October 5, 2024

ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ ಅಮಟೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ನಗರದ ವಿವಿಧೆಡೆ 15 ಭಿಕ್ಷುಕರನ್ನು ಪತ್ತೆ ಹಚ್ಚಿ ಅವರನ್ನು ನಿರಾಶ್ರಿತರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸೇರಿದಂತೆ ವಿವಿಧ ಕಡೆಗಳಲ್ಲಿದ್ದ ಭಿಕ್ಷುಕರನ್ನು ಮನವೊಲಿಸಿ ಭಿಕ್ಷುಕರ ನಿಷೇಧ ಕಾಯ್ದೆ ಪ್ರಕಾರ ರಕ್ಷಿಸಿ ಸ್ಥಳಾಂತರಿಸಲಾಯಿತು.

ಈ ವೇಳೆ ಎಸ್ಪಿ ಡಾ.ವಿಕ್ರಮ ಅಮಟೆ ಮಾತನಾಡಿ, ಇತ್ತಿಚೆಗೆ ಭಿಕ್ಷುಕರು ಅಲ್ಲಲ್ಲಿ ಬಿದ್ದು ಗಾಯ ಮಾಡಿಕೊಂಡಿರುವುದು, ಕುಡಿದು ಬಿದ್ದು ಸಾವಪ್ಪಿರುವುದು, ಇತ್ತೀಚೆಗೆ ಓರ್ವ ಭಿಕ್ಷುಕಿ ಕೊಲೆ ಆಗಿರುವುದನ್ನು ಗಮನಿಸಿದ್ದೇವೆ. ಈ ಹಿನ್ನೆಲೆಯಲ್ಲಿ ನಗರಸಭೆ ಸೇರಿದಂತೆ ಇತರೆ ಸಂಘ ಸಂಸ್ಥೆಗಳ ಜೊತೆ ಸೇರಿ ಭಿಕ್ಷುಕರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಶಿವಮೊಗ್ಗದ ನಿರಾಶ್ರಿತರ ಪರಿಹಾರ ಕೇಂದ್ರ ಹಾಗೂ ಮಹಿಳಾ ಮತ್ತು ನಗರದಲ್ಲಿ ಮಕ್ಕಳ ಕಲ್ಯಾಣ ಇಲಾಖೆಯ ಸ್ವಾಧಾರ ಕೇಂದ್ರಕ್ಕೆ ಭಿಕ್ಷುಕರನ್ನು ಸ್ಥಳಾಂತರ ಮಾಡುತ್ತೇವೆ. ಈ ಕಾರ್ಯಾಚರಣೆ ಇಲ್ಲಿಗೆ ನಿಲ್ಲುವುದಿಲ್ಲ. ಮುಂದುವರಿಯುತ್ತದೆ. ಭಿಕ್ಷುಕರಿಗೆ ಸಂಬಂಧಿಸಿದಂತೆ ಮಾಹಿತಿಗಳಿದ್ದಲ್ಲಿ ಸಾರ್ವಜನಿಕರು ನಗರಸಭೆ ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗಮನಕ್ಕೆ ತಂದರೆ ತಕ್ಷಣ ಅವರನ್ನು ಸ್ಥಳಾಂತರಿಸುವ ಕೆಲಸ ಆಗುತ್ತದೆ ಎಂದರು.

ಕರ್ನಾಟಕ ಭಿಕ್ಷುಕರ ನಿಷೇಧ ಕಾನೂನಿದೆ. ಆ ಪ್ರಕಾರ ಇವರನ್ನು ಸ್ಥಳಾಂತರಿಸಲು ಅವಕಾಶವಿದೆ. ಕೆಲವರು ಅದಕ್ಕೆ ಒಪ್ಪುತ್ತಿಲ್ಲ. ಅವರನ್ನು ಮನವೊಲಿಸಿ ಕಳಿಸಿಕೊಡಲಾಗುತ್ತಿದೆ. ಮೂಡಿಗೆರೆಯಲ್ಲೂ 3 ಮಂದಿ ಭಿಕ್ಷುಕರನ್ನು ಸ್ಥಳಾಂತರಿಸಲಾಗುತ್ತಿದೆ ಎಂದರು.

