October 5, 2024

ನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನಿನ್ನೆ ನವೆಂಬರ್ 25ಕ್ಕೆ ಎಪ್ಪತ್ತೈದನೇ ವರ್ಷಕ್ಕೆ ಕಾಲಿರಿಸಿದ್ದಾರೆ.

ಶ್ರೀ ಕ್ಷೇತ್ರದ ಧರ್ಮಸ್ಥಳದ 21ನೇ ಧರ್ಮಾಧಿಕಾರಿಗಳಾಗಿ ಪಟ್ಟಕ್ಕೆ ಏರಿದ ಪರಮಪೂಜ್ಯ ವೀರೇಂದ್ರ ಹೆಗ್ಗಡೆಯವರು ಕ್ಷೇತ್ರದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ್ದಾರೆ.

ಪೂಜ್ಯರಾದ ಶ್ರೀ ರತ್ನವರ್ಮ ಹೆಗ್ಗಡೆ ಮತ್ತು ಶ್ರೀಮತಿ ರತ್ನಮ್ಮ ಹೆಗ್ಗಡೆ ದಂಪತಿಗಳ ಪ್ರಥಮ ಪುತ್ರರಾಗಿ 1948ರ ನವೆಂಬರ್ 25ರಂದು ಜನಿಸಿದ ಪೂಜ್ಯ ವೀರೇಂದ್ರ ಹೆಗ್ಗಡೆಯವರು ತನ್ನ 20ನೇ ವಯಸ್ಸಿಗೆ 1968ರ ಅಕ್ಟೋಬರ್ 24ರಂದು ಕ್ಷೇತ್ರದ  ಧರ್ಮಾಧಿಕಾರಿಗಳಾಗಿ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ.

ಪೂಜ್ಯ ವೀರೇಂದ್ರ ಹೆಗ್ಗಡೆಯವರು ಕ್ಷೇತ್ರದ ಧರ್ಮಾಧಿಕಾರಿಗಳಾದ ನಂತರ ಕ್ಷೇತ್ರದ ಸೇವಾ ವ್ಯಾಪ್ತಿಯನ್ನು ವಿವಿಧ ಮಜಲುಗಳಿಗೆ ವಿಸ್ತರಿಸಿದರು. ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳ ಜೊತೆಗೆ ಕ್ಷೇತ್ರದ ವ್ಯಾಪ್ತಿಯನ್ನು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಸಾಹಿತ್ಯಿಕ, ಸಾಂಸ್ಕøತಿಕ ಪ್ರಗತಿಯ ಹಾದಿಯಲ್ಲಿ ಮುನ್ನಡೆಸಿದರು. ಪರಿಣಾಮ ಕಳೆದ ಐದೂವರೆ ದಶಕಗಳಲ್ಲಿ ಶ್ರೀ ಕ್ಷೇತ್ರದ ಸಾಧನೆ ನಿಬ್ಬೆರಗಾಗುವಂತಹ ಮಟ್ಟಿಗೆ ಬೆಳೆದು ನಿಂತಿದೆ.

