October 5, 2024

– ಡಾ.ಸಂಪತ್ ಬೆಟ್ಟಗೆರೆ
ಮೊ: 9353057067

ಕುಪ್ಪಳಿ ಪುಟ್ಟಪ್ಪ ಪೂರ್ಣಚಂದ್ರ ತೇಜಸ್ವಿ ಅವರು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಎಂಬ ಜೀವನ ಹಾಗೂ ಸಾಹಿತ್ಯನಾಮದಿಂದ ನಾಡಿನುದ್ದಲಕ್ಕೂ ಕನ್ನಡಿಗರ ಮನಸ್ಸನ್ನು ಆವರಿಸಿರುವ ಅಕ್ಷರಬಂಧು. ಸಾಹಿತ್ಯ ಕ್ಷೇತ್ರ ಮಾತ್ರವಲ್ಲದೆ ಪರಿಸರ, ಛಾಯಾಗ್ರಹಣ, ಸಾಮಾಜಿಕವಾಗಿಯೂ ವಿವಿಧ ಚಿಂತನಾಪರ ಆಯಾಮಗಳಲ್ಲೂ ತೇಜಸ್ವಿಯವರ ವ್ಯಕ್ತಿತ್ವವನ್ನು ನಾವು ಗುರುತಿಸಿಕೊಳ್ಳಬಹುದಾಗಿದೆ.

ಪೂರ್ಣಚಂದ್ರ ತೇಜಸ್ವಿಯವರು ಕೆ.ವಿ.ಪುಟ್ಟಪ್ಪ(ಕುವೆಂಪು) ಹಾಗೂ ಹೇಮಾವತಿ ಅವರ ಸುಪುತ್ರನಾಗಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಸೆಪ್ಟೆಂಬರ್ 8, 1938 ರಲ್ಲಿ ಜನಿಸಿದರು. ಶಿವಮೊಗ್ಗ, ತೀರ್ಥಹಳ್ಳಿಯಲ್ಲಿ ಆರಂಭಿಕ ಶಿಕ್ಷಣವನ್ನು ಪಡೆದು ತದನಂತರ ಕನ್ನಡ ಸ್ನಾತಕೋತ್ತರ ಪದವಿಯನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದುಕೊಂಡರು. ಕೋಕಿಲೋದಯ ಚೈತ್ರ ಇವರ ಸಹೋದರ. ಇಂದುಕಲಾ, ತಾರಿಣಿ ಸಹೋದರಿಯರು.

ರಾಜೇಶ್ವರಿಯವರನ್ನು ಕುವೆಂಪು ಪ್ರೇರಿತ ಸೃಜನಾತ್ಮಕ ಸರಳ ವಿವಾಹದ ಮೂಲಕ 27-01-1966ರಲ್ಲಿ ವಿವಾಹವಾದ ತೇಜಸ್ವಿಯವರಿಗೆ ಸುಶ್ಮಿತಾ ಮತ್ತು ಈಶಾನ್ಯೆ ಎಂಬ ಎರಡು ಹೆಣ್ಣುಮಕ್ಕಳು ಹಾಗೂ ಅಳಿಯಂದಿರು, ಮೊಮ್ಮಕ್ಕಳು.

