October 5, 2024

ಮೂಡಿಗೆರೆ ತಾಲ್ಲೂಕಿನ ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಡ್ಡಿಕೆರೆ ಗ್ರಾಮದ ಗ್ರಾಮಸ್ಥರು ರಸ್ತೆ ನಿರ್ಮಾಣಕ್ಕೆ ನಿರ್ಲಕ್ಷ್ಯ ವಹಿಸುತ್ತಿರುವ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಕ್ರಮ ಖಂಡಿಸಿ ಪಟ್ಟಣದ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ಉಪವಿಭಾಗದ ಕಛೇರಿ ಎದುರು ಧರಣಿ ಪ್ರತಿಭಟನೆ ನಡೆಸಿದರು.

ಮಡ್ಡಿಕೆರೆ ಗ್ರಾಮದ ಮಹಿಳೆಯರು ಸೇರಿದಂತೆ ಸುಮಾರು ನೂರಾರು ಜನರು ಮೂಡಿಗೆರೆ ಜಿ.ಪಂ. ಇಂಜಿನಿಯರ್ ಕಛೇರಿ ಆವರಣದಲ್ಲಿ ಶಾಮಿಯಾನ ಹಾಕಿ ಧರಣಿ ನಡೆಸಿದರು. ರಸ್ತೆ ಕಾಮಗಾರಿ ಪ್ರಾರಂಭಿಸದ ಹೊರತು ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತ್ತಿದ್ದರು.

ಸ್ಥಳಕ್ಕೆ ಮಾಜಿ ಸಚಿವರಾದ ಬಿ.ಬಿ. ನಿಂಗಯ್ಯ, ಶ್ರೀಮತಿ ಮೋಟಮ್ಮ, ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಸಿ.ಪಿ.ಐ. ಮುಖಂಡ ಬಿ.ಕೆ. ಲಕ್ಷ್ಮಣಕುಮಾರ್, ಗ್ರಾ.ಪಂ. ಸದಸ್ಯೆ ಕೆ.ಪಿ. ಭಾರತಿ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರಿಗೆ ತಮ್ಮ ಬೆಂಬಲ ಸೂಚಿಸಿದರು.

ಮಡ್ಡಿಕೆರೆ ಗ್ರಾಮಕ್ಕೆ ತೆರಳುವ ರಸ್ತೆಯ ಡಾಂಬಾರಿಕರಣಕ್ಕೆ ಗ್ರಾಮಾಭಿವೃದ್ಧಿ ಯೋಜನೆಯಡಿ 50ಲಕ್ಷ ಅನುದಾನ ಮಂಜೂರಾಗಿದ್ದು, ಸದರಿ ಕಾಮಗಾರಿಯ ಟೆಂಡರ್ ಕೂಡ ಆಗಿದೆ. ಕಳೆದ ಡಿಸೆಂಬರ್ 10ರಂದು ಕಾಮಗಾರಿಯನ್ನು ಪ್ರಾರಂಭಿಸಲಾಗಿತ್ತು. ರಸ್ತೆಯನ್ನು ಅಗೆದು ಹಾಕಿ ಅರ್ಧಕ್ಕೆ ಕೆಲಸವನ್ನು ನಿಲ್ಲಿಸಿದ್ದಾರೆ. ಇದರಿಂದ ಗ್ರಾಮಸ್ಥರು ರಸ್ತೆಯಲ್ಲಿ ವಾಹನ ಚಲಾಯಿಸಲು ಸಾಧ್ಯವಾಗುತ್ತಿಲ್ಲ. ಸ್ಥಳೀಯ ಖಾಸಗಿ ವ್ಯಕ್ತಿಯೊಬ್ಬರಿಗೆ ಹೆದರಿ ಈಗ ಕಾಮಗಾರಿಯನ್ನು ಮಾಡಲು ಅಧಿಕಾರಿಗಳು ಮತ್ತು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೆ ಯಾವುದೇ ಸ್ಪಂದನೆ ನೀಡುತ್ತಿಲ್ಲ. ಹಾಗಾಗಿ ಕೂಡಲೇ ರಸ್ತೆ ಕಾಮಗಾರಿ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ದಾರಿ ಹಿಡಿದಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಕ್ರೋಶಿತರಾದ ಜನರು ಜಿ.ಪಂ. ಇಂಜಿನಿಯರ್ ಕಛೇರಿಗೆ ಮುತ್ತಿಗೆ ಹಾಕಿ ಬೀಗ ಜಡಿಯಲು ಪ್ರಯತ್ನಿಸಿದ್ದು ಪೊಲೀಸರು ಮಧ್ಯಪ್ರವೇಶಿಸಿ ಕಛೇರಿ ಬಂದ್ ಮಾಡದಂತೆ ತಡೆದಿದ್ದಾರೆ. ಸ್ಥಳದಲ್ಲಿ ಮೂಡಿಗೆರೆ ಮತ್ತು ಗೋಣಿಬೀಡು ಠಾಣೆಯ ಪೊಲೀಸರು ಮೊಕ್ಕಾಂ ಹೂಡಿದ್ದರು. ಸ್ಥಳದಲ್ಲಿ ಕೆಲ ಸಮಯ ಬಿಗಿ ವಾತಾವರಣ ನಿರ್ಮಾಣವಾಗಿತ್ತು.

