October 5, 2024

ಗುರುವೋ ನಿರ್ಮಲಾ: ಶಾಂತಾ: ಸಾಧವೋಮಿತಭಾಷಿಣ: |

ರಾಗದ್ವೇಷವಿನಿರ್ಮುಕ್ತಾ: ಸದಾಚಾರಾ: ಹಿತೈಷಿಣ: ||

“ನಿರ್ಮಲವಾದ ಮನಸ್ಸಿನಿಂದ, ಶಾಂತ, ಸಾಧು ಸ್ವಭಾವ ಉಳ್ಳವರಾಗಿ, ಹಿತಮಿತವಾಗಿ ಮಾತಾಡುತ್ತಾ ರಾಗದ್ವೇಷಗಳನ್ನು ತೊರೆದು ಸದಚಾರ ಸಂಪನ್ನರಾಗಿ ಸದಾ ಲೋಕಕ್ಕೆ ಹಿತವನ್ನೇ ಬಯಸುವವರೇ ಗುರುಗಳು”.

ಸದಾ ಶಾಂತಚಿತ್ತರಾಗಿ ಕನ್ನಡಕ್ಕಾಗಿಯೇ ತಮ್ಮ ತನುಮನವನ್ನು ಅರ್ಪಿಸಿಕೊಂಡಿದ್ದ ನಮ್ಮ ಜಾವಳಿಯ ಶ್ರೀ ಲಕ್ಷ್ಮಣರಾವ್ ಗುರ್ಜರ್ ಶಾಲೆಯ [ಈಗ ಅದು ಬಿ.ಜಿ.ಎಸ್ ಶಾಲೆ ಎಂದಾಗಿದೆ] ಕನ್ನಡ ಪಂಡಿತರು ನಮ್ಮ ಶ್ರೀ ಶಿವಕುಮಾರರು ಗುಡ್ಡಗಾಡಿನ ಈ ಶಾಲೆಯಲ್ಲಿ ಇಂತಹವರ ಗರಡಿಯಲ್ಲಿ ಓದಿದ ಸೌಭಾಗ್ಯ ನನ್ನದು. ಸದಾ ಚಟುವಟಿಕೆಯ ರೂವಾರಿಯಾಗಿ ಕನ್ನಡಕ್ಕಾಗಿ ಹೊಸತನ್ನು ತರುವ ಹಂಬಲ ಇವರಿಗೆ, ಮಕ್ಕಳನ್ನು ಪ್ರೀತಿಯಿಂದ ಗದರಿಸುತ್ತಾ ಅವರಿಂದ ಅವರೊಳಗೆ ಅಡಗಿರುವ ಕವಿಯೊಬ್ಬನನ್ನು ಹೊರತಂದವರು, ಅನೇಕ ಕಥೆ ಕವನಗಳನ್ನು ನಮ್ಮಿಂದ ಬರೆಸುತ್ತಾ ನಮ್ಮನ್ನು ಹೈಸ್ಕೂಲಿನಲ್ಲಿಯೇ ಪುಟ್ಟ ಸಾಹಿತಿಗಳನ್ನಾಗಿ ಮಾಡಿದ ಹೆಮ್ಮೆ ಇವರದು.

ಶಾಲೆಯ ವಾರ್ಷಿಕ ಪತ್ರಿಕೆಗೆ ಎಲ್ಲ ಮಕ್ಕಳು ಏನಾದರು ಬರೆಯಲೇಬೇಕು ಎಂಬ ಹಂಬಲದಿಂದ ಹತ್ತು ಹಲವಾರು ವಿಷಯಗಳನ್ನು ಹುಡುಕಿ ಹುರುಪಿನಿಂದ ತರುತ್ತಿದ್ದರು, ಮಕ್ಕಳ ಜೊತೆ ಮಕ್ಕಳಾಗಿ ತಿದ್ದಿ ತೀಡಿ ಬೆಳೆಸಿದವರು. ಕೇವಲ ಬರವಣಿಗೆ ಮಾತ್ರವಲ್ಲದೆ ಒಳ್ಳೆಯ ಸಾಹಿತಿಗಳು ಕೂಡ ಹೌದು, ಅವರು ತಮ್ಮ ಪುಟ್ಟ ಪುಟ್ಟ ಕವನಗಳಲ್ಲಿ ಇಡೀ ಜೀವನದ ಸಾರವನ್ನೇ ತುಂಬುತ್ತಿದ್ದು ಯಾವ ಘನ ಪಂಡಿತರಿಗು ಕಮ್ಮಿಯಿರಲಿಲ್ಲ ಆದರೆ ದುರಾದೃಷ್ಟವೆಂದರೆ ಅವರ ಈ ಪ್ರತಿಭೆಗೆ ತಕ್ಕ ಪುರಸ್ಕಾರ ದೊರೆಯಲಿಲ್ಲ.