ಆರಂಭದಲ್ಲಿ ಎಲ್ಲಾ ಸೃಜನಾತ್ಮಕ ಬರಹಗಾರರಂತೆ ಕವನಗಳನ್ನು ತುಸು ಆಕರ್ಷಣಿಯವಾಗಿಯೇ ಬರೆಯುತ್ತಿದ್ದ ತೇಜಸ್ವಿಯವರನ್ನು ಪದ್ಯಕ್ಕೆ ಬದಲಾಗಿ ಗದ್ಯ ಪ್ರಕಾರ ತನ್ನತ್ತ ಆಕರ್ಷಣಿಯವಾಗಿ ಸೆಳೆದುಕೊಂಡಿದ್ದು ವಿಶೇಷವೇ. ಮುಂದಿನ ದಿನಗಳಲ್ಲಿ ಅವರು ದೀಪಾವಳಿ ವಿಶೇಷಾಂಕ ಕಥಾಸ್ಪರ್ಧೆಯಲ್ಲಿ ‘ಲಿಂಗಬಂದ’ ಕಥೆ ರಚನೆಯಿಂದ ವಿಜೇತರಾಗುವ ಮೂಲಕ ಕನ್ನಡ ಅಕ್ಷರ ಜಗತ್ತಿಗೆ ಕಥೆಗಾರನೆಂದು ಚಿರಪರಿತರಾದರು. ಹೀಗೆ ಪ್ರಾರಂಭದಲ್ಲಿ ಕವನಗಳ ಮೂಲಕ ಕವಿಯೆಂದು, ಕಥೆಗಳ ಮುಖೇನ ಕಥೆಗಾರನೆಂದು ಸಹೃದಯಿ ಸಾಹಿತ್ಯಾಸಕ್ತರಿಂದ ಗುರುತಿಸಲ್ಪಟ್ಟರು. ಇದರ ತತ್ಫಲವಾಗಿ ಸೋಮುವಿನ ಸ್ವಗತಲಹರಿ (ಕವನ ಸಂಕಲನ), ಹುಲಿಯೂರಿನ ಸರಹದ್ದು(ಕಥಾ ಸಂಕಲನ) ಕೃತಿಗಳು 1962ರಲ್ಲಿ ರಚನೆಯಾದವು.

ಆ ಹೊತ್ತಿನ ಸಾಹಿತ್ಯ ವಿಮರ್ಶಕರಲ್ಲಿ ಅಗ್ರಮಾನ್ಯರಾಗಿದ್ದ ಗೌರೀಶ ಕಾಯ್ಕಿಣಿ ಅವರಿಂದ ಪೂಚಂತೇ ಎಂಬ ಸಂಕ್ಷಿಪ್ತ ಹೆಸರನ್ನು ಗಿಫ್ಟ್ ಆಗಿ ಪಡೆದುಕೊಂಡ ತೇಜಸ್ವಿಯವರು 1964 ರಲ್ಲಿ ಯಮಳ ಪ್ರಶ್ನೆ ಎಂಬ ನಾಟಕ ಕೃತಿಯನ್ನು ಹಾಗೇ ವ್ಯಕ್ತಿ ವಿಶಿಷ್ಟ ಸಿದ್ಧಾಂತ ಎನ್ನುವ ಚಿಂತನಾಪೂರ್ಣ ವೈಚಾರಿಕ ಬರಹಗಳ ಸಂಕಲನವನ್ನು ಪ್ರಕಟಗೊಳಿಸಿದರು. ಇದರೊಟ್ಟಿಗೆ ಅನಾಯಾಸವಾಗಿ ಮೈಸೂರು ವಿಶ್ವವಿದ್ಯಾಲಯದಲ್ಲಿ ದೊರೆಯಬಹುದಾಗಿದ್ದ ಅಧ್ಯಾಪಕ ವೃತ್ತಿಗೆ ಗುಡ್‍ಬೈ ಹೇಳಿ ಮೂಡಿಗೆರೆಯ ಜನ್ನಾಪುರದ ಸಮೀಪ ಒಂದಷ್ಟು ಜಾಗವನ್ನು ಖರೀದಿಸಿ ಕಾಫಿತೋಟವನ್ನು ಜೀವನ ನಿರ್ವಹಣೆಯ ಒಂದು ಭಾಗವಾಗಿ ಮನಗಂಡು ಕೃಷಿಕರಾದರು. ಇದು ಇಂದಿನ ಮೂಡಿಗೆರೆಯ ಮಾಯಾವಿ ಬಿರುದಾಂಕಿತ ತೇಜಸ್ವಿಯವರು ಅಂದು ಮೂಡಿಗೆರೆಯೊಂದಿಗೆ ಪ್ರಾದೇಶಿಕವಾಗಿ ಬೆಸೆದುಕೊಳ್ಳಲು ಒಂದು ತಳಪಾಯವಾಯಿತು. ಮುಂದಿನ ದಿನಗಳಲ್ಲಿ ಅಲ್ಲಿಂದ ಬಿಸುಟು ಮೂಡಿಗೆರೆ ಪೇಟೆಗೆ ಒಂದಷ್ಟು ಹತ್ತಿರ ಇರುವ ಹ್ಯಾಂಡ್‍ಪೋಸ್ಟ್‍ಗೆ ತಮ್ಮ ವಾಸ್ತವ್ಯವನ್ನು ಬದಲಾಯಿಸಿಕೊಂಡರು. ಆ ಜನ್ನಾಪುರದ ತಮ್ಮ ಪುಟ್ಟತೋಟದ ಮನೆಗೆ ತಮ್ಮ ತಂದೆ ಕುವೆಂಪುರವರು ಇಟ್ಟುಕೊಟ್ಟಿದ್ದ ಚಿತ್ರಕೂಟ ಎಂಬ ವಿಶೇಷ ಹೆಸರಿನಂತೆಯೇ ಈ ಹ್ಯಾಂಡ್‍ಪೋಸ್ಟ್‍ನ ನಿಂಬೆಮೂಲೆಯ ತಮ್ಮ ವಿನೂತನ ಮನೆಗೆ ನಿರುತ್ತರ ಎಂದು ತಾವೇ ಕರೆದುಕೊಂಡು ವಾಸಿಸತೊಡಗಿದ್ದು ಈಗ ಇತಿಹಾಸ.

ಹೀಗೆ ಕನ್ನಡಿಗರ ಪ್ರೀತಿಯ ಪೂಚಂತೇ, ಅವರ ಆತ್ಮೀಯ ಸಂಗಾತಿ ರಾಜೇಶ್ (ರಾಜೇಶ್ವರಿಯವರನ್ನು ತೇಜಸ್ವಿಯವರು ಪ್ರೀತಿಯಿಂದ ಸಂಬೋಧಿಸುತ್ತಿದ್ದುದು ಹೀಗೆಯಂತೆ!) ಮೂಡಿಗೆರೆಯಲ್ಲಿ ಬಾಳಯಾನವನ್ನು ಮುಂದುವರಿಸಿದರು. ಸಾಹಿತ್ಯ ಮಾತ್ರವಲ್ಲದೆ ರೈತ ಚಳವಳಿ, ಕಾಫಿಯ ಕುರಿತು ಮುಕ್ತಮಾರುಕಟ್ಟೆ ಚರ್ಚೆ, ಪರಿಸರ ಚಿಂತನೆ, ಫೋಟೋಗ್ರಫಿಯಂತಹ ದೃಶ್ಯಾತ್ಮಕತೆ ಮತ್ತು ಜನಪರ ಹೋರಾಟಗಳಿಗೆ ನಿರುತ್ತರ ಒಂದು ವೇದಿಕೆಯಂತೆ ಭಾಸವಾಗತೊಡಗಿತ್ತೆಂದು ತಿಳಿದುಬರುತ್ತದೆ. ಆದ್ದರಿಂದಲೇ ಕರ್ನಾಟಕ ಸಾಂಸ್ಕøತಿಕ ಜಗತ್ತು ‘ತೇಜಸ್ವಿ ಎಂದರೆ ಮೂಡಿಗೆರೆ, ಮೂಡಿಗೆರೆ ಎಂದರೆ ತೇಜಸ್ವಿ’ ಎನ್ನುವಂತೆ ಪರಿಭಾವಿಸಿಕೊಂಡು ಹಾಗೇ ತನ್ಮಯವಾಗುವುದನ್ನು ಮನಗಾಣಬಹುದಾಗಿದೆ.

