October 5, 2024

ನವದೆಹಲಿಯಲ್ಲಿ ರಾಜ್ಯದ ವಿಶೇಷ ಸಮನ್ವಯಕಾರರಾಗಿ ಸೇವೆ ಸಲ್ಲಿಸುತ್ತಿದ್ದ, ಕೇಂದ್ರ ಸರ್ಕಾರದ ನಿವೃತ್ತ ಅಧಿಕಾರಿ ಬೈಕೆರೆ ನಾಗೇಶ್ (73 ವರ್ಷ) ಅವರು ನಿಧನರಾಗಿದ್ದಾರೆ.

ಕೆಲ ದಿನಗಳ ಹಿಂದೆ ಅವರು ಮೆದುಳು ರಕ್ತಸ್ರಾವದಿಂದ ತೀವ್ರ ಅನಾರೋಗ್ಯಕ್ಕೆ ಈಡಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಬೈಕೆರೆ ಗ್ರಾಮದ ನಾಗೇಶ್ ಅವರು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯಾಗಿ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದರು.  ಅವರು ಕರ್ನಾಟಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಿದ್ದರು. ಅವರು ರಾಜ್ಯದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿ ಕೆಲಸ ಮಾಡಿದ್ದರು.

ಸ್ವತಃ ಕಾಫಿ ಬೆಳೆಗಾರರಾಗಿದ್ದ ಬೈಕೆರೆ ನಾಗೇಶ್ ಅವರು ಕಾಫಿ ಬೆಳೆಗಾರರ ಪರವಾಗಿ ಕೇಂದ್ರದಲ್ಲಿ  ವಕಾಲತ್ತು ವಹಿಸುತ್ತಿದ್ದರು. ಕಾಫಿ ಬೆಳೆಗಾರರ ಸಂಘಟನೆಗಳು ದೆಹಲಿಗೆ ಹೋದಾಗ ತಮ್ಮ ಅಹವಾಲನ್ನು ಕೇಂದ್ರ ಸರ್ಕಾರಕ್ಕೆ ತಲುಪಿಸಲು ಬೈಕೆರೆ ನಾಗೇಶ್  ನೆರವು ನೀಡುತ್ತಿದ್ದರು. ತಮ್ಮ ಕಛೇರಿಯನ್ನು ಕಾಫಿ ಬೆಳೆಗಾರರ ನಿಯೋಗದವರಿಗೆ ಮುಕ್ತವಾಗಿ ಬಳಸಿಕೊಳ್ಳಲು ಅನುವು ಮಾಡಿಕೊಡುತ್ತಿದ್ದರು.

ಸಕಲೇಶಪುರ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳಿಗೆ ಅವರು ಪ್ರೋತ್ಸಾಹ ನೀಡಿದ್ದರು. ಸಕಲೇಶಪುರ-ಬೇಲೂರು ರಸ್ತೆ ಅಭಿವೃದ್ಧಿಗೆ ಅವರು ವಿಶೇಷ ಅನುದಾನ ತರುವಲ್ಲಿ ಶ್ರಮಿಸಿದ್ದರು. ತಮ್ಮ ಹುಟ್ಟೂರು ಬೈಕೆರೆ ಗ್ರಾಮದಲ್ಲಿ ಭವ್ಯವಾದ ದೇವಾಲಯ ನಿರ್ಮಾಣಕ್ಕೆ ಮುಖ್ಯ ಕಾರಣಕರ್ತರಾಗಿದ್ದರು. ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಗಳಿಗೆ ಉದಾರವಾಗಿ ದಾನ ನೀಡುತ್ತಿದ್ದರು.

ಸುಮಾರು 20 ವರ್ಷಗಳ ಕಾಲ ಬೈಕೆರೆ ನಾಗೇಶ್ ಕೇಂದ್ರದ ವಿವಿಧ ಮಂತ್ರಾಲಯಗಳಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಕೇಂದ್ರ ಸಚಿವ ಧನಂಜಯ ಕುಮಾರ್ ಅವರೊಂದಿಗೆ ಕಾರ್ಯಕ್ರಮವೊಂದರಲ್ಲಿ ಬೈಕೆರೆ ನಾಗೇಶ್

2009ರಲ್ಲಿ ಅಂದಿನ ಸರ್ಕಾರ ಇವರನ್ನು ನವದೆಹಲಿಯಲ್ಲಿ ರಾಜ್ಯದ ಹೆಚ್ಚುವರಿ ವಿಶೇಷ ಪ್ರತಿನಿಧಿಯನ್ನಾಗಿ ನಂತರ ರಾಜ್ಯ ಸರ್ಕಾರದ ವಿಶೇಷ ಸಮನ್ವಯಕಾರನ್ನಾಗಿ ನೇಮಕ ಮಾಡಿತ್ತು. 2023ರಲ್ಲಿ ಬೈಕೆರೆ ನಾಗೇಶ್ ಅವರನ್ನು ನವದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಸಮನ್ವಯಕಾರರನ್ನಾಗಿ ರಾಜ್ಯ ಸರ್ಕಾರ  ನೇಮಕ ಮಾಡಿತ್ತು.

ಬೈಕೆರೆ ನಾಗೇಶ್ ಅವರು ಪತ್ನಿ ಸುಗುಣ, ಆರ್ಥಿಕ ತಜ್ಞರಾಗಿ ಅಮೇರಿಕಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಪುತ್ರಿ ಡಾ. ಅರ್ಪಿತ ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.

ಬೈಕೆರೆ ನಾಗೇಶ್ ಅವರ ಅಂತಿಮ ಸಂಸ್ಕಾರ ನಾಳೆ ಜನವರಿ 24 ಬುಧವಾರ ಮಧ್ಯಾಹ್ನ ಅವರ ಹುಟ್ಟೂರು ಸಕಲೇಶಪುರ ತಾಲ್ಲೂಕು ಬೈಕೆರೆಯಲ್ಲಿ ವೀರಶೈವ ಪದ್ಧತಿಯಂತೆ ನೆರವೇರಲಿದೆ.

ಸಂತಾಪ : ಬೈಕೆರೆ ನಾಗೇಶ್ ಅವರ ನಿಧನಕ್ಕೆ ಅನೇಕ ಗಣ್ಯರು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ. ಕಾಫಿ ಉದ್ದಿಮೆಗೆ ಅವರ ಕೊಡುಗೆಯನ್ನು ಸ್ಮರಿಸಿದ್ದಾರೆ. ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷರಾದ ಬಿ.ಎ. ಜಗನ್ನಾಥ್, ಅತ್ತಿಕಟ್ಟೆ ಜಗನ್ನಾಥ್, ಬಿ.ಎಸ್.ಜಯರಾಂ, ಡಾ. ಪ್ರದೀಪ್, ತೀರ್ಥಮಲ್ಲೇಶ್, ಹಾಲಿ ಅಧ್ಯಕ್ಷರಾದ ಡಾ. ಹೆಚ್. ಟಿ. ಮೋಹನ್ ಕುಮಾರ್, ಕೋಮಾರ್ಕ್ ಮಾಜಿ ಅಧ್ಯಕ್ಷರಾದ ಡಿ.ಎಸ್. ರಘು, ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ, ವಿವಿಧ ಬೆಳೆಗಾರರ ಸಂಘದ ಅಧ್ಯಕ್ಷರುಗಳು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