ನಮ್ಮ ಪಠ್ಯದ ಕವನಗಳಿಗೆ ಸುಶ್ರಾವ್ಯವಾದ ರಾಗ ಹಾಕಿ ತರಗತಿಯಲ್ಲಿ ಹಾಡುತ್ತಿದ್ದರು, ಹೆಂಗರುಳಿನ ವ್ಯಕ್ತಿತ್ವದ ಇವರು ವರಕವಿ ಬೇಂದ್ರೆಯವರ “ನಾನು ಬಡವಿ ಆತ ಬಡವ” ಇಂತಹ ಕವನಗಳನ್ನು ಹಾಡುವಾಗ ತುಂಬ ಭಾವುಕರಾಗಿ ಕಣ್ಣಿಂದ ನೀರು ತಾನಾಗಿಯೇ ಹರಿದು ಬರುತ್ತಿತ್ತು ಆಗ ನಮ್ಮ ಎಳೆಯ ಮನಸ್ಸಿಗೆ ಇವರ ಭಾವನಾತ್ಮಕತೆ, ಆ ತನ್ಮಯತೆ ಅರ್ಥವಾಗದೆ ಪಿಳಿಪಿಳಿ ಕಣ್ಣು ಬಿಡುತ್ತಿದ್ದೆವು. ”ತಾಯಿ ಸತ್ತ ಮೇಲೆ ತವರಿಗೆ ಎಂದು” ಹಾಡುವಾಗ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಅವರ ಅಂತ:ಕರಣದ ಭಾವ ಈಗಲೂ ಕಣ್ಣ ಮುಂದೆ ಬರುತ್ತದೆ.

ಅದು 80 ರ ದಶಕ, ಆಗಲೆ ತರಗತಿಯಲ್ಲಿ ನಮ್ಮಿಂದಲೇ ಪಾಠ ಮಾಡಿಸುತ್ತಾ ನಮಗೆ ಮಾನಸಿಕ ಧೈರ್ಯ ನೀಡಿದವರು ಬಹುಶ: ಇಂತಹ ಕಲಿಕೆ ನಮ್ಮ ಜಿಲ್ಲೆಯ ಯಾವ ಶಾಲೆಯಲ್ಲಿಯೂ ಇರಲಿಲ್ಲ ಎಂಬುದು ನಮ್ಮ ಹೆಗ್ಗಳಿಕೆ. ಶಾಲೆಯ “ಹೇಮಕಿರಣ” ಎಂಬ ವಾರ್ಷಿಕ ಪತ್ರಿಕೆಯನ್ನು ನಮ್ಮ ಸ್ವಹಸ್ತದಿಂದ ಬರೆಸುತ್ತಿದ್ದ ಕೀರ್ತಿ ಇವರದು. ನಮ್ಮದು ಹಳ್ಳಿ ಊರಿನ ಶಾಲೆಯಾದರು ಸಹ ಯಾವ ಪೇಟೆಯ ಶಾಲೆಗು ಕಮ್ಮಿ ಇರಲಿಲ್ಲ ಆ ಮಟ್ಟದಲ್ಲಿ ಜಿಲ್ಲೆಯ ಹಾಗು ಶಾಲೆಯ ಕೀರ್ತಿಯನ್ನು ರಾಜ್ಯಾದ್ಯಂತ ಎತ್ತಿ ಹಿಡಿದ ಮಹಾನುಭಾವರು.

ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ”ಜಾವಳಿ ಶಾಲೆಯ ಮಕ್ಕಳಿದ್ದಾರೆ ಎಂದರೆ ಬೇರೆಯವರಿಗೆಲ್ಲಿ ಬಹುಮಾನ..?” ಎಂದು ಎಲ್ಲರು ಹೇಳುವಂತಹ ಶಿಸ್ತಿನ ತರಬೇತಿ ಇವರದು. ಗಂಭೀರ ನಡಿಗೆ, ಹಿತಮಿತವಾದ ಮಾತು,ಸದಾ ನಗು ಮುಖ,ತಮ್ಮ ಹಿಪ್ಪಿ ಕೂದಲನ್ನು ಎಡಗೈಯಿಂದ ತಳ್ಳಿಕೊಳ್ಳುತ್ತಾ ಪಾಠ ಮಾಡುತ್ತಿದ್ದ ವೈಖರಿ ಇಂದಿಗು ಕಣ್ಣಿಗೆ ಕಟ್ಟುವಂತಿದೆ. ಜೀವನದಲ್ಲಿ ಅತ್ಯಂತ ಸರಳತೆ ಎದ್ದು ಕಾಣುತ್ತಿತ್ತು, ಜೀವನ ನಾವು ನೆನೆಸಿದಂತೆ ಇರುವುದಿಲ್ಲ ಆದ್ದರಿಂದ ಅದನ್ನು ಬಂದಂತೆ ಸೀಕರಿಸಬೇಕು ಆಗ ತೃಪ್ತಿಯಾಗಿ ಇರಬಹುದು ಎಂದು ಸಹಜತೆಯ ಅರಿವನ್ನು ಹೇಳುವುದನ್ನು ಮರೆಯುತ್ತಿರಲಿಲ್ಲ.

ನಮ್ಮ ದರ್ಪಣ ಪತ್ರಿಕೆ ಅವರ ಮನೆಗೆ ತಪ್ಪದೆ ಹೋಗುತ್ತಿತ್ತು ಅದರಲ್ಲಿನ ನನ್ನ ಕಗ್ಗದ ಬರಹವನ್ನು ತುಂಬು ಹೃದಯದಿಂದ ಮೆಚ್ಚಿಕೊಂಡು ನನ್ನ ಶಿಷ್ಯಳಾಗಿದ್ದಕ್ಕೆ ನನಗೆ ಹೆಮ್ಮೆ ಎನ್ನುತ್ತಿದ್ದರು,ಅಲ್ಲದೆ ಗಂಟೆಗಟ್ಟಲೆ ಅದರ ಬಗ್ಗೆ ಚರ್ಚೆ ಅಲ್ಲದೆ ಮುಂದಿನ ಸಾರಿ ಇದರ ಬಗ್ಗೆ ಬರಿ ಎಂಬ ಸಲಹೆ ಕೂಡ ಇರುತ್ತಿತ್ತು. ಇವರ ಮೆಚ್ಚಿನ ವ್ಯಕ್ತಿ ‘ಆಚಾರ್ಯ ಚಾಣುಕ್ಯರು’, ಅವರ ಹಲವು ವಿಚಾರಗಳ ಬಗ್ಗೆ ಹೇಳಿದ್ದರು ಆಗ ಅವರಿಗೆ ನಾನು ಬರೆದ “ಅರ್ಥಶಾಸ್ತ್ರ ವಿಚಾರ:” ಎಂಬ ಪುಸ್ತಕವನ್ನು ಕಳಿಸಿದ್ದೆ ಅದನ್ನು ನೋಡಿದ ಅವರು ಅಷ್ಟು ಹೊತ್ತು ಮಾತಾಡಿದರು ಸಹ ಬರೆದ ಪುಸ್ತಕದ ಬಗ್ಗೆ ಹೇಳಲಿಲ್ಲ ಎಂದು ಆಚ್ಚರಿಪಟ್ಟರು ಅಲ್ಲದೆ ಅದನ್ನು ಅವರ ಆತ್ಮೀರೊಬ್ಬರಿಗೆ ಹೆಮ್ಮೆಯಿಂದ ಕೊಟ್ಟೆ ಎಂದು ಇತ್ತಿಚೆಗೆ ಹೇಳಿ ಇನ್ನೊಂದು ಕಳಿಸು ಎಂದು ಪ್ರೀತಿಯಿಂದ ಹೇಳಿದ್ದರು. ನನ್ನ “ಕನ್ನಡ ಸುಧೆಯೊಳ್ ಲೀನ” ಎಂಬ ಅಕ್ಷರಮಾಲೆಯ ಕವನ ರೂಪದ ಬರಹಕ್ಕೆ ಅತ್ಯಂತ ಸಂತೋಷಪಟ್ಟು ಕನ್ನಡಕ್ಕೆ ಇದೊಂದು ಹೊಸ ರೀತಿಯ ಸಾಹಿತ್ಯವಾಗುತ್ತದೆ ಪುಸ್ತಕ ಮಾಡು ಎಂದು ಹುರಿದುಂಬಿಸಿದ್ದರು. ನಾನು ಸಹ ಅವರಿಂದಲೆ ಈ ಪುಸ್ತಕವನ್ನು ಬಿಡುಗಡೆ ಮಾಡಿಸಬೇಕೆಂಬ ಆಸೆ ಇಟ್ಟುಕೊಂಡಿದ್ದೆ ಆದರೆ ನನ್ನ ದುರಾದೃಷ್ಡವೋ ಏನೊ ಅದು ಸಾಧ್ಯವಾಗಲಿಲ್ಲ.

