October 5, 2024

ಇತ್ತೀಚೆಗೆ ವಾಟ್ಸಾಪ್‍ನಲ್ಲಿ ಬಂದ ಸಂದೇಶವೊಂದು ತುಂಬಾ ಗಂಭೀರವಾಗಿ ಚಿಂತನೆಗೆ ಹಚ್ಚುವಂತಹುದಾಗಿತ್ತು. ಸಂದೇಶವನ್ನು ಓದುತ್ತಾ ಹೋದಂತೆ ನಮ್ಮ ಈಗಿನ ಮತ್ತು ಮುಂದಿನ ಪೀಳಿಗೆಗಳ ಭವಿಷ್ಯದ ಬಗ್ಗೆ ಭಯಾತಂಕ ಮೂಡಿಸು ವಂತಿತ್ತು. ಪೋಷಕರು ಕೇವಲ ಒಂದೇ ಮಗುವನ್ನು ಹೊಂದಲು ಸೀಮಿತವಾಗುತ್ತಿರುವ ಮನೋಭಾವನೆ ಮುಂದಿನ ದಿನಗಳಲ್ಲಿ ಕೌಟುಂಬಿಕ ಮತ್ತು ಸಾಮಾಜಿಕ ಸಂರಚನೆಯ ಮೇಲೆ ಬೀರ ಬಹುದಾದ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ನಮ್ಮನ್ನೆಲ್ಲ ಎಚ್ಚರಿಸುವ ರೀತಿಯದಾಗಿದೆ ಈ ಸಂದೇಶ.
ವಾಟ್ಸಾಪ್‍ನ ಆ ಸಂದೇಶ ಹೀಗಿದೆ.
“ಒಂದು ಬೇಕು, ಎರಡು ಸಾಕು” “ನಾವಿಬ್ಬರು ನಮಗಿಬ್ಬರು” “ಆರತಿಗೊಂದು, ಕೀರುತಿಗೊಂದು” ಎಂದಿದ್ದ ಕುಟುಂಬ ಯೋಜನೆಯ ಘೋಷಣೆಗಳು ಕೊನೆಗೆ “ನಾವಿಬ್ಬರು, ನಮಗೊಂದು” ಎಂಬಲ್ಲಿಗೆ ಬಂದು ನಿಂತಿದೆ. ಇದನ್ನು ಹಲವಾರು ಮಂದಿ ಪಾಲಿಸುತ್ತಿದ್ದಾರೆ ಕೂಡ.
ಆದರೆ ಭವಿಷ್ಯದ ಬಗ್ಗೆ ಚಿಂತಿಸುವಾಗ ಭಯವಾಗುತ್ತದೆ. ಒಂದೇ ಮಗು ಇರುವ ಕುಟುಂಬದ ಮಗು ತನಗೆ ಅಣ್ಣ, ಅಕ್ಕ, ತಮ್ಮ, ತಂಗಿ ಯಾರೂ ಇಲ್ಲ ಎಂದು ಏಕಾಂಗಿತನವನ್ನು ವ್ಯಕ್ತಪಡಿಸಿ ಬೇಸರಿಸುತ್ತದೆ. ಆದರೆ ಇಷ್ಟೇ ಆಗಿದ್ದರೆ ಚಿಂತೆ ಇರಲಿಲ್ಲ. ಮುಂದಿನದನ್ನು ಯೋಚಿಸಿ ನೋಡಿ.
ಸಂಬಂಧಿಕರು ನಮಗೆ ಸಮಯಕ್ಕಾಗುತ್ತಾರೋ ಇಲ್ಲವೋ ಬೇರೆಯೇ ಪ್ರಶ್ನೆ. ಆದರೆ ಸಂಬಂಧಿಕರೇ ಇಲ್ಲವಾದರೆ? ಸಂಬಂಧ ಗಳೆಂಬುದೇ ಇಲ್ಲವಾದರೆ ? ಎಲ್ಲರೂ ಒಂದೊಂದು ಮಗು ಮಾತ್ರ ಹೆತ್ತರೆ ಮುಂದೆ ಈ ರೀತಿಯ ಭಯಾನಕ ಭವಿಷ್ಯ ಎದುರಾಗಲಿದೆ.
ಅಣ್ಣ-ತಮ್ಮಂದಿರಿಲ್ಲದ ಕಾರಣ ಅತ್ತಿಗೆ-ನಾದಿನಿಯರು ಇರುವುದಿಲ್ಲ. ಅಕ್ಕ-ತಂಗಿಯರಿಲ್ಲದ ಕಾರಣ ಭಾವಂದಿರು, ಮೈದುನಂದಿರು ಇಲ್ಲ, ಅಪ್ಪನಿಗೆ ಅಣ್ಣ ತಮ್ಮಂದಿರಿಲ್ಲವಾದರೆ ಚಿಕ್ಕಪ್ಪ-ದೊಡ್ಡಪ್ಪರು ಇಲ್ಲ, ಅಪ್ಪನಿಗೆ ಅಕ್ಕ-ತಂಗಿಯರಿಲ್ಲವಾದರೆ ಸೋದರ ಅತ್ತೆಯಂದಿರು ಇಲ್ಲ, ಅಮ್ಮನಿಗೆ ಅಣ್ಣ-ತಮ್ಮಂದಿರು ಇಲ್ಲವಾದರೆ ಸೋದರ ಮಾವಂದಿರು ಇಲ್ಲ. ಮಾವ ಅತ್ತೆಯರೇ ಇಲ್ಲದ ಮೇಲೆ, ಭಾವ-ಅತ್ತಿಗೆ ಇಲ್ಲ, ಸೋದರಳಿಯ, ಸೋದರ ಸೊಸೆಯರೂ ಇಲ್ಲ.
ಗಂಡನಿಗೆ ತಮ್ಮ-ತಂಗಿಯರಿಲ್ಲವೆಂದಾದರೆ ಮೈದುನ-ನಾದಿನಿಯರು ಇಲ್ಲ. ಹೆಂಡತಿಗೆ ಅಕ್ಕ-ತಂಗಿಯರು ಇಲ್ಲದ ಮೇಲೆ ಷಡ್ಡಕ ಇಲ್ಲ. ಹೆಂಡತಿಗೆ ಅಣ್ಣ-ತಮ್ಮ ಇಲ್ಲದಿದ್ದರೆ ಭಾವ-ಮೈದುನ ಇಲ್ಲ….ಈ ಪಟ್ಟಿ ಮುಗಿಯುವುದೇ ಇಲ್ಲ.
ಕೊನೆಗೆ ಉಳಿಯುವುದು ಅಪ್ಪ, ಅಮ್ಮ, ಅಜ್ಜ, ಅಜ್ಜಿ ಮಾತ್ರ. ಮದುವೆಯಾದರೆ ಗಂಡ ಅಥವಾ ಹೆಂಡತಿ ಮತ್ತು ಒಂದು ಮಗುವಾದರೆ ಮಗ ಅಥವಾ ಮಗಳು ಮಾತ್ರ. ಉಳಿದ ಯಾವ ಸಂಬಂಧಿಕರೂ ಇರುವುದಿಲ್ಲ ಮತ್ತು ಸಂಬಂಧಗಳೂ ಇರುವುದಿಲ್ಲ.


