October 5, 2024

* ಶ್ರೀಮತಿ ಶುಭ ಡಿ.ಜೆ., ಮೈಸೂರು.

ಭಾರತ ರಾಷ್ಟ್ರದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸುಸಂದರ್ಭವಿದು. ಈ ಸಮಯದಲ್ಲಿ ಭಾರತ ದೇಶದ ಗರ್ವದ ಸಂಕೇತವಾದ ತ್ರಿವರ್ಣ ಧ್ವಜವನ್ನು ನೆನೆಯುವುದು ಸ್ವಾಭಾವಿಕ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಸರ್ವಾನುಮತದಿಂದ ಒಪ್ಪಿ ಗೌರವದಿಂದ ಕಾಣುತ್ತಾ ಬಂದಿರುವ ಈ ಧ್ವಜದ ಹಿನ್ನಲೆ ಏನು ? ಅದು ಹೇಗೆ ಅಸ್ತಿತ್ವಕ್ಕೆ ಬಂತು ? ಅದರ ಇತಿಹಾಸವೇನು ? ಅದರ ರೂವಾರಿಗಳು ಯಾರು ? ಅದರ ವರ್ಣಗಳು ನಿಜಕ್ಕೂ ಧರ್ಮಾಧಾರಿತವೇ ? ಅದರ ತಯಾರಿ ಎಲ್ಲಿ ಮತ್ತು ಹೇಗೆ ನಡೆಯುತ್ತದೆ ? ಅದರ ಬಳಕೆಗೆ ನಿಯಮಾವಳಿಗಳೇನು ? ಈ ಪ್ರಶ್ನೆಗಳಿಗೆ ಉತ್ತರಗಳನ್ನು ಮೆಲುಕು ಹಾಕೋಣ.
ನಮ್ಮ ರಾಷ್ಟ್ರ ಧ್ವಜಕ್ಕೆ ಬಹಳ ಸ್ವಾರಸ್ಯಕರವಾದ ಹಿನ್ನಲೆ ಇದೆ. ಈ ಧ್ವಜವನ್ನು ತಯಾರಿಸುವ ಪ್ರಯತ್ನಗಳು ಹಂತಹಂತವಾಗಿ ನಡೆದು ಬಂದವು. 1857ರ ಸಿಪಾಯಿ ದಂಗೆಯ ಕಾಲದಿಂದಲೂ ಅಖಂಡ ಭಾರತದ ರಾಷ್ಟ್ರಧ್ವಜದ ಕಲ್ಪನೆ ರಾಷ್ಟ್ರಪ್ರೇಮಿಗಳ ಮನದಾಳದಲ್ಲಿ ಮೂಡಿತ್ತು. ನಮ್ಮ ದೇಶ ಬ್ರಿಟೀಷರ ನೇರ ಆಳ್ವಿಕೆಗೆ ಬಂದಾಗ ಮೊದಲ ಧ್ವಜ Uಟಿioಟಿ ಎಚಿಛಿಞ ಈಟಚಿg ಪಾಶ್ಚಾತ್ಯರ ಲಾಂಛನಕ್ಕೆ ಅನುಗುಣವಾಗಿ ತಯಾರಿಸಲ್ಪಟ್ಟಿತು. ಅದು ಬ್ರಿಟೀಷರ ಇತರ ವಸಾಹತುಗಳ ಬಾವುಗಳಿಗೆ ಹೋಲು ವಂತೆ ಇತ್ತು. ಕೆಂಪು ಹಿನ್ನಲೆಯ ಮೇಲ್-ಎಡ ಭಾಗದಲ್ಲಿ ಯೂನಿಯನ್ ಜಾಕ್ ಚಿಹ್ನೆ ಇದ್ದು ಬಲಭಾಗದ ಮಧ್ಯದಲ್ಲಿ ಸ್ಟಾರ್ ಆಫ್ ಇಂಡಿಯಾ ಲಾಂಛನಕ್ಕೆ ರಾಯಲ್ ಕ್ರೌನ್ ಚಿಹ್ನೆಯನ್ನು ಸೇರಿಸಲಾಗಿತ್ತು. ಇಪ್ಪತ್ತನೇ ಶತಮಾನದ ಪ್ರಾರಂಭದಲ್ಲಿ ಬಾಲಗಂಗಾಧರ ತಿಲಕರು, ಅರೊಬಿಂದೋ ಘೋಷ್, ಬಂಕಿಮಚಂದ್ರ ಚಟ್ಟೋಪಧ್ಯಾಯ ಸೇರಿದಂತೆ ಹಲವರು ಬೇರೆ ಬೇರೆ ಚಿಹ್ನೆಗಳನ್ನು ಪ್ರಸ್ತಾಪಿಸಿದರು. ಆದರೆ ಇವೆಲ್ಲಾ ಹಿಂದು ಧರ್ಮ ಕೇಂದ್ರಿತವಾದ ಗಣೇಶ, ಕಾಳಿ, ಗೋಮಾತೆ ಇಂಥಹುವಾಗಿದ್ದು ಅವು ಸರ್ವಧರ್ಮ ಸಮ್ಮತವಾಗಿರಲಿಲ್ಲ.
