October 5, 2024

1992ರಲ್ಲಿ ರಾಜಕೀಯ ಪ್ರವೇಶ ಪಡೆದ ನನಗೆ ಅನೇಕ ಚುನಾವಣೆಗಳು ಎದುರಾಗಿವೆ. ಎಲ್ಲವನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಈ ಚುನಾವಣೆಯಲ್ಲಿ ನನಗೆ ಇನ್ನಿಲ್ಲದಂತೆ ಆತಂಕ ಸೃಷ್ಟಿಸಿತ್ತು. ಕಾರ್ಯಕರ್ತರ ಶ್ರಮ ಮತ್ತು ಜನ ಬೆಂಬಲದಿಂದ ಅತ್ಯದಿಕ ಮತಗಳ ಅಂತರದಿಂದ ಗೆದ್ದು ಬಂದಿದ್ದೇನೆ ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ನೂತನ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.

ಮಂಗಳವಾರ ಸಂಜೆ ಮೂಡಿಗೆರೆ ಬಿ.ಜೆ.ಪಿ. ಕಛೇರಿಯಲ್ಲಿ ನೂತನ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ವಿಧಾನಪರಿಷತ್ ನೂತನ ಸದಸ್ಯ ಸಿ.ಟಿ.ರವಿ ಅವರಿಗೆ ಬಿಜೆಪಿ ಹಾಗೂ ಜೆಡಿಎಸ್ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಂಗ್ರೆಸ್ ಮಹಿಳೆಯರಿಗೆ ವಾರ್ಷಿಕ 1 ಲಕ್ಷ ರೂ. ನೀಡುವುದಾಗಿ ಹೇಳಿತ್ತು. ಇದು ನಿಜವೆಂದು ನಂಬಿದ್ದ ಮಹಿಳೆಯರು ಅಂಚೆ ಕಚೇರಿಯಲ್ಲಿ ಖಾತೆ ತೆರೆಯಲು ಸಾಲುಗಟ್ಟಿ ನಿಂತಿದ್ದರು. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಜನರನ್ನು ಮರುಳು ಮಾಡಿದ್ದರಿಂದ ಚುನಾವಣೆಯಲ್ಲಿ ಗೆಲುವು ಕಷ್ಟವೆಂಬ ತೀರ್ಮಾನಕ್ಕೂ ಬಂದಿದ್ದೆ. 2.50 ಲಕ್ಷ ಮತಗಳ ಅಂತರ ಗೆಲುವಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಶ್ರಮವಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ನೂತನ ಸದಸ್ಯ ಸಿ.ಟಿ.ರವಿ ಮಾತನಾಡಿ, ವಿಶ್ವದಲ್ಲಿ ಭಾರತ ಆರ್ಥಿಕವಾಗಿ 11ನೇ ಶಕ್ತಿಯಾಗಿತ್ತು. ಈಗ ಇಂಗ್ಲೆಂಡನ್ನು 6ನೇ ಸ್ಥಾನಕ್ಕೆ ತಳ್ಳಿ 5ನೇ ಸ್ಥಾನಕ್ಕೆ ಬಂದಿದೆ. ಇನ್ನು ಅಮೆರಿಕ ಹಾಗೂ ಚೀನಾವನ್ನು ಹಿಂದಿಕ್ಕಲು ನರೇಂದ್ರ ಮೋದಿಗೆ ಮಾತ್ರ ಸಾಧ್ಯವಿದೆ. ಭಾರತೀಯರು ಜಗತ್ತಿನ ಯಾವ ದೇಶಕ್ಕೆ ಹೋದರು ಅಲ್ಲಿ ಅವರಿಗೆ ಗೌರವ ಸಿಗುತ್ತಿದೆ. ಆದಕ್ಕೆ ನರೇಂದ್ರ ಮೋದಿ ಆಡಳಿತ ಕಾರಣ. ದೇವರ ಬಳಿ ಕೇಳಿಕೊಂಡರು ನರೇಂದ್ರ ಮೋದಿಗಿಂತ ಉತ್ತಮ ಪ್ರಧಾನಿ ಯನ್ನು ಕೊಡಲು ಸಾಧ್ಯವಿಲ್ಲ ಎನ್ನಬಹುದು. ಅವರು ಪ್ರಧಾನಿಯಾಗಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಕೇಂದ್ರ ಸಂಪುಟದಲ್ಲಿ ಕರ್ನಾಟಕದ 5 ಮಂದಿಗೆ ಉತ್ತಮ ಖಾತೆಯೊಂದಿಗೆ ಸಚಿವ ಸ್ಥಾನ ನೀಡಲಾಗಿದೆ. ಇದರಿಂದ ರಾಜ್ಯದ ಅಭಿವೃದ್ಧಿಗೆ ಕೇಂದ್ರದ ಪಾಲು ಇನ್ನಷ್ಟು ಹೆಚ್ಚು ಸಿಗಲಿದೆ ಎಂದು ತಿಳಿಸಿದರು.

