October 5, 2024

ಜಪಾನಿನ ಮಿಯಾವಾಕಿ ವಿಧಾನದ ಮೂಲಕ ಗಿಡಬೆಳೆಸಿ ದಟ್ಟಹಸಿರನ್ನು ಹೆಚ್ಚಿಸುವ ಪ್ರಯೋಗ ಚಿಕ್ಕಮಗಳೂರು ನಗರದ ಮೂರು ಪ್ರತಿಷ್ಠಿತ ಕುಟುಂಬಗಳ ಮಕ್ಕಳಿಂದ ಇಂದು ಅಧಿಕೃತವಾಗಿ ಚಾಲನೆಗೊಂಡಿದೆ.

ನಗರದಿಂದ ಐದಾರು ಕಿ.ಮೀ.ದೂರದ ಕೈಮರ ಸಮೀಪದ ಹೊಸಳ್ಳಿ ಪಲ್ಲಕ್ಕಿಹರದ ಸುಮಾರು 4,000ಚದರ ಅಡಿಯಲ್ಲಿ 600ಗಿಡಗಳನ್ನು ಪ್ರಥಮ ಹಂತದಲ್ಲಿ ಬೆಳೆಸುವ ಯೋಜನೆ ಪ್ರಾರಂಭ ಗೊಂಡಿದೆ. ಸ್ಥಳೀಯ ತಳಿಯ ಮಾವು, ಹಲಸು, ಪನ್ನೇರಳೆ, ಹುಣಸೆ, ನೆಲ್ಲಿ, ಸೀಬೆ, ಸಂಪಿಗೆ, ಮತ್ತಿ, ಅತ್ತಿ ಸಸಿಗಳನ್ನು ನೆಡಲಾಗುತ್ತಿದೆ.

ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ನಿರ್ವಾಣಸ್ವಾಮಿ ಮಠದಮನೆಯ ಅಂದಿತಾ ಅಜಯ್, ಅರಳಗುಪ್ಪೆ ಕುಟುಂಬದ ಎ.ಎನ್.ಧ್ರುವ ಮತ್ತು ತೊಗರಿಹಂಕಲ್ ಕುಟುಂಬದ ವೇದಾಂತಿ ಈ ಮೂವರು ಮಕ್ಕಳು ತಮ್ಮ ಬಂಧುಗಳು ಹಾಗೂ ಸ್ನೇಹಿತರೊಂದಿಗೆ ಮಿಯಾವಾಕಿ ವಿಧಾನ ಅನುಸರಿಸಿ ಗಿಡನೆಡುವ ಮೂಲಕ ಹಸಿರೀಕರಣದ ಕಾರ್ಯ ಆರಂಭಿಸಿದ್ದಾರೆ.

ಶ್ರೀಗುರುನಿರ್ವಾಣಸ್ವಾಮಿ ಮಠದ ಕಾರ‍್ಯದರ್ಶಿ ಇಂಜಿನಿಯರ್ ಅಜಯ್‌ದಂಪತಿಗಳು ಮಿಯಾವಾಕಿ ವಿಧಾನದ ಹಸಿರೀಕರಣದಿಂದ ಆಕರ್ಷಿತರಾಗಿ ಮಕ್ಕಳಿಗೆ ಪ್ರೇರೇಪಿಸಿದ ಪರಿಣಾಮ ಹಸಿರುಕ್ಕಿಸುವ ಕಾರ್ಯ ಆರಂಭಗೊಂಡಿದೆ. ಶ್ರೀಮಠದ ಪಲ್ಲಕ್ಕಿಹರ ವರ್ಷದ ಜಾತ್ರೆ ಸಂದರ್ಭದಲ್ಲಿ ಮಾತ್ರ ಹೆಚ್ಚು ಬಳಕೆಗೊಳ್ಳುತ್ತಿತ್ತು. ಸುತ್ತಲಿನ ಜನ ತ್ಯಾಜ್ಯ ಸುರಿಯುತ್ತಿದ್ದರು.
ಇಲ್ಲಿ ಸುಮಾರು 4,000ಚದರ ಅಡಿ ಪ್ರದೇಶಕ್ಕೆ ಬೇಲಿ ನಿರ್ಮಿಸಿ ಕಿರುಅರಣ್ಯಕ್ಕೆ ರಕ್ಷಣೆ ಒದಗಿಸಲಾಗಿದೆ. ಮೂರು ಬ್ಲಾಕ್‌ಗಳಾಗಿ ವಿಂಗಡಿಸಿ ಭೂಮಿಯನ್ನು ಜೆಸಿಬಿ ಬಳಸಿ ಸಮತಟ್ಟುಗೊಳಿಸಲಾಗಿದೆ. ಮೂರು ಅಡಿ ಆಳದ ಮಣ್ಣುತೆಗೆದು ಹಸುವಿನಗೊಬ್ಬರ, ಕಬ್ಬಿನಜಲ್ಲೆಪುಡಿ, ಹೊಸಮಣ್ಣು ಮಿಶ್ರಣವನ್ನು ಹರವಲಾಗಿದೆ. ಹೊಸತಂತ್ರಜ್ಞಾನದ ಗುಳಿತೆಗೆಯುವ ಯಂತ್ರಬಳಸಿ ಮೂರುಅಡಿಗೊಂದು ಗುಳಿತೆಗೆದು ಸ್ಥಳೀಯ ಸಸ್ಯಪ್ರಬೇಧಗಳನ್ನು ನೆಡಲಾಗುತ್ತಿದೆ.