ಆಗಸ್ಟ್ 7, 1906ರಂದು ಕಲ್ಕತ್ತಾ ಧ್ವಜ ಅಸ್ತಿತ್ವಕ್ಕೆ ಬಂತು. ಬಂಗಾಲದ ವಿಭಜನೆಯಾದಾಗ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸೂಚಕವಾಗಿ ಸುಚಿಂದ್ರ ಪ್ರಸಾದ್ ಬೋಸ್ ಹಾಗೂ ಹೇಮಚಂದ್ರ ಕನ್ನೂಂಗೊರವರಿಂದ ರಚಿಸಲಾದ ಇದು ಅನೇಕ ಧರ್ಮಜಾತಿಗಳ ಏಕತೆಯನ್ನು ಸಾರುವ ಧ್ಯೆಯೋದ್ದೇಶವನ್ನು ಹೊಂದಿತ್ತು. ತ್ರಿವರ್ಣ ಧ್ವಜವಾಗಿದ್ದ ಇದು ಮೇಲಿನ ಕೇಸರಿ ಭಾಗದಲ್ಲಿ ಎಂಟು ಕಮಲದ ಚಿಹ್ನೆಗಳನ್ನು ಹೊಂದಿತ್ತು. ಮಧ್ಯದ ಹಳದಿ ಭಾಗದಲ್ಲಿ ವಂದೇ ಮಾತರಂ ಘೋಷಣೆಯ್ನನು ಹೊಂದಿದ್ದರೆ ಕೆಳಗಿನ ಹಸಿರು ಭಾಗದಲ್ಲಿ ಅರ್ಧಚಂದ್ರಾಕೃತಿ ಮತ್ತು ಸೂರ್ಯನ ಚಿಹ್ನೆಗಳನ್ನು ಹೊಂದಿತ್ತು. ಸ್ವಲ್ಪ ಬದಲಾವಣೆಗಳನ್ನು ಮಾಡಿ ಮೇಡಮ್ ಭಿಕಾಜಿ ಕಾಮಾ ವಂದೇ ಮಾತರಂ ಧ್ವಜವನ್ನು 22ನೇ ಆಗಸ್ಟ್ 1907 ರಂದು ಸ್ಟಟರ್ಗಟ್‍ನಲ್ಲಿ ನಡೆದ ಎರಡನೇ ಅಂತರಾಷ್ಟ್ರೀಯ ಸಮಾಜವಾದಿ ಕಾಂಗ್ರೇಸ್‍ನಲ್ಲಿ ಬಳಸಿದರು. ಆದರೆ ಅದಕ್ಕೆ ಭಾರತೀಯ ರಾಷ್ಟ್ರವಾದಗಳ ಹೆಚ್ಚಿನ ಬೆಂಬಲ ದೊರೆಯಲಿಲ್ಲ. 1904-06ರ ಸಮಯದಲ್ಲಿ ವಿವೇಕಾನಂದರ ಶಿಷ್ಯೆ, ಸಹೋದರಿ ನಿವೇದಿತ ಕೂಡ ಒಂದು ಬಾವುಟವನ್ನು ಪರಿಚಯಿಸಿದರು. ಹೀಗೆ ಹಲವಾರು ಸ್ವರೂಪದ ಧ್ವಜಗಳನ್ನು ಪ್ರಯೋಗಿಸಲಾಯಿತು.