ಪರಮಪೂಜ್ಯ ವೀರೇಂದ್ರ ಹೆಗ್ಗಡೆಯವರ ಸಾಧನೆಯ ಹಾದಿಯನ್ನು ಅವಲೋಕಿಸುತ್ತಾ ಸಾಗಿದರೆ ಅದು ಅಕ್ಷರಗಳಿಗೆ ನಿಲುಕದಷ್ಟು ಅಗಾಧವಾಗಿ ಗೋಚರಿಸುತ್ತದೆ. ಧರ್ಮಸ್ಥಳ ಕ್ಷೇತ್ರಕ್ಕೆ ಪ್ರತಿದಿನ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಹೀಗೆ ಬರುವ ಭಕ್ತರಿಗೆ ದೇವರ ದರ್ಶನಕ್ಕೆ ವ್ಯವಸ್ಥೆ, ವಸತಿ ಸೌಲಭ್ಯ, ನೀರು, ನೈರ್ಮಲ್ಯ ಇವೆಲ್ಲವಕ್ಕೂ ಯಾವುದೇ ಕೊರತೆ ಆಗದಂತೆ ಬಹಳ ಮುತುವರ್ಜಿಯಿಂದ ಸುವ್ಯವಸ್ಥೆ ಮಾಡಲಾಗಿದೆ. ಧರ್ಮಸ್ಥಳದ ಅನ್ನದಾನ ವ್ಯವಸ್ಥೆ ಜಗತ್ತಿನ ಅತಿದೊಡ್ಡ ನಿತ್ಯ ಭೋಜನ ಶಾಲೆಗಳಲ್ಲಿ ಎಂದೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಧರ್ಮಸ್ಥಳದ ದೇವಾಲಯದ ಎದುರು ಇರುವ ಚಿಕ್ಕ ಪ್ರಾಣಿಸಂಗ್ರಹಾಲಯ ಕ್ಷೇತ್ರಕ್ಕೆ ಬರುವ ಮಕ್ಕಳಿಗೆ ಮುದನೀಡಿದರೆ, ತರಹೇವಾರಿ ಪರಿಕರಗಳನ್ನು ಒಂದೆಡೆ ಸಂಗ್ರಹಿಸಿಟ್ಟಿರುವ ಮಂಜೂಷ ಮ್ಯೂಸಿಯಂ ಕುತೂಹಲ ಮತ್ತು ಜ್ಞಾನವನ್ನು ವೃದ್ಧಿಸುತ್ತದೆ. ವಿವಿಧ ಮಾದರಿಯ ಹಳೆಯ ಕಾರುಗಳ ಸಂಗ್ರಹಾಲಯ ಪ್ರವಾಸಿಗರ ಮನವನ್ನು ತಣಿಸುತ್ತವೆ. ಎತ್ತರದಲ್ಲಿ ಪ್ರತಿಷ್ಠಾಪಿತವಾಗಿರುವ ಗೋಮಟೇಶ್ವರ ಮೂರ್ತಿಯ ವೈಭವ ಮನವನ್ನು ಭಾವಪರವಶಗೊಳಿಸಿ ವೈರಾಗ್ಯ ಭಾವವನ್ನು ಮೂಡಿಸುತ್ತದೆ.
ವರ್ಷಕ್ಕೊಮ್ಮೆ ನಡೆಯುವ ಲಕ್ಷದೀಪೋತ್ಸವ. ಆ ಸಂದರ್ಭದಲ್ಲಿ ನಡೆಯುವ ಸರ್ವಧರ್ಮ ಸಮ್ಮೇಳನ, ವಸ್ತುಪ್ರದರ್ಶನ, ಜಾತ್ರಾ ಮಹೋತ್ಸವ ಇವೆಲ್ಲದರ ಸೊಬಗನ್ನು ಕಣ್ತುಂಬಿಕೊಳ್ಳುವುದೇ ಒಂದು ಸೌಭಾಗ್ಯ. ಹಾಗೆಯೇ ಮಹಾಶಿವರಾತ್ರಿಯ ಸಮಯದಲ್ಲಿ ಕ್ಷೇತ್ರಕ್ಕೆ ಲಕ್ಷಾಂತರ ಜನ ಕಾಲ್ನಡಿಗೆಯಲ್ಲಿ ಆಗಮಿಸುತ್ತಾರೆ. ಕ್ಷೇತ್ರಕ್ಕೆ ಯಾವುದೇ ಸಂದರ್ಭದಲ್ಲಿ ಎಷ್ಟೇ ಲಕ್ಷ ಜನ ಬಂದರೂ ಎಲ್ಲಿಯೂ ಗೊಂದಲಗಳು ಉಂಟಾಗದಂತೆ ಎಲ್ಲವೂ ವ್ಯವಸ್ಥಿತ ರೀತಿಯಲ್ಲಿ ನೆರವೇರುವುದು ಇಲ್ಲಿನ ವಿಶೇಷ.