ಬಂಧುಮಿತ್ರರೂ ಒಂದೊೊಂದು ಗಿಡ ನೆಟ್ಟು ಬೆಂಬಲಿಸಿದ್ದಾರೆ. ಮೂರ‍್ನಾಲ್ಕು ದಿನಗಳಲ್ಲಿ 600ಸಸಿಗಳ ಆರೋಹಣಕ್ಕೆ ವ್ಯವಸ್ಥೆಯಾಗಿದೆ.

ಚಿಕ್ಕಮಗಳೂರು ಗಾಲ್ಫ್ ಕ್ಲಬ್ ಅಧ್ಯಕ್ಷ ಎ.ಬಿ.ಸುದರ್ಶನ್ ಮಕ್ಕಳ ಸಾಹಸ ಅಭಿನಂದಿಸಿ ಮಾತನಾಡಿ ಜನಸಂಖ್ಯೆ ಹೆಚ್ಚಳದಿಂದ ಕೃಷಿಭೂಮಿ-ಅರಣ್ಯಗಳೆಲ್ಲ ಕಾಂಕ್ರೀಟಿಕರಣಗೊಳ್ಳುತ್ತಿದೆ. ಜಾಗತಿಕ ತಾಪಮಾನ ಹೆಚ್ಚಾಗಿ ಭೂಮಂಡಲವೇ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ವಿಶ್ವದ ಪರಿಸರ ತಜ್ಞರು ಹಸಿರು ಹೆಚ್ಚಿಸುವ ಪರಿಹಾರ ಸೂಚಿಸಿರುವ ಸಂದರ್ಭದಲ್ಲಿ ನಮ್ಮೂರಮಕ್ಕಳು ಹೊಸ ಸಾಹಸಕ್ಕೆ ಕೈಹಾಕಿರುವುದು ಮಾದರಿ ಎಂದರು.

ಮಿಯಾವಾಕಿ ವಿಧಾನದ ಅರಣ್ಯದಲ್ಲಿ ಹಸಿರೆ ಹೆಚ್ಚಾಗಿದ್ದು, ಹಕ್ಕಿಪಕ್ಷಿಗಳು, ಚಿಟ್ಟೆದುಂಬಿಗಳು, ಚಿಕ್ಕಪುಟ್ಟ ಪ್ರಾಣಿಗಳು ಆಶ್ರಯ ಪಡೆಯಬಹುದು. ಸೂರ್ಯ ಕಿರಣಗಳು ಇಲ್ಲಿ ನೆಲ ತಲುಪುವುದು ಕಷ್ಟಕರವಾಗಿದ್ದು ಟಿಂಬರ್‌ಗೆ ಅವಕಾಶವಿಲ್ಲ. ಪ್ರಪಂಚದ ವಿವಿಧೆಡೆ ವಿಶೇಷವಾಗಿ ನಗರಪ್ರದೇಶಗಳಲ್ಲಿ ಚಿಕ್ಕಜಾಗದಲ್ಲಿ ಅರಣ್ಯ ಸೃಷ್ಟಿಸುವ ಕಾರ‍್ಯ ಇದಾಗಿದೆ ಎಂದ ಸುದರ್ಶನ್, ಸಂಘಸಂಸ್ಥೆಗಳು, ಸರ್ಕಾರಿ ಇಲಾಖೆಗಳು ಈ ನಿಟ್ಟಿನಲ್ಲಿ ಆಸಕ್ತಿ ವಹಿಸಬೇಕೆಂದರು.

