October 5, 2024

* ಧನಂಜಯ ಜೀವಾಳ

9448421946

ಶಾಂತಿಯನ್ನು ಅಪೇಕ್ಷಿಸುವವರು ಯುದ್ಧಕ್ಕೆ ಸದಾ ಸಿದ್ಧನಿರಬೇಕು ಎಂಬುದನ್ನು ಮನದಟ್ಟು ಮಾಡಿಕೊಂಡ ಬೋಬಯ್ಯ ಇದು ನನ್ನ ಬದುಕಿನ ಅಳಿವು-ಉಳಿವಿನ ಪ್ರಶ್ನೆ. ಈ ರೀತಿಯ ದಬಾವಣೆಗಳನ್ನು ಎಂದಿನಿಂದೆಲ್ಲಾ ಸಹಿಸಿಕೊಂಡು ಬಂದಿಲ್ಲ? ಈ ಉಳ್ಳವರ ಆಟಾಟೋಪ ಜಾಸ್ತಿಯಾಯ್ತು. ತಮ್ಮ ಅಣತಿಯಲ್ಲೇ ಇತರೆಲ್ಲರು ಬದುಕಬೇಕೆಂಬ ದುರುಳತನಕ್ಕೆ ಹೇಗಾದರೂ ಕೊನೆಹಾಡಬೇಕೆಂದು ನಿರ್ಧರಿಸಿದ.

ದಿನವೂ ಊಟಕ್ಕೆ ಅನ್ನದ ಜೊತೆಗೆ ಕ್ರಿಮಿನಲ್ಲಾಗಿರೋದೇನಾದ್ರೂ ಇದ್ರೆ ಮಾತ್ರ ಇಷ್ಟಪಟ್ಟು ತಿಂತಿದ್ದ ಬೋಬಯ್ಯನಿಗೆ ಏನಿಲ್ಲವೆಂದರೂ ಮನೆಯಲ್ಲಿ ಸಾಕಿದ್ದ ನಾಟಿಕೋಳಿಯ ಮೊಟ್ಟೆ ಇಲ್ಲವೇ ಸುಟ್ಟ ಮೀನಿನ ತುಂಡಾದರೂ ಬೇಕಿತ್ತು.

ಕೆಸೊಳ್ಳಿನ ಬೋಬಯ್ಯ ದೇವಕಿಯನ್ನು ಮದುವೆಯಾಗಿ ಮನೆಯಾಳ್ತನಕ್ಕೆ ದೆಬ್ರಳ್ಳಿಗೆ ಬಂದವನು; ಅತ್ತೆ, ಮಾವ ಇಬ್ಬರೂ ಕಾಲವಾದ ನಂತರ ನೀರ್‍ಕಾಸ್‍ಕೊಳದ ಕಾಡಂಚಿನಲ್ಲಿ ಈಗಾಗಲೇ ಇದ್ದ ಎರಡೆಕರೆ ಹಿಡುವಳಿ ಜಮೀನನ್ನು ನಿಷ್ಠೆಯಿಂದ ಸಾಗುವಳಿ ಮಾಡಿಕೊಂಡು, ಕಾಫಿ, ಮೆಣಸು, ಅಡಿಕೆ ಬೆಳೆದಿದ್ದ. ಸುತ್ತಮುತ್ತಲಿನ ದೊಡ್ಡ ಜಮೀನುದಾರರು ತಮ್ಮ ಹಿಡುವಳಿಗಳ ನಡುವೆ ತಮ್ಮವನಲ್ಲದವನೊಬ್ಬ ಇರುವುದನ್ನು ಸಹಿಸದೇ ಆಗಾಗ ದನ ನುಗ್ಗಿಸುವುದು, ಮಳೆಗಾಲದ ಅಗಾಧ ಪ್ರಮಾಣದ ನೀರನ್ನು ಬೋಬಯ್ಯನ ಜಮೀನಿನೆಡೆಗೆ ತಿರುಗಿಸುವುದೋ, ಬೇಸಿಗೆಯಲ್ಲಿ ಬೆಂಕಿರೂಟು ಮಾಡುವ ನೆಪದಲ್ಲಿ ಅಗ್ನಿಪರೀಕ್ಷೆಗೀಡು ಮಾಡುವುದೋ ನಡೆಯುತ್ತಿತ್ತು.

ಮೂವತ್ತು ನಲವತ್ತೆಕರೆ ಕಾಫಿ ತೋಟ ಹೊಂದಿದ್ದ ಷಣ್ಮುಖನ ಜಮೀನಿಗೆ ಗೊಬ್ಬರದ ಲೋಡು ಕೊಂಡೋಯ್ಯಲು ರಸ್ತೆಯೊಂದನ್ನು ನಿರ್ಮಿಸುವ ಅಗತ್ಯಕ್ಕಾಗಿ ಸರ್ವೆ ಮಾಡಲೆಂದು ಒಂದಿನ ನಾಲ್ಕಾರು ಮಂದಿ ಸರ್ಕಾರಿ ನೌಕರರು ಬೋಬಯ್ಯನ ಮನೆ ಮುಂದಿನ ಕಾಲ್ದಾರಿಯಲ್ಲಿ ಸರ್ವೇ ಭವಂತು ಸುಖಿನಹ ಎನ್ನುವಂತೆ ನಡೆದುಕೊಂಡು ಬಂದರು. ಷಣ್ಮುಖ ಆಡಳಿತ ಪಕ್ಷದ ತಾಲ್ಲೂಕು ಮಟ್ಟದ ಪದಾಧಿಕಾರಿಯಾಗಿದ್ದರಿಂದ ಯಾವುದೋ ಯೋಜನೆಯಡಿ ರಸ್ತೆ ನಿರ್ಮಾಣಕ್ಕೆ ಅಲಾಟ್‍ಮೆಂಟೊಂದನ್ನು ಮಾಡಿಸಿಕೊಂಡು, ಆ ರಸ್ತೆಯು ಬೋಬಯ್ಯನ ಎರಡೆಕರೆಯ ತುಂಡು ಜಮೀನಿನ ಮೂಲಕವೇ ಹಾದು ಹೋಗುವಂತೆ ನಕಾಶೆಯಲ್ಲಿ ಗುರುತನ್ನು ಮಾಡಿಸಿ ತಂದಿದ್ದ. ಅಧಿಕಾರಸ್ತರು ಸಾಮಾನ್ಯರಿಗೆ ಭಯವನ್ನು, ಅಭದ್ರತೆಯನ್ನು ಒಡ್ಡುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆ. ಸದಾ ತಮ್ಮ ಆಶ್ರಯಕ್ಕೆ ಹಾತೊರೆಯಲೆಂದು ಹಾಗೂ ತಮಗೆ ಎದುರಾಗಿ ದನಿಯೆತ್ತದಿರಲೆಂದು ಆಮಿಷವನ್ನು ಒಡ್ಡುತ್ತಾರೆ. ತನ್ನವರು ಎನ್ನುವ ಕೂಡು-ಕುಟುಂಬವನ್ನು ಹತ್ತಿರದಲ್ಲೆಲ್ಲೂ ಹೊಂದಿರದಿದ್ದ ಬೋಬಯ್ಯ, ಷಣ್ಮುಖನಂಥಾ ದೊಡ್ಡ ರೈತನನ್ನು ಅದರಲ್ಲೂ ರಾಜಕೀಯದ ಸಂಪರ್ಕವಿರುವವನನ್ನು ಎದುರಿಸುವುದು ಹೇಗೆಂದು ತಿಳಿಯದೇ ಕಂಗಾಲಾಗಿ ಕುಳಿತಿದ್ದ.

ಹೊಟ್ಟೆ ಚುರುಗುಟ್ಟುತ್ತಿದ್ದ ಬೋಬಯ್ಯ ಹೆಂಡತಿಯನ್ನುದ್ದೇಶಿಸಿ “ಸಾರೆಂತ ಮಾಡಿದ್ದೀಯ?” ಎಂದ. ಯಾವುದೋ ಯೋಚನೆಯಲ್ಲಿ ಮುಳುಗಿದ್ದ ದೇವಕಿ “ಬೇಳೆ ತಿಳಿಸಾರು” ಎಂದಳು. ರಸ್ತೆ ಕಿರಿಕಿರಿಯಿಂದ ಗೊಂದಲದ ಗೂಡಾಗಿದ್ದ ಬೋಬಯ್ಯ “ಬೇಳೇಸಾರೆಂತಕೆ, ಪುಕ್ಳಿ ತೊಳಿಯಕ್ಕಾ?” ಎಂದವನೇ ಉಣ್ಣಲೆಂದು ಕೈ ತೊಳೀತಿದ್ದವನು ಅದೇ ಚೊಂಬನ್ನು ನಡುಮನೆಯೆಲ್ಲ ನೀರಾಗುವಂತೆ ಎತ್ತಿ ಎಸೆದವನೇ ಚಪ್ಪಲಿ ಮೆಟ್ಟಿಕೊಂಡು ದುಸದುಸನೇ ಅಂಗಳ ದಾಟಿ ತನ್ನ ಜಮೀನಿನ ಮೂಲಕ ರಸ್ತೆ ಮಾಡಲು ಗೂಟ ನೆಟ್ಟು ಅಳತೆ ಮಾಡುತಿದ್ದ ಮೇಸ್ತ್ರಿಯನ್ನು ಹಿಂಭಾಗದಿಂದ ಸಮೀಪಿಸಿದವನೇ ಅವನ ಅಂಡು ಬಗಾಲಾಗುವಂತೆ ಒದ್ದೇಬಿಟ್ಟ.

ಷಣ್ಮುಖನಾದಿಯಾಗಿ ರಸ್ತೆ ಗುರುತಿಸಲು ಬಂದಿದ್ದ ಗ್ರಾಮಲೆಕ್ಕಿಗ, ಸರ್ವೆಯರ್, ರಸ್ತೆ ಕಂತ್ರ್ರಾಕ್ಟರ್ ಎಲ್ಲರೂ ಸ್ಥಂಭೀಭೂತರಾದರು. ಯಾರಿಗೂ ಯಾವತ್ತೂ ತಿರುಗಿ ಮಾತನಾಡದಿದ್ದ ಬೋಬಯ್ಯ ಇವತ್ತು ಒಬ್ಬನ ಮೇಲೆ ಕೈಮಾಡುವಷ್ಟು ವ್ಯಗ್ರನಾಗಿದ್ದಾನೆಂದರೆ, ಏನೋ ಆಗಬಾರದ್ದೇ ಆಗಿರಬೇಕೆಂದುಕೊಂಡರು. ಬೋಬಯ್ಯ ಯಾವುದೋ ಕ್ಷುದ್ರ ದೇವತೆ ಮೈಮೇಲೆ ಆವಾಹನೆಯಾದಂತೆ ಥರಥರಿಸುತಿದ್ದ. ಕಾರಣವೇನಿಲ್ಲ, ಹತ್ತಾರು ವರ್ಷಗಳಿಂದ ಹೆಂಡತಿ ಮಕ್ಕಳೊಂದಿಗೆ ಗೇಯ್ದು ಜೀವನಕ್ಕೆಂದು ಮಾಡಿಕೊಂಡಿದ್ದ ಎರಡೆಕರೆ ತೋಟದೊಳಗೇ ಈ ಷಣ್ಮುಖ ತನ್ನ ಜಮೀನಿಗೆ ಹೋಗಲು ರಸ್ತೆ ಮಾಡಿಸುತಿದ್ದ್ದುದು, ಅದಕ್ಕೆ ಸರ್ಕಾರೀ ಯಂತ್ರವೂ ಕೈಜೋಡಿಸಿದ್ದಲ್ಲದೇ ಕಡೆಗೆ ತನ್ನ ಪರ ನಿಂತು ಮಾತನಾಡಿ ನ್ಯಾಯ ಕೊಡಿಸಲು ಯಾರೂ ಇಲ್ಲದ್ದು, ಇದೆಲ್ಲಕ್ಕಿಂತಲೂ ಹೆಚ್ಚಾಗಿ ಮಧ್ಯಾಹ್ನದ ಊಟಕ್ಕೆ ಹೆಂಡತಿ ದೇವಕಿ ಬೇಳೆ ತಿಳಿಸಾರು ಮಾಡಿದ್ದು, ಒಟ್ಟಾರೆ ಬೋಬಯ್ಯ ತನ್ನ ತಲೆಕೂದಲನ್ನು ತಾನೇ ಕಿತ್ತುಕೊಳ್ಳುವಷ್ಟು ತರಕಲಾಂಡಿಯಾಗಿ ಹೋಗಿದ್ದ.

ಮುಕುಳಿ ಮೇಲೆ ಬಿದ್ದ ಹೊಡೆತದಿಂದ ಮಕಾಡೆಯಾಗಿ ಉರುಳಿದ ಮೇಸ್ತ್ರಿಯ ನೆರವಿಗೆ ಬಂದ ಕಂತ್ರಾಕ್ಟುದಾರ ಮತ್ತು ಷಣ್ಮುಖ, ಬೋಬಯ್ಯನನ್ನ ದಬಾಯಿಸತೊಡಗಿದರು. ಸರ್ಕಾರಿ ವ್ಯವಸ್ಥೆಯ ಒಳಾಂಗಣವನ್ನು ಅರಿಯದ ಬೋಬಯ್ಯನಿಗೆ ಯಾವ್ಯಾವುದೋ ಕಾಗದ ಪತ್ರಗಳನ್ನು ತೋರಿಸಿ, ಹೆಚ್ಚು ಮಾತನಾಡಿದರೆ ದಾಖಲೆಯೇ ಇಲ್ಲದ ಬೋಬನ ಎರಡೂ ಎಕರೆಯನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಧಮಕಿ ಹಾಕಿದರು. ದೊಣ್ಣೆ ಯಾರ ಕೈಯಲ್ಲಿರುತ್ತೋ ಅವನದೇ ಎಮ್ಮೆಯಾದ್ದರಿಂದ ಈಗಾಗಲೇ ಷಣ್ಮುಖನಿಂದ ನಾನಾರೀತಿಯ ಕಿರುಕುಳ ಅನುಭವಿಸಿದ್ದ ಬೋಬಯ್ಯ ಮರುಮಾತನಾಡದೇ ಸುಮ್ಮನಾದ.