ಇವೆಲ್ಲ ಧರ್ಮಸ್ಥಳ ಕ್ಷೇತ್ರದ ಒಳಗಿನ ವ್ಯವಸ್ಥೆಗಳಾದರೆ ಕ್ಷೇತ್ರದಾಚೆಗೆ ಸಾಧಿಸಿರುವ ಸಾಧನೆಗಳು ಹತ್ತು ಹಲವು. ಅವುಗಳ ಒಂದು ಸ್ಥೂಲ ನೋಟ ನೀಡುವುದಾದರೆ ಸಾಕಷ್ಟು ಪುಟಗಳೇ ಬೇಕಾಗುತ್ತದೆ. ಆದರೆ ಸಂಕ್ಷಿಪ್ತವಾಗಿ ಇಲ್ಲಿ ಕೆಲವನ್ನು ಉಲ್ಲೇಖಿಸುವ ಪ್ರಯತ್ನ ನಡೆಸಲಾಗಿದೆ.

ಗ್ರಾಮಾಭಿವೃದ್ಧಿ ಯೋಜನೆ : ಪೂಜ್ಯ ವೀರೇಂದ್ರ ಹೆಗ್ಗಡೆಯವರ ಕನಸಿನ ಕೂಸಾಗಿ 1991ರಲ್ಲಿ ಪ್ರಾರಂಭಿಸಲಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಇಂದು ನಮ್ಮ ಕರ್ನಾಟಕ ರಾಜ್ಯದ ಬಹುತೇಕ ಜಿಲ್ಲೆಗಳಲಿ ತನ್ನ ಕಾರ್ಯಚಟುವಟಿಕೆಯನ್ನು ನಡೆಸುತ್ತಿದೆ. ಸ್ವಸಹಾಯ ಸಂಘಗಳನ್ನು ರಚಿಸಿ ಸಾಲಸೌಲಭ್ಯ ವಿತರಣೆ, ಕೃಷಿ ಮತ್ತು ಹೈನುಗಾರಿಕೆಗೆ ಪ್ರೋತ್ಸಾಹ, ಶ್ರೀ ಪದ್ಧತಿಯಲ್ಲಿ ಭತ್ತದ ಬೇಸಾಯಕ್ಕೆ ಪ್ರೋತ್ಸಾಹ, ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ, ಬರಡು ಭೂಮಿ ಅಭಿವೃದ್ಧಿ, ಮಳೆನೀರು ಕೊಯ್ಲು, ಕೃಷಿ ಹೊಂಡಗಳ ನಿರ್ಮಾಣ, ಕೆರೆಗಳ ಪುನಶ್ಚೇತನ ಹೀಗೆ ನಾಡಿನ ಕೃಷಿಕರ ಕಲ್ಯಾಣಕ್ಕೆ ಶ್ರೀ ಕ್ಷೇತ್ರವು ಅಮೂಲ್ಯ ಸೇವೆ ಸಲ್ಲಿಸುತ್ತಿದೆ.ಶುದ್ಧ ಕುಡಿಯುವ ನೀರಿನ ಘಟಕ, ಗ್ರಾಮ ಕಲ್ಯಾಣ ಕಾರ್ಯಕ್ರಮಗಳು, ಗ್ರಾಮ ನೈರ್ಮಲ್ಯ, ಗ್ರಾಮೀಣ ಶಾಲೆಗಳಿಗೆ ಪರಿಕರ ಮತ್ತು ಮೂಲಸೌಲಭ್ಯ ವಿತರಣೆ, ಅಂಗವಿಕಲರಿಗೆ ವಿಶೇಷ ಪ್ರೋತ್ಸಾಹ, ಶೌಚಾಲಯ ನಿರ್ಮಾಣಕ್ಕೆ ಪ್ರೋತ್ಸಾಹ, ಸೋಲಾರ್ ದೀಪ ಅಳವಡಿಕೆಗೆ ಪ್ರೋತ್ಸಾಹಧನ, ಹಿಂದೂ ರುದ್ರಭೂಮಿ ಅಭಿವೃದ್ಧಿ, ಗುಡಿಕೈಗಾರಿಕೆಗಳಿಗೆ ಪ್ರೋತ್ಸಾಹ ಮತ್ತು ತರಬೇತಿ ಹೀಗೆ ಜನರ ಸರ್ವತೋಮುಖ ಅಭಿವೃದ್ಧಿಗೆ ಕಾರ್ಯಯೋಜನೆಗಳನ್ನು ಜಾರಿಗೆ ತಂದು ಲಕ್ಷ ಲಕ್ಷ ಜನರು ತಮ್ಮ ಬದುಕಿನಲ್ಲಿ ಹೊಸ ಭರವಸೆ ಕಂಡುಕೊಳ್ಳಲು ಯೋಜನೆ ಯಶಸ್ವಿಯಾಗಿದೆ.

ಸ್ವಉದ್ಯೋಗ ತರಬೇತಿ : ಯುವಕರು ನಿರುದ್ಯೋಗದಿಂದ ಬಳಲುತ್ತಿರುವುದನ್ನು ಗಮನಿಸಿದ ವೀರೇಂದ್ರ ಹೆಗ್ಗಡೆಯವರು ದೂರದೃಷ್ಟಿಯ ಚಿಂತನೆಯೊಂದನ್ನು ಮಾಡಿ 1982ರಲ್ಲಿ ಪ್ರಾರಂಭಿಸಿದ ಸಂಸ್ಥೆ ಗ್ರಾಮಾಭಿವೃದ್ಧಿ ಮತ್ತು ಸ್ವಉದ್ಯೋಗ ತರಬೇತಿ ಸಂಸ್ಥೆ(ರುಡ್‍ಸೆಟ್). ಸಿಂಡಿಕೇಟ್ ಮತ್ತು ಕೆನರಾ ಬ್ಯಾಂಕ್‍ಗಳ ಸಹಯೋಗದಲ್ಲಿ ಆರಂಭದಲ್ಲಿ ಉಜಿರೆಯಲ್ಲಿ ಒಂದು ಘಟಕವನ್ನು ಸ್ಥಾಪಿಸಿ ಅಲ್ಲಿ ನಿರುದ್ಯೋಗಿ ಯುವಕ ಯುವತಿಯರಿಗೆ ವಸತಿ ಸಹಿತವಾಗಿ ವಿವಿಧ ಸ್ವಉದ್ಯೋಗದ ಬಗೆಗೆ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳತ್ತಾ ಬರಲಾಗುತ್ತಿದೆ. ಈಗ ದೇಶದ ವಿವಿದೆಡೆ ಅಂತಹ ಸ್ವಉದ್ಯೋಗ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ತರಬೇತಿ ಪಡೆದವರಿಗೆ ಬ್ಯಾಂಕ್ ಸಾಲ ಸೌಲಭ್ಯವು ದೊರಕುವುದರಿಂದ ಇದರ ಸದುಪಯೋಗ ಪಡೆದು ಲಕ್ಷಾಂತರ ಯುವಜನರು ಸ್ವಂತ ಉದ್ಯೋಗದ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಂಡಿದ್ದಾರೆ.

ಆರೋಗ್ಯ ಸೇವೆ : ಶ್ರೀ ಕ್ಷೇತ್ರ ಧರ್ಮಸ್ಥಳ ಆರೋಗ್ಯ ಕ್ಷೇತ್ರದಲ್ಲಿ ತನ್ನದೆ ಆದ ಛಾಪು ಮೂಡಿಸಿದೆ. ನಮ್ಮ ಭಾರತೀಯ ಸಾಂಪ್ರದಾಯಿಕ ಚಿಕಿತ್ಸಾ ವಿಧಾನದಿಂದ ಮೊದಲ್ಗೊಂಡು ಆಧುನಿಕ ಅಲೋಪತಿ ಚಿಕಿತ್ಸೆಯವರೆಗೆ ವೈವಿಧ್ಯಮಯ ವಿಧಾನಗಳ ಮೂಲಕ ಜನರಿಗೆ ಆರೋಗ್ಯ ಸೇವೆಯನ್ನು ನೀಡುತ್ತಲಿದೆ. ಧರ್ಮಸ್ಥಳದ ನೇತ್ರಾವತಿ ಸಮೀಪವಿರುವ ಪ್ರಕೃತಿ ಚಿಕಿತ್ಸಾ ಕೇಂದ್ರವು ಇಂದು ರಾಜ್ಯದ, ದೇಶ-ವಿದೇಶದಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಪದವಿಗಾಗಿಯೇ ಉಜಿರೆಯಲ್ಲಿ ಬ್ಯಾಚುಲರ್ ಆಫ್ ನ್ಯಾಚುರಪತಿ ಅಂಡ್ ಯೋಗಿಕ್ ಸೈನ್ಸ್ ಕಾಲೇಜನ್ನು ಸ್ಥಾಪಿಸಲಾಗಿದೆ. ಎಸ್‍ಡಿಎಂ ಆಯುರ್ವೇದ ಆಸ್ಪತ್ರೆಗಳನ್ನು ಉಡುಪಿ, ಹಾಸನ ಮತ್ತು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿದೆ. ಧಾರವಾಡದಲ್ಲಿ ಸ್ಥಾಪಿಸಿರುವ ದಂತವೈದ್ಯಕೀಯ ಕಾಲೇಜು, ಮಲ್ಟಿ ಸ್ಪಷಾಲಿಟಿ ಅಂಡ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಉಜಿರೆಯಲ್ಲಿ ಪ್ರಾರಂಭಿಸಿರುವ ಎಸ್.ಡಿ.ಎಂ. ಹಾಸ್ಪಿಟಲ್ ಹೀಗೆ ಧರ್ಮಸ್ಥಳ ಕ್ಷೇತ್ರವು ತನ್ನದೆ ಆದ ರೀತಿಯಲ್ಲಿ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ. ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸಂಪೂರ್ಣ ಸುರಕ್ಷಾ ವಿಮಾ ಯೋಜನೆಯ ಮೂಲಕ ಆರೋಗ್ಯ ವಿಮೆಯನ್ನು ಒದಗಿಸುತ್ತಿದೆ.