1916ರಲ್ಲಿ ಆಂಧ್ರದ ಪಿಂಗಾಲಿ ವೆಂಕಯ್ಯನವರು ಮೂವತ್ತು ಹೊಸ ವಿನ್ಯಾಸಗಳನ್ನು ಪರಿಚಯಿಸಿದರು. ಅದೇ ವರ್ಷದಲ್ಲಿ ಅನ್ನಿಬೆಸೆಂಟ್ ಮತ್ತು ಬಾಲಗಂಗಾಧರ ತಿಲಕರು ಹೋಮ್ ರೂಲ್ ಚಳುವಳಿಗಾಗಿ ಒಂದು ಹೊಸ ಬಾವುಟವನ್ನು ಚಾಲನೆಗೆ ತಂದರು. ಈ ಬಾವುಟವನ್ನು ಹಾರಿಸುವುದನ್ನು ಬ್ರಿಟೀಷರು ಅಧಿಕೃತವಾಗಿ ತಡೆಹಿಡಿದರು. ಈ ಘಟನೆ ರಾಷ್ಟ್ರಧ್ವಜದ ಕಾರ್ಯ ಮತ್ತು ಪ್ರಾಮುಖ್ಯತೆಯ ಬಗ್ಗೆ ಒಂದು ಸಂಚಲನವನ್ನೇ ಮೂಡಿಸಿತು. ಏಪ್ರಿಲ್ 1921ರ ಕಾಂಗ್ರೇಸ್ ಅಧಿವೇಶನದಲ್ಲಿ ಬಳಸಿಕೊಳ್ಳಲು ಮಹಾತ್ಮ ಗಾಂಧಿಯವರು ಹಸಿರು ಮತ್ತು ಕೆಂಪು ವರ್ಣದ ಧ್ವಜವನ್ನು ವಿನ್ಯಾಸಗೊಳಿಸಲು ಪಿಂಗಾಲಿ ವೆಂಕಯ್ಯನವರಿಗೆ ಸೂಚಿಸಿದರು. ಲಾಲಾ ಹಂಸರಾಜ್‍ರವರು ಅದಕ್ಕೆ ಚರಕದ ಗುರುತನ್ನು ಸೇರಿಸಲು ಸಲಹೆ ನೀಡಿದರು. ಆದರೆ ಆ ಬಾವುಟ ಸಮಯಕ್ಕೆ ಸರಿಯಾಗಿ ತಯಾರಾಗಲಿಲ್ಲ.