ಉಸಿರುದೆಸೆಯಿಲ್ಲದೇ ಮನೆಗೆ ಹೋದ ಬೋಬಯ್ಯ, ಜಗುಲಿಯಿಂದಲೇ ಮನೆಯೊಳಗೆ ಕಣ್ಣುಹಾಯಿಸಿದ. ದೇವಕಿ ನಡುಮನೆಯೆಲ್ಲ ಚೆಲ್ಲಾಡಿಹೋಗಿದ್ದ ನೀರನ್ನು ಬಟ್ಟೆಯಿಂದ ಒರೆಸುತಿದ್ದಳು. ಬೇಳೆ ತಿಳಿಸಾರಿನ ವಿಚಾರವಾಗಿ ಎಗರಾಡಿದಕ್ಕಾಗಿ ನಾಚಿಕೆಯೆನಿಸಿತು. ಕ್ಷಮೆ ಕೇಳಬೇಕೆಂದುಕೊಂಡ, ತನ್ನ ಅವಿವೇಕದ, ಅತಿರೇಕದ ಅಸಡ್ಡೆಯ ಬಾಲಿಶ ನಡೆಯ ಬಗ್ಗೆ ಅಸಹ್ಯವೆನಿಸಿತು.

ಧೈರ್ಯ ಎಂದರೆ ಸೀದಾ ಹೊಡೆದಾಟಕ್ಕೆ ತೋಳೇರಿಸಿ ನಿಲ್ಲುವುದಲ್ಲ. ಎಂತಹ ಒತ್ತಡದ, ಪ್ರತಿಕೂಲ, ಸಂದಿಗ್ಧ ಸನ್ನಿವೇಶದಲ್ಲೂ ತನ್ನಾತ್ಮ ಬಲದ ಮೇಲಿನ ಭರವಸೆಯಿಂದ ದೃಢವಾಗಿ ನಿಂತು ಎದುರಿಸುವುದೇ ನಿಮ್ಮಲ್ಲಿ ಇರಬಹುದಾದ ನಿಜವಾದ ಶಕ್ತಿ. ಸೋಲೋದು, ಗೆಲ್ಲೋದು ಬಿಡಿ, ಅದು ಆ ಕ್ಷಣದ ಸತ್ಯ ಅಷ್ಟೇ. ಎದುರಿಸಿ ನಿಲ್ಲುವುದು ಹಾಗೂ ಹಾಗೆ ನಿಂತದ್ದನ್ನು ನೆನಪಿಸಿಕೊಳ್ಳುವುದು, ನಮಗೆ ನೀಡುವ ಆತ್ಮತೃಪ್ತಿಯನ್ನು ಈ ಜಗತ್ತಿನಲ್ಲಿ ಬೇರಾವುದೂ ನೀಡುವುದಿಲ್ಲ. ಅಂತಹ ಆತ್ಮತೃಪ್ತಿಯ ಅನುಭೂತಿಯ ಕಲ್ಪನೆಯೇ ಇಲ್ಲದ ನಾವೆಂತಹ ನಿಕೃಷ್ಠ ಬದುಕು ಬದುಕುತಿದ್ದೇವೆ? ನಮ್ಮ ಈ ಬದುಕಿನ ಉದ್ದೇಶವಾದರೂ ಏನು? ಈ ಬದುಕಿಗೊಂದು ಅರ್ಥವಿದೆಯೇ? ಈ ಬದುಕಿನ ಅಂತಿಮ ಉದ್ದೇಶವಾದರೂ ಏನು? ಕ್ಷಣಕ್ಷಣಗಳು ಕಳೆದಂತೆ ಇತಿಹಾಸಕ್ಕೆ ಸೇರುತ್ತಿರುವ ಈ ವರ್ತಮಾನದಲ್ಲಿ ನಮ್ಮ ಸ್ಥಾನವಾದರೂ ಏನು?

ತನ್ನ ಅಹಂ ಗಿಂತಲೂ ಮಾನವೀಯ ಸಂಬಂಧ ಮುಖ್ಯ ಎಂಬುದನ್ನು ತಾನು ಗೌರವಿಸಬೇಕೆಂದು ಅಂದುಕೊಂಡರೂ ಮನೆಯೊಳಗೆ ಹೋಗದೇ ಅಲ್ಲೇ ಮಳೆನೀರಿಗೆಂದು ಹಾಕಿದ್ದ ಅಡಕೆ ಮರದ ದೋಣಿಯ ಗೂಟಕ್ಕೆ ನೇತುಹಾಕಿದ್ದ ಹಾಲುಸೋರೆಕಾಯಿಯ ಬುರುಡೆಯನ್ನು ತೆಗೆದುಕೊಂಡು ನೀರ್ಕಾಸುಕೊಳ್ಳದ ಹಳ್ಳದ ಗುಂಟ ಇಳಿದುಹೋದ.

ಹಳ್ಳದ ಬಳಿ ನಿರ್ಮಿಸಿದ್ದ ಸ್ನಾನದ ಮನೆಗೆ ಹೋಗಲೆಂದು ಮಾಡಿದ್ದ ಕಿರಿದಾದ ದಾರಿಯಲ್ಲಿ ಎಚ್ಚರಿಕೆಯಿಂದ ಇಳಿಯುತ್ತಿದ್ದವನ ಎಡಬುಜದ ಮೇಲೆ ಹೆಬ್ಬಲಸಿನ ಹಣ್ಣೊಂದು ಬಜಕ್ ಎಂದು ಬಿದ್ದು ತೊಟ್ಟಿದ್ದ ನೀಲಿ ಷರಟಿನ ಮೇಲೆ ಯಾವುದೋ ಪ್ರಾಣಿ ಉಚ್ಛಿಷ್ಠ ಮಾಡಿದಂತೆ ಗಲೀಜು ಮಾಡಿತು. ‘ಥತ್ತೇರಿ’ ಎಂದು ಬೆರಳಿನಿಂದ ಸವರಿ, ವರೆಸಿ ಕೊಡವಿ ಬೆರಳನ್ನೊಮ್ಮೆ ಮೂಸಿಕೊಂಡ. ಭುಜದ ಮೇಲೆ ಬಿದ್ದು ನೆಲಸೇರಿದ ಅರ್ಧ ತಿಂದ ಹೆಬ್ಬಲಸಿನ ಹಣ್ಣಿನ ಅಳಿದುಳಿದ ಅವಶೇಷವನ್ನು ನೋಡಿ, ತಲೆಯೆತ್ತಿ ಮುಕ್ಕಾಲೆಕರೆಯಗಲಕ್ಕೆ ಹರಡಿಕೊಂಡಿದ್ದ, ಮರದ ಕೊಂಬೆ ಕೊಂಬೆಗಳನ್ನು ದಿಟ್ಟಿಸಿದ. ಇಪ್ಪತ್ತಕ್ಕೂ ಹೆಚ್ಚು ಮಂಗಗಳು ಮರದ ವಿವಿದೆಡೆಯಲ್ಲಿ ಕುಳಿತು ಹಣ್ಣನ್ನು ಬಿಡಿಸಿ ತಿಂದು, ಹೊರಭಾಗದ ತೊಗಟೆಯನ್ನು ನಡುವಿನ ಮಾಡದ ಸಮೇತ ಕೆಳಗೆ ಎಸೆಯುತಿದ್ದವು. ಕೆಳಗೆ ಬೀಳುವ ಆ ಹಣ್ಣಿನ ಬೀಜದ ಬದುಕು ಮರದಿಂದ ಬಿದ್ದಕೂಡಲೇ ಕೊನೆಯಾಗದು, ನೆಲ ಸೇರಿ, ತರಗೆಲೆಗಳ ಅಡಿಯ ಹಸಿಮಣ್ಣನ್ನು ತಾಕಿದೊಡನೆಯೇ ಅದೊಂದು ಹೊಸ ಬದುಕಿನಾರಂಭ, ಪ್ರತೀ ಪತನವೂ ಒಂದು ನವಜೀವನದ ಆರಂಭವಲ್ಲವೇ ಎಂದೆನಿಸಿತು ಬೋಬಯ್ಯನಿಗೆ.

ಆ ಕೊಳ್ಳದ ಅಡಿಯಿಂದ ಆಗಸದೆತ್ತರಕ್ಕೆ ಅಗಾಧವಾಗಿ ಬೆಳೆದಿದ್ದ ಹೆಬ್ಬಲಸಿನ ಮರದ ತುಂಬಾ ಸಾವಿರಾರು ಹಣ್ಣುಗಳಿದ್ದವು. ನೋಡಲು ಥೇಟ್ ಹಲಸಿನ ಕಾಯಿಯಂತೆಯೇ ಇರುವ ಇದರ ಹಣ್ಣುಗಳು ಮುಷ್ಠಿಗಿಂತ ಕೊಂಚ ದೊಡ್ಡವಿರುತ್ತವೆ. ಮಂಗಗಳು, ಕೆಂಜಳಿಲು, ಹತ್ತಾರು ಬಗೆಯ ಪಕ್ಷಿಗಳು, ಕೀಟಗಳಿಗೆ ಆಹಾರವಾಗುವ ಈ ಹೆಬ್ಬಲಸಿನ ಹಣ್ಣುಗಳು ಆ ಸೀಸನ್ನಿನಲ್ಲಿ ಕಾಡಿನ ಅಪಾರ ಜೀವಸಂಕುಲವನ್ನೂ ಪೋಷಿಸುವ ಸಾರ್ಥಕ ಕಾರ್ಯ ಮಾಡುತ್ತವೆ. ಹಣ್ಣನ್ನು ಬಿಡಿಸಿ, ಬೀಜದ ಸಹಿತ ತೊಳೆಗಳನ್ನು ನುಂಗುವ ಮಂಗ, ಅಳಿಲು, ಪಕ್ಷಿಗಳು ವಿಸರ್ಜನೆಯ ಮೂಲಕ ಬೀಜ ಪ್ರಸಾರ ಮಾಡಿ ಕಾಡಿನಿಡೀ ವೃಕ್ಷವಂಶ ಮುಂದುವರೆಯಲು ಸಹಕರಿಸುತ್ತವೆ. ಬೀಜ ಮೊಳಕೆಯೊಡೆಯುವಾಗ ನಿಶ್ಯಬ್ದವಾಗಿರುತ್ತದೆ. ಸಾವಕಾಶವಾಗಿ ಬೇರಿಳಿಸಿ ಬುಡವನ್ನು ದೃಢಮಾಡಿಕೊಳ್ಳುತ್ತದೆ, ಆದರೆ ಅಗಾಧ ಗಾತ್ರದ ಮರ ಬೀಳುವಾಗ ಎಲ್ಲಿಲ್ಲದ ಆರ್ತನಾದ ಹೊರಡಿಸುತ್ತದೆ. ಮೇರೆ ಮೀರಿದ ಸದ್ದಿನೊಂದಿಗೆ ದಯನೀಯವಾಗಿ ನೆಲಕ್ಕುರುಳುತ್ತದೆ. ನಾಶ ಗದ್ದಲವೇಳಿಸಿದರೆ, ಸೃಷ್ಠಿ ಮೌನವಾಗೇ ಸಿದ್ಧಿ ಸಾಧಿಸುತ್ತದೆ. ಇದೇ ಅಲ್ಲವೇ ದೈವಿಕ ಶಕ್ತಿ ಎಂದುಕೊಂಡ ಬೋಬಯ್ಯ ಭಾವಪರವಶನಾಗುತ್ತಾನೆ.

