October 5, 2024

ತನ್ನ ಆಧ್ಯಾತ್ಮಿಕ ಪ್ರವಚನಗಳಿಂದ ವಿಶ್ವವಿಖ್ಯಾತಿ ಪಡೆದಿದ್ದ ರಾಜ್ಯದ ವಿಜಯಪುರ ಜಿಲ್ಲೆಯ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ (82 ವರ್ಷ) ಅನಂತದಲ್ಲಿ ಐಕ್ಯವಾಗಿದ್ದಾರೆ. ಸಿದ್ದೇಶ್ವರರು ನಡೆದಾಡುವ ದೇವರು, ಆಧುನಿಕ ವಿವೇಕಾನಂದ ಎಂದೇ ಪ್ರಖ್ಯಾತರಾಗಿದ್ದರು.

ಬಹುಶಃ ಕಳೆದ ಎರಡ್ಮೂರು ದಿನಗಳಿಂದ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸಿದ್ದೇಶ್ವರ ಸ್ವಾಮೀಜಿಗಳ ಸುದ್ದಿಯನ್ನು ಕೇಳುತ್ತಾ ಜನ ಬಹು ಕುತೂಹಲಿಗಳಾಗಿದ್ದರು. ಅವರ ಪ್ರವಚನಗಳನ್ನು ಕೇಳಿದವರಿಗೆ ಅವರ್ಯಾರು, ಅವರ ಮಹಿಮೆಯೇನು ಎಂಬುದು ಅರಿತಿದ್ದರು. ಆದರೆ ಅವರ ಬಗ್ಗೆ ಗೊತ್ತಿಲ್ಲದವರು ಯಾರಿವರು ? ಇಂತಹ ಮಹಿಮರು ಎಂದು ಎಷ್ಟೋ ಮಂದಿ ಗೂಗಲ್ ನಲ್ಲಿ ಹುಡುಕಾಡಿದರು.

ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಇವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವತಃ ಆಶ್ರಮಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು. ಸ್ವತಃ ಮುಖ್ಯಮಂತ್ರಿ ಕೇಳಿಕೊಂಡರೂ ಸಿದ್ದೇಶ್ವರರು ಆಸ್ಪತ್ರೆಯ ಚಿಕಿತ್ಸೆ ಪಡೆಯಲು ನಿರಾಕರಿಸಿದರು. ಸ್ವಯಂ ಚಿಕಿತ್ಸೆಯೇ ಅವರ ಪದ್ದತಿಯಾಗಿತ್ತು. ಹಲವು ದಿನಗಳಿಂದ ಅನ್ನಾಹಾರ ತ್ಯಜಿಸಿದ್ದ ಸಿದ್ದೇಶ್ವರರರು ನಿನ್ನೆ ರಾತ್ರಿ ಕೊನೆಯುಸಿರೆಳೆದರು.

ಪ್ರಧಾನಿ ನರೇಂದ್ರ ಮೋದಿಯವರು ಶ್ರೀ ಸಿದ್ಧೇಶ್ವರ ಸ್ವಾಮಿಯವರ ನಿಧನಕ್ಕೆ ತಮ್ಮ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ತಮ್ಮ ಟ್ವೀಟ್ ಮೂಲಕ ಅವರ ಆಧ್ಯಾತ್ಮಿಕ ಸೇವೆಯನ್ನು ಸ್ಮರಿಸಿದ್ದಾರೆ.

ಹೌದು, ಸಿದ್ದೇಶ್ವರ ಸ್ವಾಮೀಜಿ ಎಂದಿಗೂ ಕಾವಿ ತೊಟ್ಟವರಲ್ಲ. ಹೆಸರಿನ ಮುಂದೆ ಶ್ರೀ ಶ್ರೀ ಶ್ರೀ ಹಾಕಿಕೊಂಡವರಲ್ಲ. ಹಮ್ಮು ಬಿಮ್ಮು ಇಲ್ಲದ ಸಾದಾ ಸೀದಾ ಸಾಮಾನ್ಯ ಯೋಗಿ ಇವರು. ತಮ್ಮ ಆಳವಾದ ಆಧ್ಯಾತ್ಮಿಕ ಚಿಂತನೆಗಳಿಂದ ಪ್ರವಚನಗಳಿಂದ ಕೋಟ್ಯಾಂತರ ಜನರ ಬಾಳಿಗೆ ಬೆಳಕಾದವರು. ಇವರು ಕೇಂದ್ರ ಸರ್ಕಾರ ನೀಡಿದ ಪದ್ಮಶ್ರೀ ಪ್ರಶಸ್ತಿ, ವಿಶ್ವವಿದ್ಯಾನಿಲಯಗಳು ನೀಡಿದ ಡಾಕ್ಟರೇಟ್ ಪದವಿಗಳನ್ನು ನಿರಾಕರಿಸಿದ್ದರು.

