October 5, 2024

ಚಿಕ್ಕಮಗಳೂರು ದೋಣಿಖಣದ ಜಾತ್ರೆಯ ಪ್ರಯುಕ್ತ ಶ್ರೀ ಕೊಲ್ಲಾಪುರದಮ್ಮ ಸೇರಿದಂತೆ ಐದು ದೇವಗಣಗಳ ಸಿಡಿಮಹೋತ್ಸವ ಶ್ರದ್ಧಾಭಕ್ತಿಯೊಂದಿಗೆ ನೆರವೇರಿತು.

ಶುಕ್ರವಾರ ಮಧ್ಯಾಹ್ನದ ವೇಳೆಗೆ ದೋಣಿಖಣ, ಕೋಟೆ, ಮೂರುಮನೆಹಳ್ಳಿ, ಹೊಸಮನೆ ಮತ್ತು ಶಂಕರಪುರದ ಗ್ರಾಮಸ್ಥರು ಕೊಲ್ಲಾಪುರದಮ್ಮನವರ ದೇವಾಲಯದ ಆವರಣದಲ್ಲಿ ಜಮಾಯಿಸಿದರು.

ಸಿಡಿಕಂಬದ ಪೂಜೆ ನೆರವೇರಿತು. ಎತ್ತು ಮತ್ತು ಗಾಡಿಗಳನ್ನು ಸುಂದರವಾಗಿ ಅಲಂಕರಿಸಿ ತಂದು ತೀರ್ಥಪ್ರೋಕ್ಷಣೆ ಮಾಡಿಸಲಾಯಿತು.
ಮುಂಭಾಗದ ಹೆದ್ದಾರಿಯಲ್ಲಿ ಅಂದಚಂದದ ಎತ್ತು-ಹೋರಿಗಳನ್ನು ಹುರಿದುಂಬಿಸಿ ಚಾಟಿಬೀಸಿ ಹೊಡೆದು ಕೆರಳಿಸಿ ಅತಿವೇಗವಾಗಿ ಓಡಿಸಲಾಯಿತು. ಮೂಗುದಾರ ಹಿಡಿದ ಯುವಕರ ಪಡೆ ಅವುಗಳ ಹಿಂದೆಯೆ ಓಡಿ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದರು. ಎತ್ತಿನಗಾಡಿಗಳ ಓಟವೂ ನಡೆದಿತ್ತು.

ಇಳಿಹೊತ್ತು ಜಾರುತ್ತಿದ್ದಂತೆ ಶ್ರೀಕೊಲ್ಲಾಪುರದಮ್ಮ, ಮುತ್ತಿನಮ್ಮ, ಚಿಕ್ಕಮ್ಮ, ಉಗ್ರಾಣದಮ್ಮ, ಭೂತಪ್ಪ ದೇವರಗಳ ಪೂಜೆಯ ನಂತರ ಗಣಮಕ್ಕಳ ಮೇಲೆ ಆವಾಹನೆಯಾಯಿತು. ಮಂಗಳವಾದ್ಯಗಳು ಮೊಳಗಿದಂತೆ ಸರಪಳಿ, ತ್ರಿಶೂಲ ಸಿಕ್ಕಿಸಲಾಯಿತು. ಹಣೆಗೆ ಕುಂಕುಮಹಚ್ಚಿ ಹೂವಿನ ಹಾರಗಳನ್ನು ಕೊರಳಿಗೆಹಾಕಿ ಗಣಮಕ್ಕಳಿಗೆ ಪೂಜೆ ಸಲ್ಲಿಸಲಾಯಿತು. ದೇವರೊಂದಿಗೆ ಗಣಮಕ್ಕಳು ಸುತ್ತಮುತ್ತಲಿನ ಜನವಸತಿ ಪ್ರದೇಶದಲ್ಲಿ ಮೆರವಣಿಗೆ ಸಾಗಿ ಪೂಜೆ ಸ್ವೀಕರಿಸಿ ಆಶೀರ್ವದಿಸಿ ದೇವಸ್ಥಾನಕ್ಕೆ ಹಿಂತಿರುಗುವ ವೇಳೆಗೆ ಕತ್ತಲು ಆವರಿಸಿತ್ತು.