ಸಾಧಾರಣ ರೂಪಿನ ಸಾಮಾನ್ಯರಲ್ಲಿ ಸಾಮಾನ್ಯನಾದ ನನ್ನೊಡನೆ ದೇವಕಿ ಎಂಬ ಸುಂದರಿಯೊಬ್ಬಳು ಎಂದಿಗೂ ಸಿಡಿಮಿಡಿಗೊಳ್ಳದೇ, ತಿರುಗಿ ಮಾತನಾಡದೇ ತನ್ನೆಲ್ಲಾ ಎಡವಟ್ಟುಗಳೊಡನೆಯೇ ಸಹಿಸಿಕೊಂಡು ಇಷ್ಟು ವರ್ಷ ಬಾಳುವೆ ಮಾಡಿದ್ದಾಳೆಂದರೆ, ನಾನವಳಿಗೆ ಅರ್ಹನೇ? ಎಂದು ಆಲೋಚಿಸತೊಡಗಿದ. ಇಷ್ಟು ವರ್ಷ ಆಕೆ ತನಗೆ ತೋರಿದ ಕಾಳಜಿಯನ್ನು ನೆನೆದು, ತಾನು ಈವರೆವಿಗೆ ಅವಳೊಡನೆ ನಡೆದುಕೊಂಡ ಸನ್ನಿವೇಶಗಳನ್ನು ಪುನರವಲೋಕನ ಮಾಡಿಕೊಂಡ ಬೋಬ ಖಿನ್ನನಾದ. ಅಷ್ಟರಲ್ಲಿ ಪಕ್ಕದ ಪೊದೆಯೊಳಗಿನಿಂದ ಕಾಡುಕೋಳಿಯೊಂದು ಕ್ಕೆಕ್ಕೆಕ್ಕೆಕ್ಕೇಕೇ ಎಂದು ಕ್ಯಾಕರಿಸಿ ಹಾರಿಹೋದಾಗಲೇ ಬೋಬಯ್ಯನಿಗೆ ತಾನು ಎಲ್ಲಿರುವೆ ಎಂದು ನೆನಪಾದದ್ದು. ಮರದ ಮೇಲಿನಿಂದ ಬೀಳುವ ಹಣ್ಣಿನ ಬೀಜ, ಅದ ತಿನ್ನಲು ಬರುವ ಹುಳಹುಪ್ಪಟೆಗಳು, ಹಣ್ಣು ಕರಗಿ ಗೊಬ್ಬರವಾದಾಗ ಆ ಗೊಬ್ಬರದಲ್ಲಿರಬಹುದಾದ ಅಸಂಖ್ಯಾತ ಕ್ರಿಮಿಕೀಟಗಳನ್ನು ತಿಂದು ಆನಂದತುಂದಿಲವಾಗಿದ್ದ ಇನ್ನೂ ಮೂರ್ನಾಲ್ಕು ಕಾಡುಕೋಳಿಗಳು ಕ್ಯಾಕರಿಸುತ್ತಾ ಹಾರಿ ಎತ್ತರದ ಗಿಡಗಳನ್ನೇರಿ ಪೊದೆಗಳಲ್ಲಿ ಮರೆಯಾದವು.
ಹಾಗೇ ಹೊಸತಾಗಿ ನೋಡುತ್ತಿರುವನೇನೋ ಎಂಬಂತೆ ಅಗಾಧವಾಗಿ ಆವರಿಸಿದ್ದ ಆ ಮಹಾವೃಕ್ಷಗಳನ್ನು ನಿರುಕಿಸುತಿದ್ದವನಿಗೆ ಆಕಸ್ಮಿಕವೇನೋ ಎಂಬಂತೆ ಮಡಹಾಗಲಕಾಯಿಗಳು ತೂಗುತ್ತಿದ್ದ ಬಿಳಲೊಂದು ಗೋಚರಿಸಿತು. ತೀರಾ ಅಪರೂಪವಾಗಿ ಸಿಗುವ ಮಡಹಾಗಲಕಾಯಿ ತನ್ನ ಅಪೂರ್ವ ರುಚಿಗೆ ಹೆಸರಾಗಿದೆ. ಈ ಬಳ್ಳಿ ಇರುವ ಜಾಗವನ್ನು ಬೆಳೆ ನೀಡಿದ ನಂತರ, ಬೆಂಕಿ ಹಾಕಿ ಸುಟ್ಟರೆ, ಮುಂದಿನ ಮಳೆಗಾಲದ ಶುರುವಿನಲ್ಲಿ ಮಣ್ಣೊಳಗಿನ ಇದರ ಗೆಡ್ಡೆ ಮತ್ತೆ ಚಿಗುರಿ ಸೊಂಪಾಗಿ ಬೆಳೆಯುತ್ತೆ ಅಂತಾರೆ. ತನಗೆ ಅಚ್ಚುಮೆಚ್ಚಿನ ವನೋತ್ಪತ್ತಿ ಆಕಸ್ಮಿಕವಾಗಿ ಸಿಕ್ಕಿದ ಖುಷಿಯಲ್ಲಿ ಬೋಬಣ್ಣ ತನ್ನೆದುರಿನ ಬೀಳಿನಲ್ಲಿ ಅರವತ್ತೆಪ್ಪತ್ತು ಕಾಯಿಗಳು ಜೋತು ಬಿದ್ದಿದ್ದರೂ ತನಗೆ ಬೇಕಿದ್ದ ಹಾಗೂ ತನ್ನ ಕೈ ಎಟುಕಿಗೆ ಸಿಕ್ಕಿದ ಎಂಟ್ಹತ್ತು ಕಾಯಿಗಳನ್ನು ಮಾತ್ರ ಕಿತ್ತುಕೊಂಡು ತಾನು ಹಾಕಿಕೊಂಡಿದ್ದ ಖಾಕಿ ಚಡ್ಡಿಯ ಜೇಬಿನೊಳಗಿಳಿಸಿಕೊಂಡ.

ಇದ್ದಕ್ಕಿದ್ದಂತೆ ಷಣ್ಮುಖನ ಚಿತ್ರ, ಆ ಸರ್ವೆಯರ್ ಮತ್ತು ಕಂಟ್ರಾಕ್ಟುದಾರನ ಚಿತ್ರದೊಡನೆ ಒಂದೇ ಫ್ರೇಮಿನಲ್ಲಿ ಬೋಬಯ್ಯನ ಸ್ಮøತಿಪಟಲದಲ್ಲಿ ಮೂಡಿತು. ತನ್ನ ತೋಟವನ್ನು ದಾಟಿ ಮುಂದುವರೆದು ಕೆಂಜಿಗೆಗುಡ್ಡದೆಡೆಯ ಆಚೆಮೂಲೆಯಲೆಲ್ಲೋ ನೀರ್ಗಂಡಿ ಜಲಪಾತ ಇದೆಯಂತೆ. ಅದಕ್ಕೆ ಹೊಂದಿಕೊಂಡಿರುವ ಸರ್ಕಾರಿ ಜಮೀನಿನಲ್ಲಿ ಈ ಷಣ್ಮುಖ ಅರವತ್ತೆಕರೆಗೆ ಬೇಲಿಹಾಕಿ ಅದೆಂತದೊ ರೆಸಾರ್ಟು ಮಾಡ್ತಿದಾನಂತೆ. ಅದಕ್ಕೆಂದೇ ಈ ರಸ್ತೆಯನ್ನು ಸರ್ಕಾರದ ದುಡ್ಡಿನಲ್ಲಿ ಮಾಡಿಸ್ಕತಿದಾನಂತೆ. ಅಲ್ಲಿಗೆ ಹೋಗೋ ದಾರಿ ದುರ್ಗಮವಾಗಿದ್ದು, ಶಿಕಾರಿದಾರರೂ ಸಹಾ ಆನೆ ಕಾಟ ಇರೋದ್ರಿಂದ ಅತ್ತ ಹೋಗಲು ಹೆದರುತಿದ್ದರು. ಹೋದ ವರ್ಷ ದನ ಕಳೆದು ಹೋಗಿದೆ ಎಂದು ಹುಡುಕಲು ಹೋಗಿದ್ದ ಕಾಡುಪುಟ್ಟ ಎನ್ನುವವನೊಬ್ಬ ಅದೇ ಕಾಡಿನಲ್ಲಿ ಕಾಟಿ ಕಾಲಿಗೆ ಸಿಕ್ಕಿ ತದ್ಲಾಬಿದ್ಲಿ ಗುದ್ದಿದ ಶುಂಠಿಯಂತಾಗಿದ್ದ.

ಆಸ್ತಿ, ಅಧಿಕಾರ, ಹಣದ ಮದವೇರಿರುವ ಷಣ್ಮುಖನ ಸೌಜನ್ಯವಿಲ್ಲದ ಸಾಮಥ್ರ್ಯ ರಾಕ್ಷಸರನ್ನು ಸೃಷ್ಠಿಸುವಂತೆ ಸಾಮಥ್ರ್ಯವಿಲ್ಲದ ಸೌಜನ್ಯ ನನ್ನಂಥ ಕೈಲಾಗದವರನ್ನು ಸೃಷ್ಠಿಸುತ್ತದೆ ಎಂದುಕೊಂಡು ತನ್ನ ಅಸಹಾಯಕತೆಯನ್ನು ಹೇಗೆ ನಿಭಾಯಿಸುವುದು ಎಂದು ಯೋಜನೆಯಲ್ಲಿ ಬಿದ್ದ. ಬೋಬ ಮುಖಕ್ಕೆ ಅಡ್ಡಲಾಗಿ ಬಂದ ಕಲ್ಸಡ್ಲಿ ಮರದ ಗೆಲ್ಲೊಂದನ್ನು ಪಕ್ಕಕ್ಕೆ ಸರಿಸಲು ಎಡಗೈ ಮುಂದೆ ತಂದವನಿಗೆ ಕೈಲಿದ್ದ ಸೊರೇಕಾಯಿ ಬುರುಡೆ ನೋಡಿ ತಾನು ಸಂಜೆಯ ಸಾರಿಗೆ ಏಡಿ ಹಿಡಿಯಲು ಬಂದದ್ದು ನೆನಪಾಗಿ ಸರಸರನೆ ಕಡಿದಾದ ಮೆಟ್ಟಿಲು ಇಳಿಯತೊಡಗಿದ.

ನೂರಾರು ಉಂಡುಗಲ್ಲುಗಳು ಹಳ್ಳದ ಪಾತ್ರದುದ್ದಕ್ಕೂ ಅಲ್ಲಲ್ಲಿ ನೀರಿನ ಹರಿವಿಗೆ ತಕ್ಕುದಾಗಿ ಚೆದುರಿ ಬಿದ್ದಿದ್ದವು. ತೆಳುವಾಗಿ ಹರಿಯುತಿದ್ದ ನೀರಿನ ಮೇಲೆ ನೀರಜೇಡಗಳು ತಮ್ಮ ಕೂದಲು ಗಾತ್ರದ ಕಾಲುಗಳನ್ನು ಆದಷ್ಟೂ ಅಗಲಕ್ಕೆ ವಿಸ್ತರಿಸಿಕೊಂಡು ನೀರ ಮೇಲೆ ಜೀಕುತಿದ್ದವು. ಯಾವುದೋ ಮರದಿಂದ ತೈಲಾಂಶವಿರುವ ಸ್ರಾವವು ನೀರ ಹರಿವು ಸೇರಿ ತೆಳುವಾಗಿ ಹರಡಿಕೊಂಡು, ಆಗಸವನ್ನೇ ಮರೆಯಾಗಿಸಿದ್ದ ಮರದೆಲೆಗಳ ಛತ್ರಿಯ ಸಂದಿಯಲ್ಲಿ ತೂರಿ ಬಂದ ಬೆಳಕಿಗೆ ಪ್ರತಿಫಲಿಸಿ ತೈಲವರ್ಣಚಿತ್ರವನ್ನೇ ಚಿತ್ರಿಸಿತ್ತು. ಮೈಮೇಲೆ ಕಪ್ಪು ಕಪ್ಪು ಪಟ್ಟೆಯನ್ನು ಹೊಂದಿದ್ದ ಎರಡಿಂಚು ಉದ್ದದ ತಿಳಿಗೆಂಪಿನ ಮೀನುಗಳು ಒಂದನ್ನೊಂದು ಅಟ್ಟಿಸಿಕೊಂಡು ಹೋಗುತಿದ್ದವು. ಈಲ್ ಮೀನಿನ ಸ್ಥಳೀಯ ಸಂಬಂಧಿ ಮಳಲಿ ಮೀನುಗಳು ನೀರಿನಡಿಯ ಗೋಡಿನಲ್ಲಿ ತಮ್ಮನ್ನು ತಾವೇ ಹುದುಗಿಸಿಕೊಂಡಿದ್ದರೆ, ಉದುರಿ ಬಿದ್ದ ಎಲೆಗಳಡಿಯಲ್ಲಿ ವಿಚಿತ್ರವಾಗಿ ಅಡ್ಡಡ್ಡ ಚಲಿಸುವ ಏಡಿಗಳು ತಮ್ಮ ಕಡ್ಡಿಯಂತಹ ಕಣ್ಣುಗಳನ್ನು ಮೀಟರ್ ಬೋರ್ಡಿನ ಮುಳ್ಳಿನಂತೆ ಅತ್ತಿತ್ತ ಆಡಿಸುತಿದ್ದವು. ಮೈಯೆಲ್ಲಾ ಪಾರದರ್ಶಕವಾಗಿದ್ದು ಸಾಸಿವೆಯಂಥಾ ಕಪ್ಪ್ಪುಕಣ್ಣು ಹೊಂದಿರುವ ಸೀಗಡಿಗಳು ಚಳಕ್ ಮಳಕ್ ಎಂದು ಅತ್ತಿಂದಿತ್ತ ಚಿಮ್ಮುತಿದ್ದವು.

ನಾವು ಬೇರೆಯವರಿಗೆ ನೆರವಾಗುವುದೇ ಈ ಪ್ರಪಂಚದಲ್ಲಿ ಇರಲು ನಾವು ಕೊಡಬೇಕಾಗಿರುವ ಬಾಡಿಗೆ ಎಂದುಕೊಂಡು ಸುಮ್ಮನಿರುವುದೇ? ಅದಲ್ಲದಿದ್ದರೆ ನನ್ನಿಂದ ಮಾಡಲು ಸಾಧ್ಯವಿರುವುದಾದರೂ ಏನು? ಷಣ್ಮುಖನನ್ನು ಎದುರಿಸಲು ಸಾಧ್ಯವೇ? ನನ್ನ ಅಸಹಾಯಕತೆಯನ್ನೇ ಈ ಬೋಳೀಮಕ್ಳು ದರ್ಪ ಮೆರೆಯಲು, ನಮ್ಮ ಮೇಲೆ ಸವಾರಿ ಮಾಡಲು ಬಳಸಿಕೊಳ್ತಿದಾರಲ್ಲ! ಏನು ಮಾಡಲು ಸಾಧ್ಯ? ಏನು ಮಾಡಿದರೆ ಸರಿ? ಎಂದು ದಿಕ್ಕಾಪಾಲಾಗಿ ಯೋಚಿಸಿ, ಮೆದುಳನ್ನು ಹನ್ನೆರಡಾಣೆ ಮಾಡಿಕೊಂಡು ದಿದ್ಧಿರಿ ದಿದ್ಧಿರಿಯಾಡತೊಡಗಿದ ಬೋಬ. ಸೋರೆಬುರುಡೆ ಪಕ್ಕದಲ್ಲಿಟ್ಟು ಒಂದೆರಡು ಕಲ್ಲುಗಳನ್ನೆತ್ತಿ ಅಡಿಯ ಕಲಕು ನೀರಿನಲ್ಲಿ ನಾಜೂಕಿನಿಂದ ಕೈಯಾಡಿಸಿ ಮುಷ್ಠಿಗಾತ್ರದ ಆರೇಳು ಕಲ್ಲೇಡಿಗಳನ್ನು ಹಿಡಿದು ಬುರುಡೆಯೊಳಗೆ ಹಾಕಿದ. ಕಲ್ಲೇಡಿಗಳೊಂದಿಗೆ ಎಂಟ್ಹತ್ತು ಕೊರೆ ಮೀನುಗಳು ಸಿಕ್ಕಿ ರಾತ್ರಿ ಸಾರಿಗೆ ನಮ್ಮಿಬ್ಬರಿಗೆ ಸಾಕೆಂದು ಸೋರೆಬುರುಡೆಯನ್ನು ಎತ್ತಿಕೊಂಡು ಗುಡ್ಡ ಏರತೊಡಗಿದ.

