October 5, 2024

ಚಿಕ್ಕಮಗಳೂರು ನಗರದ ಉಪ್ಪಳ್ಳಿಯ ಬಳಿ ಹರಿಯುವ ಯಗಚಿ ಉಪನದಿಯನ್ನು ಶುದ್ಧೀಕರಿಸುವ ಮೂಲಕ ಬದ್ಧತೆ ಪ್ರದರ್ಶಿಸಬೇಕಾಗಿದೆ ಎಂದು ಬಸವತತ್ತ್ವ ಪೀಠಾಧ್ಯಕ್ಷ ಡಾ.ಶ್ರೀಬಸವಮರುಳಸಿದ್ದ ಸ್ವಾಮೀಜಿ ಕರೆ ನೀಡಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ತಾಲ್ಲೂಕು 5ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ದಿವ್ಯಸಾನಿಧ್ಯವಹಿಸಿ ಪ್ರಶಸ್ತಿವಿತರಿಸಿ ನಿನ್ನೆಸಂಜೆ ಅವರು ಮಾತನಾಡಿದರು.

ಸುಂದರ ಪ್ರಕೃತಿಯ ಚಿಕ್ಕಮಗಳೂರು ಮೋಜುಮಸ್ತಿ ಮಾಡುವ ಪ್ರವಾಸೋದ್ಯಮಕ್ಕೆ ತುತ್ತಾಗಿದೆ. ನಾವು ಪರಿಸರದ ಬಗ್ಗೆ ರಚನಾತ್ಮಕವಾದ ಆಲೋಚನೆ ಹೊಂದಿಲ್ಲ. 12ವರ್ಷಕ್ಕೊಮ್ಮೆ ಗಿರಿಪ್ರದೇಶದಲ್ಲಿ ಅರಳುತ್ತಿದ್ದ ನೀಲಿಕುರುಂಜಿ ಈಗ 14ವರ್ಷ ತೆಗೆದುಕೊಳ್ಳುತ್ತಿರುವುದು ಪರಿಸರದ ಸ್ಥಿತಿ ತಿಳಿಸುತ್ತದೆ. ಪರಿಸರದ ನಾಶ ಬದುಕು, ಭಾಷೆ ಸಂಸ್ಕøತಿಯ ಅವನತಿಯೂ ಹೌದು ಎಂದವರು ವಿಷಾದಿಸಿದರು.

ಜಿಲ್ಲಾ ಕೇಂದ್ರ ಚಿಕ್ಕಮಗಳೂರಿನ ಉಪ್ಪಳ್ಳಿ ಬಡಾವಣೆಯಲ್ಲಿ ಯಗಚಿ ಉಪನದಿ ಚರಂಡಿಯಂತೆ ಹರಿಯುತ್ತಿದೆ. ಇಲ್ಲಿಗೆ ಬಂದು ನಾಲ್ಕು ವರ್ಷವಾದರೂ ಉಪನದಿ ಹರಿಯುತ್ತಿರುವುದು ಗೊತ್ತಿರಲಿಲ್ಲ. ಮೊನ್ನೆ ಸಮಾರಂಭವೊಂದಕ್ಕೆ ಹೋದಾಗ ನೋಡಿ ನೋವಾಯಿತು. ಕಲುಷಿತವಾಗಿ ಕೊಳಕಿನಿಂದ ಹರಿದು ಮುಂದೆ ಇದೇ ನೀರು ಯಗಚಿ ಅಣೆಕಟ್ಟೆ ಸೇರಿ ಅಲ್ಲಿಂದ ನಮ್ಮೂರಿಗೆ ಕುಡಿಯುವ ನೀರಾಗಿ ಬರುತ್ತಿದೆ. ಇದೊಂದು ಆತಂಕದಾಯಕ ಅಷ್ಟೇ ಅಲ್ಲ ನಾಚಿಕೆಯ ಸಂಗತಿ ಎಂದು ಸ್ವಾಮೀಜಿ ವಿಷಾದಿಸಿದರು.

