October 5, 2024

ತುರ್ತು ಪರಿಸ್ಥಿತಿಯ ಕರಾಳಪರ್ವ ಭಾರತ ಇತಿಹಾಸದ ಕಪ್ಪುಚುಕ್ಕೆ. ನಾಗರಿಕರ ಮೂಲಭೂತ ಹಕ್ಕುಗಳ ಧಮನ, ಪತ್ರಿಕೆಗಳಿಗೆ ಸೆನ್ಸಾರ್, ನ್ಯಾಯಾಂಗದ ಮೇಲೂ ದರ್ಪತೋರಿ ಅಧಿಕಾರ ಉಳಿಸಿಕೊಳ್ಳುವ ಇಂದಿರಾಗಾಂಧಿ ಕಾಂಗ್ರೇಸ್ ತಂಡದ ಹುನ್ನಾರದಿಂದ ದೇಶವೇ ನಲುಗಿತ್ತು ಎಂದು ಹಿರಿಯಪತ್ರಕರ್ತ ಚೂಢನಾಥ ಅಯ್ಯರ್ ನುಡಿದರು.

ಚಿಕ್ಕಮಗಳೂರು ಮಾಧ್ಯಮ ಸಂಸ್ಕøತಿ ಪ್ರತಿಷ್ಠಾನ ಮತ್ತು ಅಖಿಲಭಾರತೀಯ ಸಾಹಿತ್ಯ ಪರಿಷದ್ ಸಂಯುಕ್ತವಾಗಿ ‘ತುರ್ತು ಪರಿಸ್ಥಿತಿ ಘೋಷಣೆಯಾದ 49ವರ್ಷಗಳ ಹಳೆಯಕಹಿ ನೆನಪು’ ಅಂಗವಾಗಿ ಮನೆಯಂಗಳದಲ್ಲಿ ನೀಡಿದ ಗೌರವಸ್ವೀಕರಿಸಿ ಅವರು ನೆನಪುಗಳನ್ನು ಮೆಲಕು ಹಾಕಿದರು.

ಪ್ರಜಾಪ್ರಭುತ್ವದ ಕಗ್ಗೊಲೆ ತುರ್ತುಪರಿಸ್ಥಿತಿ. ಸ್ವಾರ್ಥ, ಸ್ವಂತಹಿತ ಸಾಧನೆಗಾಗಿ ಭಾರತದ ಸಂವಿಧಾನವನ್ನೆ ತಿರುಚಿದ ಕರಾಳ ಅಧ್ಯಾಯ. ವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯದ ಹರಣದ ಜೊತೆಗೆ ಸಂವಿಧಾನಕ್ಕೆ ಮಾಡಿದ ಘೋರ ಅಪಚಾರ. ದೇಶದ ಲಕ್ಷಾಂತರ ಯುವಕರು ಮನೆ-ಮಠ ತೊರೆದು ಮೂಲಭೂತ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಟಮಾಡಿ ಜೈಲುವಾಸ ಅನುಭವಿಸಿದವರಲ್ಲಿ ತಾವೂ ಒಬ್ಬರು ಎಂಬುದು ಹೆಮ್ಮೆ ಮೂಡಿಸುತ್ತಿದೆ ಎಂದರು.

1975ರ ಜೂನ್25ರ ತುರ್ತುಪರಿಸ್ಥಿತಿ ಘೋಷಣೆಯಾದಾಗ ದೇಶಾದ್ಯಂತ ವಿರೋಧ ವ್ಯಕ್ತವಾಗಿತ್ತು. ಬಹುತೇಕ ಸಂಘಸಂಸ್ಥೆಗಳು ರಾಜಕೀಯಪಕ್ಷಗಳು ಹೋರಾಟ ಆರಂಭಿಸಿದ್ದವು. ರಾಷ್ಟ್ರೀಯ ಸ್ವಯಂಸೇವಕ ಸಂಘ ಸಹಜವಾಗಿಯೆ ಹೋರಾಟದ ಮುಂಚೂಣಿಯಲ್ಲಿತ್ತು. ಜಿಲ್ಲೆ ಹಾಗೂ ನಗರದಲ್ಲೂ ವಿರೋಧದ ಕಾವು ಏರಿತ್ತು. ಸಂಘ ಪರಿವಾರದಲ್ಲಿ ಚಟುವಟಿಕೆಯಿಂದಿದ್ದ ತಂಡದ ಮೇಲೆ ಪೊಲೀಸರ ಕಣ್ಣಿತ್ತು.