ಷಣ್ಮುಖ ಮಾಡುತ್ತಿರುವ ಹಲ್ಕಾ ಕೆಲಸವನ್ನು ದೇವಕಿಗೆ ವಿವರಿಸಿ ಹೇಳುವ ಎಂದುಕೊಂಡು ಮನೆಸೇರಿ ಊಟ ಹಾಕೆಂದು ಚಕ್ಕಳಂಬಕ್ಕಳ ಹಾಕಿಕೊಂಡು ಕೂತ.
ತಾವೇ ಬೆಳೆದ ಹೊಸಾ ರತ್ನಚೌಡಿ ಅಕ್ಕಿಯ ಬಿಸಿಬಿಸಿ ಅನ್ನ, ಬೇಳೆ ತಿಳಿಸಾರು, ಜೊತೆಗೆ ಸೌದೆ ಒಲೆಯ ಬಿಸಿ ಬೂದಿಯಲ್ಲಿ ಸುಟ್ಟ ಸ್ವಾಡೆಮೀನಿನ ತುಂಡು, ಜೊತೆಗೆ ಮನೆ ಕೋಳಿಯ ಮೊಟ್ಟೆ ಹುರುಕಲನ್ನು ಅಡುಗೆ ಮನೆಯ ಸಗಣಿ ಸಾರಿಸಿದ್ದ ನೆಲದ ಮೇಲೆ ತಂದಿಟ್ಟಳು ದೇವಕಿ. ಎರಡು ಕೈ ಅನ್ನ ಹಾಕಿ ಅದರ ಮೇಲೆ ಎರಡು ಸೌಟು ತಿಳಿಸಾರು ಬಡಿಸಿದ ದೇವಕಿ, ಮೀನಿನ ತುಂಡು ಇಟ್ಟು ಮತ್ತೊಂದು ಬಟ್ಟಲಲ್ಲಿ ಮೊಟ್ಟೆ ಹುರುಕಲನ್ನು ಹಾಕಿಕೊಟ್ಟು ತಾನು ಏಡಿ ರಿಪೇರಿ ಮಾಡಲು ಕುಳಿತಳು. ಕುರ್ಜಲು, ಕೊಂಬನ್ನು ಮುರಿದು, ಹ್ವಾಟ್ಲೆ ಹಲಗನ್ನು ಬೇರ್ಪಡಿಸಿ ಹ್ವಾಟ್ಲೆಯೊಳಗಿನ ಹಳದಿ ಕೊಬ್ಬನ್ನು ಕುರುಜಲ ತುದಿಯಿಂದ ತೆಗೆದು ಸಾರಿಗೆ ಸಿದ್ಧಪಡಿಸಿದಳು.

ಒಂದು ದೊಡ್ಡ ಏಡಿಯನ್ನು ಸುಟ್ಟು ತಿನ್ನಲೆಂದು ಒಲೆಯ ಕೆಂಡದೊಳಗೆ ಹಾಕಿ ಕೋಲು ಸೌದೆಯಿಂದಲೇ ಮಗುಚಿಹಾಕತೊಡಗಿದಳು. ಬಿಸಿಬಿಸಿ ಅನ್ನಕ್ಕೂ, ತಿಳಿಸಾರಿಗೂ ಹೇಳಿ ಮಾಡಿಸಿದಂತಿತ್ತು. ಮಧ್ಯೆ ಪಟಾಕಿ ಹೊಡೆದಂತೆ ಕಿಕ್ ಕೊಡುತಿದ್ದ ಸುಟ್ಟಮೀನಿನ ಚೂರಿನ ನೆಂಚುವಿಕೆ, ರಸ್ತೆ ಗಲಾಟೆಯ ಬೇಸರವನ್ನು ಕೆಲಕಾಲ ಮರೆಸಿತು. ಹದವಾಗಿ ಹುರಿದಿದ್ದ ಕೋಳಿಮೊಟ್ಟೆ ದಿನವೂ ಉಣ್ಣುತ್ತಿದ್ದ ಊಟಕ್ಕಿಂತ ಕೊಂಚ ಹೆಚ್ಚೇ ಹೊಟ್ಟೆಗೆ ಸೇರುವಂತೆ ಮಾಡಿತು. ಊಟಕ್ಕೆ ಮೊದಲೇ ತಟ್ಟೆಯಲ್ಲಿ ತುತ್ತು ಕಟ್ಟಿ ತೆಗೆದಿಟ್ಟಿದ್ದ ಮೂರು ಅನ್ನದ ಉಂಡೆಗಳನ್ನು ಪ್ರೀತಿಯಿಂದ ಸಾಕಿದ್ದ ಮಾಟ, ಬಡ್ಡ ಮತ್ತು ಬೆಳ್ಳಿ ನಾಯಿಗಳಿಗೆ ಹಾಕಲು ಹೋಗುತ್ತಿದ್ದವನಿಗೆ ಕಾಲಿಗೆ ಉಡಿದಾಡಿದ್ದು ಕೊತ್ತಿಮಿಯಾ ಸಿದ್ಧಿ. ಒಣ ಮೀನಿನ ವಾಸನೆಗೆ ಕುಳಿತಲ್ಲೇ ಬಾಲವನ್ನಾಡಿಸುತ್ತಾ ನುಲಿಯುತ್ತಿದ್ದ ಸಿದ್ದಿ ಈಗ ಕಾಲಿನ ಹೆಜ್ಜೆಯನ್ನು ಎತ್ತಿಡದಂತೆ ಬೋಬಯ್ಯನ ಕಾಲುಗಳಿಗೆ ಉಡಿದುಕೊಂಡಳು. ಅಷ್ಟರಲ್ಲಿ ದೇವಕಿ ಸುಟ್ಟ ಏಡಿಯನ್ನು ಒಲೆಯಿಂದ ಹೊರತೆಗೆದು ಅದಕ್ಕೆ ಅಂಟಿದ್ದ ಬೂದಿಯನ್ನು ಬಾಯಿಯಲ್ಲಿಯೇ ಉರುವಿ ಹಾರಿಸಿ, ಹ್ವಾಟ್ಲೆಯನ್ನು ಬೇರ್ಪಡಿಸಿ ಸಿದ್ದಿಗೆ ನೀಡಿದಳು. ಹ್ವಾಟ್ಲೆ ಸಿಕ್ಕಿದ ಖುಷಿಯಲ್ಲಿ ಅದನ್ನು ಕಚ್ಚಿಕೊಂಡಿದ್ದೇ ಸಿದ್ಧಿ, ಸೀದಾ ಮುಖ್ಯ ಒಲೆಯ ಹಿಂಭಾಗದ ಕೋಡೊಲೆಯ ಮೂಲೆಗೆ ಹೋಗಿ ಕರುಕರುಕ್ಕನೇ ಮೆಲ್ಲತೊಡಗಿತು. ಬೋಬಯ್ಯ ಊಟ ಮುಗಿಸಿ ಹೊರಗೆ ಬರುವುದನ್ನೇ ಕಾಯುತ್ತಿದ್ದ ಮಾಟ, ಬಡ್ಡ ಮತ್ತು ಬೆಳ್ಳಿ ಮೂರೂ ಶಿಸ್ತಾಗಿ ಜಗಲಿಯ ಮೇಲೆ ನಿಂತುಕೊಂಡು ತಮ್ಮತ್ತ ತುತ್ತನ್ನು ಎಸೆಯುವುದನ್ನೇ ಕಾಯ್ದು ನೆಲಕ್ಕೆ ಬೀಳದಂತೆ ಚಾಕಚಕ್ಯತೆಯಿಂದ ಲಬಕ್ಕೆಂದು ಕ್ಯಾಚ್ ಹಿಡಿದು ಸಂತೃಪ್ತಿಯಿಂದ ತಿಂದು ನಿಂತಲ್ಲೇ ಒಂದು ಸುತ್ತು ಬಂದು ಹಾಗೇ ಮುದುರಿಕೊಂಡು ಮಲಗಿದವು.

ತಲಬಾಗಿಲ ಹೊಸ್ತಿಲ ಎಡಮೂಲೆಯಲ್ಲಿ ಬಿರುಕೊಂದಿತ್ತು. ಆ ಬಿರುಕಿನಿಂದ ಸಣ್ಣ ಗುಂಗುರದಂಥಾ ಕೀಟಗಳು ಒಳಹೊರಗೂ ಆಡುತಿದ್ದವು. ನೋಡಿದ ಕೂಡಲೇ ಇವು ಮಿಸ್ಲಿ ಜೇನ್ನೊಣ ಎಂದು ಗೊತ್ತುಮಾಡಿಕೊಂಡ ಬೋಬ “ಏ ದೇವ್ಕೀ, ಬಾಗ್ಲು ಸಂದೀಲೇ ಮಿಸ್ಲಿ ಜೇನು ಸೇರ್ಕಂಡಾವಲೇ” ಎಂದ. ದೇವಕಿ ಒಳಗಿಂದಲೇ “ಅವು ಸೇರ್ಕಂಡು ವಾರುದ್ ಮೇಲಾಯ್ತು, ಮನೇಲಿ ಜೇನು ಕಟ್ಟಿದ್ರೆ ಒಳ್ಳೇದೇ ಅಂತಲ್ಲ, ಇರ್ಲಿ ಬಿಡೀ”ಎಂದಳು. ಈ ಜೇನುಹುಳು ಮನೆ ಗೋಡೆಯ ಬಿರುಕುಗಳು, ಮರದ ಪೊಟರೆಗಳು, ಕತ್ತಲಿನ ಮೂಲೆಗಳು, ಬಿದಿರುಬೊಂಬಿನ ಠೊಳ್ಳುಗಳಲ್ಲಿ ಗೂಡುಕಟ್ಟಿ ಜೇನುತುಪ್ಪ ಸಂಗ್ರಹಿಸುತ್ತದೆ. ಬಿದಿರಿನಿಂದ ಮಾಡುವ ಕೊಳಲಿನ ಕೊಳವೆ ಭಾಗದೊಳಗೆ ಈ ಜೇನಿನ ಮೇಣದ ಉಂಡೆಯನ್ನು ದನಿ ಸೃಜಿಸಲು ಬಳಸುತ್ತಾರಾದ್ದರಿಂದ ತನ್ನ ಹಿತ್ತಲಿನಲ್ಲಿಯೇ ಬೆಳೆದಿದ್ದ ವಾಟೆ ಬಿದುರಿಂದ ಕೊಳಲು ಮಾಡಿದಾಗ ಬಳಸಲು ಮ್ಯಾಣವೂ ಸಿಗುತ್ತಲ ಎಂದು ಬೋಬ ಸುಮ್ಮನಾದ.

ನಾವು ಏನನ್ನು ಅರ್ಥ ಮಾಡಿಕೊಳ್ಳಲಾರೆವೋ ಅದನ್ನು ನಾವು ನಿಯಂತ್ರಿಸಲಾಗದೆಂಬ ನಿತ್ಯ ಸತ್ಯ ಬೋಬಯ್ಯನ ಮುಂದೆ ಅನಾವರಣವಾಗುತ್ತಾ ಬಲಾಢ್ಯರ ಮುಂದೆ ಆತ್ಮಗೌರವ, ಸ್ವಾವಲಂಬನೆ ಹಾಗೂ ಸ್ವಾಭಿಮಾನದಿಂದ ಬದುಕುವುದು ಎಷ್ಟು ಸವಾಲಿನದೆಂದು ಯೋಚಿಸುತ್ತಾ ಈ ಸಮಸ್ಯೆಯೆಂಬ ಹರಿಯುವ ನೀರ ಮೇಲೆ ನಡೆಯಲು ಕಲ್ಲುಗಳೆಲ್ಲೆಲ್ಲಿವೆ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಲು ನಿರ್ಧರಿಸಿದ.

ದುರ್ಬಲರ ಮೇಲಿನ ದುರ್ಜನರ ದರ್ಪ ಇಂದು ನೆನ್ನೆಯದಲ್ಲ. ನಾಳೆಗೆ ಮುಗಿಯುವುದೂ ಇಲ್ಲ ಇದು ತಲತಲಾಂತರದ್ದು. ಸಾಧ್ಯವಿದ್ದಷ್ಟರ ಮಟ್ಟಿಗೆ ಶಾಂತಿ ಆದರೆ ಯಾವುದೇ ಕಾರಣಕ್ಕೂ ಅನ್ಯಾಯಕ್ಕೊಳಗಾಗದೇ ಇರಲು ದೃಢನಿರ್ಧಾರ ಮಾಡಿದ ಬೋಬಯ್ಯ.