ಏಪ್ರಿಲ್ 13, 1923ರಂದು ಜಲಿಯನ್‍ವಾಲಾ ಭಾಗ್ ಹತ್ಯಾಕಾಂಡದ ನೆನಪಿನಲ್ಲಿ ಆಯೋಜಿಸಲಾಗಿದ್ದ ಮೆರವಣಿಗೆಯಲ್ಲಿ ನಾಗಪುರದ ಸ್ಥಳಿಯ ಕಾಂಗ್ರೆಸ್ ಸ್ವಯಂ ಸೇವಕರು ಸ್ವರಾಜ್ಯ ಧ್ವಜವನ್ನು ಹಾರಿಸಿದರು. ಆಗ ಪೊಲೀಸರಿಗೂ ಕಾಂಗ್ರೆಸ್ ಪಕ್ಷದವರಿಗೂ ಜಟಾಪಟಿಯಾಯಿತು. ಗಾಂಧೀಜಿಯವರು ಮತ್ತು ಇತರರ ಬರವಣಿಗಳು ಹಾಗೂ ಭಾಷಣಗಳಿಂದ ಧ್ವಜ ಸಂಗ್ರಾಮಕ್ಕೆ ಬೆಂಬಲ ದೊರೆಯಿತು. ಧ್ವಜ ಸಂಗ್ರಾಮವನ್ನು ಸರದಾರ್ ವಲ್ಲಭಬಾಯಿ ಪಟೇಲ್‍ರವರು ನಿರ್ವಹಿಸುತ್ತಿದ್ದರು. ಸಂಗ್ರಾಮದ ಕೊನೆಯವರೆಗೆ 1500ಕ್ಕೂ ಹೆಚ್ಚು ಹೋರಾಟಗಾರರನ್ನು ಬಂಧಿಸಲಾಗಿತ್ತು. ರಾಷ್ಟ್ರ ಸೇವಕರು, ವಿದ್ಯಾರ್ಥಿಗಳು, ವ್ಯಾಪಾರಿಗಳು, ಕಾರ್ಮಿಕರು ಮತ್ತು ಇತರರು ಈ ಗುಂಪಿನಲ್ಲಿದ್ದರು. ರಾಷ್ಟ್ರ ಧ್ವಜದ ಪರಿಕಲ್ಪನೆಗೆ ದಿನಪತ್ರಿಕೆಗಳು, ಸಂಪಾದಕೀಯಗಳು, ಲೇಖನಗಳು, ಪತ್ರಗಳು ಇತ್ಯಾದಿಗಳಿಂದ ಜನರೊಂದಿಗೆ ಗಟ್ಟಿಯಾದ ಬಾಂಧವ್ಯ ಬೆಳೆಯಿತು. 1931ರಲ್ಲಿ ಈ ಧ್ವಜವನ್ನು ಕಾಂಗ್ರೆಸ್ ಪಕ್ಷ ಕೆಂಪು ಬಣ್ಣದ ಬದಲು ಕೇಸರ ಬಣ್ಣಕ್ಕೆ ಬದಲಿಸಿ ಪಕ್ಷದ ಅಧಿಕೃತ ಧ್ವಜವನ್ನಾಗಿ ಸ್ವೀಕರಿಸಿತು. ಆಗ ಬ್ರಿಟೀಷ್ ಸರ್ಕಾರ ಅದರ ಉಪಯೋಗದ ವಿರುದ್ಧ ಸಾಕಷ್ಟು ಬಿಗಿ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಲು ಯತ್ನಿಸಿತು.
ಮುಂದೆ ರಾಷ್ಟ್ರಧ್ವಜದ ಗೌರವನ್ನು ಕಾಪಾಡುವ ಪರಿಕಲ್ಪನೆ ಸ್ವಾತಂತ್ರ್ಯ ಹೋರಾಟದ ಅವಿಭಾಜ್ಯ ಅಂಗವಾಯಿತು. ಎಷ್ಟೋ ಸ್ವಾತಂತ್ರ್ಯ ಹೋರಾಟಗಾರರು ಜೈಲು ಪಾಲಾದರ. ಕಾಂಗ್ರೆಸ್ ಪಕ್ಷದ ಹಾಗೂ ಖಿಲಾಫತ್ ಹೋರಾಟದ ಮುಸ್ಲಿಂ ನಾಯಕರು ಈ ಧ್ವಜವನ್ನು ರಾಷ್ಟ್ರಧ್ವಜವನ್ನಾಗಿ ಸ್ವೀಕರಿಸಿದರು. ಧ್ವಜ ಸಂಗ್ರಾಮದ ವಿರೋಧಿಗಳು ಕೂಡ ಸ್ವರಾಜ್ಯ ಧ್ವಜವನ್ನು ರಾಷ್ಟ್ರದ ಐಕ್ಯತೆಯ ಚಿಹ್ನೆಯನ್ನಾಗಿ ಘೋಷಿಸಿದರು. ಹೀಗೆ ಈ ಧ್ವಜ ಭಾರತೀಯ ಸಂಸ್ಥೆಯ ಪ್ರಮುಖ ರಚನಾತ್ಮಕ ಘಟಕವಾಯಿತು. ಈ ಹಂತದಲ್ಲಿ ಭಾರತದ ರಾಷ್ಟ್ರಧ್ವಜವನ್ನು ಬ್ರಿಟೀಷ್ ಸಂಸತ್ತು ಗಂಭೀರವಾಗಿ ಪರಿಗಣಿಸಿ ಬಾವುಟದ ಸಾರ್ವಜನಿಕ ಬಳಕೆಯನ್ನು ಚರ್ಚಿಸಿತು. ಲಂಡನ್‍ನಿಂದ ಬಂದ ಸೂಚನೆಯಂತೆ ಬ್ರಿಟೀಷ್ ಸರ್ಕಾರವು ಸ್ಥಳಿಯ ಸರ್ಕಾರಗಳು ಮತ್ತು ಪುರಸಭೆಗಳು ಧ್ವಜವನ್ನು ಜನರು ಸಾರ್ವಜನಿಕವಾಗಿ ಉಪಯೋಗಿಸುವುದನ್ನು ತಡೆಯದಿದ್ದರೆ ಹಣಕಾಸ ನಿಧಿ ಪೂರೈಕೆಯನ್ನು ಹಿಂಪಡೆಯುವುದಾಗಿ ಬೆದರಿಸಿತು.
ಜೂನ್ 23, 1947ರಂದ ರಾಷ್ಟ್ರಧ್ವಜವನ್ನು ಆಯ್ಕೆಮಾಡಲು ರಾಜೇಂದ್ರ ಪ್ರಸಾರ್‍ರವರ ನೇತೃತ್ವದಲಿ ಮೌಲಾನ ಅಬುಲ್ ಕಲಾಮ್ ಅಜಾದ್, ಸಿ. ರಾಜಗೋಪಾಲಚಾರಿ, ಕೆ.ಎಂ. ಮುನ್ಸಿ, ಬಿ.ಆರ್. ಅಂಬೇಡ್ಕರ್, ಸರೋಜಿನಿ ನಾಯ್ಡು ಸದಸ್ಯರಾಗಿದ್ದ ಒಂದು ಸಂಸದೀಯ ಸಮಿತಿಯನ್ನು ಸ್ಥಾಪಿಸಲಾಯಿತು. ಈ ಸಮಿತಿಯ ಶಿಪಾರಸ್ಸಿನಂತೆ ಧ್ವಜವನ್ನು ಜಾತ್ಯಾತೀತ ಮತ್ತು ಪಕ್ಷಾತೀತವನ್ನಾಗಿ ರೂಪಿಸಲಾಯಿತು. ತ್ರಿವರ್ಣ ಧ್ವಜದಲ್ಲಿರುವ ಕೇಸರಿ ಬಣ್ಣ ಶಕ್ತಿ ಮತ್ತು ಶೌರ್ಯ ; ಬಿಳಿಬಣ್ಣ ಶಾಂತಿ, ಸತ್ಯ ಮತ್ತು ಶುಭ್ರತೆ ಹಾಗೂ ಹಸಿರು ಬಣ್ಣ ಅಭಿವೃದ್ಧಿ, ಫಲವತ್ತತೆ ಮತ್ತು ಮಂಗಳದ ಸೂಚನೆಯನ್ನು ಬಿಂಬಿಸುತ್ತವೆ. ಚರಕದ ಬದಲು ಅಶೋಕನ ಧರ್ಮ ಚಕ್ರವನ್ನು ಸೇರಿಸಲಾಯಿತು. ಈ ಚಕ್ರದಲ್ಲಿ ಒಟ್ಟು 24 ಕಡ್ಡಿಗಳು ಇವೆ. ಇವು ದಿನದ ಇಪ್ಪತ್ತಾಲ್ಕು ಗಂಟೆಗಳನ್ನು ಸೂಚಿಸುತ್ತವೆ. ಹಾಗಾಗಿ ಇದನ್ನು ಸಮಯ ಚಕ್ರವೆಂದು ಕೂಡ ಕರೆಯಲಾಗುತ್ತದೆ. ಈ ಚಕ್ರದ ನೀಲಿ ಬಣ್ಣ ಆಕಾಶ, ಸಾಗರ ಮತ್ತು ಸಾರ್ವತ್ರಿಕ ಸತ್ಯವನ್ನು ಸಾರುತ್ತದೆ. ಈ ಧ್ವಜದ ಅಂಗೀಕಾರಕ್ಕಾಗಿ ಪಂಡಿತ್ ನೆಹರೂರವರು ಜುಲೈ 22, 1947ರಂದು ಸಂವಿಧಾನ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಿದರು. ಅದು ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟಿತು. ಸ್ವಾತಂತ್ರ್ಯದ ದಿನದಂದು ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಅನಾವರಣ ಗೊಳಿಸಲಾಯಿತು.
