October 5, 2024

ನಮ್ಮೂರಿನ ಲೇಖಕ ಡಾ.ಸಂಪತ್ ಬೆಟ್ಟಗೆರೆ ಅವರ ಈವರೆಗಿನ ಸಾಹಿತ್ಯ ಕೃತಿಗಳಾದ ಸಾವಿರ ಸಾವಿರ ಶರಣು, ಕಾಲಗರ್ಭ, ಮೂಡಿಗೆರೆಯ ಮುದ್ದುಹಕ್ಕಿ ಪೂರ್ಣಚಂದ್ರ ತೇಜಸ್ವಿ ಎಂಬ ಸಾಹಿತ್ಯ ಕೃತಿಗಳು ಪ್ರಮುಖವಾಗಿ ಗ್ರಾಮೀಣ ಜೀವನ ವಿಧಾನದ ಪ್ರತೀಕದಂತಿವೆ. ಆದ್ದರಿಂದ ಅವರ ರಚನೆಗಳು ಪ್ರಚಾರ ಸಾಹಿತ್ಯವಾಗಿರದೆ, ವಿಚಾರ ಸಾಹಿತ್ಯ ಎಂದು ಗುರುತಿಸಬಹುದಾಗಿದೆ ಎಂದು ಸಾಹಿತ್ಯ ಹಾಗೂ ಸಂಸ್ಕøತಿ ಚಿಂತಕರಾದ ಬಿ.ಆರ್.ಯತೀಶ್ ಅವರು ಅಭಿಪ್ರಾಯಪಟ್ಟರು.

ಅವರು ಮೂಡಿಗೆರೆ ತಾಲ್ಲೂಕಿನ ಹಳಿಕೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಡಾ.ಸಂಪತ್ ಬೆಟ್ಟಗೆರೆ ಅವರ ನೆನಪಿನ ಓಣಿಯಲ್ಲಿ ಜನಪದಶಿಶುಪ್ರಾಸಗಳು ಎಂಬ ಪುಸ್ತಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

ನಮ್ಮ ಸುತ್ತಮುತ್ತಲಿನ ಪರಿಸರ, ಜನಜೀವನ, ಜನಪದ ಸಾಹಿತ್ಯ, ಆಚಾರ ವಿಚಾರಗಳು ಸಂಪದ್ಭರಿತವಾದ ಸಾಂಸ್ಕøತಿಕ ವಾತಾವರಣವನ್ನು ಅನಾವರಣಗೊಳಿಸುತ್ತವೆ. ಇದೇ ಪ್ರಕಾರವನ್ನು ತಮ್ಮ ಸೃಜನಶೀಲ ಸಾಹಿತ್ಯದ ಮುಖ್ಯ ಮಾರ್ಗವನ್ನಾಗಿ ಆಯ್ಕೆಮಾಡಿಕೊಂಡು ಸರಳವಾಗಿ ಬರೆಯುವ ಸಂಪತ್ ಅವರ ಭಾಷಿಕ ಶೈಲಿ ತುಂಬಾ ಸೊಗಸಾದ ಧಾಟಿಯನ್ನು ಹೊಂದಿದೆ. ಅದೇರೀತಿ ಈಗ ಪ್ರಕಟಗೊಂಡಿರುವ ನೆನಪಿನ ಓಣಿಯಲ್ಲಿ ಕೃತಿಯೂ ಕೂಡ ವಿನೂತನ ಸಂಶೋಧನಾ ಕೃತಿಯಾಗಿದ್ದು ಜನಪದ ಶಿಶುಪ್ರಾಸಗಳನ್ನು ಕ್ಷೇತ್ರಕಾರ್ಯ ಅಧ್ಯಯನದ ಜೊತೆಗೆ ಜನಪದ ವಿದ್ವಾಂಸರು, ಮಾಹಿತಿದಾರರೊಂದಿಗೆ ಸಂದರ್ಶಿಸಿ ರೂಪಿಸಿಕೊಟ್ಟಿರುವುದು ಸಂಪತ್ ಅವರ ಅಧ್ಯಯನಶೀಲತೆಗೆ ಸಾಕ್ಷಿಯಾಗಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಮೂಡಿಗೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್‍ ಚಂದ್ರ ಅವರು ಮಾತನಾಡಿ ನಮ್ಮ ಬಾಲ್ಯಕಾಲದಲ್ಲಿ ಹಾಡಿ ನಲಿಯುತ್ತಿದ್ದ ರತ್ತೋ ರತ್ತೋ ರಾಯನ ಮಗಳೆ, ಕಣ್ಣೇಮುಚ್ಚೆ ಕಾಡೇಗೂಡೇ, ಬಾರೋ ಬಾರೋ ಮಳೆರಾಯ ಶಿಶುಪ್ರಾಸಗಳು, ಶಿಶುಗೀತೆಗಳು ಸೊಗಸುಗಾರಿಕೆಯ ಜೊತೆಗೆ ನಮಗೊಂದು ಜೀವನ ಮೌಲ್ಯವನ್ನು ಕಲಿಸುತ್ತಿದ್ದವು. ಆದರಿಂದು ಇವುಗಳ ಬಳಕೆ ಮತ್ತು ಕಲಿಕೆ ಕಡಿಮೆಯಾಗುತ್ತ ಬರುತ್ತಿರುವುದು ನಿಜಕ್ಕೂ ವಿಷಾದನೀಯ ಸಂಗತಿಯಾಗಿದೆ. ಈ ಸಂದರ್ಭದಲ್ಲಿ ಇಂತದೊಂದು ಕೃತಿಯು ಹೊರಬರುತ್ತಿರುವುದು ಔಚಿತ್ಯಪೂರ್ಣವಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.

