October 5, 2024

ಕರ್ನಾಟಕದಲ್ಲಿ ಮೊದಲನೇ ಹಂತದಲ್ಲಿ ಏಪ್ರಿಲ್ 26ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೇಂದ್ರ ಚುನಾವಣಾ ಆಯೋಗದ ಮಾರ್ಗದರ್ಶನದಂತೆ ಮುಕ್ತ ಹಾಗೂ ವ್ಯವಸ್ಥಿತವಾಗಿ ಮತದಾನ ನಡೆಸಲು ಚಿಕ್ಕಮಗಳೂರು ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ.

ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆಯಲಾಗಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್ ಅವರು ಸಿದ್ಧತೆಗಳ ಮಾಹಿತಿ ನೀಡಿದರು.

ಈ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಮತ್ತು ಹಾಸನ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಕಡೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 1229 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಪ್ರತಿ ಮತಗಟ್ಟೆಗೆ ಶೇ.125ರಂತೆ ವಿದ್ಯುನ್ಮಾನ ಮತ ಯಂತ್ರಗಳನ್ನು ಮತ್ತು ಅದಕ್ಕೆ ಶೇ.115 ರಷ್ಟು ವಿ.ವಿ ಪ್ಯಾಟ್‌ಗಳನ್ನು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.

ಮತದಾನ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಲು 5400 ಸಿಬ್ಬಂದಿಗಳನ್ನು ನಿಯೋಜನೆಗೆ ಮಾಡಲಾಗಿದ್ದು ಈಗಾಗಲೇ 2 ಸುತ್ತು ತರಬೇತಿ ನೀಡಲಾಗಿದ್ದು ನಾಳೆ 3ನೇ ಸುತ್ತಿನ ತರಬೇತಿ ನೀಡುವ ಮೂಲಕ ಮತಗಟ್ಟೆ ಅಧಿಕಾರಿಗಳಿಗೆ ಉಸ್ತುವಾರಿ ನೀಡಲಾಗಿದೆ ಎಂದು ಹೇಳಿದರು.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರು ಸಹಾಯಕ ಚುನಾವಣಾಧಿಕಾರಿಗಳನ್ನು ನಿಯೋಜಿಸಲಾಗಿದ್ದು ಊಟ ತಿಂಡಿ ಹಾಗೂ ಮತಯಂತ್ರಗಳ ಸರಬರಾಜಿಗೆ ಸಕಲ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಮತಗಟ್ಟೆಗಳಲ್ಲಿ ಕುಡಿಯುವ ನೀರು ವಿದ್ಯುತ್ ಸೇರಿದಂತೆ ಮೂಲ ಸೌಕರ್ಯಗಳ ಜೊತೆಗೆ ಪ್ರತಿ ಮತಗಟ್ಟೆಗೆ ಆರೋಗ್ಯ ಕಿಟ್ ನೀಡಲಾಗಿದ್ದು ಮತಗಟ್ಟೆ ಸಿಬ್ಬಂದಿ ಅಥವಾ ಮತದಾರರಿಗೆ ಯಾವುದೇ ತೊಂದರೆ ಆಗದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಈ ಭಾರಿ ತಾಪಮಾನ ಹೆಚ್ಚಾಗಿರುವುದರಿಂದ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ 35 ಹಾಗೂ ತರೀಕೆರೆ ಕ್ಷೇತ್ರದಲ್ಲಿ 40 ಹೆಚ್ಚುವರಿ ಕೊಠಡಿಗಳನ್ನು ಕಾಯ್ದಿಸಿಕೊಳ್ಳಲಾಗಿದೆ. ಮಲೆನಾಡು ಭಾಗದಲ್ಲಿ ಮಳೆಸೂಚನೆ ಇರುವುದರಿಂದ ಪರಿಸ್ಥಿತಿಗನುಗುಣವಾಗಿ ಹೆಚ್ಚುವರಿ ಕೊಠಡಿ ಹಾಗೂ ಟೆಂಟ್ ನಿರ್ಮಾಣಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದು ಆಂಬುಲೆನ್ಸ್ ಸೇರಿದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಚುನಾವಣಾ ಆಯೋಗದ ನಿರ್ದೇಶನದಂತೆ ಒಟ್ಟು 1224 ಮತಗಟ್ಟೆಗಳಲ್ಲಿ ಶೇ.60 ರಷ್ಟು ಮತ ಕೇಂದ್ರಗಳಿಗೆ ವೆಬ್‌ಕ್ಯಾಸ್ಟಿಂಗ್ ಮೂಲಕ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿದೆ. ವಿದ್ಯುತ್ ಹಾಗೂ ಇಂಟರ್‌ನೆಟ್ ವ್ಯವಸ್ಥೆ ಇಲ್ಲದ 18 ಮತಗಟ್ಟೆಗಳಿಗೆ ಮೈಕ್ರೋ ವೀಕ್ಷಕರುಗಳ ಮೂಲಕ ಮಾಹಿತಿ ಪಡೆಯುವ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದರು.

ಚುನಾವಣೆಯಲ್ಲಿ ಅಕ್ರಮ ನಡೆಯದಂತೆ ಜಿಲ್ಲಾಡಳಿತ ಅಗತ್ಯ ಗಟ್ಟಿ ಕ್ರಮಕೈಗೊಂಡಿದ್ದು ವಿವಿಧ ತನಿಖಾಠಾಣೆಗಳಲ್ಲಿ 3615502 ಲಕ್ಷ ರೂ ನಗದು, 139523000 ರೂ ಬೆಲೆಯ ಚಿನ್ನಾಭರಣ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದು 460 ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

ಚುನಾವಣೆಗೆ ನಿಯೋಜನೆಗೊಂಡಿರುವ ಸಿಬ್ಬಂದಿಯರಿಗೆ ಹಾಗೂ ಸಿಬ್ಬಂದಿಗಳಿಗೆ ಅಂಚೆ ಮೂಲಕ ಮತದಾನ ಮಾಡಲು ಅವಕಾಶ ಅವಕಾಶ ಕಲ್ಪಿಸಿದ್ದು ಶೇ.24 ರಷ್ಟು ಮತದಾನವಾಗಿದೆ ಎಂದು ಹೇಳಿದರು.

