October 5, 2024
* ಅರ್ಜುನ್ ದೇವಾಲದಕೆರೆ
‘ಆತ ಬದುಕಿರಬೇಕಿತ್ತಾ?’. ಗೊತ್ತಿಲ್ಲ. ‘ಆತ ಇನ್ನೂ ಬರೆಯಬೇಕಿತ್ತ?’. ಇಲ್ಲ ಎಂದರೆ ಆತ್ಮದ್ರೋಹಿಯಾಗುತ್ತೇನೆ. ‘ಆತ ವೈಯಕ್ತಿಕ ಜೀವನದಲ್ಲಿ ಸರಿ ಇರಲಿಲ್ಲವಂತೆ’. ಅವನೇನು ನನ್ನಣ್ಣನ, ಚಿಕ್ಕಪ್ಪನ?. ‘ಆತನೇನು ಒಳ್ಳೆಯ ಬರಹಗಾರನಲ್ಲವಂತೆ’. ನಕ್ಕು ಸುಮ್ಮನಾಗಿಬಿಡುತ್ತೇನೆ. ಇನ್ನೇನು ತಾನೆ ಮಾಡಲು ಸಾಧ್ಯ. ಕನ್ನಡ ಅಕ್ಷರಲೋಕವನ್ನ ಅಕ್ಷರಶಃ ಬರೋಬ್ಬರಿ ಎರಡು ದಶಕಗಳಷ್ಟು ಕಾಲ ಆಳಿದವನು ಆರ್ ಬಿ. ಬರಿ ಓದುಗರನ್ನಲ್ಲ , ಇಂದು ಮುಂಚೂಣಿಯಲ್ಲಿದ್ದುಕೊಂಡು ಆರ್ಬಿಯನ್ನು ಬೈಯ್ದುಕೊಂಡು ತಿರುಗುವ ಅದೆಷ್ಟೋ ತಲೆಮಾಸಿದ ಬರಹಗಾರರನ್ನು ಹುಟ್ಟುಹಾಕಿದ್ದೇ ಈ ಆರ್ಬಿ. ಹಾಗಂತ ಅವನೇನು ಇವರ ಕೈ ಹಿಡಿದು ಅಕ್ಷರ ತಿದ್ದಿಸಲಿಲ್ಲ. ಅವನು ಬರೆದದ್ದನ್ನು ಓದುತ್ತಿದ್ದರೇನೇ ಓದುಗರಲ್ಲೊಬ್ಬ ಬರಹಗಾರ ಮಿಸುಕಾಡುತ್ತಿದ್ದ. ಅದು ಅವನ ಬರಹದ ತಾಕತ್ತು.
ನನಗಿವನ ಪರಿಚಯ ಬಹಳ ಹಳೆಯದು. ನನಗಾಗ ಹತ್ತೋ ಹನ್ನೆರೆಡೋ ವರ್ಷ. ಬಾಲಮಂಗಳ, ಚಂಪಕದಿಂದ ಆಗಷ್ಟೇ ಬೇರೆ ಪುಸ್ತಕಗಳ ಕಡೆ ವಾಲುತ್ತಿದ್ದೆ. ಬಿ.ವಿ ಅನಂತ್ರಾಮರ ‘ಜಿಂಕೆ’ ಆಗಿನ ಕಾಲದ ನನ್ನ ಸೂಪರ್ ಹೀರೊ. ಆ ಪುಸ್ತಕಗಳಲ್ಲೇ ಮುಳುಗಿಹೋಗಿದ್ದ ಆ ದಿನಗಳಲ್ಲಿ, ಸದಾ ಅಕ್ಕನ ಬ್ಯಾಗಿನಲ್ಲಿರುತ್ತಿದ್ದ ‘ಓ ಮನಸೇ’ ಪಾಕ್ಷಿಕ ಯಾವಾಗ ನನ್ನನ್ನು ಆವರಿಸಿಕೊಂಡಿತೋ ತಿಳಿಯಲೇ ಇಲ್ಲ. ಯಾರಪ್ಪಾ ಇದು ಆರ್ಬಿ ಎಂದು ಲೈಬ್ರರಿಯಲ್ಲಿ ಹುಡುಕಿದರೆ, ಆತನ ಹೆಸರಿನಲ್ಲಿದ್ದ ದಪ್ಪ ದಪ್ಪ ಪುಸ್ತಕಗಳು ಹೆದರಿಸಿ , ಹಿಮ್ಮೆಟ್ಟಿಸಿದವು. ಓ ಮನಸೇ ಮಾತ್ರ ನಿರಂತರವಾಗಿ ಓದಿಸಿಕೊಳ್ಳುತಿತ್ತು. ಅದ್ಯಾವುದೋ ದಿನ , ಸುಮ್ಮನೆ ಲೈಬ್ರರಿಯಲ್ಲಿ ಅಡ್ಡಾಡುತ್ತಿದ್ದವನ ಕೈಗೆ ಮೇಜಿನಮೇಲಿದ್ದ ‘ಹೇಳಿ ಹೋಗು ಕಾರಣ’ ಕೈ ಸೋಕಿತ್ತು. ಸಂಜೆಯೇ ಸ್ಕೂಲ್ ಬ್ಯಾಗೇರಿ , ರಾತ್ರಿಯ ನೀರವತೆಯ ಓದಾಗಿ ಮಾರ್ಪಾಡಾಗಿತ್ತು. ನನಗಾಗ ಹದಿನೈದೋ ಹದಿನಾರೋ ಇರಬೇಕು. ಓದಿ ಕೆಳಗಿಟ್ಟ ಮರುಕ್ಷಣ, ನಾನ್ಯಾವುದೋ ಅಕ್ಷರಜಾತ್ರೆಯೊಳಗೆ, ತರತರಹದ ಅಕ್ಷರಗಳ ಕ್ಯಾನ್ಡಿಯನ್ನು ಚಪ್ಪರಿಸಿ ಬಂದ ಅನುಭವ. ಮೊದಲ ಬಾರಿಗೆ ಅನಂತರಾಮ್ ಸಪ್ಪೆ ಎನಿಸಿದ್ದರು. ಅಲ್ಲಿಂದ ಅವನ ಯಾವ ಪುಸ್ತಕ ಕಣ್ಣಿಗೆಬಿದ್ದರೂ ಬಾಚಿ ಓದಿಕೂಳ್ಳುತ್ತಿದ್ದೆ. ಕಾಲೇಜು ದಿನಗಳಲ್ಲಿ ಕುವೆಂಪು, ಬೇಂದ್ರೆ, ಮಾಸ್ತಿ,ಭೈರಪ್ಪ,ಕಾರಂತರು, ತೇಜಸ್ವಿ ಎಲ್ಲರೂ ನನ್ನ ಓದಿನ ಪಡಸಾಲೆಗೆ ಬಂದು ಬೀಡುಬಿಟ್ಟರೂ , ಆರ್ಬಿ ಮಾತ್ರ ಮಸ್ತಕದಲ್ಲಿ ಪಟ್ಟಾಗಿ ಅಚ್ಚಾಗಿ ಕುಳಿತಿದ್ದ. ಉಳಿದವರನ್ನು ಓದಬೇಕಾದರೆ ಹೇಗಪ್ಪಾ ಹೀಗೆಲ್ಲ ಬರೆಯುತ್ತಾರೆ ಎನಿಸಿದರೆ, ಆರ್ಬಿಮಾತ್ರ ನೋಡು ನೀನು ಕೂಡ ಹೀಗೆ ಬರೆಯಬಹುದು ಎನ್ನುತ್ತಿದ್ದ.