ಜ್ಞಾನಮಂದಿರದಲ್ಲಿ ಸಂಘದ ಪ್ರಮುಖರು ಹೋರಾಟಕ್ಕೆ ಅಣಿಯಾಗಿದ್ದ ಯುವಕರನ್ನು ಸೇರಿಸಿ ಪೊಲೀಸರ ದೌರ್ಜನ್ಯಕ್ಕೆ ಹಿಮ್ಮಟ್ಟುವುದಿಲ್ಲವೆಂಬ ಪ್ರತಿಜ್ಞೆ ಮಾಡಿಸಿದ ನಂತರ ಎಂಟುಜನ ಸತ್ಯಾಗ್ರಹಿಗಳ ತಂಡಗಳನ್ನು ರಚಿಸಲಾಯಿತು. ಬಿ.ಎಸ್.ವಿಠಲರಾವ್ ನೇತೃತ್ವದಲ್ಲಿ ಮೊದಲತಂಡ ಪ್ರದರ್ಶನ ನಡೆಸಿ ಬಂಧನಕ್ಕೊಳಗಾಯಿತು. 2ನೆಯ ತಂಡದ ನೇತೃತ್ವ ವಹಿಸುವ ಅವಕಾಶ ತಮ್ಮದಾಗಿತ್ತು ಎಂದ ಚೂಡನಾಥಅಯ್ಯರ್, ಗುರುನಾಥ ಚಿತ್ರಮಂದಿರದ ಚಿತ್ರಪ್ರದರ್ಶನ ಮುಗಿಯುವ ವೇಳೆಗೆ ಭಾರತ ಮಾತಾಕೀ ಜೈ, ಇಂದಿರಾ ಮುರದಾಬಾದ್ ಮತ್ತಿತರ ಘೋಷಣೆಗಳ ಮೂಲಕ ಮೆರವಣಿಗೆ ನಡೆಸಿದಾಗ ಪೊಲೀಸರು ಬಂಧಿಸಿ ಠಾಣೆಗೆ ಒಯ್ದರು. ಒಂದೆರಡು ಬಾರಿ ಲಾಠಿರುಚಿಯನ್ನೂ ತೋರಿಸಿ ಮ್ಯಾಜಿಸ್ಟೇಟರ ಮುಂದೆ ಹಾಜರುಪಡಿಸಿ ನಂತರ ಜೈಲಿಗೆ ಅಟ್ಟಲಾಯಿತು.

ಕಲ್ಲಿನಂತಹ ಮುದ್ದೆ, ನೀರುಸಾರು ಮೊದಲೆರಡು ದಿನ ಊಟವೇ ಸೇರುತ್ತಿರಲಿಲ್ಲ. ನಂತರ ರಾಜಕೀಯ ಖೈದಿಗಳೆಂದು ಪರಿಗಣಿಸಲಾಯಿತು. ತಂಡೋಪತಂಡವಾಗಿ ಹೋರಾಟಗಾರರು ಜೈಲಿಗೆ ಬಂದರು. ಆ ಸಂಖ್ಯೆ 70ರಿಂದ 80 ತಲುಪಿತು. ಅಲ್ಲೆ ಕಬ್ಬಡಿಆಟ, ಊಟ ತಿಂಡಿಯ ಸ್ಥಿತಿಯೂ ಉತ್ತಮವಾಯಿತು. ಆಗಾಗ ಮಾತಿನ ಚಕಮಕಿ ಇತ್ತು. ತುರ್ತುಪರಿಸ್ಥಿತಿ ತೆಗೆದ ನಂತರ ಬಿಡುಗಡೆಯ ಭಾಗ್ಯ ತಮ್ಮದಾಯಿತ್ತೆಂದು ವಿವರಿಸಿದ ಅಯ್ಯರ್, ಬಹುತೇಕ ಜನರಿಗೆ ಅಂದಿನ ಕಹಿ ಗೊತ್ತೆ ಇಲ್ಲ. ಹಲವೆಡೆ ಪೊಲೀಸರ ದೌರ್ಜನ್ಯ ಮಿತಿಮೀರಿತ್ತು. ಬೆಳೆಯುವ ಪೀಳಿಗೆ ಕರಾಳ ಅಧ್ಯಾಯವನ್ನು ಅರಿಯಬೇಕು. ಮುಂದೆ ಇಂತಹ ಸ್ಥಿತಿ ದೇಶಕ್ಕೆ ಬಾರದಂತೆ ಎಚ್ಚರಿಕೆ ವಹಿಸುವುದು ಅನಿವಾರ್ಯ ಎಂದರು.

