October 5, 2024

ಕಾಫಿನಾಡು ಸರ್ವ ಧರ್ಮಿಯರ ಸೌಹಾರ್ದ, ಸಾಮರಸ್ಯದ ಬೀಡಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಬ್ಯಾರಿ ಸಮುದಾಯದ ಜನರ ಸಂಖ್ಯೆ ಕಡಿಮೆ ಇದ್ದರೂ ಇಲ್ಲಿನ ಜನತೆ ಬ್ಯಾರಿ ಸಮುದಾಯದವರನ್ನು  ಹೊರಗಿನವರೆಂದು ಭಾವಿಸದೇ ತಮ್ಮವರನ್ನಾಗಿಸಿಕೊಂಡಿದ್ದು, ಇದಕ್ಕೆ ಇಲ್ಲಿನ ಜನರ ಹೃದಯ ವೈಶಾಲ್ಯತೆ ಕಾರಣ. ಬ್ಯಾರಿ ಸಮುದಾಯದ ಕಾರ್ಯಕ್ರಮಗಳು ಒಂದು ಸಮುದಾಯಕ್ಕೆ ಸೀಮಿತವಾಗದೇ ಎಲ್ಲ ಸಮುದಾಯದವರ ಕಾರ್ಯಕ್ರಮ ಆಗಬೇಕು, ಬೇರೆ ಭಾಷಿಕರಿಗೂ ಬ್ಯಾರಿ ಭಾಷೆಯನ್ನು ಕಲಿಸುವ ಕಾರ್ಯಕ್ರಮ ಆಗಬೇಕು ಎಂದು ವಿಧಾನ ಸಭೆ ಸ್ಪೀಕರ್ ಯು.ಟಿ.ಖಾದರ್ ಅಭಿಪ್ರಾಯಿಸಿದ್ದಾರೆ.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಬ್ಯಾರಿಗಳ ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಿದ್ದ ಬ್ಯಾರಿ ಭಾಷಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ಬ್ಯಾರಿ ಭಾಷೆ ನಿರ್ಧಿಷ್ಟ ಪ್ರದೇಶಕ್ಕೆ ಸೀಮಿತವಾಗಿತ್ತು, ಬ್ಯಾರಿ ಸಮುದಾಯದವರು ಜೀವನೋಪಾಯ, ವ್ಯಾಪರಕ್ಕಾಗಿ ಇಲ್ಲಿಗೆ ಬಂದ ಸಂದರ್ಭದಲ್ಲಿ ಸಮುದಾಯದ ಜನರನ್ನು ಇಲ್ಲಿನ ಜನರು ತಮ್ಮವರೆಂದೇ ಕಂಡಿದ್ದಾರೆ. ಬ್ಯಾರಿ ಸಮುದಾಯದ ಜನರೂ ಕೂಡ ಇಲ್ಲಿನ ಸಮುದಾಯದವರೊಂದಿಗೆ ಕಲೆತು, ಬೆರತು ತಾವೂ ಬೆಳೆದಿದ್ದಾರೆ. ಬೇರೆಯವರನ್ನೂ ಬೆಳೆಸುತ್ತಿದ್ದಾರೆ. ಬೇರೆ ಸಮುದಾಯದವರನ್ನು ಗೌರವಿಸುವುದರಿಂದ ನಾವೂ ಬೆಳಯಬಹುದು, ನಮ್ಮ ಭಾಷೆಯನ್ನೂ ಬೆಳೆಯಬಹುದು ಎಂಬುದಕ್ಕೆ ಚಿಕ್ಕಮಗಳೂರು ಜಿಲ್ಲೆ ಉತ್ತಮ ಉದಾಹರಣೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬ್ಯಾರಿ ಭಾಷೆ ಸಂಸ್ಕೃತಿ, ಪರಂಪರೆಗೆ ತನ್ನದೇ ಆದ ಮಹತ್ವ ಇದೆ  ಆಧುನಿಕ ತಂತ್ರಜ್ಞಾನ-ಪಾಶ್ಚಾತ್ಯ ಸಂಸ್ಕೃತಿಯ ವ್ಯಾಮೋಹ ಇದ್ದರೂ ಬ್ಯಾರಿ ಭಾಷೆ ಅಚ್ಚಳಿಯದೇ ಉಳಿದು ಬಂದಿದೆ ಎಂದರು.  