October 5, 2024

ಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿಯಲ್ಲಿರುವ ಪಾಳುಬಿದ್ದ ಮನೆಯೊಂದರಲ್ಲಿ ಐದು ಮಾನವ ಅಸ್ಥಿಪಂಜರಗಳು  ಮತ್ತು ಒಂದು ನಾಯಿ ಅಸ್ಥಿಪಂಜರ ಪತ್ತೆಯಾಗಿವೆ. ಗುರುವಾರ ಮನೆಯ ಬಾಗಿಲಿನ ಬಳಿ ನಾಯಿಯೊಂದು ಮಾನವನ ಅಸ್ಥಿಪಂಜರ ಬಾಯಲ್ಲಿ ಕಚ್ಚಿತರುತ್ತಿರುವುದನ್ನು ಗಮನಿಸಿದ ನಂತರ  ಮನೆಯೊಳಗೆ ಇಣುಕಿ ನೋಡಿದಾಗ  ಬೆಚ್ಚಿಬಿದ್ದು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

ನಿವೃತ್ತ ಇಂಜಿನಿಯರ್ ಜಗನ್ನಾಥ ರೆಡ್ಡಿ ಅವರ ನಿವಾಸದಲ್ಲಿ ಐವರು ಆತ್ಮಹತ್ಯೆ ಮಾಡಿಕೊಂಡ ಮಾನವ ಅಸ್ಥಿಪಂಜರಗಳು ಪತ್ತೆಯಾಗಿದ್ದವು. ಇವರೆಲ್ಲರೂ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ವಿಷ ಸೇವಿಸಿ ಅಥವಾ ಊಟದಲ್ಲಿ ವಿಷ ಬೆರೆಸಿಕೊಂಡು ಊಟ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದ್ದು, ಮನೆಯಲ್ಲಿ ಸಾಕಿದ್ದ ನಾಯಿಗೂ ಸಹ ವಿಷ ಹಾಕಿರಬಹುದು ಈ ಹಿನ್ನೆಲೆಯಲ್ಲಿ ನಾಯಿಯು ಮೃತಪಟ್ಟಿದ್ದು ಅದರ ಅಸ್ಥಿ ಪಂಜರವು ಪತ್ತೆಯಾಗಿದೆ.

ಈ ಹಿಂದೆ ಈ ಮನೆಯಲ್ಲಿ ನಿವೃತ್ತ ಎಂಜಿನಿಯರ್ ಜಗನ್ನಾಥ ರೆಡ್ಡಿ (70), ಪತ್ನಿ ಪ್ರೇಮಾವತಿ (60), ಮಗಳು ತ್ರಿವೇಣಿ (42), ಮಗ ಪುತ್ರರಾದ ಕೃಷ್ಣಾ ರೆಡ್ಡಿ (40) ಹಾಗೂ ನರೇಂದ್ರ ರೆಡ್ಡಿ (38) ಎಂಬುವವರು ವಾಸವಾಗಿದ್ದರು ಎಂದು ತಿಳಿದು ಬಂದಿದೆ.

ಜಗನ್ನಾಥ ರೆಡ್ಡಿ ಅವರಿಗೆ ಮೂವರು ಗಂಡು ಮಕ್ಕಳು, ಒರ್ವ ಪುತ್ರಿ ಇದ್ದರು. ಯಾರಿಗೂ ಮದುವೆ ಆಗಿರಲಿಲ್ಲ ಎನ್ನಲಾಗಿದ್ದು , ಹಿರಿಯ ಮಗ ಮಂಜುನಾಥ ರೆಡ್ಡಿ ಎಂಬುವವರು ಈ ಹಿಂದೆಯೇ ಮೃತಪಟ್ಟಿದ್ದರು ಎನ್ನುತ್ತಾರೆ ಸಂಬಂಧಿಕರು.

ನಿವೃತ್ತ ಇಂಜಿನಿಯರ್ ಜಗನ್ನಾಥ ರೆಡ್ಡಿ ಅವರ ಪುತ್ರಿ ತ್ರಿವೇಣಿ  ಮೂಳೆಗಳ ರೋಗ ಆವರಿಸಿತ್ತು. ಆಕೆಗೆ ಎದ್ದು ಓಡಾಡಲು ಆಗುತ್ತಿರಲಿಲ್ಲ. ಆಕೆ ರೋಗಗ್ರಸ್ಥಳಾಗಿದ್ದು ಹಾಗೂ ಅದೇ ಕಾರಣದಿಂದಾಗಿ ಆಕೆಯು ಮದುವೆಯಾಗದೇ ಉಳಿದಿದ್ದು ಜಗನ್ನಾಥ ರೆಡ್ಡಿ ಕುಟುಂಬಕ್ಕೆ ತುಂಬಾ ಬಾಧಿಸುತ್ತಿತ್ತು ಎನ್ನಲಾಗಿದೆ.  ಮತ್ತೊಂದು ಮೂಲದ ಪ್ರಕಾರ ಜಗನ್ನಾಥ ರೆಡ್ಡಿಯವರ ಪುತ್ರ ನರೇಂದ್ರ ರೆಡ್ಡಿಯು ಬೆಂಗಳೂರಿನಲ್ಲಿ ಬಿಡದಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದಿದ್ದ. ಅದನ್ನೂ ಸಹ ಜಗನ್ನಾಥ ರೆಡ್ಡಿಯವರು ಗಂಭೀರವಾಗಿ ತೆಗೆದುಕೊಂಡು ಚಿಂತಾಕ್ರಾಂತರಾಗಿದ್ದರು. ಮಗನ ಬಗ್ಗೆಯೂ ಅವರಿಗೆ ತುಂಬಾ ಬೇಸರವಾಗಿತ್ತು. ಹಾಗೆಯೇ ಕುಟುಂಬದ ಆಸ್ತಿಯ ವಿಚಾರದಲ್ಲಿಯೂ ವಿವಾದವಿತ್ತೆಂದು ಅದರಿಂದಲೂ ಮನನೊಂದಿದ್ದರು ಎನ್ನಲಾಗಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಸಹಿಸಿಕೊಳ್ಳಲಾಗದೇ ಅವರ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗಿದೆ.

ಈ ಮನೆಯಲ್ಲಿ ನೇತುಹಾಕಿದ್ದ ಕ್ಯಾಲೆಂಡರ್ ಆಧಾರದಲ್ಲಿ ಈ ಕುಟುಂಬದವರು 2019ರಲ್ಲಿ ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಊಹಿಸಲಾಗಿದೆ.

ಈ ಆತ್ಮಹತ್ಯೆ ಎಲ್ಲರೂ ಒಟ್ಟಾಗಿ ಸೇರಿ ಮಾಡಿಕೊಂಡಿರುವುದೇ ಅಥವಾ ಯಾರಾದರೊಬ್ಬರು ಆಹಾರದಲ್ಲಿ ವಿಷಬೆರೆಸಿ ಎಲ್ಲರೂ ಸಾಯುವಂತೆ ಮಾಡಿದರೆ ಎಂಬುದು ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.

ಹೇಗೆ ಯಾರ ಗಮನಕ್ಕೂ ಬಂದಿಲ್ಲ :

ಹೊರಗಿನಿಂದ ಬೀಗ ಹಾಕಿ ಪಾಳುಬಿದ್ದಂತಿರುವ ಮನೆಯಲ್ಲಿ ನಡೆದಿರುವ ಈ ಸಾಮೂಹಿಕ ಸಾವಿನ ಸುದ್ದಿ ಯಾರೊಬ್ಬರಿಗೂ ಹೇಗೆ ತಿಳಿದಿಲ್ಲ ಎಂಬುದೇ ವಿಚಿತ್ರವಾದ ಸಂಗತಿ.

