October 5, 2024

ಧನಂಜಯ ಜೀವಾಳ
ಮೂಡಿಗೆರೆ
ಮೊ : 9448421946

ದೇವಪ್ಪ ಹೇಳಿದ ದಾರಿಯಲ್ಲೇ ಸ್ವಲ್ಪದೂರ ನಡೆದ ನನಗೆ ದಟ್ಟ ಅರಣ್ಯವೊಂದು ಎದುರಾಯ್ತು. ಆಕಾಶದೆತ್ತರಕ್ಕೆ ತಲೆಎತ್ತಿದ ಮರಗಳು ಇನ್ನೂ ಬೆಳಗಿನ ಇಬ್ಬನಿಯ ಹನಿಗಳನ್ನು ಅಷ್ಟೆತ್ತರದಿಂದ ಥಟ್ ಥಟ್ ಎಂದು ಬೀಳಿಸುತ್ತಿದ್ದವು. ಚಿಕ್ಕ ಕಾಲ್ದಾರಿಯೊಂದು ಹಳ್ಳದವರೆಗೆ ಕಾಣುತ್ತಿತ್ತು. ಅದರಲ್ಲೇ ಮುಂದುವರೆದಂತೆ ನನಗೆ ದೊಡ್ಡಹಳ್ಳದ ದಡದಲ್ಲಿದ್ದ ಬೃಹತ್ ಬಂಡೆಗಳು ಎದುರಾದವು. ಹಳ್ಳದ ನೀರಿನಲ್ಲಿ ಮುಖ ತೊಳೆದುಕೊಂಡು ಬಂಡೆಗಳೆಡೆಯಲ್ಲಿ ದಾರಿಮಾಡಿಕೊಂಡು ವಿಸ್ತಾರವಾದ ಕಲ್ಲೊಂದನ್ನು ಏರಿ ತಲೆ ಎತ್ತಿದಾಗ ಕಂಡಿದ್ದು ಕಲ್ಲಿನ ಬೃಹದಾಕಾರದ ಕಂಬಗಳ ಸೇತುವೆಯ ಮೇಲೆ ಗಾಂಭೀರ್ಯತೆಯಿಂದ ಪವಡಿಸಿದ್ದ ರೈಲು ಹಳಿಗಳು.

ನಮ್ಮ ಚಾರಣದ ಎರಡನೆಯ ದಿನ ಅದು. ನಾವು ತಂಗಬೇಕಿದ್ದ ಎಡಕುಮರಿ ರೈಲುನಿಲ್ದಾಣದ ಪಾಳುಬಿದ್ದ ಕಟ್ಟಡವನ್ನು ಸಂಜೆ ಕತ್ತಲಾಗುತ್ತಾ ಬಂದರೂ, ನಮಗೆ ತಲುಪಲಾಗಲಿಲ್ಲ. ಆ ದಿನ ಮಧ್ಯಾಹ್ನ ನಮ್ಮ ತಂಡದಲ್ಲಿದ್ದ ಮಧ್ಯ ವಯಸ್ಕರೊಬ್ಬರಿಗೆ ಹಿಮ್ಮಡಿನೋವು ಕಾಣಿಸಿಕೊಂಡಿತ್ತು. ಯಾರನ್ನೂ ಹಿಂದೆ ಬಿಟ್ಟು ಇತರರು ಮುಂದೆ ಹೋಗಲು ಸಾಧ್ಯವಿರಲಿಲ್ಲ. ಹಾದಿಯಲ್ಲಿನ ರೈಲ್ವೇ ಕಂಬಿಗಳು ಮುಚ್ಚಿಹೋಗುವಂತೆ ಕಾಡು ಸಸ್ಯಗಳು, ಸಣ್ಣಗಾತ್ರದ ಮರಗಳು ಬೆಳೆದು ನಿಂತಿದ್ದವು. ಹಲವೆಡೆ ಬಳ್ಳಿಗಳು ಇಡೀ ರೈಲು ಸೇತುವೆಯನ್ನೇ ಆವರಿಸಿಕೊಂಡಿದ್ದವು. ಕಂಬಿಗಳ ಸಂದಿಯಲ್ಲಿ ಈವರೆಗೂ ಕಂಡಿರದಂಥಾ ಹಾವುಗಳು ಸುರುಳಿ ಸುತ್ತಿಕೊಂಡೋ, ಸಳಸಳನೆ ಹರಿದಾಡಿಕೊಂಡೋ ಗಾಬರಿ ಹುಟ್ಟಿಸುತಿದ್ದವು. ಪ್ರತೀ ಹೆಜ್ಜೆಯನ್ನೂ ಅತೀವ ಎಚ್ಚರಿಕೆ ಹಾಗೂ ಆತಂಕದಿಂದ ಇಡಬೇಕಿತ್ತು. ರೈಲುಮಾರ್ಗದ ಮೇಲೆಯೇ ನಡೆಯಬೇಕಿದ್ದರಿಂದ ಒಂದು ನಿರ್ದಿಷ್ಟ ಅಂತರದ ನಡಿಗೆಯನ್ನೇ ಪಾಲಿಸಬೇಕಿತ್ತು. ರೈಲು ಹಳಿಯಡಿಯ ಕುಂಬಾಗಿ ಲಡ್ಡಾಗಿದ್ದ ಮರದ ಪಟ್ಟಿಗಳು, ಆ ಮರದ ಪಟ್ಟಿಯ ಸಂದಿಯಲ್ಲಿದ್ದ ಚೇಳು-ಹಾವುಗಳು ನಗರದಿಂದ ಚಾರಣ ಬಂದವರಿರಲಿ, ಹಳ್ಳಿಗಾಡಿನ ನನ್ನಂಥವನನ್ನೂ ದಿಗಿಲಿಗೆ ನೂಕಿದ್ದವು. ನಮ್ಮ ನಡಿಗೆಯ ಸದ್ದಿಗೆ ಆ ವಿಷಜಂತುಗಳು ದೂರ ಹೋಗಲಿ ಎಂದು ಹೆಜ್ಜೆಯನ್ನು ಎತ್ತಿಎತ್ತಿ ದಢ್‍ದಢ್ ಎಂದು ನೆಲಕ್ಕೆ ಬಡಿಯುತ್ತಿದ್ದೆವು. ಮಾರುದ್ದದ ಕೋಲಿನಿಂದ ರೈಲ್ವೇ ಕಂಬಿಯನ್ನು ಕುಟ್ಟಿ ಸದ್ದು ಮಾಡುತ್ತಾ ಸಾಗುತಿದ್ದೆವು. ಅಲ್ಲಲ್ಲಿ ಸಿಗುತ್ತಿದ್ದ ಸುರಂಗಗಳು ನಮ್ಮ ಆತಂಕ-ಭಯವನ್ನು ಇನ್ನೂ ಹೆಚ್ಚು ಮಾಡುತಿದ್ದವು. ನೂರಾರು ಮೀಟರ್ ಉದ್ದವಿದ್ದ ಸುರಂಗಗಳು ಕತ್ತಲೆಯ ಕೂಪಗಳಾಗಿದ್ದವಲ್ಲದೇ, ಸಾವಿರಾರು ಬಾವಲಿಗಳ ಆಶ್ರಯ ತಾಣವೂ ಆಗಿದ್ದವು. ಬೆಟ್ಟಗುಡ್ಡಗಳ ನೂರಾರು ಅಡಿ ತಳದಲ್ಲಿ ಭೂಗರ್ಭದೊಳಗೆ ಹಾದುಹೋಗುವ ಈ ಸುರಂಗಗಳೊಳಗೆ ನಡೆಯುತ್ತಾ ಒಮ್ಮೆ ನುಸುಳಿದರೆ ಹೊರಬರಲು ಹತ್ತು ನಿಮಿಷದಿಂದ ಇಪ್ಪತ್ತೈದು ನಿಮಿಷಗಳೇ ಬೇಕಿತ್ತು. ಬಾವಲಿಗಳ ಉಚ್ಚಿಷ್ಠದ ಮುಗ್ಗಲು ವಾಸನೆ, ಸುರಂಗದ ನೆತ್ತಿಯ ಮೇಲಿಂದ ಥಟ್ ಥಟ್ಟೆಂದು ಜಿನುಗುವ ನೀರ ಹನಿಗಳು, ಸುರಂಗದ ಒಳಬದಿಯ ಎರಡೂ ಮಗ್ಗುಲಲ್ಲಿನ ಚರಂಡಿಯಲ್ಲಿ ಹರಿಯುವ ತೆಳುವಾದ ನೀರ ಹರಿವು, ಕಂಬಿಗಳ ಸಂದಿಯಲ್ಲಿ ಸುತ್ತಿಕೊಂಡು ಮಲಗಿರಬಹುದಾದ ಉರಗಗಳು, ಇನ್ನೇನು ಮುಖಕ್ಕೆ ಬಡಿದೇ ಬಿಡುತ್ತವೆ ಎಂದು ಗಾಬರಿ ಹುಟ್ಟಿಸುವ ಬಾವಲಿಗಳು, ದೂರದಲ್ಲೆಲ್ಲೋ ಸುರಂಗದ ಕೊನೆ ಇದೆ ಎಂಬುದಕ್ಕೆ ಭರವಸೆಯಾಗಿ ಕಾಣುವ ಕ್ಷೀಣವಾದ ಬೆಳಕು. ನಮ್ಮ ದನಿಯೇ ನಮಗೆ ಅಪರಿಚಿತವಾಗಿಬಿಡುವ ನೀರವ ಕತ್ತಲು, ಸುರಂಗ ಒಳ ಹೊಕ್ಕೊಡನೆ ಸುರಂಗದ ಎರಡೂ ಬದಿಯ ಬೆಟ್ಟ ಜರುಗಿದರೆ ಶಾಶ್ವತವಾಗಿ ಜೀವಂತಸಮಾಧಿಯಾಗುವ ಭೀಬತ್ಸ ಕಲ್ಪನೆಯ ಭಯವಿಹ್ವಲತೆ.

