October 5, 2024

ಮೂಡಿಗೆರೆ ಪಟ್ಟಣದಲ್ಲಿ ಇವತ್ತು ಬಿ.ಜೆ.ಪಿ. ಎರಡು ಬಣಗಳ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿ ಪರಿವರ್ತನೆಯಾಯಿತು. ಮೂಡಿಗೆರೆ ಮಂಡಲ ವ್ಯಾಪ್ತಿಯ ಬಿ.ಜೆ.ಪಿ. ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಎರಡು ಬಣಗಳಾಗಿ ವಿಂಗಡಣೆಯಾಗಿದ್ದು, ಇವತ್ತು ಎರಡು ಬಣಗಳು ಪ್ರತ್ಯೇಕ ಸಭೆಗಳನ್ನು ನಡೆಸುವ ಮೂಲಕ ಪಕ್ಷದ ಭಿನ್ನಮತ ಬೀದಿಗೆ ಬಂದಿತ್ತು.

ಇವತ್ತು ಪಕ್ಷದ ಕಛೇರಿ ಪಾಂಚಜನ್ಯದಲ್ಲಿ ಮಂಡಲದ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಆಯೋಜಿಸಲು ಸಿದ್ಧತೆ ನಡೆಸಲಾಗಿತ್ತು. ಅದಕ್ಕಾಗಿ ಕಾರ್ಯಕರ್ತರನ್ನು ಆಹ್ವಾನಿಸಲಾಗಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ನೂತನ ಅಧ್ಯಕ್ಷರಾಗಿ ಟಿ.ಎಂ. ಗಜೇಂದ್ರ ಹಾಗೂ ಅವರ ತಂಡದ ಪದಾಧಿಕಾರಿಗಳು ಇವತ್ತು ಅಧಿಕಾರ ವಹಿಸಿಕೊಳ್ಳಬೇಕಾಗಿತ್ತು. ಆದರೆ ಆಗಿದ್ದೇ ಬೇರೆ.

ಮಂಡಲ ಅಧ್ಯಕ್ಷರ ಆಯ್ಕೆ ವಿಚಾರವಾಗಿ ಉಂಟಾಗಿದ್ದ ಗೊಂದಲ, ನೂತನ ಅಧ್ಯಕ್ಷರ ಆಯ್ಕೆಯನ್ನು ಪ್ರಕಟಿಸಿದ ದಿನ ನಡೆದ ಗಲಾಟೆ ಮತ್ತು ತಾ.ಪಂ. ಮಾಜಿ ಅಧ್ಯಕ್ಷ ಕೆ.ಸಿ. ರತನ್ ಅವರ ಮೇಲೆ ಹಲ್ಲೆ ಪ್ರಕರಣ, ಆ ನಂತರ ಹಲ್ಲೆ ನಡೆಸಿದ್ದರೆಂಬ ಆರೋಪದ ಮೇಲೆ ಬಣಕಲ್ ಹೋಬಳಿ ಅಧ್ಯಕ್ಷ ಪಿ.ಜಿ.ಅನುಕುಮಾರ್, ಗೋಣಿಬೀಡು ಹೋಬಳಿ ಅಧ್ಯಕ್ಷ ಭರತ್ ಕನ್ನೇಹಳ್ಳಿ ಇವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು.

ಇಂದು ಆಯೋಜಿಸಿದ್ದ ಪದಗ್ರಹಣ ಸಮಾರಂಭಕ್ಕೆ ಪರ್ಯಾಯವಾಗಿ ಪಿ.ಜಿ. ಅನುಕುಮಾರ್(ಪಟ್ಟದೂರು ಪುಟ್ಟಣ್ಣ) ಹಾಗೂ ಭರತ್ ಅವರ ಅಮಾನತು ಕ್ರಮವನ್ನು ಖಂಡಿಸಿ ಅವರ ಬೆಂಬಲಿಗರು ಪಟ್ಟಣದ ಪ್ರೀತಂ ಹಾಲ್ ನಲ್ಲಿ ಪ್ರತ್ಯೇಕ ಸಮಾವೇಶ ಮತ್ತು ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು. ಈ ಕಾರ್ಯಕ್ರಮದಲ್ಲಿ ಮಂಡಲದ ವ್ಯಾಪ್ತಿಯ ದೊಡ್ಡ ಪ್ರಮಾಣದ ಕಾರ್ಯಕರ್ತರು, ಪ್ರಮುಖ ಮುಖಂಡರು ಭಾಗವಹಿಸಿ ಅನುಕುಮಾರ್ ಮತ್ತು ಭರತ್ ಅವರಿಗೆ ತಮ್ಮ ನೈತಿಕ ಬೆಂಬಲ ಸೂಚಿಸಿದರು.