ಎಷ್ಟು ಭಯಾನಕವೆನಿಸುವುದಿಲ್ಲವೇ ಭವಿಷ್ಯದ ಬಗ್ಗೆ ಯೋಚಿಸಿದಾಗ? ಯಾವುದೇ ರೀತಿಯ ಸಂಬಂಧ ಗಳೇ ಇಲ್ಲದ ಮನುಷ್ಯ ಏಕಾಂಗಿ ಮತ್ತು ಅನಾಥ !”
ವಾಟ್ಸಾಪ್ ಗ್ರೂಪ್‍ಗಳಲ್ಲಿ ಬರುವ ಬಹುತೇಕ ಸಂದೇಶಗಳಂತೆ ಇದು ಒಂದು ಮಾಮೂಲಿ ಫಾರ್ವರ್ಡ್ ಸಂದೇಶವೆಂದು ಓದಿ ಮುಂದೆ ಹೋಗಲು ಅನುವಾಗಿದ್ದ ನನ್ನನ್ನು ಈ ಸಂದೇಶವೇಕೋ ತಡೆದು ನಿಲ್ಲಿಸಿತು. ಇದನ್ನು ಸೂಕ್ಷ್ಮವಾಗಿ ಓದುತ್ತಾ ಹೋದಂತೆ ಅಲ್ಲಿರುವ ವಿಷಯ ಮನುಕುಲದ ನಾಗರೀಕತೆಯ ಮೇಲೆ ಬೀರುವ ಪರಿಣಾಮದ ಕುರಿತು ಇರಲಿ ಈಗಾಗಲೇ ನಮ್ಮ ಪೀಳಿಗೆಯ ಮೇಲೆ ಇದು ಬೀರುತ್ತಿರುವ ದುಷ್ಪರಿಣಾಮದ ಬಗ್ಗೆ ಚಿಂತಿಸಿದರೆ ನಾವು ಎಲ್ಲಿಗೆ ಹೋಗಿ ತಲುಪುತ್ತಿದ್ದೇವೆ ಎಂಬ ಆಂತಕ ಮನೆಮಾಡುತ್ತದೆ.

