕಾಂಗ್ರೇಸ್ ಟಿಕೆಟ್ ನೀಡಿ ಗೆಲ್ಲಿಸಲಾಗಿತ್ತು.

ಬದಲಾದ ರಾಜಕೀಯ ಸನ್ನಿವೇಶದಲ್ಲಿ 45 ವರ್ಷಗಳ ನಂತರ ಅವರ ಮಗಳು ನಯನ ಅವರು ಕ್ಷೇತ್ರದಲ್ಲಿ ಕಾಂಗ್ರೇಸ್ ಟಿಕೆಟ್ ಪಡೆಯಲು ತೀವ್ರ ಪೈಪೋಟಿ ಎದುರಿಸಬೇಕಾಯಿತು. ಕೊನೆಯ ಕ್ಷಣದಲ್ಲಿ ಟಿಕೆಟ್ ಗಿಟ್ಟಿಸಿ ಇದೀಗ ಕ್ಷೇತ್ರದಲ್ಲಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಮೂಡಿಗೆರೆ-ಚಿಕ್ಕಮಗಳೂರು ದ್ವಿಸದಸ್ಯ ಕ್ಷೇತ್ರವಾಗಿದ್ದಾಗ ಶಾಸಕಿಯಾಗಿದ್ದ ಬಿ.ಎಲ್. ಸುಬ್ಬಮ್ಮ, ಶ್ರೀಮತಿ ಮೋಟಮ್ಮ ಅವರ ನಂತರ ನಯನ ಅವರು ಮೂಡಿಗೆರೆ ಕ್ಷೇತ್ರದ ಮೂರನೇ ಮಹಿಳಾ ಶಾಸಕಿಯೆಂಬ ಹೆಗ್ಗಳಿಕೆ ಪಡೆದಿದ್ದಾರೆ.

ನಯನ ಅವರು ಮೂಡಿಗೆರೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿಯಾಗಬೇಕು ಎಂದು ಕಳೆದ ಐದು ವರ್ಷಗಳಿಂದ ಸತತವಾಗಿ ಪ್ರಯತ್ನ ನಡೆಸಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ್ದರು.
ಅವರು ಇಲ್ಲಿ ಅಭ್ಯರ್ಥಿಯಾಗಿ ಟಿಕೆಟ್ ಪಡೆಯಲು ಸಾಕಷ್ಟು ಹರಸಾಹಸವನ್ನೇ ಪಡಬೇಕಾಗಿ ಬಂದಿತ್ತು. ಟಿಕೆಟ್ ಗಾಗಿ ನಾಲ್ಕಾರು ಮಂದಿ ಅರ್ಜಿ ಸಲ್ಲಿಸಿದ್ದರು. ಕ್ಷೇತ್ರದಲ್ಲಿ ಕೆಲ ಹೋಬಳಿಗಳ ಮುಖಂಡರು ನಯನ ಅವರಿಗೆ ಟಿಕೆಟ್ ನೀಡಬಾರದು ಎಂದು ಪ್ರಬಲವಾಗಿ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದರು.

ಈ ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ನಯನ ಅವರಿಗೆ ಟಿಕೆಟ್ ತರುವಲ್ಲಿ ಮೋಟಮ್ಮ ಅವರು ಪ್ರಯತ್ನವೂ ಪರಿಣಾಮಕಾರಿಯಾಗಿ ಕೆಲಸ ಮಾಡಿತು.

ನಯನ ಅವರು ಟಿಕೆಟ್ ಪಡೆದ ನಂತರ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಬಹುತೇಕರು ಪಕ್ಷ ತೊರೆದರು. ನಯನ ಅವರಿಗೆ ಟಿಕೆಟ್ ನೀಡಲು ವಿರೋಧ ವ್ಯಕ್ತಪಡಿಸಿದ್ದ ಅನೇಕರು ಬೇರೆ ಪಕ್ಷಗಳತ್ತ ಮುಖ ಮಾಡಿದರು.

ಚುನಾವಣೆಯ ಕೊನೆಯ ದಿನಗಳಲ್ಲಿ ನಯನ ಅವರ ವೈಯುಕ್ತಿಕ ಬದುಕಿನ ಕ್ಷಣಗಳ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟು ಅವರ ತೇಜೋವದೆ ಮಾಡುವ ಪ್ರಯತ್ನವೂ ನಡೆಯಿತು.

ಇಂಥಾ ಎಲ್ಲಾ ಅಡೆತಡೆಗಳ ನಡುವೆಯೂ ಎದೆಗುಂದದೇ ಮುನ್ನುಗ್ಗಿದ ನಯನ ಅವರು ಅಂತಿಮವಾಗಿ ಕ್ಷೇತ್ರದಲ್ಲಿ ಬಿ.ಜೆ.ಪಿ.ಯ ತೀವ್ರ ಪೈಪೋಟಿಯ ನಡುವೆ ಅಲ್ಪ ಮತಗಳ ಅಂತರದಿಂದ ಗೆಲುವಿನ ದಡ ಸೇರುವಲ್ಲಿ ಯಶಸ್ವಿಯಾಗಿ ನಿಟ್ಟುಸಿರು ಬಿಟ್ಟಿದ್ದಾರೆ.

ಅವರು ಕಳೆದ ಅನೇಕ ತಿಂಗಳುಗಳಿಂದ ಕ್ಷೇತ್ರದ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಮಹಿಳೆಯರಿಗೆ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ನೀಡುವುದು, ಕೋವಿಡ್ ಸಮಯದಲ್ಲಿ ಜನರಿಗೆ ನೆರವು ನೀಡಿದ್ದು, ತನ್ನದೇ ಆದ ಯುವ ಪಡೆಯೊಂದಿಗೆ ಕ್ಷೇತ್ರದಲ್ಲಿ ವ್ಯವಸ್ಥಿತ ರೀತಿಯಲ್ಲಿ ಪ್ರಚಾರ ಕಾರ್ಯ ಕೈಗೊಂಡು, ಸಾಮಾಜಿಕ ಮಾಧ್ಯಮಗಳಲ್ಲಿಯೂ ಸಕ್ರಿಯರಾಗಿ ಅವರು ಕ್ಷೇತ್ರದಲ್ಲಿ ಜನರ ಮನಗೆಲ್ಲಲ್ಲು ಸಾಕಷ್ಟು ಶ್ರಮ ವಹಿಸಿದ್ದು ಅವರಿಗೆ ಚುನಾವಣೆಯಲ್ಲಿ ವರವಾಗಿ ಪರಿಣಮಿಸಿತ್ತು.

ಉನ್ನತ ಕಾನೂನು ಪದವಿ ಪಡೆದು ಅನೇಕ ಪ್ರಸಿದ್ಧ ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕುಗಳಲ್ಲಿ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸಿರುವ ನಯನ ಉದ್ಯಮಿ ಬಿಕಾಸ್ ಜಹ್ವಾರ್ ಅವರನ್ನು ವಿವಾಹವಾಗಿದ್ದು, ದಂಪತಿಗಳಿಗೆ ಒಬ್ಬಳು ಮಗಳಿದ್ದಾಳೆ.

ತನ್ನ ವೃತ್ತಿಜೀವನಕ್ಕೆ ಗುಡ್ ಬೈ ಹೇಳಿ ರಾಜಕೀಯ ಕ್ಷೇತ್ರದ ಕಡೆ ಮುಖಮಾಡಿದ ನಯನ ಕಾಂಗ್ರೇಸ್ ಪಕ್ಷದಲ್ಲಿ ಗುರುತಿಸಿಕೊಂಡು ಪ್ರಸ್ತುತ ಪ್ರದೇಶ ಕಾಂಗ್ರೇಸ್ ಸಮಿತಿಯ ಪ್ರಧಾನಕಾರ್ಯದರ್ಶಿಗಳಲ್ಲಿ ಓರ್ವರಾಗಿದ್ದಾರೆ.

ಇದೀಗ ಮೂಡಿಗೆರೆ ಕ್ಷೇತ್ರದಲ್ಲಿ ತನ್ನ 43ನೇ ವಯಸ್ಸಿನಲ್ಲಿ ಶಾಸಕಿಯಾಗಿ ಆಯ್ಕೆಯಾಗುವ ಮೂಲಕ ಮಹತ್ತರ ಜವಾಬ್ದಾರಿಗೆ ಹೆಗಲು ನೀಡಿದ್ದಾರೆ. ಚುರುಕಿನ ವ್ಯಕ್ತಿತ್ವ, ಉತ್ತಮ ಮಾತುಗಾರಿಕೆಯ ಕಲೆ, ಸಂಘಟನಾ ಚತುರತೆ ಹೊಂದಿರುವ ನಯನ ಅವರಿಗೆ ಅವರ ತಾಯಿ ಮೋಟಮ್ಮನವರ ಅನುಭವ ಮತ್ತು ಮಾರ್ಗದರ್ಶನವು ದೊಡ್ಡ ಶಕ್ತಿಯಾಗಿದೆ.