ಎರಡೂವರೆ ತಿಂಗಳು ಜೈಲುವಾಸ ಅನುಭವಿಸಿದ್ದ ಮಂಜುನಾಥ ಕಾಮತ್, 1919ರಿಂದ 1947ರವರೆಗೆ ಭಾರತ ಸ್ವಾತಂತ್ರ್ಯಕ್ಕಾಗಿ ನಡೆದ ಅಸಹಕಾರ ಚಟುವಳಿಗೆ ಹೋಲಿಸಿದರೆ ತುರ್ತುಪರಿಸ್ಥಿತಿಯ 20ತಿಂಗಳ ಹೋರಾಟ ಸಣ್ಣದು. ಆದರೆ ಅಧಿಕಾರ ಉಳಿಸಿಕೊಳ್ಳಲು ವಿನಾಕಾರಣ ದೇಶದ ಎಲ್ಲ ಜನರ ಅಭಿವ್ಯಕ್ತಿಯನ್ನು ಕಸಿದಿದ್ದು ಅಕ್ಷಮ್ಯ ಎಂದರು.

ಸದಾ ಜಾಗೃತಿಯೆ ಸ್ವಾತಂತ್ರ್ಯಕ್ಕೆ ತೆರಬೇಕಾದ ಬೆಲೆ ಎಂಬ ಪ್ರಸಿದ್ಧ ನುಡಿಗಟ್ಟನ್ನು ಉಲ್ಲೇಖಿಸಿದ ಅವರು, ಅಲಹಾಬಾದ್ ಹೈಕೋರ್ಟ್‍ಪೀಠ ತೀರ್ಪಿನ ಹಿನ್ನಲೆಯಲ್ಲಿ ಅಂದಿನ ಪ್ರಧಾನಿಯಾಗಿ ಶ್ರೀಮತಿ ಇಂದಿರಾಗಾಂಧಿ ಸ್ಥಾನ ತೊರೆಯಬೇಕಾಗಿತ್ತು. ಅಧಿಕಾರ ಬಿಟ್ಟುಕೊಡಲು ಬಯಸದ ಹಿನ್ನಲೆಯಲ್ಲಿ ಹೋರಾಟ ಆರಂಭವಾಗಿತ್ತು. ಜಯಪ್ರಕಾಶನಾರಾಯಣ ನೇತೃತ್ವ ವಹಿಸಿದ್ದು ವಿವಿಧ ಪಕ್ಷಗಳು ಪ್ರತಿಭಟನೆ ಆರಂಭಿಸಿದವು. ದೇಶ ವ್ಯಾಪಿಸಿದ ಅರಾಜಕತೆ ಹಿನ್ನಲೆಯಲ್ಲಿ ತುರ್ತುಪರಿಸ್ಥಿತಿ ಜಾರಿಗೊಳಿಸಲಾಯಿತ್ತೆಂದರು.

