October 5, 2024

ಬಡವರ ಡಾಕ್ಟರೆಂದು ಮನೆ ಮಾತಾಗಿದ್ದ ಕಳಸದ ಡಾಕ್ಟರ್ ಹೇಮಚಂದ್ರ ಪ್ರಸಾದ್(72 ವರ್ಷ) ಡಿಸೆಂಬರ್ 20ರ ಬುಧವಾರ ಬೆಳಿಗ್ಗೆ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಸರಳ ಜೀವಿಯಾದ ಡಾ. ಹೇಮಚಂದ್ರ ಪ್ರಸಾದ್ ಎಂಬ ಹೆಸರು ಹೆಚ್ಚಾಗಿ ಯಾರಿಗೂ ತಿಳಿದಿಲ್ಲ. ಅವರು ಎಲ್ಲರ ಮನೆ ಮಾತಾಗಿದುದು ಗೌಡ್ರು ಡಾಕ್ಟರ್ ಎಂದೇ.

ಗೌಡ್ರು ಡಾಕ್ಟರ್ ಇನ್ನಿಲ್ಲ ಎಂಬ ವಿಚಾರ ಬುಧವಾರ ಕಳಸ ಜನರಿಗೆ ಬರಸಿಡಿಲಿನಂತೆ ಬಂದೆರಗಿತ್ತು, ಇಡೀ ಕಳಸವನ್ನು ದುಃಖತಪ್ತವಾಗಿಸಿತ್ತು.

ಕಳಸ ಕಾರಗದ್ದೆಯ ಸಮೀಪದ ಹಂತಿಕೊಂಡ ಎಸ್ಟೇಟ್ ಮಾಲೀಕರಾಗಿದ್ದ ಹೇಮಚಂದ್ರ ಪ್ರಸಾದ್  ಹುಟ್ಟಿನಿಂದಲೂ ಅಗರ್ಭ ಶ್ರೀಮಂತರಾಗಿದ್ದರು. ಇವರ ಕುಟುಂಬ ಮೂಲತಃ ಚಿಕ್ಕಮಗಳೂರಿನ ಪ್ರಸಿದ್ಧ ಭಾಗಮನೆ ಮನೆತನದವರು. ಭಾಗಮನೆಯಿಂದ ಬಂದು ಹಂತಿಕೊಂಡ ಎಸ್ಟೇಟ್ ಕೊಂಡುಕೊಂಡಿದ್ದರು.

ತಂದೆ ಕೃಷ್ಣೇಗೌಡರು ತಾಯಿ ಭೂದೇವಿಯವರ ಮಗನಾಗಿ 1951 ರಲ್ಲಿ ಜನಿಸಿದ ಹೇಮಚಂದ್ರ ಪ್ರಸಾದ್ ತಮ್ಮ ವೈದ್ಯಕೀಯ ವಿದ್ಯಾಭ್ಯಾಸ ಮುಗಿಸಿದ ನಂತರ ಕಳಸದಲ್ಲಿ ವೈದ್ಯ ವೃತ್ತಿಯನ್ನು ಪ್ರಾರಂಭಿಸಿದ್ದರು. ಇವರು ರಾಜೇಂದ್ರ ಪ್ರಸಾದ್ ಹಾಗೂ ಶಿವಪ್ರಸಾದ್ ಎಂಬ ಇಬ್ಬರು ಸಹೋದರರನ್ನು ಹೊಂದಿದ್ದು, ಒಬ್ಬ  ಸಹೋದರಿ ಇದ್ದಾರೆ. ಇವರ ಪತ್ನಿ ತಾರಾ ಆಲ್ದೂರು ಸಮೀಪದ ಹವ್ವಳ್ಳಿ ಗ್ರಾಮದವರು.