ರಾಷ್ಟ್ರ ಧ್ವಜವನ್ನು ಹುಬ್ಬಳ್ಳಿಯಲ್ಲಿ ಮಾತ್ರ ಅತ್ಯಂತ ಕಟ್ಟುನಿಟ್ಟಾದ ಅಳತೆಯಿರುವ ಖಾದಿಬಟ್ಟೆಯಲ್ಲಿ ಮತ್ತು ತ್ರಿವರ್ಣದಲ್ಲಿ ತಯಾರಿಸುವ ಅವಕಾಶವಿದೆ. ಇದರ ವಿನ್ಯಾಸ ಮತ್ತು ತಯಾರಿಕಾ ಪ್ರಕ್ರಿಯೆಯನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡಸ್ ಪಟ್ಟಿ ಮಾಡಿರುವ ಮೂರು ದಾಖಲೆಗಳು ನಿಯಂತ್ರಿಸುತ್ತವೆ. ತಯಾರಿಕಾ ಘಟ್ಟದಲ್ಲಿ ಏನಾದರೂ ಲೋಪ ಕಂಡುಬಂದಲ್ಲಿ ದಂಡ ಅಥವಾ ಜೈಲುಶಿಕ್ಷೆ ವಿಧಿಸುವ ಕಾನೂನು ಇದೆ. ಹಾಗಾಗಿ ಕೇವಲ ಕೆಲವು ಜನರು ಮಾತ್ರ ಈ ಧ್ವಜ ತಯಾರಿಕೆಯಲ್ಲಿ ಪಾಲ್ಗೊಳ್ಳುತ್ತಾರೆ. ಹಾಗೆಯೇ ರಾಷ್ಟ್ರ ಧ್ವಜದ ಪ್ರದರ್ಶನ ಮತ್ತು ಬಳಕೆಯನ್ನು ತಿದ್ದುಪಡಿಗೊಳಗೊಂಡ ಭಾರತೀಯ ರಾಷ್ಟ್ರಧ್ವಜ ನಿಯಮಾವಳಿ-2002 ತಿಳಿಸಿಕೊಡುತ್ತದೆ. ಈ ಧ್ವಜ ಕೇಸರಿ, ಬಿಳಿ, ಹಸಿರು ವರ್ಣದ ಶ್ರೇಣಿಯಲ್ಲೇ ಕಾಣಿಸುವಂತೆ ಧ್ವಜಾರೋಹಣ ಮಾಡಬೇಕು. ಹಾರಿಸುವ ಮುನ್ನ ಹೂ ದಳಗಳನ್ನು ಬಿಟ್ಟು ಬೇರೆ ಯಾವುದೇ ಸಾಮಗ್ರಿಯನ್ನು ಒಳಗೆ ಇಟ್ಟು ಸುತ್ತುವಂತಿಲ್ಲ. ಬೇರೆ ಏನನ್ನು ಬಾವುಟದ ಮೇಲೆ ಬರೆಯುವಂತಿಲ್ಲ. ಸೂರ್ಯೋದಯ ಮತ್ತು ಸೂರ್ಯಾಸ್ತಮಾನದ ನಡುವೆ ಮಾತ್ರ ಧ್ವಜದ ಬಳಕೆಯಾಗಬೇಕು. ಧ್ವಜ ಮತ್ತು ಧ್ವಜಸ್ತಂಭ ಸ್ವಚ್ಛವಾಗಿರಬೇಕು.