ಪರಿಸರದ ಬಗ್ಗೆ ಉದ್ದದ ಮಾತು ಹೇಳುವುದಿಲ್ಲ. ಪಶ್ಚಿಮಘಟ್ಟದ ದೊಡ್ಡ ಸಂಗತಿಯತ್ತವೂ ಹೋಗುವುದಿಲ್ಲ. ನಮ್ಮ ಪರಿಸರದ ಸಣ್ಣ ಉಪನದಿಯನ್ನು ನದಿಯಾಗಿ ಅಲ್ಲದಿದ್ದರೂ ಸಣ್ಣ ಕಾಲುವೆಯಾಗಿಯಾದರೂ ಶುದ್ಧವಾಗಿಟ್ಟುಕೊಳ್ಳುವ ಸಂಕಲ್ಪ ಮಾಡಬೇಕಾಗಿದೆ. ಇದಕ್ಕಾಗಿ ಒಂದುವರ್ಷ ಅವಧಿಯ ಕಾಲಮಿತಿಯನ್ನು ನಿಗದಿಸಿಕೊಂಡು ಎಲ್ಲರೂ ಕೈಜೋಡಿಸಿ ಕಾರ್ಯಪ್ರವೃತ್ತರಾಗುವ ಮೂಲಕ ನಾಗರಿಕ ಪ್ರಜ್ಞೆಯನ್ನು-ಪರಿಸರ ಕಾಳಜಿಯನ್ನು ತೋರಬೇಕೆಂದರು.

ಸಾಹಿತ್ಯದಲ್ಲಿ ಭಿನ್ನತೆಗಳಿವೆ. ಎಡ-ಬಲಪಂಥಗಳಿಗೆ ಪೂರ್ಣಬದ್ಧರಾಗದೆ ಎರಡರಲ್ಲೂ ಇರುವ ಒಳಿತನ್ನು ಸ್ವೀಕರಿಸುವ ಮನೋಭಾವ ಮುಖ್ಯ. ಎಡಪಂಥದ ಖಟ್ಟರ್ ಪಾಲಕರಾದ ಚೀನಾ ಮತ್ತು ರಷ್ಯಾದೇಶಗಳು ಸರ್ವಾಧಿಕಾರಕ್ಕೆ ತುತ್ತಾದವು, ಬಲಪಂಥದ ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನ ದಿವಾಳಿಯಾಗಿವೆ. ಹೃದಯದ ಭಾವನೆಗೆ ಸ್ಪಂದಿಸುವ ಮೌಲ್ಯಗಳು ನಮ್ಮದಾಗಬೇಕು. ರಾಜಕೀಯ ವ್ಯಕ್ತಿ, ತತ್ತ್ವಸಿದ್ಧಾಂತಗಳಿಂದ ಶಿಕ್ಷಣಕ್ಷೇತ್ರ ಮುಕ್ತವಾಗಬೇಕು. ಶೈಕ್ಷಣಿಕ ನೈತಿಕತೆ ಕಳೆದುಕೊಂಡರೆ ಅದೇ ದೇಶದ ಅಧಃಪತನ. ಯಾವುದನ್ನೆ ಹೇರುವ ಪ್ರವೃತ್ತಿ ಸರಿಯಲ್ಲ ಎಂದರು.

ಚೀನಾ ಭಾಷೆಯನ್ನು ಅಲ್ಲಿಯ ದೇಶ ಎಲ್ಲ ರಂಗಗಳಲ್ಲೂ ಸಮರ್ಥವಾಗಿ ರೂಢಿಸಿಕೊಂಡಿದೆ. ಭಾಷೆಯನ್ನು ಸಮರ್ಥವಾಗಿ, ಪರಿಣಾಮಕಾರಿಯಾಗಿ ದುಡಿಸಿಕೊಂಡರೆ ಮಾಹಿತಿ-ತಂತ್ರಜ್ಞಾನ-ವಿಜ್ಞಾನ-ವೈದ್ಯಕೀಯ-ಕಲೆ-ಸಂಸ್ಕøತಿ ಎಲ್ಲವೂ ಸಂಮೃದ್ಧವಾಗುತ್ತದೆ. ಸಾಪ್ಟ್‍ವೇರ್- ಕೀಲಿಮಣೆ-ಕಂಪ್ಯೂಟರ್ ಎಲ್ಲವೂ ಚೀನಿಭಾಷೆಯಲ್ಲೆ ಸಿದ್ಧಪಡಿಸಿ ಬಳಸುತ್ತಿದ್ದಾರೆ ಎಂದು ಉದಾಹರಿಸಿದ ಸ್ವಾಮೀಜಿ, ಪ್ರಜ್ಞಾಪೂರ್ವಕವಾಗಿ ಬಳಸಿಕೊಳ್ಳುವ ಬದ್ಧತೆ ಕನ್ನಡಿಗರಾದ ನಮಗಿರಬೇಕು. ನಮ್ಮಲ್ಲಿ ವೈದ್ಯಕೀಯ ಸೇರಿದಂತೆ ತಾಂತ್ರಿಕಶಿಕ್ಷಣ ಕನ್ನಡದಲ್ಲಿ ಸಿಗಲು ಜ್ಞಾನಿಗಳು, ಭಾಷಾತಜ್ಞರು-ಸಂಶೋಧಕರಿಗೆ ಸೂಕ್ತ ಪ್ರೋತ್ಸಾಹ ಸಿಗುತ್ತಿಲ್ಲ. ಸ್ಥಳೀಯ ಭಾಷೆಗಳು ಅಸ್ಥಿತ್ವ ಉಳಿಸಿಕೊಳ್ಳಲು ಪರದಾಡುವಂತಾಗಿದೆ. ಬದುಕು ಕಟ್ಟಿಕೊಳ್ಳಲು ಸಾಧ್ಯವಾಗದ ನಿರಭಿಮಾನ ಕನ್ನಡಿಗರದ್ದಾಗಿದೆ. ಭಾಷೆಯ ಹುಟ್ಟು ಬದುಕಿನ ಕಾರಣಕ್ಕೆ. ಬದುಕಿನ ಜೊತೆಗೇ ಭಾಷೆಯೂ ಬೆಳೆಯುತ್ತದೆ. ಭಾಷೆಯ ಮೂಲಕ ಬದುಕು ಕಟ್ಟಿಕೊಳ್ಳಬಹುದೆಂಬ ಅವಕಾಶ-ಭರವಸೆ ಇಲ್ಲದಾಗ ಭಾಷೆ ಸಾಯುತ್ತದೆ ಎಂದ ಸ್ವಾಮೀಜಿ, ಪಾಶ್ಚತ್ಯ ಬದುಕು ಉಡುಪು-ಆಹಾರ ಕುರಿತಂತೆ ನಮ್ಮ ಆಕರ್ಷಣೆ-ಅಭಿಮಾನ-ಅಭಿವ್ಯಕ್ತಿಯ ಪರಿಣಾಮ ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆಂದು ವಿಷಾದಿಸಿದರು.