2000 ಇಸವಿಯ ವರೆಗೆ 10 ರಿಂದ 30 ರೂ. ವರೆಗೆ ಶುಲ್ಕ ಪಡೆಯುತ್ತಿದ್ದ ಇವರು 2010ರಿಂದ 50 ರಿಂದ 100 ರೂ. ರೂಪಾಯಿ ಚಾರ್ಜ್ ಮಾಡುತಿದ್ದರು. ಇತ್ತೀಚಿಗಿನ ದಿನಗಳಲ್ಲಿ 150 ರಿಂದ 200 ರ ಮೇಲೆ ಚಾರ್ಜ್ ತೆಗೆದುಕೊಳ್ಳದ ಡಾಕ್ಟರ್, ಔಷಧದ ಹೊರತಾಗಿ ತಮ್ಮ ಚಾರ್ಜ್ ಅನ್ನು ಯಾವುದೇ ಕಾರಣಕ್ಕೂ ತೆಗೆದುಕೊಳ್ಳುತ್ತಿರಲಿಲ್ಲ. ಇದರಿಂದ ಬಡಬಗ್ಗರಿಗೆ ಸಾಕಷ್ಟು ಅನುಕೂಲವಾಗುತಿತ್ತು.

ಮಿತಭಾಷಿ ಆಗಿದ್ದ ಡಾಕ್ಟರ್ ಹೆಚ್ಚಾಗಿ ಮಾತನಾಡದೆ ಸರಳ ಸ್ವಭಾವದಿಂದ ತಮ್ಮ ಕೆಲಸದಲ್ಲಿ ತಾವು ತೊಡಗಿಕೊಳ್ಳುತ್ತಿದ್ದರು.

ಆಸ್ಪತ್ರೆಯಲ್ಲಿ ಸಣ್ಣಪುಟ್ಟ ಕೆಲಸಕ್ಕೂ ನರ್ಸ್ ಅಥವಾ ಕೈ ಕೆಲಸಕ್ಕೆ ಯಾವುದೇ ಕೆಲಸಗಾರರನ್ನು ನೇಮಿಸಿಕೊಂಡಿರಲಿಲ್ಲ. ಬಿ.ಪಿ,  ಶುಗರ್ ಚೆಕಪ್ ಎಲ್ಲವನ್ನು ತಾವೇ ನಿಭಾಯಿಸಿಕೊಂಡು  ಬೆಳಗ್ಗೆ 10 ರಿಂದ ಸಂಜೆ 7.30 ರವರೆಗೆ ಜನರ ಸೇವೆಯಲ್ಲಿ ತೊಡಗಿರುತ್ತಿದ್ದರು.

ಕರೋನ ಸಂದರ್ಭದಲ್ಲಿ ತಮ್ಮ ಸೇವೆಯನ್ನು ಸ್ಥಗಿತಗೊಳಿಸದೆ ಎಂದಿನಂತೆ ಕಳಸ ತಾಲೂಕಿನ ಜನರ ಸೇವೆಗೆ ನಿಂತ ಗೌಡರ ಸಮಾಜಮುಖಿ ಕೆಲಸ ಸದಾ ಮಾದರಿ.

ತಮ್ಮ ವೃತ್ತಿ ಜೀವನದಲ್ಲಿ ಎಂದು ರಜೆ ಮಾಡಿದವರೇ ಅಲ್ಲ. ಸಮಯವನ್ನು ಚಾಚೂ ತಪ್ಪದೆ ಪಾಲಿಸುತಿದ್ದ ಗೌಡರು 10 ಗಂಟೆಗೆ ಆಸ್ಪತ್ರೆಗೆ ಬಂದು 1 ಗಂಟೆಗೆ ಊಟಕ್ಕೆ ತೆರಳುತ್ತಿದ್ದರು. ಆಗರ್ಭ ಶ್ರೀಮಂತರಾಗಿದ್ದರೂ ಯಾವುದೇ ಹಮ್ಮುಬಿಮ್ಮು ಇಲ್ಲದೇ ಜನಸಾಮಾನ್ಯರ ಜೊತೆ ಸರಳವಾಗಿ ವ್ಯವಹರಿಸುತ್ತಿದ್ದರು.

