October 5, 2024

ಇವತ್ತು ಮೂಡಿಗೆರೆ ಪಟ್ಟಣ ರಾಜಕೀಯ ಹೈಡ್ರಾಮಕ್ಕೆ ಸಾಕ್ಷಿಯಾಯಿತು. ಇಂದು ಬಿ.ಜೆ.ಪಿ. ವತಿಯಿಂದ ನಿಗದಿಯಾಗಿದ್ದ ವಿಜಯಸಂಕಲ್ಪ ಯಾತ್ರೆ ಬಿ.ಜೆ.ಪಿ. ಭಿನ್ನಮತ ಸ್ಪೋಟಕ್ಕೆ ವೇದಿಕೆಯಾಗಿ ಪರಿವರ್ತನೆಯಾಯಿತು. ವಿಜಯಸಂಕಲ್ಪ ಯಾತ್ರೆಗೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕಾರ್ಯಕರ್ತರ ನಡುವಿನ ಗೊಂದಲದಲ್ಲಿ ಸಿಲುಕಿ ತಮ್ಮ ಕಾರಿನಿಂದಲೇ ಇಳಿಯದೇ ವಾಪಾಸ್ಸು ತೆರಳಿದ ನಾಟಕೀಯ ಬೆಳೆವಣಿಗೆಗೆ ಕಾರಣವಾಯಿತು.

ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಯವರ ಪರ ಮತ್ತು ವಿರುದ್ಧ ಬಣಗಳು ಪಟ್ಟಣದಲ್ಲಿ ತಮ್ಮ ಶಕ್ತಿಪ್ರದರ್ಶನ ಮುಂದಾದರು. ಇದರಿಂದಾಗಿ ಪಟ್ಟಣದಲ್ಲಿ ಬೆಳಗ್ಗೆಯಿಂದ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಒಂದು ಹಂತದಲ್ಲಿ ಪರಿಸ್ಥಿತಿ ಹತೋಟಿ ಮೀರುವ ಸನ್ನಿವೇಶ ಸೃಷ್ಟಿಯಾಗಿತ್ತು. ಕುಮಾರಸ್ವಾಮಿ ಪರ ಮತ್ತು ವಿರೋಧಿ ಬಣಗಳ ಕಾರ್ಯಕರ್ತರು ಪಟ್ಟಣದ ಬಸ್ ಸ್ಟ್ಯಾಂಡ್ ವೃತ್ತದಲ್ಲಿ ಜಮಾಯಿಸಿ ಪರಸ್ಪರ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಪರಸ್ಪರ ಕೈಕೈ ಮಿಲಾಯಿಸುವ ಹಂತ ತಲುಪಿದ್ದಾಗ ಪೊಲೀಸರ ಸಕಾಲಿಕ ಮಧ್ಯಪ್ರವೇಶದಿಂದ ಘರ್ಷಣೆಯನ್ನು ಹತೋಟಿಗೆ ತರಲಾಯಿತು.

ಇಂದು ಬೆಳಗ್ಗೆಯಿಂದಲೇ ಕುಮಾರಸ್ವಾಮಿಯವರಿಗೆ ಟಿಕೆಟ್ ನೀಡಬಾರದು ಎಂದು ಒತ್ತಾಯಿಸುತ್ತಿರುವ ಪಕ್ಷದ ಕಾರ್ಯಕರ್ತರು ಪಟ್ಟಣದ ಪ್ರೀತಂ ಹಾಲ್ ನಲ್ಲಿ ಸಭೆ ಸೇರಿದ್ದರು. ಸಭೆಯಲ್ಲಿ ಕ್ಷೇತ್ರದ ಪ್ರಮುಖ ಬಿ.ಜೆ.ಪಿ. ಮುಖಂಡರು ಮತ್ತು ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಕಿಕ್ಕಿರಿದು ಸೇರಿದ್ದರು. ವಿವಿಧ ಹೋಬಳಿಗಳ ಮುಖಂಡರುಗಳು ಮಾತನಾಡಿ ಶಾಸಕ ಕುಮಾರಸ್ವಾಮಿಯವರ ಕಾರ್ಯವೈಖರಿ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು. ನಂತರ ಕುಮಾರಸ್ವಾಮಿ ಹಠಾವೋ, ಬಿ.ಜೆ.ಪಿ. ಬಚಾವೋ ಎಂಬ ಪ್ಲೇಕಾರ್ಡ್‍ಗಳನ್ನು ಹಿಡಿದುಕೊಂಡು ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು.

