October 5, 2024

ಮೂಡಿಗೆರೆ ವಿಧಾನಸಭಾ ಕ್ಷೇತ್ರವು ಸ್ವಾತಂತ್ರ್ಯ ನಂತರದ ಮೊದಲ ಸಾರ್ವತ್ರಿಕ ಚುನಾವಣೆಯಿಂದ ಮೊದಲ್ಗೊಂಡು ಇದೂವರೆಗು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿಯೇ ಉಳಿದುಕೊಂಡಿದೆ.

ಮೂಡಿಗೆರೆ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿ.ಜೆ.ಪಿ., ಕಾಂಗ್ರೇಸ್ ಮತ್ತು ಜೆ.ಡಿ.ಎಸ್. ಪಕ್ಷಗಳು ಸಮಾನ ಶಕ್ತಿಯೊಂದಿಗೆ ಹೋರಾಟದ ರಣಾಂಗಣಕ್ಕೆ ದುಮುಕಿದ್ದಾರೆ.

ಜೊತೆಗೆ ಸಿ.ಪಿ.ಐ., ಬಿಎಸ್ಪಿ, ಎಸ್.ಡಿ.ಪಿ.ಐ, ಆಮ್ ಆದ್ಮಿ ಪಕ್ಷದಿಂದಲೂ ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಸಾಂಪ್ರದಾಯಿಕ ಎದುರಾಳಿಗಳಲ್ಲಿ ಬದಲಾವಣೆಯಾಗಿದೆ. ಎಂಬತ್ತರ ದಶಕದಿಂದೀಚೆಗೆ ಮೋಟಮ್ಮ-ನಿಂಗಯ್ಯ-ಕುಮಾರಸ್ವಾಮಿ ಈ ಮೂವರ ನಡುವೆ ಮೂಡಿಗೆರೆ ಎಂಎಲ್‍ಎ ಸ್ಥಾನ ಅದಲು ಬದಲಾಗುತ್ತಾ ಬಂದಿದೆ. ಬರೋಬ್ಬರಿ 45ವರ್ಷಗಳ ಹಿಂದೆ 1978ರಲ್ಲಿ ಮೋಟಮ್ಮ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾದ ನಂತರ 1983ರಲ್ಲಿ ಜನತಾ ಪಕ್ಷದ ತಿಪ್ಪಯ್ಯ ಎರಡು ವರ್ಷ ಶಾಸಕರಾಗಿದ್ದನ್ನು ಹೊರತುಪಡಿಸಿ ಉಳಿದಂತೆ 43 ವರ್ಷಗಳ ಅವಧಿಯಲ್ಲಿ ಮೋಟಮ್ಮ, ನಿಂಗಯ್ಯ, ಕುಮಾರಸ್ವಾಮಿ ಕ್ಷೇತ್ರದಲ್ಲಿ ಒಬ್ಬರು ತಪ್ಪಿದರೆ ಒಬ್ಬರು ಎನ್ನುವಂತೆ ಆಡಳಿತ ನಡೆಸಿದ್ದಾರೆ.

ಶ್ರೀಮತಿ ಮೋಟಮ್ಮ, ಬಿ.ಬಿ. ನಿಂಗಯ್ಯ, ಎಂ.ಪಿ. ಕುಮಾರಸ್ವಾಮಿ ತಲಾ ಮೂರು ಅವಧಿಗೆ ಕ್ಷೇತ್ರದಲ್ಲಿ ಶಾಸಕರಾಗಿ ಅಯ್ಕೆಯಾಗಿದ್ದಾರೆ. ಈ ನಲವತ್ತು ವರ್ಷಗಳಲ್ಲಿ 2008 ಮತ್ತು 2013ರ ಚುನಾವಣೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಚುನಾವಣೆಗಳಲ್ಲಿ ಶ್ರೀಮತಿ ಮೋಟಮ್ಮನವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.

1985ರ ನಂತರ ಇದೇ ಮೊದಲ ಬಾರಿಗೆ ಬಿ.ಬಿ.ನಿಂಗಯ್ಯ ಮೂಡಿಗೆರೆ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳದೇ ಇರುವುದು ವಿಶೇಷ.

ಇನ್ನು 1999ರ ಚುನಾವಣೆಯಿಂದ ಸತತವಾಗಿ ಎಂ.ಪಿ. ಕುಮಾರಸ್ವಾಮಿಯವರು ಐದು ಬಾರಿ ಇಲ್ಲಿ ಬಿ.ಜೆ.ಪಿ. ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾ ಬಂದಿದ್ದರು. ಆದರೆ ಈ ಬಾರಿ ಬಿ.ಜೆ.ಪಿ. ಗೆ ಎದುರಾಳಿಯಾಗಿ ಜೆ.ಡಿ.ಎಸ್. ಪಕ್ಷದಿಂದ ಕಣಕ್ಕಿಳಿದಿರುವುದು ವಿಶೇಷವಾಗಿದೆ.

