October 5, 2024

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಸದಸ್ಯ ಸ್ಥಾನ ಕೊಡಿಸುವ ಆಮಿಷವೊಡ್ಡಿ  ಶಿಕ್ಷಕಿಯೊಬ್ಬರ ಬಳಿ 4.10 ಕೋಟಿ ರೂ. ಪಡೆದು ವಂಚಿಸಿದ್ದ ಜಾಲವನ್ನು ಬಯಲಿಗೆಳೆದಿರುವ ಸಿಸಿಬಿ ಪೊಲೀಸರು, ಓರ್ವ ಸರಕಾರಿ ನೌಕರ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.

ಬೆಂಗಳೂರಿನ ತಾವರೆಕೆರೆ ನಿವಾಸಿ ರಿಯಾಜ್‌ ಅಹಮದ್‌ (41), ಮಲ್ಲೇಶ್ವರದ ಯೂಸುಫ್‌ ಸುಬ್ಬೆಕಟ್ಟೆ (47), ತೋಟಗಾರಿಕೆ ಇಲಾಖೆ ನೌಕರ ಸಿ. ಚಂದ್ರಪ್ಪ (44), ಕನಕಪುರ ಮೂಲದ ರುದ್ರೇಶ್‌ ಕಹಳೆ (35) ಬಂಧಿತರು.

ಆರೋಪಿಗಳ ಬಳಿ 40 ಲಕ್ಷ ರೂ. ಜಪ್ತಿ ಮಾಡಲಾಗಿದ್ದು, ವಂಚನೆ ಕೃತ್ಯದಲ್ಲಿ ಪಾಲ್ಗೊಂಡು ತಲೆಮರೆಸಿಕೊಂಡಿರುವ ಇನ್ನೂ ನಾಲ್ವರ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಆರೋಪಿಗಳು, ಕೆಪಿಎಸ್‌ಸಿ ಸದಸ್ಯ ಸ್ಥಾನಕ್ಕೆ ಶಿಫಾರಸು ಕುರಿತಾದ ಸರ್ಕಾರದ ನಡಾವಳಿ, ಟಿಪ್ಪಣಿ, ಮುಖ್ಯಂತ್ರಿಗಳ ನಕಲಿ ಸಹಿ ಪತ್ರ ಹಾಗೂ ರಾಜ್ಯಪಾಲರ ಹೆಸರಿನಲ್ಲಿ ನಕಲಿ ಆದೇಶ ಪತ್ರವನ್ನೂ ಸೃಷ್ಟಿಸಿ ವಂಚಿಸಿರುವ ಅಂಶ ಬೆಳಕಿಗೆ ಬಂದಿದೆ.

ಆರೋಪಿಗಳು  ಇನ್ನೂ ಹಲವರಿಗೆ ವಂಚಿಸಿರುವ ಶಂಕೆಯಿದ್ದು,  ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಭಾವಿಗಳ ಜೊತೆಗಿನ ಫೋಟೋ ತೋರಿಸಿ ವಂಚನೆ

ಪ್ರಮುಖ ಆರೋಪಿ ರಿಯಾಜ್‌ ಅಹಮದ್‌, ಈ ಹಿಂದೆಯೂ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಣ್ಣ ನನಗೆ ಅತ್ಯಂತ ಆಪ್ತರು ಎಂದು ರಿಯಾಜ್‌ ಹೇಳಿಕೊಳ್ಳುತ್ತಿದ್ದ ಎನ್ನಲಾಗಿದೆ. ಉಳಿದ ಆರೋಪಿಗಳು ಕೂಡ ರಾಜ್ಯದ ಪ್ರಭಾವಿ ರಾಜಕಾರಣಿಗಳ ಜತೆ ಪೋಟೊಗಳನ್ನು ತೆಗೆಸಿಕೊಂಡಿದ್ದು, ಈ ಪೋಟೊಗಳನ್ನೇ ಬಂಡವಾಳ ಮಾಡಿಕೊಂಡು ಅಮಾಯಕರಿಗೆ ಇಲ್ಲಸಲ್ಲದ ಕಥೆಗಳನ್ನು ಹೇಳಿ ಸರಕಾರಿ ಯೋಜನೆ, ಸರ್ಕಾರಿ ಹುದ್ದೆ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿರುವ ಪ್ರವೃತ್ತಿ ಹೊಂದಿದ್ದಾರೆ. ಈ ಪ್ರಕರಣದಲ್ಲೂ ಸಂತ್ರಸ್ತೆಗೆ ಪ್ರಭಾವಿಗಳ ಜತೆಗಿನ ಪೋಟೊ ತೋರಿಸಿ ವಂಚಿಸಿರುವುದು ಗೊತ್ತಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಶಿಕ್ಷಕಿ ವಂಚನೆಯ ಬಲೆಗೆ 