ಕಳೆದ ವರ್ಷ ನರೇಂದ್ರ ಮೋದಿಯವರು ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿದಾಗ ಬಿಡುಗಡೆ ಮಾಡಿದ ಯೋಗಕ್ಕೆ ಸಂಬಂಧಿಸಿದ ಕೃತಿಗಳನ್ನು ಬರೆದವರು ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು. ಭಾರತೀಯ ಯೋಗಪರಂಪರೆ, ಆಧ್ಯಾತ್ಮಿಕ ಚಿಂತನೆಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿ ಅದರ ಸಾರವನ್ನು ಪುಸ್ತಕಗಳ ರೂಪದಲ್ಲಿ, ಪ್ರವಚನಗಳ ರೂಪದಲ್ಲಿ ಜನರಿಗೆ ನೀಡುತ್ತಾ ಬಂದರು.

ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಶ್ರೀಗಳು ವಿಜಯಪುರದ ಜ್ಞಾನಯೋಗಾಶ್ರಮಕ್ಕೆ ವಿದ್ಯಾಭ್ಯಾಸಕ್ಕೆ ಸೇರಿದಾಗ ಅಲ್ಲಿನ ಗುರುಗಳಾದ ವೇದಾಂತ ಕೇಸರಿ ಮಲ್ಲಿಕಾರ್ಜುನ ಸ್ವಾಮಿಗಳ ಗಮನವನ್ನು ಸೆಳೆದರು. ಇವರ ಚುರುಕುತನವನ್ನು ಗಮನಿಸಿ ಮಲ್ಲಿಕಾರ್ಜುನ ಸ್ವಾಮಿಗಳು ತಾವು ಪ್ರವಚನ ನೀಡುವ ಸ್ಥಳಗಳಿಗೆ ಇವರನ್ನು ಕರೆದೊಯ್ಯತೊಡಗಿದರು. ಜೊತೆ ಜೊತೆಗೆ ಇವರ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಸಿದ್ದೇಶ್ವರರು ತತ್ವಶಾಸ್ತ್ರದಲ್ಲಿ ಎಂ.ಎ. ಪದವಿ ಗಳಿಸಿದರು. ಕನ್ನಡ, ಸಂಸ್ಕøತ, ಇಂಗ್ಲೀಷ್, ಮರಾಠಿ, ಹಿಂದಿ ಭಾಷೆಗಳಲ್ಲಿ ನೈಪುಣ್ಯತೆ ಗಳಿಸಿದರು.

ಜ್ಞಾನಯೋಗಾಶ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ನಂತರ ಇವರು ಪ್ರವಚನಗಳನ್ನು ನೀಡಲು ಪ್ರಾರಂಭಿಸಿದರು. ಇವರ ಪ್ರವಚನಗಳನ್ನು ಕೇಳಲು ಸಾವಿರಾರು ಜನರು ಸೇರುತ್ತಿದ್ದರು. ಕನ್ನಡ, ಇಂಗ್ಲೀಷ್, ಹಿಂದಿ, ಮರಾಠಿ ಭಾಷೆಗಳಲ್ಲಿ ಇವರು ಪ್ರವಚನ ನೀಡುತ್ತಿದ್ದರು. ದೇಶವಿದೇಶಗಳಲ್ಲಿ ಇವರ ಪ್ರವಚನ ಕಾರ್ಯಕ್ರಮ ಏರ್ಪಡಿಸಲಾಗುತ್ತಿತ್ತು.

ಸರಳ ಜೀವನ, ಮನಸ್ಸಿನ ನೆಮ್ಮದಿ, ಉತ್ತಮ ನಡಾವಳಿಕೆ, ಆಧ್ಯಾತ್ಮಿಕ ಚಿಂತೆನೆ ….ಹೀಗೆ ಮನುಷ್ಯನ ಜೀವನವನ್ನು ಅರ್ಥಪೂರ್ಣವಾಗಿಸಲು ಬೇಕಾದ ವಿಚಾರಗಳ ಬಗ್ಗೆ ಇವರು ಬಹಳ ಸರಳ ಭಾಷೆಯಲ್ಲಿ, ಕತೆ ಮತ್ತು ಉದಾಹರಣೆಗಳ ಮೂಲಕ ನೀಡುತ್ತಿದ್ದ ಪ್ರವಚನ ಕೇಳುಗರನ್ನು ಮಂತ್ರಮುಗ್ದಗೊಳಿಸುತ್ತಿತ್ತು.

ಇಂತಹ ಮಹಾಮಹಿಮರಾದ ಶ್ರೀ ಸಿದ್ದೇಶ್ವರರು ಇವತ್ತು ದೈಹಿಕವಾಗಿ ನಮ್ಮನ್ನಗಲಿದ್ದಾರೆ. ಆದರೆ ಅವರ ಪ್ರವಚನಗಳ ಮೂಲಕ ಸದಾ ನಮ್ಮಜೊತೆ ಅಜರಾಮರರಾಗಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