ವಿಶೇಷ ಸಂದರ್ಭಗಳಲ್ಲಿ ಖಾಸಗಿ ವ್ಯಕ್ತಿಗಳು ಕೂಡ ರಾಷ್ಟ್ರಧ್ವಜದ ಗೌರ ಘನತೆಯನ್ನು ಎತ್ತಿ ಹಿಡಿಯುವ ರೀತಿಯಲ್ಲಿ ಧ್ವಜವನ್ನು ಹಾರಿಸಬಹುದು. 2005ರಲ್ಲಿ ಭಾರತ ಸರ್ಕಾರ ಕೆಲವು ರೀತಿಗಳಲ್ಲಿ ಧ್ವಜದ ಉಪಯೋಗಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಇತರರು ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವದಂದು ಪ್ಲಾಸ್ಟಿಕ್ ಮತ್ತು ಕಾಗದದ ಪುಟ್ಟ ಬಾವುಟಗಳನ್ನು ಹಿಡಿದು ಸಂಭ್ರಮಿಸುತ್ತಾರೆ. ಆದರೆ ಕೆಲವು ನಿಯಮಗಳು ಹೀಗಿವೆ ; ಸೊಂಟದ ಕೆಳಭಾಗದಲ್ಲಿ ಧರಿಸುವಂತಿಲ್ಲ. ದಿಂಬಿನ ಕವರ್, ಕರವಸ್ತ್ರ ಹಾಗೂ ಇತರೆ ಉಡುಗೆ ವಸ್ತ್ರಗಳ ಮೇಲೆ ಕಸೂತಿ ಮಾಡುವಂತಿಲ್ಲ. ಬಾವುಟವನ್ನು ನೆಲ, ಮಣ್ಣು ಅಥವಾ ನೀರಿನ ಮೇಲೆ ಬೀಳಿಸುವಂತಿಲ್ಲ. ಹರಿದ ಅಥವಾ ಹಾನಿಗೊಳಗಾದ ಬಾವುಟಗಳನ್ನು ಧ್ವಜ ನಿಯಮಾವಳಿಗೆ ಅನುಗುಣವಾಗಿ ನಾಶಮಾಡಬೇಕು. ಎಲ್ಲೆಂದರಲ್ಲಿ ಎಸೆಯುವಂತಿಲ್ಲ.
ಹೀಗೆ ಧ್ವಜವನ್ನು ಹಾರಿಸುವಾಗ ಹಲವಾರು ಕಾನೂನು ನಿಯಮಗಳನ್ನು ಪಾಲಿಸಬೇಕು. ಇಲ್ಲದಿದ್ದರೆ ದಂಡ ಅಥವಾ ಜೈಲುಶಿಕ್ಷೆ ಅನುಭವಿಸಬೇಕಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ದೇಶಾಭಿಮಾನಕ್ಕೆ ಕಳಂಕ ಹಚ್ಚಿದಂತಾಗುತ್ತದೆ. ಈ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳ ಹಾಗೂ ಮುಂಬರುವ ಪೀಳಿಗೆಗಳ ಆಶೋತ್ತರಗಳ ಬೇಡಿಕೆಗಳಿಗೆ ಸ್ಪಂದಿಸುತ್ತಾ ನಮ್ಮ ರಾಷ್ಟ್ರಧ್ವಜದ ಘನತೆಯನ್ನು ಎತ್ತಿಹಿಡಿಯೋಣ.
ಏರುತಿರಲಿ… ಹಾರುತಿರಲಿ… ನಮ್ಮ ಬಾವುಟ.
***********

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