October 5, 2024

ಕನ್ನಡದ ಪ್ರಥಮ ಕವಿಯತ್ರಿ ಅಕ್ಕಮಹಾದೇವಿ ಧೀಮಂತ ಆದರ್ಶ ಮಹಿಳೆ ಎಂದು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಹಿರಿಯ ಶುಶ್ರೂಷಕಿ ಸಾವಿತ್ರಿ ಯತೀಶ್ ಅಭಿಪ್ರಾಯಿಸಿದರು.

ಅಕ್ಕಮಹಾದೇವಿ ಮಹಿಳಾ ಸಂಘ ಶ್ರೀಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ರತ್ನಗಿರಿ ಮತ್ತು ರಾಮನಹಳ್ಳಿ ಬಡಾವಣೆಯ ಶರಣೆ ಮುಕ್ತಾಯಕ್ಕ ಗುಂಪಿನ ಅಕ್ಕಮಹಾದೇವಿ ಜಯಂತಿ ಉದ್ಘಾಟಿಸಿ ನಿನ್ನೆ ಸಂಜೆ ಅವರು ಮಾತನಾಡಿದರು.

12ನೆಯ ಶತಮಾನದಲ್ಲಿ ಬಸವಣ್ಣನವರ ನೇತೃತ್ವದ ಅನುಭವ ಮಂಟಪವನ್ನು ಪ್ರವೇಶಿಸಿದ ಮೊಟ್ಟಮೊದಲ ಮಹಿಳೆ ಅಕ್ಕ. ವಚನಗಳನ್ನು ರಚಿಸಿ ಸಮಾಜ ಲೋಪದೋಷಗಳನ್ನು ತಿದ್ದುವ ಪ್ರಯತ್ನ ಮಾಡಿದ ಧೀಮಂತೆ. ಶೋಷಣೆಯ ವಿರುದ್ಧ ಧೈರ್ಯವಾಗಿ ಧ್ವನಿಯೆತ್ತಿ ಹಲವರ ಕೆಂಗಣ್ಣಗೂ ಗುರಿಯಾದಾಕೆ. ಮಾನಾಪಮಾನಗಳಿಗೆ ಅಂಜದೆ ಅಳುಕದೆ ನೇರ ನುಡಿಯ ಮೂಲಕ ಅಭಿಪ್ರಾಯಗಳನ್ನು ವಚನಗಳ ಮೂಲಕ ನಾಡಿಗೆ ಸಾರಿದವರೆಂದು ಬಣ್ಣಿಸಿದರು.

ಜೀವನ ಜಂಜಾಟವನ್ನು ಧೈರ್ಯವಾಗಿ ಎದುರಿಸಬೇಕೆಂದು ಶತಮಾನಗಳ ಹಿಂದೆಯೆ ನುಡಿದು ನಡೆದವಳು. ‘ಬೆಟ್ಟದಮೇಲ್ಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೆಂತೊಡೆ… ವಚನವನ್ನು ವಿಶ್ಲೇಷಿಸಿದ ಸಾವಿತ್ರಿ, ಬದುಕಿನ ಏರಿಳಿತ ಸಮಚಿತ್ತದಿಂದ ನೋಡಬೇಕು. ಆಸೆ ಆಮಿಷಗಳಿಗೆ ಬಲಿಯಾಗಬಾರದು. ಕಷ್ಟಸುಖಗಳು ಸಮುದ್ರದ ನೆರೆತೊರೆಯಂತೆ ಬಂದುಹೋಗುವಂತಹದ್ದು, ಅವೇನೂ ಶಾಶತ್ವವಲ್ಲ. ಸಂತೆಯಲ್ಲಿ ಮನೆಮಾಡಿ ಶಬ್ದಕ್ಕೆ ನಾಚುವುದು ಅಗತ್ಯವಿಲ್ಲ. ಜನರ ನಿಂದನೆಗೆ ತಲೆಕೆಡಿಸಿಕೊಳ್ಳಬಾರದೆಂದು ಹೇಳಿರುವ ಅಕ್ಕ, ನಾಡಿನ ದಿಟ್ಟ ಮಹಿಳೆ ಎಂದರು.

ಮಹಿಳೆಯರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಆಸಕ್ತಿ ತೋರಬೇಕು. ಹೆಣ್ಣುಮಕ್ಕಳ ಹಾರೈಕೆಗೆ ಗಮನಕೊಡಬೇಕು. ಮಕ್ಕಳು ಟಿ.ವಿ., ಮೊಬೈಲ್, ಅಂತರ್ಜಾಲದಲ್ಲಿ ಮುಳುಗಿರದಂತೆ ಎಚ್ಚರವಹಿಸಬೇಕೆಂದ ಸಾವಿತ್ರಿ, ಹದಿಹರೆಯದ ಮಕ್ಕಳಲ್ಲಿ ವಿಶೇಷವಾಗಿ ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಬೇಕೆಂದರು.

ಅಕ್ಕಮಹಾದೇವಿ ಮಹಿಳಾ ಸಂಘ ಅಧ್ಯಕ್ಷೆ ಯಮುನಾಸಿ.ಶೆಟ್ಟಿ ಅಧ್ಯಕ್ಷತೆವಹಿಸಿ ಮಾತನಾಡಿ ಮಹಿಳಾ ಸಂಕುಲಕ್ಕೆ ಹೆಮ್ಮೆಯಾಗಿರುವ ಅಕ್ಕನ ಜನ್ಮದಿನವಿದು. ಶರಣ ಸಮೂಹದಲ್ಲಿ ದಿಟ್ಟತನದಿಂದ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದರ ಜೊತೆಗೆ ಬೆಡಗಿನವಚನಗಳ ಮೂಲಕ ಗಮನಸೆಳೆಯುತ್ತಾಳೆ ಎಂದರು.
ತಂಡದ ಮುಖಂಡೆ ಈಶ್ವರಿಹುಲಿಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ನಾಯಕತ್ವಕ್ಕೆ ಅಕ್ಕ ಮಾದರಿ. ಸೇವೆ ಮತ್ತು ಸ್ಥಾನಗಳ ಮೂಲಕ ಸಮಾಜದಲ್ಲಿ ಒಂದಷ್ಟು ಒಳ್ಳೆಯ ಕೆಲಸಗಳನ್ನು ಮಾಡಲು ಮುಂದೆ ಬರಬೇಕು ಎಂದರು.

ಪದಾಧಿಕರಿಗಳಾದ ಭಾರತಿಶಿವರುದ್ರಪ್ಪ, ನಾಗಮಣಿ, ಹೇಮಲತಾ, ವನಜಾಕ್ಷಮ್ಮಶಿವರುದ್ರಯ್ಯ ಮತ್ತಿತರರು ವೇದಿಕೆಯಲ್ಲಿದ್ದರು.
ಸದಸ್ಯರಾದ ಲೀಲಾಜಯಣ್ಣ ಸ್ವಾಗತಿಸಿ, ರಮ್ಯಸತೀಶ್ ನಿರೂಪಿಸಿದರು, ಶೈಲಾಜಗದೀಶ್ ಅತಿಥಿ ಪರಿಚಯಿಸಿದರು. ಮಂಗಳಾ ತಂಡ ಪ್ರಾರ್ಥಿಸಿದ್ದು, ಸುಜಾತ, ಅನುಷಾ ಮತ್ತು ಉಷಾ ತಂಡ ನಾಡಗೀತೆ ಹಾಡಿದ್ದು, ಸುಧಾ ವಂದಿಸಿದರು. ಈಶ್ವರಿ ಅವರಿಂದ ವಚನಗಾಯನ ನಡೆಯಿತು.
ಭಾಗ್ಯಮಹೇಶ್, ವಿಮಲಾ, ಪ್ರತಿಮಾ ಮತ್ತು ವೀಣಾ ತಂಡದವರಿಂದ ಗಜಲಕ್ಷ್ಮಿ ಮದುವೆ ಕಿರುನಾಟಕ ನಡೆಯಿತು. ಶ್ವೇತಾ, ಮಾನಸ, ರಮ್ಯ ತಂಡದ ಜಾನಪದನೃತ್ಯ ಆಕರ್ಷಕವಾಗಿತ್ತು. ವಿವಿಧ ಆಟೋಟ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