ಅವರ ಸಂಬಂಧಿಕರು ಹೇಳುವ ಮಾತುಗಳನ್ನು ಕೇಳಿದರೆ ಜಗನ್ನಾಥ ರೆಡ್ಡಿ ಮತ್ತು ಅವರ ಕುಟುಂಬ ಕಳೆದ ಏಳೆಂಟು ವರ್ಷಗಳಿಂದ ಬಂಧು ಬಳಗ ಸ್ನೇಹಿತರಿಂದ ದೂರವೇ ಉಳಿದಿತ್ತು. ಇವರು ಪ್ರಜ್ಞಾಪೂರ್ವಕವಾಗಿ ಹೊರಪ್ರಪಂಚದ ಸಂಪರ್ಕದಿಂದ ದೂರವೇ ಉಳಿದಿತ್ತು ಎನ್ನಲಾಗುತ್ತಿದೆ.  ಕೇರಳ, ತಮಿಳುನಾಡಿನ ಅನಾಥಾಶ್ರಮಕ್ಕೆ ಸೇರುತ್ತೇವೆ ಎಂದು ಮನೆಯವರು ಸಂಬಂಧಿಕರ ಬಳಿ ಆಗಾಗ ಹೇಳುತ್ತಿದ್ದರು.  ಹಾಗಾಗಿ ಇವರು ಕಾಣೆಯಾದ ಬಗ್ಗೆ ಯಾರಿಗೂ ಅಷ್ಟು ಗಮನಕ್ಕೆ ಬಂದಿಲ್ಲ. ಬಹುಶಃ ಎಲ್ಲೋ ಹೋಗಿ ಅನಾಥಾಶ್ರಮಕ್ಕೆ ಸೇರಿದ್ದಾರೆ ಎಂದು ಎಲ್ಲರೂ ಭಾವಿಸಿದ್ದಾರೆ.

2019ರಲ್ಲಿ ಈ ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಸ್ಥಳೀಯ ಕೆಲವರು ಗಮನಿಸಿದ್ದಾರೆ. ಆದರೆ ನಾಯಿ ಸತ್ತಿರಬೇಕು ಎಂದು ಯಾರೂ ಆ ಬಗ್ಗೆ ಹೆಚ್ಚು ಗಮನಹರಿಸದೇ ನಿರ್ಲಕ್ಷಿಸಿ ಸುಮ್ಮನಾಗಿದ್ದರು ಕೆಲ ದಿನಗಳ ನಂತರ ವಾಸನೆ ಬರುವುದು ನಿಂತುಹೋಗಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಕೋವಿಡ್ ಲಾಕ್ ಡೌನ್ ಗಿಂತ ಕೆಲವು  ಸಮಯ ಹಿಂದಿನಿಂದ ಈ ಮನೆಯಲ್ಲಿ ಯಾರೂ ಕಂಡುಬರುತ್ತಿರಲಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಸಯನೈಡ್ ಸೇವಿಸಿ ಸಾವನ್ನಪ್ಪಿರುವ ಶಂಕೆ

ಪತ್ತೆಯಾಗಿರುವ ಐದು ಅಸ್ತಿಪಂಜರಗಳಲ್ಲಿ ಮೂರು ಅಸ್ತಿಪಂಜರ ಮಂಚದ ಮೇಲೆ, ಒಂದು ಮಂಚದ ಕೆಳಗೆ ಮತ್ತೊಂದು ನಡುಮನೆಯಲ್ಲಿ ಪತ್ತೆಯಾಗಿವೆ. ಮಲಗಿದವರ ಹೊದಿಕೆಯೂ ಅತ್ತ ಇತ್ತ ಆಗಿಲ್ಲ. ಇದನ್ನು ಗಮನಿಸಿದರೆ ಇವರೆಲ್ಲ ಸಯನೈಡ್ ಸೇವಿಸಿ ತಕ್ಷಣ ಪ್ರಾಣ ಕಳೆದುಕೊಂಡಿರಬಹುದು, ಜೊತೆಗೆ ಮನೆಯಲ್ಲಿದ್ದ ನಾಯಿಗೂ ಸಯನೈಡ್ ಹಾಕಿದ ಆಹಾರ ನೀಡಿರಬಹುದು ಎಂದು ಊಹಿಸಲಾಗಿದೆ.

ಈ ನಡುವೆ ಮನೆಯಲ್ಲಿ ಡೆತ್ ನೋಟ್ ಒಂದು ಪತ್ತೆಯಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