October 5, 2024

* ದಿವಿನ್ ಮಗ್ಗಲಮಕ್ಕಿ

ಮೊದಲ ಬಾರಿಗೆ ಅಂಡಮಾನಿಗೆ ಹೋಗಬೇಕೆನಿಸಿದ್ದು ಭಾರತದ ದಕ್ಷಿಣದ ತುತ್ತತುದಿಗೆ ಹೋಗಬೇಕೆಂಬ ಆಸೆಯಿಂದ. ಆ ಕನಸಿನ ಬೆನ್ನತ್ತಿ ಈಗ್ಗೆ ಒಂದು ವರ್ಷದ ಹಿಂದೆ ಅಂಡಮಾನಿನ ಅದ್ಭುತಗಳನ್ನು ಅರಸಿ ಹೊರಟಿದ್ದೆ. ಭಾರತದ ದಕ್ಷಿಣದ ತುತ್ತತುದಿ ಯಾವುದು ಎಂದಾಗ ಬಹುತೇಕರು ಹೇಳೋದು ಕನ್ಯಾಕುಮಾರಿ ಅಂತ. ಆದರೆ ವಾಸ್ತವವಾಗಿ ಭಾರತದ ದಕ್ಷಿಣದ ಕೊನೆಯ ಲ್ಯಾಂಡ್‍ಮಾರ್ಕ್ ಅಂಡಮಾನ್ ನಿಕೋಬಾರ್ ದ್ವೀಪ ಸಮೂಹಗಳ ಗ್ರೇಟ್ ನಿಕೋಬಾರ್‍ನ ಇಂದಿರಾ ಪಾಯಿಂಟ್.
ಅದನ್ನು ಬಿಟ್ಟರೆ ಈ ದ್ವೀಪಗಳಲ್ಲಿ ನೋಡಬೇಕೆನ್ನಿಸಿದ್ದು ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿಟ್ಟು ಚಿತ್ರ ಹಿಂಸೆ ಕೊಟ್ಟ ಪೋರ್ಟ್ ಬ್ಲೇರ್‍ನ ಸೆಲ್ಯುಲರ್ ಜೈಲು.
ಆಝಾದ್ ಹಿಂದ್ ಫೌಝ್ ಸ್ಥಾಪಿಸಿ ಸ್ವಾತಂತ್ರ್ಯಕ್ಕೂ ಮೊದಲೇ 1943ರಲ್ಲೇ ಜಪಾನೀಯರ ಸಹಾಯ ದಿಂದ ಈ ದ್ವೀಪಗಳನ್ನು ತನ್ನ ತೆಕ್ಕೆಗೆ ಪಡೆದು ಸ್ವತಂತ್ರ ಭಾರತದ ಮೊದಲ ಪ್ರದೇಶಗಳೆಂದು ತ್ರಿವರ್ಣ ಧ್ವಜ ಹಾರಿಸಿದ ದೇಶದ ನಂಬರ್ ಒನ್ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್‍ಚಂದ್ರ ಬೋಸ್‍ರು ಧ್ವಜಹಾರಿಸಿದ ಸ್ಥಳ. ಇಂದಿಗೂ ಆಧುನಿಕ ಪ್ರಪಂಚದ ಸನಿಹಕ್ಕೆ ಬಾರದೆ ಆದಿ ಮಾನವನ ಜೀವನಶೈಲಿಯಲ್ಲೆ ಬದುಕುತ್ತಿರುವ ಜರಾವ, ಒಂಗೆ, ಸೆಂಟಿನಿಲಿಸ್, ಶಾಪ್‍ಮನ್, ಗ್ರೇಟ್ ಅಂಡಮಾನೀಸ್ ಮತ್ತು ನಿಕೋಬಾರಿಸ್ ಎಂಬ ಬುಡಕಟ್ಟು ಆದಿವಾಸಿಗಳು ಹಾಗೂ ಅಂಡ ಮಾನಿನಲ್ಲೇ ಸುಂದರ ಮತ್ತು ಅತ್ಯುತ್ತಮ ಬೀಚುಗಳನ್ನೊಳ ಗೊಂಡ ಹ್ಯಾವ್ಲಾಕ್(ಈಗ ಸ್ವರಾಜ್ ದ್ವೀಪ್ ಎಂದು ಮರುನಾಮಕರಣ ಮಾಡಲಾಗಿದೆ) ದ್ವೀಪದಲ್ಲಿ ಕಾಫಿ ದೊರೆ ವಿ.ಜಿ. ಸಿದ್ದಾರ್ಥ ಸಹಭಾಗಿತ್ವದಲ್ಲಿ ನಿರ್ಮಿಸಿದ್ದ ಬೇರ್ ಫೂಟ್ ರೆಸಾರ್ಟು ಇವಿಷ್ಟು ನನ್ನ ಅಂಡಮಾನಿನೆಡೆಗಿದ್ದ ಆಕರ್ಷಣೆ ಮತ್ತು ಕೌತುಕಗಳಾಗಿದ್ದವು.
