October 6, 2024

ಸರ್ಫಾಸಿ (SARFAESI) (ಸೆಕ್ಯುರಿಟೈಸೇಶನ್ ಮತ್ತು ರಿಕನ್ಸ್ಟ್ರಕ್ಷನ್ ಆಫ್ ಫೈನಾನ್ಷಿಯಲ್ ಅಸೆಟ್ಸ್ ಮತ್ತು ಎನ್‌ಫೋರ್ಸ್‌ಮೆಂಟ್ ಆಫ್ ಸೆಕ್ಯುರಿಟಿ ಇಂಟ್ರೆಸ್ಟ್ ಆಕ್ಟ್) ಕಾಯ್ದೆಯ ಹೆಸರಿನಲ್ಲಿ ಬ್ಯಾಂಕಿನಲ್ಲಿ ಸಾಲ ಸುಸ್ತಿಯಾಗಿರುವ ಕಾಫಿ ಬೆಳೆಗಾರರ ಜಮೀನನ್ನು ಆನ್ ಲೈನ್ ಮೂಲಕ ಹರಾಜು ಮಾಡುತ್ತಿರುವ ಬ್ಯಾಂಕುಗಳ ಕ್ರಮವನ್ನು ವಿರೋಧಿಸಿ ರೈತರು ಬೀದಿಗಿಳಿಯಲು ಸಜ್ಜಾಗಿದ್ದಾರೆ.

ಅಕ್ಟೋಬರ್ 10 ರಂದು ಮಂಗಳೂರಿನ ಕೆನರಾ ಬ್ಯಾಂಕ್ ವಿಭಾಗೀಯ ಕಛೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಮೂಡಿಗೆರೆ  ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ತೀಳಿಸಿದ್ದಾರೆ.

ಶನಿವಾರ ಚಿಕ್ಕಮಗಳೂರಿನಲ್ಲಿ ಮಾಧ್ಯದಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ; ಕಾಫಿ ಕೃಷಿಕರು ತಮ್ಮ ಜಮೀನಿನ ಅಭಿವೃದ್ಧಿಗೆಂದು ರಾಷ್ಟ್ರೀಯ ಬ್ಯಾಂಕುಗಳಲ್ಲಿ ಸಾಲ ಮಾಡಿದ್ದು, ಹವಾಮಾನ ವೈಪರೀತ್ಯ, ಬೆಲೆಯ ಏರಿಳಿತ, ಕಾಫಿ ತೋಟಗಳ ನಿರ್ವಹಣ ವೆಚ್ಚ ಹೆಚ್ಚಳ ಮುಂತಾದ ಕಾರಣಗಳಿಂದ ಅನೇಕ ರೈತರು ಸಕಾಲದಲ್ಲಿ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗಿರುವುದಿಲ್ಲ. ಆರ್ಥಿಕ ನಷ್ಟದಿಂದಾಗಿ ರೈತರು ಸಾಲ ಮರುಪಾವತಿ ಮಾಡಲು ವಿಳಂಬವಾಗುತ್ತಿದ್ದು, ಇದನ್ನೇ ನೆಪವಾಗಿಸಿಕೊಂಡು ಬ್ಯಾಂಕುಗಳು ರೈತರ ಜಮೀನು ಹರಾಜು ಮಾಡಲು ಮುಂದಾಗಿವೆ. ಕಾಫಿ ಕೃಷಿ ವಾಣಿಜ್ಯ ಬೆಳೆಯಾಗಿದ್ದು ಅದು ಸರ್ಫಾಸಿ ಕಾಯ್ದೆಯಡಿ ಬರುತ್ತದೆ ಎಂದು ಬ್ಯಾಂಕಿನವರು ಸುಸ್ತಿಯಾಗಿರುವ ಸಾಲಗಾರರ ಜಮೀನು ಹರಾಜಿಗೆ ಮುಂದಾಗಿದ್ದಾರೆ. ಈಗಾಗಲೇ ರಾಜ್ಯದ ಕಾಫಿ ಬೆಳೆಯುವ ಪ್ರದೇಶಗಳ ಸಾವಿರಾರು ರೈತರಿಗೆ ನೋಟೀಸ್ ನೀಡಿದ್ದು, ಪತ್ರಿಕೆಗಳ ಮೂಲಕವೂ ನೋಟೀಸ್ ಜಾರಿ ಮಾಡುತ್ತಿದ್ದಾರೆ.