ಸಂಜೆಯ ಮಬ್ಬುಗತ್ತಲಿನ ಸಮಯದಲ್ಲಿ ಬೋಬಯ್ಯ ಅಶ್ವತ್ತುನ್ಕಟ್ಟೆ ಬಳಿಗೆ ನಿಧಾನವಾಗಿ ನಡೆದುಕೊಂಡು ಹೋದ. ಮನೆಯಿಂದ ಒಂದೂವರೆ ಮೈಲಿ ದೂರದ ಅಶ್ವತ್ತುನ್‍ಕಟ್ಟೆಗೆ ಹೋಗಬೇಕಾದರೆ ಜಟಕಿನ ಬನ ಮತ್ತು ಊರಬಾಗಿಲು ದಾಟಿ ಹೋಗಬೇಕಿತ್ತು. ದಾರಿಯಲ್ಲಿ ಎದುರಿಗೆ ಮಿಲ್ಟ್ರಿ ಅಪ್ಪಣ್ಣ ಸಿಕ್ಕಿದ. ಬೆಳಗಿನಿಂದ ತೋಟದಲ್ಲಿ ಮೈಮುರಿದು ದುಡಿದ ಅಪ್ಪಣ್ಣ ಸಂಜೆ ಸುಮಾರಿಗೆ ಎರಡಾಳು ಹೊರುವಂಥ ಸೌದೇ ಹೊರೆಯನ್ನು ಲೀಲಾಜಾಲವಾಗಿ ತಲೆ ಮೇಲೆ ಹೊತ್ತುಕೊಂಡು, ಆ ಸೌದೆ ಹೊರೆಮೇಲೆ ಮೂವತ್ನಲ್ವತ್ತು ಕೆಸಿನೆಲೆಗಳ ಪಿಂಡಿ, ಗಾಳಿಗುರುಳಿ ಬಿದ್ದಿದ್ದ ಬಾಳೆಗೊನೆಯೊಂದನ್ನು ಹಿಡಿದು, ಒಡ್ಯಾಣದಲ್ಲಿ ಬಟ್ಗತ್ತಿಯ ಸಿಕ್ಕಿಸಿಕೊಂಡು ಬಿರಬಿರನೆ ಮನೆಕಡೆಗೆ ನಡೀತಿದ್ದ. ಎದುರಿಗೆ ಸಿಕ್ಕಿದ ಬೋಬಯ್ಯನನ್ನು ನೋಡಿ ‘ಏನೋಯ್ ಬೋಬಣ್ಣಾ, ಯತ್ಲಗೆ ಹೊಂಟ್ರಿ’ ಎಂದ. “ಬೀಡಿ ಮುಗ್ದೋಗಿದ್ವು ಮಾರಾಯ, ನಾಗೇಸುನ್ ಅಂಗ್ಡೀಲಿ ತರಾನಂತ ಹೊರ್ಟೆ” ಎಂದ ಬೋಬಯ್ಯ. ರಾಮಯ್ಯನ ಮನೆ ಅಡಿಕೆ ತೋಟದ ಕೆಲಸ ಮುಗಿಸಿಕೊಂಡು ಮನೆ ಕಡೆಗೆ ಹೊರಟಿದ್ದ ಕಾಲನಿಯ ಕೆಂಚಿ, ಬೆಳ್ಳಿ, ಗೌರಿ, ಮಂಜಿಯರು ‘ಎನಿ ಬೋಬಣ್ಣರೇ, ದೇವಕಿಯಮ್ಮರು ಚೆನಾಗಿದಾರಾ?’ ಎಂದು ಕುಶಲೋಪರಿ ವಿಚಾರಿಸಿದರು. “ಹೂ ಕಣ್ರಾ; ಚೆನಾಗಿದಾಳೆ. ಒಗ್ಗಿನ ಮಡಿ ಮೊಳಕೆ ಚೆನಾಗಿ ಬಂದಾವೆ, ಬುಟ್ಟಿಗೆ ಕೂರುಸ್ಬೇಕು. ಕಾಡ್ಮಣ್ಣು ಎರಡ್ಗಾಡಿ ತರಿಸಿಟ್ಟೀನಿ, ಕಾಫಿ ಬುಟ್ಟಿ ತುಂಬ್ಸಕ್ಕೆ ಆಯ್ತಾರ ಬರ್ರಾ” ಎಂದು ಕೆಲಸವನ್ನು ನೆನಪಿಸಿದ. ದಾರಿಯುದ್ದಕ್ಕೂ ಇಷ್ಟೆಲ್ಲಾ ಮಾತುಕತೆ ನಡೆಯುತಿದ್ದರೂ, ಬೋಬಯ್ಯನ ತಲೆಯಲ್ಲಿ ರಸ್ತೆ ನೆಪದಲ್ಲಿ ತನ್ನನ್ನು ಒಕ್ಕಲೆಬ್ಬಿಸಲು ಬಂದಿದ್ದ ಷಣ್ಮುಖನನ್ನು ಹೇಗೆ ಮುರಿಯಬೇಕೆಂಬ ಆಲೋಚನೆಯೇ ಮುಳುಗೇಳಿ ಮಾಡುತಿತ್ತು.

ಅಶ್ವತ್ತನ್‍ಕಟ್ಟೆ ಬಳಿ ಅಂದು ಎಂದಿನಂತೆ ಜನಸಂದಣಿ ಇರಲಿಲ್ಲ. ಆರೇಳು ಜನ ಗಟ್ಟಿ ದನಿಯಲ್ಲಿ ಮಾತನಾಡುತಿದ್ದವರು ಬೋಬಯ್ಯನ ಪ್ರವೇಶವಾದೊಡನೆ ದನಿತಗ್ಗಿಸಿ ಏನನ್ನೋ ಮುಚ್ಚಿಡುವಂತೆ ಮಾತನ್ನು ಮುಂದುವರೆಸಿದರು. ಗುಂಪಿನ ನಡುವೆಯಿದ್ದ ದಿಬ್ಬ, ಬೋಬಯ್ಯನ ಇರುವಿಕೆಯನ್ನು ಗಮನಿಸದೇ ‘ಅದೇನ್ ತರ್ಕಂತಾರೋ ತರ್ಕಳ್ಲಿ, ಈ ಸಲ ನಿಶಾನೆಗೆ ಹೋಗಕ್ಕೂಡದು ಅಂದ್ರೆ ಹೋಗಕ್ಕೇಕೂಡ್ದು. ಅದೆಲ್ಲಿಂದ ತರ್ಸಕಂತಾರೊ ತರುಸ್ಕಳ್ಲಿ. ಈತ್ರುಗಳು, ಸುಗ್ಗಿ ಹಬ್ಬ ಕುಣಿಯಕ್ಕೆ ನಾವು ಹಲಗೇ ಬಡೀಬೇಕಾ? ನಮ್ಮೋರು ಊರೊಳಗೆ ಹೋಗಕ್ಕೂಡ್ದಂತೆ, ದೇವ್ರ್ ತರಕ್ಕೆ ನಮ್ಮ ನಿಶಾನಿ ಬೇಕಂತೆ. ‘ಏ ರಂಗಾ, ನಿಮ್ಮಯ್ಯರಿಗೆ ಹೇಳು, ಹಲ್ಗೇ ಬಡಿಯಕ್ಕೆ ಹೋಗಕ್ಕೂಡ್ದೂ ಅಂತ. ಸುಬ್ಬಾ, ನೀನು ಕಾಳೆ ಊದಂಗಿಲ್ಲ. ನಮ್ಮಣಯ್ಯರಿಗೂ ನಾನ್ಹೇಳ್ತೀನಿ, ಈ ಸುಗ್ಗಿ ಹಬ್ದಾಗೆ ದೋಣು ಮುಟ್ಟಂಗಿಲ್ಲ ಅಂತ. ಅದೆಲ್ಲಿಂದ ಕಲ್ಡಿಸೆಟ್ ತಂದು ಬಡಿಸ್ಕಂತಾರೋ ಬಡಿಸ್ಕಳಲಿ’ ಎಂದು ಜೋರುದನಿಯಲ್ಲಿ ಫರ್ಮಾನು ಹೊರಡಿಸಿದ. ಮಾತನ್ನು ಮುಂದುವರೆಸಲೆಣಿಸಿದವನು ಬೋಬಯ್ಯ ಬಂದದನ್ನು ನೋಡಿ ಮಾತು ಹೊರಳಿಸಿದವನಂತೆ “ಚೌತ ಯಾವತ್ತೇಳು?” ಎಂದು ಪಕ್ಕದಲ್ಲಿ ನಿಂತಿದ್ದ ಗೋಪಾಲನನ್ನು ಕೇಳಿದ.

ಮಲೆನಾಡಿನ ನಿಶಾನಿ ಅಂದ್ರೆ ಅದೊಂದು ಅದ್ಭುತ. ದೋಣು, ಹಲಗೆ, ಕೊಂಬು, ಕಂಜ್ರಿ, ತಮಟೆ, ತಾಳ, ಮೋರಿ, ಕಹಳೆ, ಗಿಲ್ಕಿ, ಪೀಪಿ ಇವೆಲ್ಲದರ ಕ್ರಮಬದ್ಧ ಸಂಯೋಜನೆಯ ಪ್ರಸ್ತುತಪಡಿಸುವಿಕೆಯೇ ಜಡ್ಜಡ್ಡು ಮಣಕಟ್ಟು, ಜಡ್ಜಡ್ಡು ಮಣಕಟ್ಟು ಎಂದು ಸುಮ್ಮನೇ ನಿಂತ ಎಂಥವರನ್ನೂ ತನ್ನ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಲು ಪ್ರಚೋದಿಸುತ್ತದೆ. ನಿಶಾನಿ ಬಾರಿಸುವ ಸಮಾರಂಭಗಳಲ್ಲಿ ಆ ವಾದ್ಯಗಳನ್ನು ಸಿದ್ಧಮಾಡಿಕೊಳ್ಳುವುದೇ ಒಂದು ಸಡಗರದ ಕ್ಷಣ. ಭತ್ತದ ಹುಲ್ಲಿನ ಕಂತೆಯನ್ನು ಕಟ್ಟು ಬಿಚ್ಚಿ ಒಂದೆಡೆ ರಾಶಿಹಾಕಿ ಬೆಂಕಿಕಡ್ಡಿ ಗೀರಿ, ಆ ಹುಲ್ಲಿನ ರಾಶಿಗೆ ಬೆಂಕಿ ನೀಡಲಾಗುತ್ತದೆ. ನಿಶಾನಿಯ ಚರ್ಮವಾದ್ಯಗಳಾದ ಹಲಗೆ, ದೋಣು, ತಮಟೆಗಳನ್ನು ಆ ಬೆಂಕಿಯ ಶಾಖದಲ್ಲಿ ಹದವಾಗಿ ಕಾಯಿಸಿ, ಠಣ್ ಎಂದು ಶಬ್ಧ ಬರುವಂತೆ ಬಿಗಿಮಾಡಿಕೊಂಡು ಜಡ್ಗುಟ್ಕಂಡು ಬಡಿಯಲು ಶುರೂ ಮಾಡಿದ್ರಂದ್ರೆ ಸುತ್ತಾ ನಿಂತಿದ್ದವರು ಮೊಣಕಾಲು ನೇರವಾಗದಂತೆ ಕೈಕಾಲುಗಳನ್ನು ಕಾಲೆಕರೆ ವಿಸ್ತಾರಕ್ಕೂ ಮೀರಿ ಜಾಡಿಸುತ್ತಾ ಮೈಮೇಲೆ ಸಾಕ್ಷಾತ್ ಗಣಮಗನೇ ಆವಾಹನೆಯಾದಂತೆ ದಿದ್ದ್ದಿರಿ ದಿದ್ದಿರಿ ಎಂದು ಮೈಯ್ಯಲಿರುವ ನೆಣವೆಲ್ಲಾ ಕರಗಿ ಇಳಿವಂತೆ ಮೈಮರೆತು ಕುಣಿಯುತ್ತಾ, ಕುಣಿತವನ್ನು ನೋಡುತ್ತ ನಿಂತವರನ್ನೂ ಸವಾಲೆಸೆದು ಕರೆದು ಇಡೀ ಸಮಾರಂಭಕ್ಕೆ ಕೊನೆಮೊದಲಿಲ್ಲದ ರೋಚಕತೆಯನ್ನು ಸೃಷ್ಠಿಸುತಿದ್ದರೆ, ಅತ್ತ ಹಲಗೆ ಬಡಿಯುವವನು, ತಮಟೆ ಚಚ್ಚುವವನು, ದೋಣು ಗುದ್ದುವವನು ಕುಣಿಯುವವರಿಗೆ ತಾವೇನೂ ಕಡಿಮೆಯಿಲ್ಲವೆಂಬಂತೆ ತಮ್ಮೆದೆಗೆ ತಮ್ಮದೇ ಮಂಡಿಗಳಿನ್ನೇನು ಗುದ್ದೇಬಿಡುತ್ತವೆ ಎಂಬಂತೆ ಕಾಲೆತ್ತೆತ್ತಿ ಹೆಜ್ಜೆ ಹಾಕುತಿದ್ದರೆ ಆ ಸುತ್ತಲಿನ ನೆಲವೇ ಅದುರುತ್ತಾ ತಾನೂ ಸಮಾರಂಭದ ತಾರಾಟದಲ್ಲಿ ಭಾಗಿಯಾದಂತೆ ವರ್ತಿಸಲಾರಂಭಿಸುತ್ತದೆ.

ಸಂಗೀತ ಸಂಯೋಜನೆಯೊಂದೇ ಈ ಜಗತ್ತಿನ ಅತ್ಯಂತ ಸೃಜನಶೀಲ ಕಲೆ ಎಂದೆನಿಸುತ್ತದೆ. ಇತರೆಲ್ಲಾ ಕಲೆಗಳೂ ಯಾವುದಾದರೂ ಒಂದು ಪ್ರಾಕೃತಿಕ ಸಹಜ ಚಟುವಟಿಕೆಯ ಮುಂದುವರೆದ ಹಂತವಾಗಿರುತ್ತದೆ. ಆದರೆ ಈ ಟ್ಯೂನಿಂಗ್ ಎನ್ನುವುದು ಅಪ್ಪಟ ಕ್ರಿಯಾಶೀಲ ಮತ್ತು ಕ್ರಿಯಾತ್ಮಕ ಕೃತಿಯಾಗಿರುತ್ತದೆ. ಸಂಗೀತಕ್ಕಿರುವ ಅಸಾಧಾರಣ ಶಕ್ತಿಗೂ ಈ ಒರಿಜಿನಾಲಿಟಿಯೇ ಕಾರಣ.

