ಹಾಸನದಲ್ಲಿ ಹಾಡಹಗಲೇ ರೌಡಿಶೀಟರ್ ಒಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಇಂದು ಮುಂಜಾನೆ ನಡೆದಿದೆ.
ಚೈಲ್ಡ್ ರವಿ (45) ಹತ್ಯೆಯಾದ ಕುಖ್ಯಾತ ರೌಡಿಶೀಟರ್. ನಗರದ ಹೇಮಾವತಿ ನಗರ ಬಡಾವಣೆಯಲ್ಲಿ ಕುಡಿಯುವ ನೀರು ತರಲೆಂದು ದ್ವಿ ಚಕ್ರ ವಾಹನದಲ್ಲಿ ಹೊರಟಿದ್ದ ರವಿಯನ್ನು ಹಿಂದಿನಿಂದ ವಾಹನ ಢಿಕ್ಕಿ ಹೊಡೆಸಿ ಕೆಳಗೆ ಬೀಳಿಸಿದ ದುಷ್ಕರ್ಮಿಗಳು ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ತಪ್ಪಿಸಿಕೊಳ್ಳಲು ಅವಕಾಶವೇ ಸಿಗದಂತೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು, ಪರಿಣಾಮ ರವಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಅವರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಹಿಮ್ಸ್ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.
ಚೈಲ್ಡ್ ರವಿ ಸಹ್ಯಾದ್ರಿ ಚಿತ್ರಮಂದಿರದ ಎದುರು ನಡೆದಿದ್ದ ಸ್ಲಂ ಮಂಜನ ಹತ್ಯೆ ಸೇರಿದಂತೆ ಕೊಲೆ, ಅತ್ಯಾಚಾರ, ದರೋಡೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದನು. 2 ತಿಂಗಳ ಹಿಂದಷ್ಟೇ ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಬಂದಿದ್ದ.