ಈಗಿನ ನಮ್ಮ ಪೋಷಕರಲ್ಲಿ ಬಹುತೇಕರು ಒಂದೇ ಮಗು ಸಾಕು ಎಂಬ ಮನಸ್ಥಿತಿ ಹೊಂದಿದ್ದಾರೆ. ಯಾರನ್ನೇ ನಿಮಗೆ ಎಷ್ಟು ಮಕ್ಕಳು ? ಎಂದು ಕೇಳಿದರೆ ‘ಒಂದೇ’ ಎಂಬ ಉತ್ತರ ಸರ್ವೇ ಸಾಧಾರಣವಾಗಿದೆ. ಈಗಿನ ಆರ್ಥಿಕ ಸ್ಥಿತಿಯಲ್ಲಿ ಒಂದು ಮಗುವನ್ನು ಓದಿಸಿ ಸಾಕುವುದೇ ಕಷ್ಟ ಎಂಬ ಸಿದ್ಧ ಉತ್ತರಗಳು ಕೇಳಿಬರುತ್ತಿವೆ. ನಾವು ತೋರುತ್ತಿರುವ ಇಂತಹ ನಿಲುವುಗಳು ನಮ್ಮ ಮಕ್ಕಳ ಹಾಗೂ ಮುಂದಿನ ಪೀಳಿಗೆಯ ಬಗ್ಗೆ ಬೀರುವ ಪರಿಣಾಮಗಳು ಊಹೆಗೂ ನಿಲುಕದ್ದಾಗಿವೆ. ಹೌದು, ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಗುವಿಗೆ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಕೊಡಿಸಲು ಆಗುತ್ತಿರುವ ವೆಚ್ಚ ಬಹುತೇಕ ಬಡ ಹಾಗೂ ಮಧ್ಯಮವರ್ಗದ ಜನರನ್ನು ಹೈರಾಣಾಗಿಸುತ್ತಿದೆ. ಇತ್ತ ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಲು ನಾವೆಲ್ಲ ತೋರುತ್ತಿರುವ ಉಪೇಕ್ಷೆ ನಮ್ಮನ್ನು ಖಾಸಗಿ ಶಿಕ್ಷಣ ಸಂಸ್ಥೆಗಳ ಜಾಲದೊಳಗೆ ಬೀಳುವಂತೆ ಮಾಡುತ್ತಿದೆ. ಶಿಕ್ಷಣದ ವೆಚ್ಚವನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ಬಹುತೇಕ ಪೋಷಕರು ಒಂದೇ ಮಗು ಸಾಕು ಎನ್ನುವ ನಿರ್ಧಾರಕ್ಕೆ ಬರುತ್ತಿದ್ದಾರೆ.

ಈ ಮನೋಭಾವನೆ ಬದಲಾಗಬೇಕು. ಅದು ಹೆಣ್ಣಾಗಲಿ, ಗಂಡಾಗಲಿ ಎರಡು ಮಕ್ಕಳು ಇದ್ದರೆ ಅದರ ಸೊಬಗೇ ಬೇರೆ. ನಮ್ಮ ಎರಡು ಹೆಣ್ಣು ಮಕ್ಕಳು ಆಡಿ ನಲಿಯುವುದನ್ನು ನೋಡುತ್ತಾ ನಾನು ಸಹ ಆ ಸೊಬಗನ್ನು ಅನುಭವಿಸುತ್ತಿದ್ದೇನೆ.
ನಮ್ಮ ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿನ ಸಂಭ್ರಮ ಸಡಗರ ಈಗ ಮಾಯವಾಗುತ್ತಿದೆ. ವೇಗವಾಗಿ ಬೆಳೆಯುತ್ತಿರುವ ಆಧುನಿಕತೆ ಮತ್ತು ಅವಸರದ ಬದುಕು ನಮ್ಮ ಕುಟುಂಬ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಗ್ರಾಮ ಕೇಂದ್ರಿತ ಭಾರತ ಬರಬರುತ್ತಾ ನಗರ ಕೇಂದ್ರಿತವಾಗಿ ಬದಲಾಗುತ್ತಿರುವ ಸಂದರ್ಭದಲ್ಲಿ ಮಕ್ಕಳ ಲಾಲನೆ ಪಾಲನೆಗೆ ಸಮಯ ಇಲ್ಲದಂತಹ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಇದರಿಂದಾಗಿ ಎಷ್ಟೋ ವಿವಾಹಿತ ಜೋಡಿಗಳು ಒಂದೇ ಮಗು ಸಾಕೆನ್ನುವ ತೀರ್ಮಾನಕ್ಕೆ ಬರುತ್ತಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಕ್ಕಳೇ ಬೇಡ ಎನ್ನುವಂತಹ ಮನಸ್ಥಿತಿಯೂ ಬೆಳೆಯುತ್ತಿದೆ.

