ಕಾವೇರಿಯಲ್ಲಿ ನದಿಯಲ್ಲಿ ಈಜಲು ಹೋಗಿದ್ದ ಯುವಕರ ಪೈಕಿ ನಾಲ್ವರು ಜಲಸಮಾಧಿಯಾಗಿರುವ ದಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿಯಲ್ಲಿ ಮುಳುಗಿ ಮೃತಪಟ್ಟವರನ್ನು ಮೈಸೂರು ಮೂಲದ 40 ವರ್ಷದ ನಾಗೇಶ್, 17 ವರ್ಷದ ಭರತ್, 32 ವರ್ಷದ ಗುರು ಮತ್ತು 16 ವರ್ಷದ ಮಹದೇವ್ ಎಂದು ಗುರುತಿಸಲಾಗಿದೆ. ಸದ್ಯ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಇನ್ನಿಬ್ಬರ ಮೃತದೇಹಕ್ಕಾಗಿ ಹುಡುಕಾಟ ನಡೆದಿದೆ.
ಮೈಸೂರಿನಿಂದ ಮಂಡ್ಯದ ಮಳವಳ್ಳಿ ತಾಲ್ಲೂಕಿನ ಮುತ್ತತ್ತಿಗೆ 40 ಜನರ ತಂಡ ಒಂದೇ ಬಸ್ನಲ್ಲಿ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ನಾಲ್ವರು ಕಾವೇರಿ ನದಿಯಲ್ಲಿ ಈಜಾಡಲು ಹೋಗಿದ್ದು, ಓರ್ವ ನೀರಿನಲ್ಲಿ ಮುಳುಗಿದ್ದಾನೆ. ಕೂಡಲೇ ಆತನನ್ನು ರಕ್ಷಿಸಲು ಮುಂದಾದ ಮೂವರು ನೀರಿನಲ್ಲಿ ಮುಳುಗಿ ದುರಂತ ಅಂತ್ಯ ಕಂಡಿದ್ದಾರೆ.
ಸೀತಾ ನದಿಯಲ್ಲಿ ಮೀನು ಹಿಡಿಯಲು ಹೋದ ಇಬ್ಬರು ಯುವಕರು ನೀರುಪಾಲು
ಮೀನು ಹಿಡಿಯಲು ಹೋದ ಇಬ್ಬರಿಬ್ಬರು ನೀರುಪಾಲಾದ ಘಟನೆ ಉಡುಪಿಯ ಬ್ರಹ್ಮಾವರ ತಾಲೂಕಿನ ಹೊಸಾಳ ಗ್ರಾಮದ ಸೀತಾ ನದಿಯಲ್ಲಿ ನಡೆದಿದೆ. ಹೊಸಾಳ ಗ್ರಾಮದ ಶ್ರೀಶ (21) ಹಾಗೂ ಪ್ರಶಾಂತ್ ಪೂಜಾರಿ (30) ಮೃತಪಟ್ಟವರು. ಸೋಮವಾರ ಬೆಳಗ್ಗೆ ಮೀನು ಹಿಡಿಯಲೆಂದು ನಾಗರಮಠದ ಸೀತಾ ನದಿಗೆ ಹೋಗಿದ್ದರು. ಮೀನಿಗೆ ಬಲೆ ಹಾಕುವಾಗ ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರು ಯುವಕರು ನೀರುಪಾಲಾಗಿದ್ದಾರೆ. ಇದೇ ವೇಳೆ ಅಲ್ಲಿದ್ದ ಸ್ಥಳೀಯರು ಮುಳುಗುತ್ತಿರುವವರ ರಕ್ಷಣೆಗೆ ಯತ್ನಿಸಿದ್ದಾರೆ. ಆದರೆ ನೀರಿನ ಸೆಳೆತ ಹೆಚ್ಚಾಗಿದ್ದರಿಂದ ರಕ್ಷಣೆ ಮಾಡುವಲ್ಲಿ ವಿಫಲರಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ, ಈಜು ತಜ್ಞರು ಹಾಗೂ ಸ್ಥಳೀಯರ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.