ಅಂತೂ ಇಂತೂ ಅಂದು ತಂಗಲು ನಿಗದಿಯಾಗಿದ್ದ ಪಾಳುಬಿದ್ದ ರೈಲ್ವೇ ಸ್ಟೇಷನ್ನನ್ನು ತಲುಪಿದಾಗ ಕತ್ತಲು ಕವಿದು, ಅತ್ತ ಸಂಜೆಯೂ ಅಲ್ಲದ ಇತ್ತ ರಾತ್ರಿಯೂ ಅಲ್ಲದ ಏಳೂಕಾಲು ಗಂಟೆಯಾಗಿತ್ತು. ನಮ್ಮ ಚಾರಣ ನಿರ್ದೇಶಕರ ಲೆಕ್ಕಾಚಾರ ತಪ್ಪಿಹೋಗಿ ಚಾರಣಿಗರೆಲ್ಲಾ ಒಂದು ಸಾರಿ ತಂಗುವ ಸ್ಥಳ ತಲುಪಿದರೆ ಸಾಕೆಂದು ಹಲ್ಲುಮುಡಿ ಕಚ್ಚಿ ಆ ಮಬ್ಬುಗತ್ತಲಲ್ಲೇ ಅಸಡಾ ಬಸಡಾ ಹೆಜ್ಜೆ ಹಾಕುತ್ತಾ ತತ್ತರಿಸುತ್ತ ನಡೆದು ಹೈರಾಣಾಗಿದ್ದೆವು. ವರ್ಷಗಳ ಕಾಲ ಯಾರೂ ಓಡಾಡದೇ, ನಿರ್ಮಾನುಷವಾಗಿದ್ದ ರೈಲು ನಿಲ್ದಾಣ ಭೂತಬಂಗಲೆಯನ್ನು ನೆನಪಿಸುತಿತ್ತು. ನೆಲದ ಸಿಮೆಂಟ್ ಕಿತ್ತು ಹೋದಲ್ಲಿ ಆಳೆತ್ತರದ ಕಾಡುಗಿಡಗಳು, ಕುಂಭದ್ರೋಣ ಮಳೆಯಾಗುವ ಪ್ರದೇಶವಾದ್ದರಿಂದ ಗೋಡೆಗಳ ಮೇಲೂ ರತ್ನಗಂಬಳಿಯನ್ನು ನೆನಪಿಸುವಷ್ಟು ದಪ್ಪದ ಹಾವಸೆಯ ಹೊದಿಕೆ. ಆ ಹಸಿರು ಹೊದಿಕೆಯ ಮೇಲೆ ನಯವಾಗಿ ತೆವಳುತ್ತಾ ಹರಿದಾಡುವ ಚಿತ್ರವಿಚಿತ್ರ ಎಳನಾಗರ ಮಾದರಿಯ ಹುಳುಗಳು, ನಿಲ್ದಾಣದ ನೆಲಕ್ಕಂಟಿಕೊಂಡಿದ್ದ ಕೌದಿಯಷ್ಟು ದಪ್ಪದ ಪರ್ಣಹಾಸು. ಅಲ್ಲೆಲ್ಲೋ ಮೂಲೆಯಲ್ಲಿನ ಪ್ರಯಾಣಿಕರು ವಿಶ್ರಮಿಸಲು ಹಾಕಿದ್ದ ತುಕ್ಕು ಹಿಡಿದು ಸೊರಗಿದ್ದ ಕಬ್ಬಿಣದ ಒರಗು ಬೆಂಚಿನ ಕಾಲ ಬುಡದಲ್ಲಿ ಎಂದೋ ಕಳಚಿ ಹೋಗಿದ್ದ ಹಾವಿನ ಪೊರೆ….. ಹೀಗೆ ವಿಶ್ರಮಿಸಿ, ನಿದ್ರೆಮಾಡಿ, ರಾತ್ರಿ ಕಳೆಯಲು ಯಾವುದೇ ರೀತಿಯಲ್ಲೂ ಪ್ರಶಸ್ತವಲ್ಲದ ಜಾಗದಲ್ಲಿ ಕ್ಯಾಂಪ್ ಮಾಡುವುದೆಂದು ತಂಡದ ನಾಯಕ ಆನಂದ್ ಹೇಳಿದಾಗ ಎಲ್ಲರಿಗೂ ದಿಗಿಲಾಯ್ತು. ಸುತ್ತಲೆಲ್ಲಿ ನೋಡಿದರೂ ಅದಕ್ಕಿಂತ ಸುರಕ್ಷಿತ ಪ್ರದೇಶ ಕಾಣದ್ದರಿಂದ ಹಾಗೂ ಬೇರೊಂದು ಜಾಗ ಹುಡುಕಲು ಯಾರಿಗೂ ತಾಕತ್ತೂ ಉಳಿದಿರದಿದ್ದುದರಿಂದ ಎಲ್ಲರೂ ಗಪ್‍ಚುಪ್ಪಾದೆವು.

ಆಗತಾನೆ ಮಾರುಕಟ್ಟೆಗೆ ಬರುತ್ತಲಿದ್ದ, ನಮ್ಮೆಲ್ಲರಿಗೂ ಸೋಜಿಗದ ವಸ್ತುವಾಗಿದ್ದ ಸೋಲಾರ್ ಲೈಟನ್ನು ಬೆಳಕಿಗಾಗಿ ಉರಿಸಲಾಯ್ತು. ಎಲ್ಲರಿಗೂ ವಿಪರೀತ ಹಸಿವು ತಿನ್ನಲು ಏನಾದರೂ ಸಿಕ್ಕರೆ ಸಾಕು, ಒಂದಷ್ಟು ತಿಂದು ಈ ಪ್ರಪಂಚವನ್ನೇ ಮರೆತುಹೋಗುವಂತೆ ಮರಣನಿದ್ರೆ ಮಾಡೋಣವೆಂದುಕೊಂಡವರಿಗೆ ಅಡುಗೆಗೆ ನೀರು ತರಬೇಕೆಂಬ ವಿಷಯ ಅರಿವಿಗೆ ಬಂದಿತು. ದಾರಿಯುದ್ದಕ್ಕೂ ನೀರಿನ ಝರಿಗಳು, ಹರಿಯುವ ಹಳ್ಳಗಳನ್ನು ಕಂಡು ಕೈಕಾಲು ಮುಖ ತೊಳೆದುಕೊಂಡು, ಬಾಟಲಿಗೆ ತುಂಬಿಸಿಕೊಂಡು ಬಂದಿದ್ದವರಿಗೆ ಸಂಜೆ ನಾಲ್ಕರ ನಂತರ ಯಾವುದೇ ತೊರೆ, ಹಳ್ಳಗಳು ಎದುರಾಗದಿದ್ದುದು ಅರಿವಿಗೇ ಬಂದಿರಲಿಲ್ಲ. ನಡೆಯುತ್ತಾ ನಡೆಯುತ್ತಾ ನೀರಿನ ಮೂಲವಿಲ್ಲದ ಬಂಜರು ಪ್ರದೇಶವನ್ನು ಪ್ರವೇಶಿಸಿಬಿಟ್ಟಿದ್ದೆವು. ನೀರಿನ ಬಾಟಲಿಗಳ ನೀರು ಅಷ್ಟೊತ್ತಿಗೆ ತಳಕಂಡು ಗಂಟೆಗಳೇ ಕಳೆದಿದ್ದವು. ಜೊತೆಯಲ್ಲಿದ್ದವರ ಬಾಟಲಿ ನೀರಿಗೆ ಅಂಗಲಾಚಿ ಕುಡಿದು ತಂಗುದಾಣದ ನಿರೀಕ್ಷೆಯಲ್ಲಿ ಲಗುಬಗೆಯಿಂದ ನಡೆಯುತ್ತಾ ಆತಂಕ, ಹಸಿವು, ಬಾಯಾರಿಕೆ, ಕತ್ತಲೆಯ ಅವ್ಯಕ್ತ ಭಯ, ಹಳಿಗಳ ಸಂದಿಯಲ್ಲಿನ ಹಾವುಗಳ ಭೀತಿಯಲ್ಲಿ ಆ ಪಾಳುಬಿದ್ದ ನಿಲ್ದಾಣವನ್ನು ತಲುಪಿದ್ದೆವು. ಆ ರಾತ್ರಿಯ ನೀರವತೆಯಲ್ಲಿ ಹಸಿವಿನಿಂದ ಕಂಗೆಟ್ಟಿದ್ದ ನಾವು ನೀರಿನ ಮೂಲವನ್ನು ಗುರುತಿಸುವ ಸಲುವಾಗಿ ನಿಲ್ದಾಣದ ಸುತ್ತಲೂ ನಿಶ್ಯಬ್ಧತೆಯಿಂದ ನಿರುಕಿಸಿದೆವು. ಎಲ್ಲಾದರೂ ನೀರು ಹರಿಯುವ, ಸುರಿಯುವ, ತೊಟ್ಟಿಕ್ಕುವ ಸದ್ದು ಕೇಳುವುದೇ ಎಂದು ಕಿವಿಯ ಮೂಲಕ ತನಿಖೆ ಮಾಡಲಾರಂಬಿಸಿದೆವು. ಏನೂ ಪ್ರಯೋಜನವಾಗಲಿಲ್ಲ ಕಿವಿ ಗಡಚಿಕ್ಕುವಂಥಾ ಜೀರುಂಡೆಗಳ ಸದ್ದು ಬಿಟ್ಟರೆ ಬೇರೇನೂ ಕೇಳಿಸಿಕೊಳ್ಳಲಾಗದೇ ಒಬ್ಬರೆಡೆಗೊಬ್ಬರು ಅಸಹಾಯ ದೃಷ್ಟಿ ಬೀರಿದೆವು. ಸರಿ, ಈಗ ತಂಡದ ಹದಿನೈದಿಪ್ಪತ್ತು ಮಂದಿಯ ರಾತ್ರಿಯ ಊಟಕ್ಕೆ ಏನಾದರೂ ವ್ಯವಸ್ಥೆ ಮಾಡಲೇಬೇಕಿತ್ತು. ರಾತ್ರಿಯ ಹೊತ್ತಲ್ಲಿ ಹೆಡ್‍ಲೈಟಿನ ಶಿಕಾರಿಗೆ ಹೋಗಿ ಅನುಭವವಿದ್ದ ನಾನು ನನ್ನ ಬ್ಯಾಗಿನಲ್ಲಿದ್ದ ಮೊಳದುದ್ದದ ಕತ್ತಿ ಹಾಗೂ ಮೂರು ಸೆಲ್ಲಿನ ಎವರೆಡಿ ಟಾರ್ಚನ್ನು ಹಿಡಿದು ಯಾರಾದ್ರೂ ಇಬ್ಬರು ನನ್ನ ಜೊತೆ ಬನ್ನಿ ಎಂದೆ. ಹಲವರು ಆ ಕತ್ತಲಲ್ಲಿ ಹಾಗೂ ಆ ಅಪರಿಚಿತ ಜಾಗದಲ್ಲಿ ಆ ಹೊತ್ತಿನಲ್ಲಿ ನೀರು ಹುಡುಕಿ ತರುವ ಸಾಹಸಕ್ಕೆ ಉತ್ಸಾಹ ತೋರಲಿಲ್ಲ. ನನ್ನ ವೀರಪ್ಪನ್ ಲುಕ್ ನೋಡಿ ಸ್ಪೂರ್ತಿ ಪಡೆದ ತಿಪಟೂರಿನ ರಂಗಸ್ವಾಮಿ, ಬೆಂಗಳೂರಿನ ವಿನಯ್ ಹಾಗೂ ದಾವಣಗೆರೆಯ ಸತೀಶ್ ನಡೀರಿ ನೀರನ್ನು ತಂದೇ ತರೋಣ ಎಂದು ಸಿದ್ಧವಾಗೇಬಿಟ್ಟರು. ಗಂಜಿಅನ್ನ ಮಾಡುವ ಪಾತ್ರೆ, ಐದು ಲೀಟರ್ ಸಾಮಥ್ರ್ಯದ ಒಂದು ನೀರಿನ ಕ್ಯಾನು, ಒಂದು ಬ್ಯಾಗಿನಲ್ಲಿ ನಾಲ್ಕಾರು ದೊಡ್ಡಗಾತ್ರದ ನೀರಿನ ಬಾಟಲಿಗಳನ್ನು ತುಂಬಿಕೊಂಡು ಹೊರಟೆವು.
ಆಳೆತ್ತರ ಬೆಳೆದಿದ್ದ ಹುಲ್ಲು ರೈಲುಕಂಬಿಗಳನ್ನೇ ನುಂಗಿ ಅಗಾಧವಾಗಿ ಬೆಳೆದಿತ್ತು. ಎಷ್ಟು ಪ್ರಯತ್ನಿಸಿದರೂ ಟಾರ್ಚಿನಿಂದ ಮಾರುದೂರಕ್ಕೂ ಬೆಳಕು ಚೆಲ್ಲಲು ಸಾಧ್ಯವಿರಲಿಲ್ಲ. ಒಂದು ಕೈಯಲ್ಲಿ ಕತ್ತಿಯಿಂದ ಹುಲ್ಲನ್ನು ಬದಿಗೆ ಸರಿಸುತ್ತಾ ಇನ್ನೊಂದು ಕೈಯಿಂದ ಟಾರ್ಚಿನ ಬೆಳಕನ್ನು ಹರಿಸುತ್ತಾ ಗೊತ್ತುಗುರಿಯಿಲ್ಲದೇ ಪಶ್ಚಿಮಘಟ್ಟದ ಅಬೇಧ್ಯ ಕಾಡಿನ ನಡುವೆ ಆ ನಟ್ಟಿರುಳಿನಲಿ ಅಡುಗೆಗೆ ನೀರನ್ನರಸುತ್ತಾ ನಡೆದದ್ದನ್ನು ನೆನೆಸಿಕೊಂಡರೆ; ಈಗ, ಹೀಗೂ ಆಗುತ್ತದೆಯಾ? ಎಂದು ಆಶ್ಚರ್ಯವಾಗುತ್ತದೆ. ಆಳೆತ್ತರದ ಒಣ ಹುಲ್ಲಿನ ನಡುವೆ ಸರಬರ ಜರಬರ ಸದ್ದು ಮಾಡುತ್ತಾ ನಡೆಯುತಿದ್ದರೆ ನೀರಿನ ಮೂಲ ಪಕ್ಕದಲ್ಲಿದ್ದರೂ ಗ್ರಹಿಸಲು ಕಷ್ಟವೆಂದರಿತು ಕೆಲಕಾಲ ಸದ್ದಿಲ್ಲದೇ ನಿಂತು ಎಲ್ಲಾದರೂ ನೀರ ಹರಿವಿನ ಸದ್ದು ಕೇಳುವುದೇ ಎಂದು ಮೈಯೆಲ್ಲಾ ಕಿವಿಯಾದೆವು. ಅಲ್ಲೆಲ್ಲೋ ದೂರದಲ್ಲಿ ಪ್ರಪಾತದ ಬುಡದಲ್ಲಿರಬಹುದು ನೀರು ಸಳಸಳನೆ ಚಲಿಸುತ್ತಿರುವ ಮಂಜುಳ ನಿನಾದ ಕಿವಿಗೆ ಬಿದ್ದಿತು. ನಾನು ನಿಂತಿದ್ದ ಸ್ಥಳದಿಂದ ಬಲಕ್ಕೆ ಕೆಂಜಿಗೆ ಮುಳ್ಳಿನ ಜಿಗ್ಗಿನಾಚೆಗಿನ ಅಬೇಧ್ಯ ಕಗ್ಗಾಡಿನ ಆಳದಲ್ಲೆಲ್ಲೋ ನೀರು ಹರಿಯುತ್ತಿರುವ ಸದ್ದು ಆ ಜೀರುಂಡೆ ಸದ್ದಿನ ನಡುವೆಯು ತೇಲಿಬಂದು ನಮ್ಮ ಬಾಯಾರಿಕೆಯನ್ನು ಆರ್ಧದಷ್ಟು ತಣಿಸಿತು. ಸುತ್ತಿ ಬಳಸಿ ಮುಳ್ಳುಕಂಟಿಗಳಿಂದ ಮುಂಗೈ, ಮೊಣಕೈಗಳನ್ನು ಗೀರು ಗಾಯ ಮಾಡಿಸಿಕೊಂಡು, ಎರಡ್ಮೂರು ಬಾರಿ ಆ ಕತ್ತಲಲ್ಲೇ ಜಾರಿ, ಎಡವಿ, ಮುಗ್ಗರಿಸಿ ಬಿದ್ದು ನುಗ್ಗುನುಗ್ಗಾದೆವು. ಅಂತೂ ನೀರು ನಮ್ಮ ಕಣ್ಣಿಗೆ ಕಾಣಿಸುವಷ್ಟು ದೂರಕ್ಕೇ ಹೋದೆವು. ಆ ಒತ್ತಾಗಿ ಬೆಳೆದಿದ್ದ ಗಿಡಗಳ ನಡುವೆ ನೀರು ಹರಿಯುತ್ತಿದ್ದುದು ದೂರದಿಂದಲೇ ಕಾಣಿಸುತಿತ್ತು. ಮೂರು ಸೆಲ್ಲಿನ ಟಾರ್ಚ್ ಬೆಳಕನ್ನು ನೀರಿನಮೇಲೆ ಬಿಟ್ಟಾಗ ಅದರ ಪ್ರತಿಫಲನ ಮುಗಿಲೆತ್ತರದ ಮರಗಳ ಛತ್ರಿಯ ಒಳಭಾಗದಲ್ಲಿ ಮೂಡಿ ಆ ಮರದ ಯಾವುದೋ ರೆಂಬೆಗಳಲ್ಲಿ ಕುಳಿತು ತೂಕಡಿಸುತಿದ್ದ ಬೃಹದಾಕಾರದ ಗೂಬೆಯೊಂದು ತನ್ನ ಅಗಾಧ ವಿಸ್ತಾರದ ರೆಕ್ಕೆಗಳನ್ನು ಬಿಚ್ಚಿಕೊಂಡು ನಮ್ಮತ್ತಲೇ ಹಾರಿ, ಮತ್ತಾವುದೋ ಮರದ ರೆಂಬೆಯನ್ನರಸುತ್ತಾ ಆ ಅನಂತ ಕತ್ತಲೆಯಲ್ಲಿ ಲೀನವಾಯಿತು.