ತಮ್ಮ ತಂದೆಯವರಾದ ಕುವೆಂಪು ಅವರ ಸಾಹಿತ್ಯ ಕಾಲಘಟ್ಟವನ್ನು ನವೋದಯ (1920-1945) ಎಂದೂ, ನಂತರದ ಸ್ವಾತಂತ್ರ್ಯ ಭಾರತ ಹಾಗೂ ಕರ್ನಾಟಕ ಏಕೀಕರಣ ಅಸ್ಮಿತೆಯ ಕಾಲಸಂದರ್ಭದಲ್ಲಿ ಒಟ್ಟೊಟ್ಟಿಗೆ ರೂಪುಗೊಂಡ ಪ್ರಗತಿಶೀಲ (1945-50) ಸಾಹಿತ್ಯಮಾರ್ಗಗಳನ್ನು ಗುರುತಿಟ್ಟುಕೊಂಡು ನೋಡುತ್ತಲೇ ಓದಿಕೊಂಡು ಬೆಳೆದಿದ್ದ ತೇಜಸ್ವಿಯವರು ನಂತರದ ನವ್ಯದ ಪ್ರವರ್ಧಮಾನದಲ್ಲಿ (1950-1970) ಬರೆಯತೊಡಗಿದವರು. ಆದ್ದರಿಂದ ಅವರ ಪ್ರಾರಂಭದ ಕೃತಿಗಳನ್ನು ವಿಮರ್ಶೆ ಹಾಗೂ ಪರಾಮರ್ಶೆಗೊಳಿಸುವ ವಿಮರ್ಶಕರು ನವ್ಯದ ಹಿನ್ನೆಲೆಯ ಥಿಯರಿಯಲ್ಲಿ ವಿಶ್ಲೇಷಣೆಗೆ ಒಳಪಡಿಸುತ್ತ ಬಂದಿದ್ದಾರೆ. ಅದರಂತೆ 1966ರಲ್ಲಿ ಪ್ರಕಟಗೊಂಡ ಅವರ ‘ಸ್ವರೂಪ’ ಕಿರುಕಾದಂಬರಿ ಕೂಡ ಇದೇ ಆಯಾಮದಿಂದ ಗುರುತಿಸಲ್ಪಟ್ಟಿದೆ. ಇಲ್ಲೇ ಗಮನಿಸಿಕೊಂಡಂತೆ ಕವಿ, ಕಥೆಗಾರನಾದ ತೇಜಸ್ವಿ ಕಾದಂಬರಿಕಾರನಾಗಿಯೂ ಮುಂದುವರಿದಿದ್ದು ಇನ್ನೊಂದು ಬಗೆಯ ನೋಟವಾಗಿ ಗಮನೀಯವಾಗಿದೆ. ಇಂಥದೊಂದು ಅವರ ಸಾಹಿತ್ಯಯಾನ ಅವರ ಮತ್ತೊಂದು ಕಿರುಕಾದಂಬರಿ ‘ನಿಗೂಢ ಮನುಷ್ಯರು’ (1973) ವರೆಗೆ ಮುಂದುವರೆಯಲ್ಪಡುತ್ತದೆ.