ಇತ್ತ ಪದಗ್ರಹಣ ಸಮಾರಂಭಕ್ಕೆ ಆಗಮಿಸಿಬೇಕಾಗಿದ್ದ ಲೋಕಸಭಾ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರ ಚಿಕ್ಕಮಗಳೂರು ಜಿಲ್ಲಾ ಪ್ರವಾಸ ರದ್ದಾಗಿತ್ತು. ಕೊನೆಗೆ ಪಕ್ಷದ ಕಛೇರಿಯಲ್ಲಿ ವಿಧಾನಪರಿಷತ್ ಉಪಸಭಾಪತಿ ಮತ್ತು ಪಕ್ಷದ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಅವರ ನೇತೃತ್ವದಲ್ಲಿ ಪ್ರಮುಖರ ಸಭೆ ನಡೆಸಿ ಪದಗ್ರಹಣ ಸಮಾರಂಭವನ್ನು ಮುಂದೂಡಲು ನಿರ್ಧರಿಸಲಾಯಿತು. ಪಕ್ಷದಲ್ಲಿ ಉಂಟಾಗಿರುವ ಗೊಂದಲವನ್ನು ಸರಿಪಡಿಸಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತ್ತೊಂದು ದಿನ ಪದಗ್ರಹಣ ಸಮಾರಂಭ ನಡೆಸಲು ತೀರ್ಮಾನಿಸಲಾಯಿತು. ಇಂದಿನ ಸಭೆಯನ್ನು ಕೇವಲ ಕಾರ್ಯಕರ್ತರ ಸಮಾವೇಶವಾಗಿ ಪರಿವರ್ತಿಸಿ ನಡೆಸಲಾಯಿತು.

 

ಒಟ್ಟಾರೆ ಇಂದು ಮೂಡಿಗೆರೆ ಬಿ.ಜೆ.ಪಿ.ಯಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ಪಕ್ಷಕ್ಕಾಗಿ ದಶಕಗಳ ಕಾಲ ಒಟ್ಟಾಗಿ ಕೆಲಸ ಮಾಡಿದ್ದ ನಾಯಕರುಗಳ ನಡುವೆಯೇ ಎರಡು ಸ್ಪಷ್ಟ ಬಣವಾಗಿದ್ದ ಗೋಚರವಾಯಿತು. ಇದು ಬಹಳಷ್ಟು ಕಾರ್ಯಕರ್ತರು ಮತ್ತು ಮುಖಂಡರಿಗೆ ಇಕ್ಕಟ್ಟಿನ ಸನ್ನಿವೇಶ ಸೃಷ್ಟಿಸಿತ್ತು.

ಮುಂದಿನ ದಿನಗಳಲ್ಲಿ ವೈಮನಸ್ಸು ಉಂಟಾಗಿರುವ ಮುಖಂಡರನ್ನು ರಾಜಿ ಸಂಧಾನದ ಮೂಲಕ ಒಗ್ಗೂಡಿಸಿ ಒಂದೇ ವೇದಿಕೆಯಲ್ಲಿ ಸೇರಿಸುವ ಬಗ್ಗೆ ವರಿಷ್ಠರು ನಿರ್ಧರಿಸಿರುವ ಸೂಚನೆ ಕಂಡು ಬಂತು. ಮುಂದಿನ ಬೆಳವಣಿಗೆ ಕಾದು ನೋಡಬೇಕು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