ಭಿಕ್ಷೆ ಬೇಡುವುದು ಕಾನೂನು ಪ್ರಕಾರ ತಪ್ಪಾಗುತ್ತದೆ. ಕೆಲವರು ಮಾನಸಿಕವಾಗಿ ಸಮಸ್ಯೆ ಅನುಭವಿಸುತ್ತಿದ್ದಾರೆ. ಕೆಲವರು ಮನೆಯಲ್ಲಿ ಸಣ್ಣ ಪುಟ್ಟ ತೊಂದರೆಯಿಂದಾಗಿ ಭಿಕ್ಷೆ ಬೇಡುತ್ತಿದ್ದಾರೆ. ಅವರ ಮನೆಯವರು ಇದ್ದರೆ ವಾಪಾಸ್ ಕಳಿಸಿಕೊಡುವ ಪ್ರಯತ್ನ ಮಾಡುತ್ತೇವೆ. ಇಲ್ಲವಾದಲ್ಲಿ ಸರ್ಕಾರದಿಂದಲೇ ಸ್ವಾಧಾರ ಕೇಂದ್ರ, ನಿರಾಶ್ರೀತರ ಕೇಂದ್ರಗಳಿವೆ ಅಲ್ಲಿಗೆ ಕಳಿಸಿಕೊಡಲಾಗುವುದು ಎಂದರು.

ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ, ಇಲ್ಲಿರುವ ಭಿಕ್ಷುಕರನ್ನು ಎಲ್ಲ ರೀತಿಯ ವ್ಯವಸ್ಥೆ ಇರುವ ನಿರಾಶ್ರಿತ ಕೇಂದ್ರ, ಸ್ವಾಧಾರ ಕೇಂದ್ರಕ್ಕೆ ಕಳಿಸಿಕೊಡಲಾಗುತ್ತಿದೆ. ಊಟ, ಉಪಹಾರ, ಸ್ನಾನ, ಮಲಗಲು ಎಲ್ಲಾ ವ್ಯವಸ್ಥೆ ಇದೆ. ಅವರು ಅಲ್ಲಿ ನೆಮ್ಮದಿಯಾಗಿರಬಹುದು ಎಂದರು.

ಒಂದು ವರ್ಷ ಅವರು ನಿರಾಶ್ರಿತ ಕೇಂದ್ರದಲ್ಲಿ ಇರುತ್ತಾರೆ. ಆರೋಗ್ಯ ಸಮಸ್ಯೆ ಇದ್ದರೆ ಚಿಕಿತ್ಸೆಯನ್ನೂ ಕೊಡಿಸುತ್ತಾರೆ. ಚಿಕ್ಕಮಗಳೂರು ನಗರದಲ್ಲಿ 1 ಕೋಟಿ ರೂ. ವೆಚ್ಚದ ನಿರಾಶ್ರಿತರ ಕೇಂದ್ರ ನಿರ್ಮಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ನಗರಸಭೆ ಆಯುಕ್ತ ಬಿ.ಸಿ.ಬಸವರಾಜು ಮಾತನಾಡಿ, ನಿರಾಶ್ರಿತರ ಕೇಂದ್ರದಲ್ಲಿರುವ ಒಂದು ವರ್ಷದ ಅವಧಿಯಲ್ಲಿ ಅವರಿಗೆ ಸ್ವಯಂ ಉದ್ಯೋಗದ ತರಬೇತಿಯನ್ನೂ ಕೊಡಿಸಿ ಸ್ವಾವಲಂಭಿಗಳನ್ನಾಗಿ ಮಾಡಿ ಅಲ್ಲಿಂದ ಕಳಿಸಿಕೊಡುವ ಕೆಲಸ ಮಾಡುತ್ತೇವೆ ಎಂದರು.

ಸ್ವಯಂ ಸೇವಕ ಸಂಘಗಳ ರೂಬಿನ್ ಮೋಸೆಸ್, ಕೃಷ್ಣ ಮೂರ್ತಿ, ಶಿವಮೊಗ್ಗ ನಿರಾಶ್ರಿತರ ಪರಿಹಾರ ಕೇಂದ್ರದ ಅನಿಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿಗಳು ಇದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