ಬ್ಯಾರಿ ಭಾಷೆ ಅಂದರೆ ಬರೀ ಭಾಷೆ ಅಲ್ಲ, ಬ್ಯಾರಿ ಸಮುದಾಯದ ಸಂಸ್ಕೃತಿ, ವ್ಯಾಪಾರ, ಉದ್ಯೋಗ, ಆಚಾರ-ವಿಚಾರ ಎಲ್ಲವೂ ಸೇರಿ ಬ್ಯಾರಿ ಭಾಷೆಯಾಗಿದೆ. ಭಾಷೆ ಉಳಿಸಲು ಇಡೀ ಸಮುದಾಯದ ಸಹಕಾರ ಅಗತ್ಯ ಎಂದು ಹೇಳಿದರು. ಬ್ಯಾರಿ ಸಮುದಾಯದವರು ಬೇರೆ ಬೇರೆ ಭಾಗಗಳಿಂದ ಇಲ್ಲಿಗೆ ಬಂದು ನೆಲೆಸಿದ್ದಾರೆ. ಅವರಿಗೆ ಇಲ್ಲಿರುವವರು ಬೆಂಬಲಿಸಿ ಪರಸ್ಪರ ಸಹಕಾರ ನೀಡಿದ ಪರಿಣಾಮ ಎಲ್ಲರಂತೆ ಬೆಳೆದಿದ್ದಾರೆ ಎಂದರು. ತಮ್ಮ ಧರ್ಮದ ಜೊತೆಗೆ ಇತರೆ ಧರ್ಮ-ಸಂಸ್ಕೃತಿಯನ್ನು ಗೌರವಿಸಿದರೆ ಆ ಭಾಷೆಗೆ ಶಾಶ್ವತವಾದ ನೆಲೆಗಟ್ಟು ನಿಲ್ಲುತ್ತದೆ, ಬ್ಯಾರಿ ಭಾಷೆ ಬೆಳವಣಿಗೆಗೆ ಇನ್ನಷ್ಟು ಜಾಗೃತಿ ಅತ್ಯಗತ್ಯ ಎಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಸಕ ಎಚ್.ಡಿ ತಮ್ಮಯ್ಯ ಮಾತನಾಡಿ,   ಶಾಂತಿ, ಸಹಬಾಳ್ವೆ, ವಿಶಿಷ್ಟ ಗುಣವುಳ್ಳ ಬ್ಯಾರಿ ಸಮುದಾಯ ತನ್ನ ಭಾಷೆಯ ಮೂಲಕ ಸಾಂಪ್ರದಾಯಿಕ ವಿಷಯಗಳನ್ನು ಜಾಗೃತಗೊಳಿಸಿದೆ ಎಂದರು. ಬ್ಯಾರಿ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ಮಂಡಳಿ ಮಾಡಲು ಮನವಿ ಸಲ್ಲಿಸಿದ್ದಾರೆ, ಇದನ್ನು ಗಂಭೀರವಾಗಿ ಪರಿಗಣಿಸಿ ಸಭಾಧ್ಯಕ್ಷರ ಮೂಲಕ ಮುಖ್ಯ ಮಂತ್ರಿಗಳ ಬಳಿ ವಿಶೇಷ ಒತ್ತಡ ತಂದು ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಬ್ಯಾರಿ ಒಕ್ಕೂಟದ ಅಧ್ಯಕ್ಷ ಟಿ.ಎಂ .ನಾಸಿರ್ ಮಾತನಾಡಿದರು. ಈಗಾಗಲೇ 5 ಎಕರೆ ನಿವೇಶನ ಕಾಯ್ದಿರಿಸಲಾಗಿದ್ದು, ಅದು ಇನ್ನೂ ನಮ್ಮ ಒಕ್ಕೂಟದ ಕೈಸೇರಿಲ್ಲ. ಕೂಡಲೇ ಮಂಜೂರು ಮಾಡಿಕೊಡುವಂತೆ ಸಭಾಧ್ಯಕ್ಷರು ಮತ್ತು ಶಾಸಕರಲ್ಲಿ ಮನವಿ ಮಾಡಿದರು.

ಹಿರಿಯ ಸಾಹಿತಿ ಶಂಷುದ್ದೀನ್ ಆಶಯ ಭಾಷಣ ಮಾಡಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಉಮರ್ ಬಹುಮಾನ ವಿತರಿಸಿದರು. ಕೆ. ಮಹಮದ್, ಬಿ.ಎಸ್ ಮಹಮದ್, ಸಿ.ಎಸ್ ಖಲಂದರ್, ಫಾರೂಕ್, ಅಕ್ರಂಹಾಜಿ, ಅಬ್ಬಾಸ್ ಕಿರುಗುಂದ ಇತರರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