ಕಲಬುರಗಿ ಜಿಲ್ಲೆಯ ಬ್ರಹ್ಮಾಪುರದ ನಿವಾಸಿ 54 ವರ್ಷದ ಚಿತ್ರಕಲೆ ಶಿಕ್ಷಕಿ ಪತಿ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದು, ಬೆಂಗಳೂರಿಗೆ ಆಗಾಗ್ಗೆ ಬಂದು ಹೋಗುತ್ತಿದ್ದರು. ಈ ಸಮಯದಲ್ಲಿಯೇ ವಿಧಾನಸೌದದಲ್ಲಿ  ರಿಯಾಜ್‌ಗೆ ಪರಿಚಯವಾಗಿದ್ದರು ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಾಗ ವಿಧಾನಸೌಧದ ಕಾರಿಡಾರ್‌ನಲ್ಲಿ ಮೊದಲು ಉಪನ್ಯಾಸಕಿಗೆ ರಿಯಾಜ್ ಪರಿಚಯವಾಗುತ್ತದೆ. ಬಳಿಕ ಆತನ ಬಳಿ ತಾನು ಕೆಪಿಎಸ್‌ಸಿ ಸದಸ್ಯತ್ವದ ಆಕಾಂಕ್ಷಿ ಆಗಿರುವುದಾಗಿ ಅವರು ಹೇಳಿದ್ದರು. ಆಗ ನಿಮಗೆ ಸಹಾಯ ಮಾಡುವುದಾಗಿ ಹೇಳಿದ ರಿಯಾಜ್‌, ಮತ್ತೊಬ್ಬ ದಲ್ಲಾಳಿ ಯೂಸಫ್‌ನನ್ನು ಉಪನ್ಯಾಸಕಿಗೆ ಪರಿಚಯಿಸಿದ್ದ. ತನಗೆ ರಾಜಕಾರಣಿಗಳ ಸ್ನೇಹವಿದೆ. ನಿಮಗೆ ಹುದ್ದೆ ಕೊಡಿಸುವುದಾಗಿ ನಂಬಿಸಿ ಒಂದು ಕೋಟಿಯನ್ನು ಯೂಸಫ್ ಪಡೆದ. ಆದರೆ ಹೇಳಿದಂತೆ ಆತ ಹುದ್ದೆ ಕೊಡಿಸಲಿಲ್ಲ.

ಕೊನೆಗೆ ತನ್ನ ಹಣ ಕೊಡುವಂತೆ ಆರೋಪಿಗಳಿಗೆ ಸಂತ್ರಸ್ತೆ ದುಂಬಾಲು ಬಿದ್ದರು. ಅದೇ ಹೊತ್ತಿಗೆ ವಿಧಾನಸೌಧದಲ್ಲಿ ರಿಯಾಜ್‌ಗೆ ರುದ್ರೇಶ್ ಮತ್ತು ಚಂದ್ರಪ್ಪ ಸಂಪರ್ಕಕ್ಕೆ ಬಂದಿದ್ದಾರೆ. ಈ ಇಬ್ಬರು ತಾವು ಕೆಪಿಎಸ್‌ಸಿ ಹುದ್ದೆ ಕೊಡಿಸುವುದಾಗಿ ನಂಬಿಸಿ ಮತ್ತೆ  3 ಕೋಟಿ ವಸೂಲಿ ಮಾಡಿದ್ದರು. ಆದರೆ ಹಣ ನೀಡಿದರೂ ಹುದ್ದೆ ಸಿಗದೆ ಹೋದಾಗ ಸಂತ್ರಸ್ತೆ, ತಾನು ಪೊಲೀಸ್ ದೂರು ಕೊಡುವುದಾಗಿ ಬೆದರಿಸಿದ್ದಾರೆ. ಆಗ ಮುಖ್ಯಮಂತ್ರಿ, ರಾಜ್ಯಪಾಲರ ಹೆಸರು ಬಳಸಿ ನಕಲಿ ನೇಮಕಾತಿ ಪತ್ರವನ್ನು ಸಂತ್ರಸ್ತೆ ಕೊಟ್ಟು ಟೋಪಿ ಹಾಕಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಈ ಆದೇಶಗಳನ್ನು ಶಿಕ್ಷಕಿ ದಂಪತಿ ಪರಿಶೀಲಿಸಿದ್ದು, ಇದು ನಕಲಿ ಎಂಬುದು ಅರಿವಿಗೆ ಬರುತ್ತಿದ್ದಂತೆ ಪೊಲೀಸರಿಗೆ ದೂರು ನೀಡಿದ್ದರು.