ತೇಜಸ್ವಿಯವರು ಯಾವುದೇ ಸಿದ್ಧಮಾದರಿಯ ಚೌಕಟ್ಟುಗಳಿಗೆ ಕಟ್ಟುಬೀಳದೆ ಅದರಾಚೆಗೆ ಸ್ವತಂತ್ರ ಪ್ರವೃತ್ತಿಯ ಲೇಖಕನಾಗಿ ಬರೆಹದಲ್ಲಿ ತೊಡಗಿಸಿಕೊಂಡವರು. ಆದ್ದರಿಂದಲೇ 1973ರಲ್ಲಿ ಪ್ರಕಟವಾದ ಅವರ ಅಬಚೂರಿನ ಪೋಸ್ಟಾಫೀಸು ಕಥಾಸಂಕಲನಕ್ಕೆ ತಾವು ಬರೆದುಕೊಂಡ ಲೇಖಕರ ನುಡಿಯಲ್ಲಿ ತಮ್ಮ ಸಾಹಿತ್ಯಾತ್ಮಕ ನಿಲುವುಗಳನ್ನು ಸ್ಪಷ್ಟವಾಗಿ ತಾವೇ ಓದುಗರ ಮುಂದೆ ಮಂಡಿಸಿದ್ದಾರೆ. ಆ ಪ್ರಕಾರ “ಲೋಹಿಯಾರವರ ತತ್ವಚಿಂತನೆ, ಕುವೆಂಪುರವರ ಕಲಾಸೃಷ್ಟಿ, ಕಾರಂತರ ಜೀವನ ದೃಷ್ಟಿ ಮತ್ತು ಬದುಕಿನ ಪ್ರಯೋಗಶೀಲತೆ, ಈ ಮೂರೇ ನನ್ನ ಸಾಹಿತ್ಯ ರಚನೆಯ ಮೇಲೆ ಗಾಢ ಪರಿಣಾಮವನ್ನು ಉಂಟುಮಾಡಿರುವವು. ಬಹುಶಃ ಮುಂಬರುವ ಕಲಾವಿದರಿಗೆ ಕನ್ನಡ ಸಾಹಿತ್ಯ ಸೃಷ್ಟಿಯಲ್ಲಿ ಚೈತನ್ಯ ಶಕ್ತಿಯಾಗಬಲ್ಲಂಥವು ಮೂರೇ.” ಹಾಗೇ ತಮ್ಮ ಆರಂಭದ ಚಿಂತನಾ ಬರಹಗಳ ಸಂಗ್ರಹ ವ್ಯಕ್ತಿ ವಿಶಿಷ್ಟ ಸಿದ್ಧಾಂತದಲ್ಲಿ ತಾನು ಕಂಡುಕೊಂಡುಕೊಳ್ಳಬೇಕಿರುವ ಸಾಹಿತ್ಯ ದೃಷ್ಟಿಕೋನಗಳನ್ನು ಮುನ್ನುಡಿಯಾಗಿ ಓದುಗರ ಮುಂದೆ ಮಂಡಿಸಿದ್ದ ತೇಜಸ್ವಿಯವರು ಅದರ ಮುಂದುವರಿಕೆ ಎಂಬಂತೆ ಇದರಲ್ಲಿ ಇನ್ನಷ್ಟು ತನ್ನನ್ನು ತಾನು ಕಂಡುಕೊಳ್ಳಲು ಸಾಧ್ಯವಾಗಿದೆ.

ಹೀಗೆ ಪೂಚಂತೇ ಅವರು ಮುಂದೆ ಬಹುಪ್ರಕಾರಗಳಲ್ಲಿ ಬರೆದದ್ದು ಈಗ ಚರಿತ್ರಾರ್ಹ. ಈ ಬಗ್ಗೆ ಲೇಖಕ ಡಾ.