October 5, 2024

ಗಡಿ ಕಾಯುವ ಸೈನಿಕರು ಮತ್ತು ಆರ್ಥಿಕತೆಗೆ ಬೆನ್ನೆಲುಬಾದ ಉದ್ಯಮಶೀಲರಿಂದ ಸುಭದ್ರಭಾರತ ನಿರ್ಮಾಣ ಸಾಧ್ಯ, ಸೈನಿಕರು ದೇಶವನ್ನು ಸಂರಕ್ಷಿಸುತ್ತಿರುವುದರಿಂದ ನಾವು ಸುರಕ್ಷಿತವಾಗಿ ಜೀವನ ಸಾಗಿಸುತ್ತಿದ್ದೇವೆ. ವ್ಯವಹಾರಸ್ಥರ ವಹಿವಾಟಿಯಿಂದ ದೇಶದಲ್ಲಿ ಆರ್ಥಿಕತೆಯ ಸಂಚನಲವಾಗುತ್ತಿದೆ. ದೇಶದ ಬೆಳವಣಿಗೆಗೆ ಇವರಿಬ್ಬರ ಪಾತ್ರ ಅಮೂಲ್ಯ. ವಿದ್ಯಾರ್ಥಿ ಯುವಜನರಿಗೆ ಚಲನಚಿತ್ರ ನಾಯಕ ನಾಯಕಿಯರು ಮಾದರಿಯಾಗುವ ಬದಲು ಯಶಸ್ವಿ ವಾಣಿಜ್ಯೋದ್ಯಮಿಗಳು ಮಾದರಿಯಾದರೆ ದೇಶದ ಸ್ಥಿತಿ ಉತ್ತಮವಾಗುತ್ತದೆ,   ನಮ್ಮದೇಶದಲ್ಲಿ ಉದ್ಯಮಶೀಲರನ್ನು ಕೆಟ್ಟದ್ದಾಗಿ ಚಿತ್ರಿಸಲಾಗಿದೆ. ಇದು ಬದಲಾಗಬೇಕು ಎಂದು ಲೈಫ್‌ಲೈನ್ ಫೀಡ್ಸ್ ಸಂಸ್ಥಾಪಕ ಕಿಶೋರ್ ಕುಮಾರ್ ಹೆಗ್ಡೆ ವ್ಯಾಖ್ಯಾನಿಸಿದರು.

ಚಿಕ್ಕಮಗಳೂರು ಎಂಎಲ್‌ವಿರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ವಾರ್ಷಿಕೋತ್ಸವ ಹಾಗೂ ಪ್ರತಿಭಾಪುರಸ್ಕಾರ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಅವರು ಮಾತನಾಡಿದರು.

ಕೇಂದ್ರ ಮತ್ತು ರಾಜ್ಯಸರ್ಕಾರಗಳು ಶೇ.3ರಷ್ಟು ಜನರಿಗೆ ಮಾತ್ರ ಉದ್ಯೋಗ ಕಲ್ಪಿಸುತ್ತಿವೆ. ದೊಡ್ಡಸಂಖ್ಯೆಯ ಜನರಿಗೆ ಕೈಗಾರಿಕೆ, ವ್ಯಾಪಾರ, ವಾಣಿಜ್ಯೋಮದಿಂದಲೇ ಉದ್ಯೋಗ.  ಟಾಟಾ, ಬಿರ್ಲಾ, ಮುಜುಂದಾರ್, ನಾರಾಯಣಮೂರ್ತಿ, ಅಂಬಾನಿ ಸೇರಿದಂತೆ ದೊಡ್ಡ ಉದ್ಯಮಪತಿಗಳು, ಸಂಸ್ಥೆಗಳು ದೊಡ್ಡಪ್ರಮಾಣದಲ್ಲಿ ತೆರಿಗೆ ಪಾವತಿಸುವುದರಿಂದಲೇ ಸರ್ಕಾರಿ ಆಸ್ಪತ್ರೆ, ರಸ್ತೆ, ಡ್ಯಾಮ್, ಸಾರಿಗೆ, ಶಾಲೆ ಮತ್ತಿತರ ಕಲ್ಯಾಣ ಕಾರ‍್ಯಗಳನ್ನು ಸರ್ಕಾರಗಳು ಮಾಡುತ್ತಿವೆ ಎಂಬ ಸತ್ಯವನ್ನು ಅರಿಯಬೇಕೆಂದರು.