ಮೊದಲು ಭೇಟಿ ನೀಡಿದ್ದೇ ಪೋರ್ಟುಬ್ಲೇರಿನ ಸೆಲ್ಯುಲರ್ ಜೈಲಿಗೆ. ಜಗತ್ತನ್ನೆಲ್ಲಾ ಆಳಿದ ಯುರೋಪಿಯನ್ನರ ವಸಾಹತುಶಾಹಿ ಆಡಳಿತದ ಕ್ರೂರ ಸೃಷ್ಟಿಯೇ ಈ ಪೀನಲ್ ಕಾಲೋನಿಗಳು. ತಾವುಗಳು ಆಳುತ್ತಿದ್ದ ದೇಶಗಳ ಹೋರಾಟಗಾರರನ್ನು ದೂರದ ದ್ವೀಪಗಳಿಗೆ ಸಾಗಿಸಿ, ಮೃಗಗಳಂತೆ ಕೆಲಸ ಮಾಡಿಸುತ್ತ, ನೆಟ್ಟಗೆ ಊಟವೂ ಕೊಡದೆ, ಸರಿಯಾಗಿ ಗಾಳಿ ಬೆಳಕೂ ಇಲ್ಲದಂತ ಕತ್ತಲ ಕೋಣೆಗಳಲ್ಲಿ ಕೂಡಿ ಹಾಕುವುದೇ ಈ ಜೈಲುಗಳ ಧ್ಯೇಯ. ಅದೇ ಕಾಲಾಪಾನಿ ಶಿಕ್ಷೆ.
ಫ್ರೆಂಚು ಗಯಾನದ ಡೆವಿಲ್ ಐಲ್ಯಾಂಡು, ಬರ್ಮುಡಾ, ಜಾರ್ಜಿಯಾ, ಆಸ್ಟ್ರೇಲಿಯಾ, ಲ್ಯಾಟಿನ್ ಅಮೇರಿಕಾದ ಕೆಲ ದ್ವೀಪಗಳು ಪೀನಲ್ ಕಾಲೋನಿಯ ಉದಾಹರಣೆಗಳು. ಭಾರತವನ್ನಾಳುತ್ತಿದ್ದ ಬ್ರೀಟೀಷರಿಗೆ ಇಂತದ್ದೊಂದು ಸ್ಥಳವಾಗಿ ಆಯ್ಕೆಯಾಗಿದ್ದು ಸುತ್ತಲೂ ಸಮುದ್ರದಿಂದ ಕೂಡಿದ್ದ, ಭಾರತದ ಗಡಿಯಿಂದ ಕನಿಷ್ಟ 1300 ಕಿ.ಮೀ. ದೂರವಿದ್ದ ಅಂಡಮಾನ್ ದ್ವೀಪದ ಇಂದಿನ ರಾಜಧಾನಿ ಫೋರ್ಟ್‍ಬ್ಲೇರ್. 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಿಂದಲೇ ಹೋರಾಟಗಾರರನ್ನು ಖೈದಿಗಳನ್ನು ಇಲ್ಲಿಗೆ ತರಲಾಯಿತು. ಮೊದಲಿಗೆ ಫೋರ್ಟ್‍ಬ್ಲೇರ್ ಸಮೀಪದ ರೋಸ್ ಐಲ್ಯಾಂಡುಗಳಲ್ಲಿ ಇವರನ್ನು ಇಡಲಾಗುತ್ತಿತ್ತು. ಹೋರಾಟಗಾರರ ಸಂಖ್ಯೆ ಹೆಚ್ಚುತ್ತಲೇ ದೊಡ್ಡ ದೊಂದು ಜೈಲು ನಿರ್ಮಾಣ ಯೋಜನೆಯನ್ನು ಹಾಕಿಕೊಳ್ಳ ಲಾಯಿತು. 1896ರಲ್ಲಿ ಪ್ರಾರಂಭವಾದ ಇದರ ನಿರ್ಮಾಣ ಮುಕ್ತಾಯಗೊಂಡದ್ದು 1906ರಲ್ಲಿ. ಅಂದಿನ ಯುದ್ಧ ಖೈದಿಗಳು, ಹೋರಾಟಗಾರರನ್ನೇ ಬಳಿಸಿಕೊಂಡು ಬರ್ಮಾದಿಂದ ತರಿಸಿದ ಇಟ್ಟಿಗೆಗಳಲ್ಲಿ ಮೂರು ಮಹಡಿಯ ದುರಂತದ ಕಟ್ಟಡವನ್ನು ನಿರ್ಮಿಸಲಾಯಿತು. ಸೆಲ್ಯುಲರ್ ಜೈಲಿನಲ್ಲಿ ಪ್ರತಿದಿನ ಸಂಜೆ ಕತ್ತಲಾದ ಮೇಲೆ ಲೈಟ್ ಅಂಡ್ ಸೌಂಡ್ ಎಫೆಕ್ಟ್‍ನ ಅದರ ಇತಿಹಾಸ ಹೇಳುವ ಒಂದು ಗಂಟೆಯ ಪ್ರದರ್ಶನವೊಂದಿರುತ್ತದೆ. ಅಲ್ಲಿನ ರಕ್ತಸಿಕ್ತ ನೋವಿನ ಅಧ್ಯಾಯವನ್ನು ಅಂದೂ ಜೀವಂತವಾಗಿ ನೋಡಿದ್ದ ಇಂದಿಗೂ ಜೀವಂತವಾಗಿರುವ ಮೂಕ ಜೀವವೊಂದು ಹೇಳುತ್ತಾ ಹೋಗುತ್ತದೆ.
ಅದು 150ಕ್ಕೂ ಹೆಚ್ಚು ವರ್ಷಗಳಿಂದಲೂ ಬದುಕಿರುವ ಇಲ್ಲಿನ ಎಲ್ಲವನ್ನೂ ನೋಡಿರುವ ಆಲದ ಮರ. ಮರ ಕಥೆ ಹೇಳುತ್ತಾ ಹೋದಂತೆ ಮನಸ್ಸು ಭಾರವಾಗುತ್ತಾ ಹೋಗುತ್ತೆ. ಭಾರತೀಯನೇ ಆಗಿದ್ದರೊಮ್ಮೆ ರಕ್ತ ಖುದ್ದು ಹೋಗುತ್ತೆ. ಅದೆಷ್ಟು ಜನರ ಬೆವರು ರಕ್ತ ನರಳಾಟ ಹತಾಷೆ. ಅದೆಷ್ಟು ಕ್ರೂರತನ, ಮೃಗೀಯತೆ ದುರುಳರದ್ದು. ಅದೆಷ್ಟು ತ್ಯಾಗಗಳು ನೋವುಗಳು ನಾವಿಂದು ಅನುಭವಿಸುತ್ತಿರುವ ಸ್ವಾತಂತ್ರ್ಯದ ಹಿಂದೆ. ಬಟುಕೇಶ್ವರ ದತ್ತ, ಮಹಾವೀರ್ ಸಿಂಗ್, ಮೋಹನ್ ಕಿಶೋರ್ ನಮಾದಾಸ್, ಮೋಹಿತ್ ಮೋಯ್ತ್ರ, ಶೇರ್ ಆಲಿ ಆಫ್ರಿದಿ, ಸಾವರ್ಕರ್ ಸಹೋದರರು, ಇಂದಿಗೂ ಪ್ರಚಾರಕ್ಕೇ ಬಾರದ ನೂರಾರು ಹೆಸರುಗಳು……
ಕತ್ತೆಯಂತೆ ದುಡಿಯಬೇಕಿತ್ತಂತೆ. ದಿನಕ್ಕೆ ಹದಿಮೂರು ಲೀಟರ್ ತೆಂಗಿನೆಣ್ಣೆ ಗಾಣದಲ್ಲಿ ಸುತ್ತಿ ತೆಗೆಯಬೇಕಿತ್ತಂತೆ. ತಪ್ಪಿದಲ್ಲಿ ಛಡಿಯೇಟು. ಕೆಲಸ ಮಾಡದವನಿಗೆ ಉಪವಾಸದ ಶಿಕ್ಷೆ. ಹಠ ಹಿಡಿದವನಿಗೆ ನೇಣು, ಸತ್ತ ಹೆಣ ಸಮುದ್ರಕ್ಕೆ ಎಸೆತ, ಬಂದ ಖೈದಿಗಳಿಗೆ ಅಕ್ಕಪಕ್ಕದ ಸೆಲ್ಲುಗಳಲ್ಲಿ ಯಾರಿದ್ದಾರೆಂದು ತಿಳಿಯುತ್ತಲೇ ಇರಲಿಲ್ಲವಂತೆ. ಸಾವರ್ಕರರ ಸಹೋದರರಿಗೆ ಅವರಿಬ್ಬರೂ ಇಲ್ಲಿಯೇ ಇದ್ದೇವೆಂದು ತಿಳಿಯಲು ಎರಡು ವರ್ಷಗಳೇ ಬೇಕಾಯಿತಂತೆ. ದಿನಕ್ಕೊಮ್ಮೆಯಷ್ಟೇ ಊಟ. ಅದೂ ಮರಳು, ಹುಳ ಮಿಶ್ರಿತ ಅನ್ನ. ಕೊಳಕು ಹಿಡಿದಿದ್ದ ತಟ್ಟೆ ಲೋಟಗಳು, ಇಷ್ಟೇ ಇಷ್ಟು ನೀರು. ಮಲ ಮೂತ್ರಕ್ಕೂ ಒಂದೇ ಸಮಯ. ಎಲ್ಲವೂ ಹೊಲಸು ಗಲೀಜುಮಯ. ಖೈದಿಗಳೆಲ್ಲ ಹಟಕ್ಕೆ ಬಿದ್ದು ಉಪವಾಸ ಮಾಡಿದರಂತೆ. ಛಡಿಯೇಟಿಗೆ ಬಗ್ಗದಿದ್ದಾಗ ಬಲವಂತವಾಗಿ ಬಾಯಿಗೆ ಪೈಪು ಹಾಕಿ ತಿನ್ನಿಸಿ ಕುಡಿಸಲಾಯಿತಂತೆ. ಹಾಗೆ ಹಾಕಿದ ಪೈಪುಗಳಿಂದ ಆಹಾರ ಅನ್ನನಾಳಕ್ಕೆ ಹೋಗದೇ ಶ್ವಾಸಕೋಶಕ್ಕೆ ಹೋಗಿ ಒಂದಷ್ಟು ಜನ ಸತ್ತರಂತೆ. ಅದರಲ್ಲೊಬ್ಬ ಮಹಾವೀರ್ ಸಿಂಗ್. ಈತ ಭಗತ್‍ಸಿಂಗ್‍ರ ಸಹಪಾಠಿ. ಸೆಂಟ್ರಲ್ ಅಸೆಂಬ್ಲಿಯಲ್ಲಿ ಭಗತ್‍ಸಿಂಗ್‍ರೊಂದಿಗೆ ಬಾಂಬ್ ಎಸೆದವರಲ್ಲಿ ಒಬ್ಬ. ಭಾವುಕವಾಗಿ ಗಮನಿಸಿದಲ್ಲಿ ಇಲ್ಲಿನ ಪ್ರತಿಯೊಂದು ಇಟ್ಟಿಗೆ ಮಣ್ಣಿನ ಕಣಕಣದಲ್ಲೂ ಸ್ವಾತಂತ್ರ್ಯ ಹೋರಾಟಗಾರರ ನೆತ್ತರಿದೆ. ಬೆವರ ವಾಸನೆಯಿದೆ. ಕೋಟಿ ಕಷ್ಟಗಳ ನೋವಿದೆ. ದೈಹಿಕ ದಂಡನೆಯ ಅರ್ತನಾದವಿದೆ. ಮುಗಿದು ಹೋದ ಅಮಾಯಕ ಬದುಕೊಂದರ ಅಧ್ಯಾಯವಿದೆ. ಕ್ರೂರ ಇತಿಹಾಸವಿದೆ. ದ್ವೇಷ ಹತಾಶೆಯಿದೆ. ಸ್ವಾತಂತ್ರ್ಯದ ಕನಸಿದೆ, ನಿಷ್ಕಲ್ಮಷ ಮನಸಿದೆ.
ಶೇರ್ ಆಲಿ ಅಫ್ರಿದಿ ಎಂಬ ಖೈದಿ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿ ಉಳಿದಿದ್ದಾನೆ. ಅಂದಿನ ಅಖಂಡ ಭಾರತದ ಇಂದಿನ ಪಾಕಿಸ್ತಾನದ ಖೈಬರ್ ಪ್ರಾಂತ್ಯದವನೀತ. ಮೊದಲು ಬ್ರಿಟೀಷ್ ಕುಟುಂಬಗಳ ಲಾಲನೆ ಪಾಲನೆ ಮಾಡಿಕೊಂಡಿದ್ದಾತ. ದಾಯಾದಿ ಕಲಹವೊಂದರೆ ಕೊಲೆ ಪ್ರಕರಣದಲ್ಲಿ ಈತನಿಗೆ ಜೀವಾವದಿ ಶಿಕ್ಷೆ ನೀಡಿ ಅಂಡಮಾನಿಗೆ ಕ್ಷೌರಿಕನಾಗಿ ಸಾಗ ಹಾಕಲಾಯಿತು. ಆಗಿನ್ನೂ ಸೆಲ್ಯುಲರ್ ಜೈಲು ಆರಂಭವಾಗಿರಲಿಲ್ಲ. ರೋಸಿ ಹೋಗಿದ್ದ ಆತ ಭಾರತದ ಬ್ರಿಟೀಷ್ ಮುಖ್ಯಸ್ಥ ವೈಸ್‍ರಾಯ್ ಲಾರ್ಡ್ ಮೇಯೋ ಅಂಡಮಾನಿಗೆ ಬಂದಿದ್ದಾಗ ಕಾದುಕುಳಿತು ಲಾರ್ಡ್ ಮೇಯೋನನ್ನೇ ಕುತ್ತಿಗೆ ಕೊಯ್ದು ಕೊಂದು ಹಾಕಿದ್ದನಂತೆ. ಹಾಗೆ ರಕ್ತದ ಮಡುವಿನಲ್ಲಿ ಬಿದ್ದು ಸತ್ತಿದ್ದನಂತೆ ಲಾರ್ಡ್ ಮೇಯೋ. ಇಂದಿಗೂ ಬೆಂಗಳೂರಿನ ಲ್ಲಿರುವ ಮೇಯೋ ಹಾಲ್ ಇವನ ಹೆಸರಿನಲ್ಲಿರುವಂತದ್ದೆಂಬುದನ್ನು ನಾವು ಗಮನಿಸಬಹುದು.
