October 5, 2024

ರಾಜ್ಯದ ಅಡಿಕೆ ಬೆಳೆಗಾರರಿಗೆ ಈಗ ತೀವ್ರ ಆತಂಕ ಶುರುವಾಗಿದೆ. ರಾಜ್ಯದ ಅನೇಕ ಭಾಗಗಳಲ್ಲಿ ಅಡಿಕೆ ಮರಗಳಿಗೆ ಹಳದಿ ಎಲೆ ರೋಗ ಮತ್ತು ಎಲೆಚುಕ್ಕಿ ರೋಗದ ಬಾಧೆ ಕಾಡುತ್ತಿದೆ. ನಮ್ಮ ಮಲೆನಾಡಿನ ಶೃಂಗೇರಿ, ತೀರ್ಥಹಳ್ಳಿ, ಕಳಸ ಭಾಗಗಳಲ್ಲಿ ಈ ರೋಗ ವೇಗವಾಗಿ ಹರಡುತ್ತಿದೆ. ಶೀಲಿಂದ್ರದಿಂದ ಹರಡುವ ಈ ರೋಗಕ್ಕೆ ಸಮರ್ಪಕ ಔಷಧಿಯನ್ನು ಕಂಡುಹಿಡಿಯಲಾಗಿಲ್ಲ. ಈ ರೋಗದ ತೀವ್ರತೆಯಿಂದ ಅನೇಕ ಬೆಳೆಗಾರರು ತಮ್ಮ ಸಂಪೂರ್ಣ ತೋಟವನ್ನು ಕಳೆದುಕೊಳ್ಳುವಂತಹ ಸನ್ನಿವೇಶ ಸೃಷ್ಟಿಯಾಗಿದೆ.
ಕೊಲೆಟೋಟ್ರೈಕಮ್ ಎಂಬ ಶಿಲೀಂದ್ರದ ಕಾರಣದಿಂದ ಈ ರೋಗ ವ್ಯಾಪಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಸತತವಾಗಿ ಬಿಡುವಿಲ್ಲದೇ ಸುರಿಯುತ್ತಿ ರುವ ಅಧಿಕ ಮಳೆಯು ಈ ಶಿಲೀಂದ್ರದ ಬೆಳವಣಿಗೆಗೆ ಕಾರಣವಾಗಿದೆ. ಮಳೆಯಿಂದಾಗಿ ಮಣ್ಣಿನಲ್ಲಿ ಕ್ಯಾಲ್ಸಿಯಂ ಮತ್ತು ಪೊಟಾಶಿಯಂ ಅಂಶದ ಕಡಿಮೆಯಾಗಿ ಎಲೆಚುಕ್ಕಿ ರೋಗ ಹೆಚ್ಚಾಗಿ ಹರಡುತ್ತಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.
ಎಲೆಚುಕ್ಕಿ ರೋಗದಿಂದ ಮರಗಳು ಬಹಳ ವೇಗವಾಗಿ ಸಾಯುತ್ತಿದ್ದು ಅಡಿಕೆ ಬೆಳೆಗಾರರ ವಲಯದಲ್ಲಿ ಭವಿಷ್ಯದ ಬಗ್ಗೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ. ಈ ವಿಚಾರ ಈಗ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಗಮನವನ್ನು ಸೆಳೆದಿದೆ. ಈಗಾಗಲೇ ತೋಟಗಾರಿಕೆ ಇಲಾಖೆಯ ತಜ್ಞರು ಮತ್ತು ಸಂಶೋಧಕರು ರೋಗಪೀಡಿತ ಅಡಿಕೆ ತೋಟಗಳಿಗೆ ಭೇಟಿ ನೀಡಿ ಕೆಲವು ಉಪಶಮನಕಾರಿ ಕ್ರಮಗಳನ್ನು ಶಿಪಾರಸ್ಸು ಮಾಡಿವೆ. ಶಿಲೀಂದ್ರ ನಾಶಕಗಳನ್ನು ಸಿಂಪರಣೆ ಮಾಡಲು ರೈತರಿಗೆ ಸಲಹೆ ನೀಡಿದ್ದಾರೆ. ಆದರೆ ಈ ಶಿಲೀಂದ್ರಗಳು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಪಸರಿಸುವುದರಿಂದ ಎಲ್ಲಾ ತೋಟಗಳಲ್ಲಿ ಏಕಕಾಲಕ್ಕೆ ಔಷಧಿ ಸಿಂಪರಣೆ ಮಾಡಿದರೆ ಕೊಂಚಮಟ್ಟಿಗೆ ಹತೋಟಿ ಮಾಡಬಹುದಾಗಿದೆ. ಆದರೆ ಇದು ವಾಸ್ತವವಾಗಿ ಅಷ್ಟು ಸುಲಭದ ಕೆಲಸವಲ್ಲ. ಆದರೂ ತೋಟಗಳ ಮತ್ತು ಬೆಳೆಗಾರರ ಅಳಿವು ಉಳಿವಿನ ಪ್ರಶ್ನೆಯಾಗಿರುವುದರಿಂದ ಈ ಪ್ರಯತ್ನವನ್ನು ಸಾಮೂಹಿಕವಾಗಿ ಮಾಡಲೇಬೇಕಾಗಿದೆ.


