ನಾಗರಹಾವೊಂದು ಗಾಬರಿಯಿಂದ ಮನೆಯ ಸೀಲಿಂಗ್ ಫ್ಯಾನ್ ಗೆ ಸುತ್ತಿಹಾಕಿಕೊಂಡು ಮನೆಮಂದಿಯನ್ನು ಆತಂಕದಲ್ಲಿ ತಳ್ಳಿದ್ದ ಘಟನೆಯೊಂದು ಸಕಲೇಶಪುರದಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದ ಹಳೇ ಸಂತವೇರಿ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಫ್ಯಾನ್ನಲ್ಲಿ ಸುರಳಿ ಸುತ್ತಿಕೊಂಡು ಹೆಡೆ ಎತ್ತಿ ಕುಳಿತುಕೊಂಡಿದ್ದ ನಾಗರಹಾವು ಮನೆಯವರಲ್ಲಿ ಭಯ ಹುಟ್ಟಿಸಿತ್ತು.
ಸಂತವೇರಿ ಬಡಾಣೆಯಲ್ಲಿರುವ ಮನೆಯೊಂದರ ಅಟ್ಟದ ಮೇಲೆ ನಾಗರಹಾವು ಅಡಗಿ ಕುಳಿತಿತ್ತು. ಹಾವು ಕಂಡು ಭಯಭೀತರಾದ ಮನೆ ಮಂದಿ ಕಿರುಚಾಡುತ್ತಿದ್ದಂತೆಯೇ ಅದು ಫ್ಯಾನ್ ಏರಿ ಕುಳಿತುಕೊಂಡಿದೆ.
ಫ್ಯಾನ್ ಆನ್ ಮಾಡಿದ ಕೂಡಲೇ ಹಾವು ಹೆಡೆ ಎತ್ತಿ ಬುಸುಗುಟ್ಟಿದೆ. ನಂತರ ಮನೆಯ ಮಾಲೀಕರು ಉರುಗ ತಜ್ಞ ದಸ್ತಗೀರ್ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅವರು ನಾಗರಹಾವನ್ನು ಸುರಕ್ಷಿತವಾಗಿ ಹಿಡಿದು ದೋಣಿಗಾಲ್ ಅರಣ್ಯಕ್ಕೆ ಬಿಟ್ಟಿದ್ದಾರೆ.
ಫ್ಯಾನ್ನಲ್ಲಿ ಸುರಳಿ ಸುತ್ತಿ ಹೆಡೆ ಎತ್ತಿಕೊಂಡು ಕುಳಿತುಕೊಂಡಿದ್ದ ಈ ಹಾವಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗುತ್ತಿದೆ.