ಇನ್ನು ಹ್ಯಾವ್ಲಾಕ್. ಪೋರ್ಟ್‍ಬ್ಲೇರಿನಿಂದ ಈಶಾನ್ಯ ದಿಕ್ಕೆನೆಡೆಗೆ ಒಂದುವರೆ ಗಂಟೆ ಫೆರ್ರಿ/ಕ್ರೂಸಿನಲ್ಲಿ ತೆರಳಿದರೆ ಸಿಗೋದೆ ಹ್ಯಾವ್ಲಾಕ್ ಎಂಬ ಹತ್ತು ಸಾವಿರ ಜನಸಂಖ್ಯೆಯ ದ್ವೀಪ. ಜೆಟ್ಟಿ ಎಂಬ ಸ್ಥಳದಲ್ಲಿ ಇಳಿದು ಒಂದು ಕಿ.ಮೀ. ತೆರಳಿದರೆ ರಸ್ತೆ ಎರಡು ಡಿವೈಡು ಆಗುತ್ತೆ. ಇಡೀ ದ್ವೀಪದಲ್ಲಿ ಎರಡೇ ಪ್ರಮುಖ ರಸ್ತೆಗಳು. ಒಂದು ಹೋಟೆಲ್ ತಾಜ್ ಮತ್ತು ಬೇರ್‍ಫೂಟ್ ರೆಸಾರ್ಟುಗಳಿರುವ ರಾಧಾನಗರ್ ಬೀಚ್ ರಸ್ತೆ. ಇನ್ನೊಂದು ಜನಸಂದಣಿಯಿಂದ ಕೂಡಿರುವ, ಹಲವಾರು ಹೋಟೆಲ್ಲುಗಳೂ, ರೆಸ್ಟೋರೆಂಟುಗಳಿರುವ ಕಾಲಾಪತ್ತರ್ ಬೀಚಿಗೆ ಹೋಗುವ ರಸ್ತೆ. ಇದೊಂದು ಪಕ್ಕಾ ಮಳೆಕಾಡು, ಹನಿಮೂನು ಡೆಸ್ಟಿನೇಷನ್ನು ಅನ್ನಬಹುದು. ರಾಧಾನಗರ ಬೀಚ್ ಏಷ್ಯಾದ ಟಾಪ್ ಟೆನ್ ಕ್ಲೀನೆಸ್ಸು ಬೀಚುಗಳಲ್ಲೊಂದು. ಕಾಲಾಪತ್ತರ್ ಬೀಚಿಗೆ ಮುಖ ಮಾಡಿ ಒಂದೇಳ್ನೂರು ಕಿ.ಮೀ ನೇರವಾಗಿ ಹೋದರೆ ಮಯನ್ಮಾರು, ಸ್ವಲ್ಪ ಆಗ್ನೇಯಕ್ಕೆ ಹೋದರೆ ಥೈಲ್ಯಾಂಡ್, ಇನ್ನೊಂದಷ್ಟು ಡಿಗ್ರಿ ಹೆಚ್ಚಿಸಿ ಆಗ್ನೇಯಕ್ಕೆ ಹೋದರೆ ಇಂಡೋನೇಷಿಯ.
ಹ್ಯಾವ್‍ಲಾಕ್ ದ್ವೀಪದಾದ್ಯಂತ ನಾ ಗಮನಿಸಿದ್ದು ಅತೀ ಎತ್ತರಕ್ಕೆ ನೇರವಾಗಿ ಬೆಳೆದ ವಿವಿಧ ಜಾತಿಯ ಮರಗಳು ಹಾಗೂ Pಚಿಟm ತಳಿಯ ವಿವಿಧ ಸಸ್ಯಗಳು. ನಮ್ಮ ಕೊಪ್ಪ, ನ.ರಾ.ಪುರ ನೋಡಿದಂತಾಗುತ್ತೆ. ಅಡಿಕೆ, ಬಾಳೆ, ಒಂದಷ್ಟು ತರಕಾರಿ ಸಸ್ಯಗಳು, ನಿಕೋಬಾರಿ ತೆಂಗು. ಎಳನೀರು ಕೊಚ್ಚುವ ಕತ್ತಿಗಳೂ ಬಲು ಭಿನ್ನ. ಒಂದಷ್ಟು ಭಾಗ ನಮ್ಮಲ್ಲಿ ಏಲಕ್ಕಿ ಬೆಳೆಯೋ ಜೌಗು ಪ್ರದೇಶದಂತಿವೆ. ಸಣ್ಣ ಸಣ್ಣ ಕೃಷಿ ಹೊಂಡದಂತೆ ಕೆರೆಗಳಿವೆ. ನನಗನ್ನಿಸಿದ್ದು ಹ್ಯಾವ್ಲಾಕ್ ತುಸು ದುಬಾರಿ ಎಂದು. ಒಂದು ಸಾಮಾನ್ಯ ಎಳನೀರಿಗೆ ಐವತ್ತು. ನಿಕೋಬಾರಿ ಎಳನೀರು ಅರವತ್ತು ಎಪ್ಪತ್ತುವರೆಗೂ ಮಾರುತ್ತಾರೆ. ಚಿಕನ್ ಬಿರಿಯಾನಿಯೊಂದು ಕನಿಷ್ಟ 250-300. ಪ್ರವಾಸೋದ್ಯಮ ಇಲ್ಲಿಯ ಜೀವಾಳ. ದಿನವೊಂದಕ್ಕೆ 300ರಂತೆ ಸಿಕ್ಕೋ ಬಾಡಿಗೆ ಬೈಕುಗಳಲ್ಲಿ ಸುತ್ತೋ ಮಜಾನೇ ಬೇರೆ. ಎಲ್ಲಕ್ಕಿಂತ ಸಂತಸ ಕೊಟ್ಟದ್ದು ಕಾಫೀ ದೊರೆ ವಿ.