ಶೈಕ್ಷಣಿಕ ಕ್ರಾಂತಿ : ಶ್ರೀ ಕ್ಷೇತ್ರ ಧರ್ಮಸ್ಥಳ ಇಂದು ನಾಡಿನ ಪ್ರಮುಖ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಎಸ್.ಡಿ.ಎಂ. ಎಜುಕೇಷನ್ ಸೊಸೈಟಿ ಹೆಸರಿನಲ್ಲಿ ಇಂದು ರಾಜ್ಯದ ವಿವಿಧ ಭಾಗಗಳಲ್ಲಿ ಸಂಸ್ಥೆಯ ಶಾಲಾ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ.
ಧರ್ಮಸ್ಥಳದ ಸಮೀಪವಿರುವ ಉಜಿರೆ ಇಂದು ನಾಡಿನ ಪ್ರಮುಖ ಶೈಕ್ಷಣಿಕ ಕೇಂದ್ರಗಳಲ್ಲಿ ಒಂದಾಗಿದೆ. ಉಜಿರೆಯ ಸಿದ್ಧವನ ಗುರುಕುಲ, ರತ್ನಮಾನಸ ವಿದ್ಯಾರ್ಥಿ ನಿಲಯ, ಎಸ್‍ಡಿಎಂ. ಕಾಲೇಜು, ಎಸ್‍ಡಿಎಂ. ಪದವಿಪೂರ್ವ ಕಾಲೇಜು, ಎಸ್‍ಡಿಎಂ. ರೆಸಿಡೆನ್ಸಿಯಲ್ ಪಿ.ಯು. ಕಾಲೇಜು, ಎಸ್‍ಡಿಎಂ. ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ. ಎಸ್‍ಡಿಎಂ. ಪ್ರೌಢಶಾಲೆ, ಧರ್ಮಸ್ಥಳ ಸುತ್ತಮುತ್ತಲ ಅನೇಕ ಕಡೆ ಎಸ್‍ಡಿಎಂ. ಪ್ರೌಢಶಾಲೆಗಳನ್ನು ಮುನ್ನಡೆಸಲಾಗುತ್ತಿದೆ.ಧಾರವಾಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್‍ಡಿಎಂ ಮೆಡಿಕಲ್ ಕಾಲೇಜು, ಪಿಸಿಯೋಥೆರಫಿ ಕಾಲೇಜು, ನರ್ಸಿಂಗ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಡೆಂಟಲ್ ಕಾಲೇಜು.
ಮಂಗಳೂರಿನಲ್ಲಿರುವ ಎಸ್‍ಡಿಎಂ. ಲಾ ಕಾಲೇಜು, ಎಸ್‍ಡಿಎಂ. ಬ್ಯುಸಿನೆಸ್ ಮ್ಯಾನೇಜ್‍ಮೆಂಟ್ ಕಾಲೇಜು, ಮೈಸೂರಿನಲ್ಲಿ ಎಸ್‍ಡಿಎಂ. ಮಹಿಳಾ ಕಾಲೇಜು, ಎಸ್‍ಡಿಎಂ. ಮ್ಯಾನೇಟ್‍ಮೆಂಟ್ ಡೆವಲೆಪ್‍ಮೆಂಟ್ ಇನ್ಸಿಟ್ಯೂಟ್. ಉಡುಪಿ, ಹಾಸನ, ಬೆಂಗಳೂರಿ ನಲ್ಲಿರುವ ಆಯುರ್ವೇದಿಕ ಕಾಲೇಜುಗಳು. ಅನೇಕ ಕಡೆಗಳಲಿ ಐಟಿಐ ಕಾಲೇಜುಗಳನ್ನು ಸ್ಥಾಪಿಸಲಾಗಿದೆ.
ಹೀಗೆ ಪಟ್ಟಿ ಬೆಳೆಯುತ್ತ ಸಾಗುತ್ತದೆ. ಆ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಲ್ಲಿ ಉನ್ನತವಾದ ವ್ಯಕ್ತಿತ್ವ ರೂಪಣೆಗೆ ಪೂರಕವಾದ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ.