ಸಮಾರೋಪ ಭಾಷಣದಲ್ಲಿ ಸಾಹಿತಿ ಡಾ.ರಮೇಶ್ಚಂದ್ರದತ್ತ ಸಮ್ಮೇಳನ ಸರ್ವಾಧ್ಯಕ್ಷರ ಚಿಂತನೆಗಳನ್ನು ಸಮರ್ಥಿಸಿ ಮಾತನಾಡಿ ಸೂಕ್ಷ್ಮತೆಗಳನ್ನು ಉಳಿಸಿಕೊಂಡಾಗ ನಾಡು-ನುಡಿಯ ಅಭಿವೃದ್ಧಿ ಸಾಧ್ಯ. ಸಾಹಿತ್ಯ ಬದುಕಿಗೆ ಸ್ಫೂರ್ತಿ ನೀಡುತ್ತದೆ. ಸಾಹಿತ್ಯ ಸಮ್ಮೇಳನಗಳು ಪ್ರಸ್ತುತ ಸಮಸ್ಯೆಗಳತ್ತ ಬೆಳಕು ಚೆಲ್ಲದಿರುವುದೇ ದೊಡ್ಡ ಕೊರತೆ. ಕೆಲವರ ಲಾಭಕ್ಕಾಗಿ ನಮ್ಮ ಪರಿಸರ ನಾಶವಾಗುವುದನ್ನು ತಪ್ಪಿಸಬೇಕು. ಸಾಹಿತ್ಯದ ಜೊತೆ ಜೊತೆಗೆ ವಿವಿಧ ವಿಚಾರಗಳ ಚಿಂತನೆಗೆ ಸಮ್ಮೇಳನಗಳು ವೇದಿಕೆಯಾಗಬೇಕೆಂದರು.

ಆಶಾಕಿರಣದ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿ ಮನೆಯಿಂದಲೇ ಭಾಷೆ-ಭಾವನೆ ಬೆಳೆಯಬೇಕು. ಭ್ರಷ್ಟಾಚಾರ ಮುಕ್ತವಾದರೆ ನಾಡಿಗೆ ಒಳಿತಿದೆ. ಮನೆಗಳಲ್ಲಿ ಕನ್ನಡ ಕಲಿಯುವ-ನಲಿಯುವ ಪ್ರವೃತ್ತಿ ಬೆಳೆಯಬೇಕು. ಸಮ್ಮೇಳನಗಳು ಸಾಹಿತ್ಯಚಿಂತನೆಯ ಜೊತೆಗೆ ಆಹಾರ-ಮುದ್ರಣ-ಹೂವು-ಅಲಂಕಾರ-ವಾಹನ ಸೇರಿದಂತೆ ವಿವಿಧ ರಂಗಗಳಲ್ಲಿ ಬದುಕು ಕಟ್ಟಿಕೊಂಡವರಿಗೆ ಆಸರೆಯಗುತ್ತದೆ. ಕನ್ನಡ ಮಾತನಾಡುವುದು, ಕನ್ನಡ ಸಿನಿಮಾ-ನಾಟಕ ವೀಕ್ಷಣೆ, ಕನ್ನಡ ಪತ್ರಿಕೆ ಮತ್ತು ಪುಸ್ತಕಗಳನ್ನು ಕೊಂಡು ಓದುವುದರಿಂದ ಭಾಷೆ ಬೆಳೆಯುತ್ತದೆ ಎಂದರು.