ಜಿ. ಸಿದ್ದಾರ್ಥ ಜಂಟಿ ಒಡೆತನದ ಬೇರ್ ಫೂಟ್ ರೆಸಾರ್ಟ್‍ನ ರಚನೆ ಮತ್ತು ವಿನ್ಯಾಸ. ನಿಕೋಬಾರಿ ಕಾಟೇಜುಗಳೆಂದು ಮಾಡಿರುವ ವಿಲ್ಲಾಗಳು ಹಾಗೂ ಅದರ ಛಾವಣಿ ಮನಮೋಹಕ. ಅಂಡಮಾನಿನಲ್ಲಿ ಹೇರಳವಾಗಿ ಬೆಳೆದಿರುವ ಸಲೈಪತಿ ಎಂಬ ಪಾಲ್ಮ್‍ಗಿಡದ ಎಲೆಯ ಗೊಂಚಲುಗಳಿಂದ ಮಾಡಿರುವ ಛಾವಣಿ ಆಧುನಿಕ ಸಮಾಜಕ್ಕೆ ಅಲ್ಲಿನ ಬುಡಕಟ್ಟು ಜನಗಳ ಕೊಡುಗೆ. ಇಟ್ ವಾಸ್ ಕಾಪೀಡ್ ಫ್ರಮ್ ದೆಮ್.
ರಾಧಾನಗರ ಬೀಚಿಗೆ ಹೊಂದಿಕೊಂಡಿರುವ ಆಧುನೀಕತೆಯ ಸ್ಪರ್ಶವನ್ನೂ ಸಾಧ್ಯವಾದಷ್ಟು ದೂರವಿರಿಸುವಂತೆ ರೆಸಾರ್ಟು ವಿನ್ಯಾಸಗೊಂಡಿದೆ. ಎರಡು ರಾತ್ರಿಗಳನ್ನು ಕಳೆದು ಹೊರಟಾಗ ವಿ.ಜಿ. ಸಿದ್ದಾರ್ಥ ಹಾಗೆ ಹೋಗುವ ಬದಲು ಇಲ್ಲೆಲ್ಲಾದರೂ ಪ್ರಕೃತಿಯ ಮಡಿಲ ಮಧ್ಯೆ ಸುಮ್ಮನೆ ಕಳೆದು ಹೋಗಬಾರದಿತ್ತಾ ಅನ್ನಿಸಿತ್ತು.
ನನ್ನದೊಂದು ಡೆಸ್ಟಿನೇಷನ್ನು ಮುಗಿದಿತ್ತು. ವಾಪಾಸ್ಸು ಪೋರ್ಟ್ ಬ್ಲೇರಿಗೆ ಮತ್ತೆ ಬಂದಾಗ ಹೋಗಿದ್ದು ಜಿಮ್ಕಾನ ಗ್ರೌಂಡಿಗೆ. 1939ರಲ್ಲಿ ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮ ಮುಂಚೂಣಿಯಲ್ಲಿದ್ದಾಗ ಎರಡನೇ ಮಹಾಯುದ್ಧವೂ ನಡೆಯುತ್ತಿರು ತ್ತದೆ. ಇಂಡಿಯನ್ ನ್ಯಾಷನಲ್ ಕಾಂಗ್ರೇಸ್ ಚುನಾವಣೆಯಲ್ಲಿ ಆಗಷ್ಟೇ ಗಾಂಧೀಜಿಯಂತ ಗಾಂಧೀಜಿಯವರ ಕ್ಯಾಂಡಿಡೇಟನ್ನೇ ಸೋಲಿಸಿ ಅಧ್ಯಕ್ಷರಾದ ನೇತಾಜಿ ಭಿನ್ನಾಭಿಪ್ರಾಯದಿಂದಾಗಿ ಕಾಂಗ್ರೇಸ್ ತೊರೆದು ಆಝಾದ್ ಹಿಂದ್ ಫೌಝ್ ಸ್ಥಾಪಿಸಿ ಕ್ರಾಂತಿಕಾರಿ ರೂಪದ ಸ್ವಾತಂತ್ರ್ಯ ಹೋರಾಟಕ್ಕೆ ಮೆರಗು ತರುತ್ತಾರೆ. ಹಿಟ್ಲರನಂತ ಹಿಟ್ಲರನನ್ನೇ ಭೇಟಿಯಾಗಿ ಬ್ರಿಟೀಷರ ವಿರುದ್ಧ ದೇಶಭಕ್ತ ಸೈನಿಕರೊಂದಿಗೆ ಜಪಾನಿನ ಸಹಾಯ ಪಡೆದು 1943ರಲ್ಲಿ ಅಂಡಮಾನ್ ದ್ವೀಪಗಳು ಜಪಾನ್ ವಶವಾಗುವಲ್ಲಿ ಪಾತ್ರ ವಹಿಸುತ್ತಾರೆ. ನಂತರ ಜಪಾನ್ ಅಂಡಮಾನ್ ದ್ವೀಪಗಳನ್ನು ನೇತಾಜಿಯವರ ಇಂಡಿಯನ್ ನ್ಯಾಷನಲ್ ಆರ್ಮಿಗೆ ವಹಿಸಿಕೊಡುತ್ತದೆ. ಡಿಸೆಂಬರ್ 30, 1943ರಲ್ಲಿ ನೇತಾಜಿ ಇದೇ ಜಿಮ್ಕಾನ ಗ್ರೌಂಡಿನಲ್ಲಿ ಭಾರತದ ಮೊದಲ ಸ್ವಾತಂತ್ರ್ಯ ಪ್ರದೇಶಗಳೆಂದು ತ್ರಿವರ್ಣ ಧ್ವಜವನ್ನು ಹಾರಿಸುತ್ತಾರೆ. ಇಂದಿಗೂ ಅಲ್ಲೊಂದು ತ್ರಿವರ್ಣ ಧ್ವಜ ಹಾರುತ್ತಿದೆ. ಒಂದು ಕಾಲದಲ್ಲಿ ನೇತಾಜಿ ಅಲ್ಲಿ ನಿಂತಿದ್ದರು ಎಂದು ನೆನಸಿಕೊಳ್ಳೋದೇ ಒಂದು ರೋಮಾಂಚನ, ಸ್ಮರಣೀಯ.
ಇನ್ನು ಬಾರಂತಾನ್ ಐಲ್ಯಾಂಡು. ಆದಿವಾಸಿ ಬುಡಕಟ್ಟು ಗಳನ್ನು ನೋಡೋ ಆಸೆ ಹೊತ್ತು ಪೋರ್ಟುಬ್ಲೇರಿನಿಂದ ಸುಮಾರು ನೂರಿಪ್ಪತ್ತು ಕಿ.ಮೀ. ದೂರದ ಈ ದ್ವೀಪಕ್ಕೆ ಪರ್ಮೀಟು ಪಡೆದು ಮುಂಜಾನೆ ನಾಲ್ಕಕ್ಕೆ ಹೊಟರು ಹೋಗಿದ್ದು. ಜರಾವ ಫಾರೆಸ್ಟ್ ರಿಸರ್ವ್ ಆರಂಭವಾದೊಡನೆ ಅದೇನೋ ಕುತೂಹಲ. ಅದೊಂತರ ಒಮ್ಮುಖ ರಸ್ತೆ. ಇತ್ತ ಬದಿಯಿಂದ ವಾಹನಗಳನ್ನು ಬಿಟ್ಟಾಗ ಅತ್ತ ಬದಿಯವರು ಒಂದು ಘಂಟೆಗೂ ಹೆಚ್ಚು ಕಾಲ ಕಾಯಬೇಕು. ಸುಮಾರು 200 ರಿಂದ 300 ಜರಾವ ಜನಾಂಗದವರು ಇಲ್ಲಿ ಇದ್ದಾರೆಂದು ಭಾವಿಸಲಾಗಿದೆ. ನಮ್ಮ ದುರಾದೃಷ್ಟಕ್ಕೆ ಒಬ್ಬನೇ ಒಬ್ಬ ಟ್ರೈಬಲ್ಲು ಕಣ್ಣಿಗೆ ಬೀಳಲಿಲ್ಲ. ಆದರೆ ಅರಣ್ಯ ಅಲ್ಲಿನ ಸಸ್ಯ ಸಂಕುಲ ಮಾತ್ರ ರಿಚ್ಚಾಗಿದೆ. ಇತ್ತೀಚೆಗೆ ಅವರೂ ಸ್ಥಳೀಯರೊಂದಿಗೆ ಒಂದಷ್ಟು ಫ್ರೆಂಡ್ಲಿ ಆಗಿದ್ದಾರೆಂದು ಲೋಕಲ್ಲು ಜನಗಳ ಮಾತು. 2018 ರಲ್ಲು ಅನುಮತಿ ಪಡೆಯದೇ ಸ್ಥಳೀಯ ಮೀನುಗಾರರ ಬೋಟಿನೊಂದಿಗೆ ಸೆಂಟೆನಲಿಸ್ ಐಲ್ಯಾಂಡಿಗೆ ಹೋಗಿದ್ದ ಅಮೇರಿಕಾದ ಪ್ರಜೆಯೊಬ್ಬನನ್ನು ಸೆಂಟೆನಲೀಸ್‍ಗಳು ಬರ್ಬರವಾಗಿ ಕೊಂದು ಹಾಕಿದ್ದರು. ಅವರ ಪ್ರಪಂಚದಲ್ಲಿ ತಲೆಪ್ರತಿಷ್ಠೆ ಮಾಡಲು ಹೋದರೆ ಸುಮ್ಮನೆ ಬಿಡು ತ್ತಾರೆಯೇ. ನಮ್ಮಂತೆಯೇ ಅವರದೇ ರೀತಿಯಲ್ಲಿ ಬದುಕುವ ಹಕ್ಕು ಅವರಿಗೂ ಇದೆ. ಭೂಮಿ ಆಧುನಿಕ ಮಾನವನದ್ದು ಮಾತ್ರ ಅಲ್ಲವಲ್ಲ.