ಬಹುತೇಕ ಬುದ್ಧಿಜೀವಿಗಳು, ಸಾಹಿತಿಗಳು ತುರ್ತುಪರಿಸ್ಥಿತಿ ಪರ ನಿಂತರು. ಭಯದ ವಾತಾವರಣ ದೇಶಾದ್ಯಂತ ಸೃಷ್ಟಿಸಲಾಯಿತು. ಕಾಂಗ್ರೇಸ್ ಬಾವುಟಕ್ಕಲ್ಲದಿದ್ದರೂ ಅದರ ಕೆಳಗಿನ ದೊಣ್ಣೆಗೆ ಜನ ಹೆದರಬೇಕಾಯಿತು. ಸಂಘ ಪರಿವಾರ ಹೋರಾಟಗಾರರನ್ನು ಹುರಿದುಂಬಿಸಿತ್ತು. ಜಿಲ್ಲೆಯಲ್ಲೂ ಪ್ರತಿಭಟನೆ ನಡೆದಿತ್ತು. ಅಂದಿನ ರಾಜ್ಯಸಭಾ ಸದಸ್ಯ ಉಳುವಾಗಿಲು ಲಕ್ಷ್ಮಣಗೌಡರ ಮನೆಯಲ್ಲಿ ಸಭೆ ಸೇರಿ ಸಂಸತ್ತಿನ ಚರ್ಚೆಯನ್ನು ತಿಳಿಸಲಾಗುತ್ತಿತ್ತು.

ವಿಠಲರಾವ್, ಶ್ರೀಕಂಠಭಟ್, ಕೃಷ್ಟಭಟ್, ಗೋವಿಂದಗೌಡ, ಸಿ.ಆರ್.ಶಿವಾನಂದ, ಎಚ್.ಡಿ.ಸೋಮೇಗೌಡ ಮತ್ತಿತರರನ್ನು ಮೀಸಾ ಅಡಿ ಬಂಧಿಸಿದರೆ, ಸಾಧಾರಣ ಕಾರ್ಯಕರ್ತರನ್ನು ಡಿಎಆರ್ ಅನ್ವಯ ಜೈಲಿಗೆ ಅಟ್ಟಿದ್ದು ತಾವೂ ಎರಡೂವರೆ ತಿಂಗಳು ಸೆರೆವಾಸ ಅನುಭವಿಸಿದ್ದನ್ನು ಕಾಮತ್ ಬಿಚ್ಚಿಟ್ಟರು.

ದೇಶದ ಬುದ್ಧಿವಂತ ಜಾಗೃತ ಜನತೆ ಮತದಾನದ ಮೂಲಕ ಸರ್ವಾಧಿಕಾರಿಯನ್ನು ಸೋಲಿಸಿತು. ಪಕ್ಷದ ಜೊತೆಗೆ ನಾಯಕರನ್ನೂ ಚುನಾವಣೆಯಲ್ಲಿ ಪರಾಭವಗೊಳಿಸಿದ ಇಲ್ಲಿಯ ಜನರ ಪ್ರಜಾಪ್ರಭುತ್ವ ಪ್ರೀತಿ ಜಗತ್ತಿನ ಬೇರೆಕಡೆ ನೋಡಲು ಸಾಧ್ಯವಿಲ್ಲ. ಕಮ್ಯೂನಿಸ್ಟರು, ಕಾಂಗ್ರೇಸಿಗರಿಗೆ ಸಂವಿಧಾನ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಅಧಿಕಾರವೇ ಇಲ್ಲ ಎಂದ ಮಂಜುನಾಥಕಾಮತ್ ಜನತಾಪಕ್ಷದ ಸರ್ಕಾರ ಕೇಂದ್ರದಲ್ಲಿ ರಚನೆಯಾದ ನಂತರ ಇಂತಹ ತುರ್ತುಪರಿಸ್ಥಿತಿಯನ್ನು ಜಾರಿಗೊಳಿಸದಂತೆ ಕಾನೂನು ತಿದ್ದುಪಡಿ ತಂದಿದೆ ಎಂದರು.