ಅತ್ಯಂತ ಪ್ರೀತಿಪಾತ್ರರು, ಶಿಷ್ಯರ ಏಳಿಗೆ ಒಬ್ಬ ಗುರುವಿಗೆ ಕೋಟಿ ಹಣಕ್ಕಿಂತಲೂ ಮಿಗಿಲು ಎನ್ನುತ್ತಿದ್ದ ಗುರುಗಳು ಮೊನ್ನೆ ನಮ್ಮನ್ನು ದೈಹಿಕವಾಗಿ ಅಗಲಿರುವುದು ಅತ್ಯಂತ ದು:ಖದ ವಿಷಯ. ಇಂದು ನಾನೇನಾದರು ಎರಡಕ್ಷರ ಬರೆಯಲು ಕಲಿತಿದ್ದರೆ ಅದು ಇವರಿಂದಲೇ ಎಂದು ಹೆಮ್ಮೆಯಿಂದ ಹಾಗು ಅತ್ಯಂತ ಗೌರವದಿಂದ ಸ್ಮರಿಸುತ್ತೇನೆ.

ಇಂತಹ ಸರಳ ಹಾಗು ಸಜ್ಜನಿಕೆಯ ವ್ಯಕ್ತಿಯನ್ನು ಗುರುವಾಗಿ ಕೊಟ್ಟ ದೇವರಿಗು, ನನ್ನ ಹೆತ್ತವರಿಗು ಹಾಗು ಕಲಿತ ಶಾಲೆಗು ನನ್ನ ಅನಂತ ನಮಸ್ಕಾರಗಳನ್ನು ಸಲ್ಲಿಸುತ್ತೇನೆ.

ಗುರುಗಳೇ, ನೀವು ದೈಹಿಕವಾಗಿ ಇಂದು ದೂರವಾದರೇನಂತೆ ನಾನು ಬರೆಯುವ ಪ್ರತಿ ಅಕ್ಷರದಲ್ಲಿಯು ನೀವು ಇದ್ದೀರಿ ಎನ್ನುತ್ತ ಈ ಪುಟ್ಟ ನಾಲ್ಕಕ್ಷರವನ್ನು ನಿಮ್ಮ ಪಾದಕ್ಕೆ ಅರ್ಪಣೆ ಮಾಡುತ್ತಿದ್ದೇನೆ ಒಪ್ಪಿಸಿಕೊಳ್ಳಿ.

ಇಂತೀ ನಿಮ್ಮ ಶಿಷ್ಯೆ.
ಡಾ. ಸುಧಾ ಹೆಚ್.ಎಸ್
ಸಂಸ್ಕೃತ ಉಪನ್ಯಾಸಕರು, ಮೈಸೂರು.
ಹಳೆವಿದ್ಯಾರ್ಥಿ, ಶ್ರೀ ಲಕ್ಷಣ್ ರಾವ್ ಗುರ್ಜಾರ್
ಪ್ರೌಢಶಾಲೆ, ಜಾವಳಿ
ಮೊ. 9448233119

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