ಆ ಗೂಬೆಯ ಹರವಿದ ರೆಕ್ಕೆಯ ರಪಾರಪಾ ಸದ್ದು ಮತ್ತು ಅದು ನಮ್ಮೆಡೆಗೇ ದಾವಿಸಿ ಬಂದದನ್ನು ನೋಡಿ ಗಾಬರಿಗೊಂಡ ನಾವು ನಮಗರಿವಿಲ್ಲದೆಯೇ ಸಣ್ಣ ಚೀತ್ಕಾರದೊಂದಿಗೆ ಕಂಪಿಸಿಬಿಟ್ಟೆವು. ಗುಂಪಿನ ನಾಯಕನಾಗಿದ್ದ ಹಾಗೂ ವೀರಪ್ಪನ್ ಗೆಟಪ್ ತೋರಿಸಿದ್ದ ನಾನು, ಆಗಿದ್ದ ಪೋಡಿಗೆಯನ್ನು ತೋರಿಸಿಕೊಳ್ಳದೇ “ಬನ್ನಿ ಬನ್ನಿ ಇಂಥದ್ದನ್ನೆಲ್ಲ ನಾ ಎಷ್ಟು ನೋಡಿಲ್ಲ” ಎಂದು ಹೇಳಿ ನೀರಿನ ಸಮೀಪಕ್ಕೆ ಹೋಗಲು ಅವಕಾಶಗಳಿವೆಯಾ ಎಂದು ಟಾರ್ಚಿನ ಬೆಳಕಿನಲ್ಲೇ ಲೆಕ್ಕ ಹಾಕತೊಡಗಿದೆ. ನಮ್ಮ ಗುಂಪಿನಲ್ಲಿದ್ದ ರಂಗಸ್ವಾಮಿಗೆ “ನಾನಿಲ್ಲೆ ನಿಂತು ಟಾರ್ಚ್ ಹಾಕುತ್ತೇನೆ, ನೀನು ಹಾಗೇ ಆ ಬೆಳಕನ್ನು ಅನುಸರಿಸಿಕೊಂಡು ನೀರಿನ ಬಳಿ ಹೋಗಲು ಸಾಧ್ಯವಾ ಪ್ರಯತ್ನಿಸು”ಎಂದೆ. ‘ಓಕೆ ಓಕೆ’ ಎಂದ ರಂಗಸ್ವಾಮಿ ನನ್ನ ಕೈಯಿಂದ ಕತ್ತಿಯನ್ನು ತೆಗೆದುಕೊಂಡು ನಿಧಾನವಾಗಿ ಆ ಕೊರಕಲಿನ ಇಳಿಜಾರಿನಲ್ಲಿ ಗಿಡಗಂಟಿಗಳ ಬುಡ ಹಾಗೂ ಮಣ್ಣು ಸಡಿಲಾಗಿ ಬೇರು ಹೊರಬಂದಿದ್ದವನ್ನೇ ಹಿಡಿದುಕೊಂಡು ಮೈಯೆಲ್ಲಾ ಕಣ್ಣಾಗಿ ಒಂದೊಂದೇ ಹೆಜ್ಜೆಯನ್ನಿಡುತ್ತಾ ಎಚ್ಚರಿಕೆಯಿಂದ ಇಳಿಯತೊಡಗಿದ. ಅವ ಶಿಲಾರೋಹಿಯೊಬ್ಬ ಕಡಿದಾದ ಕಲ್ಲಿನ ಬಿರುಕೊಂದರೊಳಗೆ ಹಗ್ಗಗಳ ಸಹಾಯದಿಂದ ಜೇಡ ಹರಿದಾಡಿದಂತೆ ಚಲಿಸುತಿದ್ದರೆ ಮೇಲಿದ್ದ ನಾವು ಮೂವರೂ ಉಸಿರು ಬಿಗಿಹಿಡಿದು ಆ ಅಸೀಮ ಸಾಹಸವನ್ನು ನೋಡುತಿದ್ದೆವು. ಯಾಕೋ ನನಗೆ “ಈ ರೀತಿ ಕಷ್ಟದಿಂದ ಕೆಳಗಿಳಿದು ನೀರಿನ ಮೂಲ ತಲುಪುವುದೇನೋ ಸರಿ, ಆದರೆ ಅಲ್ಲಿಂದ ನಮ್ಮ ಅಗತ್ಯದಷ್ಟು ನೀರನ್ನು ಮೇಲಕ್ಕೆ ತರಲು ಸಾಧ್ಯವೇ?” ಎಂಬ ಗುಮಾನಿ ಮೂಡತೊಡಗಿತು. ಏನನ್ನೋ ತೀರ್ಮಾನಿಸಿದವನಂತೆ “ರಂಗಸ್ವಾಮಿ, ಮೇಲೆ ಬಾ ಇದ್ಯಾಕೋ ಆಗುವ ಕೆಲಸದಂತೆ ಕಾಣ್ತಿಲ್ಲ” ಎಂದು ಕೂಗಿ ಹೇಳಿ, ಟಾರ್ಚ್‍ನಲ್ಲಿಯೇ ಸನ್ನೆ ಮಾಡಿದೆ. ಆ ನೀರವ ನಿರಾತಂಕದ ಕಗ್ಗಾಡಿನ ಆ ಕಾಳರಾತ್ರಿಯಲ್ಲಿ ನನ್ನ ಕೂಗು ಯಾವ ಯಾವ ಪ್ರಾಣಿ ಪಕ್ಷಿಗಳನ್ನು ಬಡಿದೆಬ್ಬಿಸಿತೊ, ಇದ್ದಕಿದ್ದಂತೆ ಆ ಕೊರಕಲಿನ ಕಂದರದ ಸುತ್ತಮುತ್ತಲಿನ ಕಾಡು ಝಲ್ಲನೆ ವಿಹ್ವಲಗೊಂಡಿತು. ಹತ್ತಾರು ಹಕ್ಕಿಗಳು ಭರ್ ಭರ್ ಎಂದು ತೂಕಡಿಸುತ್ತಿದ್ದಲ್ಲಿಂದ ಹಾರಿದವು. ಯಾವೋ ಒಂದಷ್ಟು ಕಾಡುಮಿಕಗಳು ತಮ್ಮ ವಿಶ್ರಾಂತಿ ಸ್ಥಳದಿಂದ ಧಿಕ್ ಎಂದು ಹೌಹಾರಿ ಪಣಾರನೆ ಹಾರಿ ಓಟಕಿತ್ತವು. ಆ ಗಾಬರಿಗೆ ಈ ರಂಗಸ್ವಾಮಿ ಸಹಾ ಸಮತೋಲನ ತಪ್ಪಿ ಓಓಓಓ ಅನ್ನುತ್ತಾ ಕೊರಕಲಿನೊಳಗೆ ಜಾರಿ ಕಾಣೆಯಾದ.

