October 5, 2024

ಕೇಂದ್ರದ ಎನ್‌ಡಿಎ ಸರಕಾರದ ಮಂಗಳವಾರ ಮಂಡಿಸಿರುವ ಬಜೆಟ್ ರಾಜ್ಯದ ಪಾಲಿಗೆ ನಿರಾಶದಾಯಕ ಬಜೆಟ್ ಆಗಿದ್ದು, ಈ ಬಜೆಟ್‌ನಲ್ಲಿ ಕಾಫಿನಾಡಿಗೆ ಬಿಡಿಗಾಸನ್ನೂ ನೀಡದೇ ಜಿಲ್ಲೆಯ ಜನರನ್ನು ನಿರೀಕ್ಷೆಗಳನ್ನು ಹುಸಿ ಮಾಡಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಗಳನ್ನು ಸಮಾನವಾಗಿ ಕಾಣಬೇಕಾಗಿದ್ದ ಕೇಂದ್ರದ ಮೋದಿ ಸರಕಾರ ಅಧಿಕಾರದ ದುರಾಸೆಯ ಕಾರಣಕ್ಕೆ ಬಿಹಾರ ಹಾಗೂ ಆಂಧ್ರಪ್ರದೇಶದಂತಹ ರಾಜ್ಯಗಳಿಗೆ ವಿಶೇಷ ಅನುದಾನ ನೀಡಿದ್ದು, ಇಂಡಿಯಾ ಒಕ್ಕೂಟದ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ವಕ್ತಾರ ಹಾಗೂ ಜಿಪಂ ಮಾಜಿ ಸದಸ್ಯ ಎಂ.ಎಸ್.ಅನಂತ್ ಟೀಕಿಸಿದ್ದಾರೆ.

ಈ ಸಂಬಂಧ ಬುಧವಾರ ಪತ್ರಿಕಾ ಪ್ರಕಟನೆ ನೀಡಿರುವ ಅವರು, ಕೇಂದ್ರದ ಮೋದಿ ಸರಕಾರ ಕಳೆದ 10 ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ನಿರಂತರವಾಗಿ ತಾರತಮ್ಯ ಮಾಡುತ್ತಾ ಬಂದಿದೆ. ನ್ಯಾಯಬದ್ಧವಾಗಿ ರಾಜ್ಯಕ್ಕೆ ಕೊಡಬೇಕಾಗಿದ್ದ ಅನುದಾನವನ್ನೂ ನೀಡದೇ ಅನ್ಯಾಯ ಮಾಡಿದೆ. ಮೋದಿ ಸರಕಾರದ ಈ ತಾರತಮ್ಯ ನೀತಿ ಈ ಬಾರಿಯ ಬಜೆಟ್‌ನಲ್ಲೂ ಮುಂದುವರಿದಿದೆ. ಕಳೆದ ಮಂಗಳವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ರಾಜ್ಯಕ್ಕೆ ಬಿಡಿಗಾಸನ್ನೂ ನೀಡದೇ, ಯಾವುದೇ ಹೊಸ ಯೋಜನೆಗಳನ್ನೂ ನೀಡದೇ ರಾಜ್ಯದ ಜನರಲ್ಲಿ ನಿರಾಶೆ ಮೂಡಿಸಿದೆ. ಮುಖ್ಯವಾಗಿ ಚಿಕ್ಕಮಗಳೂರು ಜಿಲ್ಲೆಯ ಜನರು ಈ ಬಾರಿಯ ಕೇಂದ್ರ ಸರಕಾರದ ಬಜೆಟ್ ಮೇಲೆ ಭಾರೀ ನಿರೀಕ್ಷೆಗಳನ್ನು ಹೊಂದಿದ್ದರು. ಆದರೆ ಪ್ರಧಾನಿ ಮೋದಿ ಸರಕಾರ ಜಿಲ್ಲೆಯ ಜನರ ನಿರೀಕ್ಷೆಗಳಿಗೆ ತಣ್ಣೀರೆರಚಿದೆ ಎಂದು ಅವರು ಆರೋಪಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಾಫಿ, ಅಡಿಕೆಯಂತಹ ವಾಣಿಜ್ಯ ಬೆಳೆಗಳಿಗೆ ಹೆಸರುವಾಸಿಯಾದ ಜಿಲ್ಲೆಯಾಗಿದೆ. ಅದರಲ್ಲೂ ಕಾಫಿ ಉದ್ಯಮದಿಂದಾಗಿ ಕೇಂದ್ರ ಸರಕಾರಕ್ಕೆ ಕೋಟ್ಯಂತರ ರೂ. ವಿದೇಶಿ ವಿನಿಮಯ ಬರುತ್ತಿದೆ. ಇಂತಹ ಉದ್ಯಮ ಸದ್ಯ ಹವಾಮಾನ ವೈಫರೀತ್ಯ, ಕಾರ್ಮಿಕರ ಕೊರತೆ, ಕೃಷಿ ಉಪಕರಣ, ಗೊಬ್ಬರಗಳ ಬೆಲೆ ಏರಿಕೆಯಿಂದಾಗಿ ಭಾರೀ ಸಂಕಷ್ಟದಲ್ಲಿದ್ದು, ಜಿಲ್ಲೆಯಲ್ಲಿ ಕಳೆದ ಅನೇಕ ವರ್ಷಗಳಿಂದ ಸಂಭವಿಸುತ್ತಿರುವ ಅತೀವೃಷ್ಟಿ, ಈ ಬಾರಿಯ ಅನಾವೃಷ್ಟಿಯಿಂದಾಗಿ ಬೆಳೆಗಾರರು ವೆಚ್ಚ ಸರಿದೂಗಿಸಲೂ ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬೆಳೆಗಾರರು ಕೇಂದ್ರ ಸರಕಾರ ಬಜೆಟ್‌ನಲ್ಲಿ ವಿಶೇಷ ಪ್ಯಾಕೆಜ್ ಘೋಷಿಸುವ ಆಶಾಭಾವನೆ ಹೊಂದಿದ್ದರು. ಆದರೆ ಮೋದಿ ಸರಕಾರ ಬೆಳೆಗಾರರಿಗೆ ಬಿಡಿಗಾಸೂ ನೀಡದೇ ನಿರಾಶೆಗೊಳಿಸಿದೆ. ಬೆಳೆಗಾರರು ಈ ಹಿಂದೆ ಅನೇಕ ಬಾರಿ ಕೇಂದ್ರದ ಬಳಿ ನಿಯೋಗ ತೆರಳಿ ನೆರವಿನ ಹಸ್ತಕ್ಕಾಗಿ ಮನವಿ ಮಾಡಿದ್ದರೂ ಮೋದಿ ಸರಕಾರ ಬೆಳೆಗಾರರ ಮನವಿಗೆ ಸ್ಪಂದಿಸದಿರುವುದು ಬೇಸರದ ಸಂಗತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಫೇಸಿ ಕಾಯ್ದೆ ಕಾಫಿ ಬೆಳೆಗಾರರ ಪಾಲಿಗೆ ಮರಣಶಾಸನವಾಗಿ ಕಾಡುತ್ತಿದೆ. ಈ ಕಾಯ್ದೆಯಿಂದಾಗಿ ಸಾಲ ನೀಡಿದ ಬ್ಯಾಂಕ್‌ಗಳು ಕಾಫಿ ತೋಟಗಳನ್ನೇ ಹರಾಜು ಹಾಕುತ್ತಿವೆ. ಪರಿಣಾಮ ಸಾವಿರಾರು ಜನರಿಗೆ ಪ್ರತ್ಯಕ್ಷ, ಪರೋಕ್ಷವಾಗಿ ಉದ್ಯೋಗ ನೀಡಿರುವ, ಕೇಂದ್ರ ಸರಕಾರಕ್ಕೆ ವಿದೇಶಿ ವಿನಿಮಯ ತಂದು ಕೊಡುತ್ತಿರುವ ಕಾಫಿ ಉದ್ಯಮವೇ ನಾಶವಾಗುವ ಭೀತಿ ಎದುರಾಗಿದೆ. ಸರ್ಫೇಸಿ ಕಾಯ್ದೆಯ ರದ್ದತಿ ಅಥವಾ ತಿದ್ದುಪಡಿಗೆ ಆಗ್ರಹಿಸಿ ಬೆಳೆಗಾರರು ಅನೇಕ ಹೋರಾಟಗಳನ್ನು ನಡೆಸಿ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದರು. ಆದರೆ ಕೇಂದ್ರದ ಮೋದಿ ಸರಕಾರ ಕಾಫಿ ಬೆಳೆಗಾರರ ಈ ಬೇಡಿಕೆಗೂ ಸ್ಪಂದಿಸದಿರುವುದು ನಾಚಿಕೆಗೇಡು ಎಂದಿರುವ ಅವರು, ಚಿಕ್ಕಮಗಳೂರು ಹಾಗೂ ಮೈಸೂರು-ಕೊಡಗು ಸಂಸದರು ಕಾಫಿ ಬೆಳೆಗಾರರ ಈ ಸಮಸ್ಯೆ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ದೂರಿದರು.