ದಿನ ದಿನ ಮರಗಸಿ ಮಾಡಲು ಬಂದ ಜಗ್ಗನಿಗೆ ಬೋಬಯ್ಯ ತಮಾಷೆಗೆಂಬಂತೆ “ಅಲ್ಲಾ ಕಣಾ ಮಾರಾಯ, ಬೆಳಿಗ್ಗೆಯಿಂದ ಈ ಲಾಟ್‍ಪೂಟ್ ಹತ್ತೇಹತ್ತು ಮರದ ಕೊನೆ ಕಡ್ದೀಯಲ; ನೀವು ಇನ್ನೂ ಹಿಂಗೆ ಇದ್ರೆ ನಮ್ಮ ದೇಶ ಅಮೇರಿಕ ಆದಂಗೇನೇ” ಎಂದಿದ್ದ.
ನೂರಡಿಗೂ ಹೆಚ್ಚು ಎತ್ತರದ ಹನಲ್ತಾರೀ ಮರದ ಕೊನೆಗಳನ್ನು ಕಡಿದು ಕೆಳಗಿಳಿದ ಜಗ್ಗ, “ಅಮೇರಿಕದ್ದೇ ಸಂಬಳಾ ಕೊಟ್ನೋಡಿ, ಮುಂದಿನ ವಾರದಿಂದ್ಲೇ ನಾವೆಲ್ರೂ ಅಮೇರಿಕನ್ಸೂ, ತಿಳ್ಕಳೀ ಬೋಬಣ್ಣಯ್ಯಾರೇ” ಎಂದು ಗಹಗಹಿಸಿ ನಗುತ್ತಾ ರಪಕ್ಕನೇ ಎದುರುತ್ತರ ಕೊಟ್ಟ. ಹೆಚ್ಚೂ ಕಡಿಮೆ ತನ್ನ ಜಮೀನಿನ ಎಲ್ಲ ಕೆಲಸಗಳನ್ನು ತಾನು ಮತ್ತು ತನ್ನ ಹೆಂಡತಿಯೇ ಮಾಡಿಕೊಳ್ಳುತಿದ್ದರೂ, ಮರ ಹತ್ತುವುದು ಸ್ವಲ್ಪ ಅಪಾಯಕಾರಿ ಹಾಗೂ ಪರಿಣತಿ ಬೇಡುವ ಕೆಲಸವಾದ್ದರಿಂದ ಮತ್ತು ಈಗ್ಗೆ ಹದಿನೈದು ದಿನದ ಹಿಂದೆ ಗದ್ದೆ ಬದುವಲ್ಲಿ ನಡೆಯುತಿದ್ದಾಗ ಎಡಗಾಲು ಹೊಳ್ಳಿ ಕಾಲಿನ ಕಂಬ ಮತ್ತು ಪಾದ ಸೇರುವಲ್ಲಿ ಉಳುಕಿದಂತಾಗಿತ್ತು. ಹಾಗಾಗಿ ಮನೆಯ ಹತ್ತಿರವೇ ಇದ್ದ ಅಕ್ಕಮ್ಮನ ಮಗ ಜಗ್ಗನನ್ನು ಮರಗಸಿ ಮಾಡಿಕೊಡಲು ಗೊತ್ತುಮಾಡಿಕೊಂಡಿದ್ದ, ಜಗ್ಗ ಕಡಿದು ಕೆಳಗೆ ಹಾಕಿದ್ದ ಕೊನೆಗಳನ್ನು ಸೌದೆಯಾಗಿ ಸೊಗರಲು ಯಾರದ್ರೂ ಜನಾ ಸಿಕ್ತಾರ ಎಂದು ಹುಡುಕಲು ಹೊರಟಿದ್ದ.

ಒಕ್ಕಲಾಟದ ಸಮಯದಲ್ಲಿ ಮೇವುಹಾಕಿ ಕೋಳಿ ಕರೆದರೆ ಬರದಿರುವಂತೆ, ಎಲೆಕ್ಷನ್ ಸಮಯದಲ್ಲಿ ಕೆಲಸಕ್ಕೆ ಜನ ಬರದೇ ತಿಕಾ ತಿರುಗಿಸಿಕೊಂಡು ಹೋಗ್ತಾರೆ. ಎದುರಿಗೆ ಸಿಕ್ಕಿದ ಕೆಳ್ಳಾಮನೆ ಜುಂಜಪ್ಪ, “ಕೆಲಸಕ್ಕೆ ಜನಾನೇ ಬರ್ತಿಲ್ಲ ಮಾರಾಯ. ನಾವು ಸುಮ್ನೇ ಬೇಲಿ ಹಾಕಿ, ಕಾಡು ಕಡಿದು, ಕಾಯ್ದಿದ್ದೇ ಬಂತು. ಸೆಕ್ರೆಟ್ರಿ ಸೂಳೆಮಗ ಎರ್ಡೆಕರೆ ಮಂಜೂರು ಮಾಡ್ಸಿಕೊಡ್ತೀನಿ ಅಂತ ಹತ್ಸಾವುರ್ರುಪಾಯಿ ಬೇರೆ ಇಸ್ಕಂಡಿದಾನೆ. ಈಗ ಟ್ರಾನ್ಸ್‍ಫರಾಗಿ ಹೋದ. ಈಗಿನ್ಯಾವನು ಬರ್ತಾನೋ, ಏನ್ಕಥೇನೋ? ಫಾರೆಸ್ಟಿನೋರು ಬೇರೆ ಪ್ರಾಣ ತಿಂತಿದಾರೆ! ಕದ್ದುಮುಚ್ಚಿ ಬೀಟೆಮರ ಕಡಿಬೋದಂತೆ, ಕಳಿಲೆ ಮುರಿಯಂಗಿಲ್ಲಂತೆ. ಬೇಲಿ ಜರುಗಿಸಿ ಒತ್ತುವರಿ ಮಾಡ್ಬಹುದಂತೆ, ಶಿಕಾರಿ ಮಾಡಂಗಿಲ್ಲಂತೆ. ಇದ್ಯಾವ ನ್ಯಾಯ ಮಾರಾಯ?” ಎಂದು ಕೃಷಿಬದುಕಿನ ಹಳವಂಡಗಳನ್ನು ಹೇಳಿಕೊಂಡು ಕೊರಗಾಡಿದ್ದ.

ಎಂದಿನಂತೆ ತಣ್ಣಗಿದ್ದ ಊರಿನಲ್ಲಿ ಇದೇನೋ ಹೊಸಾ ಬೆಳವಣಿಗೆಯಾಗುತ್ತಿರುವುದನ್ನು ಗಮನಿಸಿದ ಬೋಬಯ್ಯ ನಾಗೇಶನ ಗೂಡಂಗಡಿಗೆ ಹೋಗಿ ಒಂದ್ಕಟ್ಟು ಬೀಡಿ, ಬೆಂಕಿಪಟ್ಣ ಮತ್ತು ದೇವಕಿಗೆ ಇಷ್ಟ ಎಂದು ಎರಡು ಪ್ಯಾಕೆಟ್ಟು ಬೋಟಿಯನ್ನು ಕೊಂಡ. ಮನೆಗೆ ಹಿಂದಿರುಗಲೆಂದು ಹೊರಟವನು ಏನೋ ನೆನಪಾದಂತಾಗಿ ಮನೆ ನಾಯಿಗಳಿಗೆಂದು ಒಂದು ಪ್ಯಾಕೆಟ್ ಬಟರ್ ಅನ್ನೂ ಕೊಂಡ.
ಅಂಗಡಿಯಲ್ಲಿದ್ದ ನಾಗೇಸನ ಹೆಂಡತಿ “ಬೋಬಣ್ಣಯ್ಯರೇ ನಿಮ್ ತ್ವಾಟದೊಳ್ಗೇ ರಸ್ತೆ ಅಳ್ತೆ ಮಾಡ್ತಿದಾರಂತೆ ಹೌದಾ?” ಎಂದಳು. ಕುದ್ದುಕ್ಕುದ್ದು ಹೊರಚೆಲ್ಲಲು ಕಾಯುತ್ತಿದ್ದ ಸಿಟ್ಟನ್ನು ಸ್ರರಕ್ ಅಂತ ಬಿಸಾಕಿದ ಬೋಬಯ್ಯ “ಈ ಸೂಳೇ ಮಕ್ಳಿಗೆ ನನ್ತೋಟನೇ ಬೇಕಾ?” ಎಂದು ದೊಡ್ಡ ದನಿಯಲ್ಲಿ ಅಬ್ಬರಿಸಿದ. ಎಂದೂ ದನಿಯೇರಿಸಿ ಮಾತನಾಡದ ಬೋಬಯ್ಯ ಈ ರೀತಿ ಅಬ್ಬರಿಸಿದನ್ನು ಕಂಡು ನಿಶಾನಿ, ಸುಗ್ಗಿಹಬ್ಬ ಕುರಿತು ಮಾತನಾಡುತಿದ್ದ ಗುಂಪಿನವರು ಅವಾಕ್ಕಾದರು. ಬೋಬಯ್ಯನ ಕೈಯ್ಯಲಿದ್ದ ಬೋಟಿ ಪ್ಯಾಕೆಟ್ಟುಗಳು ಅವನ ಕೈಯಲ್ಲೇ ಪುಡ್ಡಿಪ್ಪುಡ್ಡಿಯಾದವು. “ವಾ! ಬೋಟಿ ಪ್ಯಾಕೆಟ್ ಹುಡಿ ಮಾಡ್ಕಂಡ್ರಲ ಬೋಬಣ್ಣಯ್ಯಾರೆ” ಎಂದಳು ನಾಗೇಸನ ಹೆಂಡ್ತಿ. ಅಷ್ಟರಲ್ಲಿ ರಂಗ, ಸುಬ್ಬ, ದಿಬ್ಬ ಎಲ್ಲ ಅಂಗಡಿ ಮುಂದೆ ಜಮಾವಣೆಯಾದರು. ಲೋಕವಳ್ಳಿಯಿಂದ ಭಟ್ಟಿ ಶರಾಬಿನ ಕ್ಯಾನು ತರಲು ಹೋಗಿದ್ದ ನಾಗೇಶನೂ ‘ಯಂತಾ ಆಯ್ತ್ರಾ?’ ಎಂದು ಕೂಗಿದವನೇ ಮನೆ ಹಿಂಭಾಗದ ದನಿನ್ ಕೊಟ್ಟಿಗೆಯ ಹಿಂಬದಿಯ ಹುಲ್ಲಿನ ಕೊಡಬೆಯ ಸಂದೀಲಿ ಶರಾಬಿನ ಕ್ಯಾನು ಅಡಗಿಸಿಟ್ಟು, ಅಂಗಡಿ ಬಳಿಗೆ ಓಡಿ ಬಂದ. “ಯಂತಾ ಆಯ್ತು ಬೋಬಣ್ಣಯ್ಯಾರೆ?” ಎಂದ ರಂಗ.

ತನ್ನ ಜಮೀನಿನ ಒಳಗೆ ನಡೆಯುತ್ತಿರುವ ರಸ್ತೆ ಕಾಮಗಾರಿ ಮತ್ತು ಷಣ್ಮುಖನ ಮನೆಹಾಳು ಕೆಲಸಗಳನ್ನು ವಿವರಿಸಿದ ಬೋಬಯ್ಯ. “ಬೋಬಣ್ಣಯ್ಯಾರೆ ನೀವೇನೂ ತಲೆಕೆಡಿಸ್ಕಬೇಡಿ, ಆ ಷಣ್ಮುಖನ ಸೊಕ್ಕು ಮುರಿಯಕ್ಕೆ ನಾವೂ ಕಾಯ್ತಾ ಇದೀವಿ. ಹೋದ ಬಾರಿ ಪಂಚಾಯ್ತಿ ಎಲೆಕ್ಷನ್ನಲ್ಲಿ ನಮ್ಮನ್ನೆಲ್ಲಾ ಮರುಳುಮಾಡಿ, ಇಡೀ ಕಾಲೋನಿಯ ಓಟುಗಳನ್ನು ಕೂಳಿಗೆ ಬಿದ್ದ ಮೀನು ಸುರ್ಕಂಡು ಹೋದಂಗೆ ಹಾಕಿಸ್ಕಂಡು, ಅವತ್ತಿಂದ ಇವತ್ತಿನ ವರೆಗೆ ಈ ಕಡೆ ತಲೆ ಹಾಕಿಲ್ಲ. ನಮ್ಮೂರಿಗೆ ಮಂಜೂರಾಗಿದ್ದ ಬಸ್ ಬರದಂಗೆ ಮಾಡಿ, ನಾವ್ಯಾರೂ ಪ್ಯಾಟಿಗೆ ಹೋಗದಂಗೆ ಮಾಡಿಬಿಟ್ಟ. ರಸ್ತೆ ರಿಪೇರಿಯಾಗಿ ಜಲ್ಲಿ ಹಾಕದಿದ್ರೆ ಬಸ್ ಬರೋದಾದ್ರೂ ಹೇಗೆ? ನಮ್ಮಗಳ ಮಕ್ಕಳು ಸ್ಕೂಲಿಗೆ ಹೋಗದಾದ್ರೂ ಹೇಗೆ? ನಮ್ಮಕ್ಳು ಸ್ಕೂಲಿಗೆ ಹೋದ್ರೆ ತೋಟದ ಕೂಲಿಗೆ ಜನಾ ಸಿಗಕ್ಲಾಂತ ರಸ್ತೆ ಆಗದಂಗೆ, ಬಸ್ ಬರದಂಗೆ ಮಾಡ್‍ಬುಟ್ಟ ನೀಚ! ಇಲ್ಲಿ ಕಾಡಿಗೆಲ್ಲ ಬೇಲಿ ಹಾಕಿ, ಈತನ್ ಮಕ್ಳನ್ನ ಬೋರ್ಡಿಂಗ್ ಸ್ಕೂಲಿಗೆ ಸೇರಿಸಿದಾನೆ. ತಿಂಗ್ಳಿಗೊಂದ್ಸಲ ಗಂಡುಗೂ ಹೆಂಗ್ಸಿಗೂ ಕಾರಲ್ಲಿ ಸ್ಕೂಲಿಗೊಂದು ಟೂರು. ನಾವಿಲ್ಲಿ ಈತ್ರುಗಳ ಮನೆ ಜೀತ ಮಾಡ್ಕಂಡು, ನಮ್ಗುಟ್ಟಿದ ಮಕ್ಳೂವಾ ಇವರ್ಮನೆ ಜೀತಕ್ಕೆ ಇಲ್ಲೇ ಇರಬೇಕು. ಇದ್ದೊಂದು ಪ್ರೈಮರಿ ಸ್ಕೂಲ್ನೂ ಮುಚ್ಚಿಸಿಬಿಟ್ಟ” ಒಂದೇ ಉಸಿರಿಗೆ ಇದ್ದಬದ್ದ ಆಕ್ರೋಶವನ್ನೆಲ್ಲ ಹೊರಹಾಕಿದ ಗೋಪಾಲ.