ಜಿಲ್ಲಾ ಸ್ವೀಪ್ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ|| ಬಿ. ಗೋಪಾಲಕೃಷ್ಣ ಮಾಹಿತಿ ನೀಡಿ ಹಿಂದಿನ ಲೋಕಸಭಾ ಚುನಾವಣೆಗೆ ಶೇ. 75ರಷ್ಟು ಪ್ರಮಾಣದಲ್ಲಿ ಮತದಾನವಾಗಿದ್ದು ಕಡಿಮೆ ಪ್ರಮಾಣದಲ್ಲಿ ಮತದಾನವಾಗಿರುವ ಸ್ಥಳಗಳಲ್ಲಿ ಕಾರಣ ತಿಳಿದುಕೊಂಡು ಮತದಾನದ ಪ್ರಮಾಣ ಹೆಚ್ಚಿಸುವ ಸಲುವಾಗಿ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದ್ದು ಶೇ.78 ರಿಂದ 80 ರಷ್ಟು ಪ್ರಮಾಣದಲ್ಲಿ ಮತದಾನವಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಮತದಾನ ಹೆಚ್ಚಿಸುವ ಸಲುವಾಗಿ ಆಯಾ ಸ್ಥಳಗಳ ಐತಿಹಾಸಿಕ ಆಕರ್ಷಣೆಯೊಂದಿಗೆ ಮತಗಟ್ಟೆ ಸ್ಥಾಪಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕನಿಷ್ಟ 5ರಂತೆ ಸಖೀ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಯೋ ವೃದ್ಧರು ಹಾಗೂ ಅಂಗವಿಕಲರು ಮತಗಟ್ಟೆಗೆ ಬಂದು ಮತ ಚಲಾಯಿಸಿ ಹೋಗಲು ಅನುಕೂಲವಾಗುವಂತೆ ವಾಹನದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.

ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ|| ವಿಕ್ರಮ ಅಮಟೆ ಮಾತನಾಡಿ ಹಾಸನ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಕಡೂರು ವಿಧಾನಸಭಾ ಕ್ಷೇತ್ರ ಮತ್ತು ಜಿಲ್ಲೆಯಲ್ಲಿ ಬರುವ ಒಟ್ಟು 1229 ಮತಗಟ್ಟೆಗಳಿಗೆ ಚುನಾವಣಾ ಆಯೋಗದ ನಿರ್ದೇಶನದಂತೆ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಹೇಳಿದರು.

ಸೂಕ್ಷ್ಮ-ಅತಿಸೂಕ್ಷ್ಮ ಸಾಮಾನ್ಯ ಮತಗಟ್ಟೆಗಳನ್ನು ಗುರುತಿಸಲಾಗಿದ್ದು ಸೂಕ್ತ ಬಂದೋಬಸ್ತ್‌ಗಾಗಿ ಕೇಂದ್ರ ಮೀಸಲು ಪಡೆಯ 2 ತಂಡ, ಕೇಂದ್ರ ಮಹಿಳಾ ಮೀಸಲು ಪಡೆಯ 1 ತಂಡ, 8 ತುಕಡಿ ಕೆಎಸ್‌ಆರ್‌ಪಿ ಪಡೆ ಸೇರಿದಂತೆ 2,000ಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಕೆಲವು ಭಾಗಗಳಲ್ಲಿ ಕಾಡಾನೆ ಹಾವಳಿ ಇರುವ ಪ್ರದೇಶಗಳಲ್ಲಿ ವಿಶೇಷವಾಗಿ ಪರಿಗಣಿಸಿ ಅರಣ್ಯ ಇಲಾಖೆ ಸಿಬ್ಬಂದಿಯವರನ್ನು ನೇಮಿಸಲಾಗಿದೆ. ಗೃಹರಕ್ಷಕರ ನೆರವು ಪಡೆಯಲಾಗಿದ್ದು ಯಾರಿಗೂ ತೊಂದರೆ ಆಗದಂತೆ ಊಟ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಮತದಾನವಾದ ನಂತರ ಮತ ಚಲಾಯಿಸಲ್ಪಟ್ಟ ವಿದ್ಯುನ್ಮಾನ ಮತಯಂತ್ರಗಳನ್ನು ಕಂಟೇನರ್ ಮೂಲಕ ಬೆಂಗಾವಲು ಪಡೆಯೊಂದಿಗೆ ಕೊಪ್ಪದವರೆಗೆ ಸಾಗಿಸಿ ಅಲ್ಲಿಂದ ಉಡುಪಿಯ ಸ್ಟ್ರಾಂಗ್ ರೂಂಗೆ ಸಾಗಿಸಲಾಗುವುದೆಂದು ಹೇಳಿದರು.

ಒಟ್ಟಾರೆ ಶಾಂತಿ ಸುವ್ಯವಸ್ಥೆಯಿಂದ ಮತದಾನ ನಡೆಸಲು ಜಿಲ್ಲಾಡಳಿತದೊಂದಿಗೆ ಎಲ್ಲಾ ಅಗತ್ಯ ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೊಂಡಿದೆ ಎಂದು ತಿಳಿಸಿದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