ಬ್ಯಾರಂತಾನ್ ಐಲ್ಯಾಂಡ್‍ನ ಮಧ್ಯ ಜಲಸಂಧಿಯ ದಾಟಿ ಲಾಂಜಿನಲ್ಲಿ ಹೋದರೆ ಸಿಗುವ ಇನ್ನೊಂದು ಭೌಗೋಳಿಕ ವಿಸ್ಮಯ ಲೈಮ್ ಸ್ಟೋನ್ ಗುಹೆ. ಇದು ಇಂದಿಗೂ ಜೀವಂತವಿದ್ದು ಬೆಳೆಯುತ್ತಲೇ ಇದೆ. ಸುಮಾರು ನೂರಿಪ್ಪತ್ತು ಮೀಟರ್ ಉದ್ದವಿದೆ. ಜಿಯಾಲಜಿ ಮತ್ತು ಕೆಮಿಸ್ಟ್ರಿಯ ಬೆಸುಗೆ ಈ ಲೈಮ್‍ಸ್ಟೋನ್ ಕೇವ್. ಅಲ್ಲಿಯೇ ಹತ್ತಿರದಲ್ಲಿ ಮಡ್ ವಾಲ್ಕನೋ ಸಹ ಇದೆ. ಇನ್ನು ಭಾರತದ ಏಕೈಕ ಜೀವಂತ ಜ್ವಾಲಾಮುಖಿ ಇರುವುದು ಬರೇನ್ ಐಲ್ಯಾಂಡಿನಲ್ಲಿ. 2018ರಲ್ಲಿ ಇದು ಉಕ್ಕಿಹರಿದಿತ್ತಂತೆ. ಹ್ಯಾವ್ಲಾಕ್‍ನಿಂದ ಅಲ್ಲಿಗೆ ಹೋಗಿ ಬರಲು ಖಾಸಗಿ ಬೋಟುಗಳಲ್ಲಿ ಕನಿಷ್ಟ ಹನ್ನೆರಡು ಗಂಟೆ ಬೇಕಂತೆ. ಸಮಯದ ಅಭಾವ ಹಾಗೂ ಪ್ರತಿಕೂಲ ಪರಿಸ್ಥಿತಿಗಳಿಂದಾಗಿ ನಾವು ಬರೇನ್ ದ್ವೀಪಕ್ಕೆ ಹೋಗಲಾಗಲಿಲ್ಲ. ಆದರೆ ಅಂಡಮಾನಿನ ನನ್ನ ಮೂಲ ಕನಸು ನನಸಾಗಲೇ ಇಲ್ಲ. ಅದು ಭಾರತದ ದಕ್ಷಿಣದ ತುತ್ತ ತುದಿ ಇಂದಿರಾ ಪಾಯಿಂಟ್‍ಗೆ ಹೋಗೋದು. ಕಾರಣ ಪ್ರವಾಸಿಗರಿಗೆ ಅದು ಪ್ರಸ್ತುತ ಬ್ಯಾನ್ ಆಗಿದೆಯಂತೆ. ಈಗ ಹೆಲಿಕಾಪ್ಟರ್‍ಗಳ ಸೇವೆಗಳೂ ಸಹ ಇಲ್ಲ. 2004ರಲ್ಲಿ ಸುನಾಮಿ ಬಂದಾಗಿನಿಂದ ಗ್ರೇಟ್‍ನಿಕೋಬಾರ್‍ನ ಈ ಪ್ರದೇಶ ಅರ್ಧದಷ್ಟು ಸಮುದ್ರದಲ್ಲಿ ಮುಳುಗಿ ಹೋಗಿದ್ದು ಅರ್ಧ ಮುಳುಗಿದ ಲೈಟ್‍ಹೌಸ್ ಸಹ ಕಾಣುತ್ತದಂತೆ. ಮತ್ಯಾವಗಲಾದರೂ ಹೋಗಬೇಕು. ಒಟ್ಟಾರೆ ಅಂಡಮಾನ್ ಬಂಗಾಳಿ, ತಮಿಳು, ತೆಲುಗು ಹಾಗೂ ಹಿಂದಿಗರ ಮಿಶ್ರಣವಾಗಿದೆ. ದೇಶಪ್ರೇಮ, ಮೋಜು, ಮಸ್ತಿಯೊಂದಿಗೆ ವಿವಿಧ ಆಯಾಮಗಳ ನಾಡು ಅಂಡಮಾನ್. ಸಾಧ್ಯವಾದರೆ ಒಮ್ಮೆ ಹೋಗಿ ಬನ್ನಿ.
*************

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