2023ರ ಜೂನ್‌ನಿಂದ 2024ರ ಮಾರ್ಚ್ ಅವಧಿ ನಡುವಣ ಅವಧಿಯಲ್ಲಿ ಆರೋಪಿಗಳು ಹಣ ಪಡೆದು ವಂಚಿಸಿದ್ದಾರೆ ಎಂದು ಶಿಕ್ಷಕಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ವಿವರಿಸಿದರು.

ಲೆಟರ್ಹೆಡ್ದುರ್ಬಳಕೆ 

ಮುಖ್ಯಮಂತ್ರಿ, ರಾಜ್ಯಪಾಲರ ಹೆಸರಿನಲ್ಲಿರುವ ಅಸಲಿ ಲೆಟರ್‌ಹೆಡ್‌ಗಳನ್ನು ಪಡೆದಿರುವ ಆರೋಪಿಗಳು ಅದೇ ಲೆಟರ್‌ಹೆಡ್‌ಗಳನ್ನು ಕಲರ್‌ ಜೆರಾಕ್ಸ್‌ ಮಾಡಿಸಿ ಸಿಎಂ, ರಾಜ್ಯಪಾಲರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ತಲೆಮರೆಸಿಕೊಂಡ ಆರೋಪಿಗಳ ಬಂಧನದ ಬಳಿಕ ಈ ಜಾಲದ ವಂಚನೆ ಕುರಿತು ಮತ್ತಷ್ಟು ಮಾಹಿತಿ ಸಿಗಲಿದ್ದು, ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿ ಹೇಳಿದರು.

ಮೂಡಿಗೆರೆಯಲ್ಲಿ ಚುನಾವಣೆಗೆ ನಿಂತಿದ್ದ ರುದ್ರೇಶ್ ಕಹಳೆ

ಈ ಪ್ರಕರಣದ ಆರೋಪಿಗಳಲ್ಲಿ ರಿಯಾಜ್‌ ತಾನು ಉದ್ಯಮಿ ಹಾಗೂ ರಾಜಕಾರಣಿ ಎಂದು ಹೇಳಿಕೊಂಡಿದ್ದಾನೆ. ಯೂಸುಫ್‌ ಮಲ್ಲೇಶ್ವರದಲ್ಲಿ ಅಕ್ಯೂರೆಟ್‌ ಟೈಂ ಇಂಡಿಯಾ ಪ್ರೈ ಲಿಮಿಟೆಡ್‌ ವಾಚ್‌ ತಯಾರಿಕಾ ಕಂಪನಿ ನಡೆಸುತ್ತಿದ್ದ. ಚಂದ್ರಪ್ಪ ಚಿಕ್ಕಮಗಳೂರು ಜಿ.ಪಂ.ನಲ್ಲಿ ತೋಟಗಾರಿಕಾ ಅಧಿಕಾರಿಯಾಗಿ ಕಳಸ ಮತ್ತು ಮೂಡಿಗೆರೆ ತೋಟಗಾರಿಕಾ ಕಛೇರಿಗಳಲ್ಲಿ ಕಾರ್ಯನಿರ್ವಹಿಸಿದ್ದ, ಈಗ್ಗೆ ಒಂದು ತಿಂಗಳಿಂದ ರಜೆಯ ಮೇಲೆ ತೆರಳಿದ್ದ ಎಂದು ತಿಳಿದುಬಂದಿದೆ.