ಸಾಗರ ಪಟ್ಟಣದಲ್ಲಿ ಕಾಲೇಜುವಿದ್ಯಾಥಿಗಳೊಂದಿಗೆ ಹೋರಾಟಮಾಡಿ ಎರಡೂವರೆ ತಿಂಗಳು ಜೈಲುಶಿಕ್ಷೆ ಅನುಭವಿಸಿದ ಘಟನೆಗಳನ್ನು ಮುಂದಿಟ್ಟ ಅಭಾಸಾಪ ತಾಲ್ಲೂಕು ಅಧ್ಯಕ್ಷ ಲಕ್ಷ್ಮೀನಾರಾಯಣರಾವ್, ಅಧಿಕಾರದ ಆಸೆಗಾಗಿ ಏನು ಬೇಕಾದರೂ ಮಾಡುತ್ತೇವೆಂಬುದನ್ನು ಕಾಂಗ್ರೇಸ್ ದೇಶಕ್ಕೆ ತೋರಿಸಿದೆ ಎಂದರು.

ಮಾಧ್ಯಮ ಸಂಸ್ಕøತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಪ್ರಾಸ್ತಾವಿಸಿ ಅಭಿವ್ಯಕ್ತಿಸ್ವಾತಂತ್ರ್ಯದ ಮಹತ್ವವನ್ನು ಯುವಜನರಿಗೆ ತಿಳಿಸುವ ಹಿನ್ನಲೆಯಲ್ಲಿ ಪ್ರತಿವರ್ಷ ತುರ್ತುಪರಿಸ್ಥಿತಿ ಕರಾಳತೆ ನೆನಪಿಸುವ ಕಾರ್ಯಕ್ರಮ ಪ್ರತಿಷ್ಠಾನ ನಡೆಸಿಕೊಂಡು ಬಂದಿದೆ. ರಾತ್ರಿವೇಳೆ ಗೋಡೆ ಬರಹ, ನಿತ್ಯ ಮನೆಯಲ್ಲೆ ಸಂಘದ ಪ್ರಾರ್ಥನೆ ಸಲ್ಲಿಸುವುದು, ಗುಪ್ತವಾಗಿ ನಡೆಯುತ್ತಿದ್ದ ಸಂಘದ ಉತ್ಸವಗಳಲ್ಲಿ ಪಾಲ್ಗೊಳ್ಳುವುದು, ಅಂದಿನ ದೇಶದ ಸ್ಥಿತಿ ವಿವರಿಸಿ ಜಾಗೃತಿಗೊಳಿಸುವ ಕಹಳೆ ಮತ್ತಿತರ ಪತ್ರಿಕೆಗಳನ್ನು ಮನೆ ಮನೆಗೆ ಹಂಚುವ ಪುಟ್ಟಕೆಲಸದ ಮೂಲಕ ತಾವೂ ಹೋರಾಟದ ಭಾಗವಾಗಿದ್ದನ್ನು ವಿವರಿಸಿದರು.

ವಿಶ್ರಾಂತಪ್ರಾಂಶುಪಾಲರಾದ ಎ.ಜಿ.ವಿಶ್ವಮೂರ್ತಿ ಮತ್ತು ಹುಲಿಕೆರೆ ಮಹಾಲಿಂಗಯ್ಯ, ಕನ್ನಡ ಮತ್ತು ಸಂಸ್ಕøತಿಇಲಾಖೆಯ ವಿಶ್ರಾಂತಸಹಾಯಕ ನಿರ್ದೇಶಕ ಎಂ.ಎಸ್.ಚಂದ್ರಪ್ಪ, ಅಭಾಸಾಪದ ವಿ.ಟಿ.ದಾಮೋದರ್ ಅಭಿಪ್ರಾಯಗಳನ್ನು ಹಂಚಿಕೊಂಡರು. ಅಭಾಸಾಪ ಜಿಲ್ಲಾಕಾರ್ಯದರ್ಶಿ ಅಶ್ವಥ್‍ಕೆ.ಆರ್.ಪೇಟೆ ಸ್ವಾಗತಿಸಿ, ಪ್ರತಿಷ್ಠಾನದ ಸಂಚಾಲಕ ರುದ್ರೇಶ್ ಎನ್.ಕಡೂರ್ ನಿರೂಪಿಸಿ, ಕಾರ್ಯದರ್ಶಿ ಸುಮಿತ್ರಾಶಾಸ್ತ್ರಿ ವಂದಿಸಿದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