ರಹಮತ್ ತರೀಕೆರೆ ಅವರ ಅಭಿಪ್ರಾಯವನ್ನು ಇಲ್ಲಿ ಗಮನಿಸಿಕೊಳ್ಳುವುದು ಸೂಕ್ತ. ಅದರಂತೆ “ಅನೇಕ ಪ್ರಕಾರಗಳಲ್ಲಿ ಬರೆಯುವುದು ಕನ್ನಡದ ದೊಡ್ಡ ಲೇಖಕನ ಒಂದು ಲಕ್ಷಣ. ಕುವೆಂಪು, ಮಾಸ್ತಿ, ಕಾರಂತ, ಪುತಿನ, ಅನಂತಮೂರ್ತಿ, ಕಂಬಾರ, ಲಂಕೇಶ್ ಇವರೆಲ್ಲ ಬಹುಪ್ರಕಾರಗಳಲ್ಲಿ ಬರೆದವರು. ಇದೇ ಪರಂಪರೆಯಲ್ಲಿ ಸೇರುವ ತೇಜಸ್ವಿ ನಾಟಕ, ಸಣ್ಣಕತೆ, ಕಾದಂಬರಿ, ಪ್ರವಾಸಕಥನ, ವಿಜ್ಞಾನ ಬರಹ, ಅನುವಾದ, ಜೀವನ ಚರಿತ್ರೆ, ಚಿಂತನೆ ಹೀಗೆ ಬಹುಪ್ರಕಾರದಲ್ಲಿ ಬರೆದವರು. ಬಹುಪ್ರಕಾರಗಳಲ್ಲಿ ಬರೆಯುವುದು ಕೇವಲ ಸಾಹಿತ್ಯಕ ಪ್ರಯೋಗಶೀಲತೆಯ ಲಕ್ಷಣವಲ್ಲ; ಲೇಖಕರು ತಮ್ಮ ಜೀವನ ದೃಷ್ಟಿಯನ್ನು ಬೇರೆ ಬೇರೆ ಕಾಲ ಸಂದರ್ಭದಲ್ಲಿ ಇಟ್ಟು ನಿರಂತರ ಪರಿಶೀಲಿಸುವ ದಾರ್ಶನಿಕ ಶೋಧದ ಗುಣ ಕೂಡ. ಕನ್ನಡದ ದೊಡ್ಡ ಲೇಖಕರು ಕೇವಲ ಕಲೆಯ ನಿರ್ಮಾತೃಗಳಲ್ಲ; ತಮ್ಮ ಚಿಂತನೆಯಿಂದ ನಾಡಿನ ಮನಸ್ಸನ್ನು ರೂಪಿಸಬೇಕು ಎಂಬ ಕ್ರಿಯಾಶೀಲರೂ ಹೌದು.” ಎಂದು ಅಭಿಪ್ರಾಯಪಟ್ಟಿರುವುದು ತೇಜಸ್ವಿ ಸಾಹಿತ್ಯಾವಲೋಕನಕ್ಕೆ ಒಟ್ಟಂದದ ಹೊನ್ನೋಟವಾಗಿದೆ.

ಕರ್ವಾಲೋ (ಕಾದಂಬರಿ), ಚಿದಂಬರ ರಹಸ್ಯ (ಕಾದಂಬರಿ), ಅಲೆಮಾರಿ ಅಂಡಮಾನ್ ಮತ್ತು ಮಹಾನದಿ ನೈಲ್ (ಪ್ರವಾಸ ಕಥನ), ಪರಿಸರದ ಕಥೆ (ಕಥಾತ್ಮಕ ಪ್ರಬಂಧಗಳು), ಕಿರಗೂರಿನ ಗಯ್ಯಾಳಿಗಳು (ಕಥಾ ಸಂಕಲನ), ಸಹಜ ಕೃಷಿ: ಒಂದು ಪರಿಚಯ, ಮಿಸ್ಸಿಂಗ್ ಲಿಂಕ್ (ಮಾನವಶಾಸ್ತ್ರ ಕುರಿತ ಲೇಖನಗಳು), ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು (ಕಥಾರೂಪದ ಲೇಖನಗಳ ಸಂಕಲನ), ಕಾಡಿನ ಕಥೆಗಳು ಭಾಗ – 1, 2, 3, 4 (ಕೆನೆತ್ ಆ್ಯಂಡರ್‍ಸನ್ ಅನುಭವ ಸಂಗ್ರಹಗಳ ರೂಪಾಂತರ), ಪ್ಲೈಯಿಂಗ್ ಸಾಸರ್ಸ್ ಭಾಗ – 1, 2, ವಿಸ್ಮಯ ಭಾಗ – 1, 2, 3, ದಕ್ಷಿಣ ಭಾರತದ ಹಕ್ಕಿಗಳು, ಮಿಂಚುಳ್ಳಿ (ಕನ್ನಡ ನಾಡಿನ ಹಕ್ಕಿಗಳು ಭಾಗ – 1), ಜುಗಾರಿ ಕ್ರಾಸ್ (ಕಾದಂಬರಿ), ರುದ್ರಪ್ರಯಾಗದ ಭಯಾನಕ ನರಭಕ್ಷಕ (ಜಿಮ್ ಕಾರ್ಬೆಟ್ ಅನುಭವಗಳ ಸಂಗ್ರಹ ರೂಪಾಂತರ), ಲೋಹಿಯಾ (ಚಿಂತನೆಗಳ ಅನುವಾದ), ಅಣ್ಣನ ನೆನಪು (ನೆನಪುಗಳ ಸಂಗ್ರಹ), ಹೆಜ್ಜೆ ಮೂಡದ ಹಾದಿ (ಕನ್ನಡ ನಾಡಿನ ಹಕ್ಕಿಗಳು ಭಾಗ – 2), ಹಕ್ಕಿಪುಕ್ಕ, ನಡೆಯುವ ಕಡ್ಡಿ! ಹಾರುವ ಎಲೆ! (ಹುಳುಗಳ ವಿಸ್ಮಯಕೋಶ – 1), ಮಿಲೆನಿಯಂ ಸರಣಿ: ಹುಡುಕಾಟ, ಜೀವನ ಸಂಗ್ರಾಮ, ಪೆಸಿಫಿಕ್ ದ್ವೀಪಗಳು, ಚಂದ್ರನ ಚೂರು, ನೆರೆಹೊರೆಯ ಗೆಳೆಯರು, ಮಹಾಯುದ್ಧ – 1, 2, 3, ದೇಶ ವಿದೇಶ – 1, 2, 3, 4, ವಿಸ್ಮಯ ವಿಶ್ವ – 1, 2, ಮಹಾಪಲಾಯನ, ಅಂಡ್ವೆಂಚರ್; ಇವುಗಳು ತೇಜಸ್ವಿಯವರ ಜೀವಿತಾವಧಿಯಲ್ಲಿ ಬೆಳಕುಕಂಡ ಕೃತಿಗಳು. ಆದರೆ 5 ಏಪ್ರಿಲ್ 2007 ರಲ್ಲಿ ಪೂಚಂತೇ ನಿಧನ ಹೊಂದಿದ ನಂತರ ಅವರು ಪತ್ರಿಕೆ ಹಾಗೂ ನಿಯತಾಕಾಲಿಕೆಗಳಿಗೆ ಬರೆದ ಹಾಗೂ ಅಪ್ರಕಟಿತ ಕೃತಿಗಳನ್ನು ಅವರ ಶ್ರೀಮತಿ ರಾಜೇಶ್ವರಿ ತೇಜಸ್ವಿಯವರು ಪ್ರಕಟಗೊಳಿಸಿದರು. ಅವುಗಳೂ ಕೂಡ ಗಮನಾರ್ಹವಾದವುಗಳು. ಅವುಗಳೆಂದರೆ ಪಾಕಕ್ರಾಂತಿ ಮತ್ತು ಇತರ ಕಥೆಗಳು, ಹೊಸ ವಿಚಾರಗಳು, ವಿಮರ್ಶೆಯ ವಿಮರ್ಶೆ, ಕಾಡು ಮತ್ತು ಕ್ರೌರ್ಯ, ಮಾಯೆಯ ಮುಖಗಳು, ತೇಜಸ್ವಿ ಪತ್ರಗಳು, ಹೊಸ ವಿಚಾರಗಳು ಮುಂತಾದವು.