ಸಂಸ್ಕೃತಿ ರಕ್ಷಣೆಗೆ ನಿರಂತರ ಪ್ರಯತ್ನ
ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರದ ವತಿಯಿಂದ ನಮ್ಮ ಸನಾತನ ಭಾರತೀಯ ಸಂಸ್ಕøತಿಯನ್ನು ಪೋಷಿಸಿಕೊಂಡು ಬರಲು ಹಲವು ಉಪಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದ್ದಾರೆ.
ಮಂಜುವಾಣಿ ಎಂಬ ಆಧ್ಯಾತ್ಮಿಕ ಮತ್ತು ಧಾರ್ಮಿಕ ವಿಚಾರ ಕೇಂದ್ರಿತ ಪತ್ರಿಕೆಯನ್ನು ಬಹುವರ್ಷಗಳಿಂದ ಹೊರತರುತ್ತಿದೆ.
ನಮ್ಮ ಪೂರ್ವಜರು ಬಳಸುತ್ತಿದ್ದ ವಿವಿಧ ಪರಿಕರಗಳನ್ನು ಮಂಜೂಷ ವಸ್ತುಸಂಗ್ರಹಾಲಯದಲ್ಲಿ ವ್ಯವಸ್ಥಿತವಾಗಿ ಸಂರಕ್ಷಿಸಿ ಈಗಿನ ಪೀಳಿಗೆಗೆ ಅವುಗಳ ಪರಿಚಯ ಮಾಡಿಕೊಡಲಾಗುತ್ತಿದೆ. ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿ ನಮ್ಮ ಕಲೆ ಸಂಸ್ಕೃತಿಗಳ ಬಗೆಗೆ ವಿಶೇಷ ಅಧ್ಯಯನ ಮತ್ತು ದಾಖಲೆಗಳನ್ನು ಸಂಗ್ರಹಿಸಿಡುವ ಕೆಲಸ ಮಾಡಲಾಗುತ್ತಿದೆ.ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ಮೂಲಕ ಶಿಥಿಲಾವಸ್ಥೆಗೆ ತಲುಪಿರುವ ನಾಡಿನ ಇತಿಹಾಸ ಪ್ರಸಿದ್ಧ ದೇವಾಲಯಗಳ ಜೀರ್ಣೋದ್ಧಾರಕ್ಕೆ ಮತ್ತು ಪುನಃಶ್ಚೇತನಕ್ಕೆ ಮುಂದಾಗಿ ಇದುವರೆಗೆ 25 ಜಿಲ್ಲೆಗಳ ಸುಮಾರು 227 ಕ್ಕೂ ಅಧಿಕ ದೇವಾಲಯಗಳನ್ನು ಸುಮಾರು 24 ಕೋಟಿ ವೆಚ್ಚದಲ್ಲಿ ಪುನರ್ನವೀಕರಣ ಮಾಡಲಾಗಿದೆ.

ಸರಳ ಸಾಮೂಹಿಕ ವಿವಾಹ : ಪ್ರತಿವರ್ಷ ಕ್ಷೇತ್ರದಲ್ಲಿ ಸರಳ ಸಾಮೂಹಿಕ ವಿವಾಹ ನೆರವೇರಿಸುತ್ತಿದ್ದು, ಬಡವ ಬಲ್ಲಿದರೆನ್ನದೇ, ಜಾತಿ ಭೇದವಿಲ್ಲದೇ ಇಲ್ಲಿ ಪ್ರತಿವರ್ಷ ಸರಳ ವಿವಾಹದ ಮೂಲಕ ನೂರಾರು ಜೋಡಿಗಳು ವೈವಾಹಿಕ ಬದುಕಿಗೆ ಅಡಿ ಯಿಡುತ್ತಿದ್ದಾರೆ. ಇದುವರೆಗೂ ಹತ್ತು ಸಾವಿರಕ್ಕೂ ಅಧಿಕ ವಿವಾಹಗಳು ನೆರವೇರಿವೆ.
ಮುದ್ರಣ ಮತ್ತು ಪ್ರಕಾಶನ : ಧರ್ಮಸ್ಥಳ ಕ್ಷೇತ್ರದಿಂದ ಮುನ್ನಡೆಸುತ್ತಿರುವ ಉಜಿರೆಯಲ್ಲಿರುವ ‘ಮಂಜುಶ್ರೀ ಪ್ರಿಂಟರ್ಸ್’ ಅತ್ಯಾಧುನಿಕ ಮುದ್ರಣ ವ್ಯವಸ್ಥೆಯನ್ನು ಹೊಂದಿದ್ದು, ರಾಜ್ಯದ ಅತ್ಯುತ್ತಮ ಮುದ್ರಣ ಘಟಕಗಳಲ್ಲಿ ಒಂದಾಗಿದೆ.