ಜೀವನದಲ್ಲಿ ಅಪಾಯ ಸಂದರ್ಭಗಳನ್ನು ಮೇಲೆ ಎಳೆದುಕೊಂಡು ಧೈರ‍್ಯದಿಂದ ಮುನ್ನಡೆದಾಗ ಮಾತ್ರ ಏನಾದರೂ ಸಾಧಿಸಬಹುದು. ಶಿಕ್ಷಣದ ನಂತರ ಮೂರ‍್ನಾಲ್ಕುವರ್ಷ ಕೆಲಸ ಮಾಡಿ ಅನುಭವ ಪಡೆದು ನಂತರ ಸ್ವಂತ ಉದ್ಯಮವನ್ನು ಸಣ್ಣಪ್ರಮಾಣದಲ್ಲಿ ಪ್ರಾರಂಭಿಸಿ ಪರಿಶ್ರಮದಿಂದ ಹಂತ ಹಂತವಾಗಿ ವಿಸ್ತರಿಸುತ್ತಾ ಸಾಗಬಹುದು. ಸವಾಲುಗಳನ್ನು ಅವಕಾಶವಾಗಿ ಪರಿವರ್ತಿಸಿಕೊಳ್ಳುವುದೇ ಯಶಸ್ಸು. ಆರ್ಥಿಕ ಸಂಸ್ಥೆಗಳಿಂದ ಸಾಲಪಡೆದು ಸಕಾಲದಲ್ಲಿ ಮರುಪಾವತಿಸುವ ಶಿಸ್ತನ್ನು ಬೆಳೆಸಿಕೊಂಡರೆ ಕೇಳಿದ್ದಕ್ಕಿಂತ ಹೆಚ್ಚು ಸಾಲವನ್ನು ಅವರು ಮನೆಬಾಗಿಲಿಗೆ ತಂದುಕೊಡುತ್ತಾರೆಂಬುದು ವಾಸ್ತವಿಕ ಸಂಗತಿ ಎಂದ ಕಿಶೋರ್‌ಕುಮಾರ್, ತಾವು 25,000ರೂ.ಆರಂಭದಲ್ಲಿ ಸಾಲಪಡೆದು ವ್ಯವಹಾರ ಆರಂಭಿಸಿದ್ದು ಈಗ 250 ಕೋಟಿ ರೂ. ಸಾಲಕೊಟ್ಟಿದ್ದಾರೆ ಎಂದು ಉದಾಹರಿಸಿದರು.

ದೇಶ ಮೊದಲು ಎಂಬ ಭಾವ ನಮ್ಮೆಲ್ಲರದಾಗಬೇಕು. ವಿಶ್ವಗುರು ಭಾರತ ಆಗಬೇಕೆಂಬ ಕನಸು ಕಾಣುತ್ತಿರುವ ನಾವು ದೇಶದ ಸುಭದ್ರತೆಗೆ ಆರ್ಥಿಕತೆ ಉತ್ತಮಪಡಿಸುವ ಮೂಲಕ ಕಾಣಿಕೆ ಕೊಡಬೇಕು. ಪಡೆದಸಾಲ ಮರುಪಾವತಿಸುವ ಬದ್ಧತೆ ಅಗತ್ಯ. ಉದ್ಯಮಶೀಲರು ಒದಗಿಬರುವ ಕಂಟಕವನ್ನು ನಿವಾರಿಸಿಕೊಂಡು ಮುನ್ನಡೆಯುವ ಮನೋಭಾವ ರೂಢಿಸಿಕೊಳ್ಳುವುದು ಅಗತ್ಯ. ಉದ್ಯಮಿಗೆ ಆರ್ಥಿಕ ಶಿಸ್ತು ಮುಖ್ಯ. ಬದ್ಧತೆ, ಕೌಶಲ್ಯ, ಪರಿಣತಿ, ಪರಿಶ್ರಮದೊಂದಿಗೆ ತೆರಿಗೆಯನ್ನು ಸಮರ್ಪಕವಾಗಿ ಪಾವತಿಸುವ ಮೂಲಕ ದೇಶಕ್ಕೆ ಪ್ರೀತಿ-ಭಕ್ತಿ ತೋರಬೇಕು. ತೆರಿಗೆ ಹಣದಿಂದಲೇ ಅಭಿವೃದ್ಧಿ ಕಾರ್ಯ ಸರ್ಕಾರ ಮಾಡಬಹುದು ಎಂದರು.