ಪ್ರತಿಭಟನಾಕಾರರು ಮೂಡಿಗೆರೆ ಜಿ.ಪಂ. ಇಂಜಿನಿಯರ್ ವಿಭಾಗದ ಎಇಇ ಮತ್ತು ಜೆಇ ವಿರುದ್ಧ ಪ್ರತಿಭಟನೆ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯ ಅಧಿಕಾರಿಗಳಿಂದ ಸಮರ್ಪಕ ಉತ್ತರ ಬಾರದ ಕಾರಣ ಚಿಕ್ಕಮಗಳೂರು ಜಿ.ಪಂ. ಎಕ್ಸಿಕ್ಯೂಟೀವ್ ಇಂಜಿನಿಯರ್ ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದು ಕುಳಿತ್ತಿದ್ದರು.

ನಂತರ ಎಕ್ಸಿಕ್ಯೂಟೀವ್ ಇಂಜಿನಿಯರ್ ಜ್ಞಾನಮೂರ್ತಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರ ಅಹವಾಲು ಆಲಿಸಿದರು. ಸಮಸ್ಯೆ ಪರಿಹಾರಕ್ಕೆ ನಾಲ್ಕು ದಿನ ಕಾಲಾವಕಾಶ ಕೇಳಿದಾಗ ಅದಕ್ಕೆ ಒಪ್ಪದ ಗ್ರಾಮಸ್ಥರು ನಾಳೆಯಿಂದಲೇ ಕೆಲಸ ಪ್ರಾರಂಭಿಸಬೇಕು ಎಂದು ಪಟ್ಟುಹಿಡಿದರು. ಕೊನೆಗೆ ಇಇ ಯವರು ಗುತ್ತಿಗೆದಾರ ಹಾಸನದ ವೆಂಕಟೇಶ್ ಅವರಿಗೆ ದೂರವಾಣಿ ಮೂಲಕ ಕೆಲಸ ಪ್ರಾರಂಭಿಸಲು ಸೂಚನೆ ನೀಡಿದ ಮೇರೆಗೆ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದಾರೆ.

ನಾಳೆಯಿಂದ ರಸ್ತೆ ಕೆಲಸ ಪ್ರಾರಂಭಿಸದೇ ಇದ್ದರೆ ಚಿಕ್ಕಮಗಳೂರು ಜಿ.ಪಂ. ಕಛೇರಿಗೆ ಮುತ್ತಿಗೆ ಹಾಕುವುದಾಗಿ ಗ್ರಾಮಸ್ಥರು ಪತ್ರಿಕೆಗೆ ತಿಳಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