ಕಾಫಿ ಬೆಳೆಯಂತೆ ಚಿಕ್ಕಮಗಳೂರು ಜಿಲ್ಲೆ ಅಡಿಕೆ ಬೆಳೆಗೂ ಹೆಸರುವಾಸಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಅಡಿಕೆ ಬೆಳೆಗಾರರು ಎಲೆಚುಕ್ಕಿ ರೋಗ, ಅಡಿಕೆ ಹಳದಿ ಎಲೆ ರೋಗದಿಂದಾಗಿ ತತ್ತರಿಸಿ ಹೋಗಿದ್ದಾರೆ. ಅಡಿಕೆಗೆ ತಗುಲಿರುವ ರೋಗಬಾಧೆಗಳಿಗೆ ಬೇಸತ್ತು ಅನೇಕ ರೈತರು ಆತ್ಮಹತ್ಯೆಗೆ ಶರಣಾಗಿದ್ದು, ರೈತರು ತಮ್ಮ ತೋಟಗಳು ಭೂಮಾಫಿಯಾದವರ ಪಾಲಾಗುತ್ತಿದೆ. ಪರಿಣಾಮ ಮಲೆನಾಡಿನ ಸಾಂಪ್ರದಾಯಿಕ ಅಡಿಕೆ ಕೃಷಿ ನಾಶವಾಗುತ್ತಿದೆ. ಅಡಿಕೆ ರೋಗಗಳ ಬಗ್ಗೆ ಸಂಶೋಧನೆ ನಡೆಸಲು ಈ ಹಿಂದೆ ಕೇಂದ್ರದ ತಂಡ ಭೇಟಿ ನೀಡಿ ಪರಿಶೀಲಿಸಿದೆಯೇ ಹೊರತು ಇದಕ್ಕೆ ಶಾಶ್ವತ ಪರಿಹಾರ ಕಂಡುಕೊAಡಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಅಡಿಕೆ ಬೆಳೆಗಾರರು ನೆರವಿನ ನಿರೀಕ್ಷೆಯಲ್ಲಿದ್ದರು, ಆದರೆ ಮೋದಿ ಸರಕಾರ ಅಡಿಕೆ ಬೆಳೆಗಾರರ ನೆರವಿಗೂ ಬಿಡಿಗಾಸು ನೀಡಿಲ್ಲ ಎಂದು ಆರೋಪಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಗೆ ರೈಲ್ವೆ ಯೋಜನೆ ತಂದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ಜಿಲ್ಲಾ ಕೇಂದ್ರಕ್ಕೆ ರೈಲ್ವೆ ಯೋಜನೆ ಬಂದಿದ್ದರೂ ನಗರದಲ್ಲಿರುವ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರಕಾರ ಬಜೆಟ್‌ನಲ್ಲಿ ವಿಶೇಷ ಅನುದಾನ ನೀಡಿಲ್ಲ. ಹೆಚ್ಚುವರಿ ರೈಲುಗಳ ಸಂಚಾರಕ್ಕೂ ಕೇಂದ್ರ ಸರಕಾರ ಯಾವುದೇ ಕ್ರಮಕೈಗೊಂಡಿಲ್ಲ. ರಾಜ್ಯದವರೇ ಆದ ರೈಲ್ವೆ ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣ ಜಿಲ್ಲೆಯ ರೈಲ್ವೆ ಯೋಜನೆಗಳ ಅವ್ಯವಸ್ಥೆಯನ್ನು ಕಣ್ಣಾರೆ ಕಂಡು ಹೋಗಿದ್ದರೂ ಬಜೆಟ್‌ನಲ್ಲಿ ಜಿಲ್ಲೆಯ ರೈಲ್ವೆ ಯೋಜನೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಇಲ್ಲಿನ ರೈಲ್ವೆ ಕ್ಷೇತ್ರದ ಅಭಿವೃದ್ಧಿಯಿಂದ ಜಿಲ್ಲೆಯಲ್ಲಿನ ಪ್ರವಾಸೋದ್ಯಮ ಕ್ಷೇತ್ರವೂ ಅಭಿವೃದ್ಧಿಯಾಗುವ ನಿರೀಕ್ಷೆಯನ್ನು ಜನತೆ ಹೊಂದಿದ್ದರು. ಆದರೆ ಕೇಂದ್ರ ಸರಕಾರ ಇದಕ್ಕೂ ತಣ್ಣೀರೆರಚಿದೆ ಎಂದು ಟೀಕಿಸಿರುವ ಅನಂತ್, ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗೆ ಕೈಗಾರಿಕೆಗಳ ಸ್ಥಾಪನೆ, ಜವಳಿ ಪಾರ್ಕ್, ವಿಮಾನ ನಿಲ್ದಾಣದಂತಹ ಬೇಡಿಕೆಗಳಿಗೆ ಕೇಂದ್ರ ಬಜೆಟ್‌ನಲ್ಲಿ ಯಾವ ಪ್ರಸ್ತಾಪವನ್ನೂ ಮಾಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೂ ಹೆಚ್ಚುವರಿ ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸಿಲ್ಲ ಎಂದು ಟೀಕಿಸಿದ್ದಾರೆ.

