October 5, 2024

* ನಂದೀಶ್ ಬಂಕೇನಹಳ್ಳಿ

 

ಮಹಾಶಿವರಾತ್ರಿಗೆ ಒಂದಷ್ಟು ದಿನಗಳಿರುವಂತೆಯೇ ರಾಜ್ಯದ ವಿವಿದೆಡೆಗಳಿಂದ ಭಕ್ತಾಧಿಗಳು ಧರ್ಮಸ್ಥಳಕ್ಕೆ ಪಾದಯಾತ್ರೆ ಪ್ರಾರಂಭಿಸುತ್ತಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಗೋಣಿಬೀಡು, ಜನ್ನಾಪುರ ಮಾರ್ಗದಿಂದ ಪ್ರಾರಂಭವಾಗಿ ಮೂಡಿಗೆರೆ ಹ್ಯಾಂಡ್‌ಪೋಸ್ಟ್, ಬಣಕಲ್, ಕೊಟ್ಟಿಗೆಹಾರ ಮೂಲಕ ಚಾರ್ಮಾಡಿ ಘಾಟ್ ಮೂಲಕ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಸಾವಿರಾರು ಪಾದಯಾತ್ರಿಗರು ಸಾಗುತ್ತಾರೆ.

ಪಾದಯಾತ್ರಿಗರು ಸಾಗುವ ಹೆದ್ದಾರಿ ಹಾದುಹೋಗಿರುವ ಗ್ರಾಮಗಳ ಗ್ರಾಮಸ್ಥರು ಪಾದಯಾತ್ರಿಗಳಿಗೆ ಅನುಕೂಲ ಕಲ್ಪಿಸುವ, ಅಗತ್ಯ ವ್ಯವಸ್ಥೆ ಮಾಡುವ ಸೇವಾಮನೋಭಾವ ಗಮನ ಸೆಳೆಯುತ್ತದೆ.

ಬೆಂಗಳೂರು, ಮಂಡ್ಯ , ಕೋಲಾರ, ತುಮಕೂರು, ಚನ್ನರಾಯಪಟ್ಟಣ ಮುಂತಾದ ಕಡೆಗಳಿಂದ ಬರುವ ಪಾದಯಾತ್ರಿಗಳಿಗೆ ತಮ್ಮ ಮಿತಿಯಲ್ಲಿ ಏನೆಲ್ಲಾ ಮಾಡಬಹುದೋ ಆ ಸೇವೆಯನ್ನು ಇಲ್ಲಿನ ಸ್ಥಳೀಯರು ಎಷ್ಟೋ ವರ್ಷದಿಂದ ಸದ್ದಿಲ್ಲದೇ ಮಾಡಿಕೊಂಡು ಬರುತ್ತಿದ್ದಾರೆ.

ಹೆದ್ದಾರಿಯ ಬದಿ ಮನೆ ಇರುವವರು ತಮ್ಮ ಮನೆಗಳ ಎದುರು ನೆಳಲು ಮಾಡಿ ಪಾದಯಾತ್ರಿಗಳಿಗೆ ವಿಶ್ರಾಂತಿಗೆ ವ್ಯವಸ್ಥೆ ಮಾಡುತ್ತಾರೆ. ಕುಡಿಯುವ ನೀರಿಟ್ಟು ಬಿರು ಬಿಸಿಲಿನಲ್ಲಿ ನಡೆದು ಬಂದ ಜೀವದ ದಾಹ ತೀರಿಸುತ್ತಾರೆ. ಹಿಂದೂ ಮುಸ್ಲಿಂ ಬೇದವಿಲ್ಲದೆ ಇಲ್ಲಿನ ಯುವಕರು ಒಟ್ಟಾಗಿ ಪಾದಯಾತ್ರಿಗಳಿಗೆ ಮಜ್ಜಿಗೆ, ಪಾನಕ, ತಂಪುಪಾನೀಯ ನೀಡುತ್ತಾರೆ.