ಯಾರೂ ದಿಕ್ಕಿಲ್ಲವೆಂದು ಅಬ್ಬೇಪಾರಿಯಾಗಿದ್ದ ಬೋಬಯ್ಯ ತನ್ನ ವೈರಿಗೂ ಇರುವ ವೈರಿಗಳನ್ನು ನೋಡಿ ಸಮಾಧಾನದ ನಿಟ್ಟುಸಿರುಬಿಟ್ಟ. ಇಡೀ ಊರಿಗೇ ಉಪಯೋಗವಿಲ್ಲದ ರಸ್ತೆಯನ್ನು ತನ್ನೊಬ್ಬನ ಅಗತ್ಯ ಹಾಗೂ ತನ್ನ ವ್ಯವಹಾರ ವಿಸ್ತರಿಸಿಕೊಳ್ಳಲು ಸರ್ಕಾರದ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಷಣ್ಮುಖನನ್ನು ಹಣಿಯಲು ಇದೇ ಸರಿಯಾದ ಸಮಯವೆಂದೆಣಿಸಿದ ಬೋಬಯ್ಯನಿಗೆ ಏನನ್ನಿಸಿತೋ ಏನೋ; ತನ್ನ ಜೇಬಿನಿಂದ ಐವತ್ತು ರೂಪಾಯಿಯ ನೋಟೊಂದನ್ನು ತೆಗೆದು ಗೋಪಾಲನ ಕೈಗೆ ಹಾಕಿ “ಎಲ್ರೂ ಸೇರಿ ನಾಗೇಸನ ಹತ್ರ ಸಾರಾಯಿ ತಗಂಡು ಕುಡೀರಿ” ಎಂದು ಮನೆಕಡೆ ಹೊರಟ. ಒಂದ್ಹತ್ತು ಹೆಜ್ಜೆ ನಡೆದವನು ಏನೋ ನೆನಪಾದಂತೆ ವಾಪಾಸ್ ಬಂದು ಮತ್ತೆರಡು ಪ್ಯಾಕೆಟ್ ಬೋಟಿ ಕೊಂಡು “ದಿಬ್ಬ ಹೇಳಿದ್ದು ಸರಿಯಾಗಿಯೇ ಇದೆ, ಈ ಬಾರಿ ನಿಶಾನೆ ಹೊಡಿಲೇಬೇಡಿ ಕಣ್ರಾ. ಮದ್ವಿಗೂ ಹೊಡಿಬೇಡಿ, ಸಾವಿಗೂ ಹೊಡಿಬೇಡಿ” ಎಂದು, ಕೊಂಡಿದ್ದ ಸತೀಶ್ ಬೀಡಿಯ ಕಟ್ಟಿನಿಂದ ಒಂದು ಬೀಡಿ ಎಳೆದುಕೊಂಡು ಕಡ್ಡಿಗೀರಿ ಎರಡು ಆಳವಾದ ದಮ್ಮು ಎಳೆದವನೇ ಏನನ್ನೋ ದೃಢವಾಗಿ ತೀರ್ಮಾನಿಸಿದವನಂತೆ ನೆಲಗುದ್ದುವವನಂತೆ ಹೆಜ್ಜೆ ಇಡುತ್ತಾ ಮನೆಕಡೆ ಹೊರಟ.

ಬೋಬಣ್ಣ ಅಲ್ಲಿಂದ ನಿರ್ಗಮಿಸಿದ ಕೆಲವೇ ನಿಮಿಷಗಳಲ್ಲಿ ರಾಜದೂತ್ ಮೋಟಾರ್ ಸೈಕಲ್ಲಿನಲಿ ಬಂದಿಳಿದವರೇ ಹೊಸ ಅಲೆಯ ಹೋರಾಟಗಾರರಾದ ಸುನಿಲ ಹಾಗೂ ಜಯಪ್ರಕಾಶ. ಆಡಳಿತದೊಂದಿಗಿನ ತಮ್ಮ ಸಂಘರ್ಷಕ್ಕೆ ಬೇರೆಯದೇ ರೀತಿಯ ಭಾಷ್ಯ ಬರೆಯುವ ಚಿಂತನೆಗಳನ್ನು ಊರೂರುಗಳನ್ನು ತಿರುಗಿ, ಯುವಕರಿಗೆ ತಮ್ಮ ಆಂದೋಲನದಲ್ಲಿ ಭಾಗಿಯಾಗಲು ಹುರಿದುಂಬಿಸುತಿದ್ದರು ಇವರಿಬ್ಬರು. ಮೋಟಾರು ಸೈಕಲ್ಲಿನ ಸದ್ದು ಕೇಳಿಸಿಕೊಂಡ ಮನೆಮನೆಗಳಲ್ಲಿ ವಿವಿಧ ಕೆಲಸಗಳಲ್ಲಿ ಮಗ್ನರಾಗಿದ್ದ ಮಧ್ಯ ವಯಸ್ಕರು, ಅಲ್ಲಲ್ಲಿ ಗುಂಪುಗುಂಪಾಗಿ ನಿಂತು ಅಥವಾ ಕೂತು ಸಂಘಟನೆ, ಕ್ರಾಂತಿ ಮುಂತಾದ ಸಂಗತಿಗಳ ಕುರಿತಾಗಿ ಚರ್ಚೆ ಮಾಡುತಿದ್ದ ಯುವಕರು ಬಾವಿಕಟ್ಟೆಯ ಬಳಿ ಸೇರಿಕೊಳ್ಳಲಾರಂಭಿಸಿದರು.
ಜಯಪ್ರಕಾಶ ಹೋದ ವಾರ ಮಹಾರಾಷ್ಟ್ರದ ಕೋರೆಗಾಂವ್ ಎಂಬ ಊರಿನಲ್ಲಿ ನಡೆದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರಿಂದ, ವಿನೂತನ ವಿಚಾರಧಾರೆಯೊಂದನ್ನು ಹೊರಗೆಡವಿದ.

“ಮೀಸಲಾತಿಗೆ ಅಂಗಲಾಚುವುದು ಹಾಗೂ ಮೀಸಲಾತಿಯ ಮರೆಯಲ್ಲಿ ಬದುಕುವುದು ಆತ್ಮಗೌರವ ಹಾಗೂ ಸ್ವಾಭಿಮಾನದ ಲಕ್ಷಣವಲ್ಲ ಎಂದು ತಿಳಿಹೇಳಿ, ತಲೆಯೆತ್ತಿ ಬದುಕಲು ಭರವಸೆ, ಹಾಗೂ ಆತ್ಮವಿಶ್ವಾಸ ತುಂಬಬೇಕಾದ ಆಯಾ ಸಮುದಾಯದ ಮುಖಂಡರುಗಳೇ ತಮ್ಮ ಸಮುದಾಯಗಳನ್ನು ಮೀಸಲಾತಿ ಪಡೆಯುವ ಹೋರಾಟಕ್ಕೆ ಬಲಿಪ್ರಾಣಿಗಳನ್ನು ತಳ್ಳುವಂತೆ ತಳ್ಳಿ, ಅವರುಗಳ ಆತ್ಮವಿಶ್ವಾಸದ ತಳಹದಿಯನ್ನೇ ಅಲುಗಿಸುವ ಹಾಗೂ ಶಾಶ್ವತವಾಗಿ ಕೀಳರಿಮೆಯಲ್ಲೇ ಬದುಕುವಂತೆ ಮಾಡುತ್ತಿರುವುದು ಹಾಸ್ಯಾಸ್ಪದ.
ಈ ಮುಖಂಡರುಗಳೂ ಸಹಾ ಅವರುಗಳ ಈಗಿನ ಸ್ಥಾನ-ಮಾನಗಳನ್ನು ಆ ಮೀಸಲಾತಿಯಿಂದ ಪಡೆದರೋ, ಇಲ್ಲಾ ಸ್ವಾಭಿಮಾನ, ಹೋರಾಟ, ಕೆಚ್ಚೆದೆ ಹಾಗೂ ಆತ್ಮಾಭಿಮಾನದಿಂದ ಪಡೆದರೋ ಎಂದು ಅನುಮಾನ ಮೂಡುತ್ತದೆ. ಯಾವುದೇ ಸ್ಥಾನಕ್ಕೆ ಆಯ್ಕೆಯು ಅಭ್ಯರ್ಥಿಯ ವಯಕ್ತಿಕ ಸಾಮಥ್ರ್ಯ ಹಾಗೂ ಕೌಶಲ್ಯವನ್ನಾಧರಿಸಿಯೇ ಇರಬೇಕು.
ಒಂದ್ ಹೊತ್ ತಿಂದ್ ಹೊರಗ್ಹಾಕೋ ಆಲೂಗೆಡ್ಡೇನ್ನೇ ತಿರುಗ್ಸಿ, ಮುರುಗ್ಸಿ ನೋಡಿ, ಸೈಝು-ಮೊಳಕೆ ಪರೀಕ್ಷೆ ಮಾಡಿ ತರ್ತೀವಿ. ಇನ್ನು ಅವನಿಗೆ ಅರವತ್ತು ವರ್ಷ ವಯಸ್ಸಾಗೋವರೆಗೂ ಸಂಬಳ-ಸಾರಿಗೆ-ಭತ್ಯೆ ಕೊಟ್ಟು, ಸಾಯೋವರೆಗೂ ಪಿಂಚಣಿ ಕೊಟ್ಟು, ಸತ್ಮೇಲೂ ಅವನ ಹೆಂಡ್ತಿ ಬದ್ಕಿರೋವರೆಗೂ ಆಕೆಗೂ ಪಿಂಚಣಿ ಕೊಡಬೇಕಿರುವ ಹಾಗೂ ಅವನ ಸೇವಾವಧಿಯುದ್ದಕ್ಕೂ ನಮ್ಮಂಥ ಲಕ್ಷಾಂತರ ಜನರ ಬದುಕಿಗೆ ಸಂಬಂಧಿತ ಮಹತ್ತಿನ ತೀರ್ಮಾನ ಕೈಗೊಳ್ಳುವ ಸ್ಥಾನ-ಅಧಿಕಾರ ಕೊಡುವುದಕ್ಕೆ ಅವನ ಜಾತಿಯನ್ನು ಮಾನದಂಡವನ್ನಾಗಿ ಪರಿಗಣಿಸುವುದು ಅವಿವೇಕವಲ್ಲವೇ?

ಎಲ್ಲೀ ತನಕ ಈ ಮೀಸಲಾತಿ? ಎಪ್ಪತ್ತು ವರ್ಷದಲ್ಲಿ ಆಗದ್ದು ಮುಂದೆ ಆಗಬಹುದೇ? ಸರ್ಕಾರ ಯಾವ ಯಾವ ಸವಲತ್ತು ಕೊಟ್ಟಿಲ್ಲ? ಹುಟ್ಟಿನಿಂದ ಚಟ್ಟದವರೆಗೂ ಸ್ಪೂನ್ ಫೀಡ್ ಮಾಡಿಮಾಡಿಯೇ ನಮ್ಮಗಳ ಚೈತನ್ಯವನ್ನೇ ಹಿಂಡಿಹಾಕಲಾಗಿದೆ. ನಾವುಗಳು ಹಾಗೆ ಇರುವುದೇ ಅಧಿಕಾರಸ್ತರಿಗೆ ಅಪ್ಯಾಯಮಾನ. ಕುದುರೆಯನ್ನು ಅದರ ಪಾಡಿಗೆ ಫೀಲ್ಡಿಗೆ ಬಿಟ್ಟು ನೋಡಿ. ನೆಸ್ಸೆಸಿಟಿ ಈಸ್ ದ ಮದರ್ ಆಫ್ ಇನ್ವೆಂಷನ್. ನೀರಿಗೆ ಬಿದ್ದಾಗ ಈಜು ಬಂದೇ ಬರುತ್ತೆ.

ಅಂದ್ರೆ, ಮೀಸಲಾತಿಯೆಂಬ ಆಯ್ಕೆ ಇದ್ದರೆ ತಾನೇ ದುರ್ಬಳಕೆ. ಈ ನೆಪಗಳೇ ಕುದುರೆಗಳಾಗಬಹುದಾದ ಸಾಮಥ್ರ್ಯವಿರುವವರನ್ನು ಕತ್ತೆಗಳನ್ನಾಗಿ ಮಾಡಲು ಪ್ರಯತ್ನಿಸುತ್ತಿರುವುದು. ನಿಮ್ಮ-ನಮ್ಮ ಭವಿಷ್ಯ ನಿರ್ಧರಿಸಲು ಆ ಅಧಿಕಾರ ಸ್ಥಾನದಲ್ಲಿ ಕುದುರೆಯಂಥವರಿರಬೇಕಾ ಅಥವಾ ಕತ್ತೆಯಂಥವರಿರಬೇಕಾ ಎಂಬುವುದನ್ನು ತೀರ್ಮಾನಿಸಬೇಕಿದೆ. ಕತ್ತೆ-ಕುದುರೆಗಳು ಎಲ್ಲಾ ಜಾತಿ, ಸಮುದಾಯ ಹಾಗೂ ಆರ್ಥಿಕ ಸ್ಥರಗಳಲ್ಲಿರುವುದರಿಂದ ಈ ಹೋಲಿಕೆ; ಅಷ್ಟೇ.

