October 5, 2024

ಬೇಲಿಯೇ ಎದ್ದು ಹೊಲ ಮೇಯಿತು ಎಂಬಂತೆ ಅರಣ್ಯ ರಕ್ಷಣೆ ಮಾಡಬೇಕಾದ ಅರಣ್ಯ ಅಧಿಕಾರಿಯ ಹೆಸರು  ಬೆಲೆಬಾಳುವ ಬೀಟೆ ಮರಗಳನ್ನು ಕಡಿದು ಸಾಗಿಸಿರುವ ಪ್ರಕರಣದಲ್ಲಿ ತಳುಕು ಹಾಕಿಕೊಂಡಿದೆ.

ಚಿಕ್ಕಮಗಳೂರು ಜಿಲ್ಲೆ, ಆಲ್ದೂರು ಸಮೀಪದ ಅನಿಗನಹಳ್ಳಿ ಎಂಬಲ್ಲಿ ಅರಣ್ಯ ಇಲಾಖೆ ಜಾಗದಲ್ಲಿ ಅಕ್ರಮವಾಗಿ ಬೀಟೆ ಮರಗಳನ್ನು ಕಡಿದು ಕದ್ದು ಸಾಗಿಸಿರುವ ಪ್ರಕರಣ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 4 ಮಂದಿಯನ್ನು ಬಂಧಿಸಲಾಗಿದೆ. ಇನ್ನೂ ಇಬ್ಬರು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

ಬಸರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನಿಗನಹಳ್ಳಿ ಸ.ನಂ 15 ಮತ್ತು 16 ರಲ್ಲಿ ಸರ್ಕಾರಿ ಜಾಗದಲ್ಲಿ ಲಕ್ಷಾಂತರ ಬೆಲೆಬಾಳುವ ನಾಲ್ಕು ಬೀಟೆ ಮರಗಳನ್ನು ಕಡಿದ ಬಗ್ಗೆ ಸ್ಥಳೀಯ ಸಾಮಾಜಿಕ ಹೋರಾಟಗಾರರಾದ ಸುಪ್ರೀತ್ ಅರೇನೂರು ಮತ್ತು ಅಬ್ದುಲ್ ಖಾದರ್ ಆಲ್ದೂರು ಇವರುಗಳು ಅರಣ್ಯ ಅಧಿಕಾರಿಗಳಿಗೆ ದೂರು ನೀಡಿದ್ದರು.

ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಗನಹಳ್ಳಿ ಕಾಫಿ ಬೆಳೆಗಾರ ಹರೀಶ್, ಸ್ಥಳೀಯರಾದ ಪ್ರದೀಪ್, ಮಂಜು ಬೇಲೂರಿನ ಮರದ ಮಿಲ್ಲಿನ ಮಾಲೀಕ ಸಿರಾಜ್ ಇವರುಗಳನ್ನು ಮೂಡಿಗೆರೆ ಎ.ಸಿ.ಎಫ್. ಡಾ. ರಾಜೇಶ್ ನಾಯ್ಕ್ ನೇತೃತ್ವದ ಅರಣ್ಯ ಅಧಿಕಾರಿಗಳ ತಂಡ ಬಂಧಿಸಿದೆ.

ಅರಣ್ಯ ಅಧಿಕಾರಿಯೇ ಶಾಮೀಲು :

ಈ ಕೃತ್ಯದಲ್ಲಿ ಆಲ್ದೂರು ಅರಣ್ಯ ವಲಯದ ಸಹಾಯಕ ವಲಯ ಅರಣ್ಯ ಅಧಿಕಾರಿ ದರ್ಶನ್ ನೇರವಾಗಿ ಶಾಮೀಲಾಗಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಅಲ್ಲದೇ ಈಗ ಬಂಧಿತ ಆರೋಪಿಗಳು ಸಹ ದರ್ಶನ್ ಈ ಕೃತ್ಯದಲ್ಲಿ ಶಾಮೀಲಾಗಿರುವ ಬಗ್ಗೆ ಹೇಳಿಕೆ ನೀಡಿರುತ್ತಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಅರಣ್ಯ ಅಧಿಕಾರಿ ದರ್ಶನ್ ಗೆ ಶೋಕಾಸ್ ನೋಟೀಟ್ ಜಾರಿ ಮಾಡಲಾಗಿದೆ.