ಉತ್ತರ ಪ್ರದೇಶದ ಹಳ್ಳಿಯೊಂದರಲ್ಲೂ 560 ನಿರ್ಗತಿಕ ಕುಟುಂಬಕ್ಕೆ ಪ್ರಧಾನಮಂತ್ರಿ ಅವಾಸ್ ಯೋಜನೆಯಲ್ಲಿ ಕೇಂದ್ರದಿಂದ ಮನೆ ನಿರ್ಮಿಸಿಕೊಡಲಾಗಿದೆ. ಅಲ್ಲಿ ಎಲ್ಲಾ ಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವಿದೆ. ಅಲ್ಲಿ ಬಿಜೆಪಿಗೆ ಸಿಕ್ಕಿರುವುದು ಕೇವಲ 7 ಮತ, ಇವೆಲ್ಲ ಕಾಂಗ್ರೆಸ್ಸಿನ ಕುತಂತ್ರದಿಂದ ಈಗಾಗಿದೆ. ಬಿಜೆಪಿ ಅಭ್ಯರ್ಥಿ ಗೆದ್ದ ಕಡೆ ಇವಿಎಂನಲ್ಲಿ ದೋಷವಿದೆ ಎನ್ನುವ ಕಾಂಗ್ರೆಸ್ ಅವರದೆ ಅಭ್ಯರ್ಥಿಗಳು ಗೆದ್ದ ಕಡೆ ಇವಿಎಂ ಬಗ್ಗೆ ಚಕಾರವೆತ್ತುವುದಿಲ್ಲ. ಬಿಜೆಪಿ ಗೆದ್ದರೆ ಸಂವಿಧಾನ ಬದಲಾಯಿಸುತ್ತಾರೆ. ಎಂದು ಸುಳ್ಳು ಪ್ರಚಾರ ಪಡಿಸುತ್ತಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಸ್ಮಾರಕವನ್ನು ಪ್ರಧಾನಿ ಮೋದಿ ಅಭಿವೃದ್ಧಿಪಡಿಸಿದ್ದನ್ನು ಕಾಂಗ್ರೆಸ್ ಹೇಳುತ್ತಿಲ್ಲ. ನನ್ನನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೆಳಕ್ಕೆ ಹಾಕಲಾಯಿತು ಎಂದು ಕೆಲವರು ಮಾತನಾಡಿಕೊಂಡಿದ್ದರು. ನನಗೆ ಸೂಕ್ತ ಸ್ಥಾನಮಾನ ನೀಡುವುದು ಅಥವಾ ಬಿಡುವುದು ಪಕ್ಷಕ್ಕೆ ಬಿಟ್ಟ ವಿಚಾರ ಎಂದು ಪಕ್ಷವನ್ನು ನಂಬಿಕೊಂಡಿದ್ದೆ. ಆದರೂ ನನಗೆ ಉತ್ತಮ ಸ್ಥಾನಮಾನವನ್ನು ಪಕ್ಷ ನೀಡಿದೆ ಎಂದು ತಿಳಿಸಿದರು.

ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಮೂಡಿಗೆರೆ ಕಾಂಗ್ರೆಸಿನಲ್ಲಿ ಒಬ್ಬರು ಹಾಲಿ ಶಾಸಕಿ, ಮೂವರು ಮಾಜಿ ಶಾಸಕರು ಸೇರಿ ನಾಲ್ವರು ಒಟ್ಟಾಗಿದ್ದಾರೆ. ಇಲ್ಲಿ ಕಾಂಗ್ರೆಸ್ಸಿನ ಗ್ಯಾರಂಟಿ ಯೋಜನೆಯಿಂದ ಬಿಜೆಪಿ ಶ್ರಮ ಅರ್ಥ ವಾಗಬಹುದು ಎಂದು ವಿಚಲಿತರಾಗಿದ್ದೆವು. ಕಾರ್ಯಕರ್ತರ ಶ್ರಮದಿಂದ ಗೆಲುವು ಸಿಕ್ಕಿದೆ. ಸಿ.ಟಿ.ರವಿ ಅವರಿಗೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಸ್ಥಾನವನ್ನು ನೀಡಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಕೋಟ ಶ್ರೀನಿವಾಸ್ ಪೂಜಾರಿ ಮತ್ತು ಸಿ.ಟಿ.ರವಿ ಅವರನ್ನು ಸನ್ಮಾನಿಸಲಾಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಬಿಜೆಪಿ ತಾಲೂಕು ಅಧ್ಯಕ್ಷ ಟಿ.ಎಂ.ಗಜೇಂದ್ರ, ಜೆಡಿಎಸ್ ಕ್ಷೇತ್ರ ಸಮಿತಿಯ ಅಧ್ಯಕ್ಷ ಡಿ.ಜೆ.ಸುರೇಶ್, ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಜೆಡಿಎಸ್ ಮುಖಂಡರಾದ ಎಂ.ಎಸ್.ಬಾಲಕೃಷ್ಣೇಗೌಡ, ಜಿ.ಕೆ.ಮಂಜಪ್ಪಯ್ಯ, ಬಿಜೆಪಿ ಮುಖಂಡರಾದ ದೀಪಕ್ ದೊಡ್ಡಯ್ಯ, ಹಳಸೆ ಶಿವಣ್ಣ, ಕವೀಶ್, ಕೆ.ಸಿ.ರತನ್, ಎಂ.ಆರ್.ಜಗದೀಶ್, ಕೆ.ಆರ್.ಕೇಶವ, ವಿ.ಕೆ.ಶಿವೇಗೌಡ, ಡಿ.ಎಸ್.ಸುರೇಂದ್ರ, ಬಿ.ಎನ್.ಜಯಂತ್, ಎಂ.ಎನ್.ಕಲ್ಲೇಶ್, ಸುದರ್ಶನ್, ಬಸವಳ್ಳಿ ರವಿ, ಜೆ.ಎಸ್.ರಘು,  ಪಂಚಾಕ್ಷರಿ, ಧನಿಕ್, ಪ್ರಶಾಂತ್, ನಯನ ತಳವಾರ, ವಿನಯ್ ಹಳೆಕೋಟೆ, ಇತರರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