ಕೇಂದ್ರದಲ್ಲಿ ಮೋದಿ ಸರಕಾರ ೩ನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದು, ಈ ಸರಕಾರ ಈ ಬಾರಿಯಾದರೂ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಇಳಿಸಲು ಕ್ರಮವಹಿಸಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಮೋದಿ ಸರಕಾರ ಬಡವರ ಮೇಲೆ ಮತ್ತಷ್ಟು ಹೊರೆ ಹೇರಿದೆಯೇ ಹೊರತು ಬೆಲೆ ಇಳಿಕೆಗೆ ಯಾವುದೇ ಕ್ರಮಕೈಗೊಂಡಿಲ್ಲ. ರೈತರ ಕಲ್ಯಾಣಕ್ಕೆ ಯಾವುದೇ ಹೊಸ ಯೋಜನೆಯನ್ನು ಜಾರಿ ಮಾಡಿಲ್ಲ. ಉದ್ಯೋಗ ಸೃಷ್ಟಿಗೂ ಬಜೆಟ್‌ನಲ್ಲಿ ಆದ್ಯತೆ ನೀಡಿಲ್ಲ. ರಾಜ್ಯ ಸರಕಾರದ ಯಾವ ಬೇಡಿಕೆಗಳಿಗೂ ಮೋದಿ ಸರಕಾರದ ಬಜೆಟ್‌ನಲ್ಲಿ ಸ್ಪಂದನೆ ಸಿಕ್ಕಿಲ್ಲ ಎಂದಿರುವ ಅವರು, ಮೋದಿ ಸರಕಾರ ಎನ್‌ಡಿಎ ಮಿತ್ರ ಪಕ್ಷಗಳ ರಾಜ್ಯಗಳಿಗೆ ಭರಪೂರ ಕೊಡುಗೆಗಳನ್ನು ನೀಡಿ ಅತೀ ಹೆಚ್ಚು ತೆರಿಗೆ ನೀಡುತ್ತಿರುವ ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದಿದ್ದಾರೆ.

ಬಿಹಾರ ರಾಜ್ಯಕ್ಕೆ 26 ಸಾವಿರ ಕೋಟಿ, ಆಂಧ್ರಪದೇಶಕ್ಕೆ 19 ಸಾವಿರ ಕೋಟಿ ವಿಶೇಷ ಅನುದಾನವನ್ನು ಬಜೆಟ್‌ನಲ್ಲಿ ಘೋಷಣೆ ಮಾಡಿರುವುದು ಮೋದಿ ಸರಕಾರಕ್ಕೆ ಒಕ್ಕೂಟ ವ್ಯವಸ್ಥೆಯ ಆಶಯಕ್ಕೆ ವಿರುದ್ಧವಾದ ಆಡಳಿತ ನಡೆಸಲು ಮುಂದಾಗಿದೆ. ಮೋದಿ ಸರಕಾರದ ತೆರಿಗೆ ನೀತಿಯಿಂದಲೂ ದೇಶದ ಆರ್ಥಿಕ ಪರಿಸ್ಥಿತಿ ಹದಗೆಡಲು ಕಾರಣವಾಗಲಿದೆ. ಈ ಬಜೆಟ್‌ನಲ್ಲಿ ರಾಜ್ಯಕ್ಕೆ ಭಾರೀ ಅನ್ಯಾಯವಾಗಿದ್ದರೂ ರಾಜ್ಯದಿಂದ ಸಂಸತ್‌ಗೆ ಆಯ್ಕೆಯಾಗಿರುವ 12 ಮಂದಿ ಬಿಜೆಪಿ ಸಂಸದರು ಹಾಗೂ ಮೈತ್ರಿ ಪಕ್ಷದ ಸಂಸದರು ತುಟಿ ಬಿಚ್ಚದಿರುವುದು ಅವರ ಮೋದಿ ಭಕ್ತಿಗೆ ಸಾಕ್ಷಿಯಾಗಿದೆ. ಮೋದಿ ಸರಕಾರದ ಈ ನಡೆಯನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತಿದ್ದು, ಮುಂದಿನ ದಿನಗಳಲ್ಲಿ ಈ ತಾರತಮ್ಯ ನೀತಿಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಎಚ್ಚರಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