ನೂರಾರು ಊರುಗೋಲುಗಳನ್ನು ಮಾಡಿ ಪಾದಯಾತ್ರಿಗಳಿಗೆ ನೀಡುವುದು, ಅಂಬುಲೆನ್ಸ್ನಲ್ಲಿ ಅಸ್ವಸ್ಥಗೊಂಡ ಅನಾರೋಗ್ಯಪೀಡಿತರಾದ ಪಾದಯಾತ್ರಿಗರನ್ನು ಉಚಿತವಾಗಿ ತಾಲ್ಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವುದು, ನಡೆದು ನಡೆದು ಊದಿದ ಕಾಲುಗಳಿಗೆ ಹಚ್ಚಲು ಬೇಕಾದ ಮುಲಾಮು, ನೋವಿನ ಮಾತ್ರೆಗಳನ್ನು ಪಾದಯಾತ್ರಿಗಳಿಗೆ ಉಚಿತವಾಗಿ ಹಂಚುವುದು, ಸಾವಿರಾರು ಜನಕ್ಕೆ ಉಚಿತ ಬೋಜನದ ವ್ಯವಸ್ಥೆ ಕಲ್ಪಿಸುವುದು, ದೇವಸ್ಥಾನದ ಆವರಣ ಮತ್ತು ಮಸೀದಿ ಆವರಣದಲ್ಲಿ ಪಾದಯಾತ್ರಿಗಳಿಗೆ ಮಲಗಲು ವ್ಯವಸ್ಥೆ ಕಲ್ಪಿಸುವುದು -ಹೀಗೆ ಪಾದಯಾತ್ರಿಗರ ಸೇವೆಯಲ್ಲಿ ಎಲ್ಲಾ ಧರ್ಮದವರು ತೊಡಗುತ್ತಾರೆ. ಎಲ್ಲಿಂದಲೋ ಬಂದ ಭಕ್ತರ ನದಿ ದೈವಸಾಗರವ ಸೇರುವ ಈ ಯಾನದಲ್ಲಿ ಸ್ಥಳೀಯರ ಈ ಭಕ್ತಸೇವೆ ನಿಸ್ವಾರ್ಥವಾದದ್ದು.

ಪಾದಯಾತ್ರೆ ಪ್ರಾರಂಭವಾಗುವ ಕೆಲ ವಾರಗಳ ಮೊದಲು ಧರ್ಮಸ್ಥಳ ಕಡೆಗೆ ಸಾಗುವ ಹೆದ್ದಾರಿಯಲ್ಲಿರುವ ಗ್ರಾಮಗಳಲ್ಲಿ ಪಾದಯಾತ್ರಿಗಳ ತಂಡದ ಮುಖ್ಯಸ್ಥರು ಆಗಮಿಸಿ ಪಾದಯಾತ್ರೆಯ ವೇಳೆಯಲ್ಲಿ ಪಾದಯಾತ್ರಿಗಳು ಅನುಸರಿಸಬೇಕಾದ ಸೂಚನೆಗಳುಳ್ಳ ಸೂಚನಾ ಫಲಕಗಳನ್ನು ಅಲ್ಲಲ್ಲಿ ಅಳವಡಿಸುತ್ತಾರೆ. ಭಕ್ತಾಧಿಗಳು ರಸ್ತೆಯ ಎಡಬದಿಯಲ್ಲಿಯೆ ಸಂಚರಿಸಬೇಕು, ರಾತ್ರಿ ತಂಗಿದ ಸ್ಥಳದಲ್ಲಿ ಬೆಲೆಬಾಳುವ ವಸ್ತುಗಳ ಬಗ್ಗೆ ಜಾಗೃತಿ ವಹಿಸಬೇಕು. ರಾತ್ರಿ ವೇಳೆ ಪಾದಯಾತ್ರೆಯಲ್ಲಿ ಸಾಗುವಾಗ ಪ್ರತಿಫಲಕದ ಜಾಕೇಟ್ ಹಾಗೂ ಟಾರ್ಚ್ ಬಳಸುವುದು, ತಾವು ತಂದ ವಸ್ತುಗಳನ್ನು, ಪ್ಲಾಸ್ಟಿಕ್ ಮುಂತಾದ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು ಈ ತರದ ನೂರಾರು ಸೂಚನೆಗಳು ಆ ಸೂಚನಾಫಲಕಗಳಲ್ಲಿ ಇರುತ್ತದೆ. ಪ್ರತಿವರ್ಷ ಧರ್ಮಸ್ಥಳಕ್ಕೆ ಪಾದಯಾತ್ರೆ ಹೋಗುವ ಪಾದಯಾತ್ರಿಗಳಿಗೆ ಬೆಂಗಳೂರು ಕಡೆಯ ದಾನಿಗಳು ಕೊಟ್ಟಿಗೆಹಾರದಲ್ಲಿ ಊಟದ ವ್ಯವಸ್ಥೆ ಮಾಡುತ್ತಾರೆ. ಅಡುಗೆ ತಯಾರಿಸಲು ಬೇಕಾದ ಸೌಕರ್ಯಗಳನ್ನು ಕೊಟ್ಟಿಗೆಹಾರದ ಯುವಕರೆ ಮುಂದೆ ನಿಂತು ಮಾಡುತ್ತಾರೆ.

