October 5, 2024

* ಪ್ರಸನ್ನ ಗೌಡಳ್ಳಿ

ರೈಲು ಮುಂದೆ ಸಾಗಿದಂತೆಲ್ಲ ಹಿಂದೆ ಹಿಂದೆ ಸರಿಯುತ್ತಿದ್ದ ಹೊರಗಿನ ದೃಶ್ಯಗಳನು ಯಾಂತ್ರಿಕವಾಗಿ ಗಮನಿಸುತ್ತಿದ್ದ ವಿಶ್ವನಾಥನ ಮನದಲಿ ತನ್ನ ಇದುವರೆಗಿನ ಬದುಕಿನ ಚಿತ್ರಗಳು ಒಂದೊಂದಾಗಿ ಮೂಡಿ ಮರೆಯಾಗುತ್ತಿದ್ದವು. ನರಕಸದೃಶ ಜೀವನದಿಂದ ಹೊರಬರುವ ಯತ್ನದಲ್ಲಿ ಹಿಂದಿನರಾತ್ರಿ ನಿದ್ರೆಯಿಲ್ಲದೆ ಕಳೆದಿತ್ತು. ವಿಶ್ರಾಂತಿಯ ಅಪೇಕ್ಷೆಯನ್ನು ಒತ್ತರಿಸಿ ಅಂತರಂಗದಲಿ ಉಕ್ಕಿ ಬರುತ್ತಿದ್ದ ನೆನಪಿನಲೆಗಳು, ಮುಂದಿನ ಜೀವನದ ಗುರಿ, ಮನೆಯವರು ನನ್ನನ್ನು ಯಾವ ರೀತಿ ಸ್ವೀಕರಿಸುತ್ತಾರೊ ? ಎಂಬ ಭಯ, ಆತಂಕ… ಇವೆಲ್ಲ ಪಯಣದುದ್ದಕ್ಕೂ ಅವನನ್ನು ಯೋಚನಾಲಹರಿಯಲ್ಲಿ ಮುಳುಗಿಸಿದ್ದವು.

*****************
ಈಚಲಹಳ್ಳಿ ಮಲೆನಾಡ ಸೆರಗಿನಲ್ಲಿದ್ದ ಐವತ್ತರಿಂದ ಅರವತ್ತು ಮನೆಗಳಿರುವ ಊರು. ಊರಿನ ಬಹುತೇಕರು ಕೃಷಿಕರು. ವಿಶ್ವನಾಥನ ತಂದೆ ರಾಮಣ್ಣಗೌಡರು ತನ್ನ ಇಬ್ಬರು ತಮ್ಮಂದಿರಿಗೆ ಮನಃಪೂರ್ವಕವಾಗಿ ಆಸ್ತಿ ಪಾಲು ಮಾಡಿಕೊಟ್ಟು ತನ್ನ ಪಾಲಿಗೆ ಬಂದಿದ್ದ ಐದೆಕ್ರೆ ಅಡಿಕೆ ತೋಟ, ಮೂರೆಕ್ರೆ ಭತ್ತದ ಗದ್ದೆಯಲ್ಲಿ ಕೃಷಿ ಮಾಡಿಕೊಂಡಿದ್ದರು. ಅಡಿಕೆ ಫಸಲು ಚೆನ್ನಾಗಿ ಬಂದು, ಬೆಲೆಯೂ ಸಿಕ್ಕರೆ ಆ ವರ್ಷದ ನೆಮ್ಮದಿಯ ಜೀವನಕ್ಕೇನು ಚಿಂತೆಯಿರಲಿಲ್ಲ. ಇನ್ನೂ ಭತ್ತ ಗದ್ದೆಗಳನ್ನು ಲಾಭವಿಲ್ಲವೆಂದು ಪಾಳು ಬಿಟ್ಟಿದ್ದರು. ಪತ್ನಿ ಪ್ರೇಮಾ ಮನೆಯ ಹಿರಿ ಸೊಸೆಯಾಗಿ ತನ್ನ ಗಂಡನಮನೆಯ ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಂಡು ಸಹಬಾಳ್ವೆ ನಡೆಸುತ್ತಿದ್ದರು. ಮಗ ವಿಶ್ವನಾಥ ಮಗಳು ಚಂದ್ರಕಲಾ.

ಈಚಲಹಳ್ಳಿಯಲ್ಲಿ ಅನೇಕ ವರ್ಷಗಳಿಂದ ಹಿರಿಯ ಪ್ರಾಥಮಿಕ ಶಾಲೆ ಇತ್ತು, ಈಗ್ಗೇ 2 ವರ್ಷಗಳ ಹಿಂದೆ ಹೈಸ್ಕೂಲ್ ಸಹ ಬಂದಿತ್ತು. ಇದರಿಂದ ಈಚಲಹಳ್ಳಿಯ ಸುತ್ತಮುತ್ತಲ ಮಕ್ಕಳಿಗೆ ಬಹಳ ಅನುಕೂಲವಾಗಿತ್ತು. ಏಕೆಂದರೆ ಈ ಹಿಂದೆ ಹೈಸ್ಕೂಲ್ ಓದಬೇಕಾದರೆ ದೂರದ ತಾಲೂಕು ಕೇಂದ್ರ ಪಡುಗೆರೆಗೆ ಬಸ್ಸಿನಲ್ಲಿ ಹೋಗಬೇಕಾಗಿತ್ತು. ವಿಶ್ವನಾಥನ ಎಸ್ಸೆಲ್ಸಿವರೆಗಿನ ವ್ಯಾಸಾಂಗ ತನ್ನೂರಿನಲ್ಲಿಯೆ ನಡೆಯಿತು. ಅವನಿಗೆ ಇಂಗ್ಲೀಷ್ ಎಂದರೆ ಕಬ್ಬಿಣದ ಕಡೆಲೆಯಂತಾಗಿತ್ತು. ಎಸ್ಸೆಲ್ಸಿಯಲ್ಲಿ ಇಂಗ್ಲೀಷ್ ಮತ್ತು ವಿಜ್ಞಾನ ಎರಡು ವಿಷಯಗಳಲ್ಲಿ ಫೇಲ್ ಆಗಿದ್ದ. ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ವಿಜ್ಞಾನವನ್ನು ಪಾಸ್ ಮಾಡಿದನಾದರೂ ಇಂಗ್ಲೀಷ್ ಮಾತ್ರ ಹತ್ತನೇ ತರಗತಿ ಗಡಿದಾಟಲು ಬಿಟ್ಟಿರಲಿಲ್ಲ. ಮಗನನ್ನು ಚೆನ್ನಾಗಿ ಓದಿಸಿ ಒಳ್ಳೆಯ ಉದ್ಯೋಗಕ್ಕೆ ಸೇರಿಸಬೇಕು ಎಂಬುದು ಅಪ್ಪ ಅಮ್ಮನ ಕನಸಾಗಿತ್ತು. ಊರಿನಲ್ಲಿ ಎಷ್ಟೇ ದುಡಿದರು ಅದರಿಂದ ಜೀವನ ನಡೆಸುವುದು ಕಷ್ಟ. ನಾವು ಈಗ ಹಗ್ಗದ ಮೇಲಿನ ನಡಿಗೆಯಂತೆ ಜೀವನ ನಡೆಸುತ್ತಿರುವುದು ಸಾಕು. ಮಕ್ಕಳ ಕಾಲಕ್ಕಾದರೂ ಒಂದು ಉತ್ತಮ ಭವಿಷ್ಯ ರೂಪಿಸಿಕೊಡಬೇಕು ಎಂಬುದೆಲ್ಲ ರಾಮೇಗೌಡ ಪ್ರೇಮಾ ದಂಪತಿಗಳ ಬಯಕೆಯಾಗಿತ್ತು.