ಸಾವಿರಾರು ಭಕ್ತರು ದೇವಸ್ಥಾನ ಆವರಣದಲ್ಲಿ ಜಮಾಯಿಸಿ ಸಿಡಿಉತ್ಸವ ಕಣ್ತುಂಬಿಕೊಳ್ಳಲು ಗಂಟೆಗಟ್ಟಲೆ ಕಾಯ್ದುನಿಂತರು. ಸುತ್ತಲ ಎತ್ತರದ ಕಟ್ಟಡಗಳು ಹಾಗೂ ಮರಗಳ ಮೇಲೂ ಹತ್ತಿನಿಂತು ವೀಕ್ಷಿಸಿದರು.

7.30ರವೇಳೆಗೆ ದೇವಾಲಯದ ಒಳಗೆ ಗಣಮಕ್ಕಳ ಪೂಜೆ ನಂತರ ಆವರಣದಲ್ಲಿ ದೇವಿಗಣಗಳ ನರ್ತನ ಜನರ ಹರ್ಷೋದ್ಘಾರಗಳ ನಡುವೆ ನಡೆಯಿತು.

ಶಾಸಕ ಎಚ್.ಡಿ.ತಮ್ಮಯ್ಯ ದೇವಿಗೆ ಪೂಜೆಸಲ್ಲಿಸಿದರು. ಸಿಡಿಕಂಬದ ಪೂಜೆ, ಬಲಿಪೂಜೆ ನಡೆದ ನಂತರ ಶ್ರೀಕೊಲ್ಲಾಪುರದಮ್ಮ ದೇವಿಗಣವನ್ನು ಮೊದಲು ಸಿಡಿಕಂಬಕ್ಕೆ ಹೊಸವಸ್ತ್ರದಿಂದ ಬಿಗಿದುಕಟ್ಟಿ ಮೂರುಸುತ್ತು ತಿರುಗಿಸಲಾಯಿತು. ಉಗ್ರಾಣದಮ್ಮ, ಚಿಕ್ಕಮ್ಮ, ಗುಂಡಮ್ಮ ನಂತರ ಭೂತಪ್ಪದೇವ ಗಣಗಳನ್ನು ಸಿಡಿಕಂಬಕ್ಕೆ ಕಟ್ಟಿ ಆಡಿಸಲಾಯಿತು. ಭಕ್ತರ ಜಯಘೋಷದ ನಡುವೆ ಗಣಮಕ್ಕಳು ಮೇಲಿನಿಂದ ಹೂವು ಪತ್ರೆ ಪ್ರಸಾದರೂಪದಲ್ಲಿ ಎಸೆಯುತ್ತಿದ್ದನ್ನು ಭಕ್ತಿಭಾವದಿಂದ ಕಣ್ಣಿಗೊತ್ತಿಕೊಂಡು ಜನರು ಸ್ವೀಕರಿಸಿದರು.

ಬಾನಂಗಳದಲ್ಲಿ ರಂಗುರಂಗಿನ ಸಿಡಿಮದ್ದುಗಳ ಚಿತ್ತಾರ ಆಕರ್ಷಕವಾಗಿತ್ತು. ಸಿಡಿಮುಗಿದ ನಂತರ ಪುಟಾಣಿಮಕ್ಕಳನ್ನು ಸಿಡಿಕಂಬಕ್ಕೆ ಮುಟ್ಟಿಸಿ ದೇವಿಗಣಗಳಿಂದ ಆಶೀರ್ವಾದ ಪಡೆಯುವುದರೊಂದಿಗೆ ಪ್ರಸಕ್ತಸಾಲಿನ ಸಿಡಿಉತ್ಸವ ಸಂಪನ್ನಗೊಂಡಿತು.

ಶಾಸಕ ಎಚ್.ಡಿ.ತಮ್ಮಯ್ಯ, ಸೇವಾಸಮಿತಿಯ ಪ್ರಮುಖರಾದ ಕೆ.ರಾಮಣ್ಣ, ಈಶಣ್ಣ, ಮಧು, ರಂಗನಾಥ್, ಸೋಮಣ್ಣ, ಶಂಕರ್, ನಾಗೇಶ್, ಅಪ್ಸರ್‌ಅಹಮ್ಮದ್ ಸೇರಿದಂತೆ ನೂರಾರು ಯುವಕರು ಸಿಡಿಉತ್ಸವದ ಮುಂಚೂಣಿಯಲ್ಲಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