ಒಂದೇ ಮಗು ಸಾಕು ಎನ್ನುವ ಮನಸ್ಥಿತಿಯಿಂದಾಗಿ ಎಷ್ಟೋ ಕುಟುಂಬಗಳಲ್ಲಿ ಇದ್ದ ಒಬ್ಬ ಮಗ ಅಥವಾ ಒಬ್ಬಳೇ ಮಗಳನ್ನು ಆಕಸ್ಮಿಕವಾಗಿ ಕಳೆದುಕೊಂಡು ಜೀವನವಿಡೀ ಕೊರಗುವಂತಹ ಸ್ಥಿತಿಯನ್ನು ತಂದುಕೊಂಡಿರುವ ಅದೆಷ್ಟೋ ಉದಾಹರಣೆಗಳನ್ನು ನಾವು ನಮ್ಮ ಸುತ್ತಲೇ ನೋಡುತ್ತಿದ್ದೇವೆ.
ಕೇವಲ ಆರ್ಥಿಕ ವೆಚ್ಚಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಒಂದೇ ಮಗು ಸಾಕು ಎನ್ನುವ ತೀರ್ಮಾನಕ್ಕೆ ಬರುವುದು ಸರಿಯಲ್ಲ. ಈಗಾಗಲೇ ಒಂಟಿ ಮಗು ಸಾಕೆಂಬ ನಿಲುವಿನಿಂದ ಚೀನಾ ದೇಶ ಅನುಭವಿಸುತ್ತಿರುವ ಸಾಮಾಜಿಕ ಸಮಸ್ಯೆ ಬಗ್ಗೆ ಸಾಕಷ್ಟು ಸುದ್ದಿಗಳು ಕೇಳಿಬರುತ್ತಿವೆ. ಇಂತಹ ಪರಿಸ್ಥಿತಿ ಮುಂದೆ ನಮ್ಮ ದೇಶಕ್ಕೂ ಎದುರಾಗಬಹುದು. ಹಾಗಂತ ಮನಸ್ಸಿಗೆ ಬಂದಷ್ಟು ಮಕ್ಕಳನ್ನು ಹೆರುವುದು ಎಂದಲ್ಲ. “ನಾವಿಬ್ಬರು-ನಮಗಿಬ್ಬರು” ಎಂಬ ಸೂತ್ರ ಹೆಚ್ಚು ಸೂಕ್ತವಾಗಿದೆ. ಇದು ಸಾರ್ವತ್ರಿಕ ಮಂತ್ರವಾಗಿ ದೇಶದಲ್ಲಿ ಅನುಷ್ಠಾನಕ್ಕೆ ಬಂದರೆ ಈಗಿರುವ ಜನಸಂಖ್ಯೆಯು ಯಥಾವತ್ತಾಗಿ ಉಳಿಯುತ್ತದೆ ಮತ್ತು ನಮ್ಮ ಕೌಟುಂಬಿಕ ವ್ಯವಸ್ಥೆಯು ಸುಭದ್ರವೆನಿಸುತ್ತದೆ.

* ಪ್ರಸನ್ನ ಗೌಡಳ್ಳಿ

************************************

ಇದು ಕತೆಯಲ್ಲ- ಕೊಟ್ಟಿಗೆಹಾರದಲ್ಲಿ ಅಡಗಿದ್ದ ನಟೋರಿಯಸ್ ನರಹಂತಕನ ಕರಾಳ ನೆನಪು !!

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