ಅಲ್ಲದೆ ತಬರನ ಕಥೆ, ಕಿರಗೂರಿನ ಗಯ್ಯಾಳಿಗಳು, ಕೃಷ್ಣೇಗೌಡನ ಆನೆ ಬೇರೆ ಬರಹಗಾರರಿಂದ ನಾಟಕ ರೂಪಾಂತರ ಕೃತಿಗಳಾಗಿ ರೂಪುಗೊಂಡು ಪ್ರದರ್ಶನ ಕಂಡಿವೆ. ತಬರನ ಕಥೆ, ಕಿರಗೂರಿನ ಗಯ್ಯಾಳಿಗಳು, ಕುಬಿ ಮತ್ತು ಇಯಾಲ, ಅಬಚೂರಿನ ಪೋಸ್ಟಾಫೀಸು, ಡೇರ್‍ಡೇವಿಲ್ ಮುಸ್ತಾಫ ಚಲನಚಿತ್ರಗಳಾಗಿವೆ. ಹಾಗೇ ಕರ್ವಾಲೋ, ಚಿದಂಬರ ರಹಸ್ಯ, ನಿಗೂಢ ಮನುಷ್ಯರು, ತಬರನ ಕಥೆ, ಕುಬಿ ಮತ್ತು ಇಯಾಲ, ತುಕ್ಕೋಜಿ, ಅಬಚೂರಿನ ಪೋಸ್ಟಾಫೀಸು, ಮಾಯಾಮೃಗ, ಸುವರ್ಣ ಸ್ವಪ್ನ, ಬೆಳ್ಳಂದೂರಿನ ನರಭಕ್ಷಕ, ಅವನತಿಯಂತಹ ಕಥೆ, ಕಾದಂಬರಿಗಳು ಇಂಗ್ಲಿಷ್, ಜಪಾನಿ, ಮಲೆಯಾಳಂ, ಮರಾಠಿ, ತಮಿಳು, ಪಂಜಾಬಿ, ಹಿಂದಿ, ಕೊಂಕಣಿ ಭಾಷೆಗಳಲ್ಲಿ ಅನುವಾದಗಳಾಗಿ ಪ್ರಕಟವಾಗಿವೆ. ಇಂತಹ ಮೂಡಿಗೆರೆಯ ಸಾಹಿತ್ಯಲೋಕದ ಮುದ್ದುಹಕ್ಕಿ ಪೂಚಂತೇಗೆ ಬಯಸದೆ ಸಂದ ಪ್ರಶಸ್ತಿ ಪುರಸ್ಕಾರಗಳು ಅನೇಕ. ಪ್ರಜಾವಾಣಿ ಕಥಾಸ್ಪರ್ಧೆ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಭಾರತೀಯ ಭಾಷಾ ಪರಿಷತ್, ಶಿವರಾಮ ಕಾರಂತ ಪ್ರಶಸ್ತಿ, ಕರ್ನಾಟಕ ಸರಕಾರದ ಪರಿಸರ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ, ಪಂಪ ಪ್ರಶಸ್ತಿ, ಚಲನಚಿತ್ರಗಳಾದ ಕೃತಿಗಳಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳು, ಅತ್ಯುತ್ತಮ ಕಥಾಲೇಖಕ ಪ್ರಶಸ್ತಿಗಳು ಇತ್ಯಾದಿ.

ಹೀಗೆ ನಮ್ಮ ಕನ್ನಡ ಸಾಹಿತ್ಯಲೋಕದ ಚಿರಂಜೀವಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರನ್ನು ಪ್ರಾಥಮಿಕ ನೋಟವಾಗಿ ಅವಲೋಕನ ಮಾಡುವವರಿಗೆ ಈ ಲೇಖನ ಪೂರಕವಾಗುತ್ತದೆಂದು ವಿನಯ ಮತ್ತು ಪ್ರೀತಿಯಿಂದ ಭಾವಿಸಿಕೊಳ್ಳಲಾಗಿದೆ. ಅದೇನೇ ಇರಲಿ, ಅವರೇ ಡಿಫರೆಂಟು ಎಂದಮೇಲೆ ಅವರ ಕೃತಿ ಸಂಚಯಗಳೂ ಕೂಡ. ಅವುಗಳನ್ನು ನೇರವಾಗಿ ನಾವೇ ಓದಿ ಅರ್ಥಮಾಡಿಕೊಳ್ಳುವುದು ತುಂಬಾ ಅರ್ಥಪೂರ್ಣವಾಗುತ್ತದೆ. ಈ ಪ್ರಯುಕ್ತ ತೇಜಸ್ವಿ ಸಾಹಿತ್ಯದ ಪ್ರಜ್ಞಾವಂತ ಓದುಗರಿಗೊಂದು ಬಿಗ್‍ಥ್ಯಾಂಕ್ಸ್.

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