ಯೋಜನೆಯ ವಿವರಗಳನ್ನು ಮುಂದಿಟ್ಟ ರೂವಾರಿ ಇಂಜಿನಿಯರ್ ಎಂ.ಅಜಯ್ ಜಪಾನಿನ ಸಸ್ಯಶಾಸ್ತ್ರಜ್ಞ ಹಾಗೂ ಪರಿಸರವಾದಿ ಅಕಿರಾ ಮಿಯಾವಾಕಿ 1980ರ ದಶಕದಲ್ಲಿ ಕಿರುಪ್ರದೇಶಗಳಲ್ಲೆ ಒತ್ತೊತ್ತಾಗಿ ಸ್ಥಳೀಯ ಸಸ್ಯಪ್ರಬೇಧಗಳನ್ನು ಬೆಳೆಸುವ ನೂತನಪದ್ಧತಿ ಪರಿಚಯಿಸಿದರು. ಗಿಡಗಳು ಬೆಳಕು ಮತ್ತು ಶಾಖಪಡೆಯಲು ಸ್ಪರ್ಧಾತ್ಮಕವಾಗಿ ಅಸ್ಥಿತ್ವಕ್ಕಾಗಿ ವೇಗಗತಿಯಲ್ಲಿ ಊರ್ಧ್ವಮುಖಿಯಾಗಿ ಬೆಳೆಯುತ್ತದೆ. ಸಾಮಾನ್ಯ ಅರಣ್ಯಕ್ಕಿಂತ ಹತ್ತುಪಟ್ಟು ವೇಗವಾಗಿ ಇಲ್ಲಿ ಬೆಳವಣಿಗೆ ಕಾಣಬಹುದು. ಭೂಮಿಕೊರತೆ ವ್ಯಾಪಕವಾಗಿರುವ ಹಿನ್ನಲೆಯಲ್ಲಿ ಸಣ್ಣಪ್ರದೇಶಗಳಲ್ಲಿ ಹಸಿರುಕ್ಕಿಸುವ ಪದ್ಧತಿ ಹೆಚ್ಚು ಜನಪ್ರಿಯಗೊಳ್ಳುತ್ತಿದೆ ಎಂದರು.

ಪಲ್ಲಕ್ಕಿಹರದಲ್ಲಿ ಆರಂಭಗೊಂಡಿರುವ ಯೋಜನೆ ಸ್ವಲ್ಪ ದುಬಾರಿಯಾಗಿದ್ದು ಮುಂಬರುವ ದಿನಗಳಲ್ಲಿ ಹಂತ ಹಂತವಾಗಿ ವಿಸ್ತರಿಸುವ ಯೋಜನೆ ಇದೆ ಎಂದ ಅಜಯ್ ಮಕ್ಕಳ ಮೂಲಕ ಸಮಾಜದಲ್ಲಿ ಹಸಿರು ಜಾಗೃತಿ ಮೂಡಿಸುವ ಪುಟ್ಟ ಪ್ರಯತ್ನವಿದು ಎಂದರು.

ಗಾಲ್ಫ್ ಕ್ಲಬ್ ಕ್ಯಾಪ್ಟನ್ ಎ.ಬಿ.ರವಿಶಂಕರ್, ಟಿಎಂಎಸ್ ಕಾರ್ಯದರ್ಶಿ ಅರ್ಪಿತಾನಿತಿನ್ ಹಿರಿಯ ಕಾಫಿಬೆಳೆಗಾರ ಮಲ್ಲಣ್ಣಗೌಡ, ಮಾಧ್ಯಮಸಂಸ್ಕೃತಿ ಪ್ರತಿಷ್ಠಾನ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ, ಶ್ರೀನಿರ್ವಾಣಸ್ವಾಮಿ ಮಠದ ಧರ್ಮಕರ್ತ ಎನ್.ಮಹೇಶ್ ಮತ್ತಿತರರು ಸಾಕ್ಷೀಕರಿಸಿದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