October 5, 2024

ಎರಡು ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಕಾಂಕ್ರೀಟ್ ರಸ್ತೆ ಎರಡೇ ತಿಂಗಳಲ್ಲಿ ದುಸ್ಥಿತಿಗೆ ತಲುಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೊರನಾಡು ಗ್ರಾಮದಲ್ಲಿ ನಡೆದಿದೆ.

ಕಳಸ ತಾಲೂಕಿನ ಹೊರನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕವನಹಳ್ಳ, ಮಾವಿನಹೊಲ, ಮಣ್ಣಿನಪಾಲ್ ಗ್ರಾಮಗಳು ನಕ್ಸಲ್ ಪೀಡಿತ ಗ್ರಾಮಗಳಾಗಿದ್ದು, ಈ ಗ್ರಾಮಗಳಿಗೆ ಹೊರನಾಡು ಗ್ರಾಮದಿಂದ ಸಂಪರ್ಕ ಕಲ್ಪಿಸುವ  ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದರಿಂದ ಗ್ರಾಮಸ್ಥರು ರಸ್ತೆ ದುರಸ್ತಿಗೆ ಒತ್ತಾಯಿಸಿದ್ದರು. ಮನವಿ ಹಿನ್ನೆಲೆಯಲ್ಲಿ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಕಳೆದ ವರ್ಷ ಈ ರಸ್ತೆಯ ಅಭಿವೃದ್ಧಿಗಾಗಿ 6ಕೋಟಿ ಅನುದಾನ ನೀಡಿದ್ದರು.

ಸ್ಥಳೀಯ ಗುತ್ತಿಗೆದಾರ ಕೀರ್ತಿ ಜೈನ್  ಕಾಮಗಾರಿಯ ಟೆಂಡರ್ ಹಿಡಿದು 2 ಕೋಟಿ ವೆಚ್ಚದಲ್ಲಿ 2.5 ಕಿ.ಮೀ. ಕಾಂಕ್ರೀಟ್ ರಸ್ತೆಯನ್ನು ಪೂರ್ಣಗೊಳಿಸಿದ್ದರು. ಇನ್ನೂ 4 ಕೋಟಿ ಅನುದಾನದ ರಸ್ತೆ ಮಾಡಲು ಬಾಕಿ ಇತ್ತು.

ಈ ರಸ್ತೆಯನ್ನು ಶಾಸಕರೇ ಬಂದು ಉದ್ಘಾಟನೆ ಮಾಡಬೇಕು ಎಂದು ಸ್ಥಳೀಯ ಬಿ.ಜೆ.ಪಿ. ಕಾರ್ಯಕರ್ತರು ಸಂಚಾರಕ್ಕೆ ಅಡ್ಡ ಹಾಕಿದ್ದ ವಿಚಾರವು ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು.

ಈಗ್ಗೆ ಮೂರು ತಿಂಗಳ ಹಿಂದೆ ಈ ರಸ್ತೆ ಗ್ರಾಮಸ್ಥರು ಹಾಗೂ ವಾಹನಗಳ ಸಂಚಾರಕ್ಕೆ ಮುಕ್ತಗೊಂಡಿದ್ದು, ಸಂಚಾರಕ್ಕೆ ಮುಕ್ತಗೊಂಡ ಕೆಲವೇ ದಿನಗಳಲ್ಲಿ ಕಾಂಕ್ರೀಟ್ ರಸ್ತೆಯ ಗುಣಮಟ್ಟ ಜಗಜ್ಜಾಹೀರಾಗುತ್ತಿದೆ.

ರಸ್ತೆಯನ್ನು ಅತ್ಯಂತ ಕಳಪೆಯಾಗಿ ನಿರ್ಮಿಸಿರುವುದರಿಂದ ರಸ್ತೆಗೆ ಹಾಕಿರುವ ಕಾಂಕ್ರೀಟ್ ಬರೀಗೈಲಿ ಕಿತ್ತು ಬರುತ್ತಿದೆ. ರಸ್ತೆಯುದ್ದಕ್ಕೂ ಕಾಂಕ್ರೀಟ್ಗೆ ಬಳಸಿದ್ದ ಜಲ್ಲಿಕಲ್ಲುಗಳ ರಾಶಿ ಬಿದ್ದಿದ್ದು, ರಸ್ತೆ ಅಲ್ಲಲ್ಲಿ ಗುಂಡಿ ಬಿದ್ದಿದೆ. ಇದರಿಂದಾಗಿ ಗ್ರಾಮಸ್ಥರ ಸಂಚಾರಕ್ಕೂ ತೊಂದರೆಯಾಗಿದ್ದು,  ಗ್ರಾಮಸ್ಥರು ಈ ರಸ್ತೆ ಕಾಮಗಾರಿ ಮೇಲ್ವಿಚಾರಣೆ ನಡೆಸಿದ ಇಂಜಿನಿಯರ್ ಮತ್ತು ಗುತ್ತಿಗೆದಾರರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಳಪೆ ಕಾಮಗಾರಿ ಗುತ್ತಿಗೆದಾರ ಕೀರ್ತಿ ಜೈನ್ :