ಕೆಲಸವಿಲ್ಲದೆ ಖಾಲಿ ಕೈನಲ್ಲಿ ಬೆಂಗಳೂರಿನ ಬೀದಿಗಳನ್ನು ತಿರುಗುತ್ತಿದ್ದಾಗ, ‘ನಿಂಗೆ ಆರ್ಬಿ ಬುಕ್ಸ್ ಬಾರಿ ಇಷ್ಟಾ ಅಲ್ಲ, ಅವ್ರ್ ಆಫೀಸ್ ನಮ ರೂಮ್ ಹತ್ರಾನೆ ಇರೋದು, ಬಂದ್ರೆ ಮೀಟ್ ಮಾಡ್ಸ್ತೀನಿ’. ಅಂದಿದ್ದ ಗೆಳೆಯನನ್ನ ಮರು ಪ್ರಶ್ನಿಸದೆ , ಅವನ ಅಡ್ರೆಸ್ಸ್ ಹುಡುಕಿಕೊಂಡು ಹೋಗಿದ್ದೆ. ಅರ್ಬಿ ಆಫೀಸಲ್ಲಿ ಇದ್ರು. ಅದ್ಯಾರ ಜೊತೆಯೋ ಮಾತನಾಡುತಿದ್ದರು. ಅವರು ಹೊರಡುವ ಮೊದಲು ಇವರ ಕಾಲಿಗೆ ಬಿದ್ದರು. ಎರಡು ನಿಮಿಷಗಳ ನಂತರ , ನಾನವನ ಮುಂದಿದ್ದೆ. ಗೆಳೆಯನೇ ಎಲ್ಲವನ್ನು ಹೇಳುತಿದ್ದ, ನಾನವನನ್ನ ದಿಟ್ಟಿಸುತಿದ್ದೆನಷ್ಟೆ. ಆಗೆಲ್ಲ ಎಲ್ಲರೊಂದಿಗೆ ನಾನಿಷ್ಟು ಬೆರೆಯುತ್ತಿರಲಿಲ್ಲ. ವಯಸ್ಸಿಗೆ ಮೀರಿದ ಸನ್ಯಾಸಿಯಾರೋ ತಲೆಯೊಳಗಿದ್ದ ಆಗ. ನಾನೇನೋ ಗೀಚಿದನ್ನು ಮೆಲ್ಲನೆ ಬ್ಯಾಗಿನಿಂದ ತೆರೆದು ಅವನ ಮುಂದಿಟ್ಟಿದ್ದೆ. ಅದೇನು ಅವನಿಗೆಂದೇ ಬರೆದದ್ದಲ್ಲ. ಅವನು ತುಟಿ ಅಲುಗಿಸದೆ ಓದಿದ. ನನ್ನ ಕಣ್ಣಲ್ಲೊಮ್ಮೆ ಇಣುಕಿ, ‘ಭಾರಿ ಭಾವುಕ ನೀನು. ಅಕ್ಷರಗಳಿನ್ನು ಮಾಗಬೇಕು’ ಎಂದ. ಏನರ್ಥವಾಯಿತೋ ಇಂದಿಗೂ ಗೊತ್ತಿಲ್ಲ. ಸರಿಯೆನ್ನುವಂತೆ ತಲೆಯಾಡಿಸಿದೆ. ಒಂದು ಕಾಫಿ , ಸಮೋಸ ತರಿಸಿಕೊಟ್ಟ. ಹೊರಡುವ ಕೊನೆ ಘಳಿಗೆಯಲ್ಲಿ , ಕಾಲಿಗೆ ಬೀಳಬೇಕಾ ಎನಿಸಿತು ? ಯೋಚನೆ ಮುಗಿಯುವಷ್ಟರಲ್ಲಿ ಒಳಗಿನ ಸನ್ಯಾಸಿ ಬಾಗಿಲಿನಿಂದ ಹೊರಕರೆತಂದಿದ್ದ. ಒಂದು ಫೋಟೋ ತಗೋಬೇಕಿತ್ತ ಅವನ ಜೊತೆ ? ಜೋಬಲ್ಲಿದ್ದ ೧೬೦೦ನೋಕಿಯಾ, ‘ನೀನು ಹೌದು ಎಂದಿದ್ದರೂ ನನಗೆ ಕಣ್ಣಿಲ್ಲ’ ಎಂದು ನೆನಪಿಸಿತ್ತು. ಅದೇ ಕೊನೆ ಮತ್ತೆಂದೂ ಆತನನ್ನು ಭೇಟಿಯಾಗಲು ಹೋಗಲಿಲ್ಲ. ಭೇಟಿಯಾಗುವಂತದ್ದೇನು ಇರಲಿಲ್ಲ ಕೂಡ. ಆತನ ಅಕ್ಷರಗಳ ಭೇಟಿ ಮಾತ್ರ ಪದೇ ಪದೇ ಆಗುತ್ತಲೇ ಇತ್ತು. ನಾ ಬರೆಯಲು ಕುಳಿತಾಗಲೂ ಬಂದು ಬೆನ್ನು ತಟ್ಟಿ ಹೋಗುತ್ತಿದ್ದದ್ದು ಅವನ ಅಕ್ಷರಗಳೇ.