ನಂತರ 4 ಗಂಟೆಗೆ ತಮ್ಮ ಸೇವೆ ಆರಂಬಿಸಿ 7.30ಕ್ಕೇ ಮನೆಗೆ ತೆರಳುತ್ತಿದ್ದರು. ಸದಾ ಮಾರುತಿ 800 ಬಳಸುತ್ತಿದ್ದ ಗೌಡರು ಸಾಮಾನ್ಯರಲ್ಲಿ ಸಾಮಾನ್ಯರಾಗಿ ತಮ್ಮ ಅಮೂಲ್ಯ ಜೀವನ ಸಾಗಿಸಿದ್ದರು.

ವೈದ್ಯಕೀಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಅಭಿನಂದಿಸಲು ಆಹ್ವಾನ ಬಂದರೆ ನಯವಾಗಿಯೇ ತಿರಸ್ಕರಿಸುತಿದ್ದರು, ಇತ್ತೀಚೆಗೆ ರಾಜ್ ಕನ್ನಡ ಸಂಘ ಕಳಸ, ಹಾಗೂ ಪುಷ್ಪಗಿರಿ ಪ್ರತಿಷ್ಠಾನದ ವತಿಯಿಂದ ಆಸ್ಪತ್ರೆಗೆ ತೆರಳಿ ಗೌರವ ಸಲ್ಲಿಸಿರುವುದು ಸ್ಮರಿಸಬಹುದು.

ಕೂಲಿ ಕಾರ್ಮಿಕರು ಹಾಗೂ ಗ್ರಾಮೀಣ ಭಾಗದ ಕೃಷಿಕರ ನೆಚ್ಚಿನ ಗೌಡ್ರು ಡಾಕ್ಟರ್ ನಿನ್ನೆ ಮಂಗಳವಾರ ಮದ್ಯಾಹ್ನದವರೆಗೆ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿ ಮದ್ಯಾಹ್ನ ಊಟಕ್ಕೇ ಹೋದವರು ವಾಪಸ್ಸು ಕಳಸಕ್ಕೇ ಬಂದಿದ್ದು ಇಂದು ಶವವಾಗಿ ಎಂಬುವುದು ದುರಾದೃಷ್ಟ ಸಂಗತಿ.

ಬುಧವಾರ ಮದ್ಯಾಹ್ನ  ಕಳಸದ ಪ್ಲಾಂಟರ್ಸ್ ಕ್ಲಬ್ ಆವರಣಕ್ಕೆ ಡಾಕ್ಟರರ ಮೃತದೇಹ ಬಂದಾಗ ಅಪಾರ ಸಂಖ್ಯೆಯ ಬಂದುಮಿತ್ರರು ಗ್ರಾಮಸ್ಥರು, ಗ್ರಾಮೀಣ ಭಾಗದ ಜನರು ಕಿಕ್ಕಿರಿದು ಸೇರಿ ನೆಚ್ಚಿನ ಡಾಕ್ಟರರ ಅಂತಿಮ ದರ್ಶನ ಪಡೆದರು.

ಕಳಸ ಗ್ರಾಮ ಪಂಚಾಯಿತಿ ಮತ್ತು ವಿವಿಧ ಸಂಘಸಂಸ್ಥೆಗಳ ವತಿಯಿಂದ ಗುರುವಾರ ಅವರಿಗೆ ಶ್ರದ್ಧಾಂಜಲಿ ಸಭೆ ನಡೆಸಿ ನುಡಿನಮನ ಸಲ್ಲಿಸಲಾಗಿದೆ.

ದಶಕಗಳ ಕಾಲ ಕಳಸದ ಜನಸಾಮಾನ್ಯರಿಗೆ ವೈದ್ಯಕೀಯ ಸೇವೆ ನೀಡುತ್ತಿದ್ದ ಡಾ. ಹೇಮಚಂದ್ರ ಪ್ರಸಾದ್ ಅವರು ಇನ್ನು ನೆನಪು ಮಾತ್ರ. ಅವರ ಸೇವೆಯಿಂದ ಕಳಸದ ಜನರು ಇನ್ನು ವಂಚಿತರು. ಆದರೆ ಅವರ ನೆನಪು ಮಾತ್ರ ಜನರ ಮನದಲ್ಲಿ ಚಿರಸ್ಥಾಯಿಯಾಗಿರಲಿದೆ.

ಲೇಖನ : ರಜಿತ್ ಕೆಳಗೂರ್

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