ಕಳಸ ಮೂಲದ ಕೀರ್ತಿ ಜೈನ್ ಎಂಬ ಗುತ್ತಿಗೆದಾರ ಈ ಕಾಮಗಾರಿ ನಿರ್ವಹಿಸಿದ್ದು, ಗುತ್ತಿಗೆದಾರ ಎಂಬ ಹೆಸರಿಗೆ ಕಳಂಕ ತರುವಂತಿದೆ ಈ ಕಾಮಗಾರಿ.

ಸದರಿ ಕೀರ್ತಿ ಜೈನ್ ಮೂಡಿಗೆರೆ ಮತ್ತು ಕಳಸ ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 15 ಕಾಮಗಾರಿಗಳನ್ನು ಟೆಂಡರ್ ಹಿಡಿದಿದ್ದಾರೆ. ಅದರಲ್ಲಿ 6 ಕಾಮಗಾರಿಗಳನ್ನು ಇನ್ನೂ ಪ್ರಾರಂಭಿಸಿಯೇ ಇಲ್ಲ 9 ಕಾಮಗಾರಿಗಳಲ್ಲಿ ಕೆಲವು ಕಾಮಗಾರಿಗಳನ್ನು ಅರ್ಧಂಬಂರ್ಧ ಮಾಡಿ ಇದ್ದ ರಸ್ತೆಗಳನ್ನು ಬಗೆದು ಹಾಕಿದ್ದು ಕೆಲವು ಕಾಮಗಾರಿಗಳನ್ನು ಈ ರೀತಿ ತೀರಾ ಕಳಪೆಯಾಗಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಕೆಲಸ ಮಾಡುವ ಸಾಮರ್ಥ್ಯ ಮತ್ತು ಗುಣಮಟ್ಟದ ಬಗ್ಗೆ ಕನಿಷ್ಠ ಬದ್ಧತೆ ಇಲ್ಲ ಎಂದರೆ ಯಾಕೆ ಊರತುಂಬಾ ಇರುವ ಕಾಮಗಾರಿಗಳಿಗೆ ಟೆಂಡರ್ ಹಾಕುವುದು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಅರ್ಧಕ್ಕೆ ನಿಂತಿರುವ ಬೈದುವಳ್ಳಿ ರಸ್ತೆ, ಛಿದ್ರವಾಗಿರುವ ಭೈರಾಪುರ ರಸ್ತೆ

ಮೂಡಿಗೆರೆ ತಾಲ್ಲೂಕಿನ ಬೈದುವಳ್ಳಿ ರಸ್ತೆಯನ್ನು ಇದೇ ಗುತ್ತಿಗೆದಾರ  ಬರೀ ಜಲ್ಲಿಹಾಕಿ ಆರುತಿಂಗಳಾದರೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಬೈದುವಳ್ಳಿ, ಮೂಲಹರಳ್ಳಿ, ಗುತ್ತಿಹಳ್ಳಿ, ದೇವರಮನೆಗೆ ಸಾಗುವ ಪ್ರಯಾಣಿಕರು ಹಿಡಿಶಾಪ ಹಾಕಿಕೊಂಡು ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ.