ನಾವು ಮೂವರೂ ನಿಂತಲ್ಲೇ ದಿಗ್ಮೂಢರಾದೆವು. ಏನೋ ಮಾಡಲು ಹೋಗಿ ಇನ್ನೇನೋ ಆಯ್ತಲ್ಲ ಇದು ಅಂದ್ಕೊಂಡು, ಸ್ವಲ್ಪ ಸಮಯ ಮಾತನಾಡದೇ ಟಾರ್ಚಿನ ಬೆಳಕನ್ನು ರಂಗಸ್ವಾಮಿ ತೂರಿ ಹೋದ ದಿಕ್ಕಿನಲ್ಲಿ ಅಡ್ಡಾದಿಡ್ಡಿ ಹರಿಸಿದೆ. ಆ ಕೊರಕಲಿನಿಂದ ಯಾವುದೇ ಪ್ರತಿಕ್ರಿಯೆ ಇಲ್ಲ. ‘ಕೂವ್’ ಎಂದು ಕೂಗಿದೆ, ಅಲ್ಲೆಲ್ಲೋ ಕುಳಿತಿದ್ದ ಪಕ್ಷಿಗಳು ಮತ್ತೆ ಕುಳಿತಲ್ಲಿಂದ ಹಾರಿ ಜಲ್ ಜಲ್ ಸದ್ದು ಮಾಡಿ ಹಾರಿ ಮತ್ತೆಲ್ಲೋ ಕುಳಿತವು. ರಂಗಸ್ವಾಮಿಯ ಸದ್ದಿಲ್ಲ. ಮತ್ತೆ ಮೂರ್ಸೆಲ್ಲಿನ ಬ್ಯಾಟರಿಯ ಬೆಳಕು ಪ್ರಪಾತದ ಬುಡದಿಂದ ಆಗಸದೆತ್ತರಕ್ಕೆ ಬೆಳೆದಿದ್ದ ಆದರೆ ನಾವು ನಿಂತಿದ್ದ ಸ್ಥಳಕ್ಕಿಂತಲೂ ಕೆಳಗಿದ್ದ ಕ್ಯಾನೋಪಿಯ ರೆಂಬೆಕೊಂಬೆಗಳ ಸಂದಿಗಳ ಮೂಲಕ ಕಣಿವೆಯೊಳಗೆ ಇಳಿದವು. ಕೆಳಗಿನಿಂದ ಯಾವುದೇ ಪ್ರತಿಕ್ರಿಯೆಯಿಲ್ಲ. ಗಾಬರಿಗೊಂಡ ನಾನು ಏನೋ ಅನಾಹುತವಾಗಿದೆ ಎಂದುಕೊಂಡು ವಿನಯ್, ಸತೀಶ್ ಇಬ್ಬರಿಗೂ ಇರುವಲ್ಲೇ ನಿಲ್ಲುವಂತೆ ಹೇಳಿ ರಂಗಸ್ವಾಮಿ ಕೊರಕಲೊಳಗೆ ಇಳಿದಿದ್ದ ಹಾದಿಯಲ್ಲೇ ಎಚ್ಚರಿಕೆಯಿಂದ ಇಳಿಯತೊಡಗಿದೆ. ಕೊಂಚ ದೂರ ಇಳಿದ ನಂತರ “ಇಂತಾ ಇರುಕಟ್ಟಿನಲ್ಲಿ ರಂಗಸ್ವಾಮಿಯನ್ನು ಇಳಿಸಬಾರದಿತ್ತು, ಅದೂ ಟಾರ್ಚ್ ಇಲ್ಲದೇ” ಎಂದೆನಿಸಿತು. ಗಿಡದ ರೆಂಬೆಯೊಂದು ಸಿಗಿದು ಕಿತ್ತು ಕಾಣೆಯಾಗಿತ್ತು. ಓ, ಇದೇ ರೆಂಬೆಯನ್ನು ಆಧಾರಕ್ಕೆ ಹಿಡಿದುಕೊಂಡಿದ್ದ ರಂಗಸ್ವಾಮಿ ಆ ಗಲಿಬಿಲಿಯಲ್ಲಿ ಹತೋಟಿತಪ್ಪಿದ್ದಾನೆ, ಕಾಲುಜಾರಿದಾಗ ಈ ರೆಂಬೆಗೆ ಜೋತುಬಿದ್ದಿದ್ದವನು ರೆಂಬೆ ಹಿಸಿದು ಕಮರಿಯೊಳಗೆ ಜಾರಿಹೋಗಿದ್ದಾನೆ ಎಂದು ಖಚಿತವಾಯಿತು. ಈಗ ನಾನು ನಿಂತಿದ್ದ ಸ್ಥಳದಿಂದ ಸ್ವಲ್ಪ ಕೆಳಗಿನ ಜಾಗ ಮರಗಳ ರೆಂಬೆ ಕೊಂಬೆಯಿಲ್ಲದೇ ಬೆಳಕು ಹರಿಸಲು ಪೂರಕವಾಗಿತ್ತು. “ರಂಗಸ್ವಾಮೀ, ರಂಗಸ್ವಾಮೀ” ಎಂದು ಕೂಗಿದೆ. “ಅಂ, ಆ…..” ಎಂದು ಕೊರಗುವ ದನಿಯ ಪ್ರತಿಕ್ರಿಯೆ ಅಲ್ಲೆಲ್ಲೋ ಆಳದಿಂದ ಕೇಳಿಬಂತು, ಅದ್ಯಾವ ಶಕ್ತಿ ಬಂದಿತ್ತೋ, ಹಿಂದೆಂದೋ ಏರಿಳಿದು ಪರಿಚಿತವಾದ ಕೊರಕಲೇನೋ ಎಂಬಂತೆ ಲಗುಬಗೆಯಿಂದ ಸರಸರನೆ ಇಳಿದು, ಮತ್ತೆ “ರಂಗಸ್ವಾಮೀ, ರಂಗಸ್ವಾಮೀ” ಎಂದೆ. ಕೊಂಚ ಕೆಳಗಿನಿಂದ ‘ಇಲ್ಲಿದೀನಿ’ ಎಂ¨ ಮಾತು ಕೇಳಿಬಂತು.

ರಟ್ಟೆ ಗಾತ್ರದ ಕಾಡು ಬೀಳುಗಳ ಬಲೆಯೊಳಗೆ ಒಂದು ಕಾಲನ್ನು ಸಿಕ್ಕಿಸಿಕೊಂಡು, ಇನ್ನೊಂದು ಕೈಯಿಂದ ಯಾವುದೋ ಮರದ ರೆಂಬೆತುದಿಯ ಸೊಪ್ಪನ್ನು ಆಸರೆಗೆಂಬಂತೆ ಹಿಡಿದುಕೊಂಡು ಮೇಲೂ ಬರಲಾಗದೇ ಕೆಳಗೂ ಇಳಿಯಲಾರದೇ, ಏನನ್ನೂ ನೋಡಲಾಗದೆ, ಕತ್ತಲೆಯಲ್ಲಿ ಮಾರನೇ ದಿನ ಬೆಳಕಾಗುವುದನ್ನೇ ಕಾಯುತ್ತಾ ಇರುವವನಂತೆ ತೇಲುತ್ತಾ, ತ್ರಿಶಂಖು ಸ್ಥಿತಿಯಲ್ಲಿ ಸಣ್ಣಗೆ ನಡುಗುತ್ತಾ ಇದ್ದ. ಟಾರ್ಚಿನ ಬೆಳಕನ್ನು ಕಂಡಕೂಡಲೇ ಹಾಗೂ ನನ್ನ ದನಿ ಕೇಳಿ ಸ್ವಲ್ಪ ದೈರ್ಯ ಪಡೆದುಕೊಂಡ ರಂಗಸ್ವಾಮಿ, ಇತ್ತ ಬಳ್ಳಿಯಿಂದ ಕಾಲನ್ನು ಬಿಡಿಸಿಕೊಂಡರೆ ಕೈಯ್ಯಲ್ಲಿರುವ ರೆಂಬೆ ಅವನ ಭಾರ ತಡೆಯಲಾರದೆ ಹಿಸಿದುಕೊಂಡು ಅಲ್ಲಿಂದ ಕನಿಷ್ಠ ಅರವತ್ತು ಅಡಿ ಆಳದ ಕಮರಿಯೊಳಗೆ ಮತ್ತೆ ಎರಡನೇ ಹಂತದ ಬೀಳುವ ಪ್ರೋಗ್ರಾಂಗೆ ಆಹ್ವಾನ ನೀಡಿದಂತಾಗುತಿತ್ತು. ರೆಂಬೆಯನ್ನು ಕೈ ಬಿಟ್ಟರೆ ಈ ಕಾಡುಬೀಳು ಇವನ ತೂಕಕ್ಕೆ ಈಗ ಇರುವ ಪೊಸಿಷನ್‍ನಿಂದ ಮತ್ತೆ ಎತ್ತಲೋ ಜೀಕಿಕೊಂಡು ಅಲ್ಲಿಂದ ಇಳಿಯಲು ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುತಿತ್ತು. ಈಗಿರುವುದೊಂದೇ ದಾರಿ; ಆ ಬೀಳನ್ನು ಅದು ಇರುವ ಸ್ಥಾನದಲ್ಲೇ ಇರುವಂತೆ ಮಾಡಿ ರಂಗಸ್ವಾಮಿಯನ್ನು ಕೆಳಗಿಳಿಸುವುದು. ‘ಕತ್ತಿ ಎಲ್ಲಿ ‘ ಎಂದು ರಂಗಸ್ವಾಮಿಯ ಕೇಳಿದೆ. “ಜಾರಿ ಬೀಳುವಾಗ ಕತ್ತಿ ಕೈಯಿಂದ ಎಗರಿಹೋಯ್ತು, ಎಲ್ಲಿ ಬಿತ್ತೋ ಗೊತ್ತಾಗಲಿಲ್ಲ” ಎಂದ. ಆತ ಜಾರಿದ ಸ್ಥಳದಿಂದ ಈಗಿರುವವರೆಗೂ ಬೆಳಕು ಹರಿಸಿದೆ. ಆ ಪೊದೆಗಳು, ಮುಳ್ಳುಕಂಟಿಗಳ ನಡುವೆ ಆ ಎಲೆಗಳ ಅಡಿ ಆ ಕತ್ತಿಯನ್ನು ಪತ್ತೆ ಮಾಡಲು ಸಾಧ್ಯವಿರಲಿಲ್ಲ. ಅರ್ಧ ಅಡಿಗೂ ಹೆಚ್ಚು ದಪ್ಪನಾಗಿ ಮರಗಳ ಎಲೆಗಳ ರಾಶಿ ಬಿದ್ದಿತ್ತು. ನಿಂತಿದ್ದ ಸ್ಥಳದಿಂದ ಕೆಳಗಿನ ಕೊರಕಲಿನೆಡೆಗೆ ಬೆಳಕು ಹರಿಸಿದೆ ಸುಮಾರು ಮೂವತ್ನಲವತ್ತಡಿ ಕೆಳಗೆ ಕತ್ತಿಯ ಅಲಗಿನ ಅಂಚು ಫಳಕ್ಕೆಂದು ಬೆಳಕನ್ನು ಪ್ರತಿಫಲಿಸಿತು. ಅಂತೂ ಸಿಕ್ಕಿತಲ್ಲ ಎಂದುಕೊಂಡು ಕಡಿದಾಗಿದ್ದ ಆ ಸ್ಥಳವನ್ನು ಬಲು ಕಷ್ಟದಿಂದ ಕ್ರಮಿಸಿದವನೇ ಶಾಶ್ವತವಾಗಿ ಆ ಕಾಡಿನಲ್ಲಿ ಮಣ್ಣಾಗಬೇಕಿದ್ದ ಮೊಳದುದ್ದದ ಬೀಸುಗತ್ತಿಯನ್ನು ಕೈಗೆ ತೆಗೆದುಕೊಂಡೆ.

