October 5, 2024

ಪ್ಲಾಂಟೇಷನ್ ಬೆಳೆಗಳನ್ನು ಬೆಳೆದಿರುವ ಪ್ರದೇಶಗಳ ರೈತರು ಒತ್ತುವರಿ ಮಾಡಿರುವ ಸರ್ಕಾರಿ ಕಂದಾಯ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ನೀಡಲು ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ರೈತರಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಪ್ರಕಟಣೆ ಹೊರಡಿಸಿದ ದಿನದಿಂದ 90 ದಿನಗಳ ಒಳಗಾಗಿ ಒತ್ತುವರಿ ಮಾಡಿರುವ ರೈತರು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ದಿನಾಂಕ : 07-08-2024ರಂದು ಈ ಬಗ್ಗೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು ಅಂದಿನಿಂದ 90 ದಿನಗಳ ಒಳಗಾಗಿ ಅಂದರೆ 2024ರ ನವೆಂಬರ್ 5 ರ ಒಳಗಾಗಿ ಒತ್ತುವರಿದಾರರು ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಪ್ರತಿ ಕುಟುಂಬಕ್ಕೆ ಗರಿಷ್ಠ 25 ಎಕರೆ ಭೂಮಿಯನ್ನು 30 ವರ್ಷಗಳ ವರೆಗೆ ಗುತ್ತಿಗೆ ಆಧಾರದಲ್ಲಿ ನೀಡುವ ಈ ಕಾಯ್ದೆ ಅಧಿಕೃತವಾಗಿ ಜಾರಿಗೆ ಬಂದಿದೆ. ಕಾಯ್ದೆಯ ಪ್ರಕಾರ 2005ರ ಜನವರಿ 1ಕ್ಕಿಂತ ಮೊದಲು ಒತ್ತುವರಿ ಮಾಡಿ ಪ್ಲಾಂಟೇಷನ್ ಬೆಳೆಗಳನ್ನು ಸಾಗುವಳಿ ಮಾಡಿರುವ ಕಂದಾಯ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ನೀಡಲು ಅವಕಾಶವಿದೆ.

ಅರ್ಜಿ ಸಲ್ಲಿಸುವ ವಿಧಾನ

ಸರ್ಕಾರ ನಿಗದಿಪಡಿಸಿರುವ ಅರ್ಜಿಯನ್ನು (ಆನ್‍ಲೈನ್ ಮೂಲಕವೂ ಲಭ್ಯವಿದೆ) ಭರ್ತಿ ಮಾಡಿ ಅರ್ಜಿಯೊಂದಿಗೆ ಈ ಕೆಳಕಂಡ ದಾಖಲೆಗಳನ್ನು ಲಗತ್ತಿಸಬೇಕಾಗಿದೆ.
1. ಅರ್ಜಿದಾರರ ವಿಳಾಸ ವಿವರ

2. ಆಧಾರ್ ಕಾರ್ಡ್

3. ಪಾನ್ ಕಾರ್ಡ್

4. ಹಿಂದಿನ ಐದು ವರ್ಷಗಳ ಆದಾಯ ತೆರಿಗೆ ಪಾವತಿ ವಿವರ 5. ಕುಟುಂಬ ಸದಸ್ಯರ ಆದಾಯ ತೆರಿಗೆ ಪಾವತಿ ವಿವರ

6. ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ಜಮೀನಿನ ವಿವರ

7. ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ದಿನಾಂಕ ಮತ್ತು ಟಿಟಿ ಜುಲ್ಮಾನೆ ಕಟ್ಟಿರುವ ವಿವರ

8. ಅರ್ಜಿದಾರರ ಕುಟುಂಬದ ಇತರ ಸದಸ್ಯರು ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ಪ್ಲಾಂಟೇಷನ್ ಬೆಳೆಗಳ ಸಾಗುವಳಿ ಮಾಡುತ್ತಿದ್ದರೆ ಅವುಗಳ ವಿವರ

9. ಅರ್ಜಿದಾರರು ಮತ್ತು ಅವರ ಕುಟುಂಬದವರು ಹೊಂದಿರುವ ಜಮೀನಿನ ವಿವರ

ಅರ್ಜಿದಾರರು ತಮ್ಮ ವ್ಯಾಪ್ತಿಯ ನಾಡಕಛೇರಿ ಅಥವಾ ತಾಲ್ಲೂಕು ಕಛೇರಿಗಳಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಯಾದ ನಂತರ ಕಂದಾಯ ಇಲಾಖೆ ಅಧಿಕಾರಿಗಳು ಅವುಗಳನ್ನು ಪರಿಶೀಲನೆ ನಡೆಸಿ ಪೂರ್ತಿ 30 ವರ್ಷಗಳ ನಿಗದಿತ ಶುಲ್ಕವನ್ನು ಆರಂಭದಲ್ಲಿಯೇ ಕಟ್ಟಿಸಿಕೊಂಡು 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ಕ್ರಮ ವಹಿಸುತ್ತಾರೆ.

ಈಗಾಗಲೇ ಅನೇಕ ರೈತರು ಅರ್ಜಿಗಳನ್ನು ಸಲ್ಲಿಸಿದ್ದು, ಅವುಗಳನ್ನು ಆನ್ ಲೈನ್ ಅಪ್ ಲೋಡ್ ಮಾಡಲಾಗುತ್ತಿದೆ. ಇದರ ಬಗ್ಗೆ ಜಿಲ್ಲಾಧಿಕಾರಿಗಳು ಸಹ ನಿಗಾ ವಹಿಸಿದ್ದಾರೆ.