ಸಮ್ಮೇಳನದ ಸರ್ವಾಧ್ಯಕ್ಷ ಡಾ.ಬೆಳವಾಡಿಮಂಜುನಾಥ್ ಕೃತಜ್ಞತೆ ಸಲ್ಲಿಸಿ ಮಾತನಾಡಿ ಮಹಾಮಸ್ತಕಾಭಿಷೇಕ ನೆನಪಿಸುವಂತೆ 12ವರ್ಷಗಳ ನಂತರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು ಅಧ್ಯಕ್ಷ ಗೌರವ ಲಭಿಸಿರುವುದು ಹರ್ಷ ತಂದಿದೆ. ತಾಲ್ಲೂಕು ಜಿಲ್ಲೆ-ರಾಷ್ಟ್ರಮಟ್ಟದಲ್ಲಿ ಸಮ್ಮೇಳನದ ಅಧ್ಯಕ್ಷರ ಆಯ್ಕೆಯ ಮಾನದಂಡವೇ ತಮಗೆ ಅರ್ಥವಾಗಿಲ್ಲ. ಕನ್ನಡಕ್ಕಾಗಿ ಮಹತ್ವದ ಕೆಲಸ ಮಾಡಿದ ಡಾ.ಚಿದಾನಂದಮೂರ್ತಿ, ಹಂಪನಾ, ಟಿ.ವಿ.ವೆಂಕಟಾಚಲಶಾಸ್ತ್ರಿಯಂತಹ ಹಿರಿಯರಿಗೆ ಸಮ್ಮೇಳನಾಧ್ಯಕ್ಷ ಸ್ಥಾನ ಒಲಿಯದಿರುವುದು ಅಚ್ಚರಿಯ ಸಂಗತಿ. ಪ್ರಶಸ್ತಿ-ಸಮ್ಮೇಳನಾಧ್ಯಕ್ಷ ಆಯ್ಕೆಗೆ ಮಾನದಂಡಗಳು ಇರಬೇಕೆಂದರು.

ಚುಟುಕುಸಾಹಿತಿ ಅರವಿಂದದೀಕ್ಷಿತ್ ಮತ್ತು ಉತ್ತಮವಾಗ್ಮಿ ನಾಗಶ್ರೀತ್ಯಾಗರಾಜ್ ಅವರಿಗೆ ಸಾಹಿತ್ಯಸಿರಿ ಪ್ರಶಸ್ತಿ ನೀಡಲಾಯಿತು. ಸಾಹಿತಿ ಪತ್ರಕರ್ತ ತಿಪ್ಪೇರುದ್ರಪ್ಪ, ರಂಗಕರ್ಮಿ ಸುರೇಶದೀಕ್ಷಿತ್, ಶಿಕ್ಷಣತಜ್ಞ ಡಾ.ವಿನಾಯಕ, ಅಂಗನವಾಡಿ ಶಿಕ್ಷಕಿ ಎಸ್.ಶೈಲಾಬಸವರಾಜ್, ಡಿ.ಎಂ.ಮಂಜುನಾಥಸ್ವಾಮಿ, ಭೋಜೇಗೌಡ, ರೇಖಾನಾಗರಾಜರಾವ್, ಚಂದ್ರಶೇಖರ್‍ನಾರಣಪುರ, ರಾಜೇಶ್, ಕಳವಾಸೆಚಂದ್ರೇಗೌಡ ಸೇರಿದಂತೆ 25ಸಾಧಕರನ್ನು ಗೌರವಿಸಲಾಯಿತು.

ತಾಲ್ಲೂಕು ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಕಾರ್ಯದರ್ಶಿಗಳಾದ ಎಸ್.ಎಸ್.ವೆಂಕಟೇಶ್ ಮತ್ತು ಪವನ್, ಬಿ.ಆರ್.ಜಗದೀಶ್ ಮತ್ತಿತರರು ವೇದಿಕೆಯಲ್ಲಿದ್ದರು. ಕುಮಾರಸ್ವಾಮಿ ಸ್ವಾಗತಿಸಿ, ರೂಪಾನಾಯ್ಕ ಮತ್ತು ಎನ್.ಅನಿತಾ ನಿರೂಪಿಸಿ, ಸಿ.ಎಂ.ಜ್ಯೋತಿ ವಂದಿಸಿದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