ಮಧ್ಯಾಹ್ನ 1-30ರ ಹೊತ್ತಿಗೆ ಹೆಲಿಕಾಪ್ಟರ್ ಮೂಲಕ ಮೂಡಿಗೆರೆಗೆ ಆಗಮಿಸಿದ್ದ ಯಡಿಯೂರಪ್ಪನವರು ಮೂಡಿಗೆರೆ ಕಾಫಿ ಕೋರ್ಟ್ ನಲ್ಲಿ ಮಧ್ಯಾಹ್ನದ ಭೋಜನ ಸ್ವೀಕರಿಸಿ ವಿಜಯಸಂಕಲ್ಪ ಯಾತ್ರೆಗೆಂದು ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ಬಂದಾಗ ಎರಡು ಬಣಗಳ ಸದಸ್ಯರು ಘೋಷಣೆಗಳನ್ನು ಕೂಗತೊಡಗಿದರು. ಈ ಸಂದರ್ಭದಲ್ಲಿ ಶಾಸಕ ಸಿ.ಟಿ.ರವಿ, ವಿಧಾನಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಅವರು ಕಾರ್ಯಕರ್ತರನ್ನು ಸಮಾಧಾನಪಡಿಸಲು ನಡೆಸಿದ ಪ್ರಯತ್ನ ವಿಫಲವಾಯಿತು. ಇದರಿಂದ ಕಸಿವಿಸಿಗೊಂಡ ಯಡಿಯೂರಪ್ಪನವರು ಸಿಟ್ಟಿನಿಂದ  ವಾಪಾಸ್ಸಾದರು.

ನಂತರ ಕುಮಾರಸ್ವಾಮಿ ಪರವಾದ ಕಾರ್ಯಕರ್ತರು ಮೂಡಿಗೆರೆ ಲಯನ್ಸ್ ವೃತ್ತದಲ್ಲಿ ಜಮಾವಣೆಗೊಂಡರು, ಅಲ್ಲಿ ಕುಮಾರಸ್ವಾಮಿ ಮತ್ತು ಅವರ ಬೆಂಬಲಿಗ ಮುಖಂಡರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಅದೇ ಸಂದರ್ಭದಲ್ಲಿ ಕುಮಾರಸ್ವಾಮಿ ವಿರೋಧಿ ಬಣ ಮೂಡಿಗೆರೆ ಪ್ರವಾಸಿ ಮಂದಿರದ ಆವರಣದಲ್ಲಿ ಸಭೆ ನಡೆಸಿದರು. ಇದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು.

ನಂತರ ಕುಮಾರಸ್ವಾಮಿ ಪರವಾದ ಬಣದ ಕಾರ್ಯಕರ್ತರು ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು.

ಒಟ್ಟಾರೆ ಇಂದಿನ ರಾಜಕೀಯ ಬೆಳವಣಿಗೆ ಮೂಡಿಗೆರೆ ಬಿ.ಜೆ.ಪಿ.ಯಲ್ಲಿ ಅನೇಕ ವರ್ಷಗಳಿಂದ ಒಳಗೊಳಗೆ ಹೊಗೆಯಾಡುತ್ತಿದ್ದ ಶಾಸಕರ ಪರ ಮತ್ತು ವಿರುದ್ಧ ಬಣಗಳ ನಡುವಿನ ಭಿನ್ನಮತ ದೊಡ್ಡಮಟ್ಟದಲ್ಲಿ ಸ್ಟೋಟಗೊಂಡು ರಾಜಕೀಯ ಹೈಡ್ರಾಮಕ್ಕೆ ಸಾಕ್ಷಿಯಾಗಿ ರಾಜ್ಯಮಟ್ಟದಲ್ಲಿ ಸುದ್ದಿಗೆ ಗ್ರಾಸವಾಯಿತು.

ಮೂಡಿಗೆರೆಯಲ್ಲಿ ಬಿ.ಜೆ.ಪಿ. ಒಡೆದ ಮನೆಯಂತಾಗಿದ್ದು, ಮುಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಆಯ್ಕೆಯನ್ನು ಕಗ್ಗಂಟಾಗಿಸಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