ತಲೆಯೆತ್ತಿ ಮೇಲೆ ನೋಡುತ್ತೀನಿ, ರಂಗಸ್ವಾಮಿ ಅತ್ತ ಮರವೂ ಅಲ್ಲದ ಇತ್ತ ನೆಲವೂ ಅಲ್ಲದ ನರವಾನರ ಪೊಸಿಷನ್ನಿನಲ್ಲಿ ಒಂದೇ ಕಾಲಿನಲ್ಲಿ ತಲೆಕೆಳಗಾಗಿ ನೇತಾಡುತಿದ್ದಾನೆ. “ಕಾಲನ್ನು ನಿಧಾನವಾಗಿ ಬಿಡಿಸಿಕೊಂಡು ಹಾಗೇ ಆ ಬೀಳನ್ನು ಹಿಡಿದುಕೊಂಡು ಇಳಿಯಲು ಸಾಧ್ಯವಾ ನೋಡು” ಎಂದೆ. ಹೇಗಾದರೂ ಬಿಡಿಸಿಕೊಳ್ಳಬಹುದು ಆದರೆ ಆ ಬೀಳು ಮತ್ತು ಅದು ಸುತ್ತಿಕೊಂಡಿದ್ದ ಮರದ ಸುತ್ತಲೂ ಅಭೇಧ್ಯವಾದ ಬೆತ್ತದ ಮುಳ್ಳಿನ ಕೋಟೆಯೇ ಇತ್ತು. ಅಷ್ಟರಲ್ಲಿ “ಕೂ……” ಎಂಬ ಕೂಗು ಮೇಲಿನಿಂದ ಕೇಳಿಬಂತು. ಅದು ವಿನಯ್‍ನ ದನಿ ಎಂಬುದು ಖಚಿತವಾಗಿ ಗೊತ್ತಾಯಿತು. “ಇರೀ ಇರೀ, ಅಲ್ಲೇ ಇರಿ, ರಂಗಸ್ವಾಮಿ ಸಿಕ್ಕಿದಾನೆ, ಕರ್ಕೊಂಡು ಬರ್ತಿದೀನಿ” ಎಂದು ಕೂಗಿ ಹೇಳಿದೆ. ಆ ಮರ ಅಥವಾ ಆ ಬಳ್ಳಿಯ ಮೂಲಕವಾಗಲೀ ನೆಲಕ್ಕಿಳಿಯಲು ಸಾಧ್ಯವೇ ಇರಲಿಲ್ಲ, ಕೈಯಲ್ಲಿ ಕತ್ತಿ ಇರುವಾಗ ಹೊಸ ಪ್ರಯೋಗಗಳಿಗೆ ಅವಕಾಶವಿರುತ್ತದಾದ್ದರಿಂದ ಅಲ್ಲಿದ್ದ ನಿಡಿದಾದ ಗಿಡವೊಂದನ್ನು ಬುಡಕ್ಕೆ ಕಡಿದುಕೊಂಡೆ. ಒಂದು ತುದಿಯಲ್ಲಿ ಕೊಕ್ಕೆಯಂತಿದ್ದ ಸುಮಾರು ಇಪ್ಪತ್ತಡಿಯುದ್ದದ ತೆಳುವಾದ ಆ ಕೋಲನ್ನು ಬಳಸಿ ರಂಗಸ್ವಾಮಿ ನೇತುಹಾಕಿಕೊಂಡಿದ್ದ ಸುರುಳಿ ಸುರುಳಿಯಾಕಾರದ ಬಳ್ಳಿಯ ಒಂದು ಕವಲನ್ನು ಸಿಕ್ಕಿಸಿಕೊಂಡು ನನ್ನೆಡೆಗೆ ಎಳೆಯಲಾರಂಬಿಸಿದೆ. ಎರಡು ಮೂರು ಬಾರಿ ನನ್ನೆಡೆಗೆ ಉಯ್ಯಾಲೆಯಂತೆ ಜೀಕಿ ತೂಗಿದಾಗ ಆತ ಸಿಕ್ಕಿ ಹಾಕಿಕೊಂಡಿದ್ದ ಬೀಳೂ ಸಹಾ ಒಂದು ಸಾಧಾರಣ ಗಾತ್ರದ ಮರದೆಡೆಗೆ ವಾಲಲಾರಂಬಿಸಿತು. ಹತ್ತಾರು ಬಾರಿ ತೂಗಾಡಿದ ನಂತರ ರಂಗಸ್ವ್ವಾಮಿ ಲಬಕ್ಕನೇ ಆ ಮರವನ್ನು ತಬ್ಬಿಕೊಂಡ. ಹಾಗೆ ತಬ್ಬಿಕೊಂಡಾಗ ಆ ಸಾಧಾರಣ ಗಾತ್ರದ ಮರ ಆತನೆಡೆಗೆ ಬಾಗಲಾರಂಬಿಸಿತು. ಮರವನ್ನು ತಬ್ಬಿಕೊಂಡಂತೆಯೇ ಸಿಕ್ಕಿಹಾಕಿಕೊಂಡಿದ್ದ ತನ್ನ ಕಾಲನ್ನು ಬೀಳಿನಿಂದ ಪ್ರಯಾಸದಿಂದ ಬಿಡಿಸಿಕೊಂಡು, ಬದುಕಿದೆಯಾ ಬಡಜೀವವೇ ಎಂದುಕೊಂಡು ಈ ಮರದಿಂದ ಸರಸರನೆ ಕೆಳಗಿಳಿದ.