ಮೂಡಿಗೆರೆ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೇ ಏರ್ಪಟ್ಟಿದೆ. ಮೂರೂ ಪಕ್ಷದ ಅಭ್ಯರ್ಥಿಗಳು ಗೆಲುವಿಗಾಗಿ ಪ್ರಬಲ ಪೈಪೋಟಿ ನಡೆಸುತ್ತಿದ್ದಾರೆ. ಹಾಲಿ ಶಾಸಕ ಎಂ.ಪಿ. ಕುಮಾರ ಸ್ವಾಮಿಯವರು ಬಿ.ಜೆ.ಪಿ.ಯಿಂದ ಟಿಕೆಟ್ ವಂಚಿತರಾಗಿ ಕೊನೆಕ್ಷಣದಲ್ಲಿ ಜೆ.ಡಿ.ಎಸ್. ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಕಾಂಗ್ರೇಸ್ ನಿಂದ ಮಾಜಿ ಸಚಿವೆ ಮೋಟಮ್ಮನವರ ಪುತ್ರಿ ನಯನ ಮೋಟಮ್ಮ, ಬಿ.ಜೆ.ಪಿ.ಯಿಂದ ಪಕ್ಷದ ಹಿರಿಯ ಮುಖಂಡ ದೀಪಕ್ ದೊಡ್ಡಯ್ಯ ಅಭ್ಯರ್ಥಿಯಾಗಿದ್ದಾರೆ.

ಸಿ.ಪಿ.ಐ. ನಿಂದ ಯುವ ಮುಖಂಡ ರಮೇಶ್ ಕೆಳಗೂರು, ಬಿ.ಎಸ್ಪಿ. ಯಿಂದ ಪಕ್ಷದ ಹಿರಿಯ ಮುಖಂಡ ರಮೇಶ್ ಲೋಕವಳ್ಳಿ, ಎಸ್.ಡಿ.ಪಿ.ಐ. ನಿಂದ ಅಂಗಡಿ ಚಂದ್ರು, ಆಮ್ ಆದ್ಮಿ ಪಕ್ಷದಿಂದ ಪ್ರಭು, ಪಕ್ಷೇತರರಾಗಿ ರುದ್ರೇಶ್ ಕಹಳೆ, ಚೇತನ್ ಪ್ರಸಾದ್ ಎಂಬುವವರು ಕಣದಲ್ಲಿದ್ದಾರೆ.

ಕ್ಷೇತ್ರದಲ್ಲಿ ಬಿ.ಜೆ.ಪಿ., ಕಾಂಗ್ರೇಸ್, ಜೆಡಿಎಸ್, ಸಿ.ಪಿ.ಐ, ಬಿಎಸ್ಪಿ ಪಕ್ಷಗಳು ತನ್ನದೇ ಆದ ಸಾಂಪ್ರದಾಯಿಕ ಮತಗಳನ್ನು ಹೊಂದಿವೆ.

ಈ ಬಾರಿ ಕ್ಷೇತ್ರದಲ್ಲಿ 1ಲಕ್ಷದ 72 ಸಾವಿರ ಮತದಾರರಿದ್ದು. ಬಹುತೇಕ 1 ಲಕ್ಷದ 40 ಸಾವಿರ ಮತಗಳ ಆಸುಪಾಸಿನಲ್ಲಿ ಚಲಾವಣೆಯಾಗುವ ಸಾಧ್ಯತೆ ಇದೆ.

ಕಳೆದ ಬಾರಿ ಇಲ್ಲಿ ಚಲಾವಣೆಯಾಗಿದ್ದ 1,31,318 ಮತಗಳಲ್ಲಿ ಬಿ.ಜೆ.ಪಿ. 58,783ಮತಗಳನ್ನು ಗಳಿಸಿತ್ತು. ಅದರಲ್ಲಿ ಕುಮಾರಸ್ವಾಮಿಯವರೊಂದಿಗೆ ಒಂದಷ್ಟು ಮತಗಳು ಜೆ.ಡಿ.ಎಸ್.ಕಡೆ ಹೋದರೂ, ಪರ್ಯಾಯವಾಗಿ ಹೊಸ ಮತದಾರರು ಪಕ್ಷದ ಪರವಾಗಿದ್ದು, ಈ ಬಾರಿ ಕಾರ್ಯಕರ್ತರು ಹೊಸ ಹುರುಪಿನೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಕನಿಷ್ಠ 50 ಸಾವಿರ ಮತಗಳನ್ನು ಪಡೆದೇ ಪಡೆಯುತ್ತೇವೆ ಎಂಬ ವಿಶ್ವಾಸದಲ್ಲಿದ್ದಾರೆ. ಪಕ್ಷದ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಕ್ಷೇತ್ರಕ್ಕೆ ಚಿರಪರಿಚಿತರಾಗಿರುವುದು, ನರೇಂದ್ರ ಮೋದಿಯವರ ಜನಪ್ರಿಯತೆ ಮತ್ತು ರಾಜ್ಯದ ಬಿ.ಜೆ.ಪಿ. ಸರ್ಕಾರದ ಅಭಿವೃದ್ಧಿ ಕಾರ್ಯಗಳು ಪಕ್ಷಕ್ಕೆ ಶ್ರೀರಕ್ಷೆಯಾಗಿದ್ದು ಕ್ಷೇತ್ರದಲ್ಲಿ ನಾವೇ ಗೆಲುವಿನ ದಡ ಸೇರುವುದು ಎಂಬ ಹುಮ್ಮಸ್ಸಿನಲ್ಲಿದ್ದಾರೆ.