ತೋಟಗಾರಿಕೆ ಇಲಾಖೆಯಿಂದ ಔಷಧಿ ವಿತರಣೆ
ಇದೀಗ ತೋಟಗಾರಿಕಾ ಇಲಾಖೆ ಎಲೆಚುಕ್ಕಿ ರೋಗಕ್ಕೆ ಒಂದು ಬಾರಿಗೆ ಉಚಿತ ಔಷಧಿ ವಿತರಣೆ ಮಾಡುತ್ತಿದೆ. ಕಾರ್ಬನ್‍ಡೈಜಿಮ್ ಮತ್ತು ಮ್ಯಾಂಕೋಜೆಬ್ ಶಿಲೀಂದ್ರನಾಶಕಗಳನ್ನು ವಿತರಣೆ ಮಾಡುತ್ತಿದೆ. ಅದು ಸೀಮಿತ ಪ್ರಮಾಣದಲ್ಲಿ ಮತ್ತು ಅರ್ಜಿ ಸಲ್ಲಿಸಿದ ರೈತರಿಗೆ ಮಾತ್ರ. ಆದರೆ ಕಳಸ ಭಾಗದ ಕೆಲವು ರೈತರು ಈ ಔಷಧಿಗಳು ಹೆಚ್ಚು ಪರಿಣಾಮಕಾರಿಯಲ್ಲ ಬದಲಿಗೆ ಪ್ರೊಪಿಕೊನಾಜೋಲ್ ಮತ್ತು ಟೆಬುಕೊನಲಾಜ್ ಹೆಚ್ಚು ಪರಿಣಾಮಕಾರಿಯಾಗಿದೆ. ಇಲಾಖೆ ಹೆಚ್ಚಿನ ಗುಣಮಟ್ಟದ ಔಷಧಿಗಳನ್ನು ವಿತರಿಸಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ.
ಕೇಂದ್ರದಿಂದ ತಜ್ಞರ ಸಮಿತಿ ರಚನೆ
ಇತ್ತ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಮತ್ತು ಸಂಸದೆ ಶೋಭ ಕರಂದ್ಲಾಜೆಯವರ ಮನವಿಯ ಮೇರೆಗೆ ಅಡಿಕೆ ಬೆಳೆಗೆ ಎದುರಾಗಿರುವ ಈ ಸಮಸ್ಯೆಯನ್ನು ವಿಶ್ಲೇಷಿಸಲು ಮತ್ತು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವೈಜ್ಞಾನಿಕ ಅಧ್ಯಯನವನ್ನು ಕೈಗೊಳ್ಳಲು ತಜ್ಞರ ಸಮಿತಿಯನ್ನು ರಚಿಸಿ ಕೇಂದ್ರ ಕೃಷಿ ಸಚಿವಾಲಯ ಆದೇಶವನ್ನು ಹೊರಡಿಸಿದೆ. ಈ ಸಮಿತಿಯ ನೀಡುವ ವರದಿಯನ್ನು ಆದರಿಸಿ ಮುಂದಿನ ದಿನಗಳಲ್ಲಿ ಕೇಂದ್ರವು ಅಡಿಕೆ ಬೆಳೆಗಾರರಿಗೆ ಸೂಕ್ತ ಮಾರ್ಗದರ್ಶನ ನೀಡುವ ಸಾಧ್ಯತೆಯಿದೆ.
ಮಲೆನಾಡಿನ ಅನೇಕ ಜಿಲ್ಲೆಗಳ ಲಕ್ಷಾಂತರ ರೈತರ ಬದುಕಿನ ಜೀವನಾಡಿಯಾಗಿರುವ ಅಡಿಕೆ ಬೆಳೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಮತ್ತು ಬೆಳೆಗಾರರು ಒಟ್ಟಾಗಿ ಸಮರೋಪಾದಿಯಲ್ಲಿ ಕಾರ್ಯೋನ್ಮುಖರಾಗಬೇಕಾಗಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