ಉದ್ಯಮಿಗಳಿಗೆ ಭದ್ರತೆ ಮುಖ್ಯವಾಗಿರುವುದರಿಂದ ಅವರ ಮನೆ, ವಾಹನ ಸೇರಿದಂತೆ ಬದುಕು ಐಷಾರಾಮಿ ಎನಿಸಬಹುದು. ಆದರೆ ಅಗತ್ಯ ಕೂಡ ಎಂಬುದನ್ನು ಮರೆಯಬಾರದು. ವ್ಯವಹಾರದ ಹಣವನ್ನು ಅದಕ್ಕೆ ಬಳಸಬೇಕು. ಪ್ರತಿಷ್ಠೆಗಾಗಿ ಅನಗತ್ಯ ವೆಚ್ಚ ಸಲ್ಲದು ಎಂದ ಕಿಶೋರಕುಮಾರ ಹೆಗ್ಡೆ ವ್ಯವಹಾರ ಆರಂಭಿಸಿ 25ವರ್ಷದ ನಂತರ ತಾವು ಸ್ವಂತಮನೆ ಕಟ್ಟಿಕೊಂಡಿದ್ದನ್ನು ಉಲ್ಲೇಖಿಸಿದರು.

ಪಿಯು ಡಿಡಿಪಿಐ ಪುಟ್ಟಾನಾಯ್ಕ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಕ್ಷಣಕ್ಷೇತ್ರ ಇಂದು ವಾಣಿಜ್ಯೀಕರಣಗೊಳ್ಳುತ್ತಿರುವುದು ವಿಷಾದನೀಯ. ಸಮಾಜದ ಎಲ್ಲ ರಂಗಗಳಿಗೂ ಶಿಕ್ಷಣ ಕ್ಷೇತ್ರವೇ ಮೂಲವೆಂಬುದನ್ನು ಮರೆಯಬಾರದು. ಕರ್ತವ್ಯಶೀಲತೆಯೆ ಮಾನವನಿಗೆ ರಾಜಮಾರ್ಗ. ಪರಿಸರ ಸನ್ನಿವೇಶಗಳು ನಮ್ಮನ್ನು ರೂಪಿಸುತ್ತವೆ ಎಂದರು.

ಆಧುನಿಕ ತಂತ್ರಜ್ಞಾನ ಶಿಕ್ಷಣಕ್ಷೇತ್ರದಲ್ಲೂ ಅಳವಡಿಕೆಯಾಗಿದೆ. ಬಹುತೇಕ ಸಲಹೆ, ಸೂಚನೆ, ಸುತ್ತೋಲೆಗಳನ್ನು ಅಂತರ್ಜಾಲದ ಮೂಲಕ ಕಳಿಸಲಾಗುತ್ತಿದೆ. ಈ-ಆಡಳಿತ ಅನಿವಾರ‍್ಯವಾಗಿದ್ದು ಮುಂದಿನ ದಿನಗಳಲ್ಲಿ ಪಿ.ಯು.ಇಲಾಖೆ ಸಂಪೂರ್ಣ ಕಾಗದರಹಿತ ಆಡಳಿತ ವ್ಯವಸ್ಥೆಯನ್ನು ಹೊಂದಲಿದೆ ಎಂದ ಪುಟ್ಟಾನಾಯ್ಕ, ಚಿಕ್ಕಮಗಳೂರು ಜಿಲ್ಲೆಯ ಪ್ರಾಂಶುಪಾಲರ ಸಂಘ ಮಾದರಿಯಾಗಿ ಕಾರ‍್ಯನಿರ್ವಹಿಸುತ್ತಿದೆ ಎಂದರು.