ಮೂಡಿಗೆರೆಯಲ್ಲಿ ಸಮಾಜಸೇವಾ ಮನೋಭಾವನೆಯ ತಂಡವೊಂದು ಕಳೆದ ಕೆಲ ವರ್ಷಗಳಿಂದ ಬಿದರಹಳ್ಳಿ ಕಾಫಿ ಕ್ಯೂರಿಂಗ್ ಆವರಣದಲ್ಲಿ ಬೃಹತ್ ಪ್ರಮಾಣದಲ್ಲಿ ಅನ್ನದಾನ, ಉಚಿತ ಆರೋಗ್ಯ ತಪಾಸಣೆ, ಪಾದಯಾತ್ರಿಗಳಿಗೆ ಉಪಚಾರ ನೀಡುತ್ತಾ ಬಂದಿದೆ.

ಅಪರಿಚಿತ ಊರುಗಳ ಮೂಲಕ ಹಾದು ಹೋದ ಹಾದಿಗಳಲ್ಲಿ, ನೂರಾರು ಕಿ.ಮಿ ನಡೆಯುತ್ತಾ ಬಿರುಬಿಸಿಲಿನಲ್ಲಿ, ರಾತ್ರಿಯಲ್ಲಿ, ಮುಂಜಾನೆಯ ಚಳಿಯಲ್ಲಿ ಸಾಗಿ, ರಾತ್ರಿ ಯಾರದೋ ಅಂಗಡಿ ಮುಂಗಟ್ಟುಗಳ ಬಾಗಿಲಲಿ,್ಲ ದೇವಸ್ಥಾನದ ಜಗಲಿಯಲ್ಲಿ ರಾತ್ರಿ ಮಲಗಿ, ಬೆಳಗೆದ್ದು, ನಂಬಿದೆ ನಿನ್ನ ನಾಗಾಭರಣ ಕಾಯೋ ಕರುಣಾಮಯನನ್ನ ಎಂದು ಶಿವನನ್ನು ಸ್ಮರಿಸುತ್ತಾ ಮತ್ತೆ ಯಾತ್ರೆ ಮುಂದುವರಿಸುತ್ತಾರೆ. ನಡೆದು ನಡೆದು ಕಾಲುಗಳೆರಡು ಊದಿ ಮುಂದೆ ಒಂದಡಿ ಇಡಲು ಕಷ್ಟವಾದಾಗಲೂ ನಿನ್ನಿ ನಾಮವೂ ಒಂದೆ ನೀಗಿಸಬಲ್ಲದು ಬಾಧೆ ಎಂದು ಶಿವನ ಮೇಲೆ ಭಾರ ಹಾಕಿ ಯಾತ್ರೆ ಮುಂದುವಸುತ್ತಾರೆ. ಚಾರ್ಮಾಡಿ ಘಾಟ್‌ನ ನಡುವೆ ಹಾದು ಹೋದ ಹೆದ್ದಾರಿಯಲ್ಲಿ ಮುಂಜಾನೆ ಬೆಳಗಾಗುವ ಮುಂಚೆಯೆ ಯಾತ್ರೆ ಹೊರಡುವ ಪಾದಯಾತ್ರಿಗರಿಗೆ ಹೆದ್ದಾರಿಯ ಇಬ್ಬದಿಯ ಕಾಡಿನ ನಡುವಿನ ಬಗೆಬಗೆಯ ಸದ್ದಿಗೆ ಎದೆಯಲ್ಲಿ ನಡುಕ. ಆದರೂ ಅವರನ್ನು ಮುನ್ನೆಡೆಸುವುದು ಅದೇ ಭಕ್ತಿಯ ಶಕ್ತಿ. ತನುಮನ ಜೀವನ ಪಾವನವಯ್ಯ ಶಂಭೋ ಎನ್ನಲು ಇಲ್ಲ ಭಯ ಎನ್ನುತ್ತಾ ಕಾಡ ಹಾದಿಯ ಕಳೆದು ಶಿವಸನ್ನಿದಿಗೆ ನಡೆದು ಹೋಗುವ ಪ್ರತಿ ಪಾದಯಾತ್ರಿಗನೊಳಗೂ ಶಿವನಿದ್ದಾನೆ.