ಇದರ ವಿರುದ್ಧ ಈಗಾಗಲೇ ಜನಪ್ರತಿನಿಧಿಗಳು, ಬ್ಯಾಂಕಿನ ಉನ್ನತ ಅಧಿಕಾರಿಗಳ ಗಮನಕ್ಕೂ ತಂದಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಕೆಲವು ರೈತರು ಓಟಿಎಸ್ (ಒನ್ ಟೈಮ್ ಸೆಟ್ಲ್ ಮೆಂಟ್) ಮೂಲಕ ಸಾಲ ಮರುಪಾವತಿ ಮಾಡಲು ಸಿದ್ಧರಿದ್ದರೂ ಕೆಲವು ಬ್ಯಾಂಕುಗಳು ಇದಕ್ಕೆ ಅವಕಾಶ ನೀಡುತ್ತಿಲ್ಲ. ವಿಶೇಷವಾಗಿ ಕೆನರಾ ಬ್ಯಾಂಕ್ ನವರು ರೈತವಿರೋಧಿ ಮನೋಭಾವನೆ ತೋರುತ್ತಿದ್ದಾರೆ. ಇದನ್ನು ಖಂಡಿಸಿ ಅಕ್ಟೋಬರ್ 10ರಂದು ಮಂಗಳೂರು ಕೆನರಾ ಬ್ಯಾಂಕ್ ವಿಭಾಗೀಯ ಕಛೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದು ಅಂದು ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳ ರೈತರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೋಳ್ಳಬೇಕು ಎಂದು ಕರೆ ನೀಡಿದ್ದಾರೆ.

ಮುಖಂಡರಾದ ದೀಪಕ್ ದೊಡ್ಡಯ್ಯ ಮಾತನಾಡಿ : ರೈತರು ಸಾಲ ಮಾಡುವಾಗ ಬ್ಯಾಂಕಿನವರು ಸರ್ಫಾಸಿ ಕಾಯ್ದೆಯ ಬಗ್ಗೆ ಯಾವುದೇ ಮಾಹಿತಿ ನೀಡಿರುವುದಿಲ್ಲ. ಕಳೆದ ಏಳೆಂಟು ವರ್ಷಗಳಿಂದ ಕಾಫಿ ಬೆಳೆಯುವ ಪ್ರದೇಶದಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಬೆಳೆಹಾನಿಯಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣೆ ನಿಧಿಯಿಂದ ರೈತರಿಗೆ ಪರಿಹಾರವನ್ನು ಸಹ ನೀಡಿರುತ್ತಾರೆ. ರೈತರು ಆರ್ಥಿಕ ಸಂಕಷ್ಟದಲ್ಲಿರುವುದಕ್ಕೆ ಇದೇ ಸ್ಪಷ್ಟ ನಿದರ್ಶನವಾಗಿದೆ. ಇಂತಹ ಸನ್ನವೇಶದಲ್ಲಿ ಬ್ಯಾಂಕುಗಳು ಸರ್ಫಾಸಿ ಕಾಯ್ದೆಯ ನೆಪ ಮಾಡಿ ರೈತರಿಗೆ ತೊಂದರೆ ನೀಡುತ್ತಿದ್ದಾರೆ. ಸಾಲ ಪಡೆದ ಯಾವೊಬ್ಬ ರೈತರು ಉದ್ದೇಶಪೂರ್ವಕವಾಗಿ ಸಾಲ ಮರುಪಾವತಿ ಮಾಡದೇ ಇಲ್ಲ. ಅನಿವಾರ್ಯ ಕಾರಣಗಳಿಂದ ಸಾಲ ಮರುಪಾವತಿ ಮಾಡಲು ವಿಳಂಬವಾಗಿದೆ. ಇದನ್ನೆ ನೆಪ ಮಾಡಿಕೊಂಡು ಬ್ಯಾಂಕುಗಳು ವಾಣಿಜ್ಯ ಸಾಲಕ್ಕೆ ಹಾಕುವ ಸರ್ಫಾಸಿ ಕಾಯ್ದೆಯನ್ನು ಕೃಷಿ ಸಾಲಕ್ಕೆ ಅನ್ವಯಿಸುತ್ತಿರುವುದು ಖಂಡನೀಯ ಎಂದರು.