ಸೇವಾ ನಿವೃತ್ತಿ ಹೊಂದಿರುವ ಕಡೂರು ವೈ.ಎಂ.ಸಿ.ಪ್ರಾಂಶುಪಾಲ ಶಿವಮೂರ್ತಿ ಸನ್ಮಾನಿತರ ಪರವಾಗಿ ಮಾತನಾಡಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡರೆ ಸಂಘಸಂಸ್ಥೆಗಳು ಉತ್ತಮವಾಗಿ ಕಾರ‍್ಯನಿರ್ವಹಿಸಲು ಸಾಧ್ಯ ಎಂದರು.

ದ್ವಿತೀಯ ಪಿಯು ಪರೀಕ್ಷೆಯ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಳಲ್ಲಿ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ನಿವೃತ್ತ ಪ್ರಾಂಶುಪಾಲರುಗಳಾದ ಚನ್ನಬಸಪ್ಪ, ಕೆ.ಎಸ್.ಶೇಷಾದ್ರಿ, ಚಂದ್ರಕಾಂತಪಾಟೀಲ, ಕೆಂಪಸಿದ್ಧಯ್ಯ, ರೇವಣ್ಣ, ಜಯಶ್ರೀ, ಶಿವಮೂರ್ತಿ ಅವರ ಸೇವೆಯನ್ನು ಸ್ಮರಿಸಿ ಸಂಘದ ಪದಾಧಿಕಾರಿಗಳು ಗೌರವ ಸಮರ್ಪಿಸಿದರು.

ಪಿಯು ಉಪನಿರ್ದೇಕರ ಕಛೇರಿ ನವೀಕರಣಕ್ಕೆ ನೆರವುನೀಡಿದ ಕಿಶೋರಕುಮಾರಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ಅರ್ಥಶಾಸ್ತ್ರದಲ್ಲಿ ಶೇ.100 ಅಂಕಪಡೆದ ಜಿಲ್ಲೆಯ 11ವಿದ್ಯಾರ್ಥಿಗಳಿಗೆ ತಲಾ 2,000ರೂ.ಗಳ ನಗದು ಬಹುಮಾನವನ್ನು ಯಶೋಧಮ್ಮಗುರುಮೂರ್ತಿ ನೀಡಿದರು.

ಜಿಲ್ಲಾ ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಕರ‍್ಯದರ್ಶಿ ಸೋಮಶೇಖರ್ ಸ್ವಾಗತಿಸಿ, ಅಧ್ಯಕ್ಷ ಉಮಾಮಹೇಶ್ವರಯ್ಯ ಪ್ರಾಸ್ತಾವಿಸಿದರು. ಕಳಸಾಪುರ ಪ.ಪೂ.ಕಾಲೇಜು ಪ್ರಾಂಶುಪಾಲ ಎಚ್.ಎಂ.ನಾಗರಾಜರಾವ್‌ಕಲ್ಕಟ್ಟೆ ಕಾರ‍್ಯಕ್ರಮ ನಿರೂಪಿಸಿದ್ದು, ಬಾಳೆಹೊನ್ನೂರು ಬಿಜಿಎಸ್ ಪ್ರಾಂಶುಪಾಲ ಸುರೇಶ್ ವಂದಿಸಿದರು. ಸಂಘದ ಪದಾಧಿಕಾರಿಗಳಾದ ತಸ್ನಿಮ್‌ ಫಾತಿಮಾ, ಮಿನಿಥಾಮಸ್, ತೇಜಸ್ವಿನಿ, ರವಿಕಾಂತ್ ಮತ್ತಿತರರು ವೇದಿಕೆಯಲ್ಲಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