ಗುತ್ತಿಗೆ ಆಧಾರದಲ್ಲಿ ಪಡೆದಿರುವ ಭೂಮಿಯ ಮೇಲೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮತ್ತು ಸಹಕಾರ ಬ್ಯಾಂಕ್‍ಗಳಲ್ಲಿ ಬೆಳೆಸಾಲವನ್ನು ಪಡೆಯಲು ಸಹ ಅವಕಾಶ ಮಾಡಿಕೊಡಲಾಗಿದೆ.

ಪ್ಲಾಂಟೇಷನ್ ಬೆಳೆಗಳನ್ನು (ಕಾಫಿ, ಏಲಕ್ಕಿ, ಮೆಣಸು, ರಬ್ಬರ್ ಮತ್ತು ಟೀ) ಬೆಳೆದಿರುವ ಜಮೀನಿಗೆ ಮಾತ್ರ ಇದು ಅನ್ವಯವಾಗಲಿದ್ದು, ಕೇವಲ ಕಂದಾಯ ಭೂಮಿ ಒತ್ತುವರಿಗೆ ಮಾತ್ರ ಅನ್ವಯವಾಗುತ್ತದೆ. ಅರಣ್ಯ ಭೂಮಿ ಒತ್ತುವರಿ ಮಾಡಿದ್ದನ್ನು ಗುತ್ತಿಗೆ ಆಧಾರದಲ್ಲಿ ನೀಡಲು ಅವಕಾಶವಿಲ್ಲ.

ಗುತ್ತಿಗೆ ಪಡೆದ ಭೂಯಿಯನ್ನು ಪರಭಾರೆ ಮಾಡಲು, ಹಾಲಿ ಇರುವ ಮರಗಳನ್ನು ಕಡಿಯಲು, ಬೇರೆಯವರಿಗೆ ಉಪಗುತ್ತಿಗೆ ನೀಡಲು, ಪ್ಲಾಂಟೇಷನ್ ಬೆಳೆಗಳನ್ನು ಹೊರತುಪಡಿಸಿ ಬೇರೆ ಬೆಳೆಗಳನ್ನು ಬೆಳೆಯಲು, ಭೂ ಪರಿವರ್ತನೆ ಮಾಡಲು, ಕೃಷಿಯೇತರ ಉದ್ದೇಶಕ್ಕೆ ಬಳಸಲು ಅವಕಾಶ ಇರುವುದಿಲ್ಲ.

25 ಎಕರೆಗಿಂತ ಹೆಚ್ಚು ಒತ್ತುವರಿ ಮಾಡಿದ್ದರೆ ಅಂತಹ ಜಮೀನನ್ನು ಸರ್ಕಾರಕ್ಕೆ ಹಿಂದಿರುಗಿಸಬೇಕು.

ನಿಗದಿಪಡಿಸಿದ ಶುಲ್ಕ

ಗುತ್ತಿಗೆ ಪಡೆಯಲು ಈ ಕೆಳಕಂಡಂತೆ ಶುಲ್ಕವನ್ನು ನಿಗದಿಪಡಿಸಿಲಾಗಿದೆ. 30 ವರ್ಷಗಳ ಶುಲ್ಕವನ್ನು ಏಕಕಾಲದಲ್ಲಿ ಪಾವತಿಸಬೇಕಾಗಿದೆ.

ಉದಾ : 5 ಎಕರೆ  ಒತ್ತುವರಿ ಗುತ್ತಿಗೆ ಪಡೆಯಲು ಇಚ್ಚಿಸುವ ಬೆಳೆಗಾರ ಒಂದು ಎಕರೆಗೆ ರೂ. 1500 ಸಾವಿರದಂತೆ ಐದು ಎಕರೆಗೆ ವರ್ಷಕ್ಕೆ ರೂ. 7500 ರಂತೆ ಮೂವತ್ತು ವರ್ಷಕ್ಕೆ ರೂ. 2,25,000-00(ರೂ. ಎರಡು ಲಕ್ಷದ ಇಪ್ಪತ್ತೈದು ಸಾವಿರ) ಗಳನ್ನು ಆರಂಭದಲ್ಲಿಯೇ ಪಾವತಿಸಬೇಕಾಗುತ್ತದೆ.

ಸರ್ಕಾರವು ರೈತರ ಮತ್ತು ಸಂಘಟನೆಗಳ ಬೇಡಿಕೆಗೆ ಸ್ಪಂದಿಸಿ ಒತ್ತುವರಿ ಗುತ್ತಿಗೆ ನೀಡಲು ಕಾಯ್ದೆ ರೂಪಿಸಿದೆ.ರೈತರು ನಿಗದಿತ ಅವಧಿಯ ಒಳಗೆ ಅರ್ಜಿ ನೀಡಿ ಇದರ ಸದುಪಯೋಗಪಡಿಸಿಕೊಳ್ಳಬೇಕಾಗಿದೆ.

ಬಿ.ಎಸ್.ಜಯರಾಂ

ಮಾಜಿ ಅಧ್ಯಕ್ಷರು, ಕರ್ನಾಟಕ ಬೆಳೆಗಾರರ ಒಕ್ಕೂಟ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