October 5, 2024

ಕನಿಷ್ಠ ವೇತನ ಸೇರಿದಂತೆ ಇತರೆ ಸೌಲಭ್ಯಗಳಿಗೆ ಒತ್ತಾಯಿಸಿ ನಗರಸಭೆ ಗುತ್ತಿಗೆ ಪೌರ ಕಾರ್ಮಿಕರು ಇಂದು ನಗರದ ಆಜಾದ್ ವೃತ್ತದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.

ಕಳೆದ ೨೧ ವರ್ಷಗಳಿಂದ ನಗರದಲ್ಲಿ ಮನೆ ಮನೆ ಕಸ ಸಂಗ್ರಹಣೆ ಕೆಲಸ ಮಾಡುತ್ತಿದ್ದೇವೆ. ಈವರೆಗೆ ಸೂಕ್ತ ರೀತಿಯ ವೇತನ ಸೌಲಭ್ಯಗಳನ್ನು ನಗರಸಭೆ ನೀಡುತ್ತಿಲ್ಲ. ಕನಿಷ್ಠ ವೇತನ, ಇಎಸ್‌ಐ, ಪಿಎಫ್ ಸೇರಿದಂತೆ ಪ್ರತ್ಯೇಕ ಬ್ಯಾಂಕ್ ಖಾತೆ ಸೌಲತ್ತುಗಳು ಇರುವುದಿಲ್ಲ. ಈ ಸಂಬಂಧ ಹಲವು ಬಾರಿ ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಕಾರ್ಮಿಕರು ದೂರಿದರು.

ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರೂ ಸಹ ಸೂಕ್ತ ಕ್ರಮ ತೆಗೆದುಕೊಳ್ಳಲು ಆಯುಕ್ತರಿಗೆ ಸೂಚಿಸಿದ್ದರೂ ಪರಿಗಣನೆಗೆ ತೆಗೆದುಕೊಂಡಿಲ್ಲ. ಇದರಿಂದ ನಮಗೆ ತೀವ್ರ ಅನ್ಯಾಯವಾಗುತ್ತಿದೆ. ಶ್ರಮಕ್ಕೆ ತಕ್ಕಷ್ಟು ವೇತನವಿಲ್ಲದ ಕಾರಣ ಮಕ್ಕಳ ವಿದ್ಯಾಭ್ಯಾಸ, ಮನೆ ನಿರ್ವಹಣೆಗೆ ತೊಂದರೆ ಆಗುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನಾಕಾರರನ್ನು ಬೆಂಬಲಿಸಿ ಮಾತನಾಡಿದ ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ನಗರದಲ್ಲಿ ನೂರಕ್ಕೂ ಹೆಚ್ಚುಮಂದಿ ಮನೆ ಮನೆಗಳಿಂದ ಕಸ ಸಂಗ್ರಹಣೆ ಮಾಡುತ್ತಿರುವ ಕಾರ್ಮಿಕರಿದ್ದಾರೆ. ಅವರಲ್ಲಿ ಮಹಿಳೆಯರೂ ಸಹ ಇದ್ದಾರೆ. ಆದರೆ ಕಳೆದ ೨೧ ವರ್ಷದಿಂದಲೂ ಕನಿಷ್ಠ ವೇತನವನ್ನು ನೀಡುತ್ತಿಲ್ಲ ಎಂದು ದೂರಿದರು.

ಹತ್ತಾರು ವರ್ಷಗಳಿಂದ ಈ ಸಂಬಂಧ ನೌಕರರು ಪ್ರತಿಭಟನೆ ಮಾಡುತ್ತಿದ್ದರೂ ನಗರಸಭೆ ಹಾಗೂ ಚುನಾಯಿತ ಪ್ರತಿನಿಧಿಗಳು ಕೇವಲ ಭರವಸೆ ಕೊಡುತ್ತಾ ಬಂದಿದ್ದಾರೆ. ಕಾರ್ಮಿಕರ ಬೇಡಿಕೆ ಸಮಯೋಚಿತವಾಗಿದೆ ಎಂದು ಹೇಳುತ್ತಿದ್ದಾರೆ ಹೊರತು ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಕಾರ್ಮಿಕರು ಅಲ್ಪ ಸಂಬಳಕ್ಕೆ ಸರ್ಕಾರಿ ಜೀತ ಮಾಡುತ್ತಿದ್ದಾರೆ. ಇದು ಕೊನೆಯಾಗಬೇಕು ಎಂದು ಒತ್ತಾಯಿಸಿದರು.

ಎಲ್ಲಾ ಕಾರ್ಮಿಕರಿಗೆ ನ್ಯಾಯಯುತ ವೇತನ ಹಾಗೂ ವೇತನ ಸಂಬಂಧಿ ಸೌಲಭ್ಯಗಳನ್ನು ನೀಡಬೇಕು. ಕನಿಷ್ಠ ವೇತನ, ಪಿಎಫ್ ನೀಡಬೇಕು. ಸೇವಾ ಭದ್ರತೆ ನೀಡಬೇಕು. ನೇರವಾಗಿ ಅವರ ಖಾತೆಗಳಿಗೆ ವೇತನವನ್ನು ಪಾವತಿಸಬೇಕು. ಈ ಎಲ್ಲಾ ಬೇಡಿಕೆಗಳಿಗೆ ನಾವು ಬೆಂಬಲಿಸುತ್ತೇವೆ ಎಂದರು.

ನಿರ್ಮಲ ಭಾರತಿ ಸಂಸ್ಥೆ ಕಸ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅವರು ಲಾಭ ಮಾಡಿಕೊಳ್ಳುತ್ತಿದ್ದಾರೆ ಆದರೆ ಕಾರ್ಮಿಕರಿಗೆ ಅನುಕೂಲ ಕಲ್ಪಿಸುತ್ತಿಲ್ಲ, ಕಸ ನಿರ್ವಹಣೆಗೆ ಟೆಂಡರ್ ಪದ್ಧತಿ ನಿಲ್ಲಿಸಿ ನಗರಸಭೆಯೇ ನೇರವಾಗಿ ನಿರ್ವಹಿಸಬೇಕು ಎಂದು ಒತ್ತಾಯಿಸಿದರು.

ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ಮಾತನಾಡಿ, ನಗರಸಭೆ ಗುತ್ತಿಗೆ ಪೌರ ಕಾರ್ಮಿಕರಿಗೆ ಸರ್ಕಾರದ ನಿಯಮ ಪ್ರಕಾರ ಕನಿಷ್ಠ ವೇತನ, ಪಿಎಫ್, ಇಎಸ್‌ಐ ಸೌಲಭ್ಯ ಕೊಡಬೇಕು ಆದರೆ ಅದಾವುದನ್ನೂ ಕೊಡುತ್ತಿಲ್ಲ. ಅಗತ್ಯ ಇರುವಾಗ ಕಾರ್ಮಿಕರಿಗೆ ರಜೆ ಸಿಗುತ್ತಿಲ್ಲ. ಕೂಡಲೇ ನಗರಸಭೆ ಗಮನ ಹರಿಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ನಗರಸಭೆ ಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಆರ್.ನಾಗರಾಜು, ಕಾರ್ಯದರ್ಶಿ ಸಿ.ಟಿ.ಆನಂದ್ ಇತರರು ಪ್ರತಿಭಟನೆಯಲ್ಲಿ ಇದ್ದರು

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