ಆತನ ವೈಯಕ್ತಿಕ ಜೀವನದ ಬಗ್ಗೆ ಕೆಟ್ಟದಾಗಿ ಕಿವಿಯ ಮೇಲೆ ಬಿದ್ದಾಗಲೆಲ್ಲಾ, ಎಂದಿಗೂ ವಿರೋಧಿಸಬೇಕೆನಿಸಲೇ ಇಲ್ಲ. ಅಸಲಿಗೆ, ಆತನ್ಯಾರೋ ನನಗೆ ಗೊತ್ತೇ ಇಲ್ಲ. ನನಗೆ ಗೊತ್ತಿರುವುದೆಲ್ಲ ಆತನ ಬರಹಗಳಷ್ಟೆ. ಆತನೇ ತನ್ನ ಪುಸ್ತಕಗಳ ಅಫೀಡವಿಟ್ಟಿನಲ್ಲಿ ಬರೆದುಕೊಳ್ಳುವಂತೆ , ‘ಉಳಿದದ್ದನ್ನು ಕಟ್ಟಿಕೊಂಡು ಏನುಮಾಡುತ್ತೀರಿ?’. ನನಗೆ ಅವ್ನು ಎಡಚನ, ಬಲಪಂಥೀಯನಾ, ಒಳ್ಳೆಯವನ , ಕೆಟ್ಟವನ ಎನ್ನುವುದಕ್ಕಿಂತ ಆಗಲೂ ಈಗಲೂ ಕಾಡುವುದು, ಒಬ್ಬ ಬರಹಗಾರ ಅದು ಹೇಗೆ ಇಷ್ಟು ವರ್ಸಾಟೈಲ್ ಆಗಬಹುದು ಎನ್ನುವುದು. ಒಬ್ಬ ಬರಹಗಾರನಾಗಿ ಅರ್ಬಿ ನನಗಿಂದಿಗೂ ಅಚ್ಚರಿಯೇ. ಬರೆದ ಸಾಲು ಬರೆದವನಲ್ಲ, ಹೇಳಿದ ಕಥೆಯನ್ನು ಮತ್ತೆ ಇನ್ನೊಂದರೊಳಗೆ ತುರುಕಿದವನಲ್ಲ. ಯೋಚಿಸದೆ ಬರೆದವನೇ ಅಲ್ಲ. ಬರೆದದ್ದನ್ನು ಓದುಗ ಯೋಚಿಸುವಂತೆ ಮಾಡದೆ ಬಿಟ್ಟವನಲ್ಲ. ಹೌ ಆರ್ಬಿ, ಹೌ ಕ್ಯಾನ್ ದಿಸ್ ಪಾಸಿಬಲ್ ?. ಉತ್ತರ ಹೇಳಲು ಅವನಿಲ್ಲ. ಅವನಿದ್ದರೂ ಈ ಪ್ರಶ್ನೆಯನ್ನು ಅವನಿಗೆ ಕೇಳುತ್ತಿರಲಿಲ್ಲ. ಮತ್ತೆ ಹೇಳುತ್ತೇನೆ ಅವ್ನು ಬದುಕಿರಬೇಕಿತ್ತಾ ಇನ್ನಷ್ಟು ಕಾಲ? ಗೊತ್ತಿಲ್ಲ. ಆದರೆ ಅವನಿನ್ನಷ್ಟು ಬರೆಯಬೇಕಿತ್ತು. ಈಗಾಗಲೇ ಮುಂದಿನ ಹತ್ತು ತಲೆಮಾರುಗಳಿಗೆ ಬರಹದ ಹುಚ್ಚಿಡಿಸುವಷ್ಟು ಅವನು ಬರೆದಿದ್ದರು, ಇನ್ನೂ ಬರೆಯಬೇಕಿತ್ತು ಎನ್ನುವುದು ನನ್ನಾಸೆ/ದುರಾಸೆ. ಕೆಲವು ಕಾದಂಬರಿಗಳನ್ನು ಅರ್ಧದಲ್ಲೇ ಬಿಟ್ಟು ಹೋಗಬಾರದಿತ್ತು.
