October 5, 2024

ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಸರಕಾರಿ ಜಮೀನಿನಲ್ಲಿ ಅನಧಿಕೃತ ಸಾಗುವಳಿ ಮಾಡುತ್ತಿರುವ ಜಮೀನುಗಳನ್ನು ಗುತ್ತಿಗೆ ಆಧಾರದಲ್ಲಿ ನೀಡಲು ಮುಂದಾಗಿರುವ ಸರಕಾರದ ಕ್ರಮವನ್ನು ಸ್ವಾಗತಿಸಿರುವ ಕರ್ನಾಟಕ ಬೆಳೆಗಾರರ ಒಕ್ಕೂಟ ( ಕೆಜಿಎಫ್) ಬೆಳೆಗಾರರು ಗಡುವು ನೀಡಿರುವ ದಿನದೊಳಗೆ ಅರ್ಜಿ ಸಲ್ಲಿಸಿ ಗುತ್ತಿಗೆ ಆಧಾರದಲ್ಲಿ ಜಮೀನು ನೀಡುವ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದೆ.

ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ.ಎಚ್.ಟಿ.ಮೋಹನ್‌ಕುಮಾರ್ ಚಿಕ್ಕಮಗಳೂರಿನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಸರಕಾರ 2017-18 ರಲ್ಲೇ ಕಾಫಿ ಬೆಳೆಗಾರರ ಅನಧಿಕೃತ ಸಾಗುವಳಿಯನ್ನು ಗುತ್ತಿಗೆ ನೀಡಲು ನಿರ್ಧರಿಸಿತ್ತು. ನಂತರ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರಕಾರ 25 ಎಕರೆವರೆಗಿನ ಅನಧಿಕೃತ ಸಾಗುವಳಿ ಜಮೀನನ್ನು ಗುತಿಗೆ ನೀಡಲು ಅನುಮೋದಿಸಿತ್ತು ಎಂದರು.

ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಗುತ್ತಿಗೆ ಆಧಾರದಲ್ಲಿ ಭೂಮಿ ನೀಡುವ ಪ್ರಕ್ರಯೆಗೆ ಚಾಲನೆ ನೀಡಿ ಅರ್ಜಿಯನ್ನು ಕರೆದಿದೆ. ಅರ್ಹ ಬೆಳೆಗಾರರು ನಮೂನೆ 9 ರಲ್ಲಿ ತಹಸೀಲ್ದಾರ್ ಅಥವಾ ನಾಡಕಚೇರಿಯಲ್ಲಿ ಆಗಸ್ಟ್ 7 ರಿಂದ 90 ದಿನದೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಅವಕಾಶವನ್ನು ಬೆಳೆಗಾರರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೆಜಿಎಫ್ ಮನವಿ ಮಾಡುತ್ತದೆ ಎಂದು ತಿಳಿಸಿದರು.

1960 ರಿಂದ 2005 ರವರೆಗೆ ಸರಕಾರಿ ಜಮೀನಿನಲ್ಲಿ ಅನಧಿಕೃತ ಸಾಗುವಳಿ ಮಾಡುತ್ತಿರುವ ಜಮೀನುಗಳನ್ನು ಗುತ್ತಿಗೆ ಆಧಾರದಲ್ಲಿ ನೀಡಲು ಸರಕಾರ ಸುತ್ತೋಲೆ ಹೊರಡಿಸಿ ಅರ್ಜಿ ಪಡೆಯಲು ಮುಂದಾಗಿರುವುದನ್ನು ಕರ್ನಾಟಕ ಬೆಳೆಗಾರರ ಒಕ್ಕೂಟ ಸ್ವಾಗತಿಸುತ್ತದೆ ಎಂದರು.

ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕಂದಾಯ ಸಚಿವರು ಹಾಗೂ ಎಲ್ಲ ರಾಜ್ಯ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

ಒತ್ತುವರಿ ಜಮೀನು ಗುತ್ತಿಗೆ ನೀಡಬೇಕು ಅಥವಾ ಸಕ್ರಮ ಮಾಡಿಕೊಡಬೇಕು ಎಂದು ಆಗ್ರಹಿಸಿ ನಡೆದ ನಮ್ಮ ಸುದೀರ್ಘ ಕಾಲದ ಹೋರಾಟಕ್ಕೆ ಸಹಕರಿಸಿದ ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಯ ಹಾಲಿ ಹಾಗೂ ಮಾಜಿ ಶಾಸಕರು, ಹಾಲಿ ಹಾಗೂ ಮಾಜಿ ಸಂಸದರು, ವಿಧಾನ ಪರಿಷತ್ ಹಾಲಿ ಹಾಗೂ ಮಾಜಿ ಸದಸ್ಯರಿಗೆ ಅಭಿನಂದಿಸುತ್ತೇವೆ ಎಂದರು.

ಕೆಜಿಎಫ್ ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಂ ಮಾತನಾಡಿ, ಹಾಸನ ಜಿಲ್ಲೆಯಲ್ಲಿ 29348 ಎಕರೆ, ಉಡುಪಿ 398.66 ಎಕರೆ, ಚಿಕ್ಕಮಗಳೂರು 20844.10 ಎಕರೆ, ಕೊಡಗು 26250 ಎಕರೆ ಸೇರಿ ಒಟ್ಟು 76844.33 ಎಕರೆ ಒತ್ತುವರಿ ಭೂಮಿಯನ್ನು ಸರಕಾರ ಗುತ್ತಿಗೆ ನೀಡಲು ಮುಂದಾಗಿದೆ ಎಂದು ತಿಳಿಸಿದರು.

ಕೆಜಿಎಫ್ ಮುಖಂಡ ಎ.ಕೆ ವಸಂತೇಗೌಡ ಮಾತನಾಡಿ ಜಿಲ್ಲೆಯಲ್ಲಿ ಅತೀವೃಷ್ಟಿಯಿಂದ ಕಾಫಿ, ಮೆಣಸು ಮತ್ತಿತರೆ ಬೆಳೆಗಳು ಸಾಕಷ್ಟು ನಾಶವಾಗಿದ್ದು, ಕಾಫಿ ಮಂಡಳಿ ಮತ್ತು ಸಂಬಂಧಿಸಿದ ಇಲಾಖೆ ಶೀಘ್ರ ಸಮೀಕ್ಷೆ ಮಾಡಿ ವರದಿ ನೀಡಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಜಿಎಫ್ ಪದಾಧಿಕಾರಿಗಳಾದ ಎಂ.ಎಸ್ ಲಿಂಗಪ್ಪಗೌಡ, ಮಹೇಶ್‌ಗೌಡ, ಶಂಕರ್, ರತ್ನಾಕರ, ಸುರೇಶ್, ದೇವರಾಜ್, ತೌಸಿಬ್ ಮತ್ತಿತರರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