ಹಾಗೆಯೇ ಪ್ರಸಿದ್ಧ ಯಾತ್ರಾಸ್ಥಳ ಭೈರಾಪುರ ದೇವಸ್ಥಾನಕ್ಕೆ ಹೋಗುವ ರಸ್ತೆಗೆ ಹಾಕಿರುವ ಕಾಂಕ್ರೀಟ್ ಸಹ ಇದೇ ರೀತಿ ಎರಡೇ ತಿಂಗಳಿಗೆ ಕಿತ್ತು ಹೋಗಿದ್ದು, ಭೈರಾಪುರ ದೇವಸ್ಥಾನ ಮತ್ತು ಎತ್ತಿನಭುಜಕ್ಕೆ ಹೋಗುವ ಪ್ರಯಾಣಿಕರು ಪ್ರಯಾಸ ಪಡುವಂತಹ ಸ್ಥಿತಿ ಬಂದಿದೆ. ವಾಹನಗಳನ್ನು ಅರ್ಧದಲ್ಲಿ ನಿಲ್ಲಿಸಿ ನಡೆದುಕೊಂಡು ದೇವಸ್ಥಾನಕ್ಕೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಬಗ್ಗೆ ಮೂಡಿಗೆರೆ ಲೋಕೋಪಯೋಗಿ ಇಲಾಖೆ ಎಇಇ ಮಂಜುನಾಥ್ ರವರನ್ನು ಕೇಳಿದರೆ ಕೀರ್ತಿಜೈನ್ ಮಾಡಿರುವ ಎಲ್ಲಾ ಕಾಮಗಾರಿಗಳ ಗುಣಮಟ್ಟದ ಬಗ್ಗೆ ದೂರುಗಳು ಕೇಳಿಬಂದಿದ್ದು, ಯಾವ ಕಾಮಗಾರಿಗೂ ಇದುವರೆಗೇ ಬಿಲ್ ನೀಡಿಲ್ಲ. ಹೊರನಾಡು ಕವನಹಳ್ಳ ರಸ್ತೆಯ ಕಾಮಗಾರಿ ಪೂರ್ಣ ಕಳಪೆಯಾಗಿದ್ದು, ಅದನ್ನು ಸಂಪೂರ್ಣ ಕಿತ್ತು ಮರು ಕಾಂಕ್ರೀಟ್ ಹಾಕಬೇಕು ಇಲ್ಲವೆಂದರೆ ಟೆಂಡರ್ ರದ್ದುಗೊಳಿಸಿ ಹೊಸದಾಗಿ ಟೆಂಡರ್ ಪ್ರಕ್ರಿಯೆ ನಡೆಸಲು ಇಲಾಖೆಗೆ ವರದಿ ನೀಡುವುದಾಗಿ ತಿಳಿಸಿದ್ದಾರೆ.

ಒಟ್ಟಾರೆ ಸಾರ್ವಜನಿಕರ ತೆರಿಗೆಯಿಂದ ನೀಡುವ ಸರ್ಕಾರದ ಕೋಟ್ಯಾಂತರ ರೂಪಾಯಿ ಅನುದಾನ ಇಂಜಿನಿಯರ್ ಮತ್ತು ಗುತ್ತಿಗೆದಾರರ ಬೇಜವಾಬ್ದಾರಿಯಿಂದ ನೀರಿನಲ್ಲಿ ಹೋಮ ಮಾಡಿದಂತೆ ಆಗುತ್ತಿದೆ. ಇದರ ಬಗ್ಗೆ ಸಾರ್ವಜನಿಕರು ಜಾಗೃತರಾಗಿ ಇಂತಹ ಕಾಮಗಾರಿಗಳ ವಿರುದ್ಧ ಪ್ರತಿರೋಧ ತೋರಬೇಕು.

ಇಂತಹ ಕಳಪೆ ಕಾಮಗಾರಿ ಮಾಡಿ ರಸ್ತೆಯ ದುಸ್ಥಿತಿಯನ್ನು ಮತ್ತಷ್ಟು ಹೆಚ್ಚಿಸಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಮತ್ತು ಇದರ ಮೇಲ್ವಿಚಾರಣೆ ಮಾಡಿದ ಇಂಜಿನಿಯರ್ ಗಳನ್ನು ಅಮಾನತು ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಶಾಸಕರು ಕ್ಷೇತ್ರಕ್ಕೆ ಅನುದಾನ ತಂದ ಅನುದಾನದಲ್ಲಿ ಗುಣಮಟ್ಟದ ಕಾಮಗಾರಿ ಆಗುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಬೇಕು. ಇಲ್ಲದೇ ಇದ್ದರೆ ಶಾಸಕರ ಮೇಲೆ ಕೆಟ್ಟ ಹೆಸರು ಬರುತ್ತದೆ ಎಂಬುದನ್ನು ಮನಗಾಣಬೇಕು.

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