ಕೃತಿಯ ಲೇಖಕ ಡಾ.ಸಂಪತ್ ಬೆಟ್ಟಗೆರೆ ಅವರು ಮಾತನಾಡಿ ತಮ್ಮ ಕೃತಿ ರಚನೆಗಳಿಗೆ ತಂದೆ ಸದಾನಂದ, ತಾಯಿ ಗೀತಾ ಅವರ ಸಾಹಿತ್ಯಾಭಿರುಚಿ, ಗ್ರಾಮಸ್ಥರ ಪ್ರೀತಿಯ ಪ್ರೋತ್ಸಾಹ, ಶಿಕ್ಷಕರ ಮಾರ್ಗದರ್ಶನ ಪ್ರಮುಖವಾಗಿ ಆಸಕ್ತಿ ಬೆಳೆಸಿಕೊಳ್ಳಲು ಸಹಾಯಕವಾಯಿತು. ಅದರಂತೆ ನಾನು ಓದಿದ ನಮ್ಮೂರಿನ ಪ್ರಾಥಮಿಕ ಶಾಲೆಯಲ್ಲಿಯೇ ನನ್ನ ಕೃತಿಯನ್ನು ಈಗಿನ ವಿದ್ಯಾರ್ಥಿಗಳು, ಶಿಕ್ಷಕರು, ಗ್ರಾಮಸ್ಥರ ಸಮ್ಮುಖದಲ್ಲಿ ಲೋಕಾರ್ಪಣೆ ಮಾಡಲು ನಿರ್ಧರಿಸಿದೆ. ಅದಕ್ಕೆ ಇಲ್ಲಿನವರ ಸಹಕಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆಂದರು.

ಅಂಗನವಾಡಿ ಶಿಕ್ಷಕಿ ಲಲಿತ ಅವರು ಮಕ್ಕಳ ಬಾಲ್ಯದ ಆರಂಭದಿಂದ ಶಿಶುಪ್ರಾಸಗಳನ್ನು ಪೋಷಕರು, ಶಿಕ್ಷಕರು ಅಭ್ಯಾಸಮಾಡಿಸುವ ಪರಿಪಾಠ ಬೆಳಸಿಕೊಳ್ಳಬೇಕು ಎಂದರು. ಬೆಟ್ಟಗೆರೆ ನಿಂಗಮ್ಮ ಬೊಮ್ಮಯ್ಯ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಆಶಾಲತಾ ಅವರು ಪುಸ್ತಕವನ್ನು ಕೊಂಡು ಓದುವುದರ ಮೂಲಕ ಲೇಖಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಓದುಗರು ಆಲೋಚಿಸುವುದು ಇಂದು ಅತ್ಯಗತ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕ ಮಂಜನಾಯ್ಕ ಅವರು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳು, ವಿದ್ವಾಂಸರು, ಪ್ರಾಧ್ಯಾಪಕರ ನೇತೃತ್ವ ಇದ್ದೇ ಇರುತ್ತದೆ. ಆದರೆ ಇದು ವಿನೂತನವಾಗಿದೆ. ಗ್ರಾಮೀಣ ಪರಿಸರದ ಬಳುವಳಿಯಾದ ಜನಪದ ಶಿಶುಪ್ರಾಸಗಳನ್ನು ಆಧರಿಸಿದ ಕೃತಿಯೊಂದು ಅದರ ತಾಯಿನೆಲದಂತಿರುವ ಹಳ್ಳಿಯೊಂದರ ಅವರು ಓದಿದ್ದ ಶಾಲೆಯಲ್ಲಿ ಹೀಗೆ ಬಿಡುಗಡೆಯಾಗುತ್ತಿರುವುದು ಇದೇ ಮೊದಲೆನಿಸುತ್ತದೆ. ಲೇಖಕರ ಉದ್ದೇಶ ಫಲಪ್ರದ ಕಾಣಲಿ ಎಂದು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಬೆಟ್ಟಗೆರೆ ಗ್ರಾಮಪಂಚಾಯತ್ ಪಿಡಿಓ ಕೆ.ಎನ್.ದರ್ಶನ್, ಪುಸ್ತಕ ಪ್ರೇಮಿ ಎಚ್.ಎಸ್.ಪದ್ಮಾಕ್ಷೇಗೌಡ್ರು, ಎಚ್.ಕೆ.ಶಿವಕುಮಾರ್, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಸುರೇಂದ್ರ, ಹಿರಿಯ ಶಿಕ್ಷಕ ದಿಬ್ಬೇಗೌಡ, ಲೋಕೇಶ್ ಉಪಸ್ಥಿತರಿದ್ದರು. ಶಿಕ್ಷಕರಾದ ರೇಣುಕಮ್ಮ ನಿರೂಪಿಸಿ, ಕೇಶವ್ ಸ್ವಾಗತಿಸಿ, ಜಯಂತಿ ವಂದಿಸಿದರು. ಶಿಕ್ಷಕಿ ಸವಿತಾ ಮತ್ತು ಮಕ್ಕಳು ಶಿಶುಪ್ರಾಸದ ಮೂಲಕ ಪ್ರಾರ್ಥನೆಮಾಡಿದರು. ಪುಟಾಣಿ ಅವನಿದೀಪ ಶಿಶುಪ್ರಾಸ ಗಾಯನ ನಡೆಸಿಕೊಟ್ಟರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