ಸುಪ್ರೀತ್ ಅರೇನೂರು ಮತ್ತು ಅಬ್ದುಲ್ ಖಾದರ್ ನೀಡಿರುವ ದೂರಿನಲ್ಲಿ ಅರಣ್ಯ ಅಧಿಕಾರಿ ದರ್ಶನ್ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ದರ್ಶನ್ ಇಲ್ಲಿ ಕಡಿದ ಮರಗಳನ್ನು ತನ್ನ ಮನೆಗೆ ಪೀಠೋಪಕರಣ ಮಾಡಿಸಿಕೊಳ್ಳಲು ಬಳಸಿದ್ದಾರೆ, ಮತ್ತು ಬೀಟೇ ಮರಗಳನ್ನು ಮಾರಾಟ ಮಾಡಿ ಅಕ್ರಮವಾಗಿ ಹಣಗಳಿಸುತ್ತಿದ್ದಾರೆ. ತನಗೆ ಅನ್ನ ನೀಡುತ್ತಿರುವ ಅರಣ್ಯ ಇಲಾಖೆಗೆ ದ್ರೋಹ ಬಗೆದಿರುವ ಅಧಿಕಾರಿಯನ್ನು ತಕ್ಷಣ ಬಂಧಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ದರ್ಶನ್ ಈ ಹಿಂದೆ ಕುಂದೂರು ಸಾರಗೋಡು ಭಾಗದಲ್ಲಿ ಫಾರೆಸ್ಟರ್ ಆಗಿ ಕಾರ್ಯನಿರ್ವಹಿಸಿದ್ದು ಕಳೆದ ಎರಡು ವರ್ಷಗಳಿಂದ ಆಲ್ದೂರು ಭಾಗದಲ್ಲಿ ಸಹಾಯಕ ವಲಯ ಅರಣ್ಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಆಲ್ದೂರು ವಲಯದಲ್ಲಿಯೇ ಇದ್ದು ಇವರ ಮೇಲೆ ಸಾರ್ವಜನಿಕರು ಅನೇಕ ಗುರುತರ ಆರೋಪಗಳನ್ನು ಮಾಡುತ್ತಿದ್ದಾರೆ. ಇಂತಹ ಅಧಿಕಾರಿಗಳಿಂದ ಇಲಾಖೆಗೂ ಕೆಟ್ಟ ಹೆಸರು ಬರುತ್ತಿದೆ.

ಅರಣ್ಯ ರಕ್ಷಣೆ ಮಾಡಬೇಕಾದ ಅರಣ್ಯ ಅಧಿಕಾರಿಯೇ ಅಕ್ರಮವಾಗಿ ಅರಣ್ಯ ನಾಶದಲ್ಲಿ ತೊಡಗಿಸಿಕೊಂಡಿದ್ದು ಆತನ ವಿರುದ್ಧ ತಕ್ಷಣ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ದಕ್ಷ ಅಧಿಕಾರಿಗಳೆಂದು ಹೆಸರು ಮಾಡಿರುವ ಡಿ.ಎಫ್.ಓ. ಕ್ರಾಂತಿ ಮತ್ತು ಮೂಡಿಗೆರೆ ಎ.ಸಿ.ಎಫ್. ಡಾ.ರಾಜೇಶ್ ನಾಯ್ಕ್ ಮೇಲೆ ಜನ ವಿಶ್ವಾಸವಿಟ್ಟಿದ್ದಾರೆ.

ಈ ಸಂಬಂಧ ಹೇಳಿಕೆ ನೀಡಿರುವ ಡಿ.ಎಫ್.ಓ. ಕ್ರಾಂತಿ ಯವರು ಬೀಟೆಮರಗಳನ್ನು ಕಡಿದ ಪ್ರಕರಣದಲ್ಲಿ ನಾಲ್ಕು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ. ಇದರಲ್ಲಿ ಅರಣ್ಯ ಅಧಿಕಾರಿಯ ಪಾತ್ರವಿದೆ ಎಂಬುವುದನ್ನು ಆರೋಪಿಗಳು ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ. ವರದಿ ಕೇಳಲಾಗಿದೆ. ವರದಿ ಬಂದ ತಕ್ಷಣ ದಾಖಲೆ ಅನುಸರಿಸಿ ಅಧಿಕಾರಿಯ ಮೇಲೆ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಎ.ಸಿ.ಎಫ್. ಡಾ. ರಾಜೇಶ್ ನಾಯ್ಕ್ ಅವರು ಪ್ರಕರಣದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಅವರೆಲ್ಲರ ಮೇಲೆ ಕಾನೂನು ರೀತಿ ಕ್ರಮ ಜರುಗಿಸುತ್ತೇವೆ. ಅರಣ್ಯ ಅಧಿಕಾರಿ ದರ್ಶನ್ ಹೆಸರನ್ನು ಆರೋಪಿಗಳು ಹೇಳಿದ್ದಾರೆ. ಈ ಆಧಾರದಲ್ಲಿ ಮೂರು ದಿನದ ಒಳಗೆ ಉತ್ತರ ನೀಡುವಂತೆ ಶೋಕಾಸ್ ನೋಟೀಸ್ ಜಾರಿ ಮಾಡಲಾಗಿದೆ. ಸಾಕ್ಷ್ಯಧಾರಗಳನ್ನು ಸಂಗ್ರಹಿಸಿ ತಪ್ಪಿತಸ್ತರು ಎಂದು ಕಂಡುಬಂದಲ್ಲಿ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