ಕಳೆದ 20 ವರ್ಷಗಳಿಂದ ಗೆಲುವಿಗಾಗಿ ಹೋರಾಟ ಮಾಡುತ್ತಿರುವ ಕಾಂಗ್ರೇಸ್ ಪಕ್ಷ ಕಳೆದ ಚುನಾವಣೆಯಲ್ಲಿ 46,271 ಮತಗಳನ್ನು ಗಳಿಸಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಈ ಬಾರಿ ಗೆಲ್ಲಲೇಬೇಕೆಂದು ತೀವ್ರ ಹೋರಾಟ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಲೆ ನಮ್ಮ ಪರವಾಗಿ ಕೆಲಸ ಮಾಡಲಿದೆ, ಕಾಂಗ್ರೇಸ್ ಪಕ್ಷ ನೀಡಿರುವ ಉಚಿತ ಯೋಜನೆಗಳ ಗ್ಯಾರಂಟಿ ಕಾರ್ಡ್ ಜನರನ್ನು ಆಕರ್ಷಣೆ ಮಾಡಿದೆ. ಮಾಜಿ ಶಾಸಕ ಬಿ.ಬಿ.ನಿಂಗಯ್ಯ ಪಕ್ಷಕ್ಕೆ ಸೇರಿರುವುದು ದೊಡ್ಡ ಶಕ್ತಿಯಾಗಿದೆ, ಮೋಟಮ್ಮನವರು ಶಾಸಕರಾಗಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಗಳು, ನಯನ ಮೋಟಮ್ಮನವರು ಇತ್ತೀಚಿನ ದಿನಗಳಲ್ಲಿ ಕ್ಷೇತ್ರದಲ್ಲಿ ಸಾಧಿಸಿರುವ ಜನಸಂಪರ್ಕ ಇವೆಲ್ಲವೂ ನಮಗೆ ಪೂರವಾಗಿದ್ದು, ಹಾಗಾಗಿ ನಮ್ಮದೇ ಗೆಲುವು ಎನ್ನುತ್ತಿದ್ದಾರೆ.

ಕಳೆದ ಚುನಾವಣೆಯಲ್ಲಿ ಜೆ.ಡಿ.ಎಸ್.ಇಲ್ಲಿ 22,063 ಮತಗಳನ್ನು ಗಳಿಸಿತ್ತು. ರಾಜ್ಯದಲ್ಲಿ ಹೆಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದಾಗ ನೀಡಿದ ಜನಪರ ಆಡಳಿತ, ಎಂ.ಪಿ. ಕುಮಾರಸ್ವಾಮಿಯವರು ಮೂಡಿಗೆರೆ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು, ಅವರು ಎಲ್ಲಾ ವರ್ಗದ ಜನರೊಂದಿಗೆಯೂ ಗಳಿಸಿರುವ ವಿಶ್ವಾಸ, ಕ್ಷೇತ್ರದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ದಲಿತರ ನಡುವೆ  ಕುಮಾರಸ್ವಾಮಿ ತನ್ನ ಪ್ರಭಾವ ಹೊಂದಿರುವುದು. ಕ್ಷೇತ್ರದಲ್ಲಿ  ಕುಮಾರಸ್ವಾಮಿಯವರೊಂದಿಗೆ ಬಿ.ಜೆ.ಪಿ. ತೊರೆದು ಬಂದಿರುವ ಕಾರ್ಯಕರ್ತರು  ಮತ್ತು ಮೂಲ ಜೆ.ಡಿ.ಎಸ್. ಕಾರ್ಯಕರ್ತರ ಸಂಘಟನಾ ಶಕ್ತಿ ಜೆ.ಡಿ.ಎಸ್.ಪಕ್ಷವನ್ನು ಗೆಲುವಿಗೆ ಶ್ರೀರಕ್ಷೆಯಾಗುತ್ತವೆ ಎಂಬ ಭರವಸೆ ವ್ಯಕ್ತಪಡಿಸುತ್ತಿದ್ದಾರೆ.

