October 5, 2024

ಮೂಡಿಗೆರೆ ಭಾನುವಾರ ಸಮಾನ ಮನಸ್ಕ ಮಹಿಳಾ ಒಕ್ಕೂಟದಿಂದ ನಡೆದ ಮಲೆನಾಡ ಮಹಿಳೆಯರ ಸಾಂಸ್ಕೃತಿಕ ಸುಗ್ಗಿ ಕಾರ್ಯಕ್ರಮ ಜನಮನಸೆಳೆಯಿತು. ಪಟ್ಟದ ಅಡ್ಯಂತಾಯ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗತಿಸಿಹೋಗುತ್ತಿರುವ ನಮ್ಮ ಮಲೆನಾಡಿನ ಹಳೇಯ ಸಂಪ್ರದಾಯಗಳನ್ನು ಮರುಸೃಷ್ಟಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕಲಾವಿದ ನೀನಾಸಂ ಗಣೇಶ್ ;  ಹಿಂದಿನ ಸಂಸ್ಕೃತಿ ಇಂದಿಗೂ ಉಳಿದಿದ್ದರೆ ಅದು ಮಹಿಳೆಯರಿಂದ ಮಾತ್ರ ಸಾಧ್ಯವಾಗಿದೆ. ಸ್ವಾತಂತ್ರ್ಯ ಬಂದ ಮೇಲೆ ಈ ದೇಶವನ್ನು ಸಂಸ್ಕೃತಿ ಸೇರಿದಂತೆ ಎಲ್ಲಾ ರೀತಿಯಲ್ಲಿ ಕಟ್ಟಬೇಕೆಂಬ ಆಸೆ ಮಹನೀಯರದ್ದಾಗಿತ್ತು. ಅದಕ್ಕಾಗಿ ಸರಕಾರ ಅಕಾಡೆಮಿಗಳನ್ನು ನಿರ್ಮಿಸಿತು. ಆದರೆ ಸರಕಾರದ ಸಹಾಯ ಪಡೆಯದೇ ಅಕಾಡೆಮಿ ಮಾಡಬೇಕಾದ ಕೆಲಸವನ್ನು ಮಲೆನಾಡಿನ ಮಹಿಳೆಯರು ಮಾಡಿರುವುದರಿಂದ ಸಂತಸ ತಂದಿದೆ ಎಂದು ಹೇಳಿದರು.

ಶಾಸಕಿ ನಯನಾ ಮೋಟಮ್ಮ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಲೆನಾಡಿನಲ್ಲಿ ಅನೇಕ ಜನಾಂಗದ ಜನರಿದ್ದಾರೆ. ಆದರೆ ಇಲ್ಲಿನ ಸಂಸ್ಕೃತಿಯನ್ನು ಹಿಂದಿನಿಂದಲೂ ಸ್ವೀಕಾರ ಮಾಡುತ್ತಾ ಮುಂದುವರೆಸಿಕೊಂಡು ಬಂದಿದ್ದಾರೆ. ನಮ್ಮ ಮಲೆನಾಡು ಸೂಕ್ಷ್ಮ ಪ್ರದೇಶ, ತಂತ್ರಜ್ಞಾನ ಮುಂದುವರೆದಂತೆ ಇಲ್ಲಿನ ಸಂಸ್ಕೃತಿ ಹಾಗೂ ಪರಿಸರಕ್ಕೆ ದಕ್ಕೆಯಾಗುತ್ತಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಹೇಳಿದರು.

ಸಾಹಿತಿ ಹಿರೇಮಗಳೂರು ಕಣ್ಣನ್ ಮಾತನಾಡಿ, ಮಲೆನಾಡ ಸಂಸೃತಿಯನ್ನು ಉಳಿಸಲು ಮಹಿಳೆಯರು ಪಣ ತೊಟ್ಟಿದ್ದರಿಂದ ಮುಂದಿನ ದಿನ ಸಂಸ್ಕೃತಿ, ಸಂಸ್ಕಾರಕ್ಕೆ ಕಂಟಕವಾಗಲು ಬಿಡಬಾರದು. ಮಲೆನಾಡಿನ ಜಾನಪದ ಸೊಗಡು, ಆಚಾರ, ವಿಚಾರ, ಸಂಸ್ಕೃತಿ ಮರೆಯಾಗದಂತೆ ಇದನ್ನು ಕಲಿಸುವ ಶಾಲೆ ತೆರೆಯುವ ಯೋಜನೆ ರೂಪಿಸಬೇಕೆಂದು ಹೇಳಿದರು.

ಕಿರಿತೆರೆ ನಟಿ ಶರ್ಮಿತಗೌಡ ಮಾತನಾಡಿ, ಕಾಫಿಯ ಹೊರತಾಗಿ ಈ ನಮ್ಮ ಕಾಫಿನಾಡು ಸಂಸ್ಕೃತಿಗೆ ಅದ್ಭುತವಾಗಿದೆ. ಇಲ್ಲಿನ ಪರಿಸರ, ಅಡುಗೆಗೆ ಎಲ್ಲರೂ ಮಾರು ಹೋಗುತ್ತಾರೆ. ಇಂತಹ ಪ್ರದೇಶದಲ್ಲಿ ನಾವಿರುವುದು ಹೆಮ್ಮೆಯ ಸಂಗತಿ. ಕುಟುಂಬ, ಸಂಬಂಧದ ಬಗ್ಗೆ ಅರಿವೇ ಇಲ್ಲದಂತ ಮಕ್ಕಳಿಗೆ ಮನೆಯಿಂದಲೇ ಸಂಸ್ಕಾರ ಕಲಿಸಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಕೃತಿ ಬಿಂಬಿಸುವ ಅಣಕು ಮದುವೆ ಪ್ರದರ್ಶನ, ಮಲೆನಾಡಿನ ಹಳೆ ಸಂಪ್ರದಾಯದ ಉಡುಗೆ, ತೊಡುಗೆ ಬಗ್ಗೆ ನಡಿಗೆ ಪ್ರದರ್ಶನ, ಶೋಭಾನೆ ಹಾಡುಗಳು, ಜಾನಪದ ನೃತ್ಯ, ಜಾನಪದ ಹಾಡುಗಳ ಸ್ಪರ್ಧೆ  ನಡೆಯಿತು.

ಈ ಸಂದರ್ಭದಲ್ಲಿ ಲಕ್ಷ್ಮೀದೇವಮ್ಮ, ವೀಣಾ ಗೌಡ, ಅನುಪಮ ವಿಶ್ವಾಮಿತ್ರ, ದೇವನ್ ರವಿ ಬೆಳಗೂಡು, ಡಾ.ಮಾನಸ, ರಕ್ಷಿತಾರಾಜು, ಬಕ್ಕಿ ಮಂಜುನಾಥ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವೆ ಮೋಟಮ್ಮ ವಹಿಸಿದ್ದರು. ಚಲನಚಿತ್ರ ನಟ, ಮಾಜಿ ಶಾಸಕ ನರೇಂದ್ರಬಾಬು, ಒಕ್ಕೂಟದ ಅಧ್ಯಕ್ಷೆ ಸವಿತಾ ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಒಕ್ಕೂಟದ ಪ್ರಧಾನ ಸಂಚಾಲಕರಾದ ನಿರ್ಮಲಾ ಮಂಚೇಗೌಡ ಹಾಗೂ ಒಕ್ಕೂಟದ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