ರುದ್ರೇಶ್‌ ಕಹಳೆಗೆ ಯಾವುದೇ ನಿರ್ದಿಷ್ಟ ಕೆಲಸವಿರಲಿಲ್ಲ. ಕನ್ನಡಪರ ಸಂಘಟನೆಯೊಂದರ ರಾಜ್ಯಾಧ್ಯಕ್ಷ ಎಂದು ಹೇಳಿಕೊಂಡು ತಿರುಗುತ್ತಿದ್ದ ರುದ್ರೇಶ್ ಕಹಳೆ ಮೂಲತಃ ಸಕಲೇಶಪುರ ತಾಲ್ಲೂಕಿನ ಯಸಳೂರು ಮೂಲದವನು ಎಂದು ಹೇಳುತ್ತಿದ್ದ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದಿಂದ ಜೆ.ಡಿ.ಎಸ್. ಅಭ್ಯರ್ಥಿಯಾಗಿ ಸ್ಪರ್ಧಿಸಿಬೇಕು ಎಂದು ಆಕಾಂಕ್ಷಿಯಾಗಿ ಪಕ್ಷದ ಚಟುವಟಿಕೆಗಳಲ್ಲಿ ಗುರುತಿಸಿಕೊಂಡು ಮೂಡಿಗೆರೆ ಕ್ಷೇತ್ರದಲ್ಲಿ ಓಡಾಡಿದ್ದ. ಆದರೆ ಜೆ.ಡಿ.ಎಸ್. ಟಿಕೆಟ್ ಸಿಗದೇ ಹೋದಾಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೇವಲ 468 ಮತಗಳನ್ನು ಗಳಿಸಿದ್ದ. ತಾನು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ದಿಮೆ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದ. ಆದರೆ ಈಗ ನೋಡಿದರೆ ವಂಚನೆ ಪ್ರಕರಣದಲ್ಲಿ ಹೆಸರು ಥಳುಕು ಹಾಕಿಕೊಂಡಿದೆ.

ಚಂದ್ರಪ್ಪ ಹೇಗೆ ಸಿಲುಕಿಕೊಂಡ ?

ತೋಟಗಾರಿಕಾ ಇಲಾಖೆಯಲ್ಲಿ ಸಹಾಯಕ ತೋಟಗಾರಿಕಾ ಅಧಿಕಾರಿಯಾಗಿರುವ ಚಂದ್ರಪ್ಪ ಹೇಗೆ ಈ ಜಾಲಕ್ಕೆ ಸೇರಿಕೊಂಡ ಎಂಬುದೇ ಯಕ್ಷಪ್ರಶ್ನೆಯಾಗಿದೆ. ಕಳಸ ಮತ್ತು ಮೂಡಿಗೆರೆ ಭಾಗದಲ್ಲಿ ಕೆಲಸ ಮಾಡಿದ್ದ ಚಂದ್ರಪ್ಪ ಈ ಭಾಗದಲ್ಲಿ ರೈತರಿಗೆ ಚಿರಪರಿಚಿತನಾಗಿದ್ದ ಮತ್ತು ಕೆಲ ಸಂಘ ಸಂಸ್ಥೆಗಳಲ್ಲಿಯೂ ತೊಡಗಿಸಿಕೊಂಡಿದ್ದ. ಚಿತ್ರದುರ್ಗಕ್ಕೆ ವರ್ಗಾವಣೆಯಾಗಿದ್ದ ಚಂದ್ರಪ್ಪ ಮತ್ತೆ ಚಿಕ್ಕಮಗಳೂರು ಜಿಲ್ಲೆಗೆ ವರ್ಗಾವಣೆಗೊಂಡಿದ್ದ ಎನ್ನಲಾಗಿದೆ. ಕಳೆದ ಒಂದು ತಿಂಗಳಿಂದ ಕೆಲಸಕ್ಕೆ ಬಾರದೇ ರಜೆ ಮೇಲೆ ತೆರಳಿದ್ದ ಎನ್ನಲಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೂಡಿಗೆರೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರುದ್ರೇಶ್ ಕಹಳೆಗೆ ಚಂದ್ರಪ್ಪ ಪರಿಚಯವಾಗಿತ್ತು  ಎನ್ನಲಾಗಿದೆ. ವಿಧಾನಸೌಧದಲ್ಲಿ ತನ್ನ ಮುಂಬಡ್ತಿ ಕಡತ ವಿಲೇವಾರಿಗೆ ಓಡಾಡುತ್ತಿದ್ದ ಚಂದ್ರಪ್ಪನಿಗೆ ಆಮೀಷ ಒಡ್ಡಿ ಕೆಪಿಎಸ್‌ಸಿ ವಂಚನೆ ಜಾಲಕ್ಕೆ ರುದ್ರೇಶ್ ಕಹಳೆ ಬಳಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಪಿಎಸ್‌ಸಿ ಸದಸ್ಯತ್ವದ ಕೊಡಿಸುವುದಾಗಿ ವಂಚನೆ ಕೃತ್ಯವು ನಯ ವಂಚಕರ ಜಾಲವಾಗಿದೆ. ಈ ಮೋಸ ಜಾಲದಿಂದ ವಂಚನೆಗೆ ಒಳಗಾದವರು ದೂರು ನೀಡಿದರೆ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತದೆ.

-ಬಿ.ದಯಾನಂದ್, ಪೊಲೀಸ್ ಆಯುಕ್ತ, ಬೆಂಗಳೂರು

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