ಈ ನೀರಿನ ಹರಿವಿನ ಸಹವಾಸವೇ ಬೇಡವೆಂದು ಸೀದಾ ವಿನಯ್, ಸತೀಶರನ್ನು ಬಿಟ್ಟುಬಂದಿದ್ದ ಏರಿಗೇ ಏದುಸಿರು ಬಿಡುತ್ತಾ ತಲುಪಿದೆವು. ಅವರಿಬ್ಬರೂ ಅತ್ತ ಕ್ಯಾಂಪಿಗೆ ಹಿಂದಿರುಗಲಾರದೇ ನಾವಿದ್ದ್ದಲ್ಲಿಗೂ ಬರಲಾಗದೇ, ಕೈಯಲ್ಲಿ ಟಾರ್ಚೂ ಇಲ್ಲದೇ ಆ ಕಗ್ಗಾಡಿನ ನಡುವೆ ಕತ್ತಲೆಯಲ್ಲಿ ಭಯವಿಹ್ವಲರಾಗಿ ನಿಂತಿದ್ದರು. ನಾವು ಬಂದದ್ದೇ ತಡ ನಿಂತಲ್ಲೇ ಬೆವರುತ್ತಾ ನೆಂದು ಹೋಗಿದ್ದ ಅವರು “ಇಲ್ಲಿ ಬೇಡ, ಬೇರೆಲ್ಲಾದರೂ ಸಿಗುತ್ತಾ, ನೋಡಣ” ಎಂದು ಸಲಹೆ ನೀಡಿದರು. ತಿರುಗಿ ನಾವು ರೈಲ್ವೇ ಹಳಿಯ ಮೇಲೆ ನಡೆಯಲಾರಂಭಿಸಿದೆವು. ಬಲಗೈಯಲ್ಲಿ ಕತ್ತಿ, ಎಡಗೈಯಲ್ಲಿ ಟಾರ್ಚ್ ಹಿಡಿದ ನಾನು ಎದುರಿಗಿದ್ದ ಆಳೆತ್ತರದ ಹುಲ್ಲನ್ನು ಎರಡು ಬದಿಗೆ ಸರಿಸುತ್ತಾ ಮುಂದಿನ ದಾರಿಯನ್ನು ನೋಡುತ್ತಾ ಎಲ್ಲರಿಗಿಂತ ಮುಂದೆ ನಡೆಯುತ್ತಿದ್ದೆ. ಹಳಿಯ ಎರಡೂ ಬದಿಯಲ್ಲಿದ್ದ ಮುಳ್ಳಿನ ಪೊದೆಗಳು ಹಳಿಯ ಪಕ್ಕದ ಜಲ್ಲಿಯನ್ನು ದಾಟಿ ಹಳಿಯನ್ನು ಆಕ್ರಮಿಸುವ ಹವಣಿಕೆಯಲ್ಲಿದ್ದವು. ಹಳಿಯ ಮೇಲೆ ಬೆಳೆದಿದ್ದ ಹುಲ್ಲು ಮತ್ತು ಮುಳ್ಳು ಪೊದೆಗಳ ನಡುವೆ ಒತ್ತುವರಿಗೆ ಪೈಪೋಟಿಯೇ ಏರ್ಪಟ್ಟಿತ್ತು. ಆ ಪೈಪೋಟಿಯ ನಡುವೆ ರಾತ್ರಿಯ ಸಮಯದಲ್ಲಿ ಗಂಜಿ ಬೇಯಿಸಲು ನೀರು ಅರಸುತ್ತಾ ಅಲೆಯುತ್ತಿರುವ ನಾವುಗಳು, ಈಗಾಗಲೇ ನಮ್ಮ ಕ್ಯಾಂಪಿನಿಂದ ಸುಮಾರು ಎರಡು ಕಿಲೋಮೀಟರು ದೂರದಲ್ಲಿದ್ದೆವು.

ನನ್ನ ಹಿಂದೆ ಬರುತಿದ್ದ ರಂಗಸ್ವಾಮಿಯು ವಿನಯ್ ಹಾಗೂ ಸತೀಶರಿಗೆ ಕಮರಿಯೊಳಗೆ ಜಾರಿ ಬಿದ್ದ ವಿವರಗಳನ್ನು ಒಪ್ಪಿಸುತಿದ್ದ, ಆ ಇಬ್ಬರೂ ಇತ್ತ ಬೆಳಕಿಲ್ಲದೇ ನಮಗೆ ಕಾಯುತ್ತಾ ನಿಂತ ಪಜೀತಿಯನ್ನು ತೋಡಿಕೊಳ್ಳುತಿದ್ದರು. ಆಳೆತ್ತರದ ಹುಲ್ಲನ್ನು ಸರಿಸುತ್ತಾ ಹಳಿಯ ಮೇಲೆ ನಡೆಯುತಿದ್ದ ನಾನು ಧುತ್ತೆಂದು ನಿಂತೆ, ಏನೋ ಅಸಹಜವಾದುದು ಎದುರಿಗಿದೆ ಎನಿಸಿತು. ಇದೇನಿದು? ಹಳಿಯ ಮೇಲೆ ಇಷ್ಟು ದೊಡ್ಡ ಮರವೇ? ಪಟ್ಟಿ ಪಟ್ಟಿ ಇದೆಯಲ್ಲ? ಸಣ್ಣ ಸಣ್ಣ ಗೆರೆ, ಬುಡದಲ್ಲಿ ಸಣ್ಣದಾಗಿದ್ದು ಮೇಲಕ್ಕೆ ಹೋದಂತೆ ದಪ್ಪಗಾಗಿದೆಯಲ್ಲ! ಅರೆ! ಇದೇನು? ತೂಗಾಡ್ತಿದೆಯಲ್ಲ! “ಹ್ಹಹ್!! ಓಡೀ ಓಡೀ” ಎಂದವನೇ ಯಾವ ಮಾಯದಲ್ಲಿ ಹಿಂದಕ್ಕೆ ತಿರುಗಿದೆನೋ, ಇನ್ನೂ ನನ್ನ ಮಾತನ್ನು ಕೇಳಿಸಿಕೊಂಡು ಅದಕ್ಕೆ ಪ್ರತಿಕ್ರಿಯಿಸಿಯೇ ಇರದಿದ್ದ ರಂಗಸ್ವಾಮಿಯನ್ನು ತಳ್ಳಿಕೊಂಡೇ ಓಡತೊಡಗಿದೆ. ನನ್ನ ಓಟಕ್ಕೆ ಅಡ್ಡಬಂದ ಅಗಾಧ ದೇಹದ ವಿನಯ್‍ನನ್ನೂ ಗುದ್ದಿಕೊಂಡು ನಾನೂ ಬಿದ್ದು, ಅವನನ್ನೂ ಕೆಡವಿ, ಮೊಣಕಾಲಿಗೆ ಪೆಟ್ಟು ಮಾಡಿಕೊಂಡು ಸತ್ತೆವೋ ಕೆಟ್ಟೆವೋ ಎಂದುಕೊಂಡು ಎದ್ದೂ ಬಿದ್ದೂ ಓಡಿದೆವು. ಆ ಮೂವರೂ ಏನು? ಏಕೆಂದು ತಿಳಿಯದೇ, ನಾನು ಓಡಿದೆನೆಂದು ಅದೇ ಗೊಂದಲದಲ್ಲಿ ದಿಕ್ಕಾಪಾಲಾಗಿ ಓಡಿದರು. ಸತೀಶನಂತೂ ಈ ಹಿಂದೆ ನಾವು ನೀರಿಗಾಗಿ ಇಳಿದಿದ್ದ ಕೊರಕಲಿನತ್ತಲೇ ಪಲಾಯನಗೈದಿದ್ದ.

ನನ್ನೊಬ್ಬನಲ್ಲಿ ಬಿಟ್ಟರೆ ಅವರಲ್ಲಾರಲ್ಲೂ ಟಾರ್ಚ್ ಇರಲಿಲ್ಲ. ನೀರು ತರುವ ಹುಮ್ಮಸ್ಸಿನಲ್ಲಿ ಅವರವರ ಬ್ಯಾಗಿನಲ್ಲಿದ್ದ ಕೈ ಟಾರ್ಚುಗಳನ್ನು ಅಲ್ಲಿಯೇ ಬಿಟ್ಟು ಕ್ಯಾನು ಬಾಟಲಿಗಳೊಂದಿಗೆ ನನ್ನೊಡನೆ ಬಂದಿದ್ದರು. ಸ್ವಲ್ಪ ಸುರಕ್ಷಿತ ದೂರದವರೆಗೆ ಓಡಿದ ನಾನು ಎತ್ತರದ ಕಲ್ಲೊಂದರ ಮೇಲೆ ನಿಂತುಕೊಂಡು ಟಾರ್ಚ್ ಬೆಳಕನ್ನು ನಾವು ಓಡಲು ಶುರುಮಾಡಿದ ಕಡೆಗೆ ಹರಿಸಿ ಆ ಮೂವರಿಗೂ ನಾನಿರುವ ಸ್ಥಳವನ್ನು ಸೂಚಿಸತೊಡಗಿದೆ. ಬಿದ್ದು ಮುಖ ಮೂತಿ ಕೆತ್ತಿಸಿಕೊಂಡಿದ್ದ ವಿನಯ್, ಹಿಮ್ಮಡಿ ಉಳುಕಿಸಿಕೊಂಡಿದ್ದ ಸತೀಶ ಇಬ್ಬರೂ ಉಸಿರುಸಿರು ಬಿಡುತ್ತಾ ಬಂದರು. ರಂಗಸ್ವಾಮಿ ನನ್ನ ಹಿಂದಿನಿಂದಲೇ ಗಂಜಿಪಾತ್ರೆಯೊಂದಿಗೆ ಪ್ರತ್ಯಕ್ಷನಾದ. “ಎಂತ ಅದು? ಯಾಕೆ ಓಡಿ ಓಡಿ ಅಂದದ್ದು” ಎಂದರು. “ಏನಿಲ್ಲ ನಡೀರಿ, ಆಮೇಲೆ ಹೇಳ್ತಿನಿ” ಎಂದೆ. ವಿನಯ್ ಮತ್ತೂ ಒತ್ತಾಯ ಮಾಡಿದ, ‘ಹೇಳ್ತೀನಿ, ಮೊದಲು ನೀರು ತಗೊಳ್ಳೋಣ’ ಎಂದೆ. ಆದಾದ ನಂತರ ಯಾವುದೇ ಸಾಹಸಕ್ಕೆ ಕೈಹಾಕದೇ ಹಳಿಯ ಎರಡೂ ಬದಿಯಲ್ಲಿ ನೀರು ಹರಿದು ಹೋಗಲು ಮಾಡಿದ್ದ ಕಿರು ಚರಂಡಿಯಲ್ಲಿ ತೆಳುವಾಗಿ ಹರಿಯುತಿದ್ದ ನೀರನ್ನೇ ಸಂಗ್ರಹಿಸುವುದೆಂದು ತೀರ್ಮಾನಿಸಿದೆವು. ಆ ಡ್ರೈನೇಜಿನಲ್ಲಿ ನೀರಿನೊಡನೆ ಹರಿದು ಬಂದಿದ್ದ ಮರಳನ್ನು ಬಗೆದು, ಒಂದಷ್ಟು ಹಳ್ಳ ಮಾಡಿದೆವು. ನೀರು ನಿಧಾನವಾಗಿ ಆ ಗುಂಡಿಯೊಳಗೆ ತುಂಬಿಕೊಳ್ಳಲಾರಂಬಿಸಿತು. ಮಣ್ಣು, ಮರಳು ಮಿಶ್ರಿತವಾಗಿದ್ದ ಆ ಕಲಕು ನೀರನ್ನೇ ರಂಗಸ್ವಾಮಿ ಬೊಗಸೆಯಲ್ಲಿ ಗೋಚಿ ಗೋಚಿ ಪಾತ್ರೆಗೆ ಸುರಿಯತೊಡಗಿದ. ಸುಮಾರು ಕಾಲು ಗಂಟೆಯ ಅವಧಿಯಲ್ಲಿ ಮುಕ್ಕಾಲು ಪಾತ್ರೆ ತುಂಬಿತು, ಸ್ವಲ್ಪ ಸಮಯ ಆ ಗೋಡು ನೀರನ್ನು ತಿಳಿಯಾಗಲು ಬಿಟ್ಟು ಕ್ಯಾನಿಗೆ, ಬಾಟಲಿಗಳಿಗೆ ನಿಧಾನವಾಗಿ ವಿನಯ್, ಸತೀಶ್ ಬಗ್ಗಿಸಿದರು. ಈ ಕಾರ್ಯ ನಡೆಯುತ್ತಿರುವಾಗ ಎತ್ತರದ ಜಾಗದಲ್ಲಿ ನಿಂತಿದ್ದ ನಾನು, ನಾವು ಓಡಲು ಪ್ರಾರಂಭಿಸಿದ ದಿಕ್ಕಿನ ಕಡೆಗೆ ಟಾರ್ಚ್ ಬೆಳಕನ್ನು ಹಾಯಿಸುತ್ತಲೇ ವಾಚ್‍ಮನ್ ಕೆಲಸ ನಿರ್ವಹಿಸುತಿದ್ದೆ. ಸರಿ ನಡೆಯಿರಿ ಗಂಜಿ ಬೇಯಿಸಲು ಇಷ್ಟು ನೀರು ಸಾಕಾಗಬಹುದು, ಬೆಳಗ್ಗೆ ಎದ್ದು ಮುಂದಿನದನ್ನು ಯೋಚಿಸೋಣ ಎಂದು ನಮ್ಮ ಕ್ಯಾಂಪಿನೆಡೆಗೆ ಹೊರಟೆವು. ತಡೆಯಲಾರದ ಕುತೂಹಲದ ಸತೀಶ ನಾವು ಓಡಿಬಂದದ್ದು ಯಾಕೆಂದು ಮತ್ತೊಮ್ಮೆ ಕೇಳಿದ. ಗಂಜಿ ತಿಂದ ಮೇಲೆ ಹೇಳ್ತೀನಿ, ಬನ್ನಿ ಈಗ ನಾವು ತಂದಿರುವುದು ಚರಂಡಿಯ ನೀರು ಎಂದು ಯಾರಿಗೂ ಹೇಳಬೇಡಿ ಈ ನೀರು ಚರಂಡಿಯಲ್ಲಿ ಹರಿದರೂ ಶುದ್ಧ ಜಲವೇ, ಮಣ್ಣಿನ ಬಣ್ಣ ಬಂದಿದೆ ಅಷ್ಟೇ ಎಂದು ಪಾಳು ಬಿದ್ದಿದ್ದ ರೈಲ್ವೇ ಸ್ಟೇಷನ್ನನ್ನು ಪ್ರವೇಶಿಸಿದೆವು.

ನಾವು ನಾಲ್ವರೂ ನೀರು ತರಲು ಹೋದ ಮೇಲೆ ಇವರುಗಳು ನಮ್ಮ ನಿರೀಕ್ಷೆಯಲ್ಲಿ ಕಾಯುತ್ತಲೇ ಇದ್ದರು. ಒಂದಿಬ್ಬರು ನಾವು ತೆರಳಿದ್ದ ದಿಕ್ಕಿನೆಡೆ ಅಂದರೆ ನಾವು ನಾಳೆ ಕ್ರಮಿಸಬೇಕಿದ್ದ ದಿಕ್ಕಿನೆಡೆ ಕೊಂಚ ದೂರ ಹೋಗಿ ಮುಂದಕ್ಕೆ ಹೋಗಲು ಧೈರ್ಯ ಸಾಲದೇ ವಾಪಾಸ್ ಬಂದಿದ್ದರಂತೆ. ನೀರು ಸಿಗುತ್ತಾ ಎಂದು ಮೂರ್ನಾಲ್ಕು ಜನ ಬೇರೆಡೆಯೂ ಪ್ರಯತ್ನಿಸಿ ಸೋತಿದ್ದರು.
ಪಾತ್ರೆಯೊಳಗೆ ಟಾರ್ಚಿನ ಬೆಳಕು ಬಿಡದೇ ಆ ನೀರನ್ನೇ ಕುದಿಸಿ, ಅಕ್ಕಿ, ಕಾಯಿತುರಿ ಹಾಕಿ, ಸ್ವಾದಿಷ್ಠ ಗಂಜಿ ಮಾಡಿ ಮನದಣಿಯೇ ಸೇವಿಸಿ ಮಲಗಿದೆವು. ಆ ದಿನದ ನೆಡಿಗೆ ಸುಮಾರು ಇಪ್ಪತ್ತು ಕಿಲೋ ಮೀಟರ್, ನಾವ್‍ನಾಲ್ವರದು ಏಳೆಂಟು ಕಿಲೋ ಮೀಟರ್ ಅಡಿಷನಲ್. ಆ ಸುಸ್ತಿಗೆ, ಬಿಸ್ಸಿ ಬಿಸ್ಸಿ ಗಂಜಿ ಅನ್ನಕ್ಕೆ ನಿದ್ರೆ ಒದ್ದುಕೊಂಡು ಬರುತಿತ್ತು. ಎಲ್ಲರೂ ಹರಟೆ ಹೊಡೆದು, ಹಾಸ್ಯ ಚಟಾಕಿ ಹಾರಿಸಿಕೊಂಡು, ನಾಳಿನ ಪಯಣದ ಚರ್ಚೆ ಮಾಡಿಕೊಂಡು ಮಗ್ಗುಲಾದರು. ನನ್ನ ಎಡಬದಿಯೇ ಮಲಕ್ಕೊಂಡಿದ್ದ ಸತೀಶ “ನಾವು ಓಡಿ ಬಂದದ್ದು ಯಾಕೆ?” ಎಂದು ಕಿವಿಯಲ್ಲುಸುರಿದ. ನಾನು ನೋಡಿದ್ದು, ಗ್ರಹಿಸಿದ್ದು, ಪ್ರತಿಕ್ರಿಯಿಸಿದ್ದು, ಕಾಲಿಗೆ ಬುದ್ದಿ ಹೇಳಿದ್ದು, ಇವೆಲ್ಲಾ ಘಟಿಸಿದ್ದು ಕೇವಲ ಅರ್ಧ ಕ್ಷಣದಲ್ಲಿ ನಡೆದು ಹೋದ ಒಂದು ಫ್ಲಾಷ್. ಅಲ್ಲಿ ನಮ್ಮನ್ನು, ನಾವು ಗದ್ದಲ ಮಾಡಿಕೊಂಡು ಬರುತಿದ್ದುದನ್ನು, ನಾವು ಚೆಲ್ಲುತ್ತಿದ್ದ ಟಾರ್ಚಿನ ಬೆಳಕನ್ನು ಸದ್ದಿಲ್ಲದೇ ನೋಡುತ್ತಾ ಗಂಭೀರವಾಗಿ ನಿಂತಿದ್ದು ಆನೆ. “ನಾನಿನ್ನೊಂದು ಹೆಜ್ಜೆ ಇಟ್ಟಿದ್ದರೂ ಆನೆಯ ಸೊಂಡಿಲಿಗೇ ಡಿಕ್ಕಿ ಹೊಡೆಯುತಿದ್ದೆ. ನಮ್ಮೆಲ್ಲರ ಹಳವಂಡಗಳನ್ನು ನೋಡಿಯೂ, ನಾವು ಓಟಕಿತ್ತಾಗ ನಮ್ಮ ಹಿಂದೆ ಬೆರಸಾಡಿಕೊಂಡು ಬಂದಂತೆಯೂ ಕಾಣಲಿಲ್ಲ, ಅದು ಕಣೋ ರಾಜ, ಗಜರಾಜ” ಎಂದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