ದೂರದ ಊರಿನಿಂದ ಹವಾನಿಯಂತ್ರಿತ ಕಾರಿನಲ್ಲಿ ಬಂದು ದೇವಸ್ಥಾನದ ಸಮೀಪವೇ ಕಾರಿನಿಂದ ಇಳಿದು ಸಾವಿರಾರು ರೂ ಕೊಟ್ಟು ವಿಶೇಷ ದರ್ಶನದ ಟಿಕೇಟ್ ಪಡೆದು ದೇವರ ದರ್ಶನ ಪಡೆಯುವವರ ನಡುವೆ ನೂರಾರು ಕಿ.ಮಿ ಪಾದಯಾತ್ರೆಯಲ್ಲಿ ನಡೆದು ದೇವಸ್ಥಾನದ ದೇವರ ದರ್ಶನದ ಸಾಲಿನಲ್ಲಿ ಬಳಲಿ ಬಸವಳಿದು ಗಂಟೆಗಟ್ಟಲೇ ಕಾದು ದೇವರ ದರ್ಶನ ಪಡೆಯುವಾಗ ಸಿಗುವ ಆತ್ಮತೃಪ್ತಿ, ಭರವಸೆ, ನೆಮ್ಮದಿ, ಪರಮಾನಂದ, ಪುಣ್ಯ ಅಕ್ಷಯ. ಆ ಪುಣ್ಯದಲ್ಲಿ ಪಾದಯಾತ್ರೆ ಹಾದಿಯುದ್ದಕ್ಕೂ ಅನ್ನ ಇಕ್ಕಿದವರ, ದಾಹ ನೀಗಿಸಿದವರ, ವಿಶ್ರಾಂತಿಗೆ ನೆರಳಾದವರಿಗೂ ಪಾಲಿದೆ.

ಬದುಕಿನ ಜಂಜಾಟದಲ್ಲಿ ಕಳೆದು ಹೋದವರು ಪಾದಯಾತ್ರೆಯಲ್ಲಿ ಕೆಲ ದಿನಗಳನ್ನು ತೊಡಗಿಸಿಕೊಂಡು, ಜೊತೆಗೆ ಹೆಜ್ಜೆ ಹಾಕಿದವರೊಡನೆ ತಮ್ಮ ಕಷ್ಟ ಸುಖಗಳನ್ನು ಹಂಚಿಕೊಂಡು ನಡಿಗೆಯಿಂದ ಪಾದಗಳು ನೋವಿನಿಂದ ಜುಮುಗುಡುತ್ತಿದ್ದರೂ ಅವುಡುಗಚ್ಚಿ ಮುಂದೆ ಸಾಗಿ ದೇವರ ದರ್ಶನ ಪಡೆದು ಹಿಂದಿರುಗಿದಾಗ ಬದುಕಿನ ಜಂಜಾಟಗಳ ಎದುರಿಸಲು ಬೇಕಾದ ಆತ್ಮವಿಶ್ವಾಸ, ಜೀವನೋತ್ಸಾಹ, ಭರವಸೆ ನೂರ‍್ಮಡಿಯಾಗಿರುತ್ತದೆ. ಆ ಕಾರಣದಿಂದಲ್ಲೆ ಇರಬೇಕು, ಒಂದು ವರ್ಷ ಪಾದಯಾತ್ರೆ ಬಂದವರೂ ನಡಿಗೆಯ ಆಯಾಸಕ್ಕೆ ಬಳಲದೇ ಮುಂದಿನ ಪ್ರತಿವರ್ಷವೂ ಪಾದಯಾತ್ರೆಗೆ ಹೋಗಲು ಮುಂದಾಗುವುದು. 5, 10, 15 ವರ್ಷಗಳಿಂದ ನಿರಂತರವಾಗಿ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಲ್ಲೆ ಇರುವುದು.

ಭಕ್ತಿಯ ಸಾಗರಕ್ಕೆ ಬಂದು ಸೇರುವ ಸಾವಿರಾರು ಭಕ್ತಪ್ರವಾಹ ಸಾರ್ಥಕ್ಯ ಪಡೆಯುವುದು ಭಗವಂತನ ದರ್ಶನದಿಂದ. ಪಾದಯಾತ್ರೆ ಸಾಗಿ ಬರುವ ಮಾರ್ಗದ ಗ್ರಾಮಗಳ ಸ್ಥಳೀಯರು ಭಗವಂತನನ್ನು ಕಾಣುವುದು ಪಾದಯಾತ್ರೆಗೆ ಬರುವ ಭಕ್ತರ ಸೇವೆಯಿಂದ. ನಿಜಶಿವನ ಸೇವೆ ಎಂದರೆ ಇದೆ ಅಲ್ಲವೇ ?

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