ಮೂಡಿಗೆರೆ ಕ್ಷೇತ್ರವೂ ವ್ಯಾಪ್ತಿಯಲ್ಲಿ ಬಹುವಿಸ್ತಾರವಾಗಿದೆ. ಮೂಡಿಗೆರೆ, ಕಳಸ, ಚಿಕ್ಕಮಗಳೂರು ತಾಲ್ಲೂಕುಗಳಲ್ಲಿ ಹಂಚಿಹೋಗಿದೆ. ಇಲ್ಲಿನ ಸವಾಲುಗಳು ಮತ್ತು ಸಮಸ್ಯೆಗಳು ಬಹು ವಿಭಿನ್ನವಾಗಿವೆ. ಆರೋಗ್ಯ, ಶಿಕ್ಷಣ, ವಸತಿ, ರಸ್ತೆ, ಕುಡಿಯುವ ನೀರು ಮುಂತಾದ ಮೂಲಭೂತ ಸವಲತ್ತುಗಳ ನಿರೀಕ್ಷೆ. ಮೂಡಿಗೆರೆ, ಕಳಸ, ಆಲ್ದೂರು ಮುಂತಾದ ಕ್ಷೇತ್ರದ ತಾಲ್ಲೂಕು ಮತ್ತು ಹೋಬಳಿ ಕೇಂದ್ರಗಳ ಅಭಿವೃದ್ಧಿ, ಸರ್ಕಾರಿ ಕಛೇರಿಗಳನ್ನು ಜನಸ್ನೇಹಿಯಾಗಿಸುವುದು, ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವುದು, ಕಾಮಗಾರಿಗಳಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವುದು….ಹೀಗೆ ಸಾಲು ಸಾಲು ಸವಾಲುಗಳು ಅವರ ಮುಂದಿವೆ.

ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಆದ್ಯತೆಯ ಮೇರೆಗೆ ಮುತುವರ್ಜಿಯಿಂದ ಕಾರ್ಯನಿರ್ವಹಿಸಿ ಕ್ಷೇತ್ರಕ್ಕೆ ಅವರಿಂದ ಉತ್ತಮ ಸೇವೆ ದೊರೆಯಲಿ ಎಂಬುದು ಜನಸಾಮಾನ್ಯರ ಅಪೇಕ್ಷೆಯಾಗಿದೆ.

ಶಾಸಕಿಯಾಗಿ ಆಯ್ಕೆಯಾಗುವ ಮೂಲಕ ಉತ್ತಮ ಜನನಾಯಕಿಯಾಗಿ, ರಾಜಕೀಯ ಕ್ಷೇತ್ರದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯುವ ಎಲ್ಲಾ ಅವಕಾಶ ಈಗ ಅವರಿಗೆ ಒದಗಿ ಬಂದಿದೆ. ಈ ಅವಕಾಶವನ್ನು ಅವರು ಯಾವ ರೀತಿ ಸದುಪಯೋಗಪಡಿಸಿಕೊಳ್ಳುತ್ತಾರೆ ಎಂಬುದು ಅವರ ಮುಂದಿನ ನಡೆಗಳ ಮೇಲೆ ನಿರ್ಧರಿತವಾಗುತ್ತದೆ.

ಮೂಡಿಗೆರೆ ನೂತನ ಶಾಸಕಿಯಾಗಿ ಆಯ್ಕೆಯಾಗಿರುವ ನಯನ ಮೋಟಮ್ಮ ಅವರಿಗೆ ಪತ್ರಿಕಾ ಬಳಗದ ಪರವಾಗಿ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇವೆ.

ಮೂಡಿಗೆರೆ ಕ್ಷೇತ್ರ ಕಾಂಗ್ರೇಸ್ ತೆಕ್ಕೆಗೆ

About Author

Leave a Reply

Your email address will not be published. Required fields are marked *