ಶಿಕ್ಷಣ ಮತ್ತು ಉದ್ಯೋಗ ಇವೆರಡೇ ಒಬ್ಬ ಮನುಷ್ಯನ ಯೋಗ್ಯತೆಯನ್ನು ತೀರ್ಮಾನಿಸುವುದಿಲ್ಲ, ಅಲ್ವೇ? ನಮ್ಮ ನಮ್ಮ ಸುತ್ತಮುತ್ತ ಹಾಗೇ ಕಣ್ಣಾಡಿಸಿದರೆ ಶಿಕ್ಷಣ ಹಾಗೂ ಸರ್ಕಾರೀ ಉದ್ಯೋಗವಿಲ್ಲದೆಯೇ ಬೇರಾರಿಗೂ ಕಿಂಚಿತ್ತೂ ಕಡಿಮೆ ಇಲ್ಲದಂತೆ ಶಿಕ್ಷಣ ಮತ್ತು ಉದ್ಯೋಗ ಹೊಂದಿರುವವರನ್ನೂ ಅಣಕಿಸುವಂತೆ ಬದುಕಿನಲ್ಲಿ ನಿಜ ಯಶಸ್ಸು ಪಡೆದವರು ಲಕ್ಷಲಕ್ಷ ಸಂಖ್ಯೆಯಲ್ಲಿದ್ದಾರೆ. ಪ್ರಭುತ್ವ ಆಡುವ ನಾಟಕದಲ್ಲಿ ಈ ಮೀಸಲಾತಿ ಎನ್ನುವುದಕ್ಕೊಂದು ವಿದೂಷಕನ ಪಾತ್ರ; ಅಷ್ಟೇ.
ಒಂದು ಸರ್ವೆ ಮಾಡುತಿದ್ದೇನೆ. ಈ ಪ್ರಾದೇಶಿಕತೆ, ಜಾತಿ ವ್ಯವಸ್ಥೆಯನ್ನು ಮೀಸಲಾತಿ ಕಾರಣಕ್ಕಾಗಿ ಈವರೆವಿಗೂ ಪೋಷಿಸಿಕೊಂಡು ಬಂದಿರುವುದರಿಂದಲೇ, ನಾವಿನ್ನೂ ಈ ಕಂಫರ್ಟ್‍ನಿಂದ ಹೊರಬರಲಾಗಿಲ್ಲ. ಉತ್ಕøಷ್ಟತೆಯ ಜೊತೆಗೆ ಸರಿಸಮನಾಗಿ ಹೆಜ್ಜೆ ಹಾಕಲಾರದ ಅಸಮರ್ಥತೆಯ ಸಮರ್ಥನೆಗಾಗಿ ಈ ಭಾಷೆ, ಪ್ರಾದೇಶಿಕತೆ, ಜಾತಿ ಮುಂತಾದುವು ಅಸಹ್ಯ ಹುಟ್ಟಿಸುವಷ್ಟು ದುರ್ಬಳಕೆಯಾಗುತ್ತಿವೆ. ಆತ್ಮಾಭಿಮಾನ ಹೊಂದಿರುವ ಯಾರೇ ಆದರೂ ಈ ಪ್ರಾದೇಶಿಕತೆ, ಭಾಷೆ ಮತ್ತು ಜಾತಿಯನ್ನು ಸ್ಪರ್ಧೆಯಿಂದ ವಿನಾಯಿತಿ ಪಡೆಯಲು ಬಳಸುವುದಿಲ್ಲ.
ಬಲಿಷ್ಠರು ಅಥವಾ ಕನಿಷ್ಠರು ಅಂತ ಅಲ್ಲ, ನಮ್ಮ ಬದುಕಿನ ಆಗುಹೋಗುಗಳನ್ನ ಸಮರ್ಥರು ತೀರ್ಮಾನಿಸಬೇಕು. ಅದರ ಪರಿಣಾಮ ನಮ್ಮ ಮೇಲೆ ಆಗಿಯೇ ಆಗುತ್ತದಲ್ವೇ? ಬಿಡುಬೀಸು ನಡೆಯುವ ಸಾಮಥ್ರ್ಯವಿರುವವನಿಗೂ ಊರುಗೋಲೇಕೆ?” ಎಂದು ಅಲ್ಲಿ ಸೇರಿದ್ದ ಯಾರೂ ನಿರೀಕ್ಷಿಸಿರದಿದ್ದ ಹಾಗೂ ಅಲ್ಲಿದ್ದವರಿಗೆಲ್ಲಾ ಆಘಾತವಾಗುವಂಥಾ ವೈಚಾರಿಕ ಬಾಂಬೊಂದನ್ನು ಸಿಡಿಸಿ, ಅಲ್ಲಿ ಸೇರಿದ್ದವರಲ್ಲನೇಕರ ಹುಬ್ಬೇರಿ ಗಲಿಬಿಲಿಯಿಂದ ಕಣ್ಣನ್ನು ಪಿಳಿಪಿಳಿ ಬಿಡುವಂತೆ ಮಾಡಿಹಾಕಿದ.

ಇದ್ಯಾಕೋ ಈ ಹೊಸಾ ವಿಚಾರಧಾರೆ ಗೊಂದಲಗಳಿಗೆ ಕಾರಣವಾಗುತ್ತಿರುವುದನ್ನು ಗಮನಿಸಿದ ಸುನಿಲ, ಸದ್ಯಕ್ಕೆ ವಿಷಯಾಂತರ ಮಾಡೋಣವೆಂದು, “ಬೇರೆಲ್ಲಾ ಸನ್ನಿವೇಶಗಳಲ್ಲಿ ಪರಿಸರಕ್ಕೆ ಪೂರಕವಲ್ಲದ ಚಟುವಟಿಕೆಗಳಲ್ಲಿ ತೊಡಗಿಕೊಂಡು, ಹಾನಿ ಮಾಡುವವರಿಗೆ ಖುಷಿಯಾಗುವಂತೆ ನಡೆದುಕೊಂಡು, ಅವರ ಹಿತಾಸಕ್ತಿಗಳು ನಿರಾತಂಕವಾಗಿ ಕಾರ್ಯಗತವಾಗುವಂತೆ ಮತ್ತು ನಮ್ಮನ್ನು ಅವರುಗಳು ಅವರ ಮಿತ್ರರೆಂದೇ ಭಾವಿಸುವಂತೆ ಅವರೆಲ್ಲಾ ಮಾತುಗಳಿಗೆ ಸಮ್ಮತಿ ಸೂಚಿಸುವಂತೆ ತಲೆಯಾಡಿಸುತ್ತಾ, ಅವರಿಂದ ಯಾವುದಾದರೂ ಪ್ರಲೋಭನೆಗಳು ದೊರಕಬಹುದಾ ಎಂದು ನಿನ್ನೆಯವರೆಗೂ ಕಾಯುತ್ತಾ ಕುಳಿತಿರುವ ನಮಗೆ ನಮ್ಮ ಪರಿಸರ ಪೂರಕ ಆಶಯಗಳನ್ನು ಕಾರ್ಯರೂಪಕ್ಕೆ ತರಲು ಯಾವುದೇ ಸಾಧ್ಯತೆಗಳು ಗೋಚರಿಸುತ್ತಾ ಇಲ್ಲ.

ಒಬ್ಬೊಬ್ಬರದು ಒಂದೊಂದು ಹಿತಾಸಕ್ತಿ. ಸರ್ಕಾರೀ ನಿಯಮ ಮೀರಿ ಮನೆ ಕಟ್ಟಿದವರಿಂದ ಹಿಡಿದು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿದವರಿದ್ದಾರೆ. ಲಂಚ ಕೊಟ್ಟಾದರೂ ಕೆಲಸ ಮಾಡಿಸಿಕೊಳ್ಳುವವರಿಂದ ಹಿಡಿದು ತಾರಾತಿಕಡಿ ಗುತ್ತಿಗೆ ಮಾಡಿ ಜನರ ದುಡ್ಡಿಗೆ ನಾಮ ತಿಕ್ಕುವವರಿದ್ದಾರೆ. ಸರ್ಕಾರೀ ಕೃಪಾಪೋಷಿತ ಕಮಿಟಿಯಲ್ಲಿದ್ದು ಟೀಯೇಡೀಯೇ ಪಡೆಯುವವರಿಂದ ಹಿಡಿದು ಕಳ್ಳರಿಗೇ ಜೈಕಾರ ಹಾಕುತ್ತಲೇ ಬದುಕುವವರಿದ್ದಾರೆ. ಇಡೀ ವ್ಯವಸ್ಥೆಯೇ ಗಾಳಿ ಬಂದೆಡೆ ತೂರಿಕೊಳ್ಳುವ ಸರ್ವಸಮ್ಮತ ಅನುಕೂಲಸಿಂಧು ಹಾಗೂ ಯಾರಿಗೂ ಯಾರೂ ಉತ್ತರದಾಯಿತ್ವವಲ್ಲದ ಸೇಫ್‍ಮೋಡ್ ಅನ್ನು ಸ್ವಪ್ರೇರಣೆಯಿಂದಲೇ ಆಯ್ದುಕೊಂಡಿದ್ದಾರೆ. ಇದು ಸೋಲಲೇಬೇಕಾದ ಯುದ್ಧ. ನಮಗಿರುವುದು ಎರಡೇ ಆಯ್ಕೆ!! ಒಂದೋ ನಾವೂ ಗಾಳಿಯೊಡನೆ ತೂರಿಕೊಳ್ಳಬೇಕು, ಇಲ್ಲಾ ಕೈಗೆ ಆಯುಧ ತಗೋಬೇಕು. ಆದರೆ, ಆಯುಧ ಕೈಗೆ ತಗೊಳ್ಳೋದು ಯಾವ ವಿವೇಕಿಗಳನ್ನು ಉಳಿಸಲು ಅಂತ ಸಂದಿಗ್ಧವಿದೆ. ಆ ರಿಸ್ಕ್ ಹಾಗೂ ಕಾಳಜಿಗೆ ಅವರು ಅರ್ಹರಾ?? ಆಗಲಿರುವ ಫಲಿತಾಂಶದ ಅನುಕೂಲ ಪಡೆಯಲು ಸಿದ್ಧರಿರುವಂತೆಯೇ; ಆಗದೆಯೇ ಹೀಗೇ ಮುಂದುವರೆಯುವ ಈ ಯಲ್ಲಮ್ಮನ ಜಾತ್ರೇಲಿ ಐಸ್‍ಕ್ಯಾಂಡೀ ಕಡ್ಡಿ ಚೀಪಲು ಸಂಭ್ರಮದಿಂದ ಸಿದ್ಧರಿದ್ದಾರಿವರು.

ಈ ಒತ್ತುವರಿ ವೀರರು ಅರಣ್ಯ ಇಲಾಖೆಯ ಕೆಳಹಂತದ ನೌಕರರನ್ನು ಯಾವ ಯಾವ ರೀತಿ ಕಾಡಿದ್ದಾರೆ ಗೊತ್ತಾ? ಲಂಪಟ ಅಧಿಕಾರಿಗಳ ದೌರ್ಬಲ್ಯಗಳನ್ನೂ ಬಳಸಿಕೊಂಡಿದ್ದಲ್ಲದೇ ತಮ್ಮ ಕಾರ್ಯಸಾಧನೆಗೆ ಎಲ್ಲೆಲ್ಲಿಂದೆಲ್ಲಾ ಒತ್ತಡ, ಬೆದರಿಕೆ ತಂದು ಕಣ್ಣೆದುರು ಕಂಡ ಕಾಡಿಗೆಲ್ಲ ತಂತಿ ಸುತ್ತಿದ್ದೇ ಸುತ್ತಿದ್ದು!!!!

ಫಾರೆಸ್ಟಿನೋರು ಗಿಡ ಹಾಕ್ತಾರೆ ಅಂತ ಗಡಿಬಿಡೀಲಿ ನಮ್ಮ ಜನರನ್ನೆಲ್ಲಾ ಪ್ರಚೋದಿಸಿ ಸಿಕ್ಕಸಿಕ್ಕಲ್ಲಿ ಬೇಲಿ ಹಾಕಿಸಿ, ಗುಡ್ಲೆಬ್ಬಿಸಿ, ಫಾರೆಸ್ಟ್ ಲ್ಯಾಂಡಿಗೂ ಮತ್ತು ತಮ್ಮ ಒತ್ತುವರಿಯ ನಡುವೆ ಒಂದು ಬಫ್ಫರ್ ಪ್ರದೇಶ ನಿರ್ಮಿಸಿಕೊಂಡ ಪಟ್ಟಭಧ್ರರು. ಫಾರೆಸ್ಟ್ನೋರು ಕಿತ್ಕಂಡ್ರೆ, ಮೊದ್ಲು ಅವ್ರುದ್ನೇ ಕಿತ್ಕಂಡ್ಲಿ ಎಂದು ತಲತಲಾಂತರಗಳಿಂದ ತಮ್ಮ ಮನೆಯ ಜೀತ ಮಾಡ್ಕೊಂಡಿದ್ದವರನ್ನೆಲ್ಲಾ ಆ ಒತ್ತೆಯಾಳಿನ ರೂಪದಲ್ಲಾದರೂ ಆಸ್ತಿವಂತರನ್ನಾಗಿಸಿ, ಈಗ ಅಕಟಕಟಾ ಎಂದು ಊಳಿಡುತಿದ್ದಾರೆ. ಸ್ಮಶಾನಕ್ಕೆ, ಗೋಮಾಳಕ್ಕೆ, ಸ್ಕೂಲು ಕಟ್ಟಕ್ಕೆ ಜಾಗ ಇಲ್ಲದಂತಾಗಲು ಕಾರಣರಾದ ಈ ಒತ್ತುವರಿದಾರರು ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣ ಎಂದು ಅರಣ್ಯ ಇಲಾಖೆಯ ಕಡೆ ಬೆರಳು ತೋರಿಸುವ ಚಾಳಿಯನ್ನು ಮೊದಲು ಬಿಡಬೇಕು” ಎಂದ.

ಅಗತ್ಯವಾಗಿ ಆಗಬೇಕಿದ್ದ ವಿಪ್ಲವವೊಂದಕ್ಕೆ ವೇದಿಕೆಯೊಂದು ಹೊರಜಗತ್ತಿನ ಅರಿವಿಗೆ ಬಾರದಂತೆ ಮಲೆನಾಡಿನ ಮೂಲೆಯೊಂದರ ಅಜ್ಞಾತ ಹಾಗೂ ಅನಾಮಧೇಯ ಊರಿನಲ್ಲಿ ಸಿದ್ಧವಾಗುತಿತ್ತು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