ರೈತ ಮುಖಂಡ ಬಿ.ಸಿ. ದಯಾಕರ್ ಮಾತನಾಡಿ ; ಈಗ ರೈತರ ರಕ್ಷಣೆಗೆ ಸರ್ಕಾರಗಳೇ ಮುಂದಾಗಬೇಕಾಗಿದೆ. ನಮ್ಮ ಪಕ್ಕದ ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಕಾಫಿಯ ಮೇಲಿನ ಸಾಲವನ್ನು ಸರ್ಫಾಸಿ ಕಾಯ್ದೆಯಿಂದ ಹೊರಗಿಡಲಾಗಿದೆ. ಕರ್ನಾಟಕ ರಾಜ್ಯದಲ್ಲಿಯೂ ಇದೇ ನಿಯಮವನ್ನು ಜಾರಿಗೆ ತರಲು ತಾವು ಕೇಂದ್ರ ಸರ್ಕಾರದ ಮುಂದಾಗಬೇಕು. ಒಂದು ವೇಳೆ ಸರ್ಫಾಸಿ ಕಾಯ್ದೆಯನ್ನು ರಾಜ್ಯದ ಕಾಫಿ ಬೆಳೆಯುವ ರೈತರ ಮೇಲೆ ಹೇರಿದ್ದೇ ಆದಲ್ಲಿ ಸಾವಿರಾರು ರೈತರು ತಮ್ಮ ಜಮೀನು ಕಳದುಕೊಂಡು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆಗ ರೈತರು ಆತ್ಮಹತ್ಯೆಗೂ ಮುಂದಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಮುಖಂಡರಾದ ಸತೀಶ್ ಜೇನುಬೈಲ್ ಮಾತನಾಡಿ ; ಕೆನರಾ ಬ್ಯಾಂಕ್ ಸಹಿತ ಅನೇಕ ಬ್ಯಾಂಕುಗಳು ರೈತರನ್ನು ಹೆದರಿಸುವುದು, ರೈತರ ಮನೆಗೆ ಏಜೆಂಟರುಗಳು ಮತ್ತು ಭೂಮಿ ಖರೀದಿಸುವವರನ್ನು ಕರೆತಂದು ಭಯ ಹುಟ್ಟಿಸುತ್ತಿದ್ದಾರೆ. ಇಂತಹ ಅನೇಕ ಘಟನೆಗಳು ಈಗಾಗಲೇ ನಡೆದಿವೆ. ಬ್ಯಾಂಕಿನವರು ಮಾನವೀಯತೆಯನ್ನು ಮರೆತು ರೈತರ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಕ್ತ ಕಾನೂನು ತಿದ್ದುಪಡಿ ತಂದು ಪರಿಹಾರವನ್ನು ಒದಗಿಸಿಕೊಡಬೇಕಾಗಿ ಹಾಗೂ ಕಾಫಿ ಬೆಳೆಯುವ ರೈತರ ಸುಸ್ತಿ ಸಾಲಕ್ಕೆ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್(ಈ ಹಿಂದೆ ನೀಡಿದ್ದ ವಿದರ್ಭ ಪ್ಯಾಕೇಜ್ ರೀತಿಯಲ್ಲಿ) ಘೋಷಣೆ ಮಾಡಿ ಸರ್ಕಾರ ರೈತರ ನೆರವಿಗೆ ಬರಬೇಕು ಎಂದರು.

ಈ ಸಂದರ್ಭದಲ್ಲಿ ಬೆಳೆಗಾರರ ಸಂಘದ ಮನೋಹರ್ ಕತ್ಲೆಖಾನ್, ರೇವಣ್ಣಗೌಡ, ರೈತ ಮುಖಂಡ ತುಳಸೇಗೌಡ, ಮುಖಂಡರಾದ ಎಂ.ಸಿ. ಹೂವಪ್ಪ, ಉಷಾ ಸಂತೋಷ್, ಸುರೇಂದ್ರ, ಸುಬ್ರಮಣ್ಯ, ಪ್ರಸನ್ನ ಔಸನ ಮುಂತಾದವರು ಇದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