ವಿಶ್ವನಾಥನಿಗೂ ಮನದಲ್ಲೂ ತಾನು ಪಟ್ಟಣದ ಜೀವನ ನಡೆಸಬೇಕು, ಚೆನ್ನಾಗಿ ದುಡಿದು ಹಣ ಗಳಿಸಬೇಕೆಂಬ ಬಯಕೆಯಿತ್ತು. ಮಾವನ ಮಗ ಸುಶಾಂತ್ ಚೆನ್ನಾಗಿ ಓದಿ ಬೆಂಗಳೂರಿನ ಒಳ್ಳೆಯ ಕಂಪನಿಯಲ್ಲಿ ಕೆಲಸ ಗಿಟ್ಟಿಸಿದ್ದ. ಅವನನ್ನು ನೋಡಿ ವಿಶ್ವನಾಥನಿಗೂ ಪಟ್ಟಣದ ಬದುಕಿನ ಆಕರ್ಷಣೆ ಹೆಚ್ಚಾಗತೊಡಗಿತ್ತು. ಆದರೆ ಅವನಿಗೆ ಆ ಇಂಗ್ಲೀಷ್ ವಿಷಯ ವಿಲನ್ ತರಹ ಕಾಡತೊಡಗಿತ್ತು. ಮೂರು ಬಾರಿ ಪರೀಕ್ಷೆ ಬರೆದರೂ ಅಂಕ ಹದಿನೆಂಟಕ್ಕಿಂತ ಹೆಚ್ಚು ಪಡೆಯಲಾಗಲಿಲ್ಲ. ಅವನ ಪೋಷಕರು ತಮ್ಮ ಕನಸ್ಸನ್ನು ಅದುಮಿಟ್ಟುಕೊಂಡಿದ್ದರು. ವಿಶ್ವನಾಥನೂ ಒಲ್ಲದ ಮನಸ್ಸಿನಿಂದ ತಂದೆಯ ಜೊತೆಗೆ ಕೃಷಿಯಲ್ಲಿ ತೊಡಗಿಕೊಂಡ. ಆದರೆ ಮನಸ್ಸಿನಲ್ಲಿ ಸದಾ ನಡೆಯುತ್ತಿದ್ದುದು ಪಟ್ಟಣದ ಬದುಕಿನದೇ ಧ್ಯಾನ. ಮಾವನ ಮಗನ ಬಳಿ ಬೆಂಗಳೂರಿನಲ್ಲಿ ಯಾವುದಾದರೂ ಕೆಲಸ ಕೊಡಿಸು ಎಂದು ಕೇಳುತ್ತಲೇ ಇದ್ದ. ನೀನು ಎಸ್‍ಎಸ್‍ಎಲ್‍ಸಿ ಪಾಸು ಮಾಡಿ ಕನಿಷ್ಟ ಪಿ.ಯು.ಸಿ. ಮುಗಿಸಿ, ಕಂಪ್ಯೂಟರ್ ಟ್ರೈನಿಂಗ್ ಆದರು ಮಾಡು, ಆಗ ಯಾವುದಾದರು ಆಪೀಸಿನಲ್ಲಿ ಕೆಲಸ ಕೊಡಿಸಬಹುದು ಎಂದು ಹೇಳುತ್ತಿದ್ದ. ಆಗೆಲ್ಲ ವಿಶ್ವನಾಥ ತನ್ನ ಕನಸಿಗೆ ತಣ್ಣಿರೆರಚುತ್ತಿರುವ ಇಂಗ್ಲೀಷ್ ಅನ್ನು ಮನಬಂದಂತೆ ಶಪಿಸುತ್ತಿದ್ದ. ಕೆಲವೊಮ್ಮೆ ಏಕಾಂಗಿಯಾಗಿದ್ದಾಗ ತನ್ನಷ್ಟಕ್ಕೆ ಬಿಕ್ಕಿ ಬಿಕ್ಕಿ ಅಳುತ್ತಿದ್ದ.

ಇತ್ತ ವಿಶ್ವನಾಥನ ತಂಗಿ ಚಂದ್ರಕಲಾ ಎಸ್ಸೆಲ್ಸಿ ಮುಗಿಸಿ ಪಡುಗೆರೆಯ ಕಾಲೇಜಿಗೆ ಪಿ.ಯು.ಸಿ. ಕಲಾ ವಿಭಾಗಕ್ಕೆ ಸೇರಿದ್ದಳು. ಅದೊಂದು ದಿನ ಪಡುಗೆರೆ ಪಟ್ಟಣದಿಂದ ತಂಗಿ ಏನನ್ನೋ ಸುತ್ತಿಕೊಂಡು ತಂದಿದ್ದ ದಿನಪತ್ರಿಕೆಯ ತುಂಡು ಹಾಳೆಯೊಂದು ವಿಶ್ವನಾಥನ ಕೈಗೆ ಸಿಕ್ಕಿತು. ಅದರಲ್ಲಿ ಸಣ್ಣ ಅಕ್ಷರಗಳಲ್ಲಿ ಅಚ್ಚಾಗಿದ್ದ ಜಾಹಿರಾತೊಂದು ತಟ್ಟನೆ ಅವನ ಗಮನ ಸೆಳೆಯಿತು. ಅದರಲ್ಲಿ ‘ಕಛೇರಿಯೊಂದರಲ್ಲಿ ಸಹಾಯಕರಾಗಿ ಕೆಲಸ ಮಾಡಲು ಆಸಕ್ತ ಅಭ್ಯರ್ಥಿಗಳು ಬೇಕಾಗಿದ್ದಾರೆ, ಕನಿಷ್ಟ ವಿದ್ಯಾರ್ಹತೆ ಎಸ್‍ಎಸ್‍ಎಲ್‍ಸಿ’ ಎಂಬ ಪ್ರಕಟಣೆಯಿತ್ತು.

