October 5, 2024

ತುಳು ಭಾಷೆ ಕೇವಲ ಭಾಷೆಯಲ್ಲ. ಅದೊಂದು ಸಾಮರಸ್ಯ ಮೂಡಿಸುವ ದೈವದ ಭಾಷೆ. ಇಂತಹ ಭಾಷೆಯನ್ನು ಮುಂದಿನ ಪೀಳಿಗೆವರೆಗೂ ಉಳಿಸಿ ಬೆಳೆಸಲು ಎಲ್ಲಾ ತುಳು ಭಾಂದವರು ಮುಂದಾಗಬೇಕೆಂದು ಉಜಿರೆಯ ಎಸ್‍ಡಿಎಂ ಎಂಜಿನಿಯರ್ ಕಾಲೇಜಿನ ಉಪನ್ಯಾಸಕ ಡಾ.ರವೀಶ್ ಪಡುಮಲೆ ಹೇಳಿದರು.

ಅವರು ಶುಕ್ರವಾರ ಸಂಜೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ತುಳುಕೂಟದಿಂದ ಏರ್ಪಡಿಸಿದ್ದ ತುಳು ವೈಭವೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತುಳು ಭಾಷೆಗೆ ತನ್ನದೇ ಆದ ಇತಿಹಾಸವಿದೆ. ದೈವ ಸ್ವರೂಪದಿಂದ ಬಂದಂತಹ ಈ ಭಾಷೆ ಕರಾವಳಿಯಿಂದ ಘಟ್ಟ ಪ್ರದೇಶವಾಗಿರುವ ಮಲೆನಾಡಿನಲ್ಲಿ ಹಲವಾರು ವರ್ಷದಿಂದ   ಪ್ರಚಲಿತವಾಗಿದ್ದು, ಇತ್ತೀಚೆಗೆ ನಮ್ಮ ದೇಶ ಮಾತ್ರವಲ್ಲ ವಿದೇಶದಲ್ಲಿಯೂ ತುಳು ಭಾಷೆಗೆ ಅತ್ಯಂತ ಪ್ರಾಮುಖ್ಯತೆ ನೀಡಲಾಗುತ್ತಿದೆ. ತಂತ್ರಜ್ಞಾನ ಯುಗದಲ್ಲಿ ತುಳು ಭಾಷೆ, ಸಂಸ್ಕೃತಿ, ಆಚಾರ, ವಿಚಾರ ಮರೆಯಾಗುತ್ತಿದೆ.  ಎಷ್ಟೇ ವಿದ್ಯಾವಂತರಾದರೂ ನಮ್ಮ ಹಿರಿಯರು ಕಲಿಸಿಕೊಟ್ಟಿರುವ ಕುಲ ಕಸುಬನ್ನು ಮರೆಯಬಾರದು. ಆಗ ಮಾತ್ರ ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಚಿಕ್ಕಮಗಳೂರು ಸಂತ ಜೋಸೆಫರ ವಿದ್ಯಾವರ್ಧಕ ಸಂಘದ ಸ್ವಾಮಿ ಮಾರ್ಷಲ್ ಪಿಂಟೊ ಮಾತನಾಡಿ, ಹೊರ ರಾಜ್ಯ ಹಾಗೂ ದೇಶಗಳಲ್ಲಿ ತುಳು ಭಾಷೆ ಮಾತನಾಡಿದಾಗ ಉಂಟಾಗುವ ಆನಂದ ಹೇಳತೀರದು. ಈ ಸಮಾಜಕ್ಕೆ ಸಾಮರಸ್ಯ, ಶಾಂತಿ, ಪ್ರೀತಿ ಅವಶ್ಯಕ. ಅದನ್ನು ಬಿಟ್ಟು ಜಾತಿ, ಧರ್ಮಗಳ ನಡುವೆ ಬೆಂಕಿ ಇಡುವ ಕೆಲಸ ಮಾಡಬಾರದು. ಈ ನಾಡಿನಲ್ಲಿ ಹುಟ್ಟಿದ ಮೇಲೆ ಇಲ್ಲಿನ ಮಣ್ಣಿನ ಋಣ ತೀರಿಸುವ ಕೆಲಸ ಎಲ್ಲರೂ ಮಾಡಬೇಕೆಂದು ಕರೆ ನೀಡಿದರು.

ಉಲ್ಲಾಳದ ನಿವೃತ್ತ ಪ್ರಾಂಶುಪಾಲ ಟಿ.ಇಸ್ಮಾಹಿಲ್ ಮಾತನಾಡಿ, ನಮ್ಮ ಬಾಲ್ಯದ ಸಂದರ್ಭದಲ್ಲಿ ಯಾವುದೇ ಮತ ದರ್ಮಗಳ ಬೇಧವಿಲ್ಲದೇ ಎಲ್ಲರೂ ಒಗ್ಗೂಡಿಕೊಂಡು ಬೆಳೆದ ಕಾಲವಿತ್ತು. ಆದರೆ ಪ್ರಸಕ್ತ ಕಾಲದಲ್ಲಿ ಮತ ಪಂಥಗಳು ಎನ್ನುವಂತಹ ಹಣೆಪಟ್ಟಿ ಕಟ್ಟಿಕೊಂಡು ಬದುಕುವಂತಾಗಿದೆ. ಇದು ಮುಂದುವರೆಯಲು ಬಿಡಬಾರದು ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ತುಳು ಭಾಷಿಕರನ್ನು ಸನ್ಮಾನಿಸಲಾಯಿತು. ಸಮಾಜಸೇವಾ ಕ್ಷೇತ್ರದಿಂದ ಹಸೇನಾರ್ ಬಿಳಗುಳ, ರಾಜಕೀಯ ಕ್ಷೇತ್ರದಿಂದ ಬಿ.ಜೆ.ಪಿ. ಜಿಲ್ಲಾ ಅಧ್ಯಕ್ಷ ಎಂ.ಆರ್.ದೇವರಾಜ್‍ಶೆಟ್ಟಿ, ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಜೀಟಾ ವಿ.ಲೋಬೋ ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದ ಎಂ.ಎ.ರಶ್ಮೀ, ಕೆ.ಎಸ್.ಸುಜಿತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಉಡುಪಿಯ ತುಳುನಾಡ ರತ್ನ ದಿನೇಶ್ ಅತ್ತಾವರ ನಿರ್ದೇಶನದ ಶಾಂಭವಿ ಎಂಬ ತುಳುನಾಟಕ ಪ್ರದರ್ಶನ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳುಕೂಟದ ಅಧ್ಯಕ್ಷ ವಿನೋಧ್‍ಕುಮಾರ್ ಶೆಟ್ಟಿ ವಹಿಸಿದ್ದರು.

ತುಳುಕೂಟದ ಕಾರ್ಯದರ್ಶಿ ಜೀವನ್ ಕಳಮೆ, ಸಹ ಕಾರ್ಯದರ್ಶಿ ದಾಕ್ಷಾಯಿಣಿ, ಗೌರವಾಧ್ಯಕ್ಷರಾದ ಜಾನ್ ಡಿಸೋಜಾ, ಡಾ. ಕೆ.ರಾಮಚರಣ್ ಅಡ್ಯಂತಾಯ, ಖಜಾಂಚಿ ವಿಶ್ವಕುಮಾರ್, ಕಾರ್ಯಕ್ರಮದ ನಿರ್ದೇಶಕ ಹಮೀದ್ ಮತ್ತಿತರರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