ಮೂಡಿಗೆರೆ ಕ್ಷೇತ್ರದಲ್ಲಿ ಕಳೆದ ಬಾರಿ ಸಿ.ಪಿ.ಐ. ಕಾಂಗ್ರೇಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿತ್ತು, ಬಿ.ಎಸ್ಪಿ ಪಕ್ಷ ಜೆ.ಡಿ.ಎಸ್.ಜೊತೆ ಹೊಂದಾಣಿಕೆ ಮಾಡಿಕೊಂಡಿತ್ತು.

ರಮೇಶ್ ಕೆಳಗೂರು
ರಮೇಶ್ ಲೋಕವಳ್ಳಿ
ಅಂಗಡಿ ಚಂದ್ರು
ರುದ್ರೇಶ್ ಕಹಳೆ,

ಈ ಬಾರಿ ಸಿ.ಪಿ.ಐ, ಬಿಎಸ್ಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದು ಜೊತೆಗೆ ಎಸ್.ಡಿ.ಪಿ.ಐ., ಆಮ್ ಆದ್ಮಿ ಪಕ್ಷ ಸ್ಪರ್ಧಾಕಣದಲ್ಲಿರುವುದು ಫಲಿತಾಂಶದ ಮೇಲೆ ಪ್ರಭಾವ ಬೀರಲಿದೆ. ಪಕ್ಷೇತರರಾಗಿ ಸ್ಪರ್ಧಿಸಿರುವ ರುದ್ರೇಶ್ ಕಹಳೆ ಚುರುಕಿನ ಪ್ರಚಾರ ನಡೆಸುತ್ತಿದ್ದಾರೆ.

ಪತ್ರಿಕೆ ಅಂದಾಜಿಸಿರುವ ಪ್ರಕಾರ ಈ ಬಾರಿ ಮೂಡಿಗೆರೆಯಲ್ಲಿ ಯಾವುದೇ ಪಕ್ಷ 48 ಸಾವಿರ ಮತಗಳನ್ನು ಗಳಿಸಿದರೆ ಸುರಕ್ಷಿತವಾಗಿ ಗೆಲುವಿನ ದಡ ಸೇರಬಹುದಾಗಿದೆ.

ಕ್ಷೇತ್ರದಲ್ಲಿ ಬಿ.ಜೆ.ಪಿ. ತನ್ನದೇ ಆದ ಮತಬ್ಯಾಂಕ್ ಮತ್ತು ಸಂಘಟನಾ ಸಾಮರ್ಥ್ಯ ಹೊಂದಿದ್ದು, ಬಿ.ಜೆ.ಪಿ.ಯೇತರ ಮತಗಳು ಹೆಚ್ಚು ವಿಭಜನೆಯಾದರೆ ಬಿ.ಜೆ.ಪಿ.ಗೆ ಗೆಲುವಿನ ಹಾದಿ ಸುಗಮವಾಗುತ್ತದೆ.

ಕ್ಷೇತ್ರದಲ್ಲಿ ಪ್ರಬಲವಾಗಿರುವ ಕಾಂಗ್ರೇಸ್ ತನ್ನ ಸಾಂಪ್ರದಾಯಿಕ ಮತಗಳ ವಿಭಜನೆ ಆಗದಂತೆ ನೋಡಿಕೊಂಡು ಒಂದಷ್ಟು ಹೊಸಮತದಾರರನ್ನು ಸೆಳೆದರೆ ಗೆಲುವಿನ ನಗೆ ಬೀರುವ ಸಾಧ್ಯತೆಯಿದೆ.

ಜೆ.ಡಿ.ಎಸ್.ನ ಮೂಲ ಮತಗಳ ಜೊತೆಗೆ ಎಂ.ಪಿ. ಕುಮಾರಸ್ವಾಮಿ ಸ್ವಂತ ಶಕ್ತಿಯಿಂದ ಕನಿಷ್ಟ ಇಪ್ಪತ್ತು ಸಾವಿರ ಮತಗಳನ್ನು ಗಳಿಸಿಕೊಂಡರೆ ತನ್ನ ಗದ್ದುಗೆಯನ್ನು ಉಳಿಸಿಕೊಳ್ಳುವ ಅವಕಾಶವಿದೆ.

ಒಟ್ಟಾರೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆಯಲ್ಲಿ  ಅಂತಿಮವಾಗಿ ಯಾರು ಗೆಲುವಿನ ಗೆರೆ ದಾಟುತ್ತಾರೆ ಕಾದು ನೋಡಬೇಕು

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