ಲಕ್ಷಾಂತರ ಜನರಿಗೆ ಉದ್ಯೋಗ :

ಶ್ರೀ ಕ್ಷೇತ್ರದ ವತಿಯಿಂದ ಲಕ್ಷಾಂತರ ಜನರಿಗೆ ಉದ್ಯೋಗ ನೀಡಲಾಗಿದೆ. ಕ್ಷೇತ್ರದ ವಿವಿಧ ವಿಭಾಗಗಳಲ್ಲಿ, ಶೈಕ್ಷಣಿಕ ಸಂಸ್ಥೆಗಳಲ್ಲಿ, ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಇಂದು ಲಕ್ಷಾಂತರ ಜನ ಉದ್ಯೋಗ ಕಂಡುಕೊಂಡು ತಮ್ಮ ಕುಟುಂಬಗಳಿಗೆ ಆಸರೆಯಾಗಿ, ಉತ್ತಮ ಭವಿಷ್ಯ ರೂಪಿಸಿಕೊಂಡಿದ್ದಾರೆ.

ಹೀಗೆ ಆಡುಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಎಲ್ಲಾ ಕ್ಷೇತ್ರಗಳಲಿ ಇಂದು ಜನಪರವಾದ ಯೋಜನೆಗಳನ್ನು ಅಳವಡಿಸಿಕೊಂಡು ಸರ್ವೇ ಜನ ಸುಖಿನೋ ಭವತು ಎನ್ನುವ ಭಾರತೀಯ ಭವ್ಯ ಪರಂಪರೆಯನ್ನು ಅಕ್ಷರಶಃ ಸಾಕಾರಗೊಳಿಸುತ್ತಿದೆ.

ಇಂತಹ ಮಹತ್ಕಾರ್ಯವನ್ನು ತಮ್ಮ ಕುಟುಂಬ ಹಾಗೂ ಸರ್ವರ ಸಹಕಾರದೊಂದಿಗೆ ಕಾರ್ಯರೂಪಕ್ಕೆ ತಂದು ದೂರದೃಷ್ಟಿಯ ಬೆಳಕನ್ನು ಜಗತ್ತಿಗೆ ನೀಡುತ್ತಿರುವ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಇತ್ತೀಚಿಗೆ ರಾಜ್ಯಸಭೆಯ ಗೌರವ ಸದಸ್ಯರಾಗಿ ನಾಮನಿರ್ದೇಶನ ಮಾಡಿದೆ.

ಉಜಿರೆಯಲ್ಲಿರುವ ಕ್ಷೇತ್ರದ ರತ್ನಮಾನಸ ವಿದ್ಯಾರ್ಥಿ ನಿಲಯ, ಸಿದ್ಧವನ ಗುರುಕುಲ, ಎಸ್.ಡಿ.ಎಂ. ಕಾಲೇಜಿನಲ್ಲಿ ಅಧ್ಯಯನ ಮಾಡುವ ಸದವಕಾಶ ನನ್ನದಾಗಿತ್ತು. ಅಲ್ಲಿನ ಜೀವನ ಶಿಕ್ಷಣ ಪದ್ದತಿ ಬಹಳ ಸುಂದರವಾಗಿದೆ.

ಪೂಜ್ಯರು 75ನೇ ವರ್ಷದ ಹೊಸ್ತಿಲಿನಲ್ಲಿರುವ  ಸಂದರ್ಭದಲ್ಲಿ ದರ್ಪಣ ಬಳಗದ ಸಮಸ್ತರ ಪರವಾಗಿ ಗೌರವಪೂರ್ವಕವಾಗಿ ಶುಭ ಕೋರುತ್ತೇನೆ.
************

*  ಪ್ರಸನ್ನ ಗೌಡಳ್ಳಿ

9448555587

ನಿರಂತರ ಸುದ್ದಿಗಳಿಗಾಗಿ  ದರ್ಪಣ ವಾಟ್ಸಾಪ್ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಒತ್ತಿ

https://chat.whatsapp.com/EPix3ar9qizEtDUS0amt5B

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