ಅವನು ಅರ್ಧ ಬರೆದ ಪ್ರದೋಷ ಕಾದಂಬರಿಯನ್ನು ಅವನ ಮಗಳು ಮುಂದುವರೆಸುತ್ತೇನೆ ಎಂದಾಗ ನಕ್ಕಷ್ಟೇ ಅಸಹ್ಯವಾಗಿ, ಓದುಗರ್ಯಾರೋ ನನ್ನ ಅತೀತ ಓದಿ ‘ಸರ್, ನೀವ್ ನೋಡಿ ಪ್ರದೋಷವನ್ನ ಮುಂದುವರೆಸಬಹುದು’ ಎಂದಾಗಲೂ ನಕ್ಕಿದ್ದೇನೆ. ಹೀ ಈಸ್ ಇರ್ರೆಪ್ಲೇಸೆಬಲ್ .ಅಂದಹಾಗೆ ಅವನ ಕೊನೆಕಾಲದಲ್ಲಿ ಬಂದ ‘ರಾಜ್ ಲೀಲ ವಿನೋದ’ ಮತ್ತು ಕಾಫಿ ನಾಡಿನ ದೊರೆ ಸಿದ್ಧಾರ್ಥನ ಬಗ್ಗೆ ಬರೆದ ಆ ಎರಡು ಪುಸ್ತಕಗಳೆರೆಡು ಅವನ ಬರಹಗಳೇ ಎಂದು ನಂಬುವಷ್ಟು ಅರ್ಬಿ ನನಗೆ ದೂರದವನಲ್ಲ. ಬರಹಕ್ಕೆ ಕುಳಿತಾಗ ಅವನದು ಹಸಿದ ಚಿರತೆಯ ವೇಗವಾದರೂ, ಬರೆಯುವ ಮುಂಚಿನ ಅವನ ತಯಾರಿ ಬೇಟೆಗೆ ಹೊಂಚಿನಿಂತ ಹುಲಿಯದ್ದೆ ತಯಾರಿ. ಅಂತವನು ರಾತ್ರೋರಾತ್ರಿ ಆ ಎರಡು ಜೊಳ್ಳು ಪುಸ್ತಕಗಳನ್ನು ಬರೆದನೆಂದು, ಅವನ ಅಕ್ಷರಗಳ ಪರಿಚಯವಿಲ್ಲದವರೇ ಹೇಳಬೇಕು.
ಅವನಿಲ್ಲದೆ ಇಂದಿಗೆ ಎರಡು ವರ್ಷ. ಅವನ ಸಾವಿನ ದಿನವೇನು ನನ್ನ ಕಣ್ಣಲ್ಲಿ ನೀರುಕ್ಕಿರಲಿಲ್ಲ. ಪುನೀತ್ ದೂರವಾದ ದಿನದಂತೆ. ಆದರೂ ಇಂದಿಗೂ ಐ ಮಿಸ್ ಹಿಸ್ ರೈಟಿಂಗ್ಸ್. ಬಹುಶಃ ನಾನವನನ್ನು ಎಂದಿಗೂ ಒಂದು ವ್ಯಕ್ತಿತ್ವವಾಗಿ ಅಪ್ಪಿಕೊಳ್ಳಲಿಲ್ಲ ಹಾಗಾಗಿಯೇ ಅವನನ್ನು ಒಪ್ಪಿಕೊಳ್ಳುವ ಅಥವಾ ಒಪ್ಪಿಕೊಳ್ಳದಿರುವ ಆಯ್ಕೆಗಳೇ ನನ್ನ ಮುಂದಿರಲಿಲ್ಲ. ನಂಗೇನಿದ್ದರೂ ಅವನು ಅಕ್ಷರಗಳ ಅಚ್ಚರಿ. ಇಂದಲ್ಲ ಇನ್ನಿಪ್ಪತ್ತು ವರ್ಷ ಬಿಟ್ಟರೂ ನನಗವನು ಅಚ್ಚರಿಯೇ.. ಬರೆಯುವಾಗ ಪ್ರೀತಿಯಿಂದ ಮೈದಡವುವ ಸ್ನೇಹಿತನೇ. ಎಲ್ಲೇ ಇರು ಬರೀತಾ ಇರು ಆರ್ಬಿ. ಉಳಿದ ಹಾಗೆ ಹೇಗೆ ಬದ್ಕತಿಯೋ ಅದು ನಿನ್ನಿಷ್ಟ. ನೀನೇನೂ ನನ್ನ ಸೋದರ ಮಾವನ ನಿನಗೆ ಹೀಗೇ ಬದುಕು ಅನ್ನೋಕೆ ..?
ಐ ರಿಯಲಿ ಮಿಸ್ ಯುವರ್ ರೈಟಿಂಗ್ಸ್ ಆರ್ಬಿ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