ಈ ಜಾಹಿರಾತು ವಿಶ್ವನಾಥನಲ್ಲಿ ಸುಪ್ತವಾಗಿದ್ದ ಪಟ್ಟಣದ ಕನಸನ್ನು ಬಡಿದೆಬ್ಬಿಸಿದಂತಾಗಿ, ಒಂದು ಕೈ ನೋಡೋಣ ಎಂದು ಅಲ್ಲಿ ನೀಡಿದ್ದ ಸಂಖ್ಯೆಗೆ ಪೋನ್ ಮಾಡಿದನು. ಅತ್ತ ಕಡೆಯಿಂದ ಮಾತನಾಡಿದವರ ಬಳಿ ‘ಸಾರ್ ನಂದು ಎಸ್ಸೆಲ್ಸಿ ಫೇಲ್ ಆಗಿದೆ, ನಾನು ಕೆಲಸಕ್ಕೆ ಅರ್ಜಿ ಹಾಕ್ಬಹುದಾ ?’ ಎಂದಾಗ, ‘ನಿಮಗೆ ಆಸಕ್ತಿ ಇದ್ದರೆ ಅರ್ಜಿ ಸಲ್ಲಿಸಬಹುದು’ ಎಂಬ ಪ್ರತಿಕ್ರಿಯೆ ಬಂದಿತು.
ಮುಂಬೈನ ರಿಯಲ್ ಎಸ್ಟೇಟ್ ಕಂಪನಿಯೊಂದರ ಕಛೇರಿಯಲ್ಲಿ ಸಹಾಯಕರಾಗಿ ಕೆಲಸ ಮಾಡಲು ಅಭ್ಯರ್ಥಿಗಳು ಬೇಕು, ಹಿಂದಿ ಸ್ವಲ್ಪವಾದರೂ ಗೊತ್ತಿರಬೇಕು. ಒಳ್ಳೆಯ ಸಂಬಳ, ಉಳಿದುಕೊಳ್ಳಲು ರೂಂ ಕೊಡುತ್ತಾರೆ ಎಂದು ಅತ್ತಲಿಂದ ಮಾತನಾಡಿದವರು ಹೇಳಿದರು. ವಿಶ್ವನಾಥನಿಗೆ ಹಿಂದಿಯೂ ಅಲ್ಪಸ್ವಲ್ಪ ಬರುತ್ತಿತ್ತು. ಅತ್ತ ಕಡೆಯವರ ಜೊತೆ ಪೋನ್ ಮುಖಾಂತರವೇ ಕೆಲಸಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ವಿನಿಮಯ ಮಾಡಿಕೊಂಡು ಮುಂಬೈಗೆ ತೆರಳುವುದೆಂದು ತೀರ್ಮಾನಕ್ಕೆ ಬಂದನು. ಈ ವಿಷಯವನ್ನು ಮನೆಯವರ ಬಳಿ ಹೇಳಿದರೆ ಅವರು ಒಪ್ಪುವುದು ಕಷ್ಟ. ನನ್ನನ್ನು ಒಳ್ಳೆಯ ಸರ್ಕಾರಿ ಅಥವಾ ಒಳ್ಳೆಯ ಖಾಸಗಿ ಕಂಪನಿ ಉದ್ಯೋಗಿಯಾಗಿ ಮಾಡಬೇಕು ಎಂದು ಕೊಂಡಿದ್ದವರು ಈಗ ಕಛೇರಿ ಸಹಾಯಕ ಕೆಲಸಕ್ಕೆ ಸೇರುತ್ತೇನೆ ಎಂದರೆ ಅದಲ್ಲದೆ ಅದು ಗುರುತು ಪರಿಚಯವಿಲ್ಲದ ಮುಂಬೈಗೆ ಹೋಗುವುದು ಎಂದರೆ ಒಪ್ಪುವುದು ಕಷ್ಟ. ಅವರಿಗೆ ಆಮೇಲೆ ತಿಳಿಸುವುದೆಂದು ಮನದಲ್ಲಿ ನಿಶ್ಚಯ ಮಾಡಿದನು.
‘ನಾನು ಮನೆಬಿಟ್ಟು ಪಟ್ಟಣಕ್ಕೆ ಕೆಲಸಕ್ಕೆ ಹೋಗುತ್ತಿದ್ದೇನೆ. ನನ್ನನ್ನು ಹುಡುಕಬೇಡಿ. ಕೆಲಸ ಮಾಡಿ ಚೆನ್ನಾಗಿ ಸಂಪಾದನೆ ಮಾಡಿ ನಂತರ ನಾನೇ ಮನೆಗೆ ವಾಪಾಸ್ಸಾಗುತ್ತೇನೆ’ ಎಂದೆಲ್ಲ ಒಂದು ಪತ್ರವನ್ನು ಬರೆದಿಟ್ಟುಕೊಂಡನು. ಒಂದು ಮುಂಜಾನೆ ಪಡುಗೆರೆ ಪಟ್ಟಣಕ್ಕೆ ಸಿನಿಮಾ ನೋಡಲು ಹೋಗಿ ಬರುತ್ತೇನೆ ಎಂದು ಮನೆಯಲ್ಲಿ ಹೇಳಿ ಹೊರಟನು.

ಪಟ್ಟಣಕ್ಕೆ ಬಂದವನೆ ತನ್ನ ಮೊಬೈಲ್‍ನಲ್ಲಿದ್ದ ಬಿಎಸ್‍ಎನ್‍ಎಲ್ ಸಿಮ್ ತೆಗೆದೆಸೆದು, ಹೊಸ ಏರ್‍ಟೇಲ್ ಸಿಮ್ ಹಾಕಿಕೊಂಡನು. ತಾನು ಬರೆದು ತಂದಿದ್ದ ಪತ್ರವನ್ನು ಅಂಚೆ ಪೆಟ್ಟಿಗೆಗೆ ಹಾಕಿ, ನೇರವಾಗಿ ಮಂಗಳೂರಿನ ಬಸ್ ಹತ್ತಿದನು. ಮಂಗಳೂರಿನಿಂದ ಮುಂಬೈಗೆ ರೈಲಿನಲ್ಲಿ ಪಯಣ. ಹೀಗೆ ಪಟ್ಟಣ ಬದುಕಿನ ಬಗೆಗಿನ ವ್ಯಾಮೋಹ ವಿಶ್ವನಾಥನನ್ನು ಮರುದಿನ ಬೆಳಿಗ್ಗೆ ಮಾಯಾನಗರಿ ಮುಂಬೈನ ಜನನಿಬಿಡ ರೈಲು ನಿಲ್ದಾಣಕ್ಕೆ ತಂದು ನಿಲ್ಲಿಸಿತ್ತು.

ಅಲ್ಲಿ ಜಾಹಿರಾತು ನೀಡಿದವರು ಗೊತ್ತು ಮಾಡಿದ್ದ ವ್ಯಕ್ತಿ ವಿಶ್ವನಾಥನಿಗಾಗಿ ಕಾಯುತ್ತಿದ್ದನು. ತನಗೆ ಬರುತ್ತಿದ್ದ ಅರ್ಧಂಬರ್ಧ ಹಿಂದಿಯಲ್ಲಿ ವಿಶ್ವನಾಥ ಅವನೊಂದಿಗೆ ಸಂಭಾಷಣೆ ಮಾಡುತ್ತಾ ಅವನನ್ನು ಹಿಂಬಾಲಿಸಿಕೊಂಡು ತೆರಳಿದ. ಆ ವ್ಯಕ್ತಿ ವಿಶ್ವನಾಥನನ್ನು ಮುಂಬೈನ ಒಂದು ಸಾಧಾರಣ ಹೋಟೆಲ್‍ಗೆ ಕರೆದುಕೊಂಡು ಹೋದನು. ಅಲ್ಲಿ ತಿಂಡಿ ತಿನ್ನಿಸಿ ಹೋಟೆಲ್ ಪಕ್ಕದಲ್ಲಿದ್ದ ಒಂದು ಕೊಠಡಿಗೆ ಕರೆದೊಯ್ದು ಅಲ್ಲಿ ವ್ಯಕ್ತಿಯೊಬ್ಬರನ್ನು ಪರಿಚಯಿಸಿಕೊಟ್ಟು ‘ನೀನು ಕೆಲಸ ಮಾಡಬೇಕಾಗಿರುವ ಹೋಟೆಲ್‍ನ ಮಾಲೀಕರು ಇವರೇ, ಇವತ್ತಿನಿಂದ ನೀನು ಇವರ ಹೋಟೆಲ್‍ನಲ್ಲಿ ಕ್ಲೀನರ್ ಆಗಿ ಕೆಲಸ ಮಾಡಬೇಕು’ ಎಂದನು. ಆಗ ವಿಶ್ವನಾಥನಿಗೆ ಕೋಪ ಉಕ್ಕಿ ಬಂದಿತು. ‘ನಾನು ಬಂದಿರುವುದು ಕಛೇರಿಯಲ್ಲಿ ಸಹಾಯಕನ ಕೆಲಸ ಸಿಗುತ್ತದೆ ಎಂದು, ನೀವು ನೋಡಿದರೆ ಹೋಟೆಲ್ಲಿಗೆ ಕರೆದುಕೊಂಡು ಬಂದು ಕೆಲಸಕ್ಕೆ ಸೇರಿಸುತ್ತಿದ್ದೀರಲ್ಲ’ ಎಂದು ಅವರೊಂದಿಗೆ ವಾಗ್ವಾದ ನಡೆಸುತ್ತಾನೆ. ನಿನಗೆ ಈಗ ಸದ್ಯಕ್ಕೆ ಇದೇ ಕೆಲಸ, ಹಿಂದಿ ಮಾತನಾಡಲು ಚೆನ್ನಾಗಿ ಕಲಿತುಕೋ ಆಮೇಲೆ ಕಛೇರಿಗೆ ಸೇರಿಸುತ್ತೇವೆ. ಈಗ ಹೆಚ್ಚು ಮಾತನಾಡಬೇಡ ಎಂದು ಬೆದರಿಸಿ ವಿಶ್ವನಾಥನ ಮೊಬೈಲ್ ಕಸಿದುಕೊಂಡರು. ಆಗ ವಿಶ್ವನಾಥನಿಗೆ ತಾನು ಮೋಸ ಹೋಗಿರುವುದು ಅರಿವಾಯಿತು. ಪಟ್ಟಣದಲ್ಲಿ ಕೆಲಸಕ್ಕೆ ಸೇರಬೇಕೆಂಬ ಹುಚ್ಚು ಬಯಕೆ ನನ್ನನ್ನು ಈಗ ಎಂತಹ ಕಠಿಣ ಸ್ಥಿತಿಗೆ ತಂದು ನಿಲ್ಲಿಸಿದೆ ಎಂದು ಒಂದು ಕ್ಷಣ ಎದೆಗುಂದಿದನು.

ಆದರೆ ಇದು ನಾನೇ ಬಯಸಿ ಬಯಸಿ ತಂದುಕೊಂಡ ಸ್ಥಿತಿ, ಈಗ ಬೇರೆ ದಾರಿ ಇಲ್ಲ. ಇಲ್ಲಿ ಹೆಚ್ಚು ಮಾತನಾಡಲು ಹೋದರೆ ನನ್ನನ್ನು ಇವರು ಅಷ್ಟು ಸುಲಭವಾಗಿ ಬಿಡುವುದಿಲ್ಲ ಎಂದು ಯೋಚಿಸಿ ಧೈರ್ಯ ತಂದುಕೊಂಡನು. ಕೆಲಸ ಯಾವುದಾದರೇನು ? ಸದ್ಯಕ್ಕೆ ಪಟ್ಟಣಕ್ಕೆ ಬರಬೇಕೆಂಬ ಕನಸು ಕೈಗೊಡಿದೆ, ಸ್ವಲ್ಪ ದಿನ ಈ ಕೆಲಸ ಮಾಡೋಣ ಎಂದು ನಿರ್ಧರಿಸಿ ಹೋಟೆಲ್‍ನಲ್ಲಿ ಕೆಲಸ ಮಾಡತೊಡಗಿದ. ಅಲ್ಲಿ ಅವನಂತೆಯೇ ಒಳ್ಳೆಯ ಉದ್ಯೋಗದ ಕನಸು ಹೊತ್ತು ಉತ್ತರ ಕರ್ನಾಟಕದಿಂದ ಬಂದಿದ್ದ ಇನ್ನೂ ಇಬ್ಬರು ಹುಡುಗರು ಇದೇ ರೀತಿ ಸಿಲುಕಿಕೊಂಡಿದ್ದರು. ಹೋಟೆಲ್‍ಗೆ ಹೊಂದಿಕೊಂಡಂತೆಯೇ ಇದ್ದ, ಸರಿಯಾದ ಗಾಳಿ-ಬೆಳಕು ಇಲ್ಲದ ಒಂದು ಕೊಠಡಿ ಹುಡುಗರ ವಾಸಸ್ಥಾನವಾಗಿತ್ತು. ಕೊಠಡಿಯ ಒಂದು ಮೂಲೆಯಲ್ಲಿಯೇ ಶೌಚಾಲಯವಿತ್ತು. ಊಟ ತಿಂಡಿಯೆಲ್ಲಾ ಹೋಟೆಲ್‍ನಲ್ಲಿಯೇ ಆಗುತ್ತಿತ್ತು. ಬೆಳಗಿನಿಂದ ರಾತ್ರಿಯವರೆಗೆ ಬಿಡುವಿಲ್ಲದ ದುಡಿಮೆ. ತಡರಾತ್ರಿ ರೂಮಿಗೆ ಬಂದು ಮಲಗಿದರೆ ಸೊಳ್ಳೆ ಕಾಟ. ಸರಿಯಾಗಿ ನಿದ್ರೆಯಿಲ್ಲ. ಕೊಠಡಿಯ ಒಂದು ಮೂಲೆಯಲ್ಲಿ ಚಿಕ್ಕ ಪೋರ್ಟಬಲ್ ಟಿವಿ ಇತ್ತು. ಅದರಲ್ಲಿ ಕೆಲ ಹಿಂದಿ, ಮರಾಠಿ ಚಾಲನ್‍ಗಳು, ದೂರದರ್ಶನ ಕನ್ನಡ ಚಾನಲ್ ಮಾತ್ರ ಬರುತ್ತಿತ್ತು. ಉಸಿರುಕಟ್ಟಿಸುವ ವಾತಾವರಣದಲ್ಲಿ ವಿಶ್ವನಾಥ ಎಲ್ಲಾ ನೋವುಗಳನ್ನು ನುಂಗಿಕೊಂಡು ಹೋಟೆಲ್ ಕೆಲಸವನ್ನು ನಿಷ್ಠೆಯಿಂದಲೇ ಮಾಡತೊಡಗಿದ.

ಹೋಟೆಲ್ ಮಾಲೀಕರು ಈತನ ಮೇಲೆ ಹೆಚ್ಚು ವಿಶ್ವಾಸ ತೋರಿಸತೊಡಗಿದರು. ಕ್ಲೀನರ್ ಕೆಲಸದಿಂದ ಕೆಲ ದಿನಗಳಲ್ಲಿಯೆ ಸಪ್ಲಯರ್ ಕೆಲಸಕ್ಕೆ ಭಡ್ತಿ ನೀಡಿದರು. ಊಟ ತಿಂಡಿ ಖರ್ಚೆಲ್ಲಾ ಕಳೆದು ವಾರಕ್ಕೆ ನೂರು ರೂಪಾಯಿ ಮಾತ್ರ ನೀಡುತ್ತಿದ್ದರು. ವಿಶ್ವನಾಥ ಅದನ್ನು ಖರ್ಚು ಮಾಡದೇ ಜೋಪಾನವಾಗಿ ಕೂಡಿಡತೊಡಗಿದ. ಹೀಗೆ ವಾರಗಳು, ತಿಂಗಳುಗಳು…. ಕಳೆದವು. ವಿಶ್ವನಾಥನಿಗೆ ಕ್ರಮೇಣ ತನ್ನ ಮನೆಯವರ ನೆನಪು ಕಾಡತೊಡಗಿತು. ಊರಿಗೆ ಮರಳಿದರೆ ಅವಮಾನವದಂತಾಗುತ್ತದೆ ಎಂದು ಅವಡುಗಚ್ಚಿ ಕೆಲಸ ಮಾಡತೊಡಗಿದ.

*****************
ಇತ್ತ ವಿಶ್ವನಾಥ ಮನೆಬಿಟ್ಟು ಹೋಗುವಾಗ ಬರೆದು ಅಂಚೆಗೆ ಹಾಕಿದ್ದ ಕಾಗದ ನೋಡಿ ಮನೆಯವರು ಕುಸಿದು ಕುಳಿತರು. ಬೆಂಗಳೂರು ಸೇರಿದಂತೆ ಸಾಕಷ್ಟು ಕಡೆ ಹುಡುಕಾಡಿಸಿದರು. ‘ಕಳೆದು ಹೋಗಿದ್ದಾರೆ’ ಎಂದು ಪ್ರಕಟಣೆ ಕೊಡಿಸಿದರು. ಯಾವ ಪ್ರಯೋಜನವೂ ಆಗಲಿಲ್ಲ. ಕ್ರಮೇಣ ಸಮಾದಾನ ತೆಗೆದುಕೊಂಡು, ಇವತ್ತಲ್ಲ ನಾಳೆ ಬರುತ್ತಾನೆ ಎಂದು ವಿಶ್ವಾಸದಲ್ಲಿ ದಿನ ದೂಡುತ್ತಿದ್ದರು.

*****************
ವರ್ಷಗಳು ಎರಡು ಕಳೆದವು. ಒಂದು ರಾತ್ರಿ ಹೋಟೆಲ್‍ನಿಂದ ರೂಮಿಗೆ ಬಂದ ವಿಶ್ವನಾಥ ಮತ್ತು ಆತನ ಸ್ನೇಹಿತರು ಎಂದಿನಂತೆ ಟಿ.ವಿ. ಹಾಕುತ್ತಾರೆ. ದೂರದರ್ಶನದಲ್ಲಿ ಹಳೆಯ ಕನ್ನಡ ಚಲನಚಿತ್ರವೊಂದು ಬರುತ್ತಿತ್ತು. ಸಿನಿಮಾ ಶುರುವಾಗಿ ಅದಾಗಲೇ ಕೆಲ ನಿಮಿಷಗಳಾಗಿತ್ತು. ಉಳಿದ ಹುಡುಗರು ಸಿನಿಮಾ ನೋಡುತ್ತ ನೋಡುತ್ತಲೇ ನಿದ್ರೆಗೆ ಜಾರಿದರು. ಆದರೆ ವಿಶ್ವನಾಥನಿಗೆ ಸಿನಿಮಾ ಬಹಳ ಆಸಕ್ತಿ ಮೂಡಿಸಹತ್ತಿತು. ಸಿನಿಮಾ ಮುಂದುವರಿದಂತೆ ಅವನಿಗೆ ಮೈಮನದಲ್ಲಿ ರೋಮಾಂಚನವಾಗತೊಡಗಿತು. ಸಿನಿಮಾ ಮುಗಿಯುವುದರ ಹೊತ್ತಿಗೆ ವಿಶ್ವನಾಥನ ಮನಪಟಲದಲಿ ಸುಂದರ ಬದುಕಿನ ದೃಶ್ಯವೊಂದು ಸೃಷ್ಟಿಯಾಗಿತ್ತು. ಅದು ಡಾ. ರಾಜ್‍ಕುಮಾರ್ ನಟಿಸಿದ್ದ ‘ಬಂಗಾರದ ಮನುಷ್ಯ’ ಚಿತ್ರ. ಚಿತ್ರದಲ್ಲಿ ರಾಜ್‍ಕುಮಾರ್ ರೈತನ ಪಾತ್ರದಲ್ಲಿ ನಟಿಸಿದ್ದರು. ನೆಲವನ್ನು ನಂಬಿ ಕೃಷಿಕಾಯಕ ಮಾಡಿದರೆ ಎಷ್ಟು ಸ್ವಾಭಿಮಾನದಿಂದ ಬದುಕಬಹುದು, ದುಡಿದು ದೊಡ್ಡ ವ್ಯಕ್ತಿಯಾಗಿ ಕೀರ್ತಿ ಗೌರವ ಗಳಿಸಬಹುದು ಎಂಬುದನು ಆ ಚಿತ್ರದಲ್ಲಿ ಮನಸ್ಸಿಗೆ ನಾಟುವಂತೆ ಚಿತ್ರಿಸಲಾಗಿತ್ತು. ಚಿತ್ರದಲ್ಲಿ ಬರುವ “ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ…..’ ‘ನಗುನಗುತಾ ನಲಿ ನಲಿ ಏನೇ ಆಗಲಿ….’ ಮುಂತಾದ ಹಾಡುಗಳು ವಿಶ್ವನಾಥನ ಮನಸ್ಸಿನ ಮೇಲೆ ಬಹಳ ಪ್ರಭಾವ ಬೀರಿದವು. ಅವನಿಗೆ ತಾನು ನಿಜವಾದ ಬದುಕನ್ನು ಬಿಟ್ಟು ಈ ಪಟ್ಟಣದ ಜಂಜಾಟದಲ್ಲಿ ಯಾರದೋ ಅಡಿಯಾಳಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಅನಿಸತೊಡಗಿತು. ಊರಿನಲ್ಲಿ ತನ್ನ ಪೂರ್ವಿಕರು ಮಾಡಿಟ್ಟಿರುವ ಭೂಮಿಯಲ್ಲಿಯೆ ಕೃಷಿ ಮಾಡಿ ಸ್ವಾಭಿಮಾನದಿಂದ ಬದುಕು ಮಾಡಬೇಕು, ನನ್ನ ಮನೆಯವರು, ಊರವರು, ಬಂಧುಗಳು, ಸ್ನೇಹಿತರ ಜೊತೆಗಿದ್ದುಕೊಂಡು ಸಂತಸದಿಂದ ದುಡಿದು, ಸುಂದರ ಬದುಕು ರೂಪಿಸಿಕೊಳ್ಳಬೇಕು ಎಂದೆಲ್ಲಾ ಮನಸ್ಸಿಗೆ ಅನಿಸತೊಡಗಿತು. ಮುಂಬೈ ನಗರದ ಗಡಿಬಿಡಿ, ಶಬ್ದಮಾಲೀನ್ಯ, ವಾಯುಮಾಲಿನ್ಯ, ಉಸಿರಾಡಲೂ ಕಷ್ಟಪಡುವಂತ ಕತ್ತಲ ಕೊಠಡಿಯ ಈ ಕೊಂಪೆಯಿಂದ ಬಿಡುಗಡೆಯಾಗಬೇಕು. ನನ್ನಂತೆಯೇ ಬಂಧಿಯಾಗಿರುವ ಇಬ್ಬರು ಸ್ನೇಹಿತರನ್ನು ಇಲ್ಲಿಂದ ಬಿಡುಗಡೆ ಮಾಡಬೇಕು ಎಂದು ಯೋಚಿಸಿದನು. ಆದರೆ ಅವರುಗಳಿಗೆ ಅವರ ಊರಿನಲ್ಲಿ ಜಮೀನು ಇರಲಿಲ್ಲ. ಅವರ ಪೋಷಕರೆಲ್ಲ ಕೂಲಿ ಮಾಡಿಯೇ ಜೀವನ ಸಾಗಿಸುತ್ತಿದ್ದರು. ಆದರೆ ಅವರನ್ನು ಹೀಗೆಯೇ ಬಿಟ್ಟು ಹೋಗುವುದು ಸರಿಯಲ್ಲ ಎನ್ನಿಸಿತು. ಮರುದಿನ ರಾತ್ರಿ ಅವರಿಬ್ಬರನ್ನು ಕೂರಿಸಿಕೊಂಡು ನೆನ್ನೆ ರಾತ್ರಿ ತಾನು ನೋಡಿದ ‘ಬಂಗಾರದ ಮನುಷ್ಯ’ ಚಿತ್ರದ ಕತೆ, ಈಗ ತನ್ನ ಮನಸ್ಸಿನಲ್ಲಿ ಬಂದಿರುವ ಊರಿಗೆ ತೆರಳಿ ಕೃಷಿಯ ಮಾಡುವ ಕನಸು… ಎಲ್ಲವನ್ನು ವಿವರಿಸಿದ. ‘ನೀವಿಬ್ಬರು ಬರುವುದಾದರೆ ನಾವು ಒಟ್ಟಿಗೆ ಸೇರಿ ಊರಿನಲ್ಲಿರುವ ನಮ್ಮ ಜಮೀನಿನಲ್ಲಿಯೇ ಕೃಷಿ ಮಾಡೋಣ. ಬಂದ ಲಾಭದಲ್ಲಿ ಸಮಾನಾಗಿ ಹಂಚಿಕೊಳ್ಳೊಣ, ಇದಕ್ಕೆ ನೀವೆನಂತೀರಾ ?’ ಎಂಬ ಪ್ರಶ್ನೆಯನ್ನು ಸ್ನೇಹಿತರ ಮುಂದಿಟ್ಟನು. ವರ್ಷಗಳ ಕಾಲದಿಂದ ಹೋಟೆಲ್‍ನಲ್ಲಿ ಅದೇ ಕೆಲಸ ಮಾಡಿ ಮಾಡಿ ರೋಸಿಹೋಗಿದ್ದ ಹುಡುಗರು ಪರಸ್ಪರ ಚರ್ಚೆ ನಡೆಸಿ ವಿಶ್ವನಾಥನ ಜೊತೆ ಆತನ ಊರಿಗೆ ತೆರಳಲು ಸಮ್ಮತಿ ಸೂಚಿಸಿದರು. ಆದರೆ ಅವರಿಗೆ ಅಲ್ಲಿಂದ ಪಾರಾಗುವುದು ಅಷ್ಟು ಸುಲಭವಾಗಿರಲಿಲ್ಲ. ತುಂಬಾ ದಿನದ ಯೋಜನೆಯ ನಂತರ ಹೋಟೆಲ್ ಮಾಲೀಕರಿಗೆ ಯಾವ ಸುಳಿವು ಗೊತ್ತಾಗದಂತೆ ಒಂದು ಮುಂಜಾನೆ ಬೆಳಕು ಮೂಡುವ ಮುನ್ನವೇ ತಾವು ಕೂಡಿಟ್ಟಿದ್ದ ಹಣವನ್ನು ಮಾತ್ರ ತೆಗೆದುಕೊಂಡು, ಉಟ್ಟ ಬಟ್ಟೆಯಲ್ಲೇ ಮೂವರು ಕೊಠಡಿಯಿಂದ ಹೊರಬಿದ್ದರು. ಆಟೋವೊಂದನ್ನು ಹಿಡಿದು ರೈಲು ನಿಲ್ದಾಣ ತಲುಪಿ, ಅಲ್ಲಿಂದ ಮಂಗಳೂರು ರೈಲಿಗೆ ಹತ್ತಿ ಊರಿನತ್ತ ಪಯಣ ಬೆಳೆಸಿದರು.

*****************
ಹೀಗೆ ಬದುಕಿನಲ್ಲಿ ಹೊಸ ತಿರುವಿನ ಕನಸು ಹೊತ್ತು ಭಾವಲೋಕದಲಿ ವಿಹರಿಸುತ್ತಿದ್ದ ವಿಶ್ವನಾಥ ಮಂಗಳೂರು ನಿಲ್ದಾಣದಲಿ ರೈಲು ಗಕ್ಕನೆ ನಿಂತಾಗ ತನ್ನ ನೆನಪಿನ ಸರಣಿ ಕಳಚಿಕೊಂಡು ಸ್ನೇಹಿತರೊಂದಿಗೆ ರೈಲು ಇಳಿಯುತ್ತಾನೆ. ಅಲ್ಲಿಂದ ಬಸ್ಸಿನಲ್ಲಿ ಪಡುಗೆರೆ ಮೂಲಕ ಈಚಲಹಳ್ಳಿಗೆ ತಲುಪಿದರು.
ಬಂಗಾರದ ಮನುಷ್ಯ ಚಿತ್ರದಿಂದ ಪ್ರೇರಣೆ ಪಡೆದು ತಾನು ಒಬ್ಬ ಒಳ್ಳೆಯ ಕೃಷಿಕನಾಗಬೇಕು, ತನ್ನ ಸ್ನೇಹಿತರನ್ನು ನನ್ನೊಂದಿಗೆ ಸೇರಿಸಿಕೊಂಡು ಅವರಿಗೂ ಒಂದು ಉತ್ತಮ ನೆಲೆ ಒದಗಿಸಬೇಕು ಎಂಬ ಹೆಬ್ಬಯಕೆ ಆತನಲ್ಲಿ ಹೊಸ ಹುಮ್ಮಸ್ಸು ಮೂಡಿಸಿತ್ತು. ಎರಡು ವರ್ಷಗಳ ನಂತರ ಮಗ ಮನೆಗೆ ಮರಳಿದ್ದನ್ನು ಕಂಡು ಮನೆಯವರ ಸಂತಸಕ್ಕೆ ಪಾರವೇ ಇಲ್ಲದಂತಾಗಿತ್ತು. ಅವನು ತನ್ನ ಜೊತೆಗೆ ಸ್ನೇಹಿತರನ್ನು ಕರೆತಂದಿರುವುದು, ಕಳೆದ ಎರಡು ವರ್ಷದ ಆತನ ಬದುಕು, ಮುಂದೆ ಕೃಷಿ ಮಾಡಿ ಜೀವನ ರೂಪಿಸಿಕೊಳ್ಳಲು ಮಾಡಿರುವ ತೀರ್ಮಾನ. ಇದನ್ನೆಲ್ಲ ತನ್ನ ತಂದೆ ತಾಯಿಯ ಬಳಿ ವಿವರಿಸಿದನು. ಇವನ ಕೃಷಿ ಯೋಜನೆಯ ಬಗ್ಗೆ ಪೋಷಕರಿಗೆ ಒಳಗೊಳಗೆ ಅನುಮಾನವಿತ್ತಾದರೂ ಮಗ ಎಲ್ಲಿ ಮತ್ತೆ ಕೈತಪ್ಪಿ ಹೋಗುತ್ತಾನೋ ಎಂಬ ಆತಂಕದಿಂದ ವಿಶ್ವನಾಥನ ತೀರ್ಮಾನಕ್ಕೆ ತಮ್ಮ ಸಮ್ಮತಿ ಸೂಚಿಸಿದರು.
ವಿಶ್ವನಾಥನ ತಂಗಿ ಚಂದ್ರಕಲಾ ದ್ವಿತೀಯಾ ಪಿ.ಯು.ಸಿ. ಉತ್ತೀರ್ಣಳಾಗಿ ಬಿ.ಎ.ಪದವಿಗೆ ಸೇರಿಕೊಂಡಿದ್ದಳು. ಪ್ರೀತಿಯ ಅಣ್ಣನ ಆಗಮನ ಅವಳಿಗೆ ಅತೀವ ಸಂತಸ ನೀಡಿತ್ತು. ತನ್ನ ಸ್ನೇಹಿತರ ಜೊತೆ ಸೇರಿ ವಿಶ್ವನಾಥ ತಂದೆಯ ಮಾರ್ಗದರ್ಶನದೊಂದಿಗೆ ಶ್ರದ್ಧೆಯಿಂದ ಕೃಷಿಯಲ್ಲಿ ತೊಡಗಿಸಿಕೊಂಡ. ಹೊಸ ಹೊಸ ಕೃಷಿ ತಾಂತ್ರಿಕತೆಯ ಬಗ್ಗೆ ಮಾಹಿತಿ ಕಲೆಹಾಕಿ, ಅವುಗಳನ್ನು ತಮ್ಮ ತೋಟದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿದ. ಸಾವಯವ ಕೃಷಿಗೆ ಹೆಚ್ಚು ಒಲವು ತೋರತೊಡಗಿದರು. ಭತ್ತದಿಂದ ಲಾಭವಿಲ್ಲ ಎಂದು ಪಾಳು ಬಿಟ್ಟಿದ್ದ ಗದ್ದೆಯನ್ನು ಹಸನು ಮಾಡಿದರು. ಕಡಿಮೆ ಖರ್ಚಿನ ಹೊಸ ವಿಧಾನ ಅನುಸರಿಸಿ ಭತ್ತದಲ್ಲಿಯೂ ಲಾಭಗಳಿಸಬಹುದು ಎಂಬುದನ್ನು ತೋರ್ಪಡಿಸಿದರು. ಜಮೀನಿನ ಮಣ್ಣು ಪರೀಕ್ಷೆ ಮಾಡಿಸಿ ಅದಕ್ಕೆ ಪೂರಕವಾದ ಪೋಷಕಾಂಶಗಳನ್ನು ನೀಡತೊಡಗಿದರು. ಅಡಿಕೆ ತೋಟದಲ್ಲಿ ಮಿಶ್ರ ಬೆಳೆಯಾಗಿ ಏಲಕ್ಕಿ, ಕಾಳುಮೆಣಸು ಬೆಳೆಸಿದರು. ನೀರು-ಗೊಬ್ಬರ ಸಮರ್ಪಕ ಬಳಕೆಯಾಗಬೇಕು ಎಂದು ಹನಿ ನೀರಾವರಿ ಅಳವಡಿಸಿದರು. ಕೃಷಿಯ ಜೊತೆಗೆ ನಾಲ್ಕೈದು ಹಸುಗಳನು ಸಾಕಿದರು. ಇದರಿಂದ ಜಮೀನಿಗೆ ಗೊಬ್ಬರದ ಜೊತೆಗೆ ಹಾಲು ಮಾರಾಟದಿಂದಲು ಉತ್ಪತ್ತಿ ಬರತೊಡಗಿತು. ಎರಡು-ಮೂರು ವರ್ಷದಲ್ಲಿ ವಿಶ್ವನಾಥ ತನ್ನ ಸ್ನೇಹಿತರ ಜೊತೆ ಸೇರಿ ಅಪ್ಪನ ಪಾಲಿಗೆ ಬಂದಿದ್ದ ಜಮೀನಿನ ಚಿತ್ರಣವನ್ನೇ ಬದಲಿಸಿದನು. ಜಮೀನಿನಲ್ಲಿ ಬರುತ್ತಿದ್ದ ಲಾಭವು ಗಣನೀಯವಾಗಿ ಹೆಚ್ಚಾಯಿತು.
ವಿಶ್ವನಾಥನ ಕೃಷಿ ವಿಧಾನಗಳು ಸುತ್ತಲ ಹಳ್ಳಿಗಳಲ್ಲಿ ಪ್ರಚಾರ ಪಡೆಯಿತು. ‘ಉತ್ತಮ ಯುವ ರೈತ’ ಎಂದು ವಿವಿಧ ಸನ್ಮಾನ ಪ್ರಶಸ್ತಿಗಳು ದೊರೆತವು. ಮಗನ ಕೃಷಿ ಸಾಧನೆಯಿಂದ ತಂದೆ ತಾಯಿಗೆ ಬಹಳ ಹರ್ಷಗೊಂಡರು. ಸ್ನೇಹಿತರು ಕೃಷಿಯ ಲಾಭ-ನಷ್ಟಗಳನ್ನು ಸಮಾನಾಗಿ ಹಂಚಿಕೊಳ್ಳುತ್ತಿದ್ದರು. ವಿಶ್ವನಾಥನ ಮೇಲೆ ನಂಬಿಕೆ ಇಟ್ಟು ಅವನೊಂದಿಗೆ ಬಂದ ಸ್ನೇಹಿತರಿಬ್ಬರು ಹೊಸ ಜೀವನದಿಂದ ಬಹಳ ಸಂತಸದಿಂದಿದ್ದರು. ಅವರು ಸಹ ತಮ್ಮ ಪೋಷಕರ ಸಂಪರ್ಕವನ್ನು ಗಳಿಸಿಕೊಂಡರು. ಇಲ್ಲಿ ಗಳಿಸಿದ ಹಣ ಮತ್ತು ಅನುಭವದಿಂದ ತಮ್ಮ ತಮ್ಮ ಊರಿನಲ್ಲಿ ಜಮೀನು ಖರೀದಿಸಿ ಅಲ್ಲಿ ತಮ್ಮ ಕೃಷಿ ಕಾಯಕವನ್ನು ಮುಂದುವರಿಸಿದರು. ನಂತರ ಕೃಷಿ ಸಂಬಂಧಿ ವ್ಯಾಪಾರ ವಹಿವಾಟು ಮಾಡತೊಡಗಿದರು. ಹಂತ ಹಂತವಾಗಿ ಬದುಕಿನಲ್ಲಿ ಸಾಧನೆ ಮಾಡುತ್ತಾ ಸಾಗಿದರು.
ಹೀಗೆ ಬದುಕಿನ ಅನಿರೀಕ್ಷಿತ ತಿರುವುಗಳನ್ನು ದಾಟಿಬಂದು ಸ್ವಾಭಿಮಾನದ ಬದುಕು ಕಟ್ಟಿಕೊಂಡ ಸ್ನೇಹಿತರು ಈಗ ದೂರದೂರದ ಊರುಗಳಲ್ಲಿ ಇದ್ದರು ಸಹ ಆಗಾಗ ಪರಸ್ಪರ ಒಟ್ಟಿಗೆ ಸೇರುತ್ತಿರುತ್ತಾರೆ. ಆಗೆಲ್ಲ ಪಟ್ಟಣದ ಆಕರ್ಷಣೆಗೆ ಬಿದ್ದು ಪಾಳು ಕೊಂಪೆಯಲ್ಲಿ ಬಂಧಿಯಾಗಿದ್ದ ತಮ್ಮ ಬದುಕಿನಲಿ ಭರವಸೆಯ ಹೊಂಬೆಳಕು ಮೂಡಿದ ಪರಿಯನ್ನು ನೆನೆಸಿಕೊಂಡು ನಗೆಗಡಲಲ್ಲಿ ತೇಲುತ್ತಾರೆ. ನಡುನಡುವೆ ಭಾವುಕರಾಗುತ್ತಾರೆ. ಕಣ್ಣಂಚಿನಲಿ ನೀರು ತುಂಬಿಕೊಳ್ಳುತ್ತಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